ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breakinbg News: ನೀನಾಸಂ ಅನಿಲ್ ಇನ್ನಿಲ್ಲ

ಉಗಮ ಶ್ರೀನಿವಾಸ್ 

ಹೆಚ್ಚೇನೂ ಅಲ್ಲ, ತಿಂಗಳ ಹಿಂದೆಯಷ್ಟೆ ತಿಪಟೂರಿನಲ್ಲಿ ಸಿಕ್ಕಿದ್ದ ಗೆಳೆಯ ಅನಿಲ. ತಿಪಟೂರಿನ ನಮ್ಮ ಮನೆಯ ಮುಂದಿನ ರಸ್ತೆಯಲ್ಲೇ ಈತನ ಮನೆ. ವಯಸ್ಸಿನಲ್ಲಿ ಕೊಂಚ ದೊಡ್ಡವ. ಆದರೆ ನಮ್ಮಿಬ್ಬರ ನಡುವೆ ಏಕವಚನದ ಸಲಿಗೆ

ಆಗ ನಾವು ಹುಡುಗರು ನಮ್ಮ ಮನೆಯ ಕೂಗಳತೆ ದೂರದಲ್ಲಿದ್ದ ಒಂದು ಸಣ್ಣ ಮೈದಾನ. ಮೈದಾನದ ಒಂದು ಬದಿಯಲ್ಲಿ ಬಿಲ್ವಪತ್ರೆ, ನೇರಳೆ ಮರದ ಕೆಳಗೆ ಅನಿಲ ಸೇರಿದಂತೆ ನಾವು ಹುಡುಗರು ಗೋಲಿ ಆಡುತ್ತಿದ್ದ ಜಾಗ. ನಾನಂತೂ ಕೈಯನ್ನು ತಲೆ ಮೇಲೆ ಎತ್ತಿ ಇನ್ನೊಂದು ಗೋಲಿಗೆ ಹೊಡೆಯುವಾಗ ಅನಿಲ ಯಾವಾಗಲೂ ನನ್ನನ್ನು “ಆನೆ ಸೊಂಡಿಲು” ಎನ್ನುತ್ತಿದ್ದ.

ತಿಪಟೂರಿನ ನಮ್ಮ ಮನೆಯ ಆಜುಬಾಜು ಇರುತ್ತಿದ್ದ ಟೀ ಅಂಗಡಿ, ಮೋಕ್ಷಪ್ಪನ ಚುರುಮುರಿ ಶಾಪು, ಬಸಪ್ಪಜ್ಜನ ಬೋಂಡದ ಅಂಗಡಿ ಹೀಗೆ ನಾವೆಲ್ಲ ಭೇಟಿಯಾಗುತ್ತಿದ್ದ ಜಾಗಗಳು.

ಬೆಳೆಯುತ್ತಿದ್ದ ನಾವೆಲ್ಲ ಸಾಹಿತ್ಯ, ಸಂಘಟನೆ, ಹೋರಾಟದ ಬದುಕನ್ನು ಆಯ್ಕೆ ಮಾಡಿಕೊಂಡರೆ ಅನಿಲ ನಾಟಕ ಕ್ಷೇತ್ರಕ್ಕೆ ಹೋದ. ನೀನಾಸಂ ನಲ್ಲಿ ಕಲಿತು ನಟನಾಗಿ ಹೆಸರು ಗಳಿಸಿದ. ತಿಪಟೂರಿನ ‘ಪ್ರೊಥಿಯೂ’ದಲ್ಲಿ ನಾಟಕಗಳಲ್ಲಿ ಅಭಿನಯಿಸತೊಡಗಿದ. ಬಳಿಕ ಧಾರವಾಹಿಗೂ ಹೋಗಿ ಹೆಸರು ಗಳಿಸಿದ.

ಚೆಂದಕ್ಕೆ ಹಾಡುವ ರತ್ನ ಸಕಲೇಶಪುರಳನ್ನು ಮದುವೆಯಾದ. ತಿಪಟೂರಿನಲ್ಲಿ ಏನಾದರೂ ಕಾರ್ಯಕ್ರಮವಾದರೆ ಸಾಮಾನ್ಯವಾಗಿ ನಾವೆಲ್ಲ ಬೇರೆ ಬೇರೆ ಊರುಗಳಲ್ಲಿದ್ದರೂ ಭೇಟಿಯಾಗುತ್ತಲೇ ಇದ್ದೆವು. ಮೊನ್ನೆ ಕೂಡ ಇಂತದ್ದೇ ಒಂದು ಕಾರಣದಿಂದ ಅನಿಲ ಸಿಕ್ಕಿದ್ದ. ತುಂಬಾ ಮೆತ್ತಗಾಗಿದ್ದ, ಕಣ್ಣು ಒಳಕ್ಕೆ ಹೋಗಿತ್ತು. ಮತ್ತದೇ ತಮಾಷೆ ಮಾಡಿ ಅನಿಲ ಹೊರಟು ಹೋಗಿದ್ದ. ಅದಾದ ಎರಡು ವಾರಕ್ಕೆ ಅನಿಲ ತೀವ್ರ ಅನಾರೋಗ್ಯಕ್ಕೆ ತುತ್ತಾದ ವಿಷಯ ಗೊತ್ತಾಯಿತು. 24 ಗಂಟೆಯ ಹಿಂದೆ ಆತ ಉಳಿಯುವುದಿಲ್ಲ ಎಂದೇ ವೈದ್ಯರು ಹೇಳಿದ್ದರು.

ಕಡೆಗೂ ಅನಿಲ ಬದುಕಿನ ಪಯಣ ಮುಗಿಸಿದ್ದಾನೆ. ನನ್ನೊಳಗೆ ಮೌನ ಹಾಗೂ ಸಂಕಟ.

 

ತಿಪಟೂರಿನ ಅನಿಲ್ ಅಣ್ಣ ಇನ್ನಿಲ್ಲ ಎಂಬುದನ್ನೇ ನಂಬಲಾಗುತ್ತಿಲ್ಲ.

ಇದುವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರೆಂದೇ ಅನಿಸುತ್ತಿದೆ. “ಪಲ್ಲಟ” ಸಿನೆಮಾದ ಊರಿನ ಆಯಗಾರನ ಪಾತ್ರದಲ್ಲಿ ತಮಟೆ ಬಡಿಯುವುದನ್ನು ಕಂಡಾಗ ನನ್ನ ಅಪ್ಪ ತಮಟೆ ಬಡಿದು ನಮ್ಮನ್ನು ಸಾಕಿದ್ದೆಲ್ಲಾ ನೆನಪಾಗಿ ಅಸಹಾಯಕ ಆಗುತ್ತಿದ್ದೆ.

ಪಾತ್ರವೇ ತಾನಾಗಿಬಿಡುವ ಅನಿಲಣ್ಣ ನಮ್ಮೊಡನೆ ಇಲ್ಲ ಎಂಬುದು ವಿಷಾದದ ಸಂಗತಿ. ಸಾವಿನೂರಿನ ಹಾದಿಯಲ್ಲಿ ನೀವು ಮುಂದೆ ನಡೆದಿದ್ದೀರಿ, ಉಳಿದವರು ಇಂದಲ್ಲ ನಾಳೆ…

-ಎಸ್ ಕೆ ಮಂಜುನಾಥ್

ನೀನಾಸಂ ತಿರುಗಾಟದಲ್ಲಿದ್ದಾಗಲೇ ರತ್ನಳ ಮೂಲಕ ಪರಿಚಯವಾದವನು ಅನಿಲ.

ನಂತರದ ದಿನಗಳಲ್ಲಿ ನಮಗೆ ಹತ್ತಿರವಾದ. ನಮ್ಮ ಕೆಲವ ನಾಟಕಗಳಿಗೆ ಲೈಟಿಂಗ್ ಮಾಡಿದ. ನಾವಾ ತಿಪಟೂರುನಿಂದ ಲೈಟುಗಳನ್ನು ಬಾಡಿಗೆಗೆ, ತರುತ್ತಿದ್ದವು. ರತ್ನ ನಮ್ಮ ಶಾಲಾಮಕ್ಕಳಿಗೆ ನಾಟಕ ಮಾಡಿಸಿದರೆ ಅನಿಲ ಬೇಳಕಿನ ವ್ಯವಸ್ಥೆ ಮಾಡಿದ್ದ. ಆತನ ಮೂಲಕವೇ ಕೈಲಾಸ್, ಅಚ್ಯುತ, ದೀಪಕ್ ಮುಂತಾದವರೆಲ್ಲ ನಮ್ಮಲ್ಲಿಗೆ ಬಂದರು.

“ಕರಿಯ ಕಣ್ಬಿಟ್ಟ” ಸಿನಿಮಾ ನೋಡಿ ಚೆನ್ನಾಗಿ ಮಾಡಿದ್ದ ಅನಿಲ್ ಎಂದು ಹೇಳಿದಾಗ “ಸಾರ್ ನನ್ ಸಿನಿಮಾದ ಹೆಂಡ್ತೀರಿಗೆಲ್ಲ ಪ್ರಶಸ್ತಿ ಬರುತ್ತೆ ನನ್ ನಿಜ ಹೆಂಡ್ತೀಗಿನ್ನ ಬಂದಿಲ್ಲ ಎಂದು ತಮಾಷೆ ಮಾಡಿದ್ದ.

ಅನಿಲ ತಿರುಗಾಟ ಮುಗಿಸಿದ್ದಾನೆ

ಕಲಾವಿದರು, ಬದುಕು ಎಂಬುದಿದೆ. ಅದರಲ್ಲಿ ನಮ್ಮನ್ನು ನಂಬಿದವರಿರುತ್ತಾರೆ. ಎನ್ನುವುದನ್ನು ಮರೆಯಬಾರದು.

-ಪ್ರಸಾದ್ ರಕ್ಷಿದಿ

ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ಕಲಾವಿದ ಅನಿಲ್ ತಿಪಟೂರು ಇಂದು ಮಧ್ಯಾನ್ಹ ನಿಧನರಾದರು.

ಅವರಿಗೆ 48 ವರ್ಷ. ಪ್ರತಿಭಾವಂತ ನಟ, ನೇಪಥ್ಯ ಕಲಾವಿದ ಅನಿಲ್.

ಸುಮಾರು 17 ದಿನಗಳಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಸಾವಿನ ಜೊತೆ ಹೋರಾಡಿದ ಅನಿಲ್, ಇಂದು ಅಂತಿಮವಾಗಿ ಶರಣಾಗಿದ್ದಾನೆ. ನಾನು ಮತ್ತು ಮಲ್ಲಿಕಾರ್ಜುನ ಮಹಾಮನೆ ಇಂದು ಹೋಗಿ ನೋಡಿದಾಗ, ಕೃತಕವಾಗಿ ಉಸಿರಾಟ ನಡೆಸುತ್ತಿದ್ದ ಅನಿಲ್ ಗೆ ಅವನ ಕುಟುಂಬದ ಸದಸ್ಯರುಗಳಿಂದ ಅಂತಿಮ ಕ್ಷಣ ಗಣನೆ ನಡೆಯುತಿತ್ತು.

ಇತ್ತೀಚಿನ ವರ್ಷಗಳಲ್ಲಿ ಪರಿಚಯವಾದ ಅನಿಲ್, ಬಹಳ ಬೇಗ ಆತ್ಮೀಯನಾಗಿದ್ದ.

ಕಲಾವಿದರ ಜೀವನ ನೀರ ಮೇಲಿನ ಗುಳ್ಳೆಯಂತೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳದಿದ್ದರೆ, ನಮ್ಮನ್ನು ನಂಬಿರುವ ಸಂಸಾರ ದಿಕ್ಕುತಪ್ಪುತ್ತದೆ. ಪ್ರತಿಭಾನ್ವಿತ ಕಲಾವಿದ ಯಶಸ್ಸಿನ ಮೇರು ಶಿಖರ ತಲುಪಿದಂತೆ, ವಯಕ್ತಿಕ ಜೀವನದಲ್ಲೂ ಹೆಚ್ಚು ಜವಾಬ್ದಾರಿಯುತವಾಗಬೇಕು. ಒಂದು ದಿನದ ಹಾದಿ ತಪ್ಪುವಿಕೆ, ಸಂಸಾರವನ್ನು ಕಣ್ಣೀರ ಕಡಲಲ್ಲಿ ಮುಳುಗಿಸುತ್ತದೆ.

ಅಗಲಿದ ಗೆಳೆಯನಿಗೆ ನಮನಗಳು.

-ಸಿ ಕೆ ಗುಂಡಣ್ಣ 

‍ಲೇಖಕರು avadhi

3 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading