ಬನ್ನಿ ಉಯ್ಯಾಲೆಗಳನ್ನು ಖಾಲಿ ಇಡದಿರೋಣ..

ಶಿವರಾಮ ಕಾರಂತರ ಎದುರು ಕುಳಿತಿದ್ದೆ. ಅವರೇ ಕನಸಿದ ಬಾಲವನದಲ್ಲಿ. ಬಾಲವನ ಅವರ ಮನೆ ಎನ್ನುವುದನ್ನೇ ಮರೆಸುವಂತೆ ಅಲ್ಲಿ ಮಕ್ಕಳು ಹೋ ಎಂದು ಗಲಾಟೆ ಎಬ್ಬಿಸುತ್ತಾ ಆಡುತ್ತಿದ್ದರು. ಬಾಲವನದ ಮೂಲಕ ಮಕ್ಕಳ ಜಗತ್ತನ್ನು ಜೀವಂತವಾಗಿದಬೇಕು ಎಂದು ಬಯಸಿದ್ದ ಮೋಹನ ಸೋನ ಹಾಗೂ ಐ ಕೆ ಬೊಳುವಾರ್ ಜೊತೆಗಿದ್ದರು.

ಆಗ ಅವರ ಪ್ರವೇಶವಾಯಿತು. ಜೊತೆಯಲ್ಲಿದ್ದ ಪುಟಾಣಿ ಹುಡುಗನನ್ನು ತೋರಿಸುತ್ತಾ ಇವನು ಯಾರು ಗೊತ್ತಾ ಎಂದರು. ಶಿವರಾಮ ಕಾರಂತರು ಮುಖವನ್ನು ಪ್ರಶ್ನಾರ್ಥಕ ಚಿಹ್ನೆಯಾಗಿಸಿಕೊಂಡರು. children2
ಇವನಿಗೆ ಎಲ್ಲಾ ದೇಶದ ಹೆಸರುಗಳೂ ನಾಲಿಗೆಯ ತುದಿಯಲ್ಲಿವೆ ಎಂದರು ಬಂದಿದ್ದವರು. ಇವನಿಗೆ ಜಗತ್ತಿನ ಯಾವುದೇ ಬಾವುಟದ ಬಗ್ಗೆ ಕೇಳಿ ಹೇಳುತ್ತಾನೆ. ಸ್ಪೆಲಿಂಗ್ ಹೇಳುವುದರಲ್ಲಿ ಫಸ್ಟ್ ಕ್ಲಾಸ್. ನಯಾಗರ ನದಿ ಎಲ್ಲಿದೆ ಕೇಳಿ ನೋಡಿ. ಕಂಪ್ಯೂಟರ್ ಕೀಲಿಮಣೆ ಮೇಲೆ ಇವನಿಗೆ ಇನ್ನಿಲ್ಲದ ಹಿಡಿತ. ಎಷ್ಟು ಬೇಗ ಟೈಪ್ ಮಾಡುತ್ತಾನೆ ಗೊತ್ತಾ. ಅಮೆಜಾನ್ ಕಾಡು, ರಾಜಸ್ಥಾನದ ಮರುಭೂಮಿ ಯಾವುದನ್ನು ಬೇಕಾದರೂ ಕೇಳಿ ಉತ್ತರ ಅವನಿಗೆ ಗೊತ್ತು ….. ಹೀಗೆ ಅವರು ಹೇಳುತ್ತಾ ಹೋದರು

ಕಾರಂತರು ತಮ್ಮ ಎಂದಿನ ಶೈಲಿಯಲ್ಲಿ ತಮ್ಮ ಬಾಯಿ ಹಾಗೂ ಮೂಗನ್ನು ಮುಚ್ಚುವ ಹಾಗೆ ಕೈ ಇರಿಸಿಕೊಂಡು ಒಂದು ಕ್ಷಣ ಆ ಮಗುವನ್ನೇ ನೋಡಿದರು ನಂತರ ಸಾವಧಾನವಾಗಿ ಅದೆಲ್ಲಾ ಸರಿ ಈ ಮಗುವಿಗೆ ಮಣ್ಣಿನೊಡನೆ ಆಡಲು ಬರುತ್ತದಾ’.. ಎಂದು ಕೇಳಿದರು ತಕ್ಷಣ ಅಲ್ಲಿ ಬಂದಿದ್ದವರ ಮುಖ ಕಕ್ಕಾಬಿಕ್ಕಿಯಾಗಿತ್ತು

ಹೌದಲ್ಲಾ, ನಾವು ಮಕ್ಕಳಿಗೆ ಮೊಬೈಲ್ ಕೊಡಿಸಿದ್ದೇವೆ’. ಕಂಪ್ಯೂಟರ್ ಮೇಲೆ ಹೇಗೆ ಈ ವಯಸ್ಸಲೇ ಬೆರಳಾಡಿಸುತ್ತಾನೆ ಗೊತ್ತಾ ಎನ್ನುತ್ತೇವೆ. ನನಗೆ ಏನು ಗೊತ್ತಪ್ಪಾ ನನ್ನ ಮೊಮ್ಮಗ ಇನ್ನೂ ಎರಡನೇ ಕ್ಲಾಸ್ ಅವನಿಗೆ ಫೋನ್ ಮಾಡಿದರೆ ಸ್ಮಾರ್ಟ್ ಫೋನ್ ನಲ್ಲಿ ಚ್ಯಾಟ್ ಮಾಡುವುದು ಹೇಗೆ ಅಂತ ಕ್ಷಣಾರ್ಧದಲ್ಲಿ ಹೇಳುತ್ತಾನೆ. ಯಾವ ಕಾರ್ ತೋರಿಸಿ  ಅದು ಯಾವ ಬ್ರಾಂಡ್ ಅಂತ ಹೇಳುತ್ತಾನೆ. ಮಾರ್ಕೆಟ್ ಗೆ ಬಂದಿರುವ ಹೊಸ ಪಿಜ್ಜಾ ಯಾವುದು ಅನ್ನುವುದು ಇವನಿಗೆ ಹೇಗೆ ಗೊತ್ತಾಗುತ್ತಪ್ಪಾ ಎಂದು ಎಲ್ಲರೂ ಬೆರಗಾಗಿ ಕೇಳಬೇಕು ಎಂದೇ ಬಣ್ಣಿಸುತ್ತೇವೆ.

ಅದು ಸರಿ ಆದರೆ ಕಾರಂತರ ಪ್ರಶ್ನೆ ಹಾಗೆ ಉಳಿದುಬಿಟ್ಟಿತಲ್ಲಾ ನಮ್ಮ ಮಗುವಿಗೆ ಮಣ್ಣಿನೊಡನೆ ಆಡಲು ಗೊತ್ತಾ, ಜೊತೆ ಹುಡುಗರ ಜೊತೆ ಜಗಳವಾಡುವುದು ಗೊತ್ತಾ, ಕ್ಲಾಸಿನಲ್ಲಿ ಪಾಠ ಕೇಳದೆ ಪಕ್ಕದಲ್ಲಿದ್ದವರನ್ನು ಚಿವುಟಲು ಗೊತ್ತಾ?
ಗೊತ್ತಾ.. ಗೊತ್ತಾ ..

ಹಾಗಾದರೆ ಅವತ್ತು ಗೊತ್ತಿತ್ತಲ್ಲಾ
ಚಿನ್ನದ ಒಡವೆಗಳೇತಕೆ ಅಮ್ಮ? ತೊಂದರೆ ಕೊಡುವುವು ಬೇಡಮ್ಮ.. ಬಣ್ಣದ ಬಟ್ಟೆಗಳೇತಕೆ ಅಮ್ಮ ಮಣ್ಣಿನೊಳಾಡಲು ಬಿಡವಮ್ಮ.. ಚಂದಕ್ಕೆ ಚಂದಕೆ ಅನ್ನುವೆ ನೀನು ಚಂದವು ಯಾರಿಗೆ ಹೇಳಮ್ಮ.. ನೋಡುವರಿಗೆ ಚೆಂದವು ಆನಂದ ಆಡುವ ಎನಗಿದು ಬಲು ಬಂಧ..
ಎಂದು ಕುವೆಂಪು ಬರೆದಾಗ .

ನಮ್ಮ ಮಕ್ಕಳಿಗೆ ಒಂದು ಕಥೆ ಹೇಳಿ ಎಷ್ಟು ದಿನವಾಯಿತು? ನಮ್ಮ ಮಗುವನ್ನು ನಾವೇ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದು ಎಷ್ಟು ದಿನವಾಯಿತು? ಮರಕ್ಕೆ ಹಗ್ಗ ಕಟ್ಟಿ ಅವರನ್ನು ಕೂರಿಸಿ ಜೀಕುವಾಗ ನಮ್ಮ ಮನಸ್ಸೂ ಉಲ್ಲಾಸದಿಂದ ಜೀಕುವುದಿಲ್ಲವೇ?

ಜೀಕೋಣ ಬನ್ನಿ ಜೋಕಾಲಿ ಅಂತ ಸುಮ್ಮನೆ ಅಂದರೇನು?
ಇಲ್ಲಿದೆ ನೋಡಿ ಆ ಜೀಕುವಿಕೆಯ ಒಂದು ಝಲಕ್

ಮಕ್ಕಳ ದಿನ ಮಾತ್ರ ಈ ಮಾತು ಹೊರಹೊಮ್ಮದಿರಲಿ
ಬನ್ನಿ ಉಯಾಲೆಗಳನ್ನು ಖಾಲಿ ಇಡದಿರೋಣ

– ಜಿ ಎನ್ ಮೋಹನ್
children20

children18

children4

children13

children3

children10

children11

children17

children14

children19

children21

children play

 

‍ಲೇಖಕರು admin

November 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ವಿನತೆ ಶರ್ಮ

    ನಮ್ಮ ಮಕ್ಕಳು ಮಣ್ಣಲ್ಲಿ, ಮಣ್ಣಿನ ಜೊತೆ ಹೊರಾಂಗಣದಲ್ಲಿ ಬೇಕಾದ ಹಾಗೆ ಕ್ರಿಯೇಟಿವ್ ಮತ್ತು ಇಮ್ಯಾಜಿನೇಶನ್ ಆಟಗಳನ್ನು ಆಡುವುದಷ್ಟೇ ಅಲ್ಲ, ಮರ ಹತ್ತುವುದು, ಜೋಕಾಲಿಯಲ್ಲಿ ತೂಗುವುದು, ಅಮ್ಮನ ಜೊತೆ ಚೌಕಬಾರಾ, ಹಾವುಏಣಿ ಪಟ, ಪಳ್ಳoಗುಳ್ಳಿ ಮಣೆ ಆಟಗಳನ್ನು ಆಡುವುದು ಕೂಡ ನಮ್ಮ ಮನೆಯಲ್ಲಿ (ಹೊರ ದೇಶದಲ್ಲಿ) ಸ್ವಾಭಾವಿಕ. ಮಕ್ಕಳ ಸಹಜ ಪ್ರವೃತ್ತಿಯಾದ ಆಡುವಿಕೆಯನ್ನು ನಾವು ದೊಡ್ಡವರು ಎಚ್ಚರಿಕೆಯಿಂದ ಸಂರಕ್ಸಿಸಬೇಕಾದ ಕಾಲದಲ್ಲಿ ನಾವಿಂದು ಇದ್ದೇವೆ. ನಾವೇ ನಿರ್ಮಿಸಿದ ಈ ಪರಿಸ್ಥಿತಿಯಿಂದ ಬೇಸರವಾಗುತ್ತದೆ. ಆದರೂ ಅದು ನನ್ನ ಕರ್ತವ್ಯ.

    ಪ್ರತಿಕ್ರಿಯೆ
  2. ಸುಧಾ ಚಿದಾನಂದಗೌಡ

    ಜೋಕಾಲಿಯೊಡನೆ ಜೋಕಾಲಿಯಾಡುತಿದೆ ಮನತವಕ
    ಅಕ್ಷರ ಜೀಕಲು ಕೈಯಲ್ಲೊಂದು ಪುಸ್ತಕ
    ಗೆಳತಿ,
    ಬಾಲ್ಯಕಾಲದ ಸುಖಕ ಹೋಗಿಬಿಡೋಣ ಹಿಂದಹಿಂದಕ
    ಇನ್ನು ಪರರ ಗೊಡವೆ ಯಾತಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: