ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

For whom the bell tolls?

ಮೊನ್ನೆ ಫ್ರಾನ್ಸಿನ ನೀಸ್ ಕಡಲ ಕಿನಾರೆಯಲ್ಲಿ ‘ಬ್ಯಾಸ್ಟೈಲ್ ಡೇ’ ಆಚರಿಸಲು ಸಾವಿರಾರು ಜನರು ಸೇರಿದ್ದರು. ಜಗತ್ತು ತುಂಬಿಕೊಟ್ಟ ನಂಟು, ಸೌಂದರ್ಯವನ್ನು ಆಸ್ವಾದಿಸುತ್ತಾ ಸಾವಿನ ಸದ್ದಿನ ಅರಿವೇ ಇಲ್ಲದಂತೆ ಆನಂದದಲ್ಲಿದ್ದರು. ಶಾರ್ಪ್ನರಿನೊಳಗೆ ಪೆನ್ಸಿಲ್ ಪುಡಿಯಾಗುವಂತೆ ಅವರು ಲಾರಿಯಡಿ ಸಿಲುಕಿ ಪ್ರಾಣಬಿಟ್ಟಿದ್ದರು. ಆ ದೈತ್ಯ ಬಿಳಿ ಲಾರಿಯ ಮುಂದೆ ಒಂದು ಕ್ಷಣದಲ್ಲಿ ಅವರ ಜಗತ್ತು ಕತ್ತಲಲ್ಲಿ ಕರಗಿಹೋಗುತ್ತಿತ್ತು.

avadhi-column-nagashree- horiz-editedಅಲ್ಲೆ ಸತ್ತ ಮಗುವೊಂದರ ಶವದ ಬಳಿ ಗೊಂಬೆಯೊಂದು ಮಲಗಿರುವ ಚಿತ್ರ ಪತ್ರಿಕೆಗಳಲ್ಲಿ ಬಂದಿತ್ತು. ಚಿತ್ರಕಾರನೊಬ್ಬ ತೀರಿಹೋದ ಮಗುವಿನ ದೇಹದ ಹತ್ತಿರದಲ್ಲಿದ್ದ ಆ ಗೊಂಬೆ ಎದ್ದು ಕಣ್ಣೀರು ಸುರಿಸಿ ನಡೆದು ಹೋಗಿ ಮರ್ಮಕ್ಕೆ ತಗುಲಿದಂತೆ ಕ್ರೌರ್ಯವನ್ನು ಚಿತ್ರಿಸಿದ್ದ.

ತುಂಬಾ ವಯಸ್ಸಾದ ಹಿರಿಯರೊಬ್ಬರು, ಈ ಬಗ್ಗೆ ಬಹಳ ನೋವಿನಿಂದ ಮಾತಾಡಿ “ಕೃಷ್ಣಾವತಾರದ ಕೊನೆಯ ದಿನಗಳು” ಎಂಬ ಪುಸ್ತಕವನ್ನು ಕೊಟ್ಟಿದ್ದರು.

ಯಾದವರೆಲ್ಲಾ ಹೇಗೆ ತಮ್ಮೊಳಗೆ  ಬಡಿದಾಡಿ ಸತ್ತರು,  ತನ್ನ ಕುಲದ ಸಂಕಟ ನೋಡಲಾಗದೆ ಕೃಷ್ಣನ ಕಾಲಿಗೆ ಬಾಣ ತಗುಲಿ ಸಾಯುವ ವಿವರಗಳನ್ನೆಲ್ಲಾ ಅವರು ಹೇಳುತ್ತಿದ್ದರು. ಅವರ ಮುಖದಲ್ಲಿ ಥೇಟು ಬಾಣ ತಗುಲಿಸಿಕೊಂಡು ಸಾವಿಗಾಗಿ ಕಾಯುವವನ ವಿಧೇಯ ನೋವಿತ್ತು. ಯುದ್ಧದಲ್ಲಿ ಸೋತ ಗುಲಾಮನಂತೆ, “ನಿನ್ನ ಮಕ್ಕಳಿಗೆ ನೀನು ಈ ಲೋಕದ ಕುರಿತು ಏನು ಹೇಳುತ್ತಿಯಾ ಮಗೂ” ಎಂದು ಕ್ಷೀಣವಾಗಿ ಉಸುರಿ, ಉತ್ತರವೇ ಇಲ್ಲದ ಪ್ರಶ್ನೆಯಂತೆ ಅವರು ತೆರಳಿದ್ದರು.

ಅದು ೨೦೦೪ರ ಡಿಸೆಂಬರ್ ೨೪. ನಮ್ಮ ಕಾಲೇಜಿನಿಂದ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ವಿಶಾಖಪಟ್ಟಣಕ್ಕೆ ಹೋದವರು ವಾಪಾಸು ಬರುವಾಗ ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಇಳಿದಿದ್ದೆವು. ಮುಂದಿನ ಟ್ರೈನಿಗೆ ಸ್ವಲ್ಪ ಸಮಯ ಇದ್ದುದ್ದರಿಂದ ಬೆಳಗ್ಗೆ ಇನ್ನೂ ಇಳಿಯದ ನಿದ್ದೆಯಲ್ಲಿ ಮರೀನಾ ಬೀಚಿನ ಸೂರ್ಯೋದಯ ನೊಡಲು ಹೋಗಿ, ಹೊಸ ಊರಿನ ಸಮುದ್ರ ನೋಡಿ ಖುಷಿಯಲ್ಲಿದ್ದೆವು. ಮತ್ತೆರಡು ದಿನಕ್ಕೆ ತ್ಸುನಾಮಿ ಅಪ್ಪಳಿಸಿ ಮರೀನಾ ಬೀಚು ರಣಭಯಂಕರವಾಗಿತ್ತು. ಎರಡು ದಿನ ಮೊದಲು ಅದೇ ಜಾಗದಲ್ಲಿ ಅದೇ ಹೊತ್ತು ನಾವಲ್ಲಿ ಇದ್ದೆವೆಂದು ನೆನೆಸಿಕೊಂಡು ಆಘಾತವಾಗುತ್ತಿತ್ತು. ಅಂದು ರಾತ್ರಿ ನಾನು ನಿದ್ದೆ ಮಾಡಿರಲಿಲ್ಲ. ಆಮೇಲೆ ಕೆಲ ವರ್ಷಗಳ ನಂತರವೂ ಅದರ ವಿಡಿಯೋ ನೊಡುತ್ತಾ ಬೆಚ್ಚಿ ಬೀಳುತ್ತಿದ್ದೆ. ಆ ಉದ್ದನೆಯ ದೈತ್ಯ ಅಲೆಗಳು ನನ್ನನ್ನು ಕಬಳಿಸಿದ್ದರೆ ಅಂತ ನೆನೆಸಿ ಭಯಗೊಳ್ಳುತ್ತಿದ್ದೆ. ನಾನು ಸ್ವಲ್ಪ ದೂರದಲ್ಲಿ ತಪ್ಪಿಸಿಕೊಂಡ ಆ ಸಾವು ಇನ್ನೂ ನನ್ನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದೆ.

ಈಗಲೂ ದೂರದ ಸಾವಿನ ಸದ್ದುಗಳು ಕೇಳಿದಾಗ ಒಳಗಿನಿಂದ ಮುದುಡುತ್ತೇವೆ. For whom the bell tolls?  ಎಂದು ಕೇಳುವ ಇಂಗ್ಲಿಷ್ ಕವಿ ಜಾನ್ ಡನ್ ಯಾರೋ ಮಣ್ಣಾಗುತ್ತಿರುವ ದುಗುಡವನ್ನು ಗಂಟೆಯ ಸದ್ದಿನಂತೆ ಹೇಳುತ್ತಾನೆ. ಯಾರದೋ ಸಾವಿನ ದೂರದ ಓಲಗದ ಸದ್ದು ನಮ್ಮನ್ನು ಕುಗ್ಗಿಸುತ್ತದೆ. ಆದರೆ ಅಷ್ಟೇ ಅಚ್ಚರಿಯಾಗುವಂತೆ  ನಮ್ಮ ಮಸಣ ವೈರಾಗ್ಯವು ಕರಗಿ ಹೋಗಿ ಗೋರಿಯ ಮೇಲೆ ಅರಳುವ ಹೂವಂತೆ ಮನಸ್ಸು ಎಲ್ಲೋ ನಮ್ಮನ್ನು ಬದುಕಿಸಿ ಬಿಡುತ್ತದೆ.

tvಮೊನ್ನೆ ಉಡುಪಿ ಬಳಿಯ ಕುಂದಾಪುರದಲ್ಲಿ ನಡೆದ ಅಪಘಾತದಲ್ಲಿ ಬೆಣ್ಣೆ ಬೆಣ್ಣೆ ಮುದ್ದು ಮಕ್ಕಳು ಮಡಿದಿದ್ದರು. ಪೋಲಿಸರು ಕಣ್ಣೀರು ಸುರಿಸುತ್ತಾ ಆ ಮಳೆಯಲ್ಲಿ ಮಕ್ಕಳನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ದಿದ್ದರಂತೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ನನ್ನ ಗೆಳತಿಗೆ ಮಕ್ಕಳ ಶವ ನೋಡಿ ತಡೆಯಲಾಗದೆ ಆಗಷ್ಟೇ ಶಾಲೆಗೆ ಹೋದ ಮಗಳ ಟೀಚರಿಗೆ ಫೋನು ಮಾಡಿ,

’ದಮ್ಮಯ್ಯ ನಿಮ್ಮ ಡ್ರೈವರಿಗೆ ನಿಧಾನ ಓಡಿಸಲು ಹೇಳಿ, ಯಾಕಾದರೂ ಮಕ್ಕಳನ್ನು ಶಾಲೆಗೆ ಕಳಿಸಬೇಕು ಹೇಳಿ”,ಅಂತ ಆ ಶವದ ಮುಂದೆಯೇ ಜೋರಾಗಿ ಬೊಬ್ಬಿಟ್ಟಿದ್ದಳಂತೆ!

“ಶಾಲೆಯವರಿಗೆ ಗಾಬರಿಯಾಗಿರಬಹುದು, “ಮೇಡಂ ಪ್ಲೀಸ್ ಅಳ್ಬೇಡಿ” ಅಂತ ಹೇಳುವಾಗ ಅವರಿಗೂ ದುಃಖ ಬರ್ತಿತ್ತು. ಕಣ್ಣಾರೆ ಆ ಮಕ್ಕಳ ಛಿದ್ರ ದೇಹ ನೋಡಿ ಒಂದು ಸಲ ಜೀವನೇ ಹಾರಿತ್ತು” ಅಂದಿದ್ದಳು

ನನ್ನ ಪಕ್ಕದ ಅಪಾರ್ಟ್ಮೆಂಟಲ್ಲಿ ಒಬ್ಬರು ಹೆಂಗಸು ತೀರಿಕೊಂಡಿದ್ದರು.  ನನಗೆ ಅವರ ಮುಖ ಪರಿಚಯವಿತ್ತೇ ಹೊರತು ಅವರ ಯಾರು? ಎಲ್ಲಿಯವರು ಎಂಬ ವಿವರಗಳು ಗೊತ್ತಿರಲಿಲ್ಲ. ಅವರ ಗಂಡ ದಿನಾಲೂ ಎದುರಿನ ರಸ್ತೆಯಲ್ಲಿ ವಾಕ್ ಮಾಡುತ್ತಾ ತನ್ನ ನೀಲಿ ಓಮ್ನಿ ಕಾರಿನಲ್ಲಿ ಓಡಾಡಿಕೊಂಡಿದ್ದರು. ರಸ್ತೆಯಲ್ಲಿ ಆಡುವ ಪುಟಾಣಿ ಮಕ್ಕಳಿಗೆ ಚಾಕಲೇಟು ಕೊಡುತ್ತಿದ್ದರು.

ಇದ್ದಕ್ಕಿದ್ದಂತೆ ಅವರ ಮನೆಯಲ್ಲಿ ಹೆಂಡತಿ ತೀರಿಕೊಂಡು ಬ್ಯಾಂಡಿನ ಸದ್ದು ಕೇಳಿಸುತ್ತಿತ್ತು. ನನ್ನ ಜೀವ ಕುಗ್ಗಿ ಹೋಗಿತ್ತು.  ನಮ್ಮ ಊರಲ್ಲಿ ಸಾವಾದರೆ ಊರಿನ ಜನರೆಲ್ಲಾ ಅಳುವವರನ್ನು ಸಂತೈಸುವುದಕ್ಕಿಂತ ಸದ್ದಿಲ್ಲದೆ, ಶವಸಂಸ್ಕಾರಕ್ಕೆ ಸಹಾಯ ಮಾಡುವುದನ್ನು ನೊಡಿದ್ದೆ. ಇಲ್ಲಿ ತೀರಿ ಹೋದವರ ದೇಹವನ್ನು ರಸ್ತೆಯ ನಡುವಲ್ಲೇ, ಇಟ್ಟು ಅಂತ್ಯ ಸಂಸ್ಕಾರದ ಕ್ರಮಗಳನ್ನೆಲ್ಲಾ ಮುಗಿಸುತ್ತಿದ್ದರು. ಪಕ್ಕದ ಮನೆಯ ಒಂದಿಬ್ಬರು ಹೆಂಗಸರನ್ನು ಬಿಟ್ಟರೆ ಇನ್ಯಾರೂ ಅಲ್ಲಿ ಸುಳಿಯಲಿಲ್ಲ. ಅವರ ಹತ್ತಿಪ್ಪತ್ತು ನೆಂಟರಿಷ್ಟರು ಚಪ್ಪರದ ಒಳಗೆ ಶರಬತ್ತು ಕುಡಿಯುತ್ತಾ ಇಳಿಮುಖವಿಟ್ಟುಕೊಂಡೇ್ ಮೆತ್ತಗೆ ನಗುತ್ತಾ ಹರಟುತ್ತಿದ್ದರು. ಬ್ಯಾಂಡು, ಹೂಮಾಲೆಯ ಸಡಗರವೆಲ್ಲಾ ಮುಗಿದು ಎಲ್ಲರೂ ಹೋದ ಮೇಲೆ ಮನೆಯ ಮುಂದಿನ ಖಾಲಿ ಚೇರಿನಲ್ಲಿ ಆ ಹೆಂಗಸಿನ ಗಂಡ ಸುಮ್ಮನೆ ಕೂತಿದ್ದರು. ಮತ್ತೆ ಎರಡೇ ದಿನಕ್ಕೆ ಅವರು ಚುರುಕಾಗಿ ಹತ್ತು ದಿನದ ಸೂತಕ ಮುಗಿಸಿ ಓಮ್ನಿಯನ್ನೂ ಇನ್ನೂ ಬಾಲ್ಕು ಬಾರಿ ಓಡಿಸುತ್ತಿದ್ದರು. ರಸ್ತೆಯ ಬದಿಯ ಕಲ್ಲ ಬೆಂಚಿನಲ್ಲಿ ಒಬ್ಬರೇ ರಾತ್ರಿ ೧೦ ಗಂಟೆಯ ತನಕ ಕೂತು ಮಕ್ಕಳಿಗೆ ಮಿಠಾಯಿ ಕೊಡುತ್ತಿದ್ದರು. ಸ್ವಲ್ಪ ಜಾಸ್ತಿಯೇ ಮಾತಾಡುತ್ತಿದ್ದರು.

***

ನಮ್ಮ ಮನೆಯಲ್ಲೊಂದು ಬಿಳಿ ಪಾರಿವಾಳ ಇತ್ತು. ಬೆಳಗ್ಗಿನ ಹೊತ್ತು ಅದು ಬಾನ ತುಂಬಾ ಹಾರಿ ಏಕಾಂತವನ್ನು ಅನುಭವಿಸಿ ಮನೆಗೆ ಮರಳಿ ಮಾಡಿನ ತುದಿಯಲ್ಲಿ ಮಳೆಯಲ್ಲಿ ಮಿಂದು ಚಂದ ಕೂತಿರುತ್ತಿತ್ತು. ಮನೆಯ ಒಳಗೆ ಚಾವಡಿಯಲ್ಲೂ ನಮ್ಮ ಜೊತೆಗಿರುತ್ತಿತ್ತು. ಅದು ಹೇಗೋ ಒಂದು ರಾತ್ರಿ ಬೆಕ್ಕೊಂದು ಅದನ್ನು ಕೊಂದು ಹಾಕಿತು, ಅದರ ಮುರಿದ ರಕ್ತಮಯ ಕುತ್ತಿಗೆ ನೊಡಲಾಗದೆ ನಾನು ಎರಡು ದಿನ ಆ ಗೂಡಿನ ಹತ್ತಿರ ಕೂತು ಅಳುತ್ತಿದ್ದೆ. ಸಿಟ್ಟಲ್ಲಿ, ಆ ಬೆಕ್ಕು ಕಂಡರೆ ಓಡಿಸುತ್ತಿದೆ. ಕೆಲವು ದಿನದ ನಂತರ ಅದೇ ಬೆಕ್ಕನ್ನು ಇನ್ನೊಂದು ನಾಯಿ ಕೊಂದುಹಾಕಿತು. ಆಗ ನಾನು ಘಾಸಿಗೊಂಡು,ದುಃಖವಾಗಿ ಏನೋ ಗೊಂದಲವಾಗುತ್ತಿತ್ತು. ಇದೆಲ್ಲಾ ನಿಧಾನವಾಗಿ ಮಾಗುವ ಹೊತ್ತಿಗೆ ಮನೆಯ ಸುತ್ತ ಪುಟ್ಟಪುಟ್ಟ ಹೊಸ ಬೆಕ್ಕು, ನಾಯಿಗಳು ಬರುತ್ತಿದ್ದವು. ಹಾಗೆಯೇ ಸಾಯುತ್ತಿದ್ದವು. ಆದರೆ ಯಾವ ಜೀವ ಜಗತ್ತುಗಳೂ ನಾಶವಾಗಿರಲಿಲ್ಲ.

IMG_5083ಹೀಗೆ ಅಲ್ಲಿ ಬೆಕ್ಕು, ನಾಯಿ, ಹಕ್ಕಿ, ಕೋಳಿ ಯಾವ ಜೀವ ಜಂತುಗಳೂ ನಶಿಸುತ್ತಿಲ್ಲ. ಕಾಡಿನ ಎಲ್ಲ ಜಿಂಕೆಗಳನ್ನು ಹುಲಿಯೂ ಕೊಲ್ಲುವುದಿಲ್ಲ. ಆದರೆ ಹಸಿವು ಮುಗಿದ ಮೇಲೆ ಪ್ರಾಣಿಗಳಂತೆ ಸ್ವಸ್ಥ ನಿದ್ರಿಸಲು ನಮಗೆ ಸಾಧ್ಯವಾಗದೆ ಚಂದದ ಹೂವಿನ ಬಣ್ಣ ಕಾಣಿಸುತ್ತದೆ. ವಿಶಾಲವಾದ ಭೂಮಿಯ ಸೊಬಗು ಕಾಣಿಸುತ್ತದೆ. ತ್ಸುನಾಮಿ ಬಡಿದ ಮೇಲೂ ಸಾಗರದ ಸಂಪತ್ತು ಪುನಃ ಆಸೆ ಮೂಡಿಸುತ್ತದೆ.

ನಮ್ಮನ್ನೂ ಸೇರಿಸಿ ಪ್ರಕೃತಿಯೆಂಬ ನಾಜೂಕು ದೇವತೆ ಅದು ಹೇಗೆ ನಿಭಾಯಿಸುತ್ತಿದ್ದಾಳೋ ಎಂತಹ ನಿಗೂಢವಿದು ಅನ್ನಿಸುವಾಗಲೇ ತಿಳಿವಿರುವ ಮನುಷ್ಯ ಮತ್ತೆ ಮತ್ತೆ ತಪ್ಪೆಸಗುತ್ತಾನೆ. ವಿಚಾರವಂತನೇ ಅಲ್ಲ ಅನ್ನಿಸುವಷ್ಟು ಬಾಲಿಶವಾಗುತ್ತಾನೆ. ಕ್ರಾಂತಿ, ದಂಗೆ, ಧರ್ಮ ದೇವರು ಎಂದು ಇನ್ನೆಲ್ಲೋ ಓದಿದ ಸಂಗತಿಗಳು ತಿದ್ದಲಾಗದ ಕಥೆಗಳಂತೆ,  ಕಾಣಿಸುತ್ತದೆ.

ಪು.ತಿ. ನರಸಿಂಹಾಚಾರ್ಯರು ಶ್ರೀ ವೈಷ್ಣವರು. ಅವರು, “ನಾನು, ಪೂಜೆ ಮಾಡುವಾಗ ಮನಸ್ಸಲ್ಲಿರುವ ದೇವರು ರಾಮ, ಕೃಷ್ಣ, ಅಲ್ಲಾ, ಯೇಸು, ಇನ್ಯಾರದರೂ ಆಗಬಹುದು, ನಾನು ಪೂಜೆಯನ್ನೇನಾದರೂ ಮಾಡುವುದಾದರೆ ಅದು ನನ್ನದೇ ರೀತಿಯಲ್ಲಿ, ಸ್ವಯಂ ಶುದ್ಧೀಕರಣಗೊಳ್ಳುವುದಕಷ್ಟೇ, ನನ್ನ ಕಾವ್ಯದ ಮೂಲಕ ಮತ್ತು ನನ್ನ ಧಾರ್ಮಿಕ ಅನುಭವದ ಮೂಲಕ ನಾನು ಇಡೀ ಮಾನವ ಕುಲವನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದೇನೆ”, ಎಂದಿದ್ದಾರೆ. ಅವರ ದೇವರು ವಿಕಸಿತಗೊಳ್ಳುತ್ತಿದ್ದ. ಅವರ ಪ್ರಕಾರ ನಾವು ಯಾವುದನ್ನೂ ನಿರಾಕರಿಸಬಾರದು, ನಂಟನ್ನೂ ಇಟ್ಟುಕೊಳ್ಳಬಾರದು. ಇವೆರಡೂ ಇಲ್ಲದ ನಿರೀಶ್ವರವಾದಿಯ ಹಾಗೆ ಇರಬೇಕೆಂದು ಅವರು ಹೇಳಿದ ಮಾತುಗಳನ್ನು ಮೆಲುಕುಹಾಕುತ್ತಿದ್ದೆ. ಲಂಕೇಶರು ಒಂದು ಕಡೆ ಹೇಳಿದ ಸಂಗತಿಯೊಂದು ನೆನಪಾಗುತ್ತಿದೆ.

ಅದೊಂದು ದಿನ ವಾಷಿಂಗ್ಟನ್ ನಗರದ ಕೊರೆವ ಚಳಿಯಲ್ಲಿ ಗುರಿ ತಿಳಿಯದ ಹಕ್ಕಿಯಂತಹ ವಿಮಾನವೊಂದು ಧರೆಗಿಳಿದು ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿತ್ತು. ವಿಮಾನದಲ್ಲಿದ್ದ ಕೆಲವರು ಹಿಮ ತುಂಬಿದ್ದ ನದಿಯೊಳಗೆ ಬಿದ್ದು ಒದ್ದಾಡುತ್ತಾ ಸಹಾಯಕ್ಕೆ ಕಾಯುತ್ತಿದ್ದರು. ಆಗ ಹೆಲಿಕಾಫ್ಟರ್ ಧಾವಿಸಿ ಕೊರೆವ ನದಿಯಿಂದ ಜನರನ್ನು ರಕ್ಷಿಸಲು ಒದ್ದಾಡುತ್ತಿತ್ತು. ಛಿದ್ರವಾದ ವಿಮಾನದಿಂದ ನೀರಿಗೆ ಬಿದ್ದವರಲ್ಲಿ ಆರು ಮಂದಿ,  ಮುರಿದ ವಿಮಾನದ ರೆಕ್ಕೆಯಲ್ಲಿ ನೇತಾಡುತ್ತಿದ್ದರು. ಅವರನ್ನು ಹೇಗಾದರೂ ರಕ್ಷಿಸಬೇಕೆಂದು, ರಕ್ಷಾಣಾ ದಳದವರು ಯತ್ನಿಸುತ್ತಿದ್ದರು. ಸ್ವಲ್ಪ ತಡವಾದರೂ ರೆಕ್ಕೆಯಿಂದ ನೀರಿಗೆ ಬಿದ್ದು ಸಾಯುತ್ತಿದ್ದರು. ಮೊದಲಿಗೆ ಒಬ್ಬ ದಪ್ಪ ಮೀಸೆಯ, ಅರೆ ಬೋಳು ತಲೆಯ ಮನುಷ್ಯ ನೇತಾಡುತ್ತಿದ್ದ. ಹೆಲಿಕಾಫ್ಟರ್ ನಿಂದ ಹೊರಬಂದವರು ಹಗ್ಗ ಟ್ಯೂಬನ್ನು ಅವನಿಗೆ  ಕೊಟ್ಟರು. ಆದರೆ  ಅವನು ಪಾರಾಗದೆ ಅದನ್ನು ಎರಡನೆಯವನಿಗೆ ಕೊಟ್ಟ. ಇನ್ನೊಮ್ಮೆ ಕೊಟ್ಟಾಗ ಮೂರನೆಯವನಿಗೆ ಕೊಟ್ಟ. ಉಳಿದವವರಿಗೂ ಸರದಿಯಂತೆ ನೀಡುತ್ತಾ ಹೋದಾಗ ಎಲ್ಲರೂ ಅವಕ್ಕಾಗಿ ನೋಡುತ್ತಿದ್ದರು. ಅವರೆಲ್ಲಾ ಪ್ರಯಾಸದಿಂದ ಸಾವಿನ ಭೀಕರತೆಯಿಂದ ಪಾರಾಗಿದ್ದರು. ಕೊನೆಗೆ ಹೆಲಿಕಾಫ್ಟರ್ ಆ ದಪ್ಪ ಮೀಸೆಯ ಮನುಷ್ಯನ ಹತ್ತಿರ ಬರುವಾಗ ಆತ ನೀರಲ್ಲಿ ಮುಳುಗಿ ಸತ್ತು ಹೋದ.

nice647_071516072829

ಈ ಅನಾಮಿಕನ ತ್ಯಾಗದ ಕುರಿತು ಲೇಖಕನೊಬ್ಬ ಪ್ರಕೃತಿಯ, ವಿಷದಂತಹ ಕ್ರೌರ್ಯಕ್ಕೆ ತದ್ವಿರುದ್ಧವಾಗಿ ಮನುಷ್ಯನಲ್ಲಿ ಉಳಿವ ಮಾನವೀಯತೆಯ ಕುರಿತು ಬರೆಯುತ್ತಾನೆ. ಹೆಲಿಕಾಫ್ಟರ್ ಕೊನೆಯಲ್ಲಿ ಉಳಿದ ದಪ್ಪ ಮೀಸೆಯವನನ್ನು ರಕ್ಷಿಸಲು ಧಾವಿಸುವಾಗ ಅವನ ಕೈ ತತ್ತರಿಸಿ ಸೋತು ಮುಳುಗಿದಾಗ ಈ ಜಗತ್ತು ಕ್ರಮೇಣ ಅವನಿಗೆ ಕರಗಿ ಹೋಗಿರಬಹುದು, ಮಾಯವಾಗಿರಬೇಕು ಅನ್ನುತ್ತಾನೆ.

ಎಲ್ಲಾ ಕಾಲದಲ್ಲೂ ಪ್ರಪಂಚ ಹದಗೆಟ್ಟಿದೆ ಅಂತ ಅನ್ನಿಸುವಾಗ ಇಂತಹ ಹೀರೋಗಳು ಧುತ್ತೆಂದು ಕಾಣಿಸಿ ಬಿಡುತ್ತಾರೆ. ಮನುಷ್ಯನಲ್ಲಿ ಉಕ್ಕುವ ಮಾನವೀಯತೆಯನ್ನು ಜಗತ್ತಿಗೆ ತೋರಿಸಿ ಬಿಡುತ್ತಾರೆ.

ನಾವು ಈಗಲೂ ಮನುಷ್ಯರನ್ನು ಕ್ರೂರಿ, ಸ್ವಾರ್ಥಿ ಎಂದು ತಿಳಿಯುತ್ತೇವೆ. ವಿಮಾನದಲ್ಲಿ ಪಾರಾಗಬಹುದಾಗಿದ್ದ ಮನುಷ್ಯ ಬೆರಗಾಗುವಂತೆ ಉಳಿದವರನ್ನು ಬದುಕಿಸಿ ಸಾಯುತ್ತಾನೆ, . ನಾನಾಗಿದ್ದರೆ ಹಾಗೆ ಮಾಡುತ್ತಿರಲಿಲ್ಲವೇನೋ ಅನ್ನಿಸುವಂತೆ ಬೆಚ್ಚಿ ಬೀಳಿಸುತ್ತಾನೆ. ಆದರೆ ಮನುಷ್ಯ ಮೂಲಭೂತವಾದ ಪ್ರೇಮ ಮತ್ತು ಮಾನವೀಯತೆಯಿಂದ ಹೊರಬರಲಾರ ಅನ್ನುವುದನ್ನು ಅವನು ತೋರಿಸಿಕೊಟ್ಟಿದ್ದಾನೆ.

ನಂಟು ಮತ್ತು ನಿರಾಕರಣೆಯನ್ನು ಏಕಕಾಲಕ್ಕೆ ಅನುಭವಿಸಿದ ನಿರೀಶ್ವರವಾದಿ ಎಂದರೆ ಈ ದಪ್ಪ ಮೀಸೆಯ ಸಾಮಾನ್ಯ ಅಮೇರಿಕನ್ನನಂತೆ ಇರಬಹುದಾ ಅನ್ನಿಸುತ್ತಿದೆ.

‍ಲೇಖಕರು Admin

21 July, 2016

6 Comments

  1. Shama, Nandibetta

    ನಂಟು ಮತ್ತು ನಿರಾಕರಣೆಯನ್ನು ಏಕಕಾಲಕ್ಕೆ ಅನುಭವಿಸಿದ ನಿರೀಶ್ವರವಾದಿ ಎಂದರೆ ಈ ದಪ್ಪ ಮೀಸೆಯ ಸಾಮಾನ್ಯ ಅಮೇರಿಕನ್ನನನ್ನು ಒಮ್ಮೆ ನೋಡುವ ಻ವಕಾಶ ಸಿಕ್ಕಿದ್ದರೆ ಅನಿಸುತ್ತಿದೆ ನನಗೆ

  2. sindhu

    ವಿಹ್ವಲ ಕ್ಷಣಗಳನ್ನ ನಾಜೂಕಾಗಿ ನೇಯ್ದು ಕೊಟ್ಟಿದ್ದೀರಿ. ವಿಷಾದ ತೊಟ್ಟಿಕ್ಕುವಾಗ ಅದು ಹೂಗಿಡದ ಬೀಜದ ಮೇಲೆ ಬೀಳುವ ಹಾಗಿದೆ.
    ಗಿಡ ಚಿಗುರಿ ಮೊಗ್ಗು ಮೂಡಲಿದೆ ಎಂಬ ವಿಶ್ವಾಸ.. ವಿಷಾದದ ಬೆನ್ನಿಗೇ.
    ಇದು ಈ ಹೊತ್ತಿನ ಅವಶ್ಯಕತೆಯೂ ಹೌದು.

    ಎಲ್ಲರೂ ಎಲ್ಲ ಕಾಲದಲ್ಲೂ ರೆಸ್ಕ್ಯೂಗೆ ಹಾತೊರೆಯದೆ ಜೀವ ಕೊಟ್ಟ ಅವನ ಹಾಗೆಯೇ ಇರುವುದಿಲ್ಲ. ಆ ನಿರುಮ್ಮಳ ನೀಡುವಿಕೆ ಮೊಗ್ಗೊಡೆಯುವ ಕ್ಷಣ ಎಷ್ಟು ಅಚ್ಚರಿಯದು ಅಲ್ವಾ.

  3. Dr. Prabhakar M. Nimbargi

    What seeds has Prof. Tirumalesh sown in his recent article in Avadhi? There have been several articles on death, natural or invited as in the case the American here or suicides. Of course every one of us inch towards the inevitable sole truth every minute, second or nanosecond and so on. How we face it is the main point.

  4. Chandra

    No words just feelings…

  5. Hema

    Neerava mauna

  6. Ramesh

    Your article made us to think no one is permanent here but still everyone lives like they don’t die.. what an irony….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading