Breaking News: ದೇವನೂರು ಮಹಾದೇವರಿಂದ ಪದ್ಮಶ್ರೀ ವಾಪಸ್. ಇಲ್ಲಿದೆ ಕಂಪ್ಲೀಟ್ details

EXCLUSIVE

devanuru 1 banavasiಯಾವುದೇ ಆಳ್ವಿಕೆಯು, ಸಂವೇದನಾಶೀಲವಾಗಲು ಹಾಗೂ ಸಮಾಜಮುಖಿಯಾಗಲು ಲೇಖಕ ಕಲಾವಿದ ಪ್ರಜ್ಞಾವಂತರು ಅಂಕುಶದಂತೆ ಇರಬೇಕು ಎಂದು ನಂಬಿಕೊಂಡಿರುವ ನಾನು, ಇತ್ತೀಚಿನ ‘ಅಸಹಿಷ್ಣುತೆಗಾಗಿ ಪ್ರಶಸ್ತಿ ಹಿಂತಿರುಗಿಸುತ್ತಿರುವ’ ಈ ಸಂದರ್ಭದಲ್ಲಿ ನನ್ನ ಸ್ವಭಾವಕ್ಕೆ ವಿರುದ್ಧವಾಗಿ ಸಂಯಮಿಸಿಕೊಂಡೇ ಬಂದೆ. ಆದರೆ ಯಾವಾಗ ಕೆಲ ಲೇಖಕ-ಕಲಾವಿದರು ಆಳ್ವಿಕೆ ಪರ ಸಂಘಟಿತರಾಗಿ ನಿಂತರೋ ಅದು ಕೇಡಿನ ಲಕ್ಷಣ ಅನ್ನಿಸಿಬಿಟ್ಟಿತು. ಇದಕ್ಕೆ ಜಿಗುಪ್ಸೆಗೊಂಡು, ನಾನು ಪಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದೇನೆ.

ಈಗ ಹಿಂತಿರುಗಿಸುತ್ತಿರುವುದು ಸಾಂಕೇತಿಕವಾಗಿ ಮಾತ್ರವೆ, ಯಾಕೆಂದರೆ ಅವುಗಳನ್ನು ಪಡೆದಿದ್ದರಿಂದ ಪರೋಕ್ಷವಾಗಿ ಪಡೆದಿರಬಹುದಾದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚವೂ ನನಗಿದೆ.

ನಮ್ಮ ಸ್ವಾತಂತ್ರ್ಯ ಹೋರಾಟದ ಕನಸುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಸಹಿಷ್ಣುತೆ, ಸಾಮಾಜಿಕ ನ್ಯಾಯ ಇತ್ಯಾದಿ ಮೌಲ್ಯಗಳು ನೆಹರೂಯುಗದ ನಂತರ ಒಂದಲ್ಲಾ ಒಂದು ಕ್ಷೀಣಿಸುತ್ತಾ ಬಂದು ಈಗ ತತ್ತರಿಸುತ್ತಿವೆ. ಈ ಮೌಲ್ಯಗಳು ಕಣ್ಣಿಗೆ ಕಾಣುವಂತೆ ಭೌತಿಕ ಅಲ್ಲದಿರಬಹುದು, ಆದರೆ ನಾವು ಕಟ್ಟಬೇಕಾದ ಸಾಂಸ್ಕೃತಿಕ, ಸಾಮಾಜಿಕ ಭಾರತದ ಉಸಿರಾಟದಂತೆ. _ ಈ ಅರಿವಿನ ಕೊರತೆಯೇ ಇಂದಿನ ಅಸಹಿಷ್ಣುತೆಗೆ ಕಾರಣವೆನ್ನಿಸುತ್ತಿದೆ. ಇದಲ್ಲದಿದ್ದರೆ, ದಾದ್ರಿಯಂಥ ಘಟನೆಗಳೋ ಅಥವಾ ವೈಚಾರಿಕತೆ ಭಿನ್ನಾಭಿಪ್ರಾಯಗಳಿಂದ ನಡೆಯುತ್ತಿರುವ ಹತ್ಯೆಗಳೋ ಇವನ್ನು ಆಯಾಯ ರಾಜ್ಯಗಳ ಸಮಸ್ಯೆ ಎಂದು ಆಳ್ವಿಕೆ ನಡೆಸುತ್ತಿರುವ ಕೇಂದ್ರ ಸಕರ್ಾರದ ವರಿಷ್ಠರೇ ಹೇಳುವ ದುರಂತ ಸಂಭವಿಸುತ್ತಿರಲಿಲ್ಲ.

devanuru3 banavasiಹಾಗೆಯೇ ‘ಸಾಮಾಜಿಕ ಸಾಂಸ್ಕೃತಿಕ ಅಸಹಿಷ್ಣುತೆಗೆ ಅಸಹಕಾರವಾಗಿ ಈ ಪ್ರಜ್ಞಾವಂತರ ಪ್ರಶಸ್ತಿ ಹಿಂತಿರುಗಿಸುವ ಪ್ರತಿಕ್ರಿಯೆ’ ಎಂಬ ಕನಿಷ್ಠ ಅರಿವಿದ್ದರೂ ಕಾನೂನು ಸಚಿವರು ಅದನ್ನು ‘ಮೋದಿಯವರ ವಿರುದ್ಧ ಸೈದ್ಧಾಂತಿಕ ಅಸಹಿಷ್ಣುತೆ’ ಎಂಬ ಆತ್ಮನಾಶಕ ಮಾತುಗಳನ್ನಾಡುತ್ತಿರಲಿಲ್ಲ. ಬದಲಾಗಿ ಹೆಚ್ಚು ಸಂವೇದನಾಶೀಲರಾಗಲು ಆಳ್ವಿಕೆ ನಡೆಸುತ್ತಿರುವವರಿಗೆ ಸಹಕಾರಿ ಎಂದೇ ಸ್ವೀಕರಿಸಬಹುದಿತ್ತು.

ಹಾಗೇ ಸಮಾಜದ ಪಟ್ಟಭದ್ರರಾದ ಪೇಜಾವರಶ್ರೀ ಅಂಥವರು ‘ಮಸೀದಿ ಮುಂದೆ ಹಂದಿ ಮಾಂಸ ಬೇಯಿಸಿದರೆ ಸುಮ್ಮನಾಗುತ್ತಾರ?’ ಎಂದು ಮೂದಲಿಸುವುದೂ ಕೂಡ ಅಂಥದೇ ಮನಸ್ಥಿತಿಯಾಗಿದೆ. ಕೃಷ್ಣಮಠದ ಯತಿಗಳ ಮನಸ್ಸೊಳಗೆ ಮಸೀದಿ, ಹಂದಿಮಾಂಸ ತುಂಬಿರುವುದು ತರವಲ್ಲ ಎಂದು ಹೇಳುವರು ಯಾರು? ಆಳ್ವಿಕೆ ನಡೆಸುತ್ತಿರುವವರಹಾಗೂ ಪಟ್ಟಭದ್ರರ ಇಂಥ ಧೋರಣೆಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಸಮಾಜದಲ್ಲಿ ಅಸಹಿಷ್ಣುತೆ, ಹಿಂಸೆ ಹೆಚ್ಚಾಗಲು ಪ್ರಚೋದನೆ ನೀಡುತ್ತಿವೆ.
ಯಾಕೆಂದರೆ ಇಂದು ಅಸಹಿಷ್ಣುತೆಯ ಅಟ್ಟಹಾಸ ಎಸಗುತ್ತಿರುವ ಗುಂಪಿಗೆ ತಾನು ಗೆಲ್ಲಿಸಿದವರೇ ಕೇಂದ್ರ ಸಕರ್ಾರವಾಗಿರುವುದರಿಂದ ‘ತಾನು ಏನೇ ಮಾಡಿದರೂ ಮೇಲಿನವರ ಕೃಪೆಯಿಂದ ಬಚಾವಾಗಬಲ್ಲೆ’ ಎಂಬ ಭೀತಿಯಿಲ್ಲದ ಭಾವನೆ ಇರುವುದರಿಂದಲೇ ಈ ಹಿಂದೆ ಕದ್ದುಮುಚ್ಚಿ ನಡೆಯುತ್ತಿದ್ದ ಅಸಹನೆಯ ಹಿಂಸಾಕೃತ್ಯಗಳು ಇಂದು ಹಾಡಹಗಲೇ ಜರುಗುತ್ತಿವೆ. ಈ ಹಿಂದೆ ಎಂದೂ ಇಂಥ ಪರಿಸ್ಥಿತಿ ಉಂಟಾಗಿರಲಿಲ್ಲ. ಇದನ್ನು ಆತ್ಮಾವಲೋಕನ ಮಾಡಿಕೊಂಡರೆ ಮಾತ್ರ ಹಾಲಿ ಕೇಂದ್ರ ಸಕರ್ಾರವು, ತಾನೂ ಸಕರ್ಾರ ಕೊಡಬಲ್ಲುದು.
devanuru banavasi2ಈ ಸಂದರ್ಭದಲ್ಲಿ ಎಂದೋ ಎಲ್ಲೋ ಓದಿದ ಕತೆಯೊಂದು ನೆನಪಾಗುತ್ತಿದೆ : ಒಂದು ದರೋಡೆ, ಸುಲಿಗೆ ಹಿಂಸೆಯ ಸಮುದಾಯದ ಬಲಿಷ್ಠ ವ್ಯಕ್ತಿಯೊಬ್ಬನು ದುರ್ಬಲ ರಾಜನನ್ನು ಸೋಲಿಸಿ ತಾನೇ ರಾಜನಾದಾಗ ಆತ ಮಾಡುವ ಮೊದಲ ಕೆಲಸ – ತನ್ನ ಸಮುದಾಯದ ದರೋಡೆ ಹಿಂಸೆ ಅಪರಾಧಗಳಿಗೆ ಯಾವ ರಿಯಾಯಿತಿಯನ್ನು ಕೊಡದೆ ಹತ್ತಿಕ್ಕಿ ಅವರನ್ನು ಸುಸಂಸ್ಕೃತ ಸಭ್ಯ ಪ್ರಜೆಗಳನ್ನಾಗಿಸಿ ಸ್ವಾಸ್ಥ್ಯ ಸಮಾಜ ನಿಮರ್ಾಣಕ್ಕೆ ಕಾರಣನಾಗುತ್ತಾನಂತೆ -ಚರಿತ್ರೆಯು, ನಮ್ಮ ಹಾಲಿ ಪ್ರಧಾನಿಗಳ ಮುಂದೆ ಒಂದು ದೊಡ್ಡ ಸವಾಲನ್ನು ಇಟ್ಟು ಕಿರುನಗೆ ಬೀರುತ್ತಿರುವಂತಿದೆ.
ಒಟ್ಟಿನಲ್ಲಿ ಇದು ಎಲ್ಲರಿಗೂ ಆತ್ಮಾವಲೋಕನದ ಕಾಲ. ಜನರಲ್ ಮುಷರಫ್ರ ಕೊನೆಗಾಲದ ಆತ್ಮಾವಲೋಕದ ಮಾತುಗಳೂ ನಮಗೆ ಪಾಠವಾಗಬಲ್ಲುವು – ಸಯೀದ್, ಲಖ್ವಿ ಇವರುಗಳು ಕಾಶ್ಮೀರದ ವಿಮೋಚನಾ ಹೋರಾಟಗಾರರಾಗಿದ್ದಾಗ ಅವರು ನಮ್ಮ ಹೀರೋಗಳಾಗಿದ್ದರು. ಯಾವಾಗ ಅವರ ಹೋರಾಟಕ್ಕೆ ಧಾಮರ್ಿಕ ಉಗ್ರವಾದ ಅಂಟಿತೊ ಆಗ ಅದು ಭಯೋತ್ಪಾದನೆಯಾಗಿ ಮಾರ್ಪಟ್ಟಿತು. ಈಗ ಆ ಭಯೋತ್ಪಾದನೆ ತಮ್ಮ ಜನರನ್ನೇ ಅಂದರೆ ನಮ್ಮವರನ್ನೇ ಕೊಲ್ಲುವಲ್ಲಿಗೆ ಬಂದು ನಿಂತಿದೆ – ಇದನ್ನು ಚರಿತ್ರೆ ಕೂಗಿ ಕೂಗಿ ಹೇಳುತ್ತಾ ಬಂದಿದೆ. ಹಾಗೇ ‘ಧರ್ಮ ದೇವರ ಹೆಸರಲ್ಲಿ ಕೊಲೆ-ಸುಲಿಗೆ ದ್ವೇಷ ಮಾಡುವವರನ್ನು ದೇವರೂ ಕೂಡ ಕಾಪಾಡಲಾರ’ ಎಂಬ ಯೋಗಿಯ ಮಾತೂ ಇದೆ. – ಇದನ್ನು ಈ ಸಂದರ್ಭದಲ್ಲಿ ನೆನಪಿಸುವುದಕ್ಕಾಗಿ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದೇನೆ.

ದೇವನೂರ ಮಹಾದೇವ

ಚಿತ್ರ ಕೃಪೆ : ಬನವಾಸಿ ಬಳಗ

‍ಲೇಖಕರು admin

November 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. M A Sriranga

    ಭಾರತ ಮತ್ತು ಕರ್ನಾಟಕದ ಲೇಖಕ, ಕಲಾವಿದರು ಈ ಹಿಂದೆಯೂ ಆಯಾ ಕಾಲದ ಆಳ್ವಿಕೆ ಪರ ನಿಂತಿರಲಿಲ್ಲವೇ? ಪ್ರಭುತ್ವ ಮತ್ತು ಸಾಂಸ್ಕೃತಿಕ ಲೋಕದ ನಂಟು ಇದೇ ಮೊದಲದ್ದೇನೂ ಅಲ್ಲವಲ್ಲ. ಆಸ್ಥಾನ ಸಾಹಿತಿಗಳೂ ಆಸ್ಥಾನ ವಿರೋಧಿ ಸಾಹಿತಿಗಳೂ ಸದಾ ಕಾಲ ಇದ್ದವರೇ. ಇದರಲ್ಲಿ ವಿಶೇಷವೇನೂ ಇಲ್ಲ. ಜತೆಗೆ ಈ ವಿದ್ಯಮಾನ ಕೇವಲ ಭಾರತಕ್ಕೆ ಮಾತ್ರ ವಿಶಿಷ್ಠವಾದ್ದೇನೂ ಅಲ್ಲ. ಎಲ್ಲಾ ದೇಶಗಳಲ್ಲೂ ಇರುವಂತಹದ್ದೆ.

    ಪ್ರತಿಕ್ರಿಯೆ
  2. Ajit

    ಸದಾ ಕಾಲ ಇರುವ ವಿಶೇಷವೇನೂ ಅಲ್ಲದ ವಿಷಯಗಳ ಬಗ್ಗೆ ಬರೆದಿದ್ದೀರಿ. ನಿಮ್ಮ ಜಾಣ ಕುರುಡುತನವನ್ನೂ ಆ ಪಟ್ಟಿಯಲ್ಲಿ ಸೇರಿಸಬೇಕಿತ್ತಲ್ಲವೇ ಶ್ರೀರಂಗರೇ …

    ಪ್ರತಿಕ್ರಿಯೆ
  3. M A Sriranga

    ಅಜಿತ್ ಅವರಿಗೆ— ನನ್ನ ಪ್ರತಿಕ್ರಿಯೆಯಲ್ಲಿ ತಾವು ‘ಜಾಣ ಕುರುಡುತನವನ್ನು’ಸಂಶೋಧಿಸಿದಕ್ಕೆ ನಾನು ಅಭಾರಿ. ಕೇಂದ್ರ ಸರ್ಕಾರದ /ಸಿಬಿಐ ಮೇಲಿನ ಕೋಪವನ್ನು ಕೇಂದ್ರಸಾಹಿತ್ಯ ಅಕಾಡೆಮಿಯ ಮೇಲೆ ತೀರಿಸಿಕೊಂಡರೆ ಸರಿಯೇ? ಹಿಂದಿನ ಸರ್ಕಾರಗಳ ಕಾಲದಲ್ಲಿ ಅಸಹಿಷ್ಣುತೆ ಇರಲಿಲ್ಲವೇ? ಆಗ ಪ್ರಶಸ್ತಿ ವಾಪಸ್ ಮಾಡದಿದ್ದರೆ ಈಗ ಮಾಡಬಾರದೆಂದು ಕಾನೂನಿದೆಯೇ ಎಂಬ ‘ಜಾಣ ಪ್ರಶ್ನೆಗೆ’ ನನ್ನ ಬಳಿ ಉತ್ತರವಿಲ್ಲ. ಅದನ್ನು ತಾವೇ ಯೋಚಿಸಿ ಕಂಡುಕೊಳ್ಳಿ ಎಂದಷ್ಟೇ ಸೂಚಿಸಬಲ್ಲೆ.

    ಪ್ರತಿಕ್ರಿಯೆ
  4. M A Sriranga

    ಅಜಿತ್ ಅವರಿಗೆ —–‘ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಸಾಂಕೇತಿಕವಾಗಿ ಹಿಂತಿರುಗಿಸುತ್ತಿದ್ದೇನೆ. ಅವುಗಳನ್ನು ಪಡೆದಿದ್ದರಿಂದ ಪರೋಕ್ಷವಾಗಿ ಪಡೆದಿರಬಹುದಾದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚವೂ ನನಗಿದೆ’ ಎಂಬ ದೇವನೂರು ಮಹಾದೇವರ ನೇರ ನುಡಿ ಮತ್ತು ಸಂಕೋಚದ ಭಾವನೆಗಳ ಬಗ್ಗೆ ನನಗೆ ಗೌರವವಿದೆ. ಇಂತಹ ನೇರ ಹಾಗೂ ಸಂಕೋಚದ ಮಾತುಗಳನ್ನು ನಮ್ಮ ಕರ್ನಾಟಕದ ‘ಪ್ರಶಸ್ತಿ ವಾಪ್ಸಿ’ ಪ್ರಕರಣದ ಪಾತ್ರಧಾರಿಗಳಾದ ಅಸಹಿಷ್ಣುತೆ ವಿರೋಧಿಗಳಲ್ಲಿ ಎಷ್ಟು ಜನ ಹೇಳಿದ್ದಾರೆ? ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ಹಿಂತಿರುಗಿಸಿ ಅಂತಹ ಪ್ರಶಸ್ತಿಗಳಿಂದ ಬಂದಿರುವಂತಹ ಧನ,ಸೈಟು,ಸರ್ಕಾರದ ನಾನಾ ಗೌರವಗಳ ಲಾಭವನ್ನು encash ಮಾಡಿಕೊಂಡರೆ ಅದು ಏನನ್ನು ಸೂಚಿಸುತ್ತದೆ? ಕನ್ನಡದ ಬಹುಪಾಲು ಅಕಾಡೆಮಿಕ್ ಮತ್ತು ನಾನ್ ಅಕಾಡೆಮಿಕ್ ವಲಯದವರಿಗೆ ಅಪ್ರಿಯರಾಗಿರುವ ಒಬ್ಬರು ಹಿರಿಯ ಸಂಶೋಧಕರು ಮತ್ತು ಹಿರಿಯ ಕಾದಂಬರಿಕಾರರು (ಅವರ ಹೆಸರು ತಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ) ತಮಗೆ ಅಂತಹ ಪ್ರಶಸ್ತಿಗಳನ್ನು ಕೊಟ್ಟ ತಕ್ಷಣವೇ ಅದರ ಜತೆ ಕೊಟ್ಟ ಹಣವನ್ನು ಆ ಸಮಾರಂಭದಲ್ಲೇ ನಾಡು-ನುಡಿಯ ಹಿತಕ್ಕಾಗಿ ಸರ್ಕಾರಕ್ಕೆ ವಾಪಸ್ ಮಾಡಿದ್ದರು ಎಂಬ ವಿಷಯವನ್ನು ನಾಲ್ಕೈದು ದಿನಗಳ ಹಿಂದೆ ವಾಚಕರೊಬ್ಬರು ರಾಜ್ಯವ್ಯಾಪಿ ಪ್ರಸಾರದ ಕನ್ನಡ ದಿನಪತ್ರಿಕೆಯೊಂದರ ಓದುಗರ ಪತ್ರ ವಿಭಾಗದಲ್ಲಿ ಮತ್ತೊಮ್ಮೆ ಜ್ಞಾಪಿಸಿಕೊಂಡಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ನಮ್ಮ ‘ಪ್ರಶಸ್ತಿ ವಾಪ್ಸಿ’ ಹೀರೋಗಳು ತಮಗೆ ‘ಅಸಹಿಷ್ಣುತಾ ಸರ್ಕಾರದ ಯಾವ ಹಂಗೂ’ ಬೇಡವೆಂದು ಪ್ರಶಸ್ತಿ ಜತೆ ಪರೋಕ್ಷವಾಗಿ ಬಂದ ಸಕಲ ಸೌಭಾಗ್ಯಗಳನ್ನೂ ವಾಪಸ್ ಮಾಡಬಹುದು. ಆದರೆ ಆ ಸೌಭಾಗ್ಯಗಳನ್ನು ಕೊಟ್ಟಿದ್ದು ಸಹಿಷ್ಣುತಾ ಸರ್ಕಾರದ ಅಧಿಕಾರಾವಧಿಯಲ್ಲಿ ಎಂಬ ‘ಜಾಣ ಉತ್ತರಕ್ಕೆ’ ನನ್ನ ಬಳಿ ಪ್ರತ್ಯುತ್ತರವಿಲ್ಲ.

    ಪ್ರತಿಕ್ರಿಯೆ
  5. Ajit

    ತಮ್ಮ ಭಕ್ತಿ ಭಾವಕ್ಕೆ ನನ್ನ ನಮನ :).
    ಒಲೆ ಹೊತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹೊತ್ತಿ ಉರಿದಡೆ ನಿಲಬಹುದೆ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: