Reporter's Diary: ಆ ಒಂದು ರಾತ್ರಿ

ಜ್ಯೋತಿ ಇರ್ವತ್ತೂರು 

ನಮಗೆ ನಾವೇ ಅರ್ಥವಾಗದಾಗ
ಮಂಗಳಮುಖಿಯ ಮನೆಯಲ್ಲಿ ನಿದ್ರೆಗೆ ಜಾರಿದಾಗ
ಕಾಡಿದ ಪ್ರಶ್ನೆಗಳು… ಯೋಚನೆಗಳು
7bb3873f-992e-49e5-bfaf-959e85e6498dಪತ್ರಿಕೋದ್ಯಮಕ್ಕೆ ಸೇರಿದಾಗಿನಿಂದಲೂ ಗ್ರಾಮೀಣ ಪತ್ರಿಕೋದ್ಯಮ ಹಾಗೂ ಪರಿಸರ ಕುರಿತಂತೆ ವರದಿ ಮಾಡುವುದು ನನಗೆ ಹೆಚ್ಚು ಇಷ್ಟವಾದದ್ದು. ಆದ್ರೆ ಇವತ್ತು ಎಲ್ಲವು ಬದಲಾಗಿದೆ. ದೃಶ್ಯ ಮಾಧ್ಯಮದಲ್ಲಿ ಫೀಲ್ಡ್ ಜರ್ನಲಿಸಮ್ ಗಿಂತ ಸ್ಟುಡಿಯೋ ಆಧಾರಿತ ಚರ್ಚೆಗಳೇ ಹೆಚ್ಚು ಪ್ರಸ್ತುತ ಮತ್ತು ಅಗತ್ಯ ಅನಿವಾರ್ಯತೆ ಅನ್ನೋ ರೀತಿ ಬಿಂಬಿತವಾಗುತ್ತಿದೆ. ಜನರಿಗದು ಬೇಕೋ ಅಥವಾ ನಾವೇ ಅವರ ಮೇಲೆ ಅದನ್ನು ಹೇರುತ್ತಿದ್ದೇವೋ ಅನ್ನೋ ಪ್ರಶ್ನೆ ಹಲವಾರು ಬಾರಿ ನನ್ನನ್ನು ಈ ಕುರಿತಂತೆ ಕಾಡಿದ್ದು ಇದೆ.
ಟಿ.ಆರ್.ಪಿ ಬಗ್ಗೆ ಹಲವಾರು ರೀತಿಯಲ್ಲಿ ಈಗಾಗಲೆ ಚರ್ಚೆಗಳು ನಡೆಯುತ್ತಿವೆ ಕೂಡ. ಗಾಸಿಪ್ ಗಳ ಬಗ್ಗೆ ಟೀಕಿಸುವ ನಾವೇ ಗಾಸಿಪ್ ಗಳನ್ನೇ ಇಷ್ಟಪಡೋರು. ಹಾಗಾಗಿ ಜನರ ಆಸಕ್ತಿ, ಮತ್ಯಾವುದನ್ನು ಇಷ್ಟಪಡಬಹುದೆಂಬ ಕಲ್ಪನೆಯೊಂದು ಈಗಾಗಲೆ ನಿರ್ಧರಿತವಾಗಿಬಿಟ್ಟಿದೆ. ಹಾಗಾಗಿಯೇ ಅನ್ಯಜೀವಿಗಳ ಅಂದ್ರೆ ಏಲಿಯನ್ಸ್ ಗಳ ಬಗ್ಗೆ, ಪವಾಡಗಳ ಬಗ್ಗೆ ಸಾವಿನ ಬಗ್ಗೆ ಹೀಗೆ ಕೌತುಕವನ್ನು ಹುಟ್ಟಿಸುವ ವಿಷಯಗಳ ಸುತ್ತ ಹೆಣೆದ ಸ್ಟೋರಿಗಳು  ಹೆಚ್ಚು ಪ್ರಾಶಸ್ತ್ವ್ಯವನ್ನು ಪಡೆಯುತ್ತವೆ.
ಈ ಅಂಶಗಳೆಲ್ಲಾ ನನ್ನನ್ನು ಕಾಡುವ ವಿಷಯಗಳಾದರೆ ಪತ್ರಿಕೋದ್ಯಮದಲ್ಲಿ ಒಂದಿಷ್ಟು ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದೀನಿ ಅದು ಯಾವುವು ಅಂದ್ರೆ ನೆನಪಿಗೆ ಬರೋದು ಸಿರಿಸಾಮಾನ್ಯವೆಂಬ ಜನಸಾಮಾನ್ಯನ ಬದುಕಿನ ಸುತ್ತ ಹೆಣೆದ ಕಾರ್ಯಕ್ರಮ..
ಅಲ್ಲಿ ಸಿರಿಸಾಮಾನ್ಯನ ನೋವನ್ನು ಚಿತ್ರಿಸುವ, ಜನ ಸಾಮಾನ್ಯರ ಬದುಕುವ ಮುಖಗಳನ್ನು ಪ್ರಸ್ತುತ ಸಮಸ್ಯೆಯ ವಿವಿಧ ಆಯಾಮಗಳನ್ನು ಹುಡುಕುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ನಮ್ಮ ತಂಡ ಮಾಡಿತ್ತು. ಜನಸಾಮಾನ್ಯನ ನೋವಿನ ಕಥೆಯಿಂದ ಹಿಡಿದು ಗಣಿಗಾರಿಕೆಯಿಂದ ಬೆತ್ತಲಾದ ಬಳ್ಳಾರಿಯವರೆಗೆ ಮಂಗಳ ಮುಖಿಯರ ಮನದ ತೊಳಲಾಟದಿಂದ ಹಿಡಿದು 18 ಕ್ಕೂ ಹೆಚ್ಚು ಕಾರ್ಯಕ್ರಮಗಳು ಈ ಕಾರ್ಯಕ್ರಮದ ಬಗ್ಗೆ ಯೋಚಿಸಿದ್ರೆ ಹಾಗೆ ಕಣ್ಣೆದುರು ಬಂದು ನಿಲ್ಲುತ್ತದೆ.
ನಿಜ ನಾನು ಪಿ. ಸಾಯಿನಾಥ್’ ರ ‘ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್’ ಓದಿದ ಮೇಲೆ ಆ ಪುಸ್ತಕದಿಂದ ಸಾಕಷ್ಟು ಪ್ರಭಾವಿತಳಾಗಿದ್ದೆ. ವೃತ್ತಿ ಬದುಕಿನಲ್ಲಿ ಇಂತಹ ಸ್ಟೋರಿಗಳನ್ನು ಮಾಡಬೇಕೆಂದು ಇಚ್ಚೆಪಟ್ಟಿದ್ದೆ ಕೂಡ.
ಮಂಗಳ ಮುಖಿಯರ ಜೊತೆ 24 ಗಂಟೆ
ಮಂಗಳ ಮುಖಿಯರೆಂದರೆ ಮೂಗು ಮುರಿಯೋರೆ ಜಾಸ್ತಿ. ಇದಕ್ಕೆ ಕಾರಣವು ಇಲ್ಲದಿಲ್ಲ. ಭಿಕ್ಷೆ ಬೇಡ್ತಾರೆ ತೊಂದ್ರೆ ಕೊಡ್ತಾರೆಂದು ಅವರನ್ನು ನೋಡಿ ಹಲವು ಬಾರಿ ನೀವು ಕೆಟ್ಟ ದೃಷ್ಟಿಯಿಂದ ಉಸುರಿರಬಹುದು. ಹಾಗೇನೆ ನಾನು ಹೀಗೆ ಹಲವು ಬಾರಿ ತಪ್ಪಾಗಿ ಅವರನ್ನು ಅರ್ಥೈಸಿಕೊಂಡದ್ದುಂಟು. ಸಿರಿಸಾಮಾನ್ಯ ಕಾರ್ಯಕ್ರಮ ಆರಂಭಿಸುವಾಗಲೂ ಮಂಗಳಮುಖಿಯರ ಕುರಿತಂತೆ ನನಗಿದ್ದ ಗೊಂದಲ ಮತ್ತು ಅವರ ಬದುಕು ಹೇಗಿರಬಹುದೆಂಬ ಕೌತುಕ ಅವರ ಕುರಿತಂತೆ ಕಾರ್ಯಕ್ರಮ ಮಾಡಲು ಪ್ರೇರಣೆಯಾಯಿತು.
Colorful-hand-images-550ಹಾಗೆ ಒಂದಿಷ್ಟು ಡಾಕ್ಯುಮೆಂಟರಿ, ಲೇಖನಗಳು ಹೀಗೆ ಅವರ ಕುರಿತ ಮಾಹಿತಿ ಸಂಗ್ರಹಿಸಿದೆ. ಮತ್ತು ಈ ಕುರಿತಂತೆ ಶೂಟಿಂಗ್ ಆರಂಭ ಮಾಡಿದೆ.
ಅಂದು ರಾತ್ರಿ ಲೈಂಗಿಕ ಅಲ್ಪಸಂಖ್ಯಾತರಾದ ವೀಣಾ ಅವರ ಮನೆಯಲ್ಲಿ ನಮ್ಮ ತಂಡ ಆ ದಿನವನ್ನು ಕಳೆಯಬೇಕಿತ್ತು. ಅಡುಗೆ ಕೋಣೆಯಲ್ಲಿ  ವೀಣಾ ಅಡುಗೆ ಮಾಡುತ್ತಲೇ ತಮ್ಮ ನೋವಿನ  ಕಥೆಯನ್ನು ಹೇಳಲಾರಂಭಿಸಿದ್ರು.
ಕಾಲೇಜ್ ದಿನಗಳಿಂದ ತಮ್ಮಲ್ಲಿನ ಭಾವನೆಗಳ ಬದಲಾವಣೆ, ಹೆಣ್ಣಾಗಿರಬೇಕೆಂಬ ತುಡಿತ, ತಮ್ಮ ವರ್ತನೆಗೆ ಬೇಸತ್ತ ಮನೆಯವರು ಕೊನೆಗೆ ತನಗನ್ನಿಸಿದ್ದನ್ನು ಮಾಡಿಯೇ ತೀರಿಸುತ್ತೇನೆಂಬ ಹಠ ಇದೆಲ್ಲದ್ದನ್ನು ವೀಣಾ ಹೇಳುತ್ತಲೇ ಸಾಗಿದ್ರು. ಅವರ ಮಾತು ಕೇಳುತ್ತಿದ್ದ ಹಾಗೆ ಮುರಿದ ಬಾಗಿಲತ್ತ ದೃಷ್ಟಿ ಹೊರಳಿತು. ಮುರಿದ ಬಾಗಿಲ ಮಧ್ಯೆ ಇನ್ನೂ ತೊಳೆಯದ ಪಾತ್ರೆಗಳ ರಾಶಿ ಕಣ್ಣಿಗೆ ಬಿತ್ತು. ಮತ್ತು ನನ್ನೊಳಗೆ ಪ್ರಶ್ನೆಗಳ ರಾಶಿಯೂ ಕೂಡ.
ತನ್ನ ಬಗ್ಗೆ ಎಲ್ಲವನ್ನು ಹೇಳುತ್ತ ಹೋದ ವೀಣಾ ತಮ್ಮ ವರ್ತನೆಯಿಂದ ಮನೆಯವರು ಯಾವ ರೀತಿ ಬೇಜಾರಾಗಿದ್ರು, ಅನ್ನೋದನ್ನು ಹೇಳುತ್ತಲೇ ಸಾಗಿದ್ರು. ಕಾಫ್ಕಾನ  ‘ಮೆಟಮಾರ್ಫಾಸಿಸ್’ ನಲ್ಲಿ ಬರೆದ ಸಾಲುಗಳು ನೆನಪಾದವು. ಕೆಲವೊಮ್ಮೆ ನಮ್ಮೊಳಗೆ ಏನಾಗುತ್ತದೆ ಅನ್ನೋದನ್ನು ಅಭಿವ್ಯಕ್ತಗೊಳಿಸಲು ಅಸಾಧ್ಯವಾಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮನ್ನು ಬೇರೆಯವರಿಗೆ ಅರ್ಥಮಾಡಿಸೋದು ಬಿಡಿ, ನಮಗೆ ನಾವು ಏನೆಂಬುದೇ ಅರ್ಥವಾಗದ ಸ್ಥಿತಿಯದು.
ಮಂಗಳಮುಖಿಯರಿಗು ಹಾಗೇನೆ. ಹುಟ್ಟಿದ್ದು ಹುಡುಗನಾಗಿಯಾದರು ಹುಡುಗಿಯ ಭಾವನೆ ಯಾಕೆ ಬರುತ್ತದೆ ಅನ್ನೋದೆ ತಿಳಿಯೋದಿಲ್ಲ. ಯಾಕೆ ನಂಗೆ ಹಾಗಾಯ್ತು ಅನ್ನೋದಕ್ಕೆ ನನ್ನಲ್ಲಿ ಉತ್ತರವಿಲ್ಲ ಎಂದು ವೀಣಾ ಹೇಳಿದಾಗ ಅದನ್ನು ನಾನು ಅರ್ಥಮಾಡಿಕೊಳ್ಳಬಲ್ಲವಳಾಗಿದ್ದೆ. ಮತ್ತು ಅರ್ಥ ಮಾಡಿಕೊಳ್ಳದವಳಾಗಿದ್ದೆ ಕೂಡ.
ಹೀಗೆ ಮಾತಾಡುತ್ತಲೇ ವೀಣಾ ರುಚಿ ರುಚಿಯಾದ ಅಡುಗೆಯನ್ನು ತಯಾರಿಸಿಯೇ ಬಿಟ್ಟಿದ್ರು. ಹಪ್ಪಳ, ಬೇಳೆ ಸಾಂಬಾರ್, ಮಜ್ಜಿಗೆ ಸಿಂಪಲ್ ಆಗಿದ್ರು ರುಚಿಯಾಗಿತ್ತು, ಹಾಗಾಗಿ ಬಾಯಿಚಪ್ಪರಿಸಿ ಊಟ ಮುಗಿಸಿಯಾಗಿತ್ತು. ವೀಣಾ ಜೊತೆ ಮಾತಾಡುತ್ತಲೇ ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ನನ್ನಲ್ಲಿದ್ದ ಹಲವು ಪ್ರಶ್ನೆಗಳಿಗೆ ಉತ್ತರವನ್ನ ಹುಡುಕುವ ಪ್ರಯತ್ನ ಮಾಡಿದೆ. ಆದರು ಪ್ರಶ್ನೆಗಳು ಮತ್ತೆ ಮತ್ತೆ ಹುಟ್ಟುತ್ತಲೇ ಇದ್ದವು.
transgender
ವೀಣಾ ಚಾಪೆ ಹಾಸಿದ್ರು. ಕಾಲು ಚಾಚಿ ಗೋಡೆಗೊರಗಿ ಕೂತೆ ಮತ್ತೆ ಪ್ರಶ್ನೆಗಳನ್ನು ಕೇಳುತ್ತಲೇ ಸಾಗಿದೆ. ವೀಣಾ ಅದಕ್ಕೆ ಉತ್ತರಗಳನ್ನು ನೀಡುತ್ತಲೇ ಸಾಗಿದ್ರು. ಈಗ ವೀಣಾ ಮನೆಯವರ ಮನಸ್ಥಿತಿ ಬದಲಾಗಿದೆಯೆಂದು ತಿಳಿಸಿದ್ರು. ಅವರ ಈ ಮಾಹಿತಿಯಿಂದ ಖುಷಿಯಾಯಿತು.ಗೋಡೆಯಲ್ಲೊಂದು ಹಲ್ಲಿ ಓಡಾಡುತ್ತಲೇ ಇತ್ತು. ಪಕ್ಕದಲ್ಲಿದ್ದ ಗೋಡೆ ಗಡಿಯಾರದತ್ತ ದೃಷ್ಟಿ ಹರಿಸಿದೆ, ಆಗಲೇ ಗಂಟೆ 12 ದಾಟಿತ್ತು. ದಿಂಬ ಮೇಲೆ ತಲೆಯೊರಗಿಸಿ ನಿದ್ದೆಗೆ ಜಾರಿದೆ.
ನಿದ್ದೆಗೆ ಜಾರಿದರೂ ಅದು ತುಂಬಾ ಸುಖಮಯವಾದ ನಿದ್ದೆಯಾಗಿರಲಿಲ್ಲ. ಮೊದಲ ಬಾರಿಗೆ ಹೀಗೆ ಲೈಂಗಿಕ ಅಲ್ಪಸಂಖ್ಯಾತರ ಮನೆಯಲ್ಲಿ ಮಲಗಿದ್ದೆ. ಎಷ್ಟೇ ಹೇಳಿದರು ಏನೋ ಒಂದು ಅಳಕು ನನ್ನನ್ನು ಕಾಡುತ್ತಿತ್ತು. ಹಾಗಾಗಿ ಆಗಾಗ ಎದ್ದು ಕೂರುತ್ತಿದ್ದೆ. ಎಲ್ಲರು ಗಾಢ ನಿದ್ದೆಯಲ್ಲಿದ್ರು. ಮತ್ತೆ ನನಗೆ ನಾನೆ ಥೂ ಯಾಕಿಂತ ಯೋಚನೆ ಅಂತ ಪ್ರಶ್ನೆ ಹಾಕಿಕೊಂಡೆ. ನನ್ನೊಳಗಿನ ನಕಾರಾತ್ಮಕ ಯೋಚನೆ ಬಗ್ಗೆ ನಾನೇ ಅಸಹ್ಯಪಟ್ಟುಕೊಂಡೆ.
ನಿಜ ಜೀವನವೆಂದರೆ ಹೀಗೆ. ಪ್ರತಿ ಬಾರಿ ತಿದ್ದಿಕೊಳ್ಳೋ ಅವಕಾಶ. ಆತ್ಮಾವಲೋಕನ ಮಾಡಿಕೊಂಡು ಹೊಸ ಒಳ್ಳೇ ಸಂಗತಿಗಳನ್ನು ಅಪ್ಪಿಕೊಳ್ಳಬೇಕು. ಕೆಟ್ಟ ಯೋಚನೆಗಳನ್ನು ಸುಟ್ಟು ಬಿಡಬೇಕು. ಅದರ ಬೂದಿಯು ಕೂಡ ಗಾಳಿಯಲ್ಲಿ ಬಂದು ಮೈ ಮೆತ್ತಿಕೊಳ್ಳದಿರುವಂತೆ.
ಮುಂಜಾನೆಯಾಗಿತ್ತು ವೀಣಾ ಟೀ ಲೋಟ ಕೈಗಿತ್ತರು. ಕುಡಿದ ನಂತರ ಪ್ರೆಶ್ ಅನಿಸತೊಡಗಿತು. ಈಗ ನಿಜವಾಗಿಯು ನೀವು ಮನೆಯವರೆನಿಸಿ ಬಿಟ್ಟಿದ್ದೀರಿ ಎಂದು ವೀಣಾ ಅಂದಾಗ ಹೌದಲ್ಲ ಅನ್ನಿಸಿತು. ಮನಸ್ಸಿಗೆ ಸ್ವೀಕರಿಸುವ ಮನಸ್ಸಿದ್ದಾಗ ಎಲ್ಲವು ಸಾಧ್ಯವಾಗುತ್ತದೆ. ಸಂಕುಚಿತತೆಯ ಸಂಕೋಲೆಯಲ್ಲಿ ಸಿಕ್ಕಿಕೊಂಡರೆ ಯಾವುದನ್ನು ಅರ್ಥಮಾಡಿಕೊಳ್ಳದ ಸೀಮಿತ ಮನಸ್ಸು ಸಣ್ಣತನಕ್ಕೆ ನಮ್ಮನ್ನು ತಳ್ಳಿಬಿಡುತ್ತದೆ.
ಹಾಗೆ ನೋಡುತ್ತಿದ್ದಾಗ ಇನ್ನು ಮೂವರು ಮಂಗಳ ಮುಖಿಯರು ವೀಣಾ ಮನೆಗೆ ಬಂದ್ರು.
ಮುಂದೇನಾಯಿತು ಹೇಳ್ತೀನಿ
ಬರುವ ವಾರ ಮತ್ತೆ ಸಿಗುವ…

‍ಲೇಖಕರು avadhi

July 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shama, Nandibetta

    “ಜೀವನವೆಂದರೆ ಹೀಗೆ. ಪ್ರತಿ ಬಾರಿ ತಿದ್ದಿಕೊಳ್ಳೋ ಅವಕಾಶ. ಆತ್ಮಾವಲೋಕನ ಮಾಡಿಕೊಂಡು ಹೊಸ ಒಳ್ಳೇ ಸಂಗತಿಗಳನ್ನು ಅಪ್ಪಿಕೊಳ್ಳಬೇಕು. ಕೆಟ್ಟ ಯೋಚನೆಗಳನ್ನು ಸುಟ್ಟು ಬಿಡಬೇಕು. ಅದರ ಬೂದಿಯು ಕೂಡ ಗಾಳಿಯಲ್ಲಿ ಬಂದು ಮೈ ಮೆತ್ತಿಕೊಳ್ಳದಿರುವಂತೆ.”
    ಎಷ್ಟು ಕಷ್ಟ ಅಲ್ವಾ ಜ್ಯೋತಿ ? ಆದರೂ ಸಾಧಿಸಬೇಕು, ಮನುಷ್ಯರಾಗಬೇಕು

    ಪ್ರತಿಕ್ರಿಯೆ
  2. Anonymous

    “ಮನಸ್ಸಿಗೆ ಸ್ವೀಕರಿಸುವ ಮನಸ್ಸಿದ್ದಾಗ ಎಲ್ಲವೂ ಸಾಧ್ಯವಾಗುತ್ತದೆ” ನಿಜವಾದ ಮಾತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: