ವಿ ಎನ್ ಲಕ್ಷ್ಮೀನಾರಾಯಣ

2012 ರಲ್ಲಿತಯಾರಾದ ‘ಆಕ್ಟ್ ಆಫ್ ಕಿಲಿಂಗ್ ‘ ಹೆಸರೇ ಸೂಚಿಸುವಂತೆನರಹತ್ಯೆಯ ನಟನೆ ಹೇಗೋ ಹಾಗೆಯೇ ಹತ್ಯೆಯ ಕೃತ್ಯವನ್ನು ಬಿಂಬಿಸುವ ಚಿತ್ರ. 1965-66ರಲ್ಲಿ ಇಂಡೋನೇಶಿಯಾದಲ್ಲಿ ಅಲ್ಲಿನ ಸೇನಾಡಳಿತ, ಅಮೆರಿಕಾ ಸರ್ಕಾರದ ಸಹಾಯದೊಂದಿಗೆ ನಡೆಸಿದ ಹತ್ತು ಲಕ್ಷಕ್ಕೂ ಮೀರಿದ, ಚೀನಾ ಮೂಲದ ಇಂಡೋನೇಶ್ಯಾ ಕಮ್ಯೂನಿಸ್ಟರ ಸಾಮೂಹಿಕ ನರಹತ್ಯೆಯ ಬಗ್ಗೆ ಕೃತ್ಯದಲ್ಲಿ ನೇರ ಭಾಗಿಯಾದವರೇ ಮಂಡಿಸುವ ಚಿಂತನೆ, ವಾದ, ಸಮರ್ಥನೆ ಮತ್ತು ಅವರ ಮನಸ್ಸಿನ ಆಳದಲ್ಲಿರುವ ವಿಷಾದ ಈ ವಿಲಕ್ಷಣ ಸಾಕ್ಷ್ಯಚಿತ್ರದ ವಸ್ತು. ಹೀಗೆ ಹತ್ಯೆಗೊಳಗಾದವರಲ್ಲಿ ಕಮ್ಯೂನಿಸ್ಟರೆಂದು ಸಂದೇಹಿಸಲ್ಪಟ್ಟ ಚೀನಾ ಸಂಜಾತರೇ ಹೆಚ್ಚು. ಕಮ್ಯೂನಿಸ್ಟರು, ಕಾರ್ಮಿಕ ಸಂಘಟನೆಯ ಸದಸ್ಯರು, ಅಮೆರಿಕನ್ ದೂತಾವಾಸ ತಯಾರಿಸಿಕೊಟ್ಟ ಪಟ್ಟಿಯಲ್ಲಿನ ಜನರನ್ನು ಚಿತ್ರದಲ್ಲಿ ಅನ್ವರ್ ಹೇಳುವಂತೆ ಮಿಲಿಟರಿ ನ್ಯಾಯಸಮಿತಿ ವಿಚಾರಣೆಯ ನಾಟಕಮಾಡಿ ಆಪಾದಿತರು ವಿಚಾರಕರು ಕೇಳುವ ಪ್ರಶ್ನೆಗಳಿಗೆ ಏನೇ ಉತ್ತರ ಕೊಟ್ಟರೂ ಒಟ್ಟಿನಲ್ಲಿ ಅಪರಾಧಿಗಳೆಂದು ತೀರ್ಮಾನಿಸಿ ಅವರನ್ನು ಹಂತಕರ ಕೈಗೆ ಒಪ್ಪಿಸುತ್ತಿತ್ತು.
ಈ ಸಾಮೂಹಿಕ ನರಹತ್ಯೆಯನ್ನು ಮಿಲಿಟರಿಯ ಪರವಾಗಿ ಕಾರ್ಯಗತಗೊಳಿಸಿದ ಜನರ ಮುಖವಾಣಿಯಾಗಿ ಅನ್ವರ್ ಕಾಂಗೋ ಮತ್ತು ಆದಿ ಜಲ್ಕಾದ್ರಿ ಎಂಬ, ಇಂದಿಗೂ ಇಂಡೋನೇಶ್ಯಾ ಸರ್ಕಾ ರದ – ಕಾನೂನಿನ ರಕ್ಷಣೆ ಪಡೆದಿರುವ ರೌಡಿಗಳು ಈ ಸಾಕ್ಷ್ಯಚಿತ್ರದ ಪ್ರಧಾನ ಪಾತ್ರಗಳು. ಇಂಡೋನೇಶ್ಯಾ ಮಿಲಿಟರಿಯ ಭಾಗವಾಗಿರುವ ಬಲಪಂಥೀಯ ಸಂಘಟನೆ ‘ಪೆಮುದ ಪಂಚಶೀಲ’ದ ಸ್ಥಾಪಕನೆಂಬ ಗೌರವ ಅನ್ವರ್ಗಿದೆ. ಅನ್ವರ್ ಒಬ್ಬನೇ ಒಂದು ಸಾವಿರ ಜನರನ್ನುಕೊರಳಿಗೆ ತಂತಿ ಬಿಗಿದು ಕೊಂದೆನೆಂದು ಅಳುಕಿಲ್ಲದೆ, ಒಂದು ಬಗೆಯ ಹೆಮ್ಮೆಯಿಂದ, ಅಪರೂಪಕ್ಕೆ ಮನದಾಳದಿಂದ ಒತ್ತರಿಸಿಕೊಂಡು ಬರುವ ವಿಷಾದದಿಂದ ಹೇಳಿಕೊಳ್ಳುತ್ತಾನೆ.
ಚಿತ್ರದ ನಿರ್ದೇಶಕರಲ್ಲಿ ಜೋಶುವಾ ಓಪನ್ ಹೈಮರ್ ಮತ್ತು ಕ್ರಿಸ್ಟೈನ್ಸಿ ನ್ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಅನೇಕ ವರ್ಷಗಳ ಕಾಲ ಗಂಭೀರವಾಗಿ ತೊಡಗಿಸಿಕೊಂಡವರು. ಇವರಲ್ಲದೆ ಅಜ್ಞಾತವಾಗಿ ಉಳಿಯಬಯಸುವ ಒಬ್ಬದೇಶೀಯ ಸಹ ನಿರ್ದೇಶಕ ಮತ್ತು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಅಜ್ಞಾತವಾಗಿ ಉಳಿದ ಇಂಡೋನೇಶ್ಯಾದ ಸ್ಥಳೀಯ ತಾಂತ್ರಿಕ ತಜ್ಞರು ಈ ಚಿತ್ರದ ಸೃಷ್ಟಿಗೆ ಕಾರಣರು. ಜೊರಾಮ್ಟೆನ್ ಬ್ರಿಂಕ್ ಮತ್ತು ಆಂದ್ರೆ ಸಿಂಗರ್ರೊಂದಿಗೆಚಿತ್ರ ನಿರ್ಮಾಣಕ್ಕೆ ಬೆಂಬಲವಾಗಿ ಪ್ರಖ್ಯಾತ ಚಿತ್ರ ನಿರ್ದೇಶಕರಾದ ವರ್ನರ್ ಹರ್ಜಗ್ ಮತ್ತು ಎರೋಲ್ ಮೋರಿಸ್ ಚಿತ್ರದ ಕಾರ್ಯಪಾಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಡೆನ್ಮಾರ್ಕ್, ಬ್ರಿಟನ್ ಮತ್ತು ನಾರ್ವೇ ದೇಶಗಳ ಸಹಯೋಗದಲ್ಲಿ ವೆಸ್ಟ್ಮಿನ್ಸ್ಟರ್ ವಿಶ್ವವಿದ್ಯಾನಿಲಯದ ‘ಡಾಕ್ವೆಸ್ಟ್’ ಎಂಬ ಪ್ರಾಜೆಕ್ಟಿನಡಿಯಲ್ಲಿ ತಯಾರಾದ ಅಪರೂಪದ ಸಾಕ್ಷ್ಯಚಿತ್ರ ಇದು. ಇದರಲ್ಲಿ ನೇರ ಸಂದರ್ಶನ, ವ್ಯಕ್ತಿ-ಪಾತ್ರಗಳನ್ನು ಒಟ್ಟಿಗೆ ಬೆಸೆಯುವ ನಟನೆ, ಘಟನೆಗಳ ಭಾವಾಭಿನಯದ ನಿರೂಪಣೆ, ಅಭಿಪ್ರಾಯ ವಿನಿಮಯ ಮತ್ತು ಸರ್ರಿಯಲಿಸ್ಟಿಕ್ ಎನ್ನಬಹುದಾದ ಕಾಲ್ಪನಿಕ ಸಂಯೋಜನೆಎಲ್ಲವೂ ಸೇರಿವೆ.
ಈ ಸಾಕ್ಷ್ಯಚಿತ್ರ ನರಹತ್ಯೆಯ ಬಗ್ಗೆ ತಳಮಟ್ಟದ ಪ್ರಶ್ನೆಗಳನ್ನು ಎತ್ತುತ್ತದೆ. ಒಬ್ಬನನ್ನು ಕೊಂದರೆ ‘ಕೊಲೆ’ ಎಂದು ಕೊಲ್ಲುವವರನ್ನು ಅಪರಾಧಿ ಎಂದು ಕೊಲ್ಲುವವನನ್ನು ಕಾನೂನಿನನ್ವಯ ಕೊಲ್ಲುವ, ನೂರಾರು ಸಾವಿರಾರು ಜನರನ್ನು, ಸಮವಸ್ತ್ರ ಧರಿಸಿದ ಜನರು ಸರ್ಕಾರದ ಆಜ್ಞಾನುಸಾರಕೊಂದರೆ ‘ಯುದ್ಧ’ ಎಂದು ಸಾಂವಿಧಾನಿಕ ಸಮ್ಮತಿಯನ್ನು ಪಡೆದ ‘ನಾಗರಿಕ’ ಸರ್ಕಾರಗಳು ನರಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತವೆ. ‘ನಾಗರಿಕ’ ಸಮಾಜದಲ್ಲಿ ಮರಣದಂಡನೆಗೆ ಒಳಗಾದ ಖೈದಿಯನ್ನು ಕಾನೂನು ವಿಧಿಸುವ ವಿಧಾನಗಳಲ್ಲಿ, ಅಂದರೆ ನೇಣಿಗೇರಿಸುವುದು, ಎಲೆಕ್ಟ್ರಿಕ್ಕು ಚೇರ್ ಗೆ ಕಟ್ಟಿ ವಿದ್ಯತ್ ಹರಿಸುವುದು ಅಥವಾ ವಿಷದ ಚುಚ್ಚುಮದ್ದನ್ನು ಕೊಡುವುದು, ಅಥವಾ ಇನ್ನಾವುದೇ ವಿಧದಲ್ಲಿ ಕೊಲ್ಲುವ ‘ಎಗ್ಸಿಕ್ಯೂಷನರ್’ ಗಳನ್ನು ಕೊಲೆಗಾರರು ಎನ್ನುವುದಿಲ್ಲ. ‘ಕೊಲೆಗಾರ’ರನ್ನು ಹಿಡಿದು ಕೇಸುಹಾಕುವ, ಪೋಲೀಸರನ್ನಾಗಲಿ, ಮರಣದಂಡನೆಯ ಶಿಕ್ಷೆಯನ್ನೇ ಅಪರಾಧಿಗೆ ವಿಧಿಸಬೇಕೆಂದು ವಾದಮಾಡುವ ವಕೀಲರನ್ನಾಗಲಿ, ಮರಣದಂಡನೆ ವಿಧಿಸುವ ನ್ಯಾಯಾಧೀಶನನ್ನಾಗಲಿ ಯಾರೂ ಕೊಲೆಗಾರ ಎನ್ನುವುದಿಲ್ಲ. ಅವರೂ ಸಾಧಾರಣವಾಗಿ ತಾವು ಕೊಲೆಗಾರರೆಂಬ ಪಾಪಪ್ರಜ್ಞೆಯಿಂದ ನರಳುವುದಿಲ್ಲ. ಈ ಮನಸ್ಥಿತಿಗೆ ಬಲವಾದ ಕಾರಣ ಇಂಥ ಹತ್ಯೆಗೆ ‘ಅಧಿಕಾರ’ದ ಸಮ್ಮತಿ ಇದೆ ಎನ್ನುವುದು. ಯುದ್ಧದಲ್ಲಿ ಭಾಗಿಯಾಗುವ ಸೈನಿಕರಿಗೆತಾವು ನಡೆಸುವ ಹತ್ಯೆ ‘ದೇಶರಕ್ಷಣೆ’ಯ ಕೃತ್ಯವಾಗಿ ಕಾಣುವುದೂ ಈ ಅಧಿಕಾರದ ಆಜ್ಞೆ-ಸಮ್ಮತಿಯಿಂದಾಗಿಯೇ.
ತನ್ನರಾಜನ ಆಜ್ಞೆಯಂತೆ ನೂರಾರು ಜನರನ್ನುಕೊಂದರೂ ಪಾಪಪ್ರಜ್ಞೆಯಿಂದ ನರಳದ ಮ್ಯಾಕ್ಬೆತ್, ತನಗೆ ಆಜ್ಞೆ ಮಾಡುವ ತನ್ನ ವಯಸ್ಸಾದ ರಾಜನನ್ನೇ ಕೊಂದು ಪಾಪಪ್ರಜ್ಞೆಯಿಂದ ನರಳಿ ಒದ್ದಾಡುವುದು ಈ ಅಧಿಕಾರ-ಸಮ್ಮತಿಯ ಅಭಾವದಿಂದಾಗಿ. ಪೌರಾಣಿಕವಾಗಿ, ವ್ಯಕ್ತಿ ಮಟ್ಟದಲಿ, ಪರಶುರಾಮನಿಗೆ ತನ್ನ ತಾಯಿಯನ್ನೇ ಕೊಲ್ಲಲು ಸಾಧ್ಯವಾದದ್ದು. ತಂದೆಯ ಆಜ್ಞೆಯಿಂದ ಸಿಕ್ಕ ಅಧಿಕಾರಯುಕ್ತ ಸಮ್ಮತಿಯಿಂದಲೇ. ಮನೋ ವೈಜ್ಞಾನಿಕವಾಗಿ ಅಧಿಕಾರ ಎನ್ನುವುದು ಮಗು ವಿಧೇಯವಾಗಿ, ಅಂದರೆ ಪ್ರಶ್ನಿಸದೆ ಪಾಲಿಸುವ, ತಂದೆ, ಅಥವಾ ತಂದೆಯ ಪ್ರತೀಕ, ಫ್ರಾಯ್ಡ್ ಹೇಳುವ ಸೂಪರ್ ಈಗೋ ಕೊಡುವ ಸಮ್ಮತಿ. ಆದರೆ ನೇಣುಗಂಬ ಏರುವ ಬಹುತೇಕ ಖೈದಿಗಳು ತಮ್ಮನ್ನು ಅನ್ಯಾಯವಾಗಿ ಕೊಲ್ಲಲಾಗುತ್ತಿದೆಯೆಂದು ಸಾಯುವ ಕೊನೆಯ ಗಳಿಗೆಯವರೆಗೂ ದೂರುತ್ತಲೇ ಇರುತ್ತಾರೆ ಎಂದು ಕೇಳಿದ್ದೇವೆ.
ಯುದ್ಧ ನೀತಿ ಸಂಹಿತೆಯಾದ ಜಿನೇವಾ ಒಪ್ಪಂದ ನರ ಹತ್ಯೆಯನ್ನು ಒಂದು ಚೌಕಟ್ಟಿಗೆ ಒಳಪಡಿಸಿ, ಆಯಾ ದೇಶದ ಸಾಂವಿಧಾನಿಕ ಅಧಿಕಾರ ಕೇಂದ್ರದ ಸಮ್ಮತಿಯೊಂದಿಗೆ ನಡೆಯುವ ನರಹತ್ಯೆಯನ್ನು ಯುದ್ಧಾಪರಾಧ ಅಥವಾ ನರಹತ್ಯೆ ಎನ್ನುವುದಿಲ್ಲ. ಯುದ್ಧದ ಪರಿಣಾಮವಾದ ಸಾವು-ನೋವು ಎನ್ನುತ್ತದೆ. ಹೀಗಾಗಿ ಯಾವುದೇ ದೇಶದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ನಾಗರಿಕ ಸರ್ಕಾರವಾಗಿ ಅಥವಾ ಮಿಲಿಟರಿ ಸರ್ಕಾರವಾಗಿ ತಮ್ಮದೇ ಜನರ ಹತ್ಯೆ ನಡೆಸಿದಾಗಲೂ ಅದು ಅಪರಾಧವಾಗುವುದಿಲ್ಲ. ಸಾಮಾನ್ಯವಾಗಿ ಇಂಥ ಯುದ್ಧನೀತಿ ಸಂಹಿತೆಯನ್ನು ನರಹತ್ಯೆಯಲ್ಲಿ ತೊಡಗುವ ಅಮೆರಿಕಾದಂಥ ಬಲಿಷ್ಠ ದೇಶಗಳು ತಮಗೆ ಅನುಕೂಲವಾಗುವಂತೆ ಅರ್ಥೈಸಿಕೊಳ್ಳುವುದರಿಂದ ಆ ದೇಶಗಳಲ್ಲಿ ಮತ್ತು ಅವು ಬೆಂಬಲಿಸುವ ಸಣ್ಣಪುಟ್ಟ ದೇಶಗಳಲ್ಲಿ ನಡೆಯುವ ನರಹತ್ಯೆಗೆ ಕಾನೂನಿನ ರಕ್ಷಣೆ ದೊರೆಯುತ್ತದೆ. ಹಾಗಿಲ್ಲದ ಸಣ್ಣ ಪುಟ್ಟ ದೇಶಗಳಲ್ಲಿ, ಅದರಲ್ಲೂ ಕಮ್ಯುನಿಸ್ಟ್ ದೇಶಗಳಲ್ಲಿ ನಡೆಯುವ ನರಹತ್ಯೆಗಳು ಘನಘೋರವಾದ ಎಡಪಂಥೀಯ ಹಿಂಸೆಯಾಗಿ ಚಿತ್ರಿತವಾಗುತ್ತವೆ.
ಅಮೆರಿಕಾ ವಿಶ್ವಾದ್ಯಂತ ವ್ಯಾಪಕವಾಗಿ ನಡೆಸುವ ನರಹತ್ಯೆಗಳಿಗಾಗಿ ಯಾವೊಬ್ಬ ಅಧಿಕಾರಸ್ಥನನ್ನೂ ಇಲ್ಲಿಯವರೆಗೆ ಯುದ್ಧಾಪರಾಧಕ್ಕಾಗಿ ವಿಚಾರಣೆಗೊಳಪಡಿಸಿದ ಉದಾಹರಣೆಗಳಿಲ್ಲ. ಆ ದೇಶದ ಬೆಂಬಲವಿರುವ ಇಂಡೋನೇಶ್ಯಾದಲ್ಲಿನ ನರಹತ್ಯೆಗಿರುವ ಕಾನೂನಿನ ರಕ್ಷಣೆಯನ್ನುಇದು ಸ್ಪಷ್ಟಪಡಿಸುತ್ತದೆ. ಅನ್ವರ್ ಗೆ ವ್ಯಕ್ತಿಮಟ್ಟದಲ್ಲಾದರೂ ಹತ್ಯೆಗೊಳಗಾದವರ ಬಗ್ಗೆ ಪರಿತಾಪವಿದೆ. ಆದರೆ ಇದರಲ್ಲಿ ಪಾಲುಗೊಂಡ ಮಿಲಿಟರಿ ಮತ್ತು ಬೇಹುಗಾರಿಕಾ ಸಂಸ್ಥೆಗಳ ಅಧಿಕಾರಸ್ಥರಿಗೆ ಯಾವ ಪರಿತಾಪವೂ ಇಲ್ಲ. ಕೊನೆಗೂ ಜನರ ಕಣ್ಣಿಗೆ ಕಾಣಿಸುವುದು ಕೊಲೆಗಾರ ಬಳಸಿದ ಆಯುಧವೇ ಹೊರತು ಅದನ್ನು ಹಿಡಿದ ಕಾಣದ ಕೈಗಳಲ್ಲ. ಈ ಚಿತ್ರವನ್ನು ನೋಡಿದಾಗ ಅನ್ವರ್ ಮತ್ತು ಅಂಥವರು, ‘ನಿರ್ದಯ ಹಂತಕ’ರಾಗಿ ನಮ್ಮದೃಷ್ಟಿಗೆ ಬೀಳುತ್ತಾರೆಯೇ ಹೊರತು ನರಹತ್ಯೆಗೆ ನಿಜವಾಗಿ ಕಾರಣರಾದ ಬಲಿಷ್ಠ ದೇಶಗಳ ಸೈಕೊಪಾತಕರಾದ ಅಧಿಕಾರಸ್ಥರಲ್ಲ.

‘ಆಕ್ಟ್ ಆಫ್ ಕಿಲ್ಲಿಂಗ್ ‘ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಭಾರತದ ಸಾಕ್ಷ್ಯಚಿತ್ರ ತಯಾಕರಾದ ಆನಂದ್ ಪಟವರ್ಧನ್ ರವರು ಚಿತ್ರದ ನಿರ್ದೇಶಕ ಜೋಶುವಾ ಓಪನ್ಹೈಮರ್ಗೆ ಬರೆದ ಪತ್ರದಲ್ಲಿ ಚಿತ್ರದ ಬಗ್ಗೆ ಇಂಥ ಆಕ್ಷೇಪವಿದೆ.
ಪ್ರಿಯ ಜೋಶುವಾ,
ಲಂಡನ್ನಿನಲ್ಲಿ ನಡೆದ ಮಾನವಹಕ್ಕುಗಳ ಜಾಗರಣ ಚಿತ್ರೋತ್ಸವದಲ್ಲಿ ನಿಮ್ಮಚಿತ್ರವನ್ನು ನೋಡಿದೆ. ನಿಸ್ಸಂಕೋಚವಾಗಿ ಹೇಳಬೇಕೆಂದರೆ, ಚಿತ್ರ ಪ್ರಭಾವಯುತವಾಗಿದ್ದರೂ ಸಹ ನನಗೆ ಇಷ್ಟವಾಗಲಿಲ್ಲ. ಏಕೆಂದರೆ ಅದರ ಒಟ್ಟು ಪರಿಣಾಮದಲ್ಲಿ ಅಮೆರಿಕಾದ ಸಿಐಎ ಅನ್ನುರಕ್ಷಿಸುತ್ತದೆ ಮತ್ತು ಅದರ ಪಾತ್ರವನ್ನು ಮರೆಮಾಚುತ್ತದೆ. ಕೊಟ್ಟಿದ್ದು, ನಿಜವಾದ ಕೊಲೆಗಾರ ಸಿಐಎ. ಸುಕರ್ನೋ ಪದಚ್ಯುತಿಯನ್ನು ಪ್ರಚೋದಿಸಿದ್ದು, ಕೊಲ್ಲಬೇಕಾದ ಜನರ ಪಟ್ಟಿಯನ್ನುತಯಾರು ಮಾಡಿಕೊಟ್ಟಿದ್ದು, ಲಕ್ಷಾಂತರ ಕಮ್ಯುನಿಸ್ಟರನ್ನು ಮತ್ತು ನೂರಾರು ಜನ ಸಾಮಾನ್ಯರನ್ನು ಕಮ್ಯುನಿಸ್ಟರೆಂದು ಬ್ರಾಂಡ್ ಮಾಡಿ ಕೊಲೆ ಮಾಡಿಸಿದ್ದು, ಸಿಐಎ. ಈ ಯುದ್ದಾಪರಾಧವನ್ನು ವಿಶ್ವ ಮರೆತೇಬಿಟ್ಟಿದೆ. ನಿಜವಾದ ಕೊಲೆಗಾರರು ಯಾರು ಎನ್ನುವುದನ್ನು ವಿಶ್ವಕ್ಕೆ ಜ್ಞಾಪಿಸದಂತೆ ಚಿತ್ರ ನಿರ್ಮಾಣಗೊಂಡಿದೆ. ಅದು ಬಂದೂಕಿನ ಕುದುರೆ ಮೀಟುವ, ಮಚ್ಚು ಕೊಡಲಿಗಳನ್ನು ಝಳುಪಿಸುವ ಸ್ಥಳೀಯರ ಮೇಲೆ ಮಾತ್ರ ದೃಷ್ಟಿಯನ್ನು ಕೇಂದ್ರೀಕರಿಸಿ ಅವರನ್ನು ಒಮ್ಮೆ ಕ್ರೂರಿಗಳಂತೆ ಮತ್ತೊಮ್ಮೆ ವಿದೂಷಕರಂತೆ ಚಿತ್ರಿಸಿದೆ. ನರಹತ್ಯೆಗೆ ಆಜ್ಞೆ ಮಾಡಿದ ಬಿಳಿಯರನ್ನು ಚಿತ್ರ ಒಳಗೊಂಡಿದ್ದಿದ್ದರೆ, ಜನ ಏಕೆ ಮತ್ತು ಹೇಗೆ ಕೊಲ್ಲುತ್ತಾರೆ ಎಂಬುದರ ಬಗೆಗಿನ ನೈಜ ಮನೋವೈಜ್ಞಾನಿಕ ಸಂಶೋಧನೆಯಾಗುತ್ತಿತ್ತು. ಆದರೆ ದೃಶ್ಯಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಬಿಳಿಚರ್ಮದ ಹಂತಕರನ್ನು ಹೊರಗಿಟ್ಟು ಕೇವಲ ಕಂದು ಚರ್ಮದಅವರ ಬಾಡಿಗೆ ಬಂಟರನ್ನು ಮಾತ್ರ ಒಳಗೊಂಡಿರುವುದರಿಂದ ಚಿತ್ರ ವರ್ಣಭೇದದಚಿತ್ರವಾಗಿದೆ.
ಬಿಳಿಯರು ‘ಪೂರ್ಣ ನಾಗರಿಕರಲ್ಲ’ವೆಂದು ಕರೆಯುವ ಜನರೆಂದು ನೋಡುವ ಮಾನವಶಾಸ್ತ್ರೀಯ ಧೋರಣೆಯ ಅತ್ಯತ್ತಮ ಮಾದರಿಯಾಗಿದೆ.
(dearjoshua,
i did see the film (at the human rights watch festival in london) and to be frank, while the film is compelling, i really did not like it because in its over-all impact it completely hides and shields the American CIA who were the real killers, the ones who supplied the hit lists, who instigated the overthrow of sukarno and the murder of hundreds of thousands of communists and ordinary people branded as communists. the world has forgotten this war crime. the film chooses not to remind the world who the real perpetrators were. it focuses instead on the local trigger pullers and machete wielders whom it presents alternately as macabre and comical. had it included the white men who ordered the killings it could have been a genuine psychological investigation on why and how humans kill. but visually and emotionally excluding the white killers and including only their brown hitmen makes this a racist film, a classical anthropological exercise of watching those whom the white man presents as “less civilized”.)
ಕಮ್ಯುನಿಸ್ಟರಾದ ಸುಕರ್ನೋ ಪದಚ್ಯತಿಯ ನಂತರ ಸುಹಾರ್ತೋ ನೇತೃತ್ವದ ಮಿಲಿಟರಿ ಆಡಳಿತದಲ್ಲಿ ಜರುಗಿದ ಸಾಮೂಹಿಕ ನರಹತ್ಯೆಗೆ ಬಲಿಯಾದವರ ಸಂಬಂಧಿಕರನ್ನು, ಬದುಕಿ ಉಳಿದ ಸಂತ್ರಸ್ತರನ್ನು ಕುರಿತು ಮಾಡಲು ಹೊರಟ ಈ ಸಾಕ್ಷ್ಯಚಿತ್ರ ಪೂರ್ಣಗೊಳ್ಳುವ ಹೊತ್ತಿಗೆ ಹಂತಕರ ಬಗೆಗಿನ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿತು. ಮೊದಲು ಸಿನಿಮಾ ಟಾಕೀಸುಗಳಲ್ಲಿ ಕಾಳಸಂತೆಯಲ್ಲಿ ಟಿಕೀಟು ಮಾರುತ್ತಿದ್ದು ನಂತರ ಚೀನೀ ವ್ಯಾಪಾರಿಗಳಿಂದ ಹಣ ವಸೂಲಿಮಾಡುವ, ಕೊಡದಿದ್ದರೆಕೊಲೆಮಾಡುವ ರೌಡಿಗಳಾಗಿ, ಹಾಲಿವುಡ್ ಸಿನಿಮಾದ ಹೀರೋಗಳನ್ನು ಮಾದರಿಯಾಗಿಸಿಕೊಂಡು ಬದುಕುವ, ತಮ್ಮ ಪಾಪಪ್ರಜ್ಞೆಯನ್ನು ಸಂಗೀತ, ನೃತ್ಯ, ನಶೆ, ಮಾದಕವಸ್ತುಗಳ ಸೇವನೆಯಲ್ಲಿ ಮರೆಮಾಚುತ್ತಾ ಕೊನೆಗೆ ಮಿಲಿಟರಿ ಆಡಳಿತದ ಅಧಿಕೃತ ಹಂತಕರಾಗಿ ಕಾನೂನಿನ ರಕ್ಷಣೆಯಲ್ಲಿಜೀವಿಸುತ್ತಾ, ವೃದ್ಧಾಪ್ಯದಲ್ಲಿ ಮೊಮ್ಮಕ್ಕಳೊಂದಿಗೆ ಯಾವುದೇ ಪಕ್ವ ವೃದ್ಧನಂತೆ ಹರಟಬಲ್ಲ ಅನ್ವರ್ ಕಾಂಗೊ ಮತ್ತು ಅವನ ಸಹಚರರನ್ನು ನಿಮಗೆ ಇಷ್ಟಬಂದ ಶೈಲಿಯಲ್ಲಿ ನಿಮ್ಮ ಕೃತ್ಯಗಳನ್ನು ಅಭಿನಯಿಸಿ-ನಿರೂಪಿಸಿ ಎಂದು ಆಹ್ವಾನಿಸಿದಾಗ ವಿಲಕ್ಷಣವಾಗಿರೂಪ ಪಡೆದಚಿತ್ರ ‘ಆಕ್ಟ್ಆಫ್ಕಿಲ್ಲಿಂಗ್’.
ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿ ಈಗಲೂ ಚರ್ಚಿತವಾಗುತ್ತಿದೆ.ಇಂಡೋನೇಶ್ಯಾದಲ್ಲಿ ಸೆನ್ಸಾರ್ ಸರ್ಟಿಫಿಕೇಟ್ ಪಡೆದು ಅಧಿಕೃತವಾಗಿ ಬಿಡುಗಡೆಯಾಗುವುದಕ್ಕಿಂತ ಖಾಸಗಿಯಾಗಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಸೆಪ್ಟೆಂಬರ್ 30, 1965-66 ರ ಸಾಮೂಹಿಕ ಸ್ವಜನ ಹತ್ಯಾಕಾಂಡದ ಪ್ರಾರಂಭದ ದಿನದಿಂದ ಇಂಡೋನೇಶ್ಯದ ಜನತೆಗಾಗಿ ಮಾತ್ರ ಡಿಜಿಟಲ್ ರೂಪದಲ್ಲಿ ಉಚಿತವಾಗಿ ದೊರೆಯುವಂತೆ ಚಿತ್ರದ ನಿರ್ಮಾಪಕರು ಮಾಡಿದ್ದಾರೆ. ಜನಸಾಮಾನ್ಯರನ್ನು ಜಾಗೃತಿಗೊಳಿಸಲು ಈ ಕ್ರಮ.
ಎಲ್ಲ ಸಾರ್ವಜನಿಕ ಸ್ಥಳಾವಕಾಶಗಳನ್ನು ಭದ್ರತೆ, ಸುರಕ್ಷತೆಯ ನೆಪದಲ್ಲಿ ವಿಶ್ವದ ಬಲಿಷ್ಠ ಶಕ್ತಿಗಳು ಖಾಸಗೀಕರಿಸುತ್ತಿರುವ, ರಾಷ್ಟ್ರ-ದೇಶಗಳ ಗಡಿಗಳನ್ನು ಅಮಾನ್ಯ ಮಾಡಿ ಜಾಗತೀಕರಣದ ಹೆಸರಿನಲ್ಲಿ ಅತಿ ಕ್ರಮಿಸುತ್ತಿರುವ, ಪ್ರಜಾತಂತ್ರ, ಪಾರದರ್ಶಕತೆ, ಮಾನವ ಹಕ್ಕುಗಳ ಹೆಸರಿನಲ್ಲಿಎಲ್ಲ ದೇಶಗಳ ಎಲ್ಲ ಜನರ ಖಾಸಗಿತನವನ್ನೂ ಕದ್ದು ಗಮನಿಸಬಹುದಾದ ಏಕಾಧಿಪತ್ಯದ ಸರ್ವಾಧಿಕಾರವನ್ನು ಹರಡುತ್ತಿರುವ ಈ ದಿನಗಳಲ್ಲಿ ಕೇವಲ ಸೌಂದರ್ಯ್ಯಾತ್ಮಕ ವೀಕ್ಷಣೆ ಗಲ್ಲದೆ ಪ್ರಸ್ತುತ ರಾಜಕಾರಣ ಕುರಿತಂತೆ ಚಿತ್ರ ಸಹೃದಯರ ಚಿಂತನೆ -ಅಭ್ಯಾಸಕ್ಕೆ ಅತ್ಯಂತ ಯೋಗ್ಯವಾದ ಚಿತ್ರ.





Narration itself tells the horrible incidents. Your points are accepted.