ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹಾಡು ಹಳೆಯದಾದರೇನು, ಭಾವ ನವನವೀನ..’ ಸ್ವರ್ಣಾ

Swarna-20150627_002735-150x15011

ಸ್ವರ್ಣ ಎನ್ ಪಿ

1
ಒಂದನೇ ಕ್ಲಾಸಿನಲ್ಲಿ  ಕಲಿತ ಪದ್ಯಗಳು ಮತ್ತು ಕೆಲವು ಚಿತ್ರ ಗೀತೆಗಳು  ಎಂದೆಂದಿಗೂ ನೆನಪಿನಿಂದ ಮಾಸುವುದಿಲ್ಲ. ಆ ತರಹದ ಕೆಲವು ಕನ್ನಡ ಚಿತ್ರಗೀತೆಗಳ ಬಗ್ಗೆ ಈ ಬರಹ. ಎಷ್ಟೋ ಬಾರಿ ಸಿನೆಮಾ ಹಿಟ್ ಎನಿಸಿಕೊಳ್ಳದಿದ್ದರೂ  ಹಾಡುಗಳು ನಾಲಿಗೆಯಲ್ಲಿ ನಲಿದಾಡಿವೆ. ಗ್ರಾಮಾಫೋನ್ ರೆಕಾರ್ಡ್ಗಳಿಂದ ಪುಟ್ಟ ಪೆನ್ ಡ್ರೈವ್ ವರೆಗೆ ಎಲ್ಲವೂ ನಮ್ಮ ನೆನಪುಗಳನ್ನು ಹೊತ್ತಿವೆ. ಟಿ.ವಿ. ಸಾಮಾನ್ಯವಾಗದ ಕಾಲದಲ್ಲಿ ಹಾಡಿನ ಹಸಿವನ್ನು ನೀಗಿಸಿದ್ದು ಕ್ಯಾಸೆಟ್ಟುಗಳು . ಸೋಶಿಯಲ್ ಮಿಡಿಯಾ ಇಲ್ಲದ ಕಾಲದಲ್ಲಿ  ಸಿನೆಮಾ ಬರುವ ಮುಂಚೆ ಅದರ ಹಾಡುಗಳ ಕ್ಯಾಸೆಟ್ ತಂದು ಸಿನೆಮಾ ಹೇಗಿದೆ, ಕಥಾ ಹಂದರ ಏನಿರಬಹುದು  ಎಂದು ಹೇಳುವ ಪ್ರಯತ್ನ ನಡೆಯುತ್ತಿತ್ತು. ನಂತರದಲ್ಲಿ  ಸಿಡಿಗಳು ಬಂದು ಕ್ಯಾಸೆಟ್ಗಳು ಮೂಲೆ ಸೇರಿದವು.  ಚಿತ್ರಗೀತೆಗಳು ನಮ್ಮ ಪ್ರಾರ್ಥನೆಯಾಗಿವೆ, ಕನಸುಗಳ ಲಾಲಿ ಹಾಡಿವೆ,  ಸೋತು ಕುಂತಾಗ ಒಂದಷ್ಟು ಭರವಸೆ ತುಂಬಿವೆ.
ಬಹುತೇಕ ಕಾನ್ವೆಂಟ್ ಗಳಲ್ಲಿ ಇಂದಿಗೂ ಪರಲೋಕದಲ್ಲಿರುವ ನಮ್ಮ ತಂದೆಯೇ ….ಎಂಬ ಪ್ರಾರ್ಥನೆ ಹೇಳುವ ಪರಿಪಾಟವಿದೆ. ಕಾನ್ವೆಂಟ್ ಪ್ರಾರ್ಥನೆ ಕೇಳಿದ ನಾನು ‘ನಿನ್ನೊಲೊಮೆ ನಮಗಿರಲಿ ತಂದೆ ..’ ಅನ್ನೋ ಹಾಡು ಏಸುಸ್ವಾಮಿಗಾಗೇ ಬರೆದದ್ದು ಎಂದುಕೊಂಡಿದ್ದೆ ಮತ್ತು ಇಂದಿಗೂ ಆ ಹಾಡು ಕೇಳಿದರೆ ಕಣ್ಣ ಮುಂದೆ ಕಾನ್ವೆಂಟ್ ಬರುತ್ತದೆ. ನಂತರದಲ್ಲಿ ಅದರ ವಿಶಾಲ ಅರ್ಥದ  ಚೂರುಪಾರು ಅಂದಾಜು ಸಿಕ್ಕಿತೆನ್ನಿ. ಕನ್ನಡ ಚಿತ್ರಗಳ ಸುಂದರವಾದ ಪ್ರಾರ್ಥನಾ ಗೀತೆಗಳಿಗೆ ನಾನು ತೆರೆದುಕೊಂಡಿದ್ದು ಹೀಗೆ. ‘ತಾಯಿ ಶಾರದೆ ಲೋಕ ಪೂಜಿತೆ ..’ ಎನ್ನುವ ಪಿಬಿಸ್ ದನಿಗೆ ತಲೆದೂಗದವರಾರು ?  ‘ತಂದೆ ನೀ ನೀಡು ಬಾ..’ ಹಿಂದಿ ಮತ್ತು ಕನ್ನಡ ಎರಡೂ ಭಾಷೆಗಳಿಗೆ ಒಗ್ಗಿಕೊಂಡ ಗೀತೆ. ಕೃಷ್ಣ , ರಾಮ , ಅಲ್ಲಾ ಎಲ್ಲರಿಗೂ ಪ್ರಾರ್ಥನೆ ತಲುಪಿಸಿದ್ದಾರೆ ನಮ್ಮ ಸಾಹಿತಿಗಳು.
7
ಹೆಣ್ತನದ ಜೋಕಾಲಿಯಲ್ಲಿ ಜೀಕಿದ  ಕನಸುಗಳಿಗೆ ಮೊದಲು ದನಿಯಾದವರು ಜಾನಕಮ್ಮ. ‘ಬಾನಲ್ಲೂ ನೀನೆ…’ ಎಂಬ ಹಾಡನ್ನು ಆಕೆಗಿಂತ ಸೊಗಸಾಗಿ ಯಾರೂ ಹಾಡಲಾರರೆಂದು ಹೇಳುವುದನ್ನು ಕೇಳಿದ್ದೇನೆ , ಅದು ಉತ್ಪ್ರೇಕ್ಷೆ  ಎನಿಸಿಲ್ಲ. ‘ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ …’ ‘ಬಾಳ  ಬಂಗಾರ ನೀನು …’  ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಮ್ಮ ಹಿಂದಿನ ಪೀಳಿಗೆಯವರು ‘ಕರೆಯೇ ಕೋಗಿಲೆ ಮಾಧವನ …’ , ‘ ಹೇಳೇ ಗೆಳತಿ ಪ್ರಿಯ ಮಾಧವ ಬಾರನೇ ಇಂದು …’  ಎಂದು ಇಂದಿಗೂ ಗುನುಗುತ್ತಾರೆ. ಇವು ಹೆಣ್ಣಿನ ಕನಸಿನ ಸರಗಳಾದರೆ ಗಂಡಿನೆದೆಯ ಹಾಡನ್ನು ಪಿ.ಬಿ.ಎಸ್ , ಎಸ್ .ಪಿ.ಬಿ. ಮನದುಂಬಿ ಹಾಡಿದರು .  ‘ನನ್ನವಳು ನನ್ನೆದೆಯ ಹೊನ್ನಾಡನಾಳುವಳು ..’ ಅಪ್ಪನ ಕಾಲದ್ದಾದರೆ ನಂತರದ ದಿನಗಳಲ್ಲಿ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ …’ ಎಂದು ಪ್ರೇಮವೇ ದನಿಯಾದಂತೆ ಎಸ.ಪಿ.ಬಿ. ಹಾಡಿದರು. ಯುಗಳ ಗೀತೆಗಳ ಯುಗ ‘ಈ ಸಂಭಾಷಣೆ …’ ಯಿಂದ ಮೊದಲುಗೊಂಡು ‘ಜೀವ ವೀಣೆ ..’ ಮಿಡಿದು ‘ಸುಖದಾ ಸ್ವಪ್ನಗಾನ ….’ ವಾಗಿ ಮುಂದುವರೆಯುತ್ತಲೇ ಇದೆ. ಕಪ್ಪು ಬಿಳುಪಿನ ‘ ಆಕಾಶವೇ ಬೀಳಲಿ ಮೇಲೆ ‘  ‘ನೀ ಬಂದು ನಿಂತಾಗ …’  ನಮ್ಮ ಪೀಳಿಗೆಯವರೂ ಮೆಚ್ಚಿ ಮುಂದಿನವರಿಗೂ ಕಲಿಸಿದ್ದಾಯಿತು.  ಬದುಕಿನ ದಾರಿ ಒಂದಷ್ಟು ಸವೆದಾಗ ‘ನಿನ್ನಾಸೆಗೆಲ್ಲಿ ಕೊನೆಯಿದೆ ..’ ಎಂಬ ತತ್ವ ಎಷ್ಟು ಸುಂದರಗೀತೆಯಾಗಿ ತೇಲಿಬಂದಿತು!  ‘ಮಾನವ  ಮೂಳೆ ಮಾಂಸದ ತಡಿಕೆ …’ ಎಂದು ಕೇಳಿದಾಗ  ಕುಂಬಾರ ಕಾಣದಿರಲು ಹೇಗೆ ಸಾಧ್ಯ ?
ಇವು ಈ ಕ್ಷಣಕ್ಕೆ ನೆನಪಾದ ಕೆಲವು ಹಾಡುಗಳು. ಕನ್ನಡ ಚಿತ್ರಗಳನ್ನು ನೋಡುವ ಎಲ್ಲ ಪ್ರೇಕ್ಷಕರಿಗೂ ಇವುಗಳು ಬಹುತೇಕ ಕಂಠಪಾಠವಾಗಿರುತ್ತವೆ. ಬದುಕಿನ ಬಂಡಿ ಸಾಗಲು ಹಾಡಿನ ಬಂಡಿಯ ಅಗತ್ಯವನ್ನು ನಾವೆಂದೋ ಕಂಡುಕೊಂಡಿದ್ದೇವೆ.ಇಂದಿಗೂ ಆಟಕ್ಕಾಗಿ ಬಂಡಿ ಕಟ್ಟಿ ನಮ್ಮ ಹಾಡುಗಳನ್ನೂ , ಕನಸುಗಳನ್ನೂ , ಬದುಕಿನ ಹಾದಿಯನ್ನೂ ನೆನಪಿಸಿಕೊಳ್ಳುತ್ತೇವೆ. ನಮ್ಮ ಹಾಡನ್ನು ನಮ್ಮ ಸಾಹಿತಿಗಳು ಪದಗಳಲ್ಲಿ ಅಲಂಕರಿಸಿದರೆ ಸಂಗೀತಗಾರರು , ಗಾಯಕರು ನಮ್ಮ ದನಿಯಾಗಿದ್ದಾರೆ. ಆರ್.ಏನ್. ಜಯಗೋಪಾಲ್, ಚಿ. ಉದಯ ಶಂಕರ್, ಹುಣಸೂರು ಕೃಷ್ಣಮೂರ್ತಿಯವರಿಂದ ಮೊದಲುಗೊಂಡು ಸಿದ್ದಲಿಂಗಯ್ಯ , ಎಂ.ಎನ್. ವ್ಯಾಸರಾವ್, ದೊಡ್ಡರಂಗೇ ಗೌಡ, ಹಂಸಲೇಖಾ …ರೊಟ್ಟಿಗೆ ಬೆಳೆದು ಈಗ ಕಾಯ್ಕಿಣಿ,  ಭಟ್ರು , ಭಂಡಾರಿಯವರೊಂದಿಗೆ ಮುನ್ನಡೆದಿದೆ. ಇನ್ನು ಘಂಟಸಾಲರಿಂದ ಪಿ.ಬಿ.ಎಸ್ , ಎಸ.ಪಿ.ಬಿ, ಸೋನು ನಿಗಮ್, ಸುಶೀಲಾ , ಜಾನಕಿ , ಚಿತ್ರಾ, ಶ್ರೆಯಾರ ವರೆಗೆ ಅದೆಷ್ಟೋ ಗಾಯಕರು ಸೊಗಸಾಗಿ ಹಾಡಿ ಸಾಹಿತ್ಯ, ಸಂಗೀತವನ್ನು ನಮ್ಮದಾಗಿಸಿದ್ದಾರೆ. ಕ್ಯಾಸೆಟ್ಟುಗಳು ಸಾಮಾನ್ಯವಾಗುವ ಮುನ್ನ ಆಕಾಶವಾಣಿಯ ಕಾರ್ಯಕ್ರಮಗಳಿಗೆ ಕಾಯುತ್ತಿದ್ದ ದಿನಗಳಿದ್ದುವಂತೆ. ಅಮಿನ್ ಸಯಾನಿಯ  ‘ಬಿನಾಕ ಗೀತ್ ಮಾಲ’ ಮರೆತವರಾರು?
ಸಿನೆಮಾವೊಂದರ ಹಾಡುಗಳ ಸಣ್ಣ ಪುಸ್ತಕ ಮಾಡಿ ಥಿಯೇಟರುಗಳ ಮುಂದೆ ಮಾರುತ್ತಿದ್ದುದ್ದನ್ನು  ನಮ್ಮ ಪೀಳಿಗೆಯೂ ಕಂಡಿದೆ. ಹಾಡುಗಳಿಗೆ ಇನ್ನೊಂದಷ್ಟು ವಾದ್ಯಗಳನ್ನು ಸೇರಿಸುವ ಅದೆಂಥದೋ ‘ಝಂಕಾರ್ ಬೀಟ್ಸ್’ ಅನ್ನೋದು ಕೆಲವರ್ಷ ಚಾಲ್ತಿಯಲ್ಲಿತ್ತು. ‘ವಿತ್ ಜಾಂಕಾರ್ ಬೀಟ್ಸ್’ ಅಂತ ಕ್ಯಾಸೆಟ್ಟುಗಳ ಮೇಲೆ ಬರೆದಿರೋದು. ಕೆಲವರಿಗದು ಇಷ್ಟವಾದರೆ ಕೆಲವರಿಗೆ ಕಿರಿಕಿರಿ. ಹಾಡುಗಳ , ಸಿನೆಮಾಗಳ ಕ್ಯಾಸೆಟ್ಟುಗಳನ್ನು ಬಾಡಿಗೆ ಕೊಡುವ ಲೈಬ್ರರಿಗಳು ಗಲ್ಲಿ ಗಲ್ಲಿಗೂ ಇದ್ದವು .  ಅಲ್ಲೊಂದು ಇಲ್ಲೊಂದು ಸಿ.ಡಿ ಲೈಬ್ರರಿಗಳು ಕಂಡರೂ,  ಈಗ ಎಲ್ಲವನ್ನೂ ಆನ್ಲೈನ್ ನಲ್ಲಿ ಕೇಳಿ ನೋಡುವ ಕಾಲ.
ಹಾಡುಗಳನ್ನು ಕೇಳುವ ರೀತಿ ಬದಲಾದಂತೆ ಹಾಡುಗಳೂ ಬದಲಾಗಿವೆ.  ‘ಕುಣಿವ ನವಿಲು ಗಂಡು ಕೇಳೆಲೆ …’ ಎಂದ ಹೀರೋ ಈಗ ‘ ಗಂಡು ನವಿಲಿಗೆ ಮಾತ್ರನೇ ಪುಕ್ಕ ಕೊಟ್ಟ ಭಗವಂತ …ಹೆಣ್ಣು ಮಕ್ಕಳು ಕುಣಿಸೋದಕ್ಕೆ ವರ್ಲ್ಡು ಫೇಮಸ್ಸು …’ ಅಂತಿದಾನೆ. ಅಮೃತವರ್ಷಿಣಿ ಸಿನೆಮಾದ ಹಾಡುಗಳ ಗುಂಗು ಇಂದಿಗೂ ಕಡಿಮೆಯಾಗಿಲ್ಲ.  ತನ್ನ ಪ್ರೀತಿ ಸುಳ್ಳಾದರೆ ಜಗತ್ತೇ ಸುಳ್ಳು ಎನ್ನುವ ವಿಶ್ವಾಸ ಯಾವ ಪ್ರೆಮಿಗಿದ್ದೀತು ? ‘ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿ… ‘  ಎಂದ ಪ್ರೇಮಿ ಅಮರನಾಗಿದ್ದಾನೆ. ಒಂದಿಡಿ ಕ್ಯಾಸೆಟ್ಟಿನಲ್ಲಿ ‘ಮನಸೇ …’  ಎಂಬ ಹಾಡನ್ನೇ ಮತ್ತೆ ಮತ್ತೆ ಹಾಡಿಸಿ ಕೇಳಿದವರಿದ್ದಾರೆ.
4
ಇಲ್ಲಿಯವರೆಗೆ ೮೦-೯೦ರ ದಶಕದ ಹಾಡುಗಳ ಬಗ್ಗೆ ಬರೆದಿದ್ದು ನೋಡಿ ಇತ್ತೀಚಿನ ಹಾಡುಗಳು ಚೆನ್ನಾಗಿಲ್ಲವೇ ? ಎಂದು ಕೇಳಬೇಡಿ. ನನ್ನಂತ  ಸಾಮಾನ್ಯ ಪ್ರೇಕ್ಷಕರು  ನೋಡಿಸಿಕೊಂಡು ಹೋಗುವ  ಎಲ್ಲ ಸಿನೆಮಾಗಳು ಕೇಳಬಲ್ಲ ಎಲ್ಲ ಹಾಡುಗಳೂ ನಮ್ಮವೇ. ಮುಂಗಾರುಮಳೆಯಿಂದ ಇತ್ತೀಚಿನ ರಂಗಿತರಂಗದ ವರೆಗಿನ ಎಲ್ಲ ಹಾಡುಗಳೂ ನಮ್ಮ ಪಯಣದ ಭಾಗವಾಗಿವೆ.  ಅಷ್ಟಾಗಿ ಸಿನೆಮಾ ನೋಡದವರಿಗೂ ಹಾಡುಗಳ ಪರಿಚಯವಿದೆ. ಬದುಕಿನ ಪ್ರತೀ ಹಂತದಲ್ಲೂ ನಮ್ಮ ದನಿಯಾದ ಹಾಡುಗಳಿವೆ. ಮೌನವಾಗಿ ಏಕಾಂತದಲ್ಲಿ ಬದುಕುವುದು ಕೆಲವರಿಗೆ ಮಾತ್ರ ಸಾಧ್ಯ ಉಳಿದವರಿಗೆ ಬದುಕು ಎಂದೆಂದಿಗೂ ಹಾಡಿನ ಬಂಡಿ. ಬದುಕಿನ ಪ್ರತೀ ಘಟ್ಟಕ್ಕೂ ಒಂದು ಹಾಡು ಕೊಟ್ಟವರಿಗೆಲ್ಲರಿಗೂ ನಮನಗಳು.

‍ಲೇಖಕರು G

13 August, 2015

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Sudhindra rao

    article chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading