ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

దేశమంటె మట్టి కాదు, దేశమంటె మనుషులోయ్..

ಇಂದು ಬೆಳಗ್ಗೆ ಲಕ್ಷ್ಮೀನರಸಿಂಹ ಕಾಂತಾವೀನಂ ಅವರು ತೆಲುಗಿನ ಪ್ರಸಿದ್ಧ ಲೇಖಕ ಗುರಜಾಡ ಅಪ್ಪಾರಾವು ಅವರ ಕವಿತೆಯೊಂದರ ಸಾಲನ್ನು ಉದ್ಧರಿಸಿದ್ದರು. ನಾನು ತರುಣಾಗಿದ್ದಾಗ ಆ ಕವಿತೆ ಬಾಯಿಪಾಠವಾಗಿತ್ತು. ಫೇಸ್‌ಬುಕ್‌ನಲ್ಲಿ ಆಗೀಗ ಆ ಕವಿತೆಯ ಒಂದು ಸಾಲನ್ನು ಕೋಟ್‌ ಮಾಡುವುದನ್ನು ಕಂಡಿದ್ದೆ.

ಇಂದಿನ ಅಟಾಟೋಟೊಪದ ಸನ್ನಿವೇಶದಲ್ಲಿ ಆ ಕವಿತೆಯ ಅನುವಾದ ಮಾಡಬೇಕು ಅನ್ನಿಸಿದ್ದರಿಂದ ಅದು ಇಲ್ಲಿದೆ.

ದೇಶವೆಂದರೆ ಬರಿ ಮಣ್ಣಲ್ಲವೋ
ದೇಶವೆಂದರೆ ಮನುಜರು!

 keshva malagi

 

 

 

 

 

 

 

 

 

ಕೇಶವ ಮಳಗಿ

 

ದೇಶವೆಂದರೆ ಬರಿ ಮಣ್ಣಲ್ಲವೋ
ದೇಶವೆಂದರೆ ಮನುಜರು!
ತೆಲುಗು ಮೂಲ: ಗುರಜಾಡ ಅಪ್ಪಾರಾವು.
ಕನ್ನಡಕ್ಕೆ: ಕೇಶವ ಮಳಗಿ.

ದೇಶವನ್ನು ಪ್ರೀತಿಸೆಂದೆ
ಒಳಿತನ್ನು ಹೆಚ್ಚಿಸೆಂದೆ
ಟೊಳ್ಳುಮಾತನು ಗಂಟುಕಟ್ಟಿ
ಬಂಡೆಗೆ ತಲೆ ನೀಡು ಎಂದೆ

ಹಾಲು ತೆನೆಗಳು ತುಂಬಿ ತುಳುಕುವ
ಹಾದಿಯಲಿ ನೀ ಹಾಡ ಹಾಡು
ದವಸ-ಧಾನ್ಯ ಇರುವ ಎಲ್ಲಡೆ
ಬಲದ ಮನುಷನು ಇರುವ ನೋಡು!

ಹಸಿದ ಮನುಜರು ಇರುವವರೆಗೆ
ದೇಶ ಸುಖವು ಎಲ್ಲಿರುವುದೋ
ಎಲ್ಲ ಕಲೆಗಳ ಕರಗತವ ಮಾಡಿ
ದೇಶ ಕಣಜವ ತುಳುಕಿಸೋ

ಹಿಂದೆ ತಿರುಗಿ ನೋಡಿದಾಗ
ಒಳ್ಳೆಯದು ಒಂದಿನಿತೆ ಇರುವುದು
ಮಂದಮತಿಯಾಗದೆ ಮುಂದಡಿಯಿಡು
ನೀ ಹಿಂದೆ ಉಳಿದರೆ ಹಿಂದೆಯೇ

ದೇಶಭಕುತಿ ನನ್ನೊಬ್ಬನ ಸೊತ್ತೆನ್ನುತ
ಟೊಳ್ಳು ದನಿಯಲಿ ಕೇಕೆ ಹಾಕದಿರು
ಎಂತಾದರೂ ಒಳಿತು ಮಾಡುತ
ಜನರ ಜತನವ ಧ್ಯಾನಿಸೋ!

ಹಗೆಯ ಹಾಲಾಹಲವು ದೇಶವ
ನಜ್ಜುಗುಜ್ಜಿಸಿ ನುಚ್ಚನೂರಾಗಿಸುವುದು
ಬೆಚ್ಚಗಿನ ಸ್ನೇಹ ಹಸ್ತ ಚಾಚಿ
ಐಕ್ಯಮತವನು ಸಾಧಿಸೋ

ಪರರ ಏಳ್ಗೆಗೆ ಹೊರಳಿ ಅಳುವ
ಪಾಪಿಗೆಲ್ಲಿಯ ಸುಖವು ಹೇಳು
ಅವರ ಸುಖವೇ ನನ್ನ ಸುಖವೆನ್ನುವಾತಗೆ
ಎಲ್ಲರ ಹಾರೈಕೆ ತಿಳಿಯೊ

ಮತವು ಬೇರಾದರೇನೋ
ಮನುಜರಾದರೆ ಮನಸು ಒಂದೇ
ಮನುಜ ಕುಲವು ಎದ್ದು ನಿಂತರೆ
ಲೋಕವು ಮೆರೆಯುವುದೋ

ದೇಶವೆಂಬುದು ದೊಡ್ಡ ಮರವು
ಪ್ರೀತಿ ಹೂವನು ಅರಳಿಸುವುದು
ನರರ ಚರ್ಮದ ಬೆವರಿನಲ್ಲಿ
ಸುಖದ ಬೆಳೆಯ ಬೆಳೆವುದು

ಮರದ ಮರೆಯಲಿ ಅಡಗಿ ಕುಳಿತ
ಕೋಕಿಲ ಕವಿಯ ಹಾಡನು ಹಾಡಲಿ
ಸ್ವರದ ಸೊಗಸಿಗೆ ಸೋತ ದೇಶದ
ಮನಗಳು ಹೆಮ್ಮೆಯಲಿ ತಲೆಯೆತ್ತಲಿ

ಕಪಟ-ವಂಚನೆ, ಕ್ರೋಧ, ನೆತ್ತರು
ಹಣದ ವೃಕ್ಷಕೆ ಆಹಾರವು
ಸ್ವಂತ ಲಾಭಕೆ ಕೊಂಚ ಮಾನಕೆ
ಪರರಿಗೆ ಹಿಂಸಿಸದಿರೋ

ದೇಶವೆಂದರೆ ಮಣ್ಣಲ್ಲವೋ
ದೇಶವೆಂದರೆ ಮನುಜರು.

gurujada apparao2

ಗುರಜಾಡ ಅಪ್ಪಾರಾವು (1862-1915): ತೆಲುಗಿನ ನವೋದಯ ಸಾಹಿತ್ಯದ ಮುಂಬೆಳಗಿನ ಮಹಾಪುರುಷ. ಅವರ ಕವಿತೆಗಳು ಒಂದೊಮ್ಮೆ ಯುವಕನಾಗಿದ್ದಾಗ ಬಾಯಿಪಾಠವಾಗಿದ್ದವು. ಅವರ ಕಥೆಗಳು, ಪಂಜೆ ಮಂಗೇಶ ರಾವ್‌, ಕೆರೂರ ವಾಸುದೇವಾಚಾರ್ಯರನ್ನು ನೆನಪಿಸುತ್ತವೆ. ಕನ್ಯಾಶುಲ್ಕಂ ಅವರ ಪ್ರಸಿದ್ಧ ನಾಟಕ. ಚಲನಚಿತ್ರವಾಗಿಯೂ ಪ್ರಖ್ಯಾತ. ಈ ಚಿತ್ರದಲ್ಲಿ ತರುಣ ಎನ್.ಟಿ.ರಾಮರಾವ್‌ರನ್ನು ನೋಡಿ ಮೋಹಗೊಳ್ಳದವರು ಕಡಿಮೆ!)

 

‍ಲೇಖಕರು Admin

26 February, 2016

2 Comments

  1. ಹಜರತ್ಅಲಿ ದೇಗಿನಾಳ

    “ದೇಶವೆಂದರೆ ಮಣ್ಣಲ್ಲವೋ
    ದೇಶವೆಂದರೆ ಮನುಜರು” ದೇಶಭಕ್ತರು ಓದಿಕೊಳ್ಳಬೇಕಾದ ನುಡಿಕಿಡಿಗಳಿವು.
    ಧನ್ಯವಾದಗಳು

  2. ಟಿ.ಕೆ.ಗಂಗಾಧರ ಪತ್ತಾರ.

    “ಮಾನವೀಯತೆ ಒಂದೆ
    ಸಾಕು ನಮಗೆ
    ಬಾನವರ ಸುಧೆ ಬೇಡ
    ದಾನವರ ಬಲ ಬೇಡ…”
    ಎಂದು ಅಡಿಗರಲ್ಲದ ಗೋಪಾಲಕೃಷ್ಣ ಎಂಬೊಬ್ಬ ಕವಿ ಹೇಳಿದರೆ

    “ಯುಗದ ಕವಿ ಜಗದ ಕವಿ”ಯೆಂದು ವರಕವಿ ಬೇಂದ್ರೆಯವರಿಂದ ಪ್ರಶಂಸಿತರಾದ ರಾಷ್ಟ್ರಕವಿ ಕುವೆಂಪು ಹಾಡಿದ್ದು ಹೀಗೆ:-
    “ದೇಶ ನನ್ನದು ನನ್ನದು ನಾಡು
    ಎನ್ನದ ಮಾನವನೆದೆ ಸುಡುಗಾಡು……..”

    ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಎದೆ ತುಂಬಿ ಹಾಡಿದರು:-
    “ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಇಲ್ಲೇ ಇರುವ ಪ್ರೀತಿ-ಸ್ನೇಹಗಳ
    ಗುರುತಿಸದಾದೆನು ನಮ್ಮೊಳಗೆ….”

    ಗೋಪಾಲಕೃಷ್ಣ ಅಡಿಗರು ಹಾಡಿದರು:-
    “ಕಟ್ಟುವೆವು ನಾವು ಹೊಸ ನಾಡೊಂದನು
    ರಸದ ಬೀಡೊಂದನು….”

    ಈ ಎಲ್ಲ ಮಾನವೀಯತೆಯ ಹೊಂಗನಸನ್ನು ಹೊತ್ತು ಹೊಸ ನಾಡು ಕಟ್ಟಲು
    ಸನ್ನದ್ಧನಾಗುತ್ತಿದ್ದ “ವೇಮುಲ”ನ ಕತ್ತು ಹಿಸುಕಿದ ದುಷ್ಟ ಶಕ್ತಿ ಸಾದಿಸಿದ್ದೇನು?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading