Drink coorg coffee and watch good hockey

ಹಬ್ಬ ಮಾಡಲು ಹಾಕಿಯೇ ಸಾಕು

ಸಂತೋಷ್ ತಮ್ಮಯ್ಯ

 

ವಿಶ್ವಕಪ್ ಕ್ರಿಕೆಟಿನ ಕಾವು ಇಳಿಯುವ ಮೊದಲೇ ಐಪಿಎಲ್ ಎಂಬ ಮಾಯೆ ಶುರವಾಗಿ ಬಿಟ್ಟಿದೆ. ಹಾಗಾಗಿ ಜನರಿಗೆ ವಿಶ್ವಕಪ್ ಸುಲಭವಾಗಿ ಬದಿಗೆ ಸರಿದುಹೋಗುವುದಿಲ್ಲ. ವಿಶ್ವವಿಜೇತರ ಪ್ರಭಾವಳಿಯನ್ನು ಹೊತ್ತುಕೊಂಡೇ ಖಾಸಗೀ ಸಂಸ್ಥೆಗಳು ಆಟಗಾರರನ್ನು ಖರೀದಿಸಿ ಸರಿಯಾದ ಸಂದರ್ಭದಲ್ಲೇ ವ್ಯಾಪಾರ ಮಾಡಿವೆ. ಬಿಸಿ ಇದ್ದಾಗಲೇ ಕಬ್ಬಿಣವನ್ನು ಬಗ್ಗಿಸಬೇಕಲ್ಲವೇ ಎಂಬಂತೆ ಐಪಿಎಲ್

ತಾರಕಕ್ಕೇರಿದೆ. ಇರಲಿ, ಅದು ಕ್ರಿಕೆಟ್‌ನ ಪ್ರಾರಬ್ದ. ಅಂಕಿ-ಅಂಶಗಳ ಲೆಕ್ಕಾಚಾರವಿಲ್ಲದೆ ಕ್ರಿಕೆಟ್‌ಗೆ ಜೀವವಿಲ್ಲ. ಅಷ್ಟಕ್ಕೂ ಕ್ರಿಕೆಟನ್ನು ಬೈಯಬಾರದು. ಅದೊಂದು ಮಾಯೆ. ಅದೊಂದು “ಧರ್ಮ”.

ಇದೇ ಹೊತ್ತಲ್ಲಿ ರಾಷ್ಟ್ರೀಯ ಕ್ರೀಡೆಯೆಂಬ ಹಾಕಿ ನೆನಪಾಗುತ್ತದೆ.ಹಳೆಯ ಸುವರ್ಣಯುಗಗಳು, ಒಬ್ಬ ಧ್ಯಾನ್‌ಚಂದ್, ಆಧುನಿಕ ಪಿಳ್ಳೆ, ಜುಗ್ರಾಜ್‌ಸಿಂಗ್, ಐಎಚ್‌ಎಫ್ ಮತ್ತು ಹಾಕಿ ಇಂಡಿಯಾಗಳ ಜುಗಲ್ ಬಂಧಿ, ಕೋಚ್ ಮತ್ತು ಆಟಗಾರರು, ಒಟ್ಟಾರೆ ಒಂದಿಷ್ಟು ವಿವಾದಗಳು.ಇವು ಆ ರಾಷ್ಟ್ರೀಯ ಕ್ರೀಡೆಯೆಂದಾಗ ನೆನಪಾಗುವ ಸಂಗತಿಗಳು ಮತ್ತು ಇವಿಷ್ಟೇ ಹಾಕಿ ಎಂದು ವರ್ತಿಸುವಂಥ ಮಾಧ್ಯಮಗಳು.ಇಷ್ಟಕ್ಕಿಂತಲೂ ಒಂದಂಗುಲ ಹೆಚ್ಚಿನ ಮಾಹಿತಿ ಜನಸಾಮಾನ್ಯನಿಗೆ ದೊರಕುವುದಿಲ್ಲ . ಏಕೆಂದರೆ ಭಾರತೀಯ ಹಾಕಿ ತಂಡ ವಿಶ್ವಕಪ್ ಗೆಲ್ಲುವುದಿಲ್ಲ. ಹಾಕಿ ಆಟಗಾರರಿಗೆ ಬಾಲಿವುಡ್ ನಟಿಯರಿಗೆ ಕಾಳು ಹಾಕುವಷ್ಟು ಇಮೇಜ್ ಬಂದಿರುವುದಿಲ್ಲ. ಯಾವ ಸರಕಾರಗಳೂ ಅವರಿಗೆ ಮಣ್ಣು-ಹೊನ್ನು ಕೊಡುವುದಿಲ್ಲ. ಒಂದರ್ಥದಲ್ಲಿ ಹೇಳಬೇಕೆಂದರೆ ಭಾರತೀಯ ಹಾಕಿ ಭಾರತೀಯ ರೈತನಂತೆ.ಅದರದ್ದು ಎಂದಿಗೂ ತೀರದ ಬವಣೆಗಳು. ಹೀಗೆ ಹಾಕಿ ಎಂದರೆ ಇಬ್ಬನಿ ಮುಸುಕಿದ ದೊಡ್ಡ ಬೆಟ್ಟದಂತೆ ಭಾಸವಾಗುತ್ತದೆ.

ಹಾಗಾಗಿ ಕೆಲವರಿಗೆ ರಾಷ್ಟ್ರೀಯ ಕ್ರೀಡೆಯು ಹಾಕಿಗಿಂತ ಕ್ರಿಕೆಟೇ ಆಗಿರಬೇಕೆಂದು ಅನಿಸುತ್ತದೆ. ಅವುಗಳ ನಡುವೆ ಅಷ್ಟೊಂದು ವ್ಯತ್ಯಾಸಗಳು. ಜನರಿಗೆ ಹಾಗನಿಸುವುದಕ್ಕೆ ಕಾರಣಗಳೂ ಹಲವಾರಿವೆ.ಏಕೆಂದರೆ ರಾಷ್ಟ್ರೀಯ ಕ್ರೀಡೆಯಾದರೂ ಹಾಕಿಯನ್ನು ಯಾವ ಮೈದಾನದಲ್ಲೂ ,ರಸ್ತೆ ಬದಿಯಲ್ಲೂ ಆಡುವುದನ್ನು ಯಾರೂ ಕಂಡಿಲ್ಲ.ಹಾಕಿ ತರಬೇತಿ ನಡೆಯುತ್ತಿರುವುದನ್ನು ಕಂಡ ಜನರೂ ವಿರಳಾತಿವಿರಳ.ಇಂಥ ಹೊತ್ತಿನಲ್ಲಿ ಹೀಗೆ ತಿಳಿದುಕೊಂಡಿರುವ ಹೊತ್ತಿನಲ್ಲಿ ಹಾಕಿ ಹಬ್ಬ ಮತ್ತೆ ಬಂದಿದೆ. ಪುನಃ ಅದೇ ಕೊಡಗು, ಅದೇ ಪೊನ್ನಂಪೇಟೆ ಎಂಬ ಲವಲವಿಕೆಯ ಪಟ್ಟಣ. ಅದೇ ಕೊಡವ ಕುಟುಂಬಗಳು.ಅದೇ ಮೈದಾನಗಳು ಮತ್ತೆ ತುಂಬಿಕೊಂಡಿವೆ.

ಈಗೇನಿದ್ದರೂ ಕೊಡಗಿನಲ್ಲಿeat hockey drink hockey and dream hockey. ಅಂದರೆ ಎಲ್ಲಿ ನೋಡಿದರೂ ಹಾಕಿಯೋ ಹಾಕಿ. ತುಂಬಿ ತುಳುಕುತ್ತಿರುವ ಮೈದಾನಗಳು. iplನ ಪರಿವೆಯಿಲ್ಲ. ಅಂಕಿ-ಅಂಶಗಳ ಹಂಗಿಲ್ಲ. ಈಗ ಏನಿದ್ದರೂ ಚೆಂಡು ಮತ್ತು ಸ್ಟಿಕ್‌ಗಳ ತಾದಾತ್ಮ್ಯದ್ದೇ ಮಾತುಗಳು. ಕೇವಲ ೧೫ ವರ್ಷಗಳ ಮೊದಲು ತನ್ನ ಉದ್ಯೋಗಕ್ಕೂ ಹಾಕಿಗೂ ಸಂಬಂಧವಿರದಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ಕುಟ್ಟಪ್ಪ ಎಂಬ ವಯೋವೃದ್ಧರೋರ್ವರು ಈ ಹಾಕಿ ಹಬ್ಬವನ್ನು ಶುರು ಮಾಡಿರದಿದ್ದರೆ ಈ ಪರಿಯ ಉತ್ಸಾಹ ಇಂದು ಕಂಡುಬರುತ್ತಿರಲಿಲ್ಲ. ಹಾಕಿ ಹಬ್ಬವಾಗುತ್ತಿರಲಿಲ್ಲ. ಒಂದು

ಕಾಲದಲ್ಲಿ “ಭಾರತೀಯ ಹಾಕಿಯ ನರ್ಸರಿ ಶಾಲೆ’ ಎಂದೇ ಖ್ಯಾತವಾಗಿದ್ದ ಕೊಡಗಿನಲ್ಲಿ ಹಲವು ಅಲ್ಲೋಲಕಲ್ಲೋಲಗಳು ಉಂಟಾಗಿ ಬಿಡುತ್ತಿದ್ದವು. ಏಕೆಂದರೆ ಇಲ್ಲಿ ಹಾಕಿ ಎಂದರೆ ಕೇವಲಕ್ರೀಡೆಯಲ್ಲ. ಇಲ್ಲಿ ಕುಟ್ಟಪ್ಪನವರು ಹಾಕಿಯನ್ನು ಪೋಣಿಸಿದ್ದು ಸಂಸ್ಕೃತಿಯೊಟ್ಟಿಗೆ. ಹಾಕಿ ಉತ್ಸವವಾಗದೇ ಇರುತ್ತಿದ್ದರೆ ಸಂಸ್ಕೃತಿ ಸೊರಗುವ ಎಲ್ಲಾ ಲಕ್ಷಣಗಳು ಅದಾಗಲೇ ಗೋಚರವಾಗುತ್ತಿದ್ದವು. ಏಕೆಂದರೆ ಕೊಡಗಿನಲ್ಲಿ ಕೊಡವ ಒಕ್ಕ (ಕುಟುಂಬ)ಗಳೇ ಪ್ರಧಾನ . ಐತಿಹಾಸಿಕ ಹಿನ್ನಲೆ, ತಮ್ಮದೇ ಆದ ಮಹಾಪುರುಷರು,ಆ ಮಹಾಪುರುಷರ ವಂಶಜರು ನಾವು ಎಂಬ ಅತಿಯಾದ ಹೆಮ್ಮೆ, ತಮ್ಮದೇಆದ ಹೆಸರುಗಳನ್ನು ಹೊಂದಿರುವ ಸೋದರ ಸಂಬಂಧದ ಕುಟುಂಬಗಳೇ ಕೊಡವ ಸಂಸ್ಕೃತಿಯ ಆಧಾರಸ್ತಂಭಗಳು.

ಕೆಲವೊಂದು ಕುಟುಂಬಗಳು ಅತಿ ಹೆಚ್ಚಿನ ಸದಸ್ಯರನ್ನು ಹೊಂದಿದ್ದರೆಇನ್ನು ಕೆಲವು ಕಡಿಮೆ ಜನ ಸಂಖ್ಯೆಯವು. ಪ್ರತಿಯೊಂದು ಕುಟುಂಬಕ್ಕೂ ತನ್ನದೇ ಆದ ಐನ್‌ಮನೆ (ಮೂಲಮನೆ)ಗಳು ಇರುತ್ತವೆ. ಇಂತಹ ಕೊಡವ ಮನೆತನಗಳು ಒಂದು ಸಮಯದಲ್ಲಿ ಹರಿದು ಹಂಚಿಹೋಗಿದ್ದವು. ತಮ್ಮ ಪ್ರಜ್ಞೆಯನ್ನೇ ಕಳಕೊಳ್ಳುವ ಹಂತದಲ್ಲಿದ್ದುವು. ಕೊಡಗು ಬಿಟ್ಟು ಹೊರಟ ಕೊಡವರಲ್ಲಿ ಬಹುತೇಕರು ತಮ್ಮ ಕುಟುಂಬದ ಸಂಪರ್ಕವನ್ನು ಕಡಿದುಕೊಳ್ಳಲಾರಂಭಿಸಿದ್ದರು. ‘ಈ ಕುಟುಂಬಗಳಿಂದೇನು?’ ಎಂಬಂಥ ಇಂಥ ಸನ್ನಿವೇಶದಲ್ಲಿ ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟವನ್ನು ಏರ್ಪಡಿಸಿದವರು ಕುಟ್ಟಪ್ಪನವರು. ಹೀಗೆ ೧೫ ವರ್ಷಗಳ ಹಿಂದೆ ಪಾಂಡಂಡ ಕುಟ್ಟಪ್ಪನವರು ತಮ್ಮದೇ ಖರ್ಚಿನಲ್ಲಿ ಪಂದ್ಯಾವಳಿಯೊಂದನ್ನು ಏರ್ಪಡಿಸಿದರು. ಮೊದಲ ಪ್ರಯತ್ನ ಹೊಸತೆಂಬಂತೆ ಕಂಡಿತಾದರೂ ಸಂಶಯಪಟ್ಟವರೇ ಹೆಚ್ಚಿದ್ದರು.

ಹೀಗೆ ಹಾಕಿ ಹಬ್ಬ ಕೊಡಗಿನಲ್ಲಿ ಆರಂಭವಾಯಿತು. ಕೊಡವರು ಹಾಕಿಯನ್ನು ಕೈಬಿಡಲಿಲ್ಲ. ಪರಿಣಾಮ ಅದೇ ವರ್ಷ ‘ಕೊಡವಹಾಕಿ ಅಕಾಡೆಮಿ’ ಅಸ್ತಿತ್ವಕ್ಕೆ ಬಂತು. ಪ್ರತಿವರ್ಷ ಕೊಡಗಿನ ಅನ್ಯಾನ್ಯ ಜಾಗಗಳಲ್ಲಿ ಒಂದೊಂದು ಕುಟುಂಬಸ್ಥರು ಪಂದ್ಯಾವಳಿ ಆಯೋಜಿಸಲು ಮುಂದೆ ಬಂದರು. ಇದೀಗ ಅಂಥ ಪಂದ್ಯಾವಳಿ ಉತ್ಸವವಾಗಿ ಮಾರ್ಪಟ್ಟು ೧೫ನೇ ವರ್ಷಕ್ಕೆ ಕಾಲಿಟ್ಟಿದೆ. ಅದಾಗಲೇ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ವಿಶ್ವದಲ್ಲಿ ಬೇರಾವ ಕ್ರೀಡೆಯೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಯೋಜನೆಗೊಳ್ಳುವುದಿಲ್ಲ. ಇದೇಕೆ ಇಷ್ಟೊಂದು ಯಶಸ್ವಿಯಾಯಿತೆಂದರೆ ಮೊದಲು ಅರಿವಿಗೆ ಬರುವುದೇ ಕೊಡವರು. ಅವರಿಗೆ ಹಾಕಿ ಎಂದರೆ ಕೇವಲ ಕ್ರೀಡೆಯಲ್ಲ. ಹಾಕಿ ಉತ್ಸವದಲ್ಲಿ ತಮ್ಮ ತಂಡದ ಪಂದ್ಯವೆಂದರೆ ಅದೊಂದು ಕುಟುಂಬದ ‘ಗೆಟ್ ಟು ಗೆದರ್’ನಂತೆ. ಒಂದು

ಸೌಹಾರ್ದ ಕೂಟ. ತಮ್ಮ ತಂಡಕ್ಕೆ ಆಡುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ. ಪಂದ್ಯಾವಳಿಯಲ್ಲಿ ಭಾಗವಹಿಸುವುದು ಎಂದರೆ ಒಂದು ಸಾಂಸ್ಕೃತಿಕ ಕಾರ್ಯ. ಭಾಷಣದಿಂದ,

ಪ್ರಚಾರದಿಂದ ಮಾಡುವ ಕೆಲಸ ಇಲ್ಲಿ ಆಡುವ ಮೂಲಕ ಸಾಕಾರವಾಗುತ್ತದೆ. ಹಲವು ಕುತೂಹಲಗಳಿಗೆ ಹಲವು ಅದ್ಭುತಗಳಿಗೆ ಸಾಕ್ಷಿಯಾಗಿರುವ ಹಾಕಿ ಹಬ್ಬ ಇದೀಗ ರಂಗೇರುತ್ತಿದೆ. ೨೨೮ ತಂಡಗಳು,ಸುಮಾರು ಮೂರೂವರೆ ಸಾವಿರ ಆಟಗಾರರು.೪೯ ಜನ ರಾಷ್ಟ್ರೀಯ ಮಾನ್ಯತೆಯ ತೀರ್ಪುಗಾರರು, ಇಬ್ಬರು ಅಂತಾರಾಷ್ಟ್ರೀಯ ಮಾನ್ಯತೆಯ ತೀರ್ಪುಗಾರರು. ವಿಶೇಷವೆಂದರೆ ಎಲ್ಲರೂ ಸ್ಥಳೀಯರು. ಒಂದೇ ತಂಡದಲ್ಲಿ ಒಲಂಪಿಕ್ಸ್ ಆಡಿದವರೂ ಕೃಷಿಕರೂ ಆಡುವ ಪಂದ್ಯಾವಳಿ ಉತ್ಸವವಾಗದೆ ಮತ್ತೇನು? ಒಬ್ಬ ಪ್ರೊಫೆಶನಲ್ ಅಲ್ಲದವನೊಬ್ಬನಿಗೆ ಇಂಥ ಆಡುವ ಅವಕಾಶ ಸಿಕ್ಕಿರುವುದು ಅದ್ಭುತವಲ್ಲವೇ? ಪ್ರಸ್ತುತ ನಡೆಯುತ್ತಿರುವ ಉತ್ಸವದಲ್ಲಿ ಎಲ್ಲಾ ಕ್ಷೇತ್ರದವರು ಆಡುತ್ತಿದ್ದಾರೆ.ದೊಡ್ಡ ದೊಡ್ಡ ಆಟಗಾರರು, ನಿವೃತ್ತರು, ನರ್ಸರಿ ಮಕ್ಕಳು, ಡಾಕ್ಟರುಗಳು,ಪತ್ರಕರ್ತರು, ಸಿನಿಮಾ ನಟರು, ರಾಜಕಾರಣಿಗಳು, ಕಲಾವಿದರು,ಗಾಯಕರು, ರಂಗಕರ್ಮಿಗಳು ಎಲ್ಲರೂ ತಮ್ಮ ಕುಟುಂಬವನ್ನು ಪ್ರತಿನಿಧಿಸುತ್ತಿದ್ದಾರೆ. ಹಾಕಿಯ ಆರಾಧನೆಗೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಮತ್ತೇನು ಬೇಕಿದೆ?

ಅಲೇಮಾಡ ಚೀಯಣ್ಣ ೨೦೦೮ರಲ್ಲಿ ನಡೆದ ಅಜ್ಞಾನ್‌ಷಾ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸಿದ ಕಿರಿಯ ಆಟಗಾರ. ಆದರೂ ಕೊಡವ ಹಾಕಿ ಉತ್ಸವದಲ್ಲಿ ಆಡುವುದನ್ನು ಅವರು ತಪ್ಪಿಸುವುದಿಲ್ಲ. ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಚೀಯಣ್ಣನವರನ್ನು ಮಾತಾಡಿಸಿದಾಗ “ನಾನು ಹಾಕಿ ಉತ್ಸವದಲ್ಲಿ ಆಡುವಾಗ ಉಳಿದೆಡೆಗಿಂತಲೂ ಥ್ರಿಲ್ ಆಗಿರುತ್ತೇನೆ. ಇದೊಂದು ಭಿನ್ನ ಅನುಭವ. ಮಣ್ಣಿನ ಮೈದಾನಕ್ಕೆ ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟವಾದರೂ ಆಟವನ್ನು ಸಾಕಷ್ಟು ಅನುಭವಿಸುತ್ತೇನೆ. ನಾನೆಂದೂ ಇಷ್ಟೊಂದು ಜನಸಂದಣಿ ಕಾಣಲಿಲ್ಲ. ಎಲ್ಲೂ ಇಷ್ಟೊಂದು ಪ್ರೇಕ್ಷಕರು ಇರುವುದಿಲ್ಲ. ನಮ್ಮಂಥವರ ಮೇಲೆ ಜನರಿಗೆ ಹೆಚ್ಚಿನ ನಿರೀಕ್ಷೆ ಇರುವುದರಿಂದ ಸ್ವಲ್ಪ ಒತ್ತಡವೂ ಇರುತ್ತದೆ. ಅಲ್ಲದೆ ನನ್ನ ಕುಟುಂಬದ ಪರವಾಗಿ ಆಡುವುದು ಉಳಿದೆಡೆ ಆಡುವುದಕ್ಕಿಂತ ಖುಷಿ ಕೊಡುತ್ತದೆ” ಎನ್ನುತ್ತಾರೆ.

ಚೀಯಣ್ಣನವರಂತೆ ಹಾಕಿ ಉತ್ಸವಕ್ಕೆಂದೇ ಹಲವು ವಿದೇಶಿ ಆಟಗಾರರೂ ಬರುತ್ತಾರೆನ್ನುವುದು ಒಂದು ವಿಶೇಷ. ವಿದೇಶಿ ಕ್ಲಬ್‌ಗಳಲ್ಲಿ ಆಡುತ್ತಿರುವ ಆಟಗಾರರು (ಲೆನ್ ಅಯ್ಯಪ್ಪನವರಂತೆ), ವಿದೇಶಿ ರಾಷ್ಟ್ರೀಯ ತಂಡಗಳಲ್ಲಿ ಕೋಚ್ ಆಗಿಯೋ,ಪಿಸಿಯೋ ಆಗಿಯೋ ಇರುವಂಥವರು (ಕೂತಂಡ ಪೂಣಚ್ಚ) ಭಾರತೀಯ ತಂಡಕ್ಕೆ ಆಡಿದ ಹಲವು ಆಟಗಾರರು, ಹಲವು ದೇಶೀ ಕ್ಲಬ್ ಆಟಗಾರರು, ಹಲವು ಕಂಪೆನಿ ಆಟಗಾರರು,ಆರ್ಮಿ ಆಟಗಾರರು ಎಪ್ರಿಲ್ ಬಂತೆಂದರೆ ಹಾಕಿಹಬ್ಬವನ್ನು ಎದುರು ನೋಡುತ್ತಾರೆ. ಕೊಡಗಿನ ಯೋಧರು ತಮ್ಮ ರಜೆಯನ್ನು ಎಪ್ರಿಲ್, ಮೇಗೆ ಕಾದಿರಿಸಿಕೊಳ್ಳುತ್ತಾರೆ. ಒಂಥರಾ ಈ ಅವಧಿಯಲ್ಲಿ ಕೊಡಗಿನಲ್ಲಿ ಹಾಕಿ ಮೇನಿಯಾ.

ಈ ೧೫ ವರ್ಷದಲ್ಲಿ ಹಾಕಿ ಹಬ್ಬದಿಂದ ಏನೇನಾಗಿದೆ ಎಂದರೆ ಅಲ್ಲೂ ಅದ್ಭುತಗಳೇ ಗೊಚರಿಸುತ್ತದೆ. ೮೦ರ ದಶಕದ ಅನಂತರದ ಪೀಳಿಗೆಗೆ ಹಾಕಿ ಏನೆಂದು ಅರ್ಥವಾಗಿದೆ. ಒಂದಿಷ್ಟು ಜನರಿಗೆ ಉದ್ಯೋಗವಾಗಿದೆ, ಪ್ರತಿಭೆಗಳು ಹೊರಬಂದಿವೆ. ಅಟ್ಟದಲ್ಲಿದ್ದ ಸ್ಟಿಕ್‌ಗಳು ಕೆಳಬಂದಿವೆ. ತಮ್ಮ ಕುಟುಂಬಗಳ ಪರಿಚಯವಾಗಿದೆ.ಕಣ್ಣು ತೇವವಾಗಿದೆ, ಮನಸ್ಸು ಆರ್ದ್ರವಾಗಿದೆ. ಸೌಹಾರ್ದ ಮೂಡಿದೆ. ಆಂತರಿಕ ಕಲಹಗಳು ಅಂತ್ಯ ಕಂಡಿವೆ. ವ್ಯಾಜ್ಯಗಳು ನ್ಯಾಯಾಲಯದ ಹಂಗಿಲ್ಲದೆ ಕೊನೆಗೊಂಡಿವೆ. ಊರು ಬಿಟ್ಟವರು ತಮ್ಮ ಕುಟುಂಬದ ಪ್ರತಿಷ್ಠೆಗಾಗಿ ಮರಳಿ ಮಣ್ಣಿಗೆ ಬರುತ್ತಿದ್ದಾರೆ. ಒಂದು ಅದ್ಭುತ ರೂಪಕವಲ್ಲವೇ? ಜಾಗತೀಕರಣಕ್ಕೆ ಉತ್ತರವೇನು ಎಂಬ ಪ್ರಶ್ನೆಗೆ ‘ಹಾಕಿ ಉತ್ಸವ’ ಎನ್ನುವುದೂ ಒನ್ ವರ್ಡ್ ಉತ್ತರವಲ್ಲವೇ? ಒಟ್ಟಾರೆ ರೋಚಕತೆ, ರೋಮಾಂಚಕತೆ,ಚಾಕಚಕ್ಯತೆ ಪುಳಕ, ಅಗಾಧ ಜನಸಾಗರ, ಪ್ರತಿಭೆ, ಕೌಶಲ್ಯ ಮೊದಲಾದವನ್ನು ಏಕಕಾಲದಲ್ಲಿ ಒಂದೆಡೆ ನೋಡಬೇಕೆಂದರೆ ಹಾಕಿ ಹಬ್ಬಕ್ಕೆ ಬರಬೇಕು.

ಪಂದ್ಯಾವಳಿ ಒಂದು ತಿಂಗಳು ಮಾತ್ರ ನಡೆಯುತ್ತದೆಯಾದರೂ ಪ್ರಕ್ರಿಯೆ ನಿರಂತರ.ತಯಾರಿ,ಸಂಪರ್ಕಗಳು ಕುಟುಂಬಗಳನ್ನು ಸದಾ ಹತ್ತಿರದಲ್ಲಿಟ್ಟಿರುತ್ತವೆ.ಈಗಾಗಲೇ ಕೊಡಗಿನ ಸಣ್ಣಪುಟ್ಟ ಪಟ್ಟಣಗಳಲ್ಲಿ ಹಾಕಿ ಕೋಚಿಂಗ್ ಸೆಂಟರ್ ಗಳು, ಹಾಕಿ ಕ್ಲಬ್‌ಗಳು, ಅಕಾಡೆಮಿಗಳು ತಲೆ ಎತ್ತಿವೆ.ಬಹುಮುಖಿಯಾಗಿ ಕಾರ್ಯೋನ್ಮುಖವಾಗಿರುವ ಅಪರೂಪದ ಸಂಗತಿಗಳಲ್ಲಿ ಹಾಕಿ ಹಬ್ಬ ಪ್ರಮುಖವಾಗಿ ಗಮನ ಸೆಳೆಯುತ್ತದೆ.ಇದೀಗ ದಿನದಿಂದ ದಿನಕ್ಕೆ ರಂಗೇರುತ್ತಿರುವ ಕೊಡವ ಹಾಕಿ ಉತ್ಸವ ಹಲವು ಅಪರೂಪದ ಘಟನೆಗಳಿಗೂ ಸಾಕ್ಷಿಯಾಗಿವೆ. ೮೬ ವರ್ಷದ ವೃದ್ದರೂ (ಚಾಚರಣೆಯಂಡ ನಾಣಯ್ಯ), ೮ ವರ್ಷದ ಬಾಲಕಿಯರಿಬ್ಬರೂ ಆಡಿದ್ದಾರೆ (ಕೋದಂಡ ನೀಲಾ ಸೋಮಣ್ಣ), ಒಂದೇ ಮನೆಯ ೮(ಮೂಕಳಮಾಡ ತಂಡ) ಮಂದಿಯೂ ಆಡಿದ್ದಾರೆ.ಗಂಡನೊಟ್ಟಿಗೆ ಹೆಂಡತಿಯೂ,ಅಣ್ಣನೊಟ್ಟಿಗೆ ತಂಗಿಯೂ(ಮಾಣಿಪಂಡ ತಂಡ), ಅಜ್ಜ, ಅಪ್ಪ, ಮೊಮ್ಮಕ್ಕಳೂ, ಅತ್ತೆ,ಸೊಸೆಯಂದಿರೂ,ಗಂಡನ ಮನೆಯೊಟ್ಟಿಗೆ ತವರು ಮನೆಯವರೂ ಸೆಣಸಿದ ಉತ್ಸಾಹಕ್ಕೆ ಪೊನ್ನಂಪೇಟೆಯ ಎರಡು ಮೈದಾನಗಳು ಸಾಕ್ಷಿಯಾಗಿದೆ.

ಇಲ್ಲಿ ಹಾಕಿ ರಂಗೇರುತ್ತಿರುವ ಹೊತ್ತಲ್ಲಿ ಅಲ್ಲಿ ಸುರೇಶ್ ಕಲ್ಮಾಡಿಯ ಬಂಧನವಾಗಿದೆ. ಅಲ್ಲಿ ಸೇಲ್ ಆದ ಆಟಗಾರರು ಆಡುತ್ತಿದ್ದಾರೆ.ಹೊಡೆದಿರುವ ರನ್ನು,ಉರುಳಿರುವ ವಿಕೆಟುಗಳ ಲೆಕ್ಕಾಚಾರಗಳ ಚರ್ಚೆಯಾಗುತ್ತಿವೆ.ತುಂಡು ಚಡ್ಡಿಯ,ಮೋಟು ಲಂಗದ ಚೀರೋ ಹುಡುಗಿಯರ ಕುಣಿತ ನಡೆಯುತ್ತಲೇ ಇದೆ.ಇಲ್ಲಿ ಆರಾಧನೆಯ ಸಂಸ್ಕೃತಿ ಪರಂಪರೆಯನ್ನು ಉಳಿಸುತ್ತಿದೆ.ಕ್ರೀಡೆಯಲ್ಲಿ ಎರಡು ವೈರುಧ್ಯಗಳು. ಎರಡು ತುದಿಗಳಲ್ಲಿ ಎರಡು ಉತ್ತುಂಗಗಳು!ಈ ಹೊತ್ತಿನಲ್ಲಿ ಕುಟುಂಬವಾಗಿ ಆಡುವುದು ಎಲ್ಲಾ ಕ್ರೀಡೆಗಳಿಗೆ ಒಂದು ಪಾಠವಾಗಬೇಕು. ಅದು ಹೇಗೆಂಬುದನ್ನು ಕೊಡವ ಹಾಕಿ ಹಬ್ಬದಿಂದ ತಿಳಿಯಬೇಕು. ಇದೆಲ್ಲದರ ಬಗ್ಗೆ ಪಾಂಡಂಡ ಕುಟ್ಟಪ್ಪನವರನ್ನು ಕೇಳಿದರೆ ಅವರು ಹೇಳುವುದು ಒಂದೇ“ಎಲ್ಲವನ್ನೂ ನಮ್ಮ ಮನೆಯಿಂದ ಆರಂಭಿಸಿದ್ದೇವೆ” ಎಲ್ಲದಕ್ಕೂ ಒಮ್ಮೆ ಪೊನ್ನಂಪೇಟೆಗೆ ಬಂದು ನೋಡಬೇಕು.

drink coorg coffee and watch good hockey

 

 

‍ಲೇಖಕರು G

May 11, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: