ಗೊರೂರು ಶಿವೇಶ್
ಚೀನಾದ ಹಾಯ್ಕುಗಳು, ಇಂಗ್ಲೀಷಿನ ಲಿಮೆರಿಕ್ಗಳಿಗೆ ಸಾಮ್ಯತೆ ಹೊಂದಿರುವ ಚುಟುಕುಗಳು, ಮುಕ್ತಕಗಳು ಮತ್ತು ಹನಿಗವನಗಳ ರೂಪದಲ್ಲಿ ಇಂದು ಬಹುಜನರನ್ನು ಆಕಷರ್ಿಸಿರುವ ಸಾಹಿತ್ಯದ ಪ್ರಕಾರ. ಸಾಹಿತ್ಯಕ ಪತ್ರಿಕೆ, ಪುರವಣಿಗಳ ಪುಟಗಳಲ್ಲಿ ಉಳಿಯುತ್ತಿದ್ದ ಅಲ್ಪ-ಸ್ವಲ್ಪ ಖಾಲಿಜಾಗವನ್ನು ಭರ್ತಿ ಮಾಡಲು ಹುಟ್ಟಿಕೊಂಡ ಈ ಹನಿಗವನಗಳು ಇಂದು ಅನಿವಾರ್ಯ ಸರಕಾಗಿ ಮಾರ್ಪಟ್ಟಿದೆ. ಕೆಲವು ವರ್ಷಗಳ ಹಿಂದೆ ಆರ್ಕೆಸ್ಟ್ರಾಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಷಣಗಳ ನಡುವೆ ತೂರಿಬರುತ್ತಿದ್ದ ನಗೆಹನಿಗಳು, ಕ್ರಮೇಣ ಜನರನ್ನು ಎಳೆತರುವ, ಅವರನ್ನು ಹಿಡಿದಿಡುವ ‘ನಗೆಹಬ್ಬ’ವಾದ ರೀತಿ ಹನಿಗವನಗಳು ಕೇವಲ ಪುಟತಿರುವಿ ಹಾಕುವುವರಿಂದ ಹಿಡಿದು ಗಂಭೀರ ಸಾಹಿತ್ಯಾಸಕ್ತರವರೆಗೆ ಏಕಪ್ರಕಾರವಾಗಿ ಹಿಡಿದಿಟ್ಟಿದೆ.
ಆರು ಸಾಲುಗಳ ಷಟ್ಪದಿಗಳು, ನಾಲ್ಕು ಸಾಲುಗಳ ಕಂದಪದ್ಯಗಳು, ಕಥಾಹಂದರವನ್ನು ಛಂದಸ್ಸಿನ ಚೌಕಟ್ಟಿನಲ್ಲಿ ಹೇಳಿದರೆ, ಕನ್ನಡದ ‘ಗಾಯತ್ರಿ’ ತ್ರಿಪದಿಗಳು, ನಿರ್ದಿಷ್ಟ ಛಂದಸ್ಸಿನ ದಾಟಿಯಲ್ಲಿ ಹೇಳಲ್ಪಟ್ಟವು.
ಬರೆಯದೆ ಓದುವವನ ಕರೆಯದೆ ಹೋಗುವವನ
ಬರಿಗಾಲಲ್ಲಿ ನಡೆಯುವವನ ಕರೆದು
ಕೆರದಲ್ಲಿ ಹೊಡೆಯೆಂದ ಸರ್ವಜ್ಞ

ಇದು ಲೋಕವಿಚಾರವನ್ನು ಹೇಳಹೊರಟ ತ್ರಿಪದಿಯಂತೆ ಕಂಡರೂ ಆಳದಲ್ಲಿ ಮನಸಿನ ವ್ಯಾಪಾರವನ್ನು ಕುರಿತು ಹೇಳಲಾಗಿದೆ. ಇನ್ನೂ ಜನಪದ ಗೀತೆಯೊಂದು. ತಾಯಿ ಸತ್ತ ಮೇಲೆ ತವರಿಗೆ ಹೋಗಲು ಇಷ್ಟಪಡದ ಹೆಣ್ಣಿನ ಕಾರಣವನ್ನು ಮೂರು ಸಾಲುಗಳಲ್ಲಿ ತಿಳಿಸುತ್ತದೆ.
ಹೆತ್ತಮ್ಮ ಇದ್ದಾರೆ ನೆತ್ಗೆಣ್ಣೆ ಹಾಕೋಳು
ಹರಿದಾರಿ ದೂರಕಳಹೋಳು | ಅತ್ಗೆಮ್ಮ
ಹೊಸಲು ಬಿಟ್ಟು ಕೆಳಗೆ ಇಳಿಯಾಳು.
ಕರಿಯನ್ನು ಕನ್ನಡಿಯಲ್ಲಿ, ಇಬ್ಬನಿಯಲ್ಲಿ ಜಗತ್ತನ್ನು ತೋರುವಂತೆ ಈ ಚುಟುಕಗಳು. ಹಾಸ್ಯ, ವಿಡಂಬನೆ, ಕಟಕಿ, ಚಾಟು, ವಿನೋದ, ವ್ಯಂಗ್ಯ, ಮಿಂಚಿಕೆಗಳು ಚುಟುಕುಗಳ ಪ್ರಮುಖಲಕ್ಷಣಗಳು, ಇದಕ್ಕೆ ಸಂಬಂಧಿಸಿದಂತೆ
ಚುಟುಕು ಅಂದ್ರೆ
ನಾಲ್ಕೈದು ಸಾಲಿನ ಕವನ
ಕೊನೆಗೆ ಇರ್ಲೆಬೇಕು ಪಂಚ್
ಪಂಚೆ ಇಲ್ದಿದ್ರೆ
ಹೋಗತ್ತೆ ಮಾನ
ಖ್ಯಾತ ಹನಿಗವನ ಕವಿ ಡುಂಡಿರಾಜರು ಚುಟುಕುಗಳ ಪ್ರಮುಖಗುಣವನ್ನು ಚುಟುಕದ ಮೂಲಕವೇ ಹೇಳಿದ್ದಾರೆ. ನಮ್ಮ ಶ್ರೇಷ್ಠಕವಿಗಳು ಹನಿಗವನಗಳನ್ನು ರಚಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕುವೆಂಪುರವರ
ನಾಲ್ಕು ಬೆರಳಂತೆ ನಾಲ್ಕು ಮಕ್ಕಳು
ಹೇಮ ಹೆಬ್ಬೆರಳು
ಮತ್ತು
ಕಂದ ತೇಜಸ್ವಿ | ನೀನು ನಾಲ್ಕು ವರ್ಷದ ಕಂದ
ನಾನು ನಾಲ್ಕು ವರ್ಷದ ತಂದೆ
ಇಬ್ಬರೂ ಒಂದೇ
ಇನ್ನೂ ಬೇಂದ್ರೆಯವರ
ಆಮುಖ
ಈ ಮುಖ
ಪ್ರೀತಿಯೆಂಬ ಚುಂಬಕ
ಹಾಗೂ
ಪ್ರೀತಿ ಅರಸಿ
ಊರೆಲ್ಲಾ ತಿರುಗಿದೆ
ಬಾಳ ಮೂಸದೆ.
ಚುಟುಕಗಳಿವೆ. ಇನ್ನೂ ಅವರ ದೀರ್ಘ ಮತ್ತು ಕವನಗಳಲ್ಲೂ ನಮ್ಮನ್ನು ಥಟ್ಟನೆ ಹಿಡಿದಿಡುವುದು ಕವಿತೆಯ ಆಶಯ ವ್ಯಕ್ತವಾಗುವ ಒಂದೆರಡು ಸಾಲುಗಳು. ಕುವೆಂಬಪುರವರ ಅನಂತದಿಂ ದಿಗಂತದಿಂ ಕವಿತೆಯ ಈ ಸಾಲುಗಳು.
ಮಾತಿಗೊಂದು ಅರ್ಥಬೇಕೆ
ಅರ್ಥವಿದ್ದರಷ್ಟೆ ಸಾಕೇ
ಮಾತು ಅರ್ಥ ಎರಡೂ ವ್ಯರ್ಥ
ಸ್ವಅರ್ಥ ಇರದಿರೆ
ಅಥವಾ
ದೋಣಿಸಾಗಲಿ ಮುಂದೆ ಸಾಗಲಿ ಕವಿತೆಯ
ನಿನ್ನೆ ನಿನ್ನೆಗೆ
ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೆ
ಇನ್ನೂ ಕೆ.ಎಸ್.ಎನ್ ರವರ ಕವಿತೆಗಳಲ್ಲಿ ನಮ್ಮನ್ನೂ ಹಿಡಿದಿಡುವ ಸಾಲುಗಳು
ಬಂದ ಬಾಗಿಲು ಮಣ್ಣು
ಬಿಡುವ ಬಾಗಿಲು ಮಣ್ಣು
ನಡುವೆ ಕಾಪಾಡುವುದು ತಾಯಕಣ್ಣು
ಊರಿಗೆ ಊರೇ ಹಸೆಯಲ್ಲಿ ನಿಂತರೆ
ಆರತಿ ಬೆಳಗಲು ಜನವೆಲ್ಲಿ ?
ಎಲ್ಲಾ ಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲಿ ?
ಜಿ.ಎಸ್. ಎಸ್ ಶಿವರುದ್ರಪ್ಪನವರ ಕವಿತೆಯ
ಮನೆಮನೆಯಲಿ ದೀಪ ಉರಿಸಿ
ಹೊತ್ತಿ ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದ್ದಾಕೆ
ನಿನಗೆ ಬೇರೆ
ಹೆಸರುಬೇಕೆ ?
ಸ್ತ್ರೀಎಂದರೆ ಅಷ್ಟೆ ಸಾಕೆ.
ಆಧುನಿಕರಲ್ಲಿ ಸಿ.ಪಿ.ಕೆ ಅಕಬರಅಲಿ ದಿನಕರದೇಸಾಯಿಯವರು ಕೂಡಾ ಸಾಕಷ್ಟು ಕೃಷಿಮಾಡಿದ್ದಾರೆ. ತಮ್ಮ ಶ್ಲೇಷ್ಟಾರ್ಥ ಪದಗಳ ಪ್ರಾಸಾನು ಪ್ರಾಸಗಳ ಮೂಲಕ ಪನ್-ಡಿತರೆಂದು ಕರೆಯಿಸಿಕೊಂಡವರು, ದುಂಡಿರಾಜರು
ಕಾವ್ಯ ಗಾತ್ರದಲಿಲ್ಲ
ಪರಿಣಾಮದಲ್ಲಿದೆ
ಚಿಕ್ಕದಾದರೂ ಆಕಾರ
ಚಿಕ್ಕದಲ್ಲಿ ಆ-ಕಾರ
ಅಂತೆಯೆ ಹನಿಗವಿತೆಗಳನ್ನು ಕಾವ್ಯವೆಂದು ಒಪ್ಪದವರ ಬಗ್ಗೆ ಖಾರವಾಗಿ ಪ್ರಶ್ನಿಸುತ್ತಾರೆ.

ವಿಮರ್ಶಕರು
ಹೇಳುವರು
ಕವಿತೆಯಲ್ಲಿ
ಇರಬೇಕು ಆಳ
ಕವಿತೆ ಕೇಳುತ್ತೆ
ಇರಬೇಕು ಅನ್ನಲಿಕ್ಕೆ
ನಾನೆನು ಅವರ
ಆಳಾ ?
ಇನ್ನೂ ಬೆಳದಿಂಗಳ ರಾತ್ರಿ ಕವಿಗೆ ಹೊಳೆಯಿಸಿದ್ದು ಹೀಗೆ
ಇರುಳಿಡೀ ಶಶಿ
ಮುಗಿಲ ಬಲೆಬೀಸಿ
ಎಷ್ಟು ಕಾದರೇನು ?
ಸಿಗಲೇ ಇಲ್ಲ
ಹೊಳೆವ
ನಕ್ಷತ್ರಮೀನು.
ಸತೀಶ ಕುಲಕರ್ಣಿಯವರ ಸುಂದರ ಚುಟುಕ ಹೀಗಿದೆ.
ತ ಎಷ್ಟು ಹಕ್ಕಿಗಳು
ಕುಕ್ಕುವವೂ ಏನೊ
ಮುಷ್ಟಿಗಾತ್ರದ
ಹೃದಯದ ತೆನೆಗೆ
ಹಾಗೆಯೇ ಅಪಾರರ ಅನುಭವವದ ನುಡಿ
ನೊಂದವನ ತಾಪ, ಸೋತವನ ಶಾಪ
ಮರೆತವಳ ರೂಪ, ಇಡೀ ಹಗಲಪಾಪ
ಸಂಜೆಯಾದೊಡನೆ ತಣ್ಣಗೆ ಕರಗುವವು
ಬಿಯರ್ ಎಂಬ ಸಾರ್ವತ್ರಿಕ ದ್ರಾವಣದಲ್ಲಿ
ಇನ್ನೂ ನನ್ನವೆರಡು ಹನಿಗವನಗಳು
ಖಾದಿ ಖಾಕಿ ಖಾವಿಗಳೇ
ಸೇರಿಕೊಂಡು
ನಿಜವಾಗಿಸಿದ್ದಾರೆ
ಟಿ.ವಿ.ಯೆಂಬುದು
ಮೂರ್ಖರ ಪೆಟ್ಟಿಗೆ
ಅಪ್ಪ-ಅಮ್ಮ -ಮಗ
ಒಟ್ಟಿಗೆ
ನೋಡುತ್ತಿದ್ದಾರೆ
ತ್ರೀ ಈಡಿಯೆಟ್ಸ್

ಚಂದ್ರಶೇಖರ ಪಾಟೀಲರದ್ದೂ ಹನಿಗವನಗಳಲ್ಲಿ ದೊಡ್ಡಕೈ. ಕೆಲವು ತುಟಿಯಂಚಿನಲ್ಲಿ ಕಿರುನಗು ಮೂಡಿಸಿದರೂ ಕೆಲವು ಗಂಬೀರ ಚಿಂತನೆಗೆ ಹೆಚ್ಚುತ್ತದೆ.
ಲಕ್ಷಣನು ಹಾಕಿ
ಹೋದನು ಲೈನು
ರಾವಣ ಬಂದು
ಹೊಡೆದನು ಲೈನು
ಅಜ್ಜ
ನಿನ್ನ ಪಾದದ ಧೂಳಿ
ನನ್ನ ಹಣೆಯ ಮೇಲಿರಲಿ
ಆ ಧೂಳೆಂದು
ಕಣ್ಣಿಗೆ ಬೀಳದಿರಲಿ
ಹನಿಗವಿತೆಗಳಿಗೆ ಹೊಸಭಾಷ್ಯಬರೆದ ಕೀತರ್ಿ ಜರಗನಹಳ್ಳಿ ಶಿವಶಂಕರದ್ದು, ಹನಿಗವಿತೆಗಳಿಗೆ ಆಧ್ಯಾತ್ಮದ ಲೇಪ ಹಚ್ಚಿದ ಕೀತರ್ಿಯೂ ಅವರಿಗಿದೆ.
ಹತ್ತಾರು ವರ್ಷ ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ
ನೂರಾರು ವರುಷ
ಆಳಿದ ಅರಸ
ಹೆಣವಾಗಿ ಉಳಿಯಲಿಲ್ಲ
ಮೂರು ದಿವಸ
ಏರಿದರೆ
ಮಂಚ, ಗದ್ದುಗೆ, ಸಿಂಹಾಸನ
ಹೆಚ್ಚೆಂದರೆ
ಎರಡು ಮೂರಡಿ ಮೇಲೆ
ಜಾರಿದರೆ
ಗೋರಿ, ಸಮಾಧಿ, ಬೃಂದಾವನ ಹೆಚ್ಚೆಂದರೆ
ಎರಡು ಮೂರಡಿ ಕೆಳಗೆ
ಬತ್ತಿಯಾದ ಹತ್ತಿ
ನೊಂದುಕೊಳ್ಳುತ್ತೆ
ತನ್ನ ಒಡಲೊಳಗೆ
ಬೆಚ್ಚಗೆ ಅಡಗಿದ್ದ
ಬೀಜವೆ ಎಣ್ಣೆಯಾಗಿ
ತನ್ನನ್ನೇ ಸುಡುತಿದೆಯೆಂದು
ತಾವರೆಗೆ
ತುಂಬಿ ತುಳುಕುವ ಕೆರೆ
ಸುತ್ತ ಮುತ್ತವ ತೆರೆ
ಆದರೆ
ಆಳ ತಳದ ಬೇರು
ನೀಡಬೇಕು ನೀರು.
ಗಂಭೀರ ಸಾಹಿತಿಗಳ ಅಸಮಾಧಾನದ ನಡುವೆಯು 1996ರಲ್ಲಿ ಹಾಸನದಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಹನಿಗವನಗಳ ಗೋಷ್ಠಿ ನಡೆದ ನಂತರ ಸಾಹಿತ್ಯ ಸಮ್ಮೇಳನದಲ್ಲಿ ಚುಟುಕುಗಳಿಗೆ ಮಾನ್ಯತೆ ದೊರೆಯುವುದರ ಜೊತೆಗೆ ಚುಟುಕು ಸಾಹಿತ್ಯ ಪರಿಷತ್ತಿನ ರಚನೆಯಾಗಿರುವುದು ಅದರ ಜನಪ್ರಿಯತೆಯ ದ್ಯೋತಕವಾಗಿದೆ.
ಡಾ|| ಕೆ.ಬಿ. ರಂಗಸ್ವಾಮಿಯವರ ಹನಿಗವಿತೆಯು ಗಂಭೀರ ಸಾಹಿತ್ಯವನ್ನು ಕುರಿತು ಹೇಳುತ್ತಿರಬಹುದೆ
ಕ್ಷಿತಿಜಕ್ಕೆ
ತಾನೇ ಒಡೆಯನೆಂದು
ಭ್ರಮಿಸಿದ ಗಾಳಿಪಟ
ಸೂತ್ರ ಹರಿದೊಡನೆ
ಮೆಲ್ಲಗೆ ಇಳಿಯಿತು
ಭುವಿಗೆ
ಮುಗಿಸುವ ನಮ್ಮನ್ನು ಚಿಂತನೆಗೆ ಹಚ್ಚುವ ಯಾರೋ ಬರೆದ ಸ್ನೇಹಿತರು ಕಳುಹಿಸಿದ ಇನ್ ಬಾಕ್ಸ್ಗೆ ಬಂದು ತಲುಪಿದ ಕವನ
ಒಳಗೆ ಬಂದ ಬಂಧುಗಳು
ಬಂಜೆ ಬಂಜೆ ಎಂದರು
ಹೊರಗೆ ನಿಂತ ಭಿಕ್ಷುಕ
ಅಮ್ಮಾ ಅಮ್ಮಾ ಎಂದ.






udaharisida hanigavanagaLu tumba chennaagive, uttama baraha
ಪ್ರೀತಿ ಅರಸಿ
ಊರೆಲ್ಲಾ ತಿರುಗಿದೆ
ಬಾಳ ಮೂಸದೆ.
ಇದು ಬೇಂದ್ರೆಯವರದ್ದೇ ನಾ ಸರ್
ತುಂಬಾ ಒಳ್ಳೆಯ ಬರಹ.ಅಭಿನಂದನೆಗಳು.