ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲನೆಂಬ ಕೊಲೆಗಾರ

rajeshwariರಾಜೇಶ್ವರಿ.ಎಂ.ಸಿ

ಕಾಲನೆಣವ ಹೆಗಲೇರಿಸಿಕೊಂಡು
ಹೆಣಗಾಡಿ ಸಾಗುತಿಹೆನು…,
ಗಡಿಯಾರದ ಮುಳ್ಳನ್ನು
ಹೂ ಮಾಡುವಾಸೆಯಿಂದ…,

ವಠವೃಕ್ಷದ ಕವಾಟಗಳಲ್ಲಡಗಿವೆ
ಗೂಡಕ್ಕಿಗಳು,
ಮೊದಲೆಲ್ಲ ಗಂಡಕ್ಕಿ ಬದುಕು
ಸಾಗಿಸುತಿತ್ತು..,
ಹೆಣ್ಣಕ್ಕಿ ಬಾಳ ನೇಯುತ್ತಿತ್ತು..,
ಈಗ ಹಾಗಿಲ್ಲ.
ಒಬ್ಬಂಟಿ ಮರಿ ಹಕ್ಕಿ
ತೆರೆದ ಕಿಟಕಿಯ ಸರಳುಗಳ
ನಡುವೆ
ಕಾಲವೆಣಿಸುತ್ತಾ…ಹೆತ್ತವರ
ದಾರಿ ಕಾಯುತ್ತದೆ.
ಅದಕಿನ್ನೂ ರೆಕ್ಕೆ ಬಲಿತಿಲ್ಲ.
ಹಾರುವುದ ಕಲಿತಿಲ್ಲ.

ಅಲ್ಲಿ ಬೀದಿ ಬದಿಯ
ಬಯಲಿನಲಿ ಅಲೆಯುತಿದೆ
ಬಿಕಾರಿ, ಬೀಡಾಡಿ
ಅಲೆಮಾರಿ ಹಕ್ಕಿ,
ತನ್ಹೆಣವ ತಾನೊತ್ತು..,
ಹೊಟ್ಟೆ ಹೊರೆವ
ಕಾಯಕಕೆ…
ಅದ್ಯಾತರದ ನಾಚಿಕೆ ?

ಬದುಕ ಓಣಿಗಳಲಿ
ಯಾರಿದ್ದರೇನು?
ಕಂಡರೂ ಕಾಣದಂತೆ,
ಜಾರಿಯೂ ಬೀಳದಂತೆ
ನಡೆಯಬೇಕು ತಾನು.
ಹೇ… ಕೂಸೇ… ಕೇಳಿಲ್ಲಿ,
ನೀನೊತ್ತ ನಿನ್ಹೆಣವ
ಯಾವಕಾಲಕೂ
ಯಾರೆಲ್ಲಿಗೂ
ಬದಲಿಸಲಾರೆ.
ಹಾಗೆಂದು ಹಿಂದಿರುಗಿ ಬಿಡಬೇಡ.
ಹಿಂತಿರುಗಿಯೂ ನೋಡಬೇಡ.
ನಿನ್ಹಿಂದೆ ಕಾಂಬ
ನಿಂತ ನೀರ ಮೇಲಿನ ನಿನ್ನದೇ ಪ್ರತಿಬಿಂಬ,
ನಿನ್ನ ಮೇಲೆಯೇ ನೀನು
ಕನಿಕರಿಸುವಂತೆಯೂ ಮಾಡಬಹುದು.
ನಿನ್ನನಶಕ್ತನಾಗಿಸಲೂಬಹುದು.
ಹೂವಾಗಲಾರದು ಮುಳ್ಳು.
ನೀ ನಂಬಬೇಡ ಅದು ಸುಳ್ಳು !!!

ಬದುಕೊಂದಾವರ್ತಿ
ಸಾಗುವುದೋ…? ಇಲ್ಲವೋ…?
ಈ ಜಗ ನಿಂತ ನೀರಾದರೇನು ?
ಕಾಲ ಪರಿಭ್ರಮಿಸುತ್ತದೆ,
ತನ್ನಿಷ್ಟಕ್ಕೆ… ತನ್ನಷ್ಟಕ್ಕೆ ತಾನು.

‍ಲೇಖಕರು Admin

25 September, 2016

1 Comment

  1. mm shaik

    nice poem…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading