First night with ಸಂದೀಪ್ ಕಾಮತ್

ಮೊದಲ ರಾತ್ರಿಯ ಅನುಭವ
-ಸಂದೀಪ್ ಕಾಮತ
ಕಡಲ ತೀರ
honeymoons_001
ಈ ಲೇಖನದ ಶೀರ್ಷಿಕೆಯ ಸೆಳೆತದಿಂದ ನೀವು ಬಂದಿದ್ದರೆ ಮೊದಲೇ ಒಂದು ಸ್ಪಷ್ಟೀಕರಣ ಕೊಟ್ಟು ಬಿಡುವುದು ಒಳ್ಳೆಯದು! ಇಲ್ಲಾಂದ್ರೆ ನೀವು ನನಗೆ ಹಿಡಿ ಶಾಪ ಹಾಕೋದಂತೂ ಖಚಿತ.
ಮೊದಲನೆಯದಾಗಿ ನನಗಿನ್ನೂ ಮದುವೆಯಾಗಿಲ್ಲ,ಹಾಗಾಗಿ ನನ್ನ ಮೊದಲ ರಾತ್ರಿಯ ಬಗ್ಗೆ ಬರೆದಿಲ್ಲ(ಬರೆಯೋದೂ ಇಲ್ಲ ಬಿಡಿ!).ಇನ್ನು ಬೇರೆಯವರ ಮೊದಲ ರಾತ್ರಿಯ ರೋಚಕ(!?) ಕಥೆಯನ್ನೂ ನನಗೆ ಯಾರೂ ಹೇಳಿಲ್ಲ.
ಈ ಲೇಖನದ ಶೀರ್ಶಿಕೆ ’ಮೊದಲ ರಾತ್ರಿಯ ಕೊಠಡಿಯನ್ನು ಸಿಂಗರಿಸುವ ಅನುಭವ ‘ ! ಯಾಕೋ ತೀರಾ ಉದ್ದ ಅನಿಸಿತು ಅದಕ್ಕೆ ಸ್ವಲ್ಪ ಶಾರ್ಟ್ ಮತ್ತೆ ಸ್ವೀಟ್ ಆಗಿ ’ಮೊದಲ ರಾತ್ರಿಯ ಅನುಭವ’ ಅಂತ ಮಾಡಿದ್ದೀನಿ.ಯಾರಿಗಾದರೂ ಬೇಜಾರಾಗಿದ್ರೆ ದಯವಿಟ್ಟು ಕ್ಷಮಿಸಿ.
ಕೆಲವು ತಿಂಗಳ ಹಿಂದೆ ನನ್ನ ಸ್ನೇಹಿತನೊಬ್ಬನ ಮದುವೆ ನಡೆದಿತ್ತು ಬೆಂಗಳೂರಿನಲ್ಲೇ.ಸ್ನೇಹಿತ ಮಂಗಳೂರಿನವನೇ ಆದರೂ ಮದುವೆ ಬೆಂಗಳೂರಿನಲ್ಲೇ ಆಗಿತ್ತು.ಹುಡುಗ ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗಿದ್ದ.ಮನೆಯವರು ಬೇಸರದಿಂದಲೇ ಮದುವೆಗೆ ಒಪ್ಪಿ ಬಂದಿದ್ದರು.ಸ್ವಥ ಮದುಮಗನ ಮನೆಯವರೇ ಅಥಿತಿಗಳ ಹಾಗೆ ಸುಮ್ಮನೆ ಕೂತಿದ್ದರು ಮೂಲೆಯಲ್ಲಿ.
ಹಾಗೂ ಹೀಗೂ ಮದುವೆ ಸಾಂಗವಾಗಿ ನೆರೆವೇರಿತು ಅನ್ನಿ .ಆದ್ರೆ ಸಮಾರಂಭದ ಮಧ್ಯೆ ಸ್ನೇಹಿತ ನಮ್ಮನ್ನು ಕರೆದು ’ಏಯ್ ಬೆಡ್ ಸ್ವಲ್ಪ ರೆಡಿ ಮಾಡ್ರೋ ’ ಅಂದುಬಿಟ್ಟ.ನಾವು ಮೂರು ಜನ ಸ್ನೇಹಿತರು ಅವನ ಮನೆಗೆ ಧಾವಿಸಿದೆವು.ಅಲ್ಲಿ ಹೋಗಿ ನೋಡಿದ್ರೆ ಒಂದು ಮಂಚ ಅದರ ಮೇಲೆ ಒಂದು ಕರ್ಲಾನ್ ಮ್ಯಾಟ್ರೆಸ್ ಅಷ್ಟೇ ಇದೆ! ಒಂದು ಬೆಡ್ ಶೀಟ್ ಕೂಡಾ ಹಾಕಿರಲಿಲ್ಲ.ಮನಸ್ಸು ಪಿಚ್ಚೆನಿಸಿ ಹತ್ತಿರದಲ್ಲೇ ಇದ್ದ ಒಂದು ಅಂಗಡಿಗೆ ಹೋಗಿ ಹೊಸ ಬೆಡ್ ಶೀಟ್ ತಗೊಂಡು ಹೊದಿಸಿದೆವು.ಇನ್ನೊಬ್ಬ ಸ್ನೇಹಿತ ’ನಾನು ಮತ್ತೆ ಕಲ್ಯಾಣ ಮಂಟಪಕ್ಕೆ ಹೋಗಿ ಹೂ ತಗೊಂಡು ಬರ್ತೀನಿ ’ ಅಂತ ಹೋದ .ಹತ್ತು ನಿಮಿಷದಲ್ಲಿ ಹೂವಿನೊಂದಿಗೆ ಬಂದಿದ್ದ.’ಏನೋ ಇದು ಬರೀ ಗೊಂಡೆ ಹೂವು ತಂದಿದ್ದೀಯಾ ಬೇರೆ ಯಾವುದೂ ಇರ್ಲಿಲ್ವ ?’ ಅಂದಿದ್ದಕ್ಕೆ ’ಇಲ್ಲ ಕಣ್ರೋ ಇದೊಂದೇ ಸಿಕ್ಕಿದ್ದು ಏನ್ ಮಾಡ್ಲಿ ’ ಅಂದ .
ನಮಗೆ ತೋಚಿದ ಹಾಗೆ ಗೊಂಡೆ ಹೂವಿನ ದಳಗಳನ್ನು ಬಿಡಿಸಿ ಬಿಡಿಸಿ ಹಾಸಿಗೆಯ ಮೇಲೆ ಸುರಿದೆವು.ನಮ್ಮ ಡೆಕೋರೇಶನ್ ಮುಗಿದು ಇನ್ನೇನು ಬೀಗ ಹಾಕಿ ಮತ್ತೆ ಕಲ್ಯಾಣ ಮಂಟಪಕ್ಕೆ ಹೊರಡಬೇಕು ಅನ್ನೋ ಅಷ್ಟರಲ್ಲಿ ಮದುಮಗನ ಅಕ್ಕ ಬಂದುಬಿಟ್ರು ಅವರ ಪುಟ್ಟ ಮಗಳೊಂದಿಗೆ!
ನಾವು ’ಆಂಟಿ ನಾವೆಲ್ಲಾ ಸಿಂಗಾರ ಮಾಡಿದ್ದೀವಿ ಬನ್ನಿ ವಾಪಾಸ್ ಹೋಗೋಣ ’ ಅಂದಿದ್ದಕ್ಕೆ ’ನೋಡೋಣ ಏನ್ ಮಾಡಿದ್ದೀರಿ ’ ಅನ್ನುತ್ತಾ ಬೆಡ್ ರೂಮ್ ಗೆ ಹೋಗಿ ನೋಡಿದ್ರು.ನಾವು ಮಾಡಿದ ಸಿಂಗಾರ ನೋಡಿ ಬಿದ್ದೂ ಬಿದ್ದು ನಗತೊಡಗಿದರು ಅವರು.’ಥೂ ಯಾರಾದ್ರೂ ಗೊಂಡೆ ಹೂ ಹಾಕ್ತಾರೇನ್ರೋ ? ಪಾಪ ಅವರ ಮೈ ಇಡೀ ಕೆಟ್ಟ ವಾಸನೆ ಬರಲ್ವೇನ್ರೋ ’ ಅಂದ್ರು.
ನಾವು ’ಆಂಟಿ ನೀವು ಹಾಗೆಲ್ಲ ನಗಬೇಡಿ ನಮಗೆ ಈ ರೀತಿ ಫಸ್ಟ್ ನೈಟ್ ರೂಮ್ ಅಲಂಕಾರ ಮಾಡಿ ಅಭ್ಯಾಸ ಇಲ್ಲ ’ ಅಂದ್ವಿ ಸಿಟ್ಟಿನಿಂದ.
ಅದಕ್ಕೆ ಆಂಟಿ ’ ಓಹ್ ಹಾಗಾ ಹಾಗಿದ್ರೆ ಇರಿ ನನ್ನ ಪುಟ್ಟಿ ಆರನೇ ಕ್ಲಾಸ್ ನಲ್ಲಿ ಓದೋದು ಅವಳು ನಿಮಗೆ ಹೇಳಿ ಕೊಡ್ತಾಳೆ ಕಲ್ತು ಕೊಳ್ಳಿ ’ ಅನ್ನೋದಾ.
ಅವರ ಮಗಳೂ ’ಬನ್ನಿ ನನ್ನ ಹಿಂದೆ ’ ಅಂತ ಆರ್ಡರ್ ಕೊಟ್ಟೇ ಬಿಟ್ಲು.ಅವರು ಬರುವಾಗಲೇ ಬೇರೆ ಬೇರೆ ರೀತಿಯ ಹೂಗಳನ್ನು ತಗೊಂಡು ಬಂದಿದ್ರು .
ಪುಟ್ಟಿ ’ ಛೇ ರೋಸ್ ಇಲ್ಲಾಂದ್ರೆ ಅದು ಹೇಗೆ ಫಸ್ಟ್ ನೈಟ್ ರೂಮ್ ಆಗುತ್ತೆ ಅಷ್ಟೂ ಗೊತ್ತಿಲ್ಲ ’ ಅನ್ನುತ್ತಾ ಗುರಾಯಿಸಿದಳು ನಮ್ಮನ್ನು ನೋಡಿ.
’ಅಮ್ಮಾ ತಾಯಿ ನೀನು ಎಷ್ಟನೇ ಕ್ಲಾಸು ’ ಅಂದಿದ್ದಕ್ಕೆ ’ ಆರನೇ ಕ್ಲಾಸ್ ’ ಅಂದ್ಲು ಸೀರಿಯಸ್ ಆಗಿ .
’ಆರನೇ ಕ್ಲಾಸಾ ಮತ್ತೆ ನಿನಗೆ ಹೇಗೆ ಇದೆಲ್ಲಾ ಗೊತ್ತು?’ ಅಂದಿದ್ದಕ್ಕೆ ’ ನಾನು ನನ್ನ ಎಲ್ಲಾ ಕಸಿನ್ ಗಳ ಫಸ್ಟ್ ನೈಟ್ ಗಳಲ್ಲಿ ಬೆಡ್ ರೂಮ್ ನ ಸಿಂಗರಿಸಿದ್ದೀನಿ ಅಮ್ಮನ ಜೊತೆ ’ ಅಂದ್ಲು.
ಅದಾದ ಮೇಲೆ ಅರ್ಧ ಗಂಟೆ ಅವಳು ಬಾಸ್ ನಾವು ಅವಳ ಅಸಿಸ್ಟೆಂಟ್ ! ಅವಳ ಅಮ್ಮ ದೂರದಲ್ಲಿ ಕೂತು ಮುಸಿ ಮುಸಿ ನಗೋದು ನಮ್ಮನ್ನು ನೋಡಿ.
ಎಲ್ಲಾ ಆದ ಮೇಲೆ ನನ್ನತ್ತ ನೋಡಿ ಆ ಹುಡುಗಿ ’ ಹೋಗಿ ಒಂದು ಪ್ಯಾಕ್ ಚಾಕಲೇಟ್ ತಗೊಂಡು ಬನ್ನಿ ,ಅದು ಹಾರ್ಟ್ ಶೇಪ್ ಚಾಕಲೇಟೇ ಆಗಿರ್ಬೇಕು ’ ಅಂತ ಆರ್ಡರ್ ಕೊಟ್ಟಳು .
ಅವಳ ಆಜ್ಞೆಯನ್ನು ಶಿರಸಾವಹಿಸಿ ಎಲ್ಲೋ ಹೋಗಿ ಚಾಕಲೇಟ್ ತಂದಿದ್ದೂ ಆಯ್ತು.
ಚಾಕಲೇಟ್ನ ಹಣ್ಣುಗಳ ಜೊತೆ ಒಂದು ಚಿಕ್ಕ ಟೇಬಲ್ ಮೇಲಿಟ್ಟು ಅದರ ಪಕ್ಕದಲ್ಲೇ ಒಂದು ಅಗರ ಬತ್ತಿ ಹೊತ್ತಿಸಿಟ್ಟಳು ’ಬನ್ನಿ ಹೊರಗೆ ಹೋಗೋಣ ರೂಮ್ ತುಂಬಾ ಈಗ ಅಗರಬತ್ತಿ ಸುವಾಸನೆ ತುಂಬಿರುತ್ತೆ ,ಯಾರೂ ಬಾಗಿಲು ತೆಗೆಯಬೇಡಿ ’ ಅನ್ನುತ್ತಾ ನಮ್ಮನ್ನೆಲ್ಲಾ ಹೊರಗೆ ಎಳೆದುಕೊಂಡು ಹೋದಳು.
ಹೊರಗೆ ಕೂತಿದ್ದ ಅವಳ ಅಮ್ಮ ’ ಏನು ಅನುಭವ ಇಲ್ಲ ಅಂದ್ರಲ್ಲ ? ನಮ್ಮ ಪುಟ್ಟಿ ನೋಡಿ ಎಷ್ಟು ಚೆನ್ನಾಗಿ ಮಾಡಿದ್ಲು ? ’ ಅನ್ನುತ್ತಾ ಪುಟ್ಟಿಯ ಹಣೆಗೊಂದು ಮುತ್ತು ಕೊಟ್ಟಳು ಆಂಟಿ !
ಅಮ್ಮ-ಮಗಳ ಫ್ರೆಂಡ್ ಶಿಪ್ ನೋಡಿ ತುಂಬಾ ಖುಷಿಯಾಗಿತ್ತು ಆ ದಿನ .ಇವತ್ತು ಅಮ್ಮಂದಿರ ದಿನದಂದು ಅವರ ನೆನಪಾಯ್ತು!

‍ಲೇಖಕರು avadhi

May 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶ್ರೀನಿವಾಸಗೌಡ

    ಅಹಾ, ಚೆನ್ನಾಗಿದೆ ಪಸ್ಟ್ ನೈಟ್ ಕತೆ.. ಈಗ ಗೊತ್ತಾಯ್ತು ನೋಡಿ ಸಿಂಗಾರ ಮಾಡೋದು ಹೆಂಗೆ ಅಂತ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: