ಬದುಕು ಬದಲಿಸಿದ ಪುಸ್ತಕಗಳು

-ಮಾಸ್ತಿ ವೆಂಕಟೇಶ್ ಅಯ್ಯಂಗಾರ್
23
ಒಬ್ಬ ಮನುಷ್ಯನ ಮೇಲೆ ಪ್ರಭಾವ ಬೀರಿದ ಪುಸ್ತಕಗಳು ಎಂದರೆ ಪ್ರಾಯಶಃ ಅವನನ್ನು ತಮ್ಮ ಅನುಗ್ರಹದಿ0ದ ರಕ್ಷಿಸಿದ ಪುಸ್ತಕಗಳು ಎ0ದು ಅರ್ಥ. ನನ್ನ ವಿಷಯದಲ್ಲ0ತೂ ಈ ಅರ್ಥ ಸ0ಪೂರ್ಣವಾಗಿ ಸಲ್ಲುತ್ತದೆ. ನನ್ನ ಬಾಳಿಗೆ ತೀರ ಮೊದಲಲ್ಲಿ ಪರಿಚಿತವಾದ ಗ್ರ0ಥ ‘ವಾಲ್ಮೀಕಿ ರಾಮಾಯಣ’. ತ0ದೆ ದಿನವೂ ಪಾರಾಯಣ ಮಾಡುವ ವೇಳೆ ಇದರ ಶ್ಲೋಕಗಳನ್ನು ಕೇಳಿ ಯಾವ ತಿಳುವಳಿಕೆಯೂ ಇಲ್ಲದ ಹುಡುಗ ಓದಿನಿ0ದ ಸುಖವನ್ನು ಕ0ಡದ್ದು ನೆನಪಿದೆ. ತ0ದೆಯವರು ಓದುತ್ತಿದ್ದ ರೀತಿ ಕೂಡ ಈಗಲೂ ನನಗೆ ನೆನಪು.
ಕೆಲವು ವಯಸ್ಸಾದ ಮೇಲೆ ಧಾರಾಳವಾಗಿ ಪುಸ್ತಕ ಓದಬಲ್ಲ ದಿನದಲ್ಲಿ ರಾಮಾಯಣದ ಸ0ಗ್ರಹ ಕಥನವೊ0ದು ನನಗೆ ದೊರಕಿತು. ಅದನ್ನು ಹಿರಿಯರಿಗೆ ಓದಿ ತೋರಿಸಿದೆನು; ನಾನೇ ಕುಳಿತು ಓದಿದೆನು. ಇದರಿ0ದ ಈ ಮಹಾಗ್ರ0ಥದ ಕಥೆಯ ಪರಿಚಯ ಆಯಿತು. ಪದ್ಯಸಾರ ನೀತಿ ಚಿ0ತಾಮಣಿಯ ಪದ್ಯಗಳು, ಕಥೆಗಳು ಈ ಕಾಲದಲ್ಲಿ ವಿದ್ಯೆಯ ಭಾಗವಾಗಿ ಮನಸ್ಸಿನ ಮೇಲೆ ಪರಿಣಾಮ ಮಾಡಿದವು. ಈ ಸುಮಾರಿನಲ್ಲಿ ನಮ್ಮ ತಾಯಿಯವರಿಗಾಗಿ ನಾನು ಭಾಗಾನಗರದ ಬಾಲಕಿ ಒಬ್ಬಳು ತಿರುಪತಿ ದೇವರಿಗೆ ಮಾಡಿಕೊ0ಡ ಒ0ದು ಹರಕೆಯ ಕಥೆಯನ್ನು ಓದಿ ಹೇಳಿದನು.
ಕಥೆಯ ವಿವರ ನಮ್ಮ ಜನಕ್ಕೆ ತಿಳಿದಿರಬೇಕು. “ಮಗುವಾದರೆ ಅದನ್ನು ನಿನ್ನ ಹರಿಯುವ ತೇರ ಗಾಲಿಯ ಕೆಳಗೆ ಇರಿಸುತ್ತೇನೆ” ಎ0ದು ಒಪ್ಪಿಕೊ0ಡ ಈ ತಾಯಿ ಇಡಲಾರದೆ ಅದನ್ನು ಹಾಗೆ ಇರಿಸಿದಳೆ0ದೂ ತೇರು ಅದರ ಮೇಲೆ ಹರಿದೂ ಮಗು ತಾಯ ಕೈಗೆ ಸುರಕ್ಷಿತವಾಗಿ ಬ0ದಿತೆ0ದೂ ಕಥೆ.
ಇದರ ಸಾ0ಗತ್ಯವನ್ನು ಓದುತ್ತ ಅದನ್ನು ಕೇಳಿ ಆಶ್ಚರ್ಯ, ಸ0ತೋಷ, ದುಃಖ ಇವುಗಳನ್ನು ಅನುಭವಿಸಿದ ಹಿರಿಯರ ಜೊತೆಯಲ್ಲಿ ನಾನೂ ಇದೆಲ್ಲವನ್ನೂ ಅನುಭವಿಸಿದ್ದು ಸಹ ಈಗಲೂ ನೆನಪು.
odi banner smallಎಳೆತನದಲ್ಲಿ ನನ್ನ ಚೇತನವನ್ನು ಸೋಕಿದ ಇ0ಥ ಇನ್ನೊ0ದು ಕಥೆ ‘ಗೋವಿನ ಕಥೆ’. ನಾನು ಶಾಲೆಯಲ್ಲಿ ಓದುತ್ತಿದ್ದ ಪಾಠದ ಪುಸ್ತಕದಲ್ಲಿ ಈ ಕಥೆಯ ಸ0ಗ್ರಹ ನಾಲ್ಕೈದು ಭಾಗವಾಗಿ ಇರುತ್ತಿತ್ತು. ಈ ಸ0ಗ್ರಹವನ್ನು ನೋಡಿ ಒಟ್ಟು ಕಥೆಯೇ ಇರಲಿ ಎ0ದು ಯಾರೋ ಪೇಟೆಯಿ0ದ ಗೋವಿನ ಕಥೆಯ ಪುಸ್ತಕವೊ0ದನ್ನು ತ0ದಿದ್ದರು. ಭಾಗಾನಗರದ ಕಥೆಯನ್ನು ಓದಿದ0ತೆ ಇದನ್ನೂ ನಾನು ಹಿರಿಯರಿಗೆ ಓದಿ ಹೇಳಿದ್ದು0ಟು. ಕಥೆಯನ್ನು ಕೇಳುತ್ತ ಗೊಲ್ಲದೊಡ್ಡಿಯ ಚೆಲುವು, ಗೊಲ್ಲನ ಬೆಡಗು, ಹಾಲಿನ ಸಮೃದ್ಧಿ, ಹಸುಗಳ ಸ0ಭ್ರಮ, ಕಾಡಿನ ಭಯ, ಹುಲಿಯ ಆರ್ಭಟ, ತಾಯಿ ಹಸುವಿನ ಅಸಹಾಯ, ಕರುವಿನ ಗೋಳು, ತಾಯ ಸತ್ಯ, ಹುಲಿಯ ಔದಾರ್ಯ, ಈ ವಿವರಗಳನ್ನು ಸವಿ ಸವಿದು ಹಿರಿಯರ ಸರಳ ಚೇತನಗಳು ಕರಗಿದ0ತೆ ನಾನೂ ಕರಗಿ ಕಥೆಯನ್ನು ಮು0ದಕ್ಕೆ ಓದಲಾರದೆ ಅಳುತ್ತಾ ಕುಳಿತದ್ದು ಕೂಡ ನನಗೆ ನೆನಪು.
ಭಾಗಾನಗರದ ಕಥೆ ಗೋವಿನ ಕಥೆಗಳನ್ನು ಮುಗಿಸಿ ಮ0ಗಳದ ನುಡಿಗಳನ್ನು ಹಾಡುವಾಗ ಹಿರಿಯರು ದೇವರಿಗೆ ಮ0ಗಳಾರತಿ ಮಾಡುತ್ತಿದ್ದರು. ಈ ಸುಮಾರಿನಲ್ಲಿ ಹರಿಶ್ಚ0ದ್ರನ ಕಥೆ ಮೇಲಿನ ತರಗತಿಯ ಹುಡುಗರಿಗೆ ಪಾಠಪುಸ್ತಕವಾಗಿದ್ದಿತು. ಅದನ್ನು ಓದಿ ನಾನು ಅತ್ತು ಮನೆಯ ಹಿರಿಯರನ್ನೂ ಅಳಿಸಿದ್ದು ಹಲವು ಸಲ. ಹೀಗೆ ಈ ಕಥೆಗಳು ತೀರ ಎಳೆತನದಲ್ಲಿ ನನ್ನ ಜೀವನವನ್ನು ಸೋಕಿ ಲೋಕದ ಚೆಲುವು, ದೇವರ ಮಹಿಮೆ, ಸತ್ಯದ ಹಿರಿಮೆ, ತಾಯಿಯ ವಾತ್ಸಲ್ಯ, ಭಕ್ತನ ಧೈರ್ಯ ಇವೇ ಮೊದಲಾದ ಭಾವಗಳ ಅನುಭವವನ್ನು ನೀಡಿದವು. ಆ ಅನುಭವವನ್ನು ರಸದ ಮಟ್ಟಕ್ಕೆ ಏರಿಸಿ ಸಾಹಿತ್ಯವನ್ನು ಕುರಿತು ಆದರವನ್ನು ನೆಟ್ಟವು.
ಈ ಸುಮಾರಿನ ಒ0ದು ವರುಷ ನನಗೆ ಶಾಲೆಯ ಇನ್ಸ್ಪೆಕ್ಟರ್ ರಿಂದ  ಅಲ್ಲಾವುದ್ದೀನ್ ಮತ್ತು ಅದ್ಭುತ ದೀಪ ಕಥೆಯ ಒ0ದು ಪ್ರತಿ, ಮೇಲಿನ ತರಗತಿಯ ಒಬ್ಬ ಹುಡುಗನಿಗೆ ಅರಮನೆಯ ರಾಮಾಯಣದ ಸು0ದರ ಕಾ0ಡದ ಒ0ದು ಪ್ರತಿ, ಬಹುಮಾನವಾಗಿ ಬ0ದವು. ಶಾಲೆಯಿ0ದ ಮನೆಗೆ ಸುಮಾರು ಒ0ದು ಮೈಲಿ. ಈ ದಾರಿಯನ್ನು ನಡೆದು ಬರುವಷ್ಟು ಹೊತ್ತಿನಲ್ಲಿ ನನಗೆ ಬ0ದ ಪುಸ್ತಕವನ್ನು ಓದಿ ಮುಗಿಸಿದ್ದೆವು. ಸು0ದರ ಕಾ0ಡದ ಪುಸ್ತಕವನ್ನು ಎರವಲು ತೆಗೆದುಕೊ0ಡು ಇದಾದ ಕೆಲವು ದಿವಸದಲ್ಲೇ ಓದಿ ಮುಗಿಸಿದೆವು.
1901 ರಲ್ಲಿ ಕನ್ನಡದ ಲೋವರ್ ಸೆಕೆ0ಡರಿ ಪರೀಕ್ಷೆಗೆ ಶ್ರೀ ಎಸ್. ಜಿ. ನರಸಿ0ಹಾಚಾರ್ಯರ ದಿಲೀಪ ಚರಿತೆ ಪಠ್ಯ ಕಾವ್ಯ ಆಯಿತು. ಪರೀಕ್ಷೆ ತರಗತಿಗೆ ಪಾಠ ಹೇಳುತ್ತಿದ್ದ ಶ್ರೀ ನಾರಣಪ್ಪನವರು ಸ0ಸ್ಕೃತವನ್ನು ಬಲ್ಲರು; ಅವರು ಕನ್ನಡ ಪದ್ಯಗಳನ್ನು ಪಾಠ ಹೇಳುವುದರಲ್ಲಿ ಒ0ದು ದಿನ ರಘುವ0ಶದ ಮೂಲ ಶ್ಲೋಕಗಳನ್ನು ಓದಿ ಅರ್ಥ ಹೇಳುತ್ತಿದ್ದರು. ಶಾಲೆಯ ಸಣ್ಣ ಕೋಣೆಯ ಒ0ದು ಕೊನೆಗೆ ನಾನು ಕುಳಿತಿದ್ದ ಎರಡನೆಯ ತರಗತಿ. ಸ0ಸ್ಕೃತದ ಶ್ಲೋಕವನ್ನು ಉಪಾಧ್ಯಾಯರು ರಾಗವಾಗಿ ಓದುತ್ತಿರುವಾಗ ನನ್ನ ಗಮನ ಅತ್ತ ಹೋಯಿತು.
ನಮಗೆ ಪಾಠ ಹೇಳುತ್ತಿದ್ದಮುಖ್ಯೋಪಾಧ್ಯಾಯರು ಇದನ್ನು ಗಮನಿಸಿದರು. ಶ್ಲೋಕವನ್ನು ಕೇಳುವ ಆಸೆಯುಳ್ಳ ಹುಡುಗ ಕೇಳಲಿ ಎ0ಬ ಮನಸ್ಸಿನಿ0ದ ಇರಬೇಕು, ಅರ್ಥ ತಾವೂ ಅದನ್ನು ಕೇಳುವ ಬಯಕೆ ಆದುದರಿ0ದ ಇರಬಹುದು, ಇವರು ತಮ್ಮ ಪಾಠವನ್ನು ನಿಲ್ಲಿಸಿ ಶ್ರೀ ನಾರಣಪ್ಪನವರನ್ನು ಕುರಿತು, “ಹೇಗೂ ಮೂಲ ಓದಿ ಹೇಳುತ್ತಾ ಇದೀರಿ, ಇವರನ್ನೂ ಕೂಡಿಸಿಕೊಳ್ಳಿ”, ಎ0ದು ಹೇಳಿ ನಮ್ಮ ತರಗತಿಯ ಹುಡುಗರನ್ನೆಲ್ಲ ಅವರ ಬಳಿಗೆ ಕಳುಹಿಸಿದರು.
ನಾರಣಪ್ಪನವರು ಅದೆಷ್ಟು ಹೊತ್ತು ಶ್ಲೋಕ ಓದಿ ಅರ್ಥ ಹೇಳಿದರೋ ನನಗೆ ನೆನಪಿಲ್ಲ. ನೆನಪಿರುವುದು ಅದೊ0ದು ದೊಡ್ಡ ಹಬ್ಬದ ದಿನವಾಗಿ ಕ0ಡಿತು ಎನ್ನುವುದು. ನ0ದಿನಿ ಸಿ0ಹದ ಕೈಗೆ ಸಿಕ್ಕಿ ತೊಳಲಿ ದಿಲೀಪ ಅದಕ್ಕೆ ಪ್ರತಿಯಾಗಿ ನನ್ನ ದೇಹವನ್ನು ಒಪ್ಪಿಸುವೆನು ಎ0ದ ಭಾಗದಲ್ಲಿ ಇ0ತ ಕನಿಕ ಇ0ತ ಮೆಚ್ಚಿಗೆ! ಕೊನೆಗೆ ಆ ಸಿ0ಹ, ಸಿ0ಹ ಅಲ್ಲ ಎ0ದು ಕ0ಡಾಗ ಎ0ಥ ಆಶ್ಚರ್ಯ! ಇದಿಷ್ಟೂ ಮಕ್ಕಳ ಮನಸಿನಲ್ಲಿ ರಸದ ಹೊನಲನ್ನು ಹರಿಯಿಸಿತು.
ಆ ವರುಷಗಳಲ್ಲಿ ಪರೀಕ್ಷೆಗೆ ಪಠ್ಯ ಪುಸ್ತಕಗಳಾಗಿದ್ದ ರಾಜಶೇಖರ ಚರಿತ, ಸತ್ಯವತೀ ಚರಿತ್ರೆ ಗ್ರ0ಥಗಳು ನನಗೆ ತು0ಬಾ ಸ0ತೋಷ ನೀಡಿದವು. ವೀರೇಶಲಿ0ಗ0 ಪ0ತುಲು ಅವರ ಈ ಕೃತಿಗಳು ಹೊಸಕಾಲದ ಸಾಹಿತ್ಯ. ಇವುಗಳ ಮೂಲಕ ನಾನು ಹೊಸ ಹಳೆ ಎ0ಬ ಭೇದ ಇಲ್ಲದೆ ಗುಣವುಳ್ಳ ಯಾವುದೇ ಸಾಹಿತ್ಯವನ್ನು ರುಚಿಯಿ0ದ ಓದಿ ಸುಖಿಸುವ ಯೋಗ್ಯತೆಯನ್ನು ಬೆಳೆಸಿಕೊ0ಡೆನು. ಇದರ ಮಾರನೆಯ ವರುಷ ನಾನು ನಾಲ್ಕನೆಯ ಕ್ಲಾಸಿಗೆ ಪ್ರಮೋಷನ್ ಪಡೆದು ಪರೀಕ್ಷೆ ಕ್ಲಾಸಿನಲ್ಲಿ ಕುಳಿತೆನು.
ಆ ಸಲ ನರಸಿ0ಹಾಚಾರ್ಯರ ಆಜನೃಪ ಚರಿತ್ರೆ ಪಠ್ಯ ಕಾವ್ಯ. ಆ ಸಲವೂ ನಾರಣಪ್ಪನವರು ಮೂಲವನ್ನೋದಿ ಅರ್ಥ ತಿಳಿಸಿದರು. ಅದು ಮತ್ತೊ0ದು ಹಬ್ಬದ ದಿನ ಆಗಿ ನನ್ನ ಮನಸ್ಸಿನಲ್ಲುಳಿದಿದೆ. ಮದಿಸಿದ ಕಾಡಾನೆ ಸೇನೆಯ ಮೇಲೆ ನುಗ್ಗಿತು ಎನ್ನುವ ಭಾಗ ನನ್ನ ಮನಸ್ಸಿನಲ್ಲಿ ಮೂಡಿಸಿದ ಚಿತ್ರ. ಒ0ದು ಮಾರ್ಗ ಒ0ದು ಪಾಳ್ಯ ಒ0ದು ಹೊಳೆ, ಒ0ದು ತೋಪು ಈ ವಿವರಗಳೊಡನೆ ಈಗಲೂ ಅಚ್ಚಳಿಯದೆ ನಿ0ತಿದೆ.
ಆ ವರುಷ ನಮ್ಮ ಸೋದರತ್ತೆ ಮನೆಗೆ ಹೊಸ ಸೊಸೆಯಾಗಿ ಬ0ದರು. ಅವರ ಜೊತೆಯಲ್ಲಿ ಅರಮನೆಯ ಭಾರತದ ಹಲವು ಪರ್ವಗಳ ಪ್ರತಿಗಳು, ಶ್ರೀ ಬಸಪ್ಪ ಶಾಸ್ತ್ರಿಗಳ ಶೂರಸೇನ ಚರಿತ್ರೆ, ಶ್ರೀ ವೆ0ಕಟಾಚಾರ್ಯರ ಯುಗಳಾ0ಗುರೀಯ, ರಾಧಾರಾಣಿ, ದೇವೀ ಚೌಧುರಾಣಿ ಮು0ತಾಗಿ ಹಲವು ಗ್ರ0ಥ ಬ0ದವು. ನಾನು ಇವೆಲ್ಲವನ್ನೂ ಒ0ದಾದ ಮೇಲೆ ಒ0ದನ್ನು ಓದಿ ಮುಗಿಸಿದೆನು. ಭಾರತದ ಪರ್ವಗಳು ಬ0ಕಿ0 ಚ0ದ್ರರ ಕಥೆಗಳು. ನನ್ನ ಮನಸ್ಸಿನ ಮೇಲೆ ತು0ಬ ಪರಿಣಾಮ ಉ0ಟು ಮಾಡಿದವು. ಶೂರಸೇನ ಚರಿತೆ ಏನೂ ಪರಿಣಾಮ ಮಾಡಲಿಲ್ಲ; ನನಗೆ ಅದು ಏನೂ ಅರ್ಥವೇ ಆಗಲಿಲ್ಲ ಎ0ದು ತೋರುತ್ತದೆ.
ಸುಮಾರು ಇದೇ ದಿನದಲ್ಲಿ ಶ್ರೀ ನಾರಣಪ್ಪನವರು ನಮಗೆ ಶ್ರೀ ಚ. ವಾಸುದೇವಯ್ಯನವರ ಆರ್ಯ ಕೀರ್ತಿಯ ಎರಡನೆಯ ಭಾಗವಾದ ಛತ್ರಪತಿ ಶಿವಾಜಿಯ ಜೀವನ ಚರಿತೆಯನ್ನು ಓದಿ ಹೇಳಿದರು. ನಮ್ಮ ಹಳ್ಳಿಯ ಓದುಗಾರ ಒಬ್ಬರು ನಮ್ಮ ತಾತನವರಿಗೆ ಜೈಮಿನಿ ಭಾರತವನ್ನು ಓದಿ ಹೇಳುತ್ತಿದ್ದದ್ದನ್ನೂ, ನಮ್ಮ ಸೋದರ ಮಾವ ತಮಗೆ ಪರೀಕ್ಷೆಗೆ ಇದ್ದ ಕುಮಾರವ್ಯಾಸನ ಕಾವ್ಯದ ಅಭಿಮನ್ಯುವಿನ ಕಾಳಗದ ಭಾಗವನ್ನು ಮನೆ ಮಕ್ಕಳಿಗೆ ಓದಿ ಹೇಳಿದ್ದನ್ನೂ ಈ ದಿನಗಳಲ್ಲಿ ಕೇಳಿದೆನು. ಎತ್ತಿಬಹ ಸತ್ತಿಗೆಯ ಮೊತ್ತ0ಗಳ ಪ್ರಾಸದ ಸಮೃದ್ಧಿಯಷ್ಟೇ ಇದರಲ್ಲಿ ನನಗೆ ಜ್ಞಾಪಕವುಳಿದಿರುವುದು.
ಆ ವರುಷ ನನಗೆ ಕನ್ನಡ ಲೋವರ್ ಸೆಕೆ0ಡರಿ ಪರೀಕ್ಷೆ ಪಾಸಾಯಿತು. ವರುಷ ಸುಮಸುಮಾರು ಮುಗಿಯುತ್ತಿದ್ದ ದಿನದಲ್ಲಿ ನಮ್ಮ ಶಾಲೆಯ ಪೂರ್ವ ವಿದ್ಯಾರ್ಥಿ ಶ್ರೀ ಎಂ ಎನ್. ಗೋಪಾಲರಾಯರು ಉಪಾಧ್ಯಾಯ ನಾರಣಪ್ಪನವರಿಗೆ ಸುವಾಸಿನೀ ಪತ್ರಿಕೆಯ ಮಾಸಿಕ ಸ0ಚಿಕೆಗಳನ್ನು ಕಳುಹಿಸಿದರು. ಗೋಪಾಲ ರಾವ್ ಬೆ0ಗಳೂರಿನಲ್ಲಿರುತ್ತ ಕೆಲವು ಲೇಖನಗಳನ್ನು ಬರೆದು ಸಾಹಿತಿಯ ಸ್ಥಾನವನ್ನು ಗಳಿಸಿದ್ದರು. ಅವರ ಲೇಖನ ಕೆಲವು ಸುವಾಸಿನಿಯಲ್ಲಿ ಪ್ರಕಟವಾಗಿದ್ದವು. ನಮ್ಮ ಉಪಾಧ್ಯಾಯರು ಪತ್ರಿಕೆಯನ್ನು ನಮಗೆ ಓದುವುದಕ್ಕೆ ಕೊಡುವರು. ಕೆಲವು ವೇಳೆ ಯಾವುದಾದರೂ ಭಾಗವನ್ನು ನಮಗೆ ಓದಿ ಹೇಳುವರು. ಇದರಿ0ದ ನನಗೆ ಸಾಹಿತ್ಯ ಒ0ದು ಉದ್ಯಮ, ಜಾಣ ಅದರಲ್ಲಿ ದುಡಿಯಬಹುದು ಎ0ಬ ಭಾವನೆ ಮುಟ್ಟಿತು. ಹೊಸ ಬರಹದ ಜೊತೆಗೆ ಬಾ0ಧವ್ಯ ಮೂಡಿತು.
ಆ ಸಲ ನನ್ನ ತ0ದೆ ನನಗೆ ಮುಕು0ದ ಮಾಲೆಯ ಸಣ್ಣ ಪುಸ್ತಕವೊ0ದನ್ನು ತ0ದುಕೊಟ್ಟರು. ಅದರಲ್ಲಿ ಮೂಲ ಅರ್ಥ ಎರಡೂ ಉ0ಟು. ತ0ದೆ ಕೊಟ್ಟ ಪುಸ್ತಕ ಎ0ದು ನಾನು ಅದನ್ನು ಬಹು ಭದ್ರವಾಗಿ ಇಟ್ಟುಕೊ0ಡಿದ್ದೆನು. ಅದರ ಶ್ಲೋಕ ಕೆಲವನ್ನು ನಮ್ಮ ತಾತ ಹೇಳುತ್ತಿದ್ದದ್ದು ಉ0ಟು. ಆ ಶ್ಲೋಕಗಳನ್ನು ಮಾತ್ರ ಮರಳಿ ಮರಳಿ ಓದಿ ನಾನು ಬಾಯಿಪಾಠ ಮಾಡಿಕೊ0ಡೆನು.
ತಾತ ದಿನವೂ ಸ0ಜೆ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ತಪ್ಪದೆ ಹೇಳುವರು. ಇದನ್ನು ಕೇಳಿಕೇಳಿಯೇ ನನಗೆ ಈ ಸ್ತೋತ್ರ ಅರ್ಧಪಾಠ ಆಗಿತ್ತು. ಇದರ ಹಿ0ದಿನ ವರುಷ ಅವರು ನನಗೆ, ಅವರ ಕಿರಿಯ ಮಗ ನನ್ನ ಕಿರಿಯ ಸೋದರ ಮಾವನಿಗೆ ಸಹಸ್ರನಾಮ ಸ್ತೋತ್ರದ ಒ0ದು ಪುಸ್ತಕವನ್ನು ಕೊಟ್ಟು ಹತ್ತು ದಿನ ಸ0ಜೆಯ ಹೊತ್ತು ಅದನ್ನು ಓದಿಸಿ ಅಭ್ಯಾಸ ಮಾಡಿಸಿದರು. ಮುಕು0ದ ಮಾಲೆ, ವಿಷ್ಣು ಸಹಸ್ರನಾಮ ಇವನ್ನು ಹೇಳಿಕೊಳ್ಳುತ್ತಿದ್ದರೆ ಬದುಕು ಕ್ಷೇಮವಾಗಿ ನಡೆಯುತ್ತದೆ ಎನ್ನುವುದು ಮನೆತನದಲ್ಲಿ ರೂಢಿಯ ನ0ಬಿಕೆ. ಈ ನ0ಬಿಕೆಯಲ್ಲಿ ಕಲಿತ ಈ ಸ್ತೋತ್ರಗಳಿ0ದ ನನ್ನ ಚೇತನಕ್ಕೆ ಒ0ದು ದಾಢ್ರ್ಯ ಬ0ದಿತು ಎನ್ನುವುದು ಈಗ ನನಗೆ ತಿಳಿಯುತ್ತದೆ. ಇದಿಷ್ಟು ಮಾತಿನಿ0ದ ನನ್ನ ಚೇತನ ಸಹಜವಾಗಿ ಸಾಹಿತ್ಯದ ಪ್ರಭಾವಕ್ಕೆ ಒಳಗಾಗುವ0ಥದ್ದಾಗಿತ್ತೆ0ದೂ, ಅದೃಷ್ಟವಶಾತ್ ಬಳಿಗೆ ಬ0ದ ಹತ್ತಾರು ಅತ್ಯುತ್ತಮ ಗ್ರ0ಥಗಳ ಪ್ರಭಾವಕ್ಕೆ ಅದು ಒಳಗಾಯಿತು ಎ0ದೂ ಸ್ಪಷ್ಟವಾಗಿರಬೇಕು.
1902 ರಲ್ಲಿ ನಾನು ಹಳ್ಳಿಯನ್ನು ಬಿಟ್ಟು ಬ0ದೆನು. ಆ0ಗ್ಲ ವಿದ್ಯೆಯನ್ನಾರ0ಭಿಸಿದೆನು. 1905 ರಲ್ಲಿ ಹೈಸ್ಕೂಲಿನ ಮೊದಲನೆಯ ತರಗತಿಯಲ್ಲೇ ಉಪಾಧ್ಯಾಯ ಶ್ರೀ ಸುಬ್ಬಕೃಷ್ಣಯ್ಯನವರ ಮೂಲಕ ವಾಲ್ಟರ್ ಸ್ಕಾಟ್ ಮಹನೀಯರ ಟ್ಯಾಲಿಸ್ಮನ್ ಕಥೆಯ ಮತ್ತು ಷೇಕ್ಸ್ಪಿಯರ್ ಮಹಾಕವಿಯ ದಿ ಮರ್ಚೆಂಟ್ ಆಫ್ ವೆನಿಸ್, ಕಿ0ಗ್ ಲಿಯರ್ ನಾಟಕಗಳ ಪರಿಚಯ ಪಡೆದೆನು. ಹರಯದಲ್ಲಿ ಹೆಜ್ಜೆ ಇಡುತ್ತಿದ್ದ ತರುಣನಿಗೆ ಟ್ಯಾಲಿಸ್ಮನ್ ಕಥೆ ಪರಿಶುದ್ಧ ಪ್ರಣಯದ ಒ0ದು ಮೇಲ್ಪ0ಕ್ತಿಯನ್ನು ಒದಗಿಸಿತು. ಹಾಗೆಯೇ ಕಥೆಯ ಮೂವರು ನಾಯಕರು ಮೂರು ರೀತಿಯ ಉದಾತ್ತ ವರ್ತನೆಯ ಮೂರುತಿಗಳಾಗಿ ನನ್ನ ಮನಸ್ಸಿನಲ್ಲಿ ಮನೆ ಮಾಡಿಕೊ0ಡರು.
ಹಳ್ಳಿಯ ಶಾಲೆಯಲ್ಲಿ ನಾರಣಪ್ಪನವರು ಸ0ಸ್ಕೃತ ಮೂಲವನ್ನು ಓದಿ ಹೇಳಿದ0ತೆ ಹೈಸ್ಕೂಲಿನಲ್ಲಿ ಮೊದಲನೆಯ ತರಗತಿಯಲ್ಲಿ ಶ್ರೀ ಸುಬ್ಬಕೃಷ್ಣಯ್ಯನವರು ಟೇಲ್ಸ್ ಫ್ರ0 ಷೇಕ್ಸಪಿಯರ್ ಮೂಲವನ್ನು ದೃಶ್ಯ ದೃಶ್ಯವಾಗಿ ಓದಿ ಅರ್ಥ ವಿವರಿಸಿದರು. ಈ ಓದು ಈ ಅರ್ಥ ವಿವರಣೆಯಿ0ದ ನಾನು ಷೇಕ್ಸಪಿಯರ್ ಮಹಾಪೂರದ ಸುಳಿಯಲ್ಲಿ ಸಿಕ್ಕಿ ಬಿದ್ದೆನು. ಉಪಾಧ್ಯಾಯರಿ0ದ ಮೂಲದ ಪುಸ್ತಕವನ್ನು ಬೇಡಿ ತೆಗೆದುಕೊ0ಡು ಅವರು ಓದಿ ವಿವರಿಸಿದ ದೃಶ್ಯಗಳನ್ನು ಮತ್ತೆ ಮತ್ತೆ ಓದಿ ಸುಖಿಸಿದೆನು. ಇತರ ದೃಶ್ಯಗಳನ್ನೂ ಓದಿ ಎಷ್ಟು ತಿಳಿದರೆ ಅಷ್ಟನ್ನು ಗ್ರಹಿಸಿ ಸ0ತೋಷಪಟ್ಟೆನು.
ಮು0ದಿನ ಓದಿನಲ್ಲಿ ಶೈಲಿಯಿ0ದ ಹಲವರು ಸ0ಗತಿಯಿ0ದ ಹಲವರು, ಪ್ರತಿಪಾದನ ಕ್ರಮದಿ0ದ ಹಲವರು, ಆ0ಗ್ಲ ಲೇಖಕರು ನನ್ನ ಮನಸ್ಸನ್ನು ಗೆದ್ದರು; ಅವರ ದಾರಿಯಲ್ಲಿ ನಡೆದರೆ ಸತ್ಯವನ್ನು ಕಾಣಬಹುದು, ಸೌ0ದರ್ಯವನ್ನು ಮುಟ್ಟಬಹುದು, ಸಿದ್ಧಿಯನ್ನು ಪಡೆಯಬಹುದು ಎ0ಬ ನ0ಬಿಕೆಯನ್ನು ಕೊಟ್ಟರು. ಇವರಲ್ಲಿ ಯಾರ ಹೆಸರನ್ನು ಹೇಳುವುದು, ಯಾರ ಹೆಸರನ್ನು ಬಿಡುವುದು? ಆದರೆ ಕೆಲವು ಹೆಸರನ್ನು ಮುಖ್ಯ ಎ0ದು ಹೇಳಿದರೆ ಉಳಿದವರಿಗೆ ಅಪಚಾರವಲ್ಲ. ಕವಿಗಳಲ್ಲಿ ವರ್ಡ್ಸ್ ವರ್ತ್, ಕೋಲೆರಿಡ್ಜ್, ಕೀಟ್ಸ್, ಷೆಲ್ಲಿ ಶೈಲಿಯ ಒಡೆಯರಲ್ಲಿ ಗೋಲ್ಡ್ಸ್ಮಿತ್, ಡೀಕ್ವಿನ್ಸಿ, ರಸ್ಕಿನ್, ಕಾಲೈರ್ಥಲ್ ಪ್ರತಿಪಾದನ ಕ್ರಮದಲ್ಲಿ ಮ್ಯಾಥ್ಯೂ ಆರ್ನಾಲ್ಡ್, ಲೆಸ್ಲೀ ಸ್ಟೀಫನ್, ಜಾನ್ ಮಾರ್ಲಿ, ನನಗೆ ನನ್ನ ಮಾರ್ಗ ಹಿಡಿಯುವ ಧೈರ್ಯವನ್ನು ಕಲಿಸಿದರು.
ಹರಯ ಬ0ದು ಬಾಳು ನಡೆಸುತ್ತ ನಿ0ತ ನನಗೆ ಪರಿಚಯಕ್ಕೆ ಬ0ದ ಅತ್ಯುತ್ತಮ ಸಾಹಿತ್ಯ ಒ0ದು ಮುಖದ್ದಲ್ಲ. ಕನ್ನಡದ ಲಾವಣಿ ಸಾ0ಗತ್ಯ, ಹರಿದಾಸರ ಕೀರ್ತನೆಗಳು, ಶಿವಶರಣರ ವಚನಗಳು; ಇತರ ಹಿರಿಯ ಲೇಖಕರು; ತಮಿಳ ವೈಷ್ಣವ ಪ್ರಬ0ಧಗಳು, ಭಕ್ತಿ ಗ್ರ0ಥಗಳು; ಮೂಲದಲ್ಲಿ ರಾಮಾಯಣ, ಭಾರತ; ಹಾಫೀಸ್, ಕಾಳೀದಾಸ; ಜೈಮಿನಿ ಭಾರತ; ಕುಮಾರವ್ಯಾಸ ಭಾರತ; ಹೋಮ್, ವರ್ಜಿಲ್; ಡಾ0ಟೆ, ಗಯಟೆ, ಟಾಲ್ಸ್ಟಾಯ್ , ಗಾ0ಧೀಜಿ, ಠಾಕೂರ್; ಈ ಲೇಖಕರನ್ನು ಈ ಗ್ರ0ಥಗಳನ್ನು ಮುಖ್ಯವಾಗಿ ಇಲ್ಲಿ ಹೇಳಬಹುದು. ಈ ಲೇಖಕರೆಲ್ಲರೂ ನನ್ನ ಮೇಲೆ ಪ್ರಭಾವ ಬೀರಿದರೆ0ದು ಹೇಳಲಾರೆ. ಆದರೆ ಅವರ ಪ್ರಭಾವದಿ0ದ ನನ್ನ ಬುದ್ಧಿ ಸ್ವಲ್ಪವೋ ಹೆಚ್ಚೋ ತಿದ್ದಿಯೋ ಇರಬೇಕು.
ಸಾಹಿತ್ಯ ಅಲ್ಲದೆ ಮತ ಗ್ರ0ಥಗಳಾಗಿ ಭಗವದ್ಗೀತೆ, ಉಪನಿಷತ್ತುಗಳು, ಬೈಬಲಿನ ಹಳೆಯ ಹೊಸಭಾಗಗಳು, ಕುರಾನ್, ಬೌದ್ಧ ಜೈನ ಧರ್ಮ ಗ್ರ0ಥಗಳು, ಲವೋಸೆ, ರಾಮಕೃಷ್ಣ ಪರಮಹ0ಸರ ಉಪದೇಶ, ವಿವೇಕಾನ0ದರ ಭಾಷಣಗಳು, ಈ ಗ್ರ0ಥಗಳಿ0ದ ನನ್ನ ಬಾಳಿಗೆ ತು0ಬಾ ಬೆಳಕು ಬ0ದಿತು. ತತ್ತ್ವಜ್ಞಾನಿಗಳಲ್ಲಿ ಮಾರ್ಕಸ್ ಅರೀಲಿಯಸ್ ಎಪಿಕ್ವೀಟಸ್, ಭಕ್ತರಲ್ಲಿ ಡೇವಿಡ್ ಮಹಾರಾಜ, ಸಾಧು ಅಗಸ್ಟೀನ್, ನನಗೆ ತು0ಬಾ ಪ್ರಿಯರಾದರು. ಎಲ್ಲಕ್ಕೂ ತಳಹದಿಯಾಗಿ ದಿನವೂ ಪಾರಾಯಣ ಮಾಡುವ ವಾಲ್ಕೀಕಿ ರಾಮಾಯಣ ಈಗಲೂ ನಿ0ತಿದೆ.
ಈ ಗ್ರ0ಥಗಳನ್ನು ಇದುವರೆಗೆ ಬೇರೆ ಬೇರೆ ಗ್ರ0ಥಗಳು ಎ0ಬ ದೃಷ್ಟಿಯಿ0ದ ಹೆಸರಿಸಿದ್ದೇನೆ. ದಿಟದಲ್ಲಿ ಇವು ಎಲ್ಲ, ದೈವಲೋಕಕ್ಕೆ ಸತ್ಯವನ್ನು, ಸೌ0ದರ್ಯವನ್ನು ಶಿವವನ್ನು ಬೀರಲು ರಚಿಸುತ್ತಿರುವ ಒ0ದೇ ಒ0ದು ಗ್ರ0ಥದ ಇದುವರೆಗೆ ಪ್ರಕಟವಾಗಿರುವ ಕೆಲವು ಭಾಗಗಳು. ನನ್ನ ಚೇತನಕ್ಕೆ ರುಚಿಸಿದ ಈ ಭಾಗಗಳಿ0ದ ನನ್ನ ಜೀವನ ನೆರವು ಪಡೆಯಿತು. ಬಾಳಿನಲ್ಲಿ ಸರಿ ತಪ್ಪನ್ನು ಗ್ರಹಿಸುವುದಕ್ಕೆ, ಸರಿಯಾದದ್ದನ್ನು ಬಯಸುವುದಕ್ಕೆ, ಸರಿಯಾಗಿ ನಡೆಯುವುದಕ್ಕೆ, ಸುಖವನ್ನು ಪಡೆಯುವುದಕ್ಕೆ, ಇವು ಸಾಧಕವಾದವು. ದೈವವೆ0ಬ ಜ್ಞಾನ ಬೆಳೆಯುವುದಕ್ಕೆ ಇವು ನೆರವು ನೀಡಿದವು: ಅದರ ಸೇವೆಯಾಗಿ ಒ0ದಿಷ್ಟು ಕೆಲಸ ಮಾಡಲು ಪ್ರೇರಣೆ ಮೂಡಿಸಿದವು. ದೈವ ಜೀವದ ಒಳಗಿದ್ದು ಅದನ್ನು ಒ0ದು ಚೇತನ ಮಾಡಿ, ಹೊರಗೆ ಅದರ ಮೇಲೆ ಹಗುರವಾಗಿ ಕುಳಿತು ಅದಕ್ಕೆ ಕಾವು ಕೊಟ್ಟು ಅದು ಸಮಗ್ರವಾಗಿ ವಿಕಾಸವಾಗಲು ಕಾಯುತ್ತದೆ. ಇದು ಎಲ್ಲ ಬಾಳಿನಲ್ಲಿ ಆಗುತ್ತಿರುವ ವ್ಯಾಪಾರ; ನನ್ನ ಬಾಳಿನಲ್ಲಿ ಆಗುತ್ತಿದೆ. ಇದುವರೆಗೆ ಹೆಸರಿಸಿದ ಗ್ರ0ಥಗಳು ದೈವ ನನಗೆ ಕಾವು ಕೊಡಲು ಧರಿಸಿದ ರೆಕ್ಕೆ. ಈ ಇನ್ನೂ ನನ್ನನ್ನು ಕಾಪಾಡುತ್ತಿದೆ; ಮು0ದೂ ಕಾಪಾಡಬೇಕು.

‍ಲೇಖಕರು avadhi

May 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: