ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“Gender isn’t biology, It is sociology”

“Gender isn’t biology, It is sociology”
ಅವಳು ಹೇಳಿದ್ದು ಅದೊಂದೇ ಮಾತು. ಬಾಯಿ ಕಟ್ಟಿತು. ಕಣ್ಣುಗಳು ಸುಮ್ಮನೆ ಅಲುಗದೆ ನಿಂತುಬಿಟ್ಟವು. ಕಳೆದ ಒಂದು ಗಂಟೆಯಿಂದ, ನನ್ನ ಬೆರಳುಗಳ ಸರಾಗದ ನಡುವೆ ನಸುಕಿಹೋಗಿದ್ದ ಮೌಸ್ ಒಂದಿಷ್ಟೂ ಅಲುಗಾಡಲಿಲ್ಲ. ಎದುರಿದ್ದ ಯೂಟ್ಯೂಬ್‍ ನ ಸಣ್ಣ ಕಿಟಕಿಯಂತ ಪರದೆಯೊಳಗೆ, ಪೋಡಿಯಂ ಎದುರು ನಿಂತಿದ್ದ ಅವಳು ಮಾತನಾಡುತ್ತಲೇ ಹೋದಳು.

“I feel lonely in my fight against sexism, in a way that I don’t feel in my fight against racism” ಎಂದು ಮಾತನ್ನು ಮುಂದುವರೆಸಿದಳು. ನಿಬ್ಬೇರಗಾದೆ. ತಳಮಳ ಎನಿಸಿತು. ಕುಸಿದಂತೆ ಕಂಡಿತ್ತು.

ಅವಳು ಚಿಮಮಾಂಡ ಎನ್ ಗೋಝಿ ಅಡಿಚೆ. ಪ್ರಸಿದ್ದ ಯೂನಿರ್ವಸಿಟಿ ಹಾರ್ವರ್ಡ್ ನಲ್ಲಿ, ವಿದ್ಯಾರ್ಥಿಗಳ ಎದುರು ನಿಂತು ಮಾತನಾಡುತ್ತಿದ್ದಳು ಚಿಮಮಾಂಡ. ಅವಳ ಮಾತುಗಳು ಈವರೆಗೂ ಹಾರ್ವರ್ಡ್‌ನ ಅಂಗಳದಲ್ಲಿ ಭಾಷಣ ಮಾಡಿ ಹೋಗಿದ್ದ ಉಳಿದ ಅಥಿತಿಗಳಂತೆ ಇರಲಿಲ್ಲ. ಚಿಮಮಾಂಡಳ ಪ್ರತಿ ಮಾತುಗಳು ಅವಳದೇ ಸ್ವಂತ ಬದುಕಿನಿಂದ ಹೊರಜಾರುತ್ತಿದ್ದ ಗಾಢವಾದ ಅನುಭವಗಳ ತುಣುಕಿನಂತಿದ್ದವು.

ಹಾರ್ವರ್ಡ್ ಯೂನಿರ್ವಸಿಟಿಯ ಅಂಗಳದಲ್ಲಿ ನಿಂತು ಮಾತನಾಡಿದ ಅದೆಷ್ಟೋ ಅತಿರಥ ಮಹಾರಥರು ಬದುಕು, ಸಾಧನೆ, ಅಲ್ಪನೊಬ್ಬ ಮಹಾತ್ಮನಾದ ಬಗೆ, ಸೊನ್ನೆಯಿಂದ ಸಾವಿರಕ್ಕೇರಿದ ಸಾಧಕನ ಕನಸು ಹಾಗೂ ನಡೆದುಹೋದ ದುರಂತಗಳ ಬಗ್ಗೆ ಮಾತನಾಡಿದ್ದಾರೆ. ಬದುಕಿನ ಆದರ್ಶವಾದಗಳನ್ನು ಮುಂದಿಟ್ಟುವರಿದ್ದಾರೆ.  ಆದರೆ ವಾಸ್ತವದ ಬದುಕಿನ ಚಲನೆಗೆ, ಬದಲಾಗುತ್ತಿರುವ ರಾಜಕೀಯ ಹಾಗೂ ಅದರ ಪಲ್ಲಟಗಳನ್ನು ಸಮೀಕರಿಸಿ ಮಾತನಾಡಿದವರು ಬೆರಳಿಕೆಯಷ್ಟು ಅಥಿತಿಗಳು ಮಾತ್ರ.

ಈ ದಿಸೆಯಲ್ಲಿ ಯೋಚಿಸಿದಾಗ ಹಾರ್ವರ್ಡ್‌ನ ಅಂಗಳದಲ್ಲಿ 1932 ನವೆಂಬರ್‌ನಲ್ಲಿ ಮಾತನಾಡಿದ ಕವಿ ಟಿ.ಎಸ್ ಎಲಿಯೆಟ್  ನೆನಪಾದಂತೆ 2018ರ ಮೇ 23ರಂದು ಮಾತನಾಡಿದ ಚಿಮಮಾಂಡ ಎನ್ ಗೋಝಿ ಅಡಿಚಿ ಕೂಡ ನೆನಪಾಗಯತ್ತಾಳೆ.

ಅಮೆರಿಕಾದಲ್ಲಿ ಹುಟ್ಟಿದ ಎಲಿಯಟ್ ಇಂಗ್ಲೆಂಡ್ ಸೇರಿಕೊಂಡಿದ್ದ. ನವ್ಯಕಾವ್ಯ ಉಚ್ಛ್ರಾಯ ಸ್ಥಿತಿಯನ್ನು ತಲುಪುವ ವೇಳೆಗೆ, ಎಲಿಯಟ್ ಜಗತ್ತಿನ ಬಹುಮುಖ್ಯ ಕವಿ ಎನಿಸಿಕೊಂಡಿದ್ದ. ಎಲಿಯಟ್ ತನ್ನ “ವೇಸ್ಟ್ ಲ್ಯಾಂಡ್ ಆಂಡ್ ಅದರ್ ಪೋಯ್ಸ್ಂ” ಹಾಗೂ “ಪುಫ್ರಾಕ್”ನಂತಹ ಕವಿತೆಗಳನ್ನು ಬರೆಯುವ ಮೂಲಕ ವಿಶ್ವದ ಪ್ರಮುಖ ಕವಿಗಳ ಸಾಲಿಗೆ ಸೇರಿಹೋಗಿದ್ದ. ಹಾರ್ವರ್ಡ್ ಯೂನಿರ್ವಸಿಟಿ ಈ ದಿಕ್ಕಿನಲ್ಲಿ ಆಲೋಚಿಸಿತ್ತು. ಎಲಿಯಟ್ ಹಾರ್ವರ್ಡ್‌ನಲ್ಲಿ ಮಾತನಾಡುವುದಾದರೆ  ನವ್ಯಕಾವ್ಯಗಳ ಕುರಿತು ಮಾತನಾಡಲಿ ಎಂದು ಬಯಸಿತ್ತು.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಕಾವನ್ನು ಏರಿಸಿಕೊಳ್ಳುತ್ತಿದ್ದ ದಿನಗಳು ಅವು. ಫ್ರಾಂಕ್ಲಿನ್ ರೂಸ್‍ವೆಲ್ಟ್ ಹಾಗೂ ಹರ್ಬರ್ಟ್ ಹೂವರ್ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳಾಗಿದ್ದರು. ೧೯೩೨ರ ಇಂತಹ ದುರ್ಭಿಕ್ಷದ ದಿನವೊಂದರಲ್ಲಿ ಎಲಿಯಟ್‍ ಗೆ ಹಾರ್ವರ್ಡ್ ಯೂನಿರ್ವಸಿಟಿ ತನ್ನ ವಿದ್ಯಾರ್ಥಿಗಳ ಎದುರು ಮಾತನಾಡುವಂತೆ ಆಹ್ವಾನ ನೀಡಿತ್ತು. ಎಲಿಯಟ್ ಕೂಡ ಆಹ್ವಾನವನ್ನ ಒಪ್ಪಿಕೊಂಡಿದ್ದ.

ಆದರೆ ಎಲಿಯಟ್ ಅಪ್ಪಟ ಕವಿ. ಅಂದು ಯೂನಿವರ್ಸಿಟಿಯ ವಿದ್ಯಾರ್ಥಿಗಳ ಎದುರು ನಿಂತಿದ್ದ ಎಲಿಯಟ್, ತನ್ನ ಕಾವ್ಯದ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ. ಭಾಷಣದ ಉದ್ದಕ್ಕೂ ಕೇವಲ ಅಮೆರಿಕಾ ಎದುರಿಸುತ್ತಿರುವ ಸಂಕೀರ್ಣ ರಾಜಕೀಯ ಹಾಗೂ ವರ್ಗ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದ. ಸೃಷ್ಠಿ ಹಾಗೂ ಮನುಷ್ಯ ಕಾಣಬಹುದಾದ ಮತ್ತು ಕಾಣುತ್ತಿರುವ ಬದಲಾವಣೆ ಮತ್ತು ರೂಪಾಂತರದ ನಡುವಿನ ತೆಳುಗೆರೆಗಳ ಬಗ್ಗೆ ಧೀರ್ಘವಾಗಿ ಮಾತನಾಡಿದ್ದ.

(೧೮೨೧ರಲ್ಲಿ ಪ್ರಕಟವಾದ “Defense of Poet”  ಪ್ರಬಂಧದಲ್ಲಿ ಕವಿ ಪಿ.ಬಿ ಶೆಲ್ಲಿ “Poets are unacknowledged legislators”
ಎಂದಿದ್ದು ಇದೇ ಧೋರಣೆಯಲ್ಲಿ‌)

ನಾನು ಓದಿದ ಕೆಲವೇ ಕೆಲವು ಎಲಿಯಟ್ ಪದ್ಯಗಳ ಸಾಲಿಗೆ ಎಲಿಯಟ್ ನ ಹಾರ್ವರ್ಡ್ ಯೂನಿರ್ವಸಿಟಿಯ ಭಾಷಣವನ್ನು ಕೂಡ ಸೇರಿಸಿಕೊಂಡಿದ್ದೇನೆ.  ಏಕೆಂದರೆ ಎಲಿಯಟ್ ತನ್ನ ಕಾವ್ಯಗಳಲ್ಲಿ ಬಳಸುವ ಭಾಷೆಯನ್ನು ಅಂದಿನ ಭಾಷಣದಲ್ಲೂ ಬಳಸಿದ್ದ. ಓದುಗನೊಬ್ಬನಿಗೆ ಒಂದು ಪರಿಪೂರ್ಣ ಕಾವ್ಯ ದಾಟಿಸಬಹುದಾದ ಸಂಗತಿಗಳನ್ನು ತಾನೇ ಸ್ಪುಟವಾದ ಕಾವ್ಯವಾಹಕವಾಗಿ, ಎಲಿಯಟ್ ತನ್ನ ಎದುರಿದ್ದ ವಿದ್ಯಾರ್ಥಿಗಳಿಗೆ ದಾಟಿಸಿದ್ದ.

ಎಲಿಯಟ್ ಅಪ್ಪಟ ಕವಿಯಾಗಿ ನಿಲ್ಲುವುದು  ಕಾರಣಕ್ಕಾಗಿ. ಕವಿಯೊಬ್ಬನಿಗೆ ಕಾವ್ಯ ಎನ್ನುವುದು ಗತದಲ್ಲಿ ತೇಲಿಸುವುದಿಲ್ಲ, ಬದಲಿಗೆ ವಾಸ್ತವದಲ್ಲಿ ಜೀಕಿಸುತ್ತದೆ. ಎಲಿಯಟ್ ಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ನೆನಪಾಗಿದ್ದು ಮೋಹಕ ಪದ್ಯಗಳಲ್ಲ. ಅಮೆರಿಕಾದ ಸಂಕೀರ್ಣತೆಗಳು ಮಾತ್ರ.

ಆವತ್ತು ಎಲಿಯಟ್ ನ ಹಾರ್ವರ್ಡ್ ಭಾಷಣದ ಬಗ್ಗೆ ಓದಿ ಚಕಿತಗೊಂಡಂತೆ ಮತ್ತೊಮ್ಮೆ ನಾನು ಚಕಿತಗೊಂಡಿದ್ದು, ದಿಗ್ಬ್ರಾಂತನಾಗಿದ್ದು ಅದೇ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ನೈಜೀರಿಯಾದ ಲೇಖಕಿ ಚಿಮಮಾಂಡ ಮಾತನಾಡುವುದನ್ನು ಕೇಳಿದಾಗಲೇ.

ಗೇಬ್ರಿಯಲ್ ಒಕಾರ, ವೋಲೆ ಷೋಯಿಂಕಾ, ಚಿನುಆ ಅಚಿಬೆಯಂತಹ ಶ್ರೇಷ್ಠ ಲೇಖಕರ ನಂತರ, ನೆಲದ ಅಸಲಿತ್ತನ್ನೇ ಆಧಾರವಾಗಿಟ್ಟುಕೊಂಡು ಬರೆಯುತ್ತಿರುವ ನೈಜಿರಿಯಾದ ಲೇಖಕಿ ಚಿಮಮಾಂಡ. “ಹಾಫ್ ಆಫ್ ಎ ಎಲ್ಲೋ ಸನ್”, “ದ ಥಿಂಗ್ ಆರೌಂಡ್ ಯುವರ್ ನೆಕ್” , “ಅಮೆರಿಕಾನ್ಹಾ”ದಂತ ಕೃತಿಗಳ ಮೂಲಕ ವಿಸ್ಮೃತ ಲೇಖಕಿಯಾಗಿ ಚಿಮಮಾಂಡ ಈಗಾಗಲೇ ಕಾಣಿಸಿಕೊಂಡಿದ್ದಾಳೆ.

ಚಿಮಮಾಂಡ ತನ್ನ ಒಳಗಿನ ಪ್ರಶ್ನೆ ಹಾಗೂ ಅನುಮಾನಗಳನ್ನು ಬರವಣಿಗೆಯ ಮೂಲಕ ಮುಂದಿಡುತ್ತ ಆಫ್ರಿಕಾ ಸಾಹಿತ್ಯ ವಲದಲ್ಲಿ ಸದ್ಯದ ತುರ್ತು ಎನ್ನುವಂತಾಗಿದ್ದಾಳೆ. ಚಿಮಮಾಂಡಳ ಪುಸ್ತಕಗಳನ್ನ ಕದ್ದು ಓದುವವರಿದ್ದಾರೆ. ನೈಜಿರಿಯಾದ ಒಳಸುಳಿಗಳ ಬಗ್ಗೆ, ಈವರೆಗೂ ಕುರುಡಾಗಿದ್ದವರು ಆ ಕುರಿತು ಕಣ್ಣು ತೆರೆದುಕೊಳ್ಳುವುದಕ್ಕೆ ಓದುವವರಿದ್ದಾರೆ. ಇವಳನ್ನ ನಿರ್ಲಕ್ಷ್ಯ  ಮಾಡಿದವರಿದ್ದಾರೆ. ಟೀಕಿಸುವವರಿದ್ದಾರೆ. ಚಿಮಮಾಂಡ ಎಂದರೆ ಅವಳೊಬ್ಬಳು ಕ್ಷುಲ್ಲಕ ಜೀವಿ ಎನ್ನುವಂತೆ ಮೂಗು ಮುರಿಯುವವರಿದ್ದಾರೆ. ಇವಳ ಅಸಂಪ್ರದಾಯಿಕ ರೀತಿಯ ಬರವಣಿಗೆಯ ಕಾರಣಕ್ಕೆ, ಚಿಮಮಾಂಡ, ನೈಜಿರಿಯಾದವಳು ಎನ್ನುವುದನ್ನು, ನಿರಾಕರಿಸುತ್ತಿರುವವರೂ ಇದ್ದಾರೆ.

ಈ ಯಾವುದಕ್ಕೂ ಕಿವಿಗೊಡದ ಚಿಮಮಾಂಡ ಮಾತ್ರ ನಿರ್ಲಿಪ್ತವಾಗಿ ಬರೆಯುತ್ತಿದ್ದಾಳೆ. ಆದರೆ ಹಾಸ್ಯಾಸ್ಪದ ಹಾಗೂ ಅಷ್ಟೇ ಆತಂಕದ ವಿಚಾರ ಎಂದರೆ ಇಂದು ವಿಶ್ವದರ್ಜೆಯ ಲೇಖಕಿ ಎನಿಸಿಕೊಂಡಿರುವ ಚಿಮಮಾಂಡಳ ಪುಸ್ತಕಗಳು, ಅತಿ ಕಡಿಮೆ ಮಾರಾಟವಾಗುವುದು ಅವಳ ತವರು ನೆಲ ನೈಜಿರಿಯಾದಲ್ಲೇ.

ಕೆಲವು ದಿನಗಳ ಹಿಂದೆ  “ದಿ ಗಾರ್ಡಿಯನ್” ನ ಪತ್ರಕರ್ತೆ ಎಮ್ಮಾ ಬ್ರೋಕ್ಸ್‍ ಗೆ  ನೀಡಿದ ಸಂದರ್ಶನಲ್ಲಿ “Feminism isn’t so that hot. I can tell you that I would sell more books in Nigeria if I said am no longer a feminist” ಎಂದಿದ್ದಳು ಚಿಮಮಾಂಡ.

ಅವಳ ಇದೊಂದು ಹೇಳಿಕೆ‌ ನೈಜೀರಿಯಾದ ವಾಸ್ತವವನ್ನು ಜಗತ್ತಿ‌ನ ಎದುದು ತೆರೆದಿಟ್ಟಿತ್ತು. ಎಲ್ಲಾ ರಾಷ್ಟ್ರಗಳಂತೆ ನೈಜೀರಿಯಾ ಕೂಡ ತನ್ನ ಗೊಡ್ಡು ಸಂಪ್ರದಾಯಕ್ಕೆ ಇಂದಿಗೂ ಹೇಗೆ ಜೋತು ಬಿದ್ದಿದೆ ಎನ್ನುವುದನ್ನು ಸಾಭೀತು ಮಾಡಿತ್ತು.

ಸಂಪ್ರದಾಯವನ್ನ ಪ್ರಶ್ನಿಸುವ ಅಥವಾ ಆ ಬಗೆಯ ಚೌಕಟ್ಟಿನ ಹೊರಗೆ ಕಣ್ಣು ಹಾಯಿಸಿ ನೋಡುವವರು ವಿಚಿತ್ರ ರೀತಿಯ ತನ್ನ ಮಾಪನದಲ್ಲಿ ಅಳೆತೆಯಲ್ಪಡುತ್ತಾರೆ. ಅಲ್ಲಿ ವಿಸ್ಮೃತವಾಗಿ ದೃಷ್ಟಿ ಹಾಯಿಸುವ ಅವಕಾಶಗಳು ತೀರಾ ವಿರಳವಾದದ್ದು. ಚಿಮಮಾಂಡ ಸದ್ಯ ಎದುರಿಸುತ್ತಿರುವ ಸ್ಥಿತಿಯೂ ಇದೆ.

ಅಮೆರಿಕಾದಂತಹ ದೈತ್ಯ ರಾಷ್ಟ್ರದಲ್ಲಿ ಆಚರಣೆಯಂತೆ ಪಾಲಿಸಲಾಗುತ್ತಿರುವ ವರ್ಣ ವ್ಯವಸ್ಥೆಯನ್ನು ತನ್ನ “ಅಮೆರಿಕಾನ್ಹಾ” ಕಾದಂಬರಿಯಲ್ಲಿ ತಿವಿದು ಬರೆದ, ಚಿಮಮಾಂಡ ಅದೇ ಅಮೆರಿಕಾದಲ್ಲಿ ದಿಟ್ಟವಾಗಿ ತಾನು ಬರೆದದ್ದರ ಬಗ್ಗೆಯೇ ಗಟ್ಟಿಯಾಗಿ ಮಾತನಾಡಿ ಬಂದಿದ್ದಳು.

ಕಾದಂಬರಿಯಲ್ಲಿ‌ ಬರೆದ “A white boy and black girl who grow up in the same working class town in England can get together and race is secondary, but in America even if the white boy and black girl grow up in the same neighborhood race is primary” ಎನ್ನುವ ಸಾಲುಗಳನ್ನೇ ಅಮೆರಿಕಾದ‌ ನೆಲದಲ್ಲಿ ನಿಂತು ಹೇಳಿದ್ದಳು. ಅಮೆರಿಕನ್ನರು ತಮ್ಮೊಳೊಗೆ ಒಮ್ಮೆ ಇಣುಕಿ ನೋಡಿಕೊಳ್ಳುವಂತೆ ಮಾಡಿದ್ದಳು.

ಇದೇ ಚಿಮಮಾಂಡ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಗಟ್ಟಿ ದನಿಯಲ್ಲಿ ಮಾತನಾಡಿದ್ದಳು. ಕೆಲವು ತಾತ್ಕಾಲಿಕ ನಡೆಗಳು ಹೇಗೆ ಭವಿಷ್ಯದಲ್ಲಿ ಆಚರಣೆಯ ರೂಪ ಪಡೆದುಕೊಳ್ಳುವ ಸಾಧ್ಯತೆಗೆ ಒಳಗಾಗುತ್ತವೆ ಎನ್ನುವ ಸಂಕೀರ್ಣವಾದ ವಿಷಯವನ್ನು ಚಿಮಮಾಂಡ ಸಲೀಸಾಗಿ ವಿಸ್ತರಿಸುತ್ತಿದ್ದಳು. ನಾನು‌‌ ಬಿಡುಗಣ್ಣಿನಿಂದ‌ ಅವಳ ಮಾತುಗಳನ್ನು ಕೇಳುತ್ತಲೇ ಇದ್ದೆ.

ಚಿಮಮಾಂಡಳ ಮಾತುಗಳನ್ನು ಕೇಳುತ್ತಿದ್ದಂತೆ, ಮಾತುಗಳು ಆಚರಣೆಯಾಗುವ ಅನಾಹುತದ ಫಲಿತಾಂಶದಂತೆ ಕಾಣುವ ನಮ್ಮೂರಿನ ಮಾಯಿ ನೆನಪಾದಳು.

ಮಾಯಿ ನನ್ನನ್ನು ಕಾಡಿದ ಅತ್ಯಂತ ಪ್ರಖರ ಮನುಷ್ಯಜೀವಿ.‌ ಇಂದಿಗೂ ಮೈಸೂರಿನಲ್ಲಿ ತೆವಳುತ್ತಿರುವಂತೆ ಬದುಕಿರುವ ಮಾಯಿಯ ಹಿಂದೆ ಒಂದು ದಂತಕತೆಯೇ ಇದೆ.‌ ಅವಳ ಕತೆ, ಒಂದು ಕಾಲಕ್ಕೆ ಕೇವಲ ಮಾತಿನಂತೆ ಆರಂಭವಾದರು ಸದ್ಯ ಸಂಪ್ರದಾಯವಾಗಿ ರೂಪಾಂತರಗೊಂಡಿದೆ. ಕೆಲವೊಮ್ಮೆ ಅದು ಆಚರಣೆಯಂತೆಯೂ ಕಂಡಿದೆ.

ಮಾಯಿಯ ಕತೆ ಇದು. ಮಾಯಿ ಮೈಸೂರಿನ ಒಂದಿಷ್ಟು ದೂರಕ್ಕಿರುವ ಹಳ್ಳಿಯೊಂದರವಳು.‌ ಮದುವೆಯಾಗಿ ನಮ್ಮೂರಿಗೆ ಬಂದಾಗ ಹದಿನಾರರ ಹುಡುಗಿ. ಎಲ್ಲ ಸಣ್ಣ ಹುಡುಗಿಯಂತೆ ಮಾಯಿಗೂ ವಯೋಸಹಜ ಸಣ್ಣ ಪ್ರಮಾಣದ ಆಸೆಗಳಿದ್ದವು.

ಅವಳು ಮದುವೆಯಾಗಿದ್ದ ಮನೆ, ಊರಿಗೆ ದೊಡ್ಡದು. ದಿನಕ್ಕೆ ಹತ್ತಾರು ಜನರು ಬಂದು ಹಸಿವು ಎನಿಸಿದಾಗ ಊಟ ಮಾಡಿ ಹೋಗಬಹುದಾದಷ್ಟು ಸ್ಥಿತಿವಂತ ಕುಟುಂಬ.

ತೋಟ, ಹೊಲ ಹಾಗೂ ಮನೆಗಳು ಸಾಕಷ್ಟಿದ್ದವು‌. ಮಾಯಿ ಮಕ್ಕಳೂ ತಿಂದು ಉಳಿಸಬಹುದಾಗಿದ್ದ ಸಂಪತ್ತಿ‌ ಒಡತಿಯಾಗಿದ್ದವಳು. ಆದರೆ ಏನಾಗಿತ್ತೋ ಏನೋ! ಮಾಯಿ ಮನೆಯ ಆ‌ ಸಂಪತ್ತು ನಿಧಾನವಾಗಿ ಕರಗಿತ್ತು.‌ ತೋಟ, ಹೊಲಗಳು ಮಾರಾಟವಾದವು. ಮನೆಯ ಖಜಾನೆಯ ಹಣ ಕರಗಿಹೋಗಿತ್ತು. ಮಾವ, ಅತ್ತೆಯರು ತೀರಿಕೊಂಡರು. ‌ಗಂಡ ಜವಾಬ್ದಾರಿಯನ್ನು ನಿರಾಕರಿಸಿದ. ಒಬ್ಬಂಟಿಯಾದ.

ಅಷ್ಟರಲ್ಲೇ ಮಾಯಿಗೆ ನಾಲ್ಕು ಮಕ್ಕಳಾಗಿದ್ದವು. ಮಕ್ಕಳು ಬೆಳೆದು ದೊಡ್ಡವರಾದರು. ಹುಡುಗಿಯಾಗಿದ್ದ ಮಾಯಿ, ಹೆಂಗಸಾದಳು. ಕ್ರಮೇಣ ಮುಪ್ಪು ಆವರಿಸಿಕೊಂಡು ಮುದುಕಿಯೂ ಆದಳು. ಈಗ ಮಾಯಿಯ ಆಸ್ತಿ ಎಂದರೆ ಅರ್ಧ ಮನೆ ಮಾತ್ರ. ಉಳಿದ ಎಲ್ಲವೂ ಮಾರಾಟವಾಗಿದೆ. ಮಕ್ಕಳು ಮಾಯಿಯನ್ನು ಬಿಟ್ಟು ಹೊರ ನಡೆದಿದ್ದಾರೆ.‌ ಕಿರಿಯ ಮಗನೊಬ್ಬ ಅತ್ಯಂತ ಸೋಮಾರಿಯಾಗಿ ಊಟಕ್ಕೂ ಮಾಯಿಯ ಹೆಗಲೇರಿದ್ದಾ‌ನೆ.‌ ಇವತ್ತಿಗೂ ಅವನ ಸ್ಥಿತಿ ಬದಲಾಗಿಲ್ಲ.

ದುಡಿಯುವ ಚೈತನ್ಯವಿಲ್ಲದ ಮಾಯಿ ಈಗ ಬದುಕಿರುವ ರೀತಿ ನಿಜಕ್ಕೂ ‌ಸೋಜಿಗವಾಗಿದೆ. ಹೊಲ, ತೋಟ, ಮನೆಯನ್ನು ಹಿರಿಯರು ಮಾರಾಟ ಮಾಡಿ ಹೋದರು. ಆದರೆ ಮಾಯಿ ಮನೆಯ ಪಾತ್ರೆ ಸಾಮಾನುಗಳನ್ನು ಬೀದಿಯ ಹೆಂಗಸರಿಗೆ ಅಡವಿಟ್ಟಿದ್ದಾಳೆ, ಮಾರಿದ್ದಾಳೆ.‌ ಅದರ ಹಣದಲ್ಲೇ ಬದುಕಿದ್ದಾಳೆ.‌ ಬದುಕುತ್ತಿದ್ದಾಳೆ.

ಒಂದು ಕಾಲದ ಶ್ರೀಮಂತ ಮನೆಯಾಗಿದ್ದರಿಂದ ಕಂಚು, ಹಿತ್ತಾಳೆಯ ಪಾತ್ರೆ ಪಗಡೆಗಳು ಅಟ್ಟದಿಂದ‌‌ ಕೆಳಗಿಳಿಯುತ್ತಲಿವೆ. ಮಾರಾಟವಾಗುತ್ತಿವೆ. ಇಂದಿಗೂ ಖಾಲಿಯಾಗಿಲ್ಲ.

ಹೀಗೆ ಬದುಕುತ್ತಿರುವ ಮಾಯಿ ನಮ್ಮೂರಿನ‌ ಜನರಿಗೆ ಅಪಶಕುನದ ಮೂರ್ತರೂಪ. ಮಾಯಿ ಎದುರಿಗೆ ಸಿಕ್ಕರೆ ಸಾಕು, ಬೆಕ್ಕು ಎದುರಾದರೆ ಚಡಪಡಿಸಿವಂತೆ ಜನರು ಚಡಪಡಿಸುತ್ತಾರೆ. “ಅಯ್ಯೋ ಇವಳು ಸಿಕ್ಕಳಾ‌ ಭಗವಂತ” ಎಂದು‌ ನೊಂದುಕೊಳ್ಳುತ್ತಾರೆ. ಕಂಡವರೆ ಬಾಗಿಲು ಮುಚ್ಚಿಕೊಳ್ಳುವವರೂ ಇದ್ದಾರೆ.

ಹೀಗಿರುವಾಗಲೇ ಮಾಯಿ ಮದುವೆಯಾದ ಮೇಲೆ ಆ ಚಂದದ‌ ಮನೆಗೆ ಕೇಡು ಬಡಿಯಿತು ಎನ್ನುವ ಮಾತು ಒಂದಿಷ್ಟು ವರ್ಷಗಳ ಹಿಂದೆ ಆರಂಭವಾಗಿತ್ತು. ಅದೇ ಮಾತು ನನ್ನಮ್ಮನ ಕಾಲಕ್ಕೂ ಚಲಾವಣೆಯಾಗಿ ನಂಬಿಕೆಯಾಗಿತ್ತು. ಈಗ ನನ್ನ ತಲೆಮಾರಿಗೂ ಅದು ಮುಂದುವರೆದು ಆಚರಣೆಯ ರೂಪ ಪಡೆದಿದೆ.

ಆದರೆ ಸಾವಿನಂಚಿನ ಮುದುಕಿ ಮಾಯಿ ಎಂದರೆ ಮುಖ ತಿರುಗಿಸುತ್ತಾರೆ. ಅವಳು ಬರುತ್ತಿದ್ದಾಳೆ ಎಂದರೆ ಓಡುವವರಿದ್ದಾರೆ. ಒಟ್ಟಿನಲ್ಲಿ ಮಾಯಿಯ ಮುಖ ನೋಡಿದರೆ ಕೇಡು ಎನ್ನುವುದು ನಮ್ಮ ತಲೆಮಾರಿಗೆ ಅಮವಾಸ್ಯೆಯ ದಿನ ಒಳಿತು ಸಲ್ಲದು ಎನ್ನುವಷ್ಟೇ ಬಲವಾದ ನಂಬಿಕೆ ಮಾಯಿಯ ಮೊರೆ ಧಿಕ್ಕರಿಸುವುದಕ್ಕೂ ಇದೆ.

ಇದೊಂದು‌‌ ನೆನಪು ಆಗಾಗ ಕಾಡುತ್ತದೆ. ನಾನು ಹತ್ತನೇ ಕ್ಲಾಸ್ ಎಕ್ಸಾಂ ಬರೆಯಲು ಹೊರಟಿದ್ದಾಗ ಮಾಯಿ ಎದುರಾಗಿಬಿಟ್ಟಿದ್ದಳು. ಅವಳ ಕಂಡವಳೇ ನನ್ನಮ್ಮ‌ ನಡುಬೀದಿಯಲ್ಲಿ ತನ್ನ ಸೆರಗಿನ ತುದಿಯಿಂದ‌‌ ದೃಷ್ಟಿ ತೆಗೆದು ನನ್ನನ್ನು ಎಕ್ಸಾಂ ಗೆ ಕಳುಹಿಸಿದ್ದಳು.

ನನ್ನಮ್ಮ ಕೂಡ ಬೀದಿಯ ಉಳಿದ ಹೆಂಗಸರಂತೆ ನಡೆದುಕೊಂಡಿದ್ದು ಸಿಟ್ಟು ತರಿಸಿತ್ತು.  ಬೀದಿಯ ಹೆಂಗಸರು ಮಾಯಿಯ ಬಗೆ ಹೊಂದಿರುವ ಧೋರಣೆಗಳು ಕಾಡುಪಾಪದಂತದ್ದು ಎನಿಸಿತ್ತು.  ಮಾಯಿಯ ಜತೆ ಕೂತು ಒಮ್ಮೆಯಾದರೂ ಮಾತನಾಡುವವರು ಊರಿನಲ್ಲಿ ಇರಬೇಕಿತ್ತು ಎಂದು ಈಗಲೂ ಅನಿಸುತ್ತದೆ.

ಅಮ್ಮ ಸೆರಗಿನ ತುದಿಯಿಂದ‌ ದೃಷ್ಠಿ ತೆಗೆದು ಕಳುಹಿಸಿದ್ದು ಅಷ್ಟೇ‌. ಆದರೆ ನಾನು ಎಕ್ಸಾಂ ಮುಗಿಸಿ ಬರುವ ಹೊತ್ತಿಗೆ ಮಾಯಿ ರಸ್ತೆಯಲ್ಲಿ ಅಚಾನಕ್‌‌ ಎದುರಾಗಿದ್ದಳು. ಹದಿನೈದರ ಹುಡುಗನಾಗಿದ್ದ ನಾನು ಅವಳನ್ನೇ ನೋಡುತ್ತ ನಿಂತುಬಿಟ್ಟೆ. ನಾನು‌ ನಿಂತು ಬಿಟ್ಟಿದ್ದನ್ನು ನೋಡಿದ ಮಾಯಿ “ಕಲ್ಲುಸಕ್ಕರೆ ಕರಗಿಸಬಹುದು, ಕಲ್ಲನ್ನು ಕರಗಿಸಲಾಗುವುದಿಲ್ಲ” ಎಂದು ದಾಸರು ವಾಣಿಯನ್ನು ಹೇಳುವಂತೆ ಅದೊಂದು ಮಾತನ್ನು ಹೇಳಿ ಹೊರಟು ಹೋದಳು.

ಈಗಲೂ ನನ್ನ ಪಾಲಿಗೆ ಅವಳ ಮಾತು ಮಹತ್ತರವಾದ ರೂಪಕ.‌ ಕರಗಬಹುದಾಗ ಕಲ್ಲುಸಕ್ಕರೆ, ಕರಗಲು ಅಸಾಧ್ಯವಾಗಿರುವ ಕಲ್ಲು ಬಹುದೊಡ್ಡ ಕಾವ್ಯದ ಇಮೇಜ್ ನಂತೆ ಕಾಣುತ್ತಿದೆ. ಮಾಯಿಯ ಮಾತುಗಳನ್ನು ಮತ್ತೆ ಮತ್ತೆ ನೆನೆದು ನಾನು ಆಶ್ಚರ್ಯಗೊಳ್ಳುತ್ತೇನೆ.

ಈಗ ನನಗೆ ಕಾಡುವುದು ಮಾಯಿಯ ಕುರಿತು ಈ ಬಗೆಯ ನಂಬಿಕೆಗಳು ಟಿಸಿಲೊಡೆದದ್ದು ಎಲ್ಲಿ ಎನ್ನುವುದು?

ಒಂದು ಕಾಲದ ನಂಬಿಕೆಯನ್ನು ಇಂದು ಆಚರಣೆ ಎನ್ನುವಂತೆ ನಡೆಸುತ್ತಿರುವವರು ಅಸಲಿತ್ತನ್ನು ಪರೀಕ್ಷಿಸುವ ಕೆಲಸಕಕ್ಕೆ ಮುಂದಾಗದೇ ಇರುವುದು ಏಕೆ ಎನ್ನುವುದು.

ಮಾಯಿ ಒಬ್ಬಳು ಇರದೇ ಹೋಗಿದ್ದರೆ ಅವಳ ಮಕ್ಕಳು ಓದಲಾಗುತ್ತಿರಲಿಲ್ಲ. ಗಂಡನಿಂದ ಉಳಿಸಿದ ಆಸ್ತಿಯನ್ನು ಮಕ್ಕಳು ಹಂಚಿಕೊಂಡಿದ್ದಾರೆ. ಅವಳು ಉಳಿಸದೇ ಹೋಗಿದ್ದರೆ ಮಕ್ಕಳು ಕೂಲಿ ಮಾಡಬೇಕಾಗಿತ್ತು. ಇಂದಿಗೂ ತನ್ನ ಇಳಿವಯಸ್ಸಿನಲ್ಲಿ ಸೋಮಾರಿ ಮಗನಿಗೆ ಊಟ ಹಾಕುತ್ತಿರುವ, ಕೊರತೆ ಎನಿಸಿದಂತೆ ನೋಡುತ್ತಿರುವ ಮಾಯಿ ಅದು ಹೇಗೆ ಅಪಶಕುನವಾಗುತ್ತಾಳೆ?

ಅವಳು ಹಿತ್ತಾಳೆ ಹಂಡೆಯನ್ನು ಬಿಡುಗಾಸಿಗೆ ಅಡವಿಡುವಾಗ ಅವಳೊಂದಿಗೆ ಮಾತನಾಡುವ, ಚೌಕಾಸಿ ಮಾಡುವ ಬೀದಿಯ ಹೆಂಗಸರು, ಮಾಯಿಯ ಸಾಮಾನ್ಯ ಕ್ಷಣದಲ್ಲೂ ಜತೆ ಕೂತು ಮಾತನಾಡಬಹುದಲ್ಲ? ಅವಳ ಮನೆಯ ಪಾತ್ರೆಗಳನ್ನು‌ ಪುಡಿಗಾಡಿಸಿಗೆ ಕೊಳ್ಳುವಾಗ ಅವಳ ಅಪಶಕುಕನ ತಾಕುವುದಿಲ್ಲವಾ? ಆಚರಣೆಯಾಗಿರುವ ಎಷ್ಟೋ ವರ್ಷಗಳ ಮಾತು ಕುಸಿಯುವುದಿಲ್ಲವಾ?

ಚಿಮಮಾಂಡ ಹೇಳಿದ, ಮಾತು ಆಚರಣೆಯಾಗುವುದು ಎಂದರೆ ಇದೇ. ಅವಳು ಸಂಪ್ರದಾಯಿಕ ಎಂದು ಗುರುತಿಸಿರುವ ಮನಸ್ಥಿತಿ ಕಾಣಸಿಗುವುದು ಇದೇ ಸ್ಪೇಸ್ ನಲ್ಲಿ ಎನಿಸುತ್ತದೆ. ಮಾಯಿಯ ಕುರಿತು ಮೊದಲಿಗೆ ಒಳ್ಳೆಯ ಮಾತುಗಳ‌ ಬಿತ್ತನೆಯಾಗಿದ್ದರೆ, ಈ ತಲೆಮಾರಿನ‌ ಹುಡುಗರ ಮಾಯಿಯನ್ನು ಅದೇ ದಾಟಿಯಲ್ಲಿ ಕಾಣುವ ವಿಫುಲ ಅವಕಾಶಗಳು ಇರುತ್ತಿದ್ದರಬಹುದು. ಮಾಯಿ ಒಬ್ಬಳು ಸಾಹಸಿ ಎಂದು ಮಾತು ಆರಂಭವಾಗಿದ್ದರೆ, ಮುಖ ನೋಡಿದಕ್ಕೆ ದೃಷ್ಠಿ ತೆಗೆದ ನನ್ನಮ್ಮ ಅವಳ ಬದುಕನ್ನೇ ನನಗೆ ಉದಾಹರಣೆಯಾಗಿ ನೀಡುವ ಸಾಧ್ಯತೆಗಳಿತ್ತು.

ಆದರೆ ಮಾಯಿಯ ಕುರಿತು ಬಿತ್ತನೆಯಾಗಿರುವ ಬೀಜವೇ ಬೇರೆ. ಹಾಗಾಗಿ ಫಲವೂ ಬಿನ್ನವಾಗಿದೆ. ಚಿಮಮಾಂಡಳನ್ನ ಓದುತ್ತ, ಅವಳ ಇಂಟರ್ ವ್ಯೂ ಗಳನ್ನು ನೋಡುತ್ತಿದ್ದಂತೆ ಮಾಯಿಯೂ ನೆನಪಾಗುತ್ತಿದ್ದಳು. ಅದೊಮ್ಮೆ ಮಾಯಿಗೂ ಚಿಮಮಾಂಡಳಂತೆ ಪ್ರಶ್ನಿಸುವ ಅವಕಾಶ ಇದೆ ಎನ್ನುವುದು ಗೊತ್ತಿದ್ದರೆ ಅವಳ ಪ್ರಶ್ನೆಗಳು ಎಷ್ಟು ತೀಕ್ಷ್ಣವಾಗಿರುತ್ತಿದ್ದವು ಎನ್ನುವ ಕುತೂಹಲ ಇದ್ದೇ ಇದೆ. ಅವಳು ಸಾಯುವ ಮೊದಲು ಕೇಳಬೇಕು ಅಷ್ಟೇ.

ಹೀಗೆ ಮಾಯಿ ಮತ್ತು ಚಿಮಮಾಂಡ ಒಟ್ಟಿಗೆ ನಿಂತುಬಿಟ್ಟಿದ್ದಾರೆ ನನ್ನೊಳಗೆ. ಈ ನಡುವೆ
ಸದ್ಯ ಗುಂಗಿನಲ್ಲಿರುವಂತೆ ಮಾಡಿರುವುದು ಇದೊಂದೆ. Gender isn’t biology, It is sociology ಎನ್ನುವ ಚಿಮಮಾಂಡಳ ಮಾತು.

‍ಲೇಖಕರು avadhi

15 October, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading