NOTA, ನೋಟಾ ನಿನ್ನ ಹಲ್ಲು ತೋರಿಸು…!!

ಸುಪ್ರೀಂ ಕೋರ್ಟು 2013ರಲ್ಲಿ ತೊಡಿಸಿ ಬಿಟ್ಟಿರುವ ಮುಂಡುಹಲ್ಲನ್ನು ಹಿರಿದು, ನಮ್ಮದು “ ನೋಟಾ” ಎಂದು ಪ್ರಕಟಿಸಿ, ಸಿಕ್ಕ ಸಿಕ್ಕವರಿಗೆಲ್ಲ ಕಚ್ಚುವ ಹೊಸದೊಂದು ಫ್ಯಾಷನ್ ಆರಂಭಗೊಂಡಿದೆ. ತಮಾಷೆ ಎಂದರೆ, ಕಚ್ಚಿಸಿಕೊಂಡವರಿಗೆ ಕಚ್ಚಿದ್ದರಿಂದ ನೋವಾಗಿದೆಯಾ ಎಂದು ಕೇಳುವ ಗೋಜಿಗೂ ಈ ನೋಟಾಗಳು ಹೋಗಿಲ್ಲ!!

ಸಂವಿಧಾನದ ಆರ್ಟಿಕಲ್ 21,  ಭಾರತದ ಪ್ರಜೆಗಳಿಗೆ ತಮ್ಮ ಮತವನ್ನು ಗುಪ್ತವಾಗಿ ಮತ್ತು ನಿರ್ಭಯವಾಗಿ ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ನೋಟಾ ಬರುವ ಮೊದಲೂ ಕೂಡ ಚುನಾವಣೆ ನಿಯಮಗಳು 1961ರ ಅನ್ವಯ 49 (O) ಅಡಿಯಲ್ಲಿ ಮತದಾರನೊಬ್ಬ ಮತಗಟ್ಟೆಗೆ ಹೋಗಿ, ತಾನು ಮತ ಚಲಾಯಿಸಬಯಸುವುದಿಲ್ಲ ಎಂದು ಹೇಳಿ 17 (A) ಫಾರಂ ಸಲ್ಲಿಸಿ ಬರಬಹುದಿತ್ತು. ಆದರೆ, ಅಲ್ಲಿ ಮತ ಚಲಾಯಿಸದ ವ್ಯಕ್ತಿ ಯಾರೆಂಬುದು ಬಹಿರಂಗವಾಗುವ ಮೂಲಕ ಸಂವಿಧಾನದ ‘ಗುಪ್ತ ಮತದಾನ’ ದ ಆಶಯಕ್ಕೆ ಭಂಗ ಆಗುತ್ತಿತ್ತು. 2001ರಲ್ಲಿ ಚುನಾವಣಾ ಆಯೋಗ ಈ ವಿಚಾರವನ್ನು ಕೇಂದ್ರ ಸರಕಾರದ ಗಮನಕ್ಕೆ ತಂದಿತ್ತಾದರೂ ಸರ್ಕಾರ ಅದನ್ನು ಬದಲಾಯಿಸಲು ಮನಸ್ಸು ಮಾಡಿರಲಿಲ್ಲ.

2013ರಲ್ಲಿ, ಪೀಪಲ್ಸ್ ಯುನಿಯನ್ ಆಫ್ ಪಬ್ಲಿಕ್ ಲಿಬರ್ಟೀಸ್ (PUCL) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ತೀರ್ಪನ್ನು ನೀಡಿದ ಸುಪ್ರೀಂ ಕೋರ್ಟು (ನ್ಯಾ| ಪಿ. ಸದಾಶಿವಂ),  ಮತದಾನದ ಹಕ್ಕು ಶಾಸನಾತ್ಮಕವಾದರೆ, ಅಭ್ಯರ್ಥಿಗಳನ್ನು ತಿರಸ್ಕರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂದು ಹೇಳಿದ್ದಲ್ಲದೇ ಈ ನೆಗೆಟಿವ್ ಮತಗಳು ಮುಂದೊಂದು ದಿನ “ ಸ್ವಚ್ಛ ರಾಜಕೀಯ”ಕ್ಕೆ ಹೊರಳುವುದನ್ನು ರಾಜಕೀಯ ಪಕ್ಷಗಳಿಗೆ ಅನಿವಾರ್ಯ ಮಾಡಲಿದೆ ಎಂಬ ಆಶಯ ವ್ಯಕ್ತಪಡಿಸಿತ್ತು.

“Democracy is all about choice. This choice can be better expressed by giving the voters an opportunity to verbalize themselves unreservedly and by imposing least restrictions on their ability to make such a choice. By providing NOTA button in the Electronic Voting Machines, it will accelerate the effective political participation in the present state of democratic system and the voters in fact will be empowered.”(PUCL vs. Union of India, 2013, p44).

ನೋಟಾ ಬಂದು ಆದದ್ದೇನು?

ನೋಟಾ ಬಂದದ್ದರಿಂದ ರಾಜಕೀಯ ಸ್ವಚ್ಛವಾಯಿತೆ? ಮತದಾರರು ಹೆಚ್ಚು ಹೆಚ್ಚು ಆಸಕ್ತಿ ತೋರಿಸಿ ಮತಗಟ್ಟೆಗಳತ್ತ ಬಂದರೆ? ನೋಟಾದ ಹಲ್ಲುಗಳು ಹರಿತವಾಗಿವೆಯೇ?

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ “ಇಲ್ಲ” ಎಂದು.

1952ರಿಂದೀಚೆಗೆ  ಭಾರತದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ 55-77%ನಡುವೆ ಇತ್ತು ಎಂದು ಅಂಕಿಸಂಖ್ಯೆಗಳು ಹೇಳುತ್ತವೆ. ನೋಟಾ ಬಂದಮೇಲೂ ಇದರಲ್ಲೇನೂ ಬಲುದೊಡ್ಡ ಬದಲಾವಣೆ ಆಗಿಲ್ಲ.

2016ರಲ್ಲಿ ನೋಟಾದ ಪರಿಣಾಮಗಳ ಕುರಿತು ಅಧ್ಯಯನಗಳು ನಡೆದವು. ಅದರ ಫಲಿತಾಂಶಗಳು ಕುತೂಹಲಕರವಾಗಿವೆ. ನೋಟಾ ಬಂದ ಬಳಿಕ 2013ರಲ್ಲಿ ರಾಜಸ್ಥಾನ, ದಿಲ್ಲಿ, ಮಧ್ಯಪ್ರದೇಶ ಹಾಗೂ ಚತ್ತೀಸ್ ಘಡಗಳಲ್ಲಿ ಚುನಾವಣೆಗಳು ನಡೆದವು. ಅಲ್ಲಿ ಮತದಾನದ ಪ್ರಮಾಣದಲ್ಲಿ ಸರಾಸರಿ 6.79% ಹೆಚ್ಚಳವಾಯಿತಾದರೂ ಅದಕ್ಕೆ ನೋಟಾ ಒಂದೇ ಕಾರಣ ಎಂದು ಸೂಚಿಸುವ ಯಾವುದೇ ಚಿಹ್ನೆಗಳು ಇರಲಿಲ್ಲ. ಯಾಕೆಂದರೆ, ಆ ಬಳಿಕ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಗಳೆ ವೇಳೆಯಲ್ಲಿ ನೋಟಾ ಕಡ್ಡಾಯ ಇಲ್ಲದಿದ್ದರೂ ಸರಾಸರಿ ಮತದಾನದ ಪ್ರಮಾಣ 6.23% ಜಾಸ್ತಿ ಆಗಿತ್ತು!

ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್ ಅಂಡ್ ಪೊಲಿಟಿಕಲ್ ಸಯನ್ಸ್ ನ ಸಂಶೋಧಕಿ ರೇಖಾ ದಿವಾಕರ್ ಅವರು ಕಂಡುಕೊಂಡಂತೆ, 1951ರಿಂದ 2004ರ ನಡುವಿನ ಚುನಾವಣೆಗಳಲ್ಲಿ, ಮತದಾನದ ಪ್ರಮಾಣ ಹೆಚ್ಚಾಗಲು ಕಾರಣಗಳು ಸಾಕ್ಷರತೆ ಮತ್ತು ಜಿದ್ದಾಜಿದ್ದಿ ಸ್ಪರ್ಧೆಗಳು ಮತ್ತು ಮತದಾನದ ಪ್ರಮಾಣ ಕಡಿಮೆ ಆಗಲು ಕಾರಣಗಳು ವಿಸ್ತಾರವಾದ ಭೂಪ್ರದೇಶ ಹಾಗೂ ಅತಿ ಜನಸಂಖ್ಯೆ.

ನೋಟಾ ಭಯದಿಂದ ರಾಜಕೀಯ ಪಕ್ಷಗಳು ಸಂಭಾವಿತ ಅಭ್ಯರ್ಥಿಗಳನ್ನೇನಾದರೂ ನಿಲ್ಲಿಸಲಾರಂಭಿಸಿದ್ದಾವೆಯೇ ಎಂದರೆ ಅದೂ ಕಾಣುವುದಿಲ್ಲ. ಕ್ರಿಮಿನಲ್ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಢಾಳಾಗಿ ಕಾಣಿಸುತ್ತಿದೆ.

ನೋಟಾ ಎಂಬುದು ಹಲ್ಲು ಕಿತ್ತ ಹುಲಿ

ನೋಟಾ ಮತ ಚಲಾಯಿಸುವುದರಿಂದ ಚುನಾವಣೆಯ ಮೇಲೆ ಆಗಬಹುದಾದ ಏಕೈಕ ಪರಿಣಾಮ ಎಂದರೆ, ಸೋಲಲೇ ಬೇಕಾಗಿರುವ ಕೆಲವು ಪ್ರಜಾತಂತ್ರ ವಿರೋಧಿ, ಕ್ರಿಮಿನಲ್ ಹಿನ್ನೆಲೆಯ, ಸಮಾಜ ವಿರೋಧಿ ಶಕ್ತಿಗಳ ಪರವಾಗಿರುವ ಅಭ್ಯರ್ಥಿಗಳು ಗೆಲ್ಲುವ ಅವಕಾಶ ಹೆಚ್ಚಾಗುವುದು. ಈವತ್ತು ಇರುವ ನಿಯಮಗಳನ್ವಯ ನೋಟಾ ಮತಗಳು ಎಷ್ಟೇ ಇದ್ದರೂ, ಅತ್ಯಧಿಕ ಮತ ಪಡೆಯುವ ಅಭ್ಯರ್ಥಿ ಗೆಲುವು ಸಾಧಿಸುತ್ತಾನೆ/ಳೆ.

ಹಿಂದೊಮ್ಮೆ ಚುನಾವಣಾ ಆಯುಕ್ತ ಕ್ರಷ್ಣಮೂರ್ತಿ ಅವರು ನೋಟಾ ಮತಗಳ ಸಂಖ್ಯೆ ಗೆದ್ದ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆಗಿಂತ ಹೆಚ್ಚಿದ್ದರೆ, ಅಲ್ಲಿ ಹೊಸ ಅಭ್ಯರ್ಥಿಗಳೊಂದಿಗೆ ಮರು ಚುನಾವಣೆ ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು. ಆದರೆ, ಸರ್ಕಾರ ಚಲಾಯಿಸುವವರು ಈ ವಾದವನ್ನು ಒಪ್ಪಬೇಕಲ್ಲ!

ಇನ್ನು ಒಂದು ವೈಲ್ಡ್ ಯೋಚನೆ – ಎಲ್ಲರೂ ನೋಟಾ ಚಲಾಯಿಸಿದರೆಂದಿಟ್ಟುಕೊಳ್ಳಿ. ಆಗ ಏನಾಗುತ್ತದೆ? ಇದು ತೀರಾ ಅವಾಸ್ತವಿಕ ಸ್ಥಿತಿ. ಈ ತನಕದ ಚುನಾವಣೆಗಳಲ್ಲಿ ನೋಟಾ ಮತ ಚಲಾವಣೆ ಆಗಿರುವುದು ಸರಾಸರಿ 1.5%ಮಾತ್ರ. ಹಾಗಾಗಿ ನೂರಕ್ಕೆ ನೂರು ನೋಟಾ ಮತಗಳು ಬೀಳುವ ಸಂಭಾವ್ಯತೆ ಇಲ್ಲವೆಂದೇ ಅಧ್ಯಯನಗಳು ಅಭಿಪ್ರಾಯಪಡುತ್ತವೆ.

ಹಾಗಾಗಿ, ನೋಟಾಕ್ಕೆ ಕಚ್ಚುವ ಹಲ್ಲು ಮೂಡುವ ತನಕ ಅದನ್ನು ಬಳಸಿ ಅವಕಾಶವೊಂದನ್ನು ನಿರಾಕರಿಸುವ ಬದಲು, ನಿಂತಿರುವ ಅಭ್ಯರ್ಥಿಗಳ ಪೈಕಿ ಸೋಲಲೇ ಬೇಕಾದವರ ವಿರುದ್ಧ ಮತ ಚಲಾಯಿಸುವುದು ಹೆಚ್ಚು ಪ್ರಜಾತಾಂತ್ರಿಕವಾದ ಪ್ರತಿಭಟನಾ ವಿಧಾನ ಅನ್ನಿಸುತ್ತದೆ.

ಹೆಚ್ಚುವರಿ ಓದಿಗಾಗಿ:

ರೇಖಾ ದಿವಾಕರ್ ಅವರ ಸಂಶೋಧನಾ ಬರಹ: http://research.gold.ac.uk/ 6345/1/JEPOP_voter_turnout_ published.pdf

‍ಲೇಖಕರು avadhi

April 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: