ಕನ್ನಡ ಬ್ಲಾಗ್ ಲೋಕದ ಹಿರಿಯ, ‘ಕಾಮರೂಪಿ’ ಎಂದೇ ಹೆಸರಾದ ಎಂ ಎಸ್ ಪ್ರಭಾಕರ ಅವರು ಇತ್ತೀಚಿಗೆ ಎಸ್ ಬಾಗೇಶ್ರೀ ಅವರ ಬ್ಲಾಗ್ bageshree ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಾಗೇಶ್ರೀ ಅವರ ‘ಸಮಯವನ್ನು ನುಂಗುವ ಸಮಯ’ ಬರಹಕ್ಕೆ ನೀಡಿದ ಪ್ರತಿಕ್ರಿಯೆ ಇದೆ. ಬಾಗೇಶ್ರೀ ಅವರ ಬರಹಕ್ಕಿರುವ ವಿಶಿಷ್ಟ ಶಕ್ತಿ ಯತ್ತ ಗಮನ ಸೆಳೆಯಲು ಕಾಮರೂಪಿ ಅವರ ಪ್ರತಿಕ್ರಿಯೆಯನ್ನು ಇಲ್ಲಿ ನೀಡುತ್ತಿದ್ದೇವೆ

ಸಮಯವನ್ನು ನುಂಗುವ ಸಮಯ
ಶ್ರೀಮತಿ ಬಾಗೇಶ್ವರಿ ಅವರಿಗೆ ಹೃತ್ಪೂರ್ವಕ ಅಬಿವಂದನೆಘಳು, ಶುಭಾಶಯಗಳು. ನಿಮ್ಮ ಇತ್ತೀಚಿನ ಬ್ಲಾಗ್ ತುಂಬಾ ಮನಸ್ಸಿಗೆ ಹಚ್ಚಿಕೊಂಡಿತು. ಬಹಳ ಅರ್ಥಪೂರ್ಣವಾದ ಮತ್ತು ಚಿಂತನೆಗಳನ್ನು ಪ್ರಚೋದಿಸುವಂತಹ ಬರವಣಿಗೆ. ಕಾಲ ಮತ್ತು ಸಮಯದ ಬಗ್ಯೆ ನೀವು ಸಾಹಿತ್ಯದಿಂದ ಉಲ್ಲೇಖಿಸಿರುವ ಪದ್ಯಗಳು ಮತ್ತು ತುಣುಕುಗಳೂ ಸಹ ಬಹಳ ಉಚಿತವಾಗಿವೆ, ಅರ್ಥ ಮತ್ತು ಗಹನಪೂರ್ಣವಾಗಿವೆ. ಕಾಲ ಸಮಯಗಳ ಬಗ್ಯೆ ನಾನು ಬಹಳ ವರುಷಗಳಿಂದ ಮೆಚ್ಚಿಕೊಂಡಿರುವ ಶೇಕ್ಸಪಿಯರಿನ Troilus and Cressida ನಾಟಕದ ಅಂಕ ಮೂರು, ದೃಶ್ಯ ಮೂರು, ಸಾಲುಗಳು ೧೪೪ ರಿಂದ ಆರಂಭವಾಗುವ ಕೆಲವು ಸಾಲುಗಳನ್ನು ಕೆಳಗೆ ಉಲ್ಲೇಖಿದ್ದೇನೆ: ಈ ಮಾತುಗಳನ್ನು ಯೂಲಿಸಿಸ್ ಎಕಿಲಿಸ್ ಗೆ ಹೇಳುತ್ತಿದ್ದಾನೆ. ಸಂದರ್ಭ: ಗ್ರೀಕ್ ಪಡೆಯ ವೀರಯೋಧ ಎಕಿಲಿಸ್ ತನಗೆ ಸಿಕ್ಕಬೇಕಾಗಿದ್ದ ಮಾನ್ಯತೆ ದೊರಕಲಿಲ್ಲ ಅಂತ ಕೋಪದ ಮುನಿಸಿನಲ್ಲಿ ಟ್ರೋಜನ್ ಸೇನೆಯ ವಿರುದ್ಧ ಯುದ್ಧದಲ್ಲಿ ಪಾಲ್ಗೊಡದೆ ತನ್ನದೇ ಡೇರೆಯಲ್ಲಿ ಕುಳಿತಿದ್ದಾನೆ. ಈ ಮಾತುಗಳು ಊಲಿಸಿಸ್ ನ ಬುದ್ಧಿವಾದ, ಇಂತಹ ಮುನಿಸಿನಲ್ಲಿದ್ದ ಎಕಿಲಿಸ್ ಗೆ.
Time hath, my lord, a wallet at his back,
Wherein he puts alms for oblivion,
A great-sized monster of ingratitude.
Those scraps are good deeds past, which are devoured
As fast as they are made, forgot as soon
As done. Perseverance, my lord,
Keeps honour bright. To have done is to hang
Quite out of fashion, like a rusty nail
In monumental mockery…
ಇನ್ನೂ ಬಹಳ ಇದೆ, ಆದರೆ ಪೂರ್ತಿ ಉಲ್ಲೇಖಿಸುತ್ತಿಲ್ಲ, ಏಕೆಂದರೆ ಈ ನಾಟಕ ನಿಮಗೆ ಚೆನ್ನಾಗಿ ಪರಿಚಿತವಿರಬೇಕು. ಸಮಯ, ಕಾಲ, ಇವುಗಳ ಬಗ್ಯೆ ಯೂಲಿಸಿಸ್ ನ ಮಾತುಗಳು ನಿಮ್ಮ ಅಭಿಪ್ರಾಯಗಳಿಗೆ ಬಹಳ ಹೊಂದಿಕೊಳ್ಳುತ್ತವೆ ಅನ್ನಿಸುತ್ತದೆ. ಕಾಲ ಎಲ್ಲವನ್ನೂ ನುಂಗಿ ಜೀರ್ಣಿಸಿಕೊಳ್ಳುತ್ತದೆ, ಅಲ್ಲವಾ. ಎಕಿಲಿಸ್ ಎಂತಹ ವೀರ ಯೋಧನಾಗಿದ್ದರೂ ಅವನದಂತಹ ಕೀರ್ತಿಯನ್ನೂ ಕಾಲ ನುಂಗಿಕೊಳ್ಳುತ್ತದೆ. ನಿನ್ನೆಯ ಕೀರ್ತಿ ನಿನ್ನೆಯದು, ಇಂದು ಏನು ಮಾಡಿದೆ, ಮಾಡಬಲ್ಲೆ, ಇದೇ ಕಾಲದ ದಿನಂಪ್ರತಿದಿನದ ಎದುರುಪ್ರಶ್ನೆ. ಈ ರೀತಿ ನಮ್ಮನ್ನು challenge ಮಾಡುವಾಗಲೇ ಕಾಲ ನಮ್ಮನ್ನು ತಿನ್ನಿತ್ತಲೂ ಇದೆ, ಪ್ರತಿ ಕ್ಷಣವೂ ನಮ್ಮ ಮೈಮನಸ್ಸಿನ ಶಕ್ತಿ ಉತ್ಸಾಹ ಜಿಗುಪ್ಸೆಗಳನ್ನೂ, ನಮ್ಮ ದೇಹಗಳ ಒಳಹೊರಗಿನ ಸೌಂದರ್ಯ ವಿರೂಪತೆಗಳನ್ನೂ, ನಮ್ಮ ಪರಾಕ್ರಮ ಹೇಡಿತನಗಳನ್ನೂ ಧ್ವಂಸ ನಾಶ ಮಾಡುತ್ತಿದೆ.
ಇನ್ನೊಂದು ಮಾತು ಹೇಳಬಯುಸುತ್ತೇನೆ. ಕಾಲಪುರುಷನಗಿಂತ ಮೀರಿ ಯಾರು ತಾನೇ ಭಯ ಪಡಿಸಬಲ್ಲರು. ಆದರೂ ಕಾಲದಂತಹ ಭಯಾನಕ ವಿಷಯಗಳ ಬಗ್ಯೆ ಬರೆಯುವಾಗಲೂ ನಿಮ್ಮ ಬರವಣಿಗೆಯಲ್ಲಿ ಒಂದು ರೀತಿ ತಮಾಷೆ, ತುಂಟತನ ಇದೆ. ಇಂಗ್ಲಿಷ್ ನಲ್ಲಿ ಹೇಳಬಹುದಾದರೆ, a lightness of touch. ಬೆಳಿಗ್ಯೆ ದರ್ಶಿನಿಯೊಂದರಲ್ಲಿ ಇಡ್ಲಿ ತಿನ್ನುತ್ತಾ ಮಂದಿಮೇಲೆಮಂದಿ ಆಫೀಸುಗಳ ಕಡೆ ಓಡುತ್ತಿರುವದನ್ನು ನೋಡುವ ಸೋಮಾರಿತನದ ಮಜದ ಮಧ್ಯೆ ಈ ಮಜ ಸ್ವಾದಿಸುತ್ತಿರುವರೂ ಇದೇ ರೀತಿ ತಾವೂ ನೂಕು ನುಗ್ಗಾಟಗಳಲ್ಲಿ ಸೇರಿಕೊಳ್ಳಲೇಬೇಕು ಎನ್ನುವ ಪ್ರಜ್ನೆಯೂ ಇದೆ. ಈ ರೀತಿಯ ಪ್ರಜ್ನಾವಂತ ತುಂಟತನ ಯಾವ ರೀತಿಯಲ್ಲೂ ನಿಮ್ಮ ವಿಷಯವಸ್ತುವಿನ ದಾರುಣ್ಯತೆಗೆ ಭಂಗ ಮಾಡದಿರುವಂತಹ ಅಪರೂಪದ ಬರವಣಿಗೆ.
ಅಂದಹಾಗೆ ಇನ್ನೊಂದು ಮಾತು. ಕೈಗಳಿಲ್ಲದ ಗಡಿಯಾರ ಹಿಂದಿನಕಾಲದಲ್ಲೂ ಇತ್ತು, ಮರಳು ಉಪಯೋಗಿಸುತ್ತಿದ್ದ hourglass. ಆದರೂ ಆ ಕೈಗಳಿಲ್ಲದಿದ್ದ hourglass ಮತ್ತು ಈ ಸೈಬರ್ ಯುಗದ ಕೇಂಬ್ರಿಜ್ ನ ಕೈಗಳಿಲ್ಲದ ಗಡಿಯಾರಗಳ ಮಧ್ಯೆ ಒಂದು ಗುರುತರ ಪಾರ್ಥಕ್ಯ ಇದೆ. ಆ ಹಳೆಯಕಾಲದ ಕಾಲಸೂಚಿ ನಿನ್ನೆಇಂದುನಾಳೆಗಳನ್ನು, ಅವುಗಳ ಉತ್ಸಾಹ ನಿರಾಶೆಗಳನ್ನು, ಪ್ರಾಯದ ಸೌಂದರ್ಯ ಮುದಿತನದ ಇಕ್ಕುತಗ್ಗುಗಳನ್ನು ತಾಲತಾರತಮ್ಯವಿಲ್ಲದೆ ನುಂಗಿ ಜೀರ್ಣಿಸಿಕೊಳ್ಳುವ ಕಾಲಪುರುಷನ ಪ್ರತೀಕವಾಗಿದ್ದರೆ ಇಂದಿನ ಸಮಯನಿರೂಪಿಸುವ ಕೈಗಳನ್ನು ಹೊಂದದ ಗಡಿಯಾರ ಅಂತಹ ಭಯಂಕರ ಕಾಲವನ್ನೇ ತತ್ಕಾಲಕ್ಕಾದರೂ ನುಂಗುವ, ಅಥವಾ ಅತಿ ಕಮ್ಮಿ ಅಂದರೂ ಅಡ್ದ ಬಂದು ಕುಂಠಿಸುವ ಕ್ಷಮತೆಯನ್ನು ಹೊಂದಿರುವ ಒಂದು ಪವಾಡ. ಆದರೂ ಈ ಕಾಲವನ್ನು ಒಂದೇಬಾರಿಗೆ ತಿಂದು ಜೀರ್ಣಿಸಿಕೊಳ್ಳದಿದ್ದರೂ ಕಚ್ಚಿ ಜಿಗಿದು ಸ್ವಲ್ಪ ಸಮಯಕ್ಕಾದರೂ ಸಮಯದ ನೇರ ಗತಿಯನ್ನು ವಕ್ರ ಮಾದುವ ಕ್ರಿಮಿ ಮಿಡತೆಗಿಂತಲೂ ಇಲಿ ಆಗಿದ್ದರೆ ಇನ್ನೂ ಉಚಿತವಾಗುತ್ತಿತು ಅನ್ನಿಸುತ್ತದೆ.
ನಿಮ್ಮ ಬರವಣಿಗೆಗೆ, ನಿಮ್ಮ ಲೇಖಣಿಗೆ ಮತ್ತು ಕಂಪ್ಯೂಟರಿಗೆ, ಇದೆಲ್ಲಕ್ಕಿಂತಲೂ ಮೀರಿ ಇವುಗಳ ಹಿಂದೆ ಅವಿತುಕೊಂಡಿರುವ ನಿಮ್ಮ ಮನೋಬಲ ಮತ್ತು ಮನೋಬುದ್ಧಿ ಇನ್ನೂ ವೃದ್ಧಿಯಾಗಲಿ, ಬಲಿಷ್ಟವಾಗಲಿ ಎಂದು ಹಾರೈಸುತ್ತೇನೆ.
ಇತಿ, ಪ್ರಭಾಕರ.
Time hath, my lord, a wallet at his back…
ನಿಮಗೆ ಇವೂ ಇಷ್ಟವಾಗಬಹುದು…





0 Comments