ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Sunday SPECIAL: ಯೋಗರಾಜ್ ಭಟ್ ಬರೀತಿದ್ದಾರೆ ಕಾದಂಬರಿ

ಸಪ್ನ ಬುಕ್ ಹೌಸು ಗಾಂಧೀನಗರದಲ್ಲೇ ಇದ್ದರೂ ಅಲ್ಲಿರುವ ಸಿನಿಮಾ ಮಂದಿ ಮಾತ್ರ ಸುಮ್ಮನೇ ಕೂಡಾ ಪುಸ್ತಕ ತಿರುವಿ ಹಾಕೋದಿಲ್ಲ. ಬೇಕಿದ್ದರೆ ಯಾವುದಾದರೂ ಹಳಸಲು ಸೀಡಿ ಕೊಟ್ಟರೆ ಅದು ಸವೆದು ಹೋಗೋ ತನಕ ತಿರುವಿಹಾಕುತ್ತಿರುತ್ತಾರೆ.

ಆದರೆ ಎಲ್ಲೋ ಕೆಲವು ನಟ-ನಿರ್ದೇಶಕರು ಮಾತ್ರ ಪುಸ್ತಕಗಳೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಅದರಲ್ಲೂ ಕಮರ್ಷಿಯಲ್ ಸಿನಿಮಾಗಳ ನಿರ್ದೇಶಕರನ್ನು ಲೆಕ್ಕಕ್ಕೆ ತೆಗೆದುಕೊಂಡರೆ  ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್, ಬಿ. ಸುರೇಶ, ಜಯತೀರ್ಥ, ಕಬಡ್ಡಿ ನರೇಂದ್ರ ಬಾಬು, ಸೂರಿ, ಯೋಗರಾಜ್ ಭಟ್ರು, ಮಠ ಗುರುಪ್ರಸಾದ್, ಬಿ.ಎಂ. ಗಿರಿರಾಜ್, ನಾಗೇಂದ್ರ ಪ್ರಸಾದ್, ಕವಿರಾಜ್, ಇತ್ತೀಚಿನ ಟಿ.ಕೆ.ದಯಾನಂದ, ಹೃದಯಶಿವ ಸೇರಿದಂತೆ ಇನ್ನಿತರ ಕೆಲವೇ ಮಂದಿ ಮಾತ್ರ ಪುಸ್ತಕ-ಓದಿನ ರುಚಿ ಬಲ್ಲವರಾಗಿದ್ದಾರೆ.

ನಟ ಕಿಶೋರ್, ವಿಜಯರಾಘವೇಂದ್ರ, ಪ್ರಕಾಶ್ ರೈ, ನೀನಾಸಂ ಅಶ್ವಥ್, ಅಚ್ಯುತ್ ಮುಂತಾದ ನಟರು ಶೂಟಿಂಗ್ ನಡುವೆ ಸಣ್ಣ ಗ್ಯಾಪು ಸಿಕ್ಕರೂ ಮೊಬೈಲ್ ಒತ್ತುವ ಬದಲು ನಾಲ್ಕು ಪುಟ ತಿರುವಿ ಹಾಕುವ ರೂಢಿ ಇರಿಸಿಕೊಂಡಿದ್ದಾರೆ. ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ, ಇಲ್ಲಿ ಹೆಸರಿಸಿರುವ ಅಷ್ಟೂ ಜನ ಪೂರ್ಣಚಂದ್ರ ತೇಜಸ್ವಿ ಮತ್ತು ಲಂಕೇಶರ ಅಭಿಮಾನಿಗಳು ಅನ್ನೋದು!

ಇರಲಿ, ಈಗ ಸಿನಿಮಾ ಮಂದಿಯ ಪುಸ್ತಕ ಪ್ರೀತಿಯ ಬಗ್ಗೆ ಹೇಳೋಕೂ ಕಾರಣವಿದೆ. ಮಠ ಗುರುಪ್ರಸಾದ್ `ಡೈರೆಕ್ಟರ್ ಸ್ಪೆಷಲ್’ ಅನ್ನೋ ಪುಸ್ತಕವೊಂದನ್ನು ಬರೆದು ಸಿನಿಮಾಗೆ ಒಗ್ಗದ ಕಥೆಗಳನ್ನು ಅಕ್ಷರರೂಪಕ್ಕಿಳಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರರ ಅಮೆರಿಕಾ ಅಮೆರಿಕಾ, ಭಟ್ಟರ ಮುಂಗಾರು ಮಳೆ ಮುಂತಾದ ಸಿನಿಮಾಗಳ ಸ್ಕ್ರಿಪ್ಟುಗಳು ಪುಸ್ತಕವಾಗಿ ಮುದ್ರಣಗೊಂಡಿದ್ದವು.

ಆದರೆ, ತಮ್ಮ ಸಿನಿಮಾಗಳ ಮೂಲಕ ಹೊಸ ಪ್ರೇಕ್ಷಕರನ್ನೂ ಹುಟ್ಟುಹಾಕಿದ ಯೋಗರಾಜ್ ಭಟ್ ಈಗ ಬಿಡುಗಡೆಗೆ ಸಿದ್ದಗೊಳ್ಳುತ್ತಿರುವ `ದನ ಕಾಯೋನು’ ಚಿತ್ರವನ್ನು ಕಾದಂಬರಿ ರೂಪದಲ್ಲಿ ಹೊರತರುವ ಪ್ರಯತ್ನದಲ್ಲಿದ್ದಾರೆ. ಯಥಾವತ್ತು ಸಿನಿಮಾ ಸ್ಕ್ರಿಪ್ಟನ್ನೇ ಪುಸ್ತಕವಾಗಿಸುವುದಕ್ಕೂ, ಸಿನಿಮಾಗಾಗಿ ಬರೆದ ಕಥೆ, ಚಿತ್ರಕಥೆಯನ್ನು ಕಾದಂಬರಿ ರೂಪಕ್ಕೆ ಮಾರ್ಪಡಿಸುವುದು ಸುಲಭವೇನೂ ಅಲ್ಲ. ಆದರೆ ಭಟ್ಟರು ಯುವ ಬರಹಗಾರರೊಬ್ಬರ ಸಾಥ್ ಪಡೆದು ಈ ಕಾದಂಬರಿ ಕುಸುರಿ ಆರಂಭಿಸಿದ್ದಾರೆ. `ದನ ಕಾಯೋನು’ ಚಿತ್ರದ ಹಾಡುಗಳ ಸೀಡಿ ಬಿಡುಗಡೆಯ ದಿನವೇ ಈ ಕಾದಂಬರಿಯನ್ನೂ ಲೋಕಾರ್ಪಣೆ ಮಾಡಲಿದ್ದಾರೆ ಎನ್ನುತ್ತಿದೆ ಮೂಲ.

ಸಿನಿಮಾದೊಂದಿಗೇ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಭಟ್ಟರ ಆಲೋಚನೆ ನಿಜಕ್ಕೂ ಸುಂದರವಾಗಿದೆ. ಸಿನಿಮಾದ ನೆಪದಲ್ಲಾದರೂ ಹೊಸ ಓದುಗರು ಸೃಷ್ಟಿಯಾದರೆ ಅದರ ಕ್ರೆಡಿಟ್ಟನ್ನು  ಭಟ್ಟರಿಗೇ ಅರ್ಪಿಸಬಹುದು!

‍ಲೇಖಕರು Admin

10 January, 2016

1 Comment

  1. ಗುಡ್ಡ

    ಭಟ್ಟರು ಹಾಡುವುದನ್ನ ಬಿಡ್ತಾರೆ , ಅಂದರೆ ನಾನು ಅವರ ಪುಸ್ತಕದ 1000 ಕಾಪಿ ಕೊಳ್ಳಲು ತಯಾರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading