ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Can I hug you…?

ಅಕ್ಕಯ್ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತೆ ಹಾಗೂ ಅವರ ಹಕ್ಕುಗಳಿಗಾಗಿ ರಾಷ್ಟ್ರ ಮಟ್ಟದಲ್ಲಿ ಹೋರಾಟದ ಮುಂಚೂಣಿಯಲ್ಲಿರುವವರು.

ಜಗದೀಶ ಎನ್ನುವ ಹುಡುಗ ಅಕ್ಕಯ್ ಆಗಿ ಬದಲಾದ.

ಆತನ ತಲ್ಲಣಗಳ ಕಥೆಯನ್ನು ವಿವರಿಸುವ ಆತ್ಮಕಥನ ‘ಅಕ್ಕಯ್’ ಅನ್ನು ಬಹುರೂಪಿ ಪ್ರಕಟಿಸುತ್ತಿದೆ.

ಈ ಕೃತಿ ಇಂದು ‘ಪ್ರೈಡ್ ಡೇ’ ದಿನದ ಅಂಗವಾಗಿ ಬಿಡುಗಡೆಯಾಗುತ್ತಿದೆ.

ಈ ಕೃತಿಗೆ ಬರೆದ ಮಾತು ಇಲ್ಲಿದೆ-

ಜಿ ಎನ್ ಮೋಹನ್

Can I hug you?- ಎಂಬ ಪ್ರಶ್ನೆ ತೂರಿಬಂದದ್ದೇ ತಡ ಇಡೀ ಸಭೆ ಬೆಕ್ಕಸಬೆರಗಾಯಿತು.

ಸಭಾಂಗಣದಲ್ಲಿ ಇದ್ದ ಎಲ್ಲರೂ ಈ ದನಿ ಬಂದದ್ದು ಎಲ್ಲಿಂದ ಎಂದು ತಿರುಗಿ ನೋಡಿದರು. ಜಗತ್ತಿನ ಎಲ್ಲೆಡೆಯಿಂದ ಬಂದಿದ್ದ ಮಾಧ್ಯಮಗಳ ಕ್ಯಾಮೆರಾಗಳು ಆ ಪ್ರಶ್ನೆ ಮಾಡಿದವರತ್ತ ತಿರುಗಿದವು. ಇಡೀ ಜಗತ್ತಿಗೆ ಸಮಾರಂಭದ ನೇರ ಪ್ರಸಾರ ಮಾಡಲು ಕುಳಿತ ಟಿ ವಿ ಮಾಧ್ಯಮಗಳು ಚುರುಕಾದವು. ಸಭಾಂಗಣದಲ್ಲಿದ್ದವರು ಬಿಡಿ ವೇದಿಕೆಯ ಮೇಲೆ ಮಾತಿಗೆ ನಿಂತಿದ್ದ ಆ ಬರಾಕ್ ಒಬಾಮಾ ಸಹಾ ದಂಗಾಗಿ ಹೋದರು. 

ಆ ಪ್ರಶ್ನೆಯನ್ನು ಕೇಳಿದ್ದು ಅಕ್ಕಯ್ ಪದ್ಮಶಾಲಿ. 

ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದಾಗ ಅವರ ‘ಒಬಾಮ ಫೌಂಡೇಶನ್’ ದೇಶವನ್ನು ಬದಲಿಸುವ ಕನಸುಳ್ಳ ಯುವ ಜನರನ್ನು ಭೇಟಿ ಮಾಡಲು ಬಯಸಿತು. ಹಾಗೆ ‘ಕಣ್ಣಲ್ಲಿ ಕನಸುಳ್ಳವರು’ ಎಂದು ಆಯ್ಕೆಯಾದದ್ದು ಅಕ್ಕಯ್. ‘ನನ್ನ ಬಳಿ ಒಂದು ಪ್ರಶ್ನೆ ಇದೆ, ಇನ್ನೊಂದು ಕೋರಿಕೆ ಇದೆ’ ಎಂದು ಅಕ್ಕಯ್ ಹೇಳಿದಾಗ ಒಬಾಮ ಮುಗುಳ್ನಕ್ಕಿದ್ದರು. ‘ನಾನು ಒಬ್ಬ ಲೈಂಗಿಕ ಅಲ್ಪಸಂಖ್ಯಾತೆ. ನಾನು ಬೀದಿಯಲ್ಲಿ ಸೆಕ್ಸ್ ಮಾಡಲೆಂದು ಹುಟ್ಟಿದವಳಲ್ಲ, ಮಕ್ಕಳನ್ನು ಕದಿಯುವ ವ್ಯಕ್ತಿಯಲ್ಲ, ನನ್ನ ಬದುಕನ್ನು ನರಕ ಮಾಡಿದ್ದು ಯಾರು? ನನ್ನ ಬದುಕುವ ಹಕ್ಕನ್ನು ಕಸಿದವರು ಯಾರು?’ ಎಂದು ಪ್ರಶ್ನೆ ಕೇಳಿದಾಗ ಇಡೀ ಸಭಾಂಗಣ ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿತು.

ಆ ಚಪ್ಪಾಳೆಯನ್ನೂ ಭೇದಿಸಿ ಅಕ್ಕಯ್ಕ ‘ಈಗ ನನ್ನ ಕೋರಿಕೆಯೊಂದಿದೆ’ ಎಂದು ಒಬಾಮಾರತ್ತ ನೋಡಿದಾಗ ಏನದು? ಎಂದು ಇಡೀ ಸಭಾಂಗಣ ಒಂದು ಕ್ಷಣ ಸ್ಥಬ್ಧವಾಯಿತು. ‘ಮಿಸ್ಟರ್ ಪ್ರೆಸಿಡೆಂಟ್, ನಾನು ನಿಮ್ಮನ್ನು ತಬ್ಬಬಹುದೇ?’  Can I Hug you?’ ಎಂದು ಕೇಳಿದಾಗ ಇಡೀ ಸಭೆ ಮೂಕವಿಸ್ಮಿತವಾಯಿತು.

ಬರಾಕ್ ಒಬಾಮ ಸಹಾ ಒಂದು ಕ್ಷಣ ಮೌನವಾದವರೇ ಸಾವರಿಸಿಕೊಂಡು ‘ಯಾಕಾಗುವುದಿಲ್ಲ, ನಾನು ಸಿದ್ಧ’ ಎಂದರು.

ಅದು ಅಕ್ಕಯ್  ಪದ್ಮಶಾಲಿ.

ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು 
ಕಾಣದೊಂದು ಕನಸ ಕಂಡು ಮಾತಿಗೊಲಿಯದಮೃತವುಂಡು…..

ಬದುಕಿದೆ ಎಂದೇ ನಂಬಿರುವ ಸಮಾಜದಲ್ಲಿ ಈ ‘ಹೆಣ್ಣು- ಗಂಡು’ ಎನ್ನುವ ಸಿದ್ಧ ವ್ಯಾಖ್ಯಾನವನ್ನೇ ಧಿಕ್ಕರಿಸಿ ಬದುಕುತ್ತಿರುವ ಮನಸ್ಸುಗಳು ಎದುರು ನೋಡುತ್ತಿರುವುದು ಒಂದು ತಬ್ಬುವಿಕೆಯನ್ನು. ಆತ್ಮವಿಶ್ವಾಸ ನೀಡಿಬಿಡುವ ಒಂದು hug ಅನ್ನು. 

——– ಅಲಿಯಾಸ್ ಅಕ್ಕಯ್ ಪದ್ಮಶಾಲಿ ಅಲಿಯಾಸ್ ಅಕ್ಕಯ್  ನನ್ನೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ನಾನು ಆಕೆಯ ಮಿಂಚುಗಣ್ಣನ್ನೂ, ಆಕೆ ಮಾತು ಮಾತಿಗೆ ನಗುವಾಗ ತೂಗುತಿದ್ದ ಕಿವಿಯ ಝುಮುಕಿಯನ್ನೂ, ಬಳೆಗಳ ಹೊಳಪನ್ನೂ ನೋಡುತ್ತಾ ಇದ್ದೆ. ಅದು ಅಕ್ಕಯ್ ಗೆ ಗೊತ್ತಾಗಿ ಹೋಯಿತೇನೋ ‘ನನ್ನ ಹೆಸರು ಜಗದೀಶ’ ಎಂದರು. 

ತನ್ನ ೧೨ ನೆಯ ವಯಸ್ಸಿನಲ್ಲೇ ಗಂಡಿನ ದೇಹದೊಳಗಿರುವ ಹೆಣ್ಣನ್ನು ಸಮಾಜ ಒಪ್ಪಿಕೊಳ್ಳದೆ ಹೋದುದರಿಂದ ಹತಾಶನಾಗಿ ನೇಣಿಗೆ ಕೊರಳೊಡ್ಡಿದ್ದ ಜಗದೀಶ, ಅಕ್ಕಯ್ ಆಗಿ ಬದಲಾಗಿ ಒಬಾಮ ಎದುರು ನಿಲ್ಲುವ ವೇಳೆಗೆ ಅವಳ ಮಡಿಲಲ್ಲಿ ಕಣ್ಣೀರ ಕಥೆಗಳ ರಾಶಿಯೇ ಇತ್ತು. ಅವಮಾನ ಅತ್ಯಾಚಾರದ ಇತಿಹಾಸವಿತ್ತು.

ಗಂಡಿನ ದೇಹದೊಳಗೆ ಹೆಣ್ಣಿನ ಮನಸ್ಸು ಇದ್ದ ಒಂದೇ ಕಾರಣಕ್ಕೆ ಜಗತ್ತಿನಾದ್ಯಂತ ನೋವು, ಅವಮಾನ ಅತ್ಯಾಚಾರಗಳನ್ನು ಅನುಭವಿಸುತ್ತಿರುವವರಿಗೆ ಬೇಕಿರುವುದು ಒಂದು ಆತ್ಮವಿಶ್ವಾಸ . ಈ ಜಗತ್ತು ನನ್ನದೂ ಸಹಾ ಎನ್ನುವ ಒಂದು ಪುಟ್ಟ ಆತ್ಮವಿಶ್ವಾಸ ಆಕೆಗೆ ಬೇಕಿತ್ತು. 

ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ 

ಭಯ ಸಂಶಯ ತಲ್ಲಣಗಳ ಕಂದರಗಳು ತೆರೆದಿವೆ  

ಎನ್ನುವುದು ಚೆನ್ನಾಗಿ ಗೊತ್ತಿರುವುದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೇ . 

ಶಾಲೆಯಿರಲಿ, ತರಪೇತಿ ಪಡೆಯುತ್ತಿದ್ದ ಸಂಸ್ಥೆ ಇರಲಿ, ಕೆಲಸದ ಜಾಗವಿರಲಿ… ಈತನ ಲಿಂಗ ಯಾವುದು ಎನ್ನುವುದನ್ನು ಗೊತ್ತು ಮಾಡಿಕೊಳ್ಳಲಿಕ್ಕಾಗಿಯೇ ಬಟ್ಟೆ ಹರಿದು ಅತ್ಯಾಚಾರ ಮಾಡಿದ ಸಮಾಜ ಇದು. 

ಕಂಡ ಕಂಡಲ್ಲೆಲ್ಲಾ ಹುಲಿ ಸಿಂಹ ಚಿರತೆಗಳು 

ಅವಳ ಮೈ ಸಿಗಿದದ್ದು ಯಾವ ಪ್ರಾಣಿ 

ಎನ್ನುವ ಗೊಂದಲವೇ ಅಕ್ಕಯ್ ಗೆ ಇರಲಿಲ್ಲ. ಯಾಕೆಂದರೆ ಇಡೀ ಸಮುದಾಯವೇ ಇವರ ಮೇಲೆ ಎರಗಲು ನಿಂತಿತ್ತು.

ಅಕ್ಕಯ್ ಕಥನ ನಮ್ಮೊಳಗೇ ತಲ್ಲಣ ಉಂಟು ಮಾಡುವ ಕಥೆಯಲ್ಲ, ಬದಲಿಗೆ Can I Hug you? ಎಂದು ಧಿಟ್ಟತನದಿಂದ ಕೇಳುವ, ಆತ್ಮವಿಶ್ವಾಸ ಮೂಡಿಸುವ ಕಥನ. ‘ನೆಲಕ್ಕೊದ್ದು ಮುಗಿಲ ಜಿಗಿದರೆ..’ ಎನ್ನುವ ಮಾತಿದೆ. ಅಂತೆಯೇ, ಥೇಟ್ ಅಂತೆಯೇ ಅಕ್ಕಯ್ ದು ನೆಲಕ್ಕೊದ್ದು ಮುಗಿಲಿಗೆ ಚಿಮ್ಮಿದ ಕಥೆ. 

ಕಬ್ಬನ್ ಪಾರ್ಕ್ ನಲ್ಲಿ, ಕಾರ್ಪೋರೇಶನ್ ಸರ್ಕಲ್ ನಿಂದ ನನ್ನನ್ನು ಎಳೆದೊಯ್ದು ರೇಪ್ ಮಾಡಿದ, ಠಾಣೆಯಲ್ಲಿಟ್ಟು ಬೆತ್ತಲೆ ಮಾಡಿ ಹಿಂಸಿಸಿದ, ಅನೇಕ ಕೇಸುಗಳನ್ನು ಜಡಿದ ಪೊಲೀಸರು ‘ಯಸ್ ಮೇಡಂ’ ಎನ್ನುವ ಸ್ಥಿತಿಯೂ ಬಂತು ಎನ್ನುವಾಗ ಅಕ್ಕಯ್ ಕಣ್ಣು ಮಿನುಗುತ್ತಿತ್ತು. ಲೈಂಗಿಕ ವೃತ್ತಿಯಲ್ಲಿದ್ದ, ಭಿಕ್ಷೆ ಬೇಡುತ್ತಿದ್ದ ಅಕ್ಕಯ್ ಆತ್ಮವಿಶ್ವಾಸದ ತುಣುಕನ್ನು ಕೈನಲ್ಲಿ ಹಿಡಿದು ಬೆಳೆಯುತ್ತಾ ಹೋಗಿ ತಲುಪಿದ್ದು ರಾಜ್ಯ ಪೊಲೀಸ್ ಅಕಾಡೆಮಿಯನ್ನು. ಪೊಲೀಸರಿಗೆ ತರಬೇತಿ ನೀಡಲು ನಿಂತಾಗ ಎಷ್ಟೋ ಮನಸ್ಸುಗಳು ತಲ್ಲಣಿಸಿದವು. ‘ಸಾರಿ ಮೇಡಂ, ಅಂದಿನ ನಮ್ಮ ವರ್ತನೆಗೆ ಕ್ಷಮೆ ಇರಲಿ’ ಎನ್ನುವ ಮಾತು ಅಕ್ಕಯ್ ಗೆ ಸಿಕ್ಕಿದ ಒಂದು ದೊಡ್ಡ ಪ್ರಶಸ್ತಿ ಪತ್ರ.

‘ಏನು ಗೊತ್ತಾ, ನಾನು ಪ್ರತೀ ದಿನ ಡಿಕ್ಷನರಿ ಹಿಡಿದು ಅದರಲ್ಲಿ ಐದು ಪದ ಆಯ್ದುಕೊಂಡು ಅದರ ಅರ್ಥ ತಿಳಿಯುತ್ತಾ ಶಬ್ದದ ನಾಡಿ ಮಿಡಿತವನ್ನು ಅರಿಯುತ್ತಾ ಹೋದೆ. ಪ್ರತೀ ದಿನ ಆ ಶಬ್ದಗಳ ಉಚ್ಚಾರಣೆ ಮಾಡುವುದು ಹೇಗೆ ಎನ್ನುವುದನ್ನು ಕಲಿತೆ’ ಎಂದರು ಅಕ್ಕಯ್. ತಮ್ಮ ಛಲ ಬಿಡದ ಗುಣಕ್ಕೆ ಅವರು ನನಗೆ ಅದನ್ನು ಸಾಕ್ಷಿಯಾಗಿ ಹೇಳುತ್ತಿದ್ದರು.

ಅಕ್ಕಯ್ ತಮ್ಮ ಸಮುದಾಯದ ನಾಡಿ ಮಿಡಿತವನ್ನೂ, ದುಃಖ ದುಮ್ಮಾನವನ್ನೂ ಅರ್ಥ ಮಾಡಿಕೊಂಡಿದ್ದು ಹೀಗೆಯೇ, ಹಲ್ಲು ಕಚ್ಚಿ.. ದೃಢ ಮನಸ್ಸಿನಿಂದ. ಹಾಗಾಗಿಯೇ ಅವರು ಬೀದಿಯಲ್ಲಿ ಭಿಕ್ಷೆ ಬೇಡುವ, ಪೊದೆ ಮರೆಯಲ್ಲಿ ಲೈಂಗಿಕ ವೃತ್ತಿ ಮಾಡುವ ಕೆಲಸಕ್ಕೆ ಬೆನ್ನು ಹಾಕಿ ಜಗತ್ತು ತನ್ನ ಸಮುದಾಯದ ಬಗ್ಗೆ ಯೋಚಿಸುವಂತೆ ಮಾಡುವ, ಸರ್ಕಾರ, ನ್ಯಾಯಾಲಯ, ಪೊಲೀಸು, ಜನ ಸಮುದಾಯ ಸಕಾರಾತ್ಮಕವಾಗಿ ಚಿಂತಿಸುವಂತೆ ಮಾಡುವ ಕೆಲಸಕ್ಕೆ ನಿಂತರು.

ಇವತ್ತು ಅಕ್ಕಯ್ ‘ಮಹಿಳೆ’ ಎಂಬ ಗುರುತಿರುವ ಡ್ರೈವಿಂಗ್ ಲೈಸನ್ಸ್ ಹೊಂದಿದ್ದಾರೆ. ಪಾಸ್ ಪೋರ್ಟ್ ಇದೆ, ಮದುವೆಯಾಗಿದ್ದಾರೆ, ಮಗುವನ್ನು ಕಾನೂನು ರೀತಿ ದತ್ತು ತೆಗೆದುಕೊಂಡಿದ್ದಾರೆ. ‘ಗುರುತು’ಗಳು ಈಗ ಇವರ ಬಳಿ ಇವೆ.

ಮುಖ್ಯ ನ್ಯಾಯಮೂರ್ತಿಗಳ ಪ್ರಮಾಣ ವಚನಕ್ಕೆ ರಾಷ್ಟ್ರಪತಿಗಳು ಅಕ್ಕಯ್ ಗೆ ರಾಷ್ಟ್ರಪತಿ ಭವನಕ್ಕೆ ಬರಲು ಆಹ್ವಾನ ನೀಡುತ್ತಾರೆ. ಅಮೆರಿಕಾದ ಹಲವು ವಿಶ್ವವಿದ್ಯಾಲಯಗಳು ಉಪನ್ಯಾಸ ನೀಡಲು ಆಹ್ವಾನ ನೀಡುತ್ತವೆ. ನ್ಯಾಯಾಂಗ ತನ್ನ ಅನೇಕ ಯೋಜನೆಯಲ್ಲಿ ಅಕ್ಕಯ್ ಮುಖ್ಯ ಭಾಗವಾಗಿರುವಂತೆ ನೋಡಿಕೊಳ್ಳುತ್ತದೆ. ಖುದ್ದು ರಾಜ್ಯ ಸರ್ಕಾರವೇ ತನ್ನ ಅತ್ಯುನ್ನತ  ರಾಜ್ಯೋತ್ಸವ ಪ್ರಶಸ್ತಿಯನ್ನು ಈಕೆಯ ಕೊರಳಿಗೆ ತೊಡಿಸುತ್ತದೆ. 

ಅಕ್ಕಯ್ ಇವತ್ತು ವ್ಯಕ್ತಿಯಲ್ಲ, ಬದಲಿಗೆ ಒಂದು ಸಮಾಜದ ಗುರುತು. ಅಕ್ಕಯ್ ಇವತ್ತು ವ್ಯಕ್ತಿಯಲ್ಲ, ಒಂದು ದನಿ, ಅಕ್ಕಯ್ ಇಂದು ಒಬ್ಬ ವ್ಯಕ್ತಿಯಲ್ಲ ಬದಲಿಗೆ ಶತಮಾನದ ತೊಳಲಾಟದ ಸಂಕೇತ, ಅಕ್ಕಯ್ ಇಂದು ಒಬ ವ್ಯಕ್ತಿಯಲ್ಲ, ಬದಲಿಗೆ ಒಂದು ಆಶಾಕಿರಣ. ಹಾಗಾಗಿಯೇ ಈ ಕೃತಿಯ ಹೆಸರು ‘ಅಕ್ಕಯ್’. ಅಕ್ಕಯ್ ಮಾತ್ರ. 

‘ಏನು ಗೊತ್ತಾ ಮೋಹನ್, ನಾನು ನನ್ನ ಇಡೀ ದೇಹವನ್ನು ಆಸ್ಪತ್ರೆಗೆ ದಾನ ಮಾಡಿದ್ದೇನೆ’ ಎಂದರು. ಅದರಲ್ಲೇನಿದೆ ಹೆಚ್ಚಿನದ್ದು? ಎನ್ನುವಂತೆ ನಾನು ಮುಖ ಮಾಡಿದ್ದು ಅವರಿಗೆ ಗೊತ್ತಾಯಿತೇನೋ, ‘ಒಂದು ಗಂಡಿನ ದೇಹದೊಳಗೆ ಒಂದು ಹೆಣ್ಣು ಮನಸ್ಸು ಬಂದು ಕೂಡುತ್ತಲ್ಲಾ ಅದು ಹೇಗೆ ಎನ್ನುವ ವಿಸ್ಮಯವನ್ನು ಈ ವಿಜ್ಞಾನವಾದರೂ ಅರಿಯಲಿ. ಯಾರಿಗೆ ಗೊತ್ತು ನಾಳೆ ವಿಜ್ಞಾನ ಇದನ್ನು ವಿವರಿಸುವ ಸ್ಥಿತಿಗೆ ಬಂದಾಗ ನನ್ನ ಸಮುದಾಯದ ನಿಟ್ಟುಸಿರು ಒಂದಿಷ್ಟಾದರೂ ಕಡಿಮೆಯಾಗಬಹುದೇನೋ’ ಎಂದರು.

ಲಿಂಗ ತಾರತಮ್ಯ ಹೋಗಲಾಡಿಸುವ ಅರಿವಿನ ಆಂದೋಲನ ಹಮ್ಮಿಕೊಂಡಿದ್ದ ನ್ಯಾಯಾಂಗ ಅದನ್ನು ಯಶಸ್ವಿಯಾಗಿ ಮುಗಿಸಿ ಹೊರಡುವಾಗ ಅಕ್ಕಯ್ ಕೈಮುಗಿದು ಹೇಳಿದರು- ‘ನಿಮ್ಮ ಆಂದೋಲನ ಮುಗಿದಿದೆ. ಆದರೆ ನಮ್ಮ ಆಂದೋಲನ ಇಲ್ಲಿಂದ ಇನ್ನಷ್ಟೇ ಶುರುವಾಗಬೇಕಾಗಿದೆ’ ಎಂದು. ಈ ಪುಸ್ತಕ ಓದುವವರಿಗೂ ಅಷ್ಟೇ ಚೆನ್ನಾಗಿ ಗೊತ್ತಾಗುತ್ತದೆ- ಈ ಪುಸ್ತಕ ಓದಿ ಮುಗಿಸಿದ ನಂತರವಷ್ಟೇ ಅವರ ಮನಸ್ಸಿನೊಳಗೆ ಒಂದು ಚಿಂತನೆಯ ಅಲೆ ಎದ್ದೇಳಲಿದೆ ಎಂದು.

ಸೆಕ್ಸ್ ಆಪರೇಷನ್ ಗಾಗಿ ಇನ್ನೇನು ಆಪರೇಷನ್ ಥೀಯೇಟರ್ ಹೊಕ್ಕುವ ಮುನ್ನ ಡಾಕ್ಟರ್ ನಿಮ್ಮ ಕತ್ತು ಕಲ್ಪನಾ ರೀತಿ ಇದೆ ಎಂದರು. ಅಕ್ಕಯ್ ಗೆ ಅಂದಿನಿಂದ ಕಲ್ಪನಾ ಕನಸು. ನಾನು ಕೇಳಿದೆ ನಿಮ್ಮ ಮಹತ್ವದ ಆಸೆ ಏನು. ನನಗೆ ಕಲ್ಪನಾ ಸಮಾಧಿ ಎಲ್ಲಿದೆ ಎಂದು ಹುಡುಕಿ ಅದಕ್ಕೆ ಒಂದು ಪುಷ್ಪ ನಮನ ಸಲ್ಲಿಸಬೇಕು ಎಂದರು. ‘ಅವಧಿ’ (avadhimag.in) ಯಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ ಕಲ್ಪನಾ ಸಮಾಧಿ ಬೆಂಗಳೂರಿನಲ್ಲಿರುವುದರ ಬಗ್ಗೆ ಬರೆದಿದ್ದೆವು. ಅರೆ! ಅಷ್ಟೇ ತಾನೇ ನಡೆಯಿರಿ ಹೋಗೋಣ.. ಎನ್ನುವ ಹುಮ್ಮಸ್ಸು ನನಗೆ.

ಹೊರಡಲು ಎದ್ದು ನಿಂತ ಅಕ್ಕಯ್ ‘ಇತಿಹಾಸ ನಮ್ಮೆಲ್ಲರ ಕ್ಷಮೆ ಯಾಚಿಸುವ ದಿನ ಬರಲಿದೆ’ ಎಂದರು. ಅವರಿಗೆ ತಮ್ಮ ಮಾತಿನಲ್ಲಿ ಸಂಪೂರ್ಣ ವಿಶ್ವಾಸವಿತ್ತು. ನಾಳೆ ನಮ್ಮನ್ನು ಇಡೀ ಮಾನವ ಕುಲ ಒಪ್ಪಿ ಅಪ್ಪಿಕೊಳ್ಳುವ ದಿನ ಬಂದೇ ಬರುತ್ತದೆ ಎಂದು ಅವರು ವಿಶ್ವಾಸದಿಂದ ಬೀಗುತ್ತಿದ್ದರು.

ತಕ್ಷಣ ನನಗೆ ಅವರು ಒಬಾಮಾ ಗೆ Can I hug you? ಎಂದು ಕೇಳಿದ್ದು ನೆನಪಿಗೆ ಬಂತು. ಅಕ್ಕಯ್ ಅತ್ತ ತಿರುಗಿ ‘ಅಕ್ಕಯ್ Can I hug you? ಎಂದೆ. ಚಕ್ರ ಒಂದು ಸುತ್ತು ಬಂದಿತ್ತು. 


ಈ ಕೃತಿಗಾಗಿ ಸಂಪರ್ಕಿಸಿ-

ಕೃತಿ: ಅಕ್ಕಯ್ 

ನಿರೂಪಣೆ: ಡಾ ಡೊಮಿನಿಕ್ ಡಿ 

ಪುಟ: 270

ಬೆಲೆ: ರೂ 300 

ಸಂಪರ್ಕ: 70191 82729

‍ಲೇಖಕರು Admin

28 June, 2021

1 Comment

  1. Sudha Adukala

    ಹಂಚಿಕೊಳ್ಳದೇ ಹೇಗಿರಲಿ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading