ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

U. R G-reat …

-ಸಂತೋಷ್ ಅನಂತಪುರ

ನಮ್ಮ ಎಲ್ಲಾ ವಯೋಮಾನದಲ್ಲೂ ಅದರ ವೇಗಕ್ಕೆ ಕಡಿವಾಣ ಹಾಕುವ ಸ್ಪೀಡ್ ಬ್ರೇಕರ್ ಗಳು ಇದ್ದೇ ಇರುತ್ತವೆ.. ಬಾಲ್ಯದಲ್ಲಿ ನಮ್ಮನ್ನು ಹದ್ದು ಬಸ್ತಿನಲ್ಲಿಡಲು ಅಪ್ಪ-ಅಮ್ಮ, ಯೌವ್ವನದಲ್ಲಿ ಪ್ರೇಯಸಿ, ಗೆಳತಿ ನಂತರ ಬಾಳ ಸಂಗಾತಿ ಮುಂದೆ ನಮ್ಮ ಮಕ್ಕಳು !!! ಅಂತೂ ವೇಗದ ಮಿತಿಯಲ್ಲೇ ಬದುಕೆಂಬ ಜಟಕಾ ಬಂಡಿಯನ್ನು ಓಡಿಸಬೇಕೆಂಬುದು ವಿಧಿ ನಿಯಮ. ಹೀಗೆ ಅಪ್ಪ-ಅಮ್ಮನ ಹದ್ದು ಬಸ್ತಿನಿಂದ ರೆಕ್ಕೆ ಚಾಚಿ ಹದಿ ಹರೆಯದ ಹೋದೋಟಕ್ಕೆ ಹಾರಿ ಬರಲು, ಅಲ್ಲಿ ನನ್ನಯ ಆಟೋಟಕ್ಕೆ, ಪುಂಡಾಟಕ್ಕೆ ಒಂದು ಲಕ್ಷ್ಮಣ ರೇಖೆಯನ್ನು ಎಳೆದದ್ದು ಅಂದಿನ ನನ್ನ ಗೆಳತಿ ಕಮ್ ಪ್ರೇಯಸಿ ಇಂದಿನ ನನ್ನ ಬಾಳ ಸಂಗಾತಿ ! ನಂತರವೂ ಆಕೆ ವೇಗದ ಮಿತಿಯನ್ನು ಹಾಕುವುದನ್ನು ಮರೆತಿಲ್ಲ. ಇದೀಗ ನನ್ನ ಮಗಳ ಸರದಿ !! ಅಬ್ಬಾ ಬದುಕೇ…..

ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ಪರಿಚಯವಾದ ಹುಡುಗಿ ಆ ನನ್ನ ಬೆಡಗಿ. ಆ ಒಂದು ಸಂಜೆಯ ಮೊದಲ ಭೇಟಿಯಂದು ಪರಸ್ಪರ ನೋಡಿ ಸಾಗುವಾಗ ‘ ಇಂಪ್ರೆಸ್ಡ್ ‘ ಎಂದು ಮೊದಲ ನೋಟಕ್ಕೆ ಇಬ್ಬರಿಂದಲೂ ಹೊರ ಬಂದ ಉದ್ಘಾರ ! ಕಟ್ಟಿದರೆ ಇವಳ ಕತ್ತಿಗೆ ತಾಳಿ ಕಟ್ಟಬೇಕು….. ಎಂದು ಅಣ್ಣಾವ್ರ ಸ್ಟೈಲ್ ನಲ್ಲಿ ಅಂದೇ ಮನದಲ್ಲಿ ಹಾಡಿಕೊಂಡೆ . ಆಕೆಯೋ ಘಟ್ಟದ ಮೇಲಿನವಳು, ನಾನೋ ಘಟ್ಟದ ಕೆಳಗಿನವನು. ಕಡಲ ತಡಿಯ ಹುಡುಗ ನಾನು, ಟೀಸಿಲೊಡೆಯುವ ಬೆವರ ಹನಿ ಗೊತ್ತೇ ಹೊರತು ಮಂಜಿನ ಹನಿ ಕಂಡಿರಲಿಲ್ಲ. ಸರಿ, ಈಕೆ ನನ್ನವಳೆಂದು ಹೇಗೂ ತೀರ್ಮಾನಿಸಿದ್ದಾಗಿದೆ.. ಅಂತೂ ‘ ಕಡಲ ತಡಿಯ ಭಾರ್ಗವ ‘ ‘ ಮಲೆಯಲ್ಲಿ ಮದುಮಗಳ ‘ ಕಂಡ…..! ಮುಂದಿನ ಪಯಣ ಭಾವಿ ಮಾವನತ್ತ ಸಾಗಿದರೆ ಹೇಗೆ…?ಅದಕ್ಕೆ ಒಂದು ಕಾರಣ ಬೇಕಲ್ಲವೇ.. ಅಂತೂ ಪತ್ರಿಕೋದ್ಯಮ ವಿಭಾಗದ ವಿಧ್ಯಾರ್ಥಿಯಾದ ನನಗೆ ಡೀಸರ್ಟೇಶನ್ ಕೆಲಸದ ನಿಮಿತ್ತ ದೊಡ್ಡೇರಿ ವೆಂಕಟಗಿರಿ ರಾಯರನ್ನು ಕಾಣಲು ಸಾಗರಕ್ಕೆ ಹೊರಟಿದ್ದೆ. ಅಲ್ಲಿಯ ನನ್ನ ಊಟ-ವಸತಿಯ ಜವಾಬ್ದಾರಿಯನ್ನು Zoology ವಿಭಾಗದ ನನ್ನ ಮಿತ್ರ ಪ್ರಾಧ್ಯಾಪಕರೊಬ್ಬರು ಸ್ವತಹ ಹೊತ್ತು ಕೊಂಡಿದ್ದರು. ಬೆಳ್ಳಂ ಬೆಳ್ಳಿಗ್ಗೆ ೩.೩೦ ಗೆ ಸಾಗರ ತಲುಪಿದ ಬಸ್ಸಿನಿಂದ ಅವರಿಗಾಗಿ ನಾನು ಕಿಟಕಿಯಿಂದ ತಲೆ ಹೊರ ಚಾಚಿ ನೋಡಬೇಕಾಗಿ ಬಂತು. ಅವರೂ ಅದೇ ರೀತಿಯಲ್ಲಿ ಬಂದ ಬಸ್ಸಿನ ಕಿಟಕಿಗಳತ್ತ ತಲೆ ಎತ್ತಿ ನೋಡುತ್ತಿದ್ದರು…ಅಂತೂ ಎರಡು ಕಣ್ಣುಗಳ ಭೇಟಿಯಾಗಿ ಪರಸ್ಪರ ನಗು ವಿನಿಮಯವಾಯಿತು.ಬಸ್ಸಿನಿಂದ ಇಳಿದದ್ದೇ ಗಾಢವಾಗಿ ಆವರಿಸಿದ ಮಂಜಿನಲ್ಲಿ ಯಾರು ಯಾರು ಎಂದು ತಿಳಿಯದಾಯಿತು…ಕೊನೆಗೂ ಚಳಿಗೆ ಕೈ ಕೈ ಮಸೆಯುತ್ತಿರುವಾಗ…ಸಂತೋಷಾ ಬಾ ಮಾರಾಯ…ಇವತ್ತು ಬಸ್ಸು ಲೇಟಾಗಿ ಬಂತು…ಬಾ ಎಂದು ತಮ್ಮ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಅವರ ಮನೆಯಿರುವ ‘ ಮಂಚಾಲೆ ‘ ಯತ್ತ ಹೊರಟರು….ಈ ಚಳಿಯಿಂದ ಪಾರಾಗಲು..ಅವರ ಅನುಮತಿ ಪಡೆದು ಒಂದು ಸಿಗರೇಟು ಹಚ್ಚಿ ಮಂಜಿನ ಹೊಗೆಯೊಂದಿಗೆ ಸಿಗರೇಟಿನ ಹೊಗೆಯನ್ನೂ ಬೆರೆಸಿದೆ. ಅಂತೂ ಅವರ ಮನೆಗೆ ತಲುಪಿ, ಅಲ್ಲಿಂದ ಅವರೇ ದೊಡ್ಡೇರಿಯವರ ಬಳಿ ಕೊಂಡೊಯ್ದು ಅಲ್ಲಿ ನನ್ನ ಕೆಲಸಗಳೆಲ್ಲಾ ಮುಗಿದ ತರುವಾಯ ಸಾಗರಕ್ಕೆ ಬಂದು ಅವರಿಂದ ಬೀಳ್ಗೊಂಡು ಸಿಹಿಮೊಗ್ಗೆಗೆ ತಲುಪಿದೆ. ಸ್ವಾಮಿ ಕಾರ್ಯ ಸ್ವಕಾರ್ಯ ಅಂತಾರಲ್ಲ ಹಾಗೆ..!

ಅಲ್ಲಿಂದ ಒಂದು ಗಂಟೆಯ ದಾರಿ ನನ್ನ ಅಂದಿನ ಗೆಳತಿಯ ಮನೆಗೆ. ಯಾವುದೇ ಪೂರ್ವ ಮಾಹಿತಿ ಇಲ್ಲದೆ ಆಕೆಯ ಮನೆಗೆ ಹೋಗುವುದು ಭಾವಿ ಅಳಿಯನಾಗಲಿರುವ ನನಗೆ ಸರಿ ಕಂಡು ಬರಲಿಲ್ಲ…ಭಾವಿ ಮಾವನಿಗೆ ಇಂಪ್ರೆಸ್ಸ್ ಮಾಡಬೇಕು ತಾನೇ …! ಆವಾಗಲೆಲ್ಲ ಮೊಬೈಲ್ ಹಾವಳಿ ಇದ್ದಿರಲಿಲ್ಲ…ಸರಿ ಎಂದು ಸ್ತಿರ ದೂರವಾಣಿಗೆ ಫೋನಾಯಿಸಿ ಆಕೆಗೆ ಹೇಳಿದೆ….ಗೆಳತಿ ಇಲ್ಲೇ ಒಂದು ಗಂಟೆಯ ಹಾದಿಯಲ್ಲಿದ್ದೇನೆ…ನಿನ್ನನ್ನು ನೋಡಿಕೊಂಡು ಹೋಗುವ ಹಂಬಲವಿದೆ ಏನು ಮಾಡಲಿ…? ಬರಲೇ ಮನೆಗೆ…? ಅಯ್ಯೋ ಗೆಳೆಯ ಅಪ್ಪನಿಗೆ ವಿಚಾರ ಗೊತ್ತಿಲ್ಲ…ಬೇಡ ಬರುವುದು….. ಎಂದ ಅವಳ ಶಬ್ದ ಮುಂದೆ ಕೇಳದಾದಾಗ ಹಲೋ…ಹಲೋ….ಎಂದೆರಡು ಸಲ ನಾನು ಕೂಗಿದ್ದು ಆಯಿತು…ಸರಿಯಾಗಿ ಕಿವಿ ಕೊಟ್ಟಾಗ…. ಅತ್ತ ಕಡೆಯಿಂದ ಮಗಳ ಮತ್ತು ಅಪ್ಪನ ಸಂಭಾಷಣೆ ನಡೆಯುವುದು ಕೇಳಿಸುತ್ತಿತ್ತು…..ಯಾರೇ ಅದು…? ನಿನ್ನ ಗೆಳೆಯನೇನೆ…? ಬರ್ತಾನಂತೋ…? ಸರಿ ಬರ ಹೇಳು ಎಂದು ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟರು ….ಇತ್ತ ನನ್ನ ಗೆಳತಿ ಅಂದಳು…. ‘ ಅಪ್ಪ ಹೇಳಿದ ಬರಬೇಕಂತೆ…!! ‘ ಅಷ್ಟೇ ತಾನೇ…. ಇಗೋ ಬಂದೇ ಬಿಟ್ಟೆ……!!! ಇರು… ಇರು…..ಫೋನ್ ಇಡಬೇಡ ಯಾವ ಬಸ್ಸು…? ಎಲ್ಲಿ ಇಳಿಯಬೇಕು…? ಮನೆಯ ಹೆಸರು….? ಎಲ್ಲಾ ಹೇಳು ಎಂದು ಎಲ್ಲವನ್ನೂ ಬರೆದುಕೊಂಡು ಮುಂದಿನ ನಿಲ್ದಾಣಕ್ಕೆ ಬಸ್ಸು ಹತ್ತಿದೆ. ಮಲೆನಾಡ ಸೊಬಗನ್ನು, ನಿತ್ಯ ಹರಿದ್ವರ್ಣವನವನ್ನು ಮನಸಾರೇ ಆನಂದಿಸುತ್ತಾ…ಅಂತೂ ಇಂತೂ ಆಕೆ ಹೇಳಿದ ನಿಲ್ದಾಣದಲ್ಲಿ ಇಳಿದು, ಆಕೆ ಹೇಳಿದಂತೆ ಒಂದು ರೀಕ್ಷಾವನ್ನು ಹಿಡಿದು…ಹೆಸರಾಂತ ವೈದ್ಯ,ಗಾಂಧಿವಾದಿಯಾದ ಅವಳ ಚಿಕ್ಕಪ್ಪನ ಹೆಸರೂ ಹೇಳಿ ಅವರ ಮನೆಗೆ ಬಿಡಪ್ಪ ಎಂದು ಆತನನ್ನು ಬೇಡಿಕೊಂಡು… ಕೊನೆಗೂ ಆ ಮಟ ಮಟ ಮಧ್ಯಾಹ್ನದ ಹೊತ್ತಲ್ಲಿ ಆಕೆಯ ಮನೆಯ ಮುಂದೆ ಬಂದಿಳಿದೆ. ಮಲೆಗಳ ನಾಡಲ್ಲಿ ಅಂದು ಮಂಜು ಕವಿದಿತ್ತು…ಮಂಜಿನ ಹನಿ ನನ್ನ ಸ್ವಾಗತಕ್ಕೆ ಗೆಳತಿಯ ಮನೆಯ ಗೇಟಿನ ಮೇಲೆ ಸಾಲಾಗಿ ಕುಳಿತಂತಿತ್ತು. ಕಡಲ ತಡಿಯ ಹುಡುಗನ ಸ್ಪರ್ಶಕ್ಕೆಂದೇ ಕಾದಿರುವ ಆ ಮಂಜಿನ ಹನಿಯನ್ನು ಕಂಡು ಪುಳಕಗೊಂಡು,ಮುಟ್ಟಿದರೆ ಎಲ್ಲಿ ಉದುರಿ ಬಿಡುತ್ತವೆಯೋ ಎಂದು ಅಲ್ಲೇ ನಿಂತು ಅವುಗಳನ್ನೇ ನೋಡುತ್ತಾ ಆನಂದಿಸುತ್ತಿದ್ದೆ. ಇವುಗಳನ್ನು ಹೀಗೆ ಬಿಟ್ಟು ಬೇರೆ ದಾರಿಯಲ್ಲಿ ಹೋಗೋಣವೇ ಎಂದೂ ಯೋಚಿಸುತ್ತಿದ್ದೆ …ಆದರೆ ಹೊರಗಡೆ ಕಟ್ಟೆಯಲ್ಲಿ ನನಗಾಗಿ ಕಾಯುತ್ತಾ ಕುಳಿತಿದ್ದ ಗೆಳತಿ……ಅಲ್ಲೇ ಯಾಕೆ ನಿಂತಿದ್ಯಾ ಬಾರೋ ಎಂದು ಕೂಗಿದಳು…ಅಲ್ಲೇ ಪಕ್ಕದಲ್ಲಿದ್ದ ಸಣ್ಣ ಗೇಟನ್ನು ಹಾದು ಒಳಗಡೆ ಬಂದೆ…ಬಂದವನಿಗೆ ಭಾವಿ ಅತ್ತೆಯಿಂದ ಸ್ವಾಗತ….ನಮಸ್ಕಾರ,ನಾನು ಸಂತೋಷ್ ಅಂತ ನಿಮ್ಮ ಮಗಳ ಸ್ನೇಹಿತ ಅಂದೆ… ನಮಸ್ಕಾರ…. ಗೊತ್ತು ಗೊತ್ತು… ಬನ್ನಿ ಮಗಳು ಹೇಳ್ತಾ ಇದ್ದಳು…ಎಂದರು. ಎಲ್ಲಿ ನಿಮ್ಮ ಅಪ್ಪ ಕಾಣುತ್ತಿಲ್ಲವಲ್ಲ ಎಂದೆ…ಅರೆ…ನಾನು ಇಲ್ಲೇ ಇದ್ದೇನೆ…ಎಂದು ಆಗ ತಾನೇ ಸ್ನಾನ ಮಾಡಿ ಬಂದವರು…….ಪ್ರಯಾಣ ಸುಖವಾಗಿತ್ತೇ…? ಮನೆ ಕಂಡು ಹಿಡಿಯಲು ಏನು ತೊಂದ್ರೆ ಆಗಿಲ್ಲ ತಾನೇ…?ಎಂದು ಉಭಯ ಕುಶಲೊಪಾರಿಯನ್ನು ಮುಗಿಸಿ…ಹೋಗಿ ಫ್ರೆಶ್ ಆಗಿ ಬನ್ನಿ. ಹಂಡೆಯಲ್ಲಿ ಬಿಸಿ ಬಿಸಿ ನೀರಿದೆ…ಸ್ನಾನ ಮುಗಿಸಿಕೊಂಡು ಬನ್ನಿ…ಆಮೇಲೆ ಊಟ ಮಾಡೋಣವಂತೆ ಎಂದು ಎಷ್ಟೋ ವರ್ಷದ ಆತ್ಮೀಯತೆಯನ್ನು ತೋರಿದರು ನನ್ನ ಅಂದಿನ ಭಾವಿ ಮತ್ತು ಇಂದಿನ ಪರ್ಮನೆಂಟ್ ಅತ್ತೆ – ಮಾವ. ನಾನು ಎಲ್ಲೆಲ್ಲಿಗೋ ಹೋಗ್ತಾ ಇದ್ದೇನೆ ಅಂತ ನಿಮಗೆ ಅನಿಸಿದ್ರೆ ಕ್ಷಮಿಸಿ….ಮತ್ತೆ ಬರ್ತಾ ಇದ್ದೇನೆ ಹಳಿಗೆ….ನನ್ನ ಮಾವನ ಬಗ್ಗೆ ಹೇಳಬೇಕಾಗಿರುವುದರಿಂದ ಇಷ್ಟೆಲ್ಲಾ ಪೀಠಿಕೆ ಹಾಕಿದೆ ಅಷ್ಟೇ. Rest is the history ಅಂತಾರಲ್ಲ ಹಂಗೆ !!! ಮುಂದೆ ಅವರ ಮಗಳಿಗೆ ಗಂಡನಾಗಿ,ಕಾನೂನು ಬಧ್ಧವಾಗಿ ಅವರಿಗೆ ನಾನು ‘ ಮಗ ‘ ನಾಗಿ ನನಗೆ ಅವರು ‘ ಅಪ್ಪ ‘ ನಾಗಿ ನಾವು ಸಂಬಂಧವನ್ನು ಬೆಸೆದುಕೊಂಡೆವು.

ಶಬ್ದಗಳಲ್ಲಿ ಬಂಧವನ್ನು , ವ್ಯಕ್ತಿತ್ವವನ್ನು ಹಿಡಿದಿಡುವುದು ಕಷ್ಟ ಸಾಧ್ಯ. ಆದರೂ ಇಂದೊಂದು ಸಣ್ಣ ಪ್ರಯತ್ನ. ನನ್ನ ಬದುಕಿನಲ್ಲಿ ಗಾಢವಾಗಿ ಬೇರೂರಿದ ಒಂದು ವ್ಯಕ್ತಿತ್ವ ನನ್ನ ಮಾವನದ್ದು .ಮೊದ ಮೊದಲು ಅವರ ಚಿಂತನೆಯ ಮಟ್ಟಕ್ಕೆ, ಅವರು ಹೊಂದಿದ ಜ್ಞಾನಕ್ಕೆ ಅನುಗುಣವಾಗಿ ಚಿಂತಿಸುವುದು, ಚರ್ಚಿಸುವುದು, ವಿಶ್ಲೇಷಿಸುವುದು, ಮಾತನಾಡುವುದು, ಕೊನೇ ಪಕ್ಷ ಅದರ ಹತ್ತಿರವಾದರೂ ಸುಳಿಯುವುದೂ ನನಗೆ ಕಷ್ಟವಾಗಿ ಹೋಯಿತು. ನನ್ನ ತಲ್ಲಣಗಳನ್ನು , ಒಳಗಿನ ಬೇಗುದಿಯನ್ನು ತಾನಾಗಿಯೇ ಮನಗಂಡು, ನನ್ನ ಆಸಕ್ತಿಯಾನುಸಾರ ನನ್ನೊಳಗಿನ ನೋಟಗಳನ್ನು ಗ್ರಹಿಸಿ ಆ ಮಟ್ಟಕ್ಕೆ ಅನುಗುಣವಾಗಿ ಅವರು ಮೇರು ಶಿಖರದಿಂದ ನನಗಾಗಿಯೇ ಕೆಳಗಿಳಿದರು. ಮುಂದೆ ಕೈ ಹಿಡಿದು ಮಗುವನ್ನು ನಡೆಸುವಂತೆ ನನ್ನನ್ನು ಎಲ್ಲಾ ವಿಧದಲ್ಲೂ ನಡೆಸಿ, ಬೆಳೆಸಿದರು !!!

ಮಾವನವರದ್ದು ಕ್ರಿಯಾಶೀಲ ಮನಸ್ಸು. ಸದಾ ಚಟುವಟಿಕೆಯಿಂದ ಇರುವ ಅವರು ಅಗಾಧ ಪ್ರಮಾಣದಲ್ಲಿ ಹಲವು ವಿಧದ ಪುಸ್ತಕಗಳನ್ನು ಓದಿಕೊಂಡಿರುವವರು. ಸಾಹಿತ್ಯ, ಸಂಗೀತ,ಕೃಷಿ, ಆಟ-ಊಟ-ನೋಟ ಹೀಗೆ ಎಲ್ಲದರಲ್ಲೂ ತನ್ನದೇ ಆದ ರುಚಿಯನ್ನು ಹೊಂದಿದ್ದು ಮಾತ್ರವಲ್ಲ ಅದನ್ನು ಇನ್ನೊಬ್ಬರಿಗೆ ಬಡಿಸಲೂ ಅವರು ಸದಾ ತಯಾರು. ಸಣ್ಣ ಸಣ್ಣ ಕೌತುಕಗಳಿಗೆ ಬೆರಗಾಗಿ, ಹೊಸ ಹೊಸ ವಿಷಯಗಳನ್ನು ತಿಳಿಯುವ , ಅರಿಯುವ ಹಂಬಲ ಅವರಿಗೆ. ಹೊಸ ಹೊಸ ನಳ ಪಾಕಗಳನ್ನು ಕಂಡು ಕೊಂಡು ಅದನ್ನು ಅತ್ತೆಯಿಂದ ಮಾಡಿಸಿಕೊಂಡು ಚಪ್ಪರಿಸುವುದೂ ಇದೆ. ಲಹರಿ ಬಂದಾಗ ಕುಮಾರ್ ಗಂಧರ್ವ, ಮುಕೇಶ್, ಪಿ.ಬಿ.ಶ್ರೀನಿವಾಸ್, ರಾಜ್‍ಕುಮಾರ್, ಕಾಳಿಂಗ ನಾವುಡ ರೆಲ್ಲಾ ಇವರ ಕಂಠದಲ್ಲಿ ಉಲಿಯುವುದಿದೆ. ಮೂರು ಗುಣಿಸು ಅರಿಷ್ಟವನ್ನು ನೆಚ್ಚುವ ಇವರು ಉತ್ತಮ ಹೋಸ್ಟ್ ಕೂಡ ಹೌದು. ರಾಜಾರಾಮಣ್ಣ ಡ್ರಿಂಕ್ ಹೀಗೆ ಕಣೋ…ಎಂದು ಹಲವು ಬಗೆಯ ಪೇಯಗಳನ್ನು ಸ್ವತಹ ತಯಾರಿಸಿ ರುಚಿ ನೋಡ್ರೋ ಮಕ್ಕಳೇ…ಎಂದು ನಮಗೂ ಕೊಡುವುದಿದೆ. ವೈಚಾರಿಕವಾಗಿ ನನ್ನನ್ನು ಬೆಳೆಸಿ, ಪೋಷಿಸುತ್ತಿರುವ ಈ ಜೀವ ಮಹಾನ್ ಕಥೆಗಾರರಿಗೆ ಹಲವು ಕಥಾವಸ್ತು ಒದಗಿಸಿದ ಪುಣ್ಯವನ್ನು ತನ್ನ ಬಗಲಲ್ಲಿ ಇಟ್ಟುಕೊಂಡಿದೆ. ಆದರೆ ಇವರು ಮಾತ್ರ ಎಂದಿನಂತೆ ತೆರೆಮರೆಯಲ್ಲಿ ! ‘ ಎನಗಿಂತ ಕಿರಿಯರಿಲ್ಲಯ್ಯಾ….ಮಲೆಯ ಮೇಲಿನ ಯೋಗಿ ನಾನು…’ ಎಂದು ಹೇಳುತ್ತಾ… ಹಾಗೆ ಬದುಕಿಯೂ ತೋರಿಸಿದ್ದಾರೆ ಕೂಡ. ಅವರೇ ಹೇಳುವಂತೆ ” ಓದಿ ನಾನು ಸಮಾಜವಾದಿ ಆಗಿಲ್ಲ… ಬದುಕಿ ಸಮಾಜವಾದಿ ಆಗಿದ್ದೀನಿ ಕಣೋ ಮಾರಾಯ…. “, ಅದು ಸತ್ಯ ಕೂಡ !!! ಬದುಕಲ್ಲಿ ನನಗೆ ತಲೆ ಬಾಗದಂತೆ ಆಸರೆ ಕೊಟ್ಟ, ಕೊಡುತ್ತಿರುವ ಜೀವವದು. ಹೆಸರಿಗೆ ತಕ್ಕ ಹಾಗೆ ನನಗೆ ಅವರು ”ಗುರು’ವೂ ಹೌದು. ಈಮೇಲ್ ನಿಂದ ಫೀಮೇಲ್ ವರೆಗೂ ಮುಕ್ತವಾಗಿ ಮಾತನಾಡುವ ಸಲಿಗೆಯನ್ನು ಅವರ ಬಳಿ ನಾನು ಹೊಂದಿದ್ದೇನೆ. ಈ ವಯಸ್ಸಲ್ಲಿ,ತನ್ನ ಕಾಲಿಗೆ ಏಟಾಗಿದ್ದರೂ ಮೊಮ್ಮಗಳನ್ನು ಕರೆದುಕೊಂಡು ಬಾದಾಮಿಯ ಗುಹೆಗಳಿಗೆ, ಗೋಲ್ ಗುಂಬಜ್ ನ ಎತ್ತರಕ್ಕೆ ಹತ್ತುವ ಸಾಹಸಿ, ಪ್ರಯಾಣ ಪ್ರೀಯ. ಸದಾ ತನ್ನನ್ನು ಅಪ್‌ಡೇಟ್ ಮಾಡಿಕೊಳ್ಳುವ ನವಯುವಕ. ಇಂಟರ್‌ನೆಟ್ ನಲ್ಲಿ ದೇಶ ಸುತ್ತಿ ಕೋಶವನ್ನು ಓದುವ ಇವರು ಸೋಷಿಯಲ್ ನೆಟ್‌ವರ್ಕಿಂಗ್ ಸೈಟ್ ನಲ್ಲೂ ಸದಾ ಚಟುವಟಿಕೆಯಲ್ಲಿರುತ್ತಾರೆ. ಚರಿತ್ರೆಯನ್ನು ಅತಿಯಾಗಿ ಇಷ್ಟಪಡುವ ಇವರು ‘ ಉತ್ತಮ ಪ್ರಭುತ್ವ ಲೊಳಲೊಟ್ಟೆ ‘ ಎಂದು ರಾಜಕೀಯವನ್ನೂ ಚೆನ್ನಾಗಿ ವಿಶ್ಲೇಷಿಸಬಲ್ಲರು. ಹಬ್ಬ ಹರಿದಿನಗಳಲ್ಲಿ ಬಗೆ ಬಗೆಯ ಭಕ್ಷ್ಯಗಳನ್ನು ತಿನಿಸಿ ಹಬ್ಬದ ಮತ್ತು ತಿನಿಸುಗಳ ಹಿನ್ನಲೆ, ಮಹತ್ವವನ್ನು ಹೇಳುವ ಇವರು ಎಳ್ಳಮವಾಸ್ಯೆಯ ಜಾತ್ರೆಯಲ್ಲಿ ತುಂಗಾ ನದಿಯನ್ನು ಕಂಡು ಇಂದಿಗೂ ಬೆರಗನ್ನು ಪಡುವವರು. ತೆಪ್ಪದಲ್ಲಿ ತುಂಗಾ ನದಿಯಲ್ಲಿ ಅವರು ಖುಷಿಯಿಂದ ವಿಹರಿಸುವುದನ್ನು ಕಾಣುವುದೇ ಒಂದು ಚಂದ. ಆ ಜೀವನೋತ್ಸಾಹ ನಿಜಕ್ಕೂ ಅದ್ಭುತ ಕಣ್ರೀ !! ಸದಾ ಮಾತಲ್ಲಿ ಪನ್ ಮಾಡುವ , ಹಾಸ್ಯ ಪ್ರೀಯರಾದ ಇವರು ಬದುಕಲ್ಲಿ ನಿತ್ಯ ನಗೆ ಬುಗ್ಗೆಯನ್ನು ಉಕ್ಕಿಸುವವರು.ದಿನ್ಡಿನ ಕಾಯಿ ಸಾರು,ಅಂಬಟೆ ಕಾಯಿ ಗೊಜ್ಜು, ಹುರುಳಿ ಸಾರನ್ನು ತನ್ನದೇ ಶೈಲಿಯಲ್ಲಿ ಸಿದ್ದಪಡಿಸಿ, ಪಂಚೇಂದ್ರಿಯಗಳಿಗೆ ಚುರುಕನ್ನು ಮುಟ್ಟಿಸಿ, ನಮ್ಮನ್ನು ಗತಕಾಲಕ್ಕೆ ಕೊಂಡೋಯ್ಯಬಲ್ಲ ಶಕ್ತಿ ಇವುಗಳಿಗಿದೆ ನೋಡು ಮಾರಾಯ..!! ಎಂದು ಹೊಸ ಹೊಸ ಹೊಳಹನ್ನು ನಮ್ಮ ರುಚಿಗಳಲ್ಲಿ ,ನಿತ್ಯದ ವಿಷಯಗಳಲ್ಲಿ ಕಾಣಿಸುತ್ತಾರೆ. ಉಪ್ಪಿನಕಾಯಿಗೆ ಒಳ್ಳೆಯ ಮಾವಿನ ಮಿಡಿಯನ್ನು , ಹುಣಿಸೇ ಕಾಯಿ ತೊಕ್ಕಿಗೆ ಹದವಾಗಿ ಬೆಳೆದ ಹುಣಿಸೇ ಕಾಯಿಯನ್ನು, ಅಡಿಗೆಗೆ ಬೇಕಾದ ಉತ್ತಮ ಹಿಂಗನ್ನು ಹುಡುಕಿ ತರಬಲ್ಲ, ಉತ್ತಮ ಆಯ್ಕೆಯನ್ನು,ರುಚಿಯನ್ನು ಹೊಂದಿದ ಒಬ್ಬ ಮನೆಯಜಮಾನ. ಹೆಂಡತಿಗೆ -ಮಕ್ಕಳಿಗೆ – ಅಳಿಯಂದಿರಿಗೆ-ಮೊಮ್ಮಕ್ಕಳಿಗೆ ನಿಜವಾದ ಅರ್ಥದಲ್ಲಿ ಉತ್ತಮ ಗಂಡ-ಅಪ್ಪ-ಮಾವ-ಅಜ್ಜನಾಗಿರುವ ಇಂತಹ ಜೀವ ಎಲ್ಲರ ಮನೆಯಲ್ಲೂ ಇದ್ದರೆ ಅದುವೇ ಚೆನ್ನು.

ಎಡವಿದಾಗ , ಮುಗ್ಗರಿಸಿದಾಗ ಕೈ ಹಿಡಿದು ಎಬ್ಬಿಸಿ ಸರಿ ದಾರಿ ತೋರಿ ಜೊತೆಗೆ ನಿಂತ, ನಿಂತಿರುವ ನನ್ನ ಶಕ್ತಿ. ಒಟ್ಟಿನಲ್ಲಿ ನನ್ನ ಆಯ್ಕೆ ಸರಿಯಾಗಿಯೇ ಇದೆ ಎಂದು ಎಷ್ಟೋ ಬಾರಿ ನನ್ನ ಬೆನ್ನ ನಾನೇ ತಟ್ಟಿಕೊಳ್ಳುವುದಿದೆ ! ಇಂತಿಪ್ಪ ನನ್ನ ಮಾವನನ್ನು ಅವರ ಸ್ನೇಹಿತರು, ಬಂಧು ಬಳಗ ‘ಗುರು’ ಎಂದೂ ‘ URG ‘ ಎಂದು ಕರೆಯುತ್ತಾರೆ. ಆದರೆ ನಾನು ಮಾತ್ರ ಅವರನ್ನು U. R G-reat ಎಂದು ಕರೆಯುತ್ತೇನೆ !!!! Thank you Mava – Appa for being with me always. ಇದೆಲ್ಲಾ ಯಾಕೆ ಹೇಳಬೇಕಾಗಿ ಬಂತು ಎಂದರೆ…..ನಾನೊಮ್ಮೆ ತಿರುಗಿ….ಬಂದ ದಾರಿ ನೋಡಿದೆ…. ಅಷ್ಟಕ್ಕೇ ಇವೆಲ್ಲಾ ನೆನಪಾಯ್ತು ನೋಡಿ….. ಹಾಂ…. ಜೊತೆಗೆ ನಾನೂ ಒಬ್ಬ ಮಗಳ ಅಪ್ಪ !!!


‍ಲೇಖಕರು avadhi

25 August, 2011

4 Comments

  1. Vivek

    NIce

  2. akshatha.k

    ಸಂತೋಷ್ , ತುಂಬಾ ಆಪ್ತವಾದ ಬರಹ . ಗುರುರಾಜ್ ಅಂಕಲ್ ತೋರಿಸುವ ಪ್ರೀತಿ , ವಿಶ್ವಾಸಕ್ಕೆ ಸಾಟಿಯೇ ಇಲ್ಲ . ಅವರೊಂದು ಅಗಾಧ ಜ್ಞಾನದ ಒರತೆ . ನಿನ್ನೆ ಅಂಕಲ್ ಹುಟ್ಟು ಹಬ್ಬಕ್ಕೆ ನಮ್ಮನೇಲಿ ಊಟಕ್ಕೆ ಕರೆದರೆ ಅಡಿಗರ ಪದ್ಯದ ಸಾಲುಗಳನ್ನು ಹೇಳಿ ವಿಶ್ಲೇಷಿಸಿ ಊಟಕ್ಕೆ ಹೊಸ ಕಳೆ ತಂದರು . ಅವರ ಜೊತೆಯ ಒಡನಾಟ ಎಲ್ಲ ವಯೋಧರ್ಮದವರಿಗೂ ಎಸ್ಟೊಂದು ಇಷ್ಟವಾಗುತ್ತದೆ ಎಂಬುದನ್ನು ಕಂಡು ಅನುಭವಿಸಿದವಳು ನಾನು . ಮನೆಯವರಿಗೆ ಇಷ್ಟವಾದ ಅಂಕಲ್ ಮನೆಯಾಚೆಯ , ಜಾತಿಯಾಚೆಯ … ನಮ್ಮಂತವರನ್ನು ಹಿರಿಯ ಹಳ್ಳಿಗರಂತೆ ವಾತ್ಸಲ್ಯದಿಂದ ಕಂಡಿದಾರೆ .
    ಅಂಕಲ್ ಪನ್ ಗಳಂತೂ ಅದ್ಬುತ …. ನಂಗಂತೂ ಎಷ್ಟು ನೆನಪಾಗತದೆ…. ಸದ್ಯಕ್ಕೆ ಸಣ್ಣದೊಂದು ಘಟನೆ ಹೇಳ್ತೀನಿ … ಒಂದಿನ ಅಂಕಲ್ ತಮ್ಮ ಎಲೆ -ಅಡಿಕೆ ಸಂಚಿ (ಚೀಲ ) ಹುಡುಕ್ತ ಇದ್ರು . ಅದು ಸುಮ್ಮನೆ ಹುಡುಕ್ತ ಇರಲಿಲ್ಲ …` ಎಲ್ಲಿ ನನ್ನ ಪ್ರಾಣಕಾಂತೆ…. ಎಲ್ಲಿ ಹೋದಳು ನನ್ನ ಜೀವನ ಸಂಗಾತಿ … ಎಲ್ಲಿ ನನ್ನ ಅರ್ಧಾಂಗಿ ….’ ಅಂತೆಲ್ಲ ವಿರಹ ಪ್ರಕಟಿಸುತ್ತ ಹುಡುಕ್ತ ಇದ್ರು … ಆಂಟಿ ಇದ್ದವರು` ಎಂಥ ಅದಾ ನಿಮ್ಮ ಪ್ರಾಣಕಾಂತೆ …ಅರ್ಧಾಂಗಿ … ಎಲ್ಲ’ ಮಾಡ್ತೀನಿ ತಡೀರಿ ಅಂತ ನಗುತ್ತಲೇ ನುಸುಕೋಪ ಪ್ರದರ್ಶಿಸಿದ್ದೇ ಸೈ, ಅಂಕಲ್ `ಇಲ್ಲಪ್ಪ ಚೂರು ಎಲ್ಲೋ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದೆ. ಅದು ಬ್ಯಾಗ್ ನೀನು ಭಾಗ್ಯ .ನಿನ್ನೆ ಹುಡುಕ್ತ ಇದ್ದಿದ್ದು …’ ಅಂದ್ರು … ಇಂಥವು ನೂರಾರು …
    ಕಳೆದ ವರ್ಷ ರಂಗಾಯಣದ ಅಹೋರಾತ್ರಿ `ಮಲೆಗಳಲಿ ಮದುಮಗಳು ‘ ನಾಟಕ ನೋಡ್ಕಂಬಂದ ನನಗೆ ಅಂಕಲ್ ` ನಾಟಕದ ನಾಯಿಗುತ್ತಿ ಬೆಳ್ಳಗೆ ಇದ್ನ ಧಾರಾವಾಹಿಯವ್ರ ರೀತಿ ಕರ್ರಗೆ ತೋರಿಸಿದ್ರ ? ಅಂತ ಕೇಳಿದ್ರು. ಮಲೆಗಳಲಿ ಮದುಮಗಳು ಕೃತಿಯನ್ನು ಹತ್ತು ಸರ್ತಿಯಾದ್ರು ಓದಿರಬಹುದು ನಾನು ಅಂತ ಹೆಮ್ಮೆ ಪಡುತಿದ್ದ ನನಗೆ ಒಂದು ಕ್ಸಣ ಅಂಕಲ್ ಮುಂದಿನ ಮಾತುಗಳು ನನ್ನೊಳಗೆ ಇಣುಕಿ ನೋಡುವಂತೆ ಮಾಡಿತು . ಬೆಳ್ಳಗಿದ್ದ ಅಂಕಲ್ … ನಂಗು ಯಾಕೆ ಇವನನ್ನು ಬೆಳ್ಳಗೆ ತೋರಿಸಿದ್ದಾರೆ. ಧಾರವಾಹಿಯವ್ರ ರೀತಿ ಸರಿಯಾಗಿ ಕರ್ರಗೆ ಇರೋವ್ನನ್ನ ಈ ಪಾತ್ರಕ್ಕೆ ಆಯ್ಕೆ ಮಾಡ್ಲಿಲ್ಲ ಅಂತ ಆಶ್ಚರ್ಯ ಆಯಿತು’ ಅಂದೇ. ಅಂಕಲ್ ನಗುತ್ತಲೇ ` ಅಲ್ಲ ನಾನು ಧಾರವಾಹಿಯವರು ಕೃತಿಯನ್ನು ಸರಿಯಾಗಿ ಓದದೆ ಆ ಪಾತ್ರಧಾರಿಯನ್ನು ಹೊಲೆಯರು ಅಂದ್ರೆ ಕರ್ರಗೆ ಇರ್ಬೇಕು ಅನ್ನೋ ಪೂರ್ವಗ್ರಹದಿಂದ ಆಯ್ಕೆ ಮಾಡಿದಾರೆ. ನಾಯಿಗುತ್ತಿ ಬೆಳ್ಳಗಿದ್ದ . ಅಂಥಕ್ಕನ ಮಗಳು ಕಾವೇರಿ `ನಾಯಿ ಗುತ್ತಿ ಎಷ್ಟು ಬೆಳ್ಳಗಿದಾನೆ…’ ಅಂತ ಅವನಿಗೆ ಮೋಹಗೊಳ್ಳುವ ಸನ್ನಿವೇಶವು ಕಾದಂಬರಿಯಲ್ಲಿದೆ . ಇದನೆಲ್ಲ ನಾಟಕ , ಧಾರವಾಹಿ ಮಾಡೋರು ಗಮನಿಸಬೇಕು . ನಾಟಕದ ನಿರ್ದೇಶಕರು ಕಾದಂಬರಿಯನ್ನ ಸರಿಯಾಗಿ ಓದಿದ್ದಾರೆ ಅಂತಾಯ್ತು’ ಅಂದ್ರು . ಅಗಾಧವಾದ ಸಾಹಿತ್ಯದ ಓದಿರುವ ಅಂಕಲ್ ಕೃತಿಯ ಸಣ್ಣ ಸಣ್ಣ ವಿವರಗಳನ್ನು ಹೇಗೆ ನೆನಪಿಡುತ್ತಾರೆ ಎಂಬುದೇ ನನ್ನ ಕೌತುಕ ….
    ಲಂಕೇಶ್ ತಮ್ಮದೊಂದು ಪದ್ಯದಲ್ಲಿ ಹಣ, ಐಶ್ವರ್ಯ ಎಲ್ಲ ಎಸ್ಟೋ ಜನರನ್ನು ಸುಖವಾಗಿತ್ತಿರಬಹುದು. ಆದ್ರೆ ಎಲ್ಲೋ ಒಬ್ಬಿಬ್ರನ್ನು ಸುಖವಾಗಿಡಲು ಅರಳಿದ ಹೂ … ಕವಿತೆಯ ಸಾಲು …ಜೋಗಿಯ ಹಾಡೇ ಸಾಕು ಅಂತಾರೆ . ನನ್ನ ಅಂಕಲ್ ಆ ತರದವರು ….ಅವ್ರಸ್ಟೆ ಸುಖವಾಗಿಲ್ಲ ನಮ್ಮೆಲ್ಲರ ಸುಖದಲ್ಲೂ ಅಂಕಲ್ ಪಾಲಿದೆ …
    ಮಹಾ ಸಂಕೋಚದ ಅಸಾಮಿ ಅಂಕಲ್ ಇದನ್ನು ಓದಿದರೆ `ಎಂಥ ಅಕ್ಷತಾ …ಸಂತೋಷ ಅರ್ಧ ಸಾಯಿಸಿದ್ದ ನೀನು ಪೂರ್ತಿ ಸಾಯಿಸ್ಬಿಟ್ಟೆ….ನನ್ನ … ‘ಅನ್ನದಿದ್ದರೆ ಕೇಳಿ .

  3. Shama, Nandibetta

    THUMBA AAPTHA BARAHA SANTHOSH..

  4. akhila shetty

    ನಿಮ್ಮ ಮಾವ-ಅಪ್ಪ ಅವರಿಗೆ ಒಳ್ಳೆ ಉಡುಗೊರೆ…ತುಂಬಾ ಚೆನ್ನಾಗಿದೆ..!! :))

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading