
ಸಂದೀಪ್ ಈಶಾನ್ಯ
ಅಂಜಲಿಗೀಗ ಇಪ್ಪತ್ಮೂರು
ನೀಲಿಶಾಯಿಯಲ್ಲಿ ಬರೆದಿದ್ದ
ಹಾಜರಾತಿಯ ಅವಳ ಹೆಸರೀಗ ಮಾಸಿದೆ
ಅವಳು ಹಠಕ್ಕೆ ಬಿದ್ದು ಕೂರುತ್ತಿದ್ದ
ಕಿಟಕಿಯಂಚಿನ ಬೆಂಚಿನಲ್ಲಿ
ಅದೇ ಸ್ಕೂಲಿನ ಆಯಾಳ ಮಗಳಿದ್ದಾಳೆ
ಅಪ್ಪನ ಲೂನಾ ಮನೆಯ ಮೂಲೆಯಲ್ಲಿ
ಜೇಡರ ಬಲೆಯೊಂದಿಗೆ ಸೆಣಸುತ್ತ
ಧೂಳಿಯಿಡಿಯುತ್ತಿದೆ
ಮನೆಯ ಮುಂದೆಯ ರಸ್ತೆಗೀಗ ಡಾಂಬರು ಬಂದಿದೆ
ಆದರೆ
ಅಂಜಲಿಯ ಮಂದಸ್ಮಿತ ಈಗಿಲ್ಲ
ಅವಳೀಗ
ಹುಟ್ಟುಹಬ್ಬಕ್ಕೆ ದುಂಬಾಲು ಬಿದ್ದು
ಜವಳಿ ಅಂಗಡಿಯಲ್ಲಿ ಬಟ್ಟೆ ಆರಿಸಿಕೊಳ್ಳುವುದಿಲ್ಲ
ಜತೆ ಕೂತು ತಿಂದ ಕೈ ಬೆವರಿಗೆ
ಅಂಟುವಂತ ಬಣ್ಣದ ಪೆಪ್ಪರಮೆಂಟಿನ
ರುಚಿಯ ನೆನಪಿಟ್ಟಕೊಂಡಿಲ್ಲ
ನಗುವೂ ಇಲ್ಲಾ
ಅವಳೀಗಾ ತೀರಾ ಮೌನಿ
ಅಂಜಲಿ
ನಿನ್ನ ನೆಚ್ಚಿನ ಸುಜಾತ ಮಿಸ್ಸು ಸ್ಕೂಲು ಬಿಟ್ಟರಂತೆ
ಅವರ ಗಂಡ ಮೊದಲಿನಂತೆ ಈಗಲೂ ಕುಡುಕ
ನಿನ್ನ ಕುಂಟೋಬಿಲ್ಲೆ ಆಟದ ಜತೆಗಾತಿ
ಶಶಿಕಲಾ ಈಗ ಎರಡು ಮಕ್ಕಳ ತಾಯಿ
ಮೊನ್ನೆ
ಮಕ್ಕಳಿಗೆ ಸಿರಪ್ ಖರೀದಿಸುವಾಗ ಸಿಕ್ಕಿದ್ದಳು
ಹಳೆಯದೆನ್ನಲ್ಲ ನೆನೆದು ಕಿಸಕ್ಕನೆ ನಕ್ಕಳು
ಗೊತ್ತಾ
ಸ್ಕೂಲಿನ ಕಡೆ ತಿರುವಿನಲ್ಲಿ
ಗೊಲ್ ಗಪ್ಪಾ ಬಂಡಿಯ
ರಾಜಸ್ಥಾನಿ ಹುಡುಗ ಇದ್ದನಲ್ಲ
ಅವನಂಗಡಿಯನ್ನು ಮುಚ್ಚಿಬಿಟ್ಟನಂತೆ
ಪಾಪಾ ಅವನಪ್ಪನಿಗೆ ಸಕ್ಕರೆ ಕಾಯಿಲೆ
ಮೈ ತುಂಬಾ ಹಿತ್ತಾಳೆ ಒಡವೆ ತೊಡುತ್ತಿದ್ದ
ಬಾಯಿ ಬಡಕಿ ಅವನಮ್ಮ ಇದ್ದಳಲ್ಲ
ಅವಳೀಗ ಬೇಡಿಕೊಂಡರು ಒಂದು
ಮಾತೂ ಆಡುತ್ತಿಲ್ಲ
ಅವತ್ತು
ಊರಿಗೆ ರೈಲು ಹಿಡಿಯುವ ಮುನ್ನ ಸಿಕ್ಕಿದ್ದ
ನಾಲ್ಕು ಸಾವಿರ ರೂಪಾಯಿ ಸಾಲ ಇದೆ
ಬಂದು ತೀರಿಸುತ್ತೇನೆ ಎಂದ
ನಾನು ಕೆಲಸ ಬಿಟ್ಟುಬಿಟ್ಟೆ ಎಂದೆ
ಒಳ್ಳೆಯದಾಯಿತು ಎಂದು ನಕ್ಕ
ಕಾಲ ನಿಲ್ಲುವುದಿಲ್ಲ ಎನಿಸುತ್ತಿದೆ
ಇವಗಳೂ ಬಹುತೇಕ ಹಳೆಯ ವಿಷಯಗಳೇ ಅಂಜಲಿ
ಎಲ್ಲವೂ ಬದಲಾಗುತ್ತಿದೆ ಇಲ್ಲಿ
ಸಾಧ್ಯವಾದರೆ ಬಿಡುವು ಮಾಡಿಕೊಂಡು ಸಿಗು
ಇಬ್ಬರೂ ಮತ್ತೆ ಜತೆ ಕೂತು ಒಂದಿಷ್ಟು ಮಾತನಾಡುವ
ಮರಳಿ ಅದೇ ಸ್ಕೂಲಿನ ಮಕ್ಕಳಾಗಿ ಬಿಡುವ





0 Comments