ಎಂ ಜಿ ತಿಲೋತ್ತಮೆ
ಮೊದಲ ಮಳೆಯೆಂದರೆ!
ಅಂಗಳದ ನಡುವೆ ತುದಿ
ಕಾಲ ಬೆರಳ ಊರಿ
ಒಂದೇ ಸಮನೆ ಗಿರಿಗಿಟ್ಟಲೆ ಹೊಡೆದು
ಮೈ-ಮನ ಜಿಗಿದು ಕುಣಿಯುವುದು
ಮೊದಲ ಮಳೆಯೆಂದರೆ!
ಎಂದೂ ಹರಡಿಕೊಳ್ಳದ
ಕಾಡ ಹೂವು ಬೀದಿಯ ತುಂಬಾ
ಗಂಧ ಸುರಿದ ಹಾಗೆ
ಬಂಡೆಯ ಮೇಲು
ಮೆತ್ತನೆಯ ಹುಲ್ಲು
ಬೆಳೆಯಲು ತವಕಿಸುವುದು
ಮೊದಲ ಮಳೆಯೆಂದರೆ!
ಕಪ್ಪೆಯ ಗೊಟರ್ ಗೊಟರ್ ಸದ್ದು
ಮಿಂಚು ಗುಡುಗಿಗೆ
ಹುಳು ಹಾತೆಯ ದಿಬ್ಬಣ
ಮನೆಯ ಒಳಕ್ಕೆ ನುಗ್ಗುವುದು
ಮೊದಲ ಮಳೆಯೆಂದರೆ!
ಬಾಲ್ಯ ಮರುಕಳಿಸುತ್ತದೆ
ಯೌವನ ನೆನೆಯುತ್ತೆ
ಕನಸುಗಳು ಯಾರದೋ
ನಿದಿರೆಯಲ್ಲಿ ಸದ್ದು ಮಾಡಲು
ಸಜ್ಜಾಗಿರುವುದು
0 ಪ್ರತಿಕ್ರಿಯೆಗಳು