ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

The girl in the green dress

ಆಕರ್ಷ ಕಮಲ

‘L ‘Auberge Espagnole’ ಎಂಬ ಫ್ರೆಂಚ್ ಚಿತ್ರದ ನಾಯಕ ಬಾರ್ಸಿಲೋನಾ ದೇಶಕ್ಕೆ ಓದಲು ಹೋಗಿದ್ದಾಗ ಇದ್ದಕ್ಕಿದಂತೆ ತಾನು ಒಂಟಿ ಎಂಬ ಭಾವನೆ ಮೂಡಿ, ಭಾವುಕನಾಗುತ್ತಾನೆ. ತನ್ನ ಮಾತೃಭಾಷೆಯನ್ನು ಮರೆತು, ಬೇರುಗಳನ್ನು ಕತ್ತರಿಸಿಕೊಂಡು, ಅಸ್ಮಿತೆಯನ್ನೇ ಕಳೆದುಕೊಂಡು, ಯಾವುದನ್ನು ಮನೆಯೆಂದು ಕರೆಯಬೇಕೆಂದು ಗೊತ್ತಾಗದೆ ಹುಚ್ಚನಂತೆ ಅಲೆಯುವ ಕೆಟ್ಟ ಕನಸು ಬಿದ್ದು ಭಯದಿಂದ ಎಚ್ಚರಗೊಳ್ಳುತ್ತಾನೆ. ಚಿಕ್ಕವಯಸ್ಸಿನಿಂದಲೂ ಬರಹಗಾರನಾಗಬೇಕೆಂಬ ಆಸೆ ಈ ವಿದೇಶಿ ಸಂತೆಯಲ್ಲಿ ಬಿಕರಿಗೊಳ್ಳಬಹುದೆಂಬ ಭಯದಿಂದ ತಾಯ್ನಾಡಿಗೆ ಮರಳುತ್ತಾನೆ. ಈ ಚಿತ್ರ ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು.

ಈಗಲೂ ಆಶ್ಚರ್ಯವೆನಿಸುವುದು ನಮ್ಮ ಬಾಲ್ಯದ ಅನುಭವಗಳನ್ನೆಲ್ಲ ಕಟ್ಟಿಕೊಟ್ಟ ಸುವಾಸನೆ, ನೆನಪುಗಳು , ಗೆಳೆಯರು ನನ್ನನ್ನು ರೂಪಿಸಿದ ಪ್ರತಿಯೊಂದು ನೆನಪು ಸಣ್ಣ ನೆಲದ ತುಣುಕೊಂದು ಮನೆಯಾಗಿ ಬಿಡುವ ಮಾಂತ್ರಿಕತೆ. ಬೆಂಗಳೂರಿನ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬೆಚ್ಚಗೆ ಕೂತಿದ್ದಾಗ, ಇಸ್ರೇಲ್ ಪ್ಯಾಲೆಸ್ಟೈನ್ ಸಂಘರ್ಷವು ನೋವಿನ ಕಥೆಗಳನ್ನು, ನಿರಾಶ್ರಿತರ ಕಣ್ಣೀರುಗಳನ್ನು ಹೊತ್ತು ತರುವ ಸುದ್ಧಿ ಮಾತ್ರವೇ ಆಗಿತ್ತು.

ಅಮೆರಿಕೆಯಲ್ಲಿ ವ್ಯಾಸಂಗ ಮಾಡುವಾಗ ಇದ್ದಕ್ಕಿದ್ದ ಹಾಗೆ ಎಲ್ಲವನ್ನು ಕಳೆದುಕೊಂಡಂತೆ, ಅನಾಥವಾಗಿ ಗೊತ್ತಿಲ್ಲದ ರಸ್ತೆಯ ಸಿಗ್ನಲ್ಲಿನಲ್ಲಿ ಅಪರಿಚಿತರ ಮಧ್ಯೆ ಅಪರಿಚಿತನಾಗಿ, ಅನಾಥ ಭಾವ ಮೂಡಿಸಿದಂತಾಯಿತು. ಅವಮಾನ, ಒಂಟಿತನ, ಹತಾಶೆ, ನೋವು, ಎಲ್ಲವೂ ಒಟ್ಟೊಟ್ಟಿಗೆ ನನ್ನನ್ನು ಕುಗ್ಗಿಸಿದಂತೆನಿಸಿ ‘L Auberge Espagnole’ ಚಿತ್ರದ ನಾಯಕನಂತೆ ಭಾರತಕ್ಕೆ ಓಡಿ ಬಂದಮೇಲೆಯೇ ಅಲ್ಲಿಯ ಕಥೆಗಳು ಹೆಚ್ಚಿನ ಅರ್ಥ ನೀಡಿದ್ದು.

ಮನುಷ್ಯತ್ವದ ಸಂದೇಶ ಸಾರುವ, ಶಾಂತಿಯ ಮಂತ್ರವನ್ನು ಎತ್ತಿ ಹಿಡಿಯುವ, ಸಮಾಜದ ಮುಖವನ್ನು ಕನ್ನಡಿಯ ಬಿಂಬವಾಗಿಸುವ ಛಾಯಾಚಿತ್ರಗಳು ಯಾವಾಗಲಾದರೊಮ್ಮೆ ಕಣ್ಣಿಗೆ ಬೀಳುತ್ತವೆ. ಅಂತಹ ಒಂದು ಚಿತ್ರ ಮರಾಮ್ ಳದ್ದು. ಒಂಭತ್ತು ಮಕ್ಕಳಲ್ಲಿ ಕಿರಿಯಳಾಗಿದ್ದ ಹನ್ನೆರಡು ವರುಷದ ಮುಗ್ಧ ಹುಡುಗಿ. ಅವಳದೇ ವಯಸ್ಸಿನ ಬಹುತೇಕ ಗಾಜ ಹುಡುಗಿಯರಂತೆ ಮರಾಮ್ ಕೂಡ ಮೂರನೇ ಪೀಳಿಗೆಯ ನಿರಾಶ್ರಿತಳು. ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದ, ಹಸಿರು ಬಟ್ಟೆ ತೊಟ್ಟ ಪುಟ್ಟ ಹುಡುಗಿ ಬಾಂಬುಗಳ ಧಾಳಿಯಿಂದ ನೆಲಸಮವಾಗಿದ್ದ ಕಟ್ಟಡದ ಇಟ್ಟಿಗೆಗಳಲ್ಲಿ, ಧೂಳಿನಲ್ಲಿ ಸುಟ್ಟು, ಹರಿದುಹೋಗಿದ್ದ ಪುಸ್ತಕದ ಹಾಳೆಗಳನ್ನು ಹುಡುಕುತ್ತಿದ್ದ ದಿಟ್ಟ ಹುಡುಗಿ.

೧೯೪೮ ರಲ್ಲಿ ನಡೆದ ಪ್ಯಾಲೆಸ್ಟೈನ್ ದುರಂತ ಅಥವಾ ‘ನಕ್ಬ’ ಬಹುಶಃ ಇಡೀ ಜಗತ್ತನ್ನೇ ಅವಮಾನದಲ್ಲಿ ಕುಗ್ಗಿಹೋಗಿಸುವಂತಹ ದಾರುಣ ಕಥೆ. ಲಕ್ಷಗಟ್ಟಲೆ ಪ್ಯಾಲೇಸ್ಟಿನಿಯರನ್ನು ಹೊರಗಟ್ಟಿ ಅವರ ಅಸ್ಮಿತೆಯನ್ನೇ ಕಳಚಿ, ನೆಲೆಯಿಲ್ಲದೆ, ಬಾಂಧವ್ಯಗಳಿಲ್ಲದೆ, ಹೆಣ್ಣುಮಕ್ಕಳು, ಮಕ್ಕಳು, ವೃಧ್ಹರಾದಿಯಾಗಿ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಿ, ರೆಫ್ಯೂಜಿ ಕ್ಯಾಂಪ್ ಗಳಿಗೆ ನೂಕಿತು..

‘ಆಲಿವ್ ಗಿಡದಿಂದ ಮೊಳಕೆಯೊಡೆದು
ವ್ಯಾಪಾರಿಗಳು ರಸ್ತೆಯಲ್ಲಿ ಬಿಸಾಕಿದ
ಬೀಜ ನಾನು’

ಎಂಬ ಕವಿತೆಯ ಸಾಲುಗಳು ಪ್ಯಾಲೆಸ್ಟೈನ್ ನಿರಾಶ್ರಿತರ ಈಗಿನ ಪರಿಸ್ಥಿತಿಯನ್ನೇ ಬಿಂಬಿಸುತ್ತದೆ. ಇಸ್ರೇಲ್, ವೆಸ್ಟ್ ಬ್ಯಾಂಕ್, ಗಾಜಗಳಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ಬದುಕುತ್ತಿರುವ ಇವರು ಈಗಲೂ ಮಾನಸಿಕ, ದೈಹಿಕ, ಭಾವನಾತ್ಮಕ ಗಡಿಗಳನ್ನು ಮೀರಲಾಗದೆ, ಚೆಕ್ಪಾಯಿಂಟ್, ಜೋನ್, ಹಸಿರು ಲೈನ್ ಗಳಲ್ಲಿ ಪಾಸ್ಪೋರ್ಟ್ ಗಳಿದ್ದರೂ ತಾವು ಯಾರೆಂದು ಗೊತ್ತಿಲ್ಲದ ಪರಿಸ್ಥಿತಿಯಲ್ಲಿ ಓಡಾಡುತ್ತಿದ್ದಾರೆ.

‘ಬಹುಶಃ ಇದಕ್ಕಿಂತ ಕ್ರೂರ ಸನ್ನಿವೇಶವೊಂದು ಹುಟ್ಟಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ನನಗೆ ಯಾವಾಗಲು ಅನಿಸುತ್ತದೆ. ದೂರದ ಸಾಗರವನ್ನು ನೋಡಲಾಗದೆ ಅದರ ಬಗ್ಗೆ ಯಾವಾಗಲು ಕನಸು ಕಾಣುವುದೋ ಅಥವಾ ಹತ್ತಿರದ ಸಾಗರವನ್ನು ನೋಡದ ಹಾಗೆ ನಮ್ಮನ್ನು ನಿರ್ಬಂಧಿಸಿರುವುದೋ? ಈ ವಿಪರ್ಯಾಸದ ಸತ್ಯದ ಮಧ್ಯೆಯೇ ಪ್ಯಾಲೇಸ್ತೀನಿಯೊಬ್ಬನ ಜೀವನ ಬಿತ್ತರಗೊಳ್ಳುತ್ತದೆ’ ಎಂದು ಕವಿ ನಥಾಲಿ ಹಂದಾಲ್ ಹೇಳುತ್ತಾರೆ.

ಈ ಎಲ್ಲದರ ಬಗ್ಗೆ ಯೋಚಿಸುತ್ತಿದ್ದಾಗಲೇ ಮಾರ್ಸೆಲ್ಲೊ ಡಿ ಸಿಂಟಿಯೋ ಅವರ ಪುಸ್ತಕ ಕಣ್ಣಿಗೆ ಬಿದ್ದು ಓದಲಾರಂಭಿಸಿದೆ. ಪ್ಯಾಲೆಸ್ತೀನಿನ ಸ್ಥಿತಿಯನ್ನು ಚೆಲುವಿನ ವಿರುದ್ಧದ ದಿಕ್ಕಿನಲ್ಲೇ ಬಿಂಬಿಸುತ್ತಿದ್ದರೂ, ಅದನ್ನು ಮೀರಿದ ವಿಭಿನ್ನ ಕತೆಗಳನ್ನು ಹೇಳುವ ಕಾರಣಕ್ಕಾಗಿಯೇ ಈ ಪುಸ್ತಕ ನನ್ನನ್ನು ಆಕರ್ಷಿಸಿ, ಅನುವಾದಿಸುವಂತೆ ಪ್ರೇರೇಪಿಸಿತು.

‍ಲೇಖಕರು Admin

7 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading