ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
30
ದೇವಸ್ಥಾನದಿಂದ ಖಾಲಿ ಕೈಯ್ಯಲ್ಲಿ ಬಂದ ಗೌರಿಯನ್ನು ಕಂಡು ಆಯಿಗೆ ಅನುಮಾನ ಬಂತು. ನವರಾತ್ರೆ ಉತ್ಸವ ಜಾತ್ರೆಯಂತೆ. ದಂಡಿಯಾಗಿ ಸಾಮಾನು ಸರಕುಗಳು ಮಕ್ಕಳಿಗೆ ಮುದುಕರಿಗೆ ಸಿಗುತ್ತವೆ. ಪ್ರತಿವರ್ಷ ಸಂತೆಯೆಂದರೆ ಕುಣಿದು ಹಪ ಹಪಿಸುವ ಹುಡುಗಿ ತನಗೆ ಏನೂ ತಕ್ಕೊಳ್ಳಲಿಲ್ಲ, ನಾಣಿಗೂ ಬುಗ್ಗೆ, ಪೀಪಿ ತೆಗೆಯಲಿಲ್ಲ. ಹೋಗಲಿ ಸರ, ಬಳೆ ಸುನಂದೆಗೆ ತೆಗೆಸಿಕೊಟ್ಟಿದ್ದರೆ ಆ ಮಗು ಖುಷಿ ಪಡ್ತಿತ್ತು.
‘ಅಲ್ಲವೇ ಗೌರಿ, ನಿಂಗೇನಾಗಿದೆಯೇ? ಯಾಕೆ ಸಪ್ಪೆಯಾಗಿದ್ದೀ? ನಾ ಕೊಟ್ಟ ಕಾಸು ಸಾಕಾಗಲಿಲ್ಯಾ? ಇವತ್ತು ನಾನೂ ಬತ್ತೆ ದೇವಸ್ಥಾನಕ್ಕೆ. ಸುನಂದೆಗೆ ಇಷ್ಟವಾದ್ದು ತೆಗೀಬೇಕು. ತಿಳಿತಾ? ಯಾಕೆ ಮಾತಾಡ್ದೆ ಮುಖ ಮಂಗನ್ಹಾಗೆ ಊದಿಸಿಕೊಂಡಿದ್ದಿ? ಏನಾಗಿದೆಯೇ?’ ‘ಗೊತ್ತಿಲ್ಲ’ ಗೊಣಗಿದಳು. ಮತ್ಸರದ ಹೊಗೆ, ಉರಿ ದಟ್ಟವಾಗಿತ್ತು ಮನದಲ್ಲಿ. ನಾಣಿ ಹಲ್ಲು ಗಿಂಜಿದ. ಆಯಿಗೆ ಹೇಳ್ಲಾ? ಅಕ್ಕನಕಾಲಿಗೆ ಬೂಟು ಬೇಕಂತೆ, ನಿರಿಗೆ ಅಂಗಿ ಬೇಕಂತೆ. ನಾ ಹೇಳ್ಲಾ? ಕಣ್ಸನ್ನೆಯಲ್ಲಿ ಅಕ್ಕನತ್ತ ನೋಡಿದ. ತಲೆಬಾಚದೆ ಕೆದರಿದ ಕೂದಲನ್ನು ಕೆರೆದುಕೊಳ್ಳುತ್ತ, ಛುಪ್!
ಆರಾತ್ರೆ ಯಥಾಪ್ರಕಾರ ಮುಖಮಂಟಪದ ಚಾವಡಿಯಲ್ಲಿ ದೊಡ್ಡವರ ಮಾತುಕಥೆ. ಮರುದಿನ ಬೆಳಗಿನ ದೋಣಿ ಅಥವಾ ಭರಮನ ಎತ್ತಿನಗಾಡಿಯಲ್ಲಿ ಹೋಗಲಿದಾರೆ ಸೀತುದೊಡ್ಡಪ್ಪ, ಸುನಂದೆ. ಯಾಕೋ ಬೇಜಾರು ಗೌರಿಗೆ. ಎರಡೇ ದಿನಕ್ಕೆ ಬಂದವರು. ಎರಡು ದಿನ ಹೋಗಿಬರುವ ಪ್ರಯಾಣಕ್ಕೇ ಬೇಕು. ಸಿರ್ಸಿ ಪ್ರಯಾಣಕ್ಕಿಂತ ದೂರ.
ಹೊಳೆಬಾಗಿಲಿನಿಂದ ದೋಣಿ, ಮೋಟಾರುಬಂಡಿ ಕನಿಷ್ಟ ಇಪ್ಪತ್ತು ಗಂಟೆ ಬೇಕು ಗೋವಾ ತಲುಪಲು. ಆದರೂ ಸೀತುದೊಡ್ಡಪ್ಪ ಪ್ರತಿ ವರ್ಷ ನವರಾತ್ರೆಯ ಒಂದು ಪೂಜೆಗೆ ಬಂದು ದೇವಿಯ ಪ್ರಸಾದ ಸ್ವೀಕರಿಸಿ ಹೋಗುವ ನಿಷ್ಟಾವಂತ. ಅವನೂ ರಘುದೊಡ್ಡಪ್ಪನೂ ಆಸ್ತಿ ಪಾಲಿಗಾಗಿ ಜಗಳ ಮಾಡಿದ್ದು ಮಸುಕು ನೆನಪುಗಳು. ಮರೆತಿಲ್ಲ ಇನ್ನೂ. ಬೇಕಾದ್ದು ಬೇಡಾದ್ದು ತೆಗೆದುಕೊಳ್ಳುವಾಗ ಅಪ್ಪಯ್ಯ ಏನೂ ಹೇಳಿರಲಿಲ್ಲ. ಇಲ್ಲಿಂದ ಹೋದವರು ಕೆಲವು ವರ್ಷ ಅವರಾಗಿಯೇ ಬರುವುದನ್ನು ನಿಲ್ಲಿಸಿದ್ದರು. ಆಮೇಲೆ ಅಕ್ಷತೆಯಿಟ್ಟು ಕರೆಯದೆ ಅವರಾಗಿಯೇ ಬಂದು ಹೋಗುತ್ತಿದ್ದಾರೆ.
ಬಂಧುತ್ವದ ಬಿಗಿ ಅಂದರೆ ಇದೇ. ಯಾವಾಗ ತಗಾದೆ ತೆಗೆಯುವರೋ. ರಘು ದೊಡ್ಡಪ್ಪ ಸುಶೀಲಚಿಕ್ಕಿಯ ಜೊತೆ ಹೊರಡುವಾಗ ಅಪ್ಪಯ್ಯನೇ, ‘ಇವಳೇ. ಒಂದು ಚೀಲ ಸುಲಿದ ತೆಂಗಿನಕಾಯಿ ಕಟ್ಟಿ ಕೊಡು’ ಎಂದಿದ್ದ. ಬಾಳೆಗೊನೆಯಿಂದ ಕಾಯಿ ಬಿಡಿಸಿ ಚೀಲಕ್ಕೆ ಹಾಕಿಯಾಗಿತ್ತು. ರಘುದೊಡ್ಡಪ್ಪ, ‘ಏನೂ ಬೇಡ ತಮ್ಮಾ, ಬೇಕಾದ್ದು ಸಿರ್ಸಿಯಲ್ಲೇ ಸಿಕ್ಕುತ್ತು. ಈಗ ತಕ್ಕೊಂಡು ಹೋದ ಋಣವೇ ಬಾಕಿ ಇದ್ದು’ ಅದೇ ಮಾತು ಇವತ್ತು ಬಂದಿದೆ ಸೀತೂದೊಡ್ಡಪ್ಪನಿಂದ. ಅದೊಂದೇ ಅಲ್ಲ, ತುಂಬ ಆಸ್ಥೆಯಿಂದ ಮಾತಾಡಿದ್ದುಬೇರೆಯದೇ ಸಂಗತಿಗಳು. ಹೊಳೆಬಾಗಿಲು ಊರು ಇನ್ನೂ ಇಪ್ಪತೈದು ವರ್ಷ ಹಿಂದಕ್ಕಿದೆ. ಜನರು ಸುಧಾರಿಸದೆ ಊರು ಸುಧಾರಣೆ ಆಗದು. ಒಂದು ಶಾಲೆ ಊರಿಗೆ ಅಗತ್ಯ. ಅಪ್ಪ (ಅಜ್ಜಯ್ಯ) ಮನಸ್ಸು ಮಾಡಿದರೆ ಊರವರು ಸೇರಿ ನದಿ ದಡಕ್ಕೆ ಎತ್ತರದ ಗೋಡೆ ಕಟ್ಟಿದಂತೆ ಶಾಲೆಯನ್ನು ತೆರೆಯಬಹುದು. ಮಾಸ್ತರರು ಸಿಗಲಿಲ್ಲವೇ? ಅಪ್ಪನೇ ಪಾಠ ಮಾಡಲಿ.
ಆದಿತ್ಯವಾರ ರಾಮಪ್ಪಯ್ಯ ಇದ್ದಾನೆ. ಅವನು ಆದಿನ ಪಾಠ ಮಾಡಲಿ. ಕಮಲಿಗೆ ನಾಲ್ಕಕ್ಷರ ಬರುತ್ತದೆ ಓದಿ ಬರೆಯಲು. ಒಂದನೇ ತರಗತಿಗೆ ಕಲಿಸಲು ಸಾಕು. ನಾವು ಒಂದು ಹೆಜ್ಜೆ ಮುಂದಿಟ್ಟರೆ ಜನ ಹತ್ತು ಹೆಜ್ಜೆ ಸೇರಿಸುತ್ತಾರೆ. ಮಾಸ್ತರರೂ ಸಿಕ್ತಾರೆ. ಎಲ್ಲರ ಪ್ರಯತ್ನದಿಂದ ಈ ಸಣ್ಣ ಊರಿಗೆ ಟಪ್ಪಾಲು ಪೆಟ್ಟಿಗೆ ಬಂ ತೆ ಶಾಲೆಯೂ ಶುರುವಾಗಲಿ!
“ನಾನು, ರಘು ಇಪ್ಪತ್ತು ವರ್ಷಗಳ ಹಿಂದೆಯೇ ಮಂಗಳೂರಿಗೆ ಹೋಗಿ ಪರಿಚಿತರಲ್ಲಿ ವಾಸಮಾಡಿ ವಾರಾನ್ನ ಉಂಡು ಹತ್ತನೇ ಕ್ಲಾಸು ಮುಗಿಸಿದ್ದಲ್ಲದ?ಅದಕ್ಕೆ ಇವತ್ತು ನಮ್ಮ ಬದುಕು ಅಪ್ಪ ಕೊಟ್ಟ ಆಸ್ತಿ ಪಾಸ್ತಿ ಇಲ್ಲದೇ ಚೆಂದಾಗಿ ಕಳೀತಾ ಇದ್ದು.ಸುಖ ಪಡ್ಬೇಕು ಅಂದ್ರೆ ಕಷ್ಟ ಪಡೆಕ್ಕು. ಆಗೆಲ್ಲ ಎಷ್ಟು ಕಷ್ಟದ ಕಾಲ?ಹೊಳೆಬಾಗಿಲಿನಿಂದ ಇನ್ನೂ ಬೆಳಕು ಹರಿವ ಮೊದ್ಲು ಹೊರಟರೆ ನಾಲ್ಕೈದು ಹೊಳೆ, ನದಿ ಅಂತ ಬೈಸಾರಿಗೆ ಅಥವಾ ರಾತ್ರೆ ಮಂಗಳೂರಿಗೆ. ವರ್ಷದಲ್ಲಿ ಒಂದೆರಡು ಸಲ ಮನೆ ಮುಖ ಕಂಡರೆ ಹೆಚ್ಚು.ನಿಮ್ಮ ಕುರುಡು ಬುದ್ಧಿಯಿಂದಮಕ್ಕಳ ಭವಿಷ್ಯ ಹಾಳು ಮಾಡೂಕಾಗ” ಎಂದ ಸೀತುದೊಡ್ಡಪ್ಪ ಎಲ್ಲರೂ ಒಪ್ಪಿದರೆ ಗೌರಿ, ನಾಣಿಯನ್ನು ಗೋವಾದಲ್ಲಿ ಶಾಲೆಗೆ ಸೇರಿಸುವ ಅಂದಾಜಿನಲ್ಲಿ ಇದ್ದಾನಂತೆ.!
ಸೀತು ದೊಡ್ಡಪ್ಪನ ಮಾತು ಮುಂದುವರಿದಿತ್ತು, ‘ಗೌರಿ ಚುರುಕಿನ ಹುಡುಗಿ.ಅವಳ ಪ್ರತಿಭೆ ಮಸುಕಾಗಬಾರದು. ಅವಳನ್ನು ಶಾಲೆಗೆ ಹಾಕಿ. ಅಪ್ಪ, ಸುಶೀಲಳಿಂದ ಓದು ಬರಹ ಕಲಿತಿದ್ಲು. ಸೀದಾ ನಾಲ್ಕನೇ ಕ್ಲಾಸಿಗೆ ಸೇರಿಸಲಕ್ಕು. ಬ್ಯಾಡ್ವಾ? ಕುಂದಾಪುರ, ಉಡುಪಿ ಇದ್ದಲ್ದ? ಇನ್ನೊಂದು ಎಂತ ಗೊತ್ತಾ? ಅದು ಎಷ್ಟು ಚೆಂದಕ್ಕೆ ಚಿತ್ರ ಬಿಡಿಸುತ್ತು! ಪೆನ್ಸಿಲ್ ಸ್ಕೆಚ್ಚು, ಬಣ್ಣದ ಚಿತ್ರ ಅಟ್ಟದಲ್ಲಿದ್ದು. ಗುಟ್ಟಾಗಿ ಬರೆದಿಟ್ಟ ಕವನಗಳು, ಲಾಯ್ಕ ಇದ್ದು, ಓದಿದೆ.’
ಒಳಕೋಣೆಯಲ್ಲಿ ಮಲಗಿದ್ದ ಗೌರಿ ನಾಚಿಗೆ ಮುಳ್ಳಾದಳು. ತನ್ನ ಕವನದ ಬಗ್ಗೆ ದೊಡ್ಡಪ್ಪನಿಗೆ ತಮಾಶೆ. ಪ್ರಕೃತಿ ಮೇಲೆ, ಅಪ್ಪ, ಆಮ್ಮನ ಮೇಲೆ, ಕೈಗೆ ಸಿಕ್ಕ ಮೊಲದ ಬಗ್ಗೆ ಏನೋ ಚೂರು ಪಾರು ಗೀಚಿದ್ದು. ಲಾಯ್ಕ ಇದ್ದಾ? ದೊಡ್ಡಪ್ಪ ತನ್ನನ್ನು ಹೊಗಳಲು ಹೇಳಿದ ಸುಳ್ಳು!. ಆದರೆ ಅವನು ಹಾಂಗೆ ಸುಳ್ಳು ಹೇಳುವ ಆಸಾಮಿನಾ? ಊಹೂಂ, ಹೊಳೆಬಾಗಿಲಿಗೆ ಬಂದ ದಿನವೇ ತನ್ನನ್ನು ಕರೆದು ಎರಡು ಇಂಗ್ಲೀಷ್ ಪುಸ್ತಕ ಕೊಟ್ಟಿದ್ದ.
ಹಾಗೇ ಬೆಳಗಾವಿಯಲ್ಲಿ ಪ್ರಕಟವಾದ ಕನ್ನಡದ ಒಂದು ಹಳೆ ಪತ್ರಿಕೆಯನ್ನು ತೋರಿಸಿದ್ದ. ಅದರಲ್ಲಿ ಬೆಳಗಾವಿಯ ಜಿಲ್ಲೆಯ ಚಚಡಿ ಗ್ರಾಮದಲ್ಲಿ ಕನ್ನಡದ ಮೊದಲ ಹೆಣ್ಣುಮಕ್ಕಳ ಶಾಲೆ ೧೯೧೨ ರಲ್ಲಿ ಸ್ಥಾಪನೆಯಾಗಿದ್ದು ಆ ಶಾಲೆಯಲ್ಲಿ ಕಲಿಯುವ ಹೆಣ್ಣುಮಕ್ಕಳ ಫೋಟೋ ಸಮೇತ ವರದಿ ಪ್ರಕಟವಾಗಿತ್ತು.
ಫೋಟೋದಲ್ಲಿ ಸೀರೆಯುಟ್ಟು ತಲೆತುಂಬ ಸೆರಗು ಹೊದ್ದ ಹುಡುಗಿಯರು, ತನ್ನದೇ ವಯಸ್ಸಿನವರು, ತನಗಿಂತ ಚಿಕ್ಕ ಮುಗ್ಧ ಬಾಲಕಿಯರಿದ್ದರು. ‘ಇವರನ್ನು ನೋಡಿಯೇ ನಿನಗೆ ಕಲಿಯುವ ಉಮೇದು ಬರಲಿ. ಸಾವಿತ್ರಿಬಾಯಿ ಪುಲೆ ಹೆಸರು ನೀ ಕೇಳಿರಲಾರೆ. ಪುಣೆಯಲ್ಲಿ ಅವಳ ಶಿಕ್ಷಣ ಸಂಸ್ಥೆ ಇದೆಯಂತೆ. ಬಹಳಷ್ಟು ಹುಡುಗಿಯರಿಗೆ ಅವಳು ಶಿಕ್ಷಣ ಕೊಡ್ತಾ ಇದ್ದಾಳಂತೆ. ನೀನೂ ಆಯೆಕ್ಕು ಅವರಂತೆ.’ ಎಂದಿದ್ದ ತನ್ನ ತಲೆ ಸವರಿ.
ಅವನು ಕೊಟ್ಟ ಎರಡೂ ಪುಸ್ತಕಗಳು ಮಕ್ಕಳಿಗೆ ಓದುವ ಸಚಿತ್ರ ಇಂಗ್ಲೀಷ್ ಪುಸ್ತಕಗಳು. ಅವಳಿಗೆ ಕಬ್ಬಿಣದ ಕಡಲೆಗಳು. ಸುಶೀಲಚಿಕ್ಕಿ ಹೋದ ನಂತರ ಇಂಗ್ಲೀಷ್ ಕಲಿಕೆ ನಿಂತಿದೆ. ಶಾಲೆ ಬೇಡ. ಬೇಸರವಿಲ್ಲ. ಆದರೆ ಅವಳು ಇಟ್ಟು ಹೋದ ಇಗ್ಗತ್ತಪ್ಪನ ವಿವಾಹ ಪ್ರಸಂಗ ಮತ್ತು ವಿನೋದಿನಿ ಇದೆ. ಅವನ್ನು ಕಷ್ಟದಲ್ಲಿ ಓದುವಾಗ ಏನೋ ಭಾವಲಹರಿ.. ಇನ್ನೂ ಬೇರೆ ಪುಸ್ತಕ ಓದಬೇಕು, ಕಥೆ ಕವನ ಬರೀಬೇಕು, ಚಿತ್ರ ಬಿಡಿಸಬೇಕು.
ಎಲ್ಲೋ ಹುಡುಕುತ್ತಿದೆ ಯಾವುದೋ ದಾರಿ. ಹಾರ್ಮೋನಿಯಂ ಅಭ್ಯಾಸಕ್ಕೆ ಕುಳಿತರೆ ಅಪಸ್ವರದ ತಂತುವಿನಲ್ಲಿ ಭಾವದ ಅಲೆಗಳು ತೇಲಿ ಬರುವಾಗ ಅವು ಭಾಷೆ ತಿಳಿಯದೆ ಹಾಗೇ ಆವಿಯಾಗಿ… ಏನೇ ಆಗಲಿ ಈ ವರ್ಷ ತಾನು ಸಾಸ್ತಾನದ ಶಾಲೆಗೆ ಸೇರಲೇಬೇಕು. ಕೊನೆಗೆ ಈ ಸುನಂದೆಗಿಂತ ಹೆಚ್ಚು ಓದಿ ತಾನೂ ಒಂದು “ಜನ” ಆಗಲೇಬೇಕು. ಎಷ್ಟು ಅಹಂಕಾರ ಸುನಂದೆಗೆ?
‘ಗೌರಿ’ ಬದಿಯಲ್ಲಿ ಕೇಳಿತು ಸುನಂದೆಯ ಸ್ವರ. ತಮ್ಮ ಹಾಸಿಗೆಯ ಬಳಿ ಹಾಸಿ ಮಲಗಿದ್ದಳು. ನಾಳೆ ಹೊರಟು ಹೋಗಲು ಅವಳಿಗೂ ಬೇಸರ. ಅವಳಿಗೆ ನಿದ್ದೆ ಬರುವುದನ್ನೇ ಕಾಯುತ್ತಿದ್ದಾಳೆ ಗೌರಿ. ಹೊಟ್ಟೆ ಸಂಕಟ, ಎದೆ ತಳಮಳ, ಸಿಟ್ಟು ಒಂದಾಗಿತ್ತು ಈ ದಿನ. ಸ್ಪೋಟ ಆಗುವದಷ್ಟೇ ಬಾಕಿ. ಒಂದು ಕತ್ತರಿಯನ್ನು ತನ್ನ ಹಾಸಿಗೆ ಅಂಚಿನಲ್ಲಿ ಅಡಿಗಿಸಿಟ್ಟು ಮಲಗಿದ ನಟನೆ. ಸುನಂದೆಯ ಚೆಂದದ ನಿರಿಗೆ ಅಂಗಿಗೆ ಕತ್ತರಿಯಿಂದ ಗತಿ ಕಾಣಿಸಬೇಕು.
ತನ್ನ ಹೊಟ್ಟೆ ಉರಿಸಿದ್ದೇ ಆ ಅಂಗಿ. ಅರ್ಧ ರಾತ್ರೆ ನಂತರ ಅಂಗಿಯನ್ನು ಕತ್ತರಿಸಿ ಕತ್ತರಿಸಿ ಹಾಗೇ ಅವಳ ಚೀಲದಲ್ಲಿ ತುರುಕಿ ಇಟ್ಟ ಮೇಲೆ ಸಮಾಧಾನ. ಅದೊಂದೇ ಅಲ್ಲ, ಹೊರಗಿದೆ ಕಪ್ಪು ಬೂಟುಗಳು. ಅವು ಹರಿದು ಹೋಗಬೇಕು. ಮೋತಿ ಬಾಯಿಯಎದುರಿಗಿಟ್ಟರೆ ಒಂದೇ ನಿಮಿಷ. ಚರ್ಮದ ವಾಸನೆ, ಬೆವರು ಮೂರಿಗೆ ಮೋತಿ ಕಚ್ಚಿ ಕಚ್ಚಿ , ಹೋ! ಬೂಟು ಇಲ್ಲದೆ ಹೇಗೆ ಹೋಗುತ್ತಾಳೆ? ನೋಡೋಣ. ಹರಿದ ಅಂಗಿಗೆ ಇನ್ನೆಷ್ಟು ರಂಪವೋ! ತನ್ನ ಪರಕರ ಹಾಕಿ ನೋಡಲಿ.ಮನುಷ್ಯನಿಗೆ ಈರ್ಷ್ಯೆ ಹುಟ್ಟಿತೆಂದರೆ ವಿವೇಕವೂ ನಷ್ಟವಾದಂತೆ. ಗೌರಿಯ ಬಾಲಬುದ್ಧಿಗೆ ಈರ್ಷ್ಯೆ, ವಿವೇಕ ಅದರಿಂದ ಏನಾಗುತ್ತದೆ ಒಂದೂ ತಿಳಿಯದು. ತನ್ನ ಹೊಟ್ಟೆ ಉರಿ ಸಂಕಟಕ್ಕೆ ಅವಳು ಸಂಕಟ ಪಡಬೇಕು! ಅದೇ ಸರಿಯಾದ್ದು.
‘ಗೌರಿ’ಮೆತ್ತಗೆ ಕರೆದಿದ್ದಾಳೆ ಸುನಂದೆ, ‘ನಾಳೆ ಹೋಗ್ತಾ ಇದ್ದೇನೆ. ನಿನ್ನನ್ನು ಬಿಟ್ಟು ಹೋಗಲೇ ಮನಸ್ಸಿಲ್ಲ. ಕ್ರಿಸ್‌ಮಸ್ ಸಮಯ ಗೋವಾದ ಜನರಿಗೆ ದೊಡ್ಡ ಹಬ್ಬ. ನೋಡುವುದು ಬಹಳ ಇದ್ದು. ಆಗ ನೀ ಬರ್ತಿಯಾ?’ ಹಾಂ ಎಂದಳುಗೌರಿ.
‘ನನ್ನ ಹಳದಿ ನಿರಿಗೆ ಅಂಗಿ ಹೇಂಗಿದ್ದು ಹೇಳು. ಹೊಸ್ತು. ಇಲ್ಲಿಗೆ ಬಂದಾಗ ಒಮ್ಮೆ ಮಾತ್ರ ಹಾಕಿದ್ದು. ಆ ಅಂಗಿ ಒಪ್ಪಿಗೆಯಾದ್ರೆ ಇಟ್ಟುಕೋ. ಗೋವಾಕ್ಕೆ ಹೋದ್ಮೇಲೆ ಇನ್ನೊಂದು ಗುಲಾಬಿ ನಿರಿಗೆ ಅಂಗಿ ನಿಂಗೆ ತೆಗೆದಿಡ್ತೆ. ಆಯ್ತಾ.?’
ಹಾಸಿಗೆ ಅಡಿಗಿಟ್ಟ ಕತ್ತರಿ ಗೌರಿಯ ಬೆನ್ನಿಗೆ ಚುಚ್ಚಿದಂತೆ ಬೆಚ್ಚಿದಳು. ‘ಗೌರಿ, ನನ್ನಹತ್ರ ನಾಲ್ಕು ಬಣ್ಣದ ಪ್ಲಾಸ್ಟಿಕ್ ಕ್ಲಿಪ್ ಇದ್ದು. ಎರಡು ನಿನಗೇಯಾ. ಹಳದಿ ನಿರಿಗೆ ಅಂಗಿಗೆ ಹಸುರು, ಕೆಂಪು ಕ್ಲಿಪ್ ಹಾಕ್ಕಂಡರೆ ನೀ ಚಿಟ್ಟೆ ಹಾಂಗೆ ಕಾಣ್ತೆ. ಮುತ್ತಿನ ಬಳೆ ಬೇಕಾ?’
ಅವಳ ಮೆಲು ಮೃದು ನುಡಿಗೆ ಕರಗಿ ಹೋದ ಗೌರಿಯ ಬೆನ್ನಿಗೆ ಇನ್ನೂ ಆಳಕ್ಕೆ ಕತ್ತರಿ ಕುತ್ತಿದಂತೆ. ಆಮೇಲೆ ಅವಳ ಮಾತು ಕೇಳಲೇ ಇಲ್ಲ. ಬಹಳ ಹಿಂದೆ, ಕಳೆದ ವರ್ಷವಲ್ಲವೇ? ಹೌದು, ಮನೇಲಿ ಸತ್ಯನಾರಾಯಣ ಪೂಜೆ. ಊರ ಕೆಲವು ಜನ, ದೇವಸ್ಥಾನದ ಅರ್ಚಕರು, ಅಲ್ಲದೆ ಕಮ್ತಿಯವರಿಗೂ ಅಪ್ಪಯ್ಯ ಹೇಳಿಕೆ ಕೊಟ್ಟಿದ್ದ. ಕಮ್ತಿಯವರು ಹಿಂದಿನ ದಿನವೇ ದೋಣಿಯವನ ಕೈಲಿ ಒಂದು ಚೀಲ ತುಂಬ ಉತ್ತಮ ಜಾತಿಯ ರಸಭರಿತ ಮಾವಿನಹಣ್ಣುಗಳನ್ನು ಕಳುಹಿಸಿದ್ದರು. ನೋಡಿಯೇ ಗೌರಿ, ನಾಣಿಗೆ ಜೊಲ್ಲು ಸುರಿದಿತ್ತು. ತಿನ್ನಲು ಕೈ ಹಾಕಿದಾಗ ಆಯಿ ತಡೆದಿದ್ದಳು, ನಾಳೆ ಪೂಜೆ ಮುಗಿವ ತನಕ ಮುಟ್ಟಲಿಕ್ಕಿಲ್ಲ.
ರಸಾಯನಕ್ಕೂ ಅದೇ, ನೇವೇದ್ಯದ ಪ್ರಸಾದಕ್ಕೂ ಅದೇ. ಜನ ಬಹಳ ಬರುವ ಕಾರಣ ತಮಗೆ ಏನೂ ಉಳಿಯದೆಂದು ಗೌರಿ ನಾಲ್ಕು ಹಣ್ಣುಗಳನ್ನು ಗುಟ್ಟಾಗಿ ಅಡಗಿಸಿಟ್ಟಿದ್ದಳು ಬೈ ಹುಲ್ಲಿನ ಅಟ್ಟದಲ್ಲಿ. ಅದರ ನೆನಪಾದದ್ದು ಪೂಜೆ ಕಳೆದು ಎರಡು ದಿನಗಳ ನಂತರ. ನೋಡಿದರೆ ನಾಲ್ಕೂ ಕೊಳೆತು ಅಪ್ಪಚ್ಚಿ. ಕದ್ದು ತಿನ್ನಲು ಜೊಲ್ಲು ಸುರಿಸಿದ್ದೇ ಬಂತು. ಅಂತೂ ಆಯಿ ಎದುರಲ್ಲೇ ಗುಟ್ಟು ರಟ್ಟು. ಅಜ್ಜಮ್ಮ ಶಾಂತವಾಗಿ, ‘ಹಣ್ಣು ತೊಳೆದು ಎಣಿಸಿ ಇಟ್ಟವಳು ನಾನು. ಕಡೆಗೆ ಕಂಡರೆ ನಾಲ್ಕು ಕಮ್ಮಿ. ಇದೇ ಮಂಗಗಳು ತಿಂದದ್ದು. ಅನುಮಾನ ಬಂತು. ಆದರೆ ಮಕ್ಕಳಲ್ದ, ಅವು ದೇವರ ಸಮ. ಸುಮ್ಮನಾದೆ’ ಅಂದಳು.
‘ನೀವೇ ಅವನ್ನು ತಲೆಮ್ಯಾಲೆ ಹೊತ್ತು ಹಾಳು ಮಾಡ್ತೀರಿ’ ಆಯಿ ಗದರಿದಳು, ‘ಹಣ್ಣು ಕೊಳೆತದ್ದು ದೊಡ್ಡದಲ್ಲ. ಅಡಗಿಸಿ ಇಟ್ಟದ್ದು ತಪ್ಪು. ಎಂತದೇ ಆಗ್ಲಿ ಹಂಚಿ ತಿಂಬ ಗುಣ ಮಕ್ಕಳು ಕಲೀಬೆಕು. ಹಂಚುವುದು ಬೇಡ್ವಾ? ಹೋಗ್ಲಿ, ಕದ್ದು ಮುಚ್ಚಿದ್ದು ಯಾಕೆ? ಹಾಳು ಬುದ್ಧಿ? ದೇವರಿಗೆಎಂತದೇ ಸಮರ್ಪಣೆ ಮಾಡಲಿ, ಮನಃಪೂರ್ವವಕ ಮಾಡೆಕ್ಕು. ಹತ್ತು ಸಲ ಶಬರಿ ಕಥೆ ಕೇಳಿ ಬೆಳೆದವು ನೀವು. ಶಬರಿಯ ಸಮರ್ಪಣಾ ಭಾವ ಅರ್ಥ ಆಗಲಿಲ್ಯಾ? ಶ್ರೀರಾಮನಿಗಾಗಿ ಶಬರಿ ತಾನು ಆರಿಸಿ ತಂದ ಹಣ್ಣುಗಳನ್ನು ಒಂದೊಂದೇ ಕಚ್ಚಿ ನೋಡಿ ಹಾಳು, ಹುಳಿ ಹಣ್ಣು ಬಿಸಾಕಿ ಸಿಹಿಹಣ್ಣುಗಳನ್ನು ಮಾತ್ರ ಅವನಿಗೆ ಸಮರ್ಪಿಸಿದವಳು. ಅದು ತನ್ನ ಎಂಜಲು ಎಂಬ ಕಲ್ಪನೆಯೂ ಬಾರದ ಮುಗ್ಧಳು. ತನ್ನ ರುಚಿ ರಾಮ ರುಚಿ’
ಗೌರಿ ಗದ್ಗದಿತಳಾದಳು, ‘ತನ್ನ ರುಚಿ ರಾಮ ರುಚಿ, ತನ್ನ ಶ್ರದ್ಧೆ ರಾಮ ಶ್ರದ್ಧೆ, ತನ್ನ ಭಕ್ತಿ ರಾಮ ಭಕ್ತಿ, ತನ್ನ ಚಿತ್ತ ರಾಮ ಚಿತ್ತ ಎಂದು ಶಬರಿ ತನ್ನನ್ನೇ ಶ್ರೀ ರಾಮನಿಗೆ ಸಮರ್ಪಿಸಿ..’
‘ಕಥೆ ಎಲ್ಲಾ ಗೊತ್ತಿದ್ದು ನೀ ಮಾಡಿದ್ದು ಎಂತಾ? ಈ ಕೆಮಿಲಿ ಕೇಳಿ ಆ ಕೆಮಿಲಿ ಬಿಟ್ಟದ್ದು. ದೇವರಿಗೆ ತಂದದ್ದು ನಾವು ಕದ್ದಿಟ್ಟು ಉಳಿದದ್ದು ಕೊಡುವುದಲ್ಲ.ಹೋಗಿ ಇಬ್ಬರೂ ನಾಲ್ಕು ಬಸ್ಕಿ ತೆಗೆದು ದೇವರಲ್ಲಿ ಕ್ಷಮೆ ಕೇಳಿ’
ತಾನೀಗ ಮಾಡಲು ಹೊರಟಿದ್ದು ಇದನ್ನೇ. ಕದ್ದು ಮುಚ್ಚಿ ಅಂಗಿ ಕತ್ತರಿಸಿ, ಬೂಟು ಹರಿದು ಸುನಂದೆಗೆ ಉಪಯೋಗ ಮಾಡದಂತೆ, ಅಯ್ಯೋ, ಸರಿಯಾದ ಸಮಯದಲ್ಲಿ ಎಚ್ಚರಿಸಿದಳು ಸುನಂದೆ. ತಿನ್ನುವ ಸ್ವಾರ್ಥದಲ್ಲಿ ಹಾಳಾದ್ದು ಹಣ್ಣುಗಳು.
ಹಾಗೇ ತನಗಿಲ್ಲದ ಮತ್ಸರದಲ್ಲಿ ಕತ್ತರಿಯಿಂದ ಕಡಿದು ಹೋಗುತ್ತಿತ್ತು ಬಂಧುತ್ವದ ತಂತು. ನನ್ನ ಸ್ವಾರ್ಥವೇ, ಮತ್ಸರವೇ ಹಾಳಾಗಿ ಹೋಗು! ನನ್ನಿಂದ ದೂರ ಹೋಗು. ನನ್ನ ಮನಸ್ಸು ಪ್ರೀತಿಯ ಬಟ್ಟಲಾಗಲಿ. ಕ್ಷಮಿಸು ದೇವರೇ. ಇನ್ನೆಂದೂ ಯಾರಿಗೂ ನೋವು ಕೊಡ್ತಿಲ್ಲೆ. ಮತ್ತೊಂದು ಕ್ಷಣದಲ್ಲಿ ಜೋರಾಗಿ ಬಿಕ್ಕಳಿಸುತ್ತ ಸುನಂದೆಯ ಹೆಗಲ ಮೇಲೊರಗಿದಳು.
ಭಾದ್ರಪದ ಮಾಸದ ಕೊನೆಯಲ್ಲಿ ಬರುವ ಮಳೆ ಬಿಸಿಲಿನ ರಂಗಿನಾಟದಂತೆ ಗೌರಿ ಅತ್ತಳು, ನಕ್ಕಳು. ನಿಜವಾಗಿಯೂ ಸುನಂದೆಗೆ ಒಗಟಾದಳು ಈ ಹುಡುಗಿ.
| ಇನ್ನು ನಾಳೆಗೆ |
0 ಪ್ರತಿಕ್ರಿಯೆಗಳು