ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಂಡಲೀಕ ಹಾಲಂಬಿ ಇನ್ನಿಲ್ಲ ಎಂದು ಗೊತ್ತಾಗಿ..

ಪುಂಡಲೀಕ ಹಾಲಂಬಿ – ಒಂದು ಅಕ್ಷರ ನಮನ

lakshmi v prasad

ಡಾ.ಲಕ್ಷ್ಮೀ ಜಿ ಪ್ರಸಾದ

ಇಂದು ಬೆಳಗ್ಗೆ ಏಳುತ್ತಲೇ ಪುಂಡಲೀಕ ಹಾಲಂಬಿ ಇನ್ನಿಲ್ಲ ಎಂಬ ವಾಟ್ಸಪ್ ಸಂದೇಶ ಓದಿದೆ. ತಕ್ಷಣ ಅವರ ಸಹೃದಯತೆ ಕೂಡ ನೆನಪಾಯಿತು ,

ಸುಮಾರು ಹತ್ತು ವರ್ಷಗಳ ಹಿಂದಿನ ಮಾತಿದು. ನಾನು APS ಕಾಲೇಜ್ ನಲ್ಲಿ ಕೆಲಸ ಮಾಡುತ್ತಿದ್ದೆ . ಆ ಸಮಯದಲ್ಲಿ ನಮ್ಮ ಅಕ್ಕ ಪಕ್ಕದ ಕೆಲವರು ನನ್ನಲ್ಲಿ “ನಾವು ಕನ್ನಡ ಎಂ ಎ ಗೆ ಖಾಸಗಿಯಾಗಿ ಓದುತ್ತಿದ್ದೇವೆ, ನಮಗೆ ಸ್ವಲ್ಪ ಹೇಳಿ ಕೊಡುತ್ತೀರಾ ? ಎಂದು ಕೇಳಿದರು. ಅಷ್ಟರ ತನಕ ನನಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಅನುಭವವಿರಲಿಲ್ಲ. ಆದರೂ ಅವರು ಕೇಳಿದಾಗ ಇಲ್ಲ ಎಂದು ಹೇಳಲು ದಾಕ್ಷಿಣ್ಯ ಆಯಿತು. ಅಲ್ಲದೆ ಅವರಲ್ಲಿ ಸ್ನೇಹಿತೆ ರಾಜೇಶ್ವರಿಗೆ ನಾನೇ ಕನ್ನಡ ಎಂ ಎ ಗೆ ಸಲಹೆ ನೀಡಿದ್ದೆ. ಅರ್ಥ ಆಗದಿದ್ದರೆ ಹೇಳಿ ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದ್ದೆ ಬೇರೆ!

ಹೀಗೆ ಸಂಜೆ ಹೊತ್ತು ಮನೆಯಲ್ಲಿ ಉಚಿತವಾಗಿ ಪಾಠ ಮಾಡಲು ಆರಂಭಿಸಿದೆ. ಇದು ಒಬ್ಬರಿಂದ ಒಬ್ಬರಿಗೆ ಹರಡಿ ತುಂಬಾ ಜನ ಬರಲು ಆರಂಭಿಸಿದರು. ಆಗ ಮನೆಯಲ್ಲಿ ಜಾಗ ಸಾಲದಾಯಿತು. ಹಾಗಾಗಿ ಅಲ್ಲೇ ಸಮೀಪದ ಕನಕ ಕಾಲೇಜ್ ನಲ್ಲಿ ಒಂದು ದೊಡ್ಡ ಕೋಣೆಯನ್ನು ಕೇಳಿ ಪಡೆದೆವು, ಅನೇಕ ವಿದ್ಯಾರ್ಥಿಗಳು ಪಾಠ ಕೇಳಲು ಬರುತ್ತಿದ್ದರು. ಆ ಸಮಯದಲ್ಲಿ ಎಲ್ಲ ವಿಷಯಗಳನ್ನು ಪಾಠ ಮಾಡಲು ನನಗೆ ಒಬ್ಬಳಿಗೆ ಅಸಾಧ್ಯ ಎನಿಸಿ ಸಹಾಯಕ್ಕಾಗಿ APS  ಕಾಲೇಜ್ ನ ನಿವೃತ್ತ ಕನ್ನಡ ಉಪನ್ಯಾಸಕರಾದ ಡಾ. ಗಣೇಶ್ ಅವರ ಸಹಾಯ ಕೇಳಿದೆವು.

ka sa pa2ಅವರು ಹಳಗನ್ನಡ ಮತ್ತು ಶಾಸನ ಶಾಸ್ತ್ರ ತರಗತಿ ತೆಗೆದುಕೊಳ್ಳುತ್ತಿದ್ದರು. ಉಳಿದ ನಾಲ್ಕು ವಿಷಯಗಳಿಗೆ ನಾನು ಪಾಠ ಮಾಡುತ್ತಿದ್ದೆ.  ನಮ್ಮ ತರಗತಿ ಪ್ರಾರಂಭವಾಗಿ ನಾಲ್ಕು ಐದು ತಿಂಗಳು ಆಗಿರಬಹುದು. ಆ ಸಮಯದಲ್ಲಿ ಒಂದಿನ ಕನ್ನಡ ಸಾಹಿತ್ಯ ಪರಿಷತ್ ನಿಂದ ಒಂದು ಫೋನ್ ಕರೆ ಬಂತು. ಆ ಕಡೆಯಿಂದ ಪುಂಡಲೀಕ ಹಾಲಂಬಿ ಮಾತನಾಡಿದ್ದರು. ಆಗ ಅವರಿನ್ನೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಗಿರಲಿಲ್ಲ.

ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ಮಾಲೆ ಏರ್ಪಡಿಸಿದ್ದೇವೆ ಅದರಲ್ಲಿ ಛಂದಸ್ಸು ಮತ್ತು ಭಾಷಾ ವಿಜ್ಞಾನ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಎಂದು ಆಹ್ವಾನಿಸಿದರು. ಆರಂಭದಲ್ಲಿ ತುಸು ಅಳುಕಿದೆ. ನನಗೆ ಅಷ್ಟು ಅನುಭವವಿಲ್ಲ ಎಂದು ಹೇಳಿದೆ. ಆಗ ಅವರು ನೀವು ಉಚಿತವಾಗಿ ಪಾಠ ಮಾಡುತ್ತಿರುವ ವಿಚಾರ ತಿಳಿಯಿತು. ತುಂಬಾ ಚೆನ್ನಾಗಿ ಪಾಠ ಮಾಡುತ್ತೀರಿ ಎಂಬ ವಿಷಯ ಕೂಡ ತಿಳಿದು ಬಂತು. ಹಾಗಾಗಿ ನಿಮ್ಮನ್ನ ವಿಶೇಷ ಉಪನ್ಯಾಸ ಮಾಲೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಮಾಡಿದ್ದೇವೆ ಬನ್ನಿ ಎಂದು ಧೈರ್ಯ ತುಂಬಿ ಕರೆದರು. ಅವರ ಆಹ್ವಾನವನ್ನು ಒಪ್ಪಿದೆ.

ಅಹ್ವಾನ ಪತ್ರಿಕೆ ಮುದ್ರಣವಾಗಿ ಬಂತು. ಅದನ್ನು ನೋಡಿ ಇನ್ನಷ್ಟು ಕಂಗಾಲಾದೆ. ಯಾಕೆಂದರೆ ಅಲ್ಲಿ ಆಹ್ವಾನಿತರಾದವರೆಲ್ಲ ದೊಡ್ಡ ದೊಡ್ಡ ವಿದ್ವಾಂಸರಾಗಿದ್ದರು. ಡಾ. ಸಾ. ಶಿ ಮರುಳಯ್ಯ, ಡಾ. ಮಂಗಳಾ ಪ್ರಿಯದರ್ಶಿನಿ, ಡಾ. ಕೆ ಅರ್ ಸಂಧ್ಯಾ ರೆಡ್ಡಿ, ಡಾ.ದೊಡ್ಡ ರಂಗೇಗೌಡ, ಡಾ.ಪಿ ವಿ ನಾರಾಯಣ, ಡಾ.ಗಣೇಶ, ಡಾ.ಸುರೇಶ ಪಾಟೀಲ್ ಮೊದಲಾದವರನ್ನು ಬೇರೆ ಬೇರೆ ವಿಷಯಗಳಿಗೆ ವಿಶೇಷ ಉಪನ್ಯಾಸ ನೀಡಲು ಅಹ್ವಾನಿತರಾಗಿದ್ದರು. ಇಂಥಹ ದಿಗ್ಗಜರುಗಳ ನಡುವೆ ನನಗೆ ಉಪನ್ಯಾಸ ಮಾಡಿ ಸೈ ಎನಿಸಿಕೊಳ್ಳಲು ಸಾಧ್ಯವೇ ಎಂದು ದಿಗಿಲಾಗಿತ್ತು (ಆಗಿನ್ನೂ ನನಗೆ ಪಿ ಎಚ್ ಡಿ ಬಿಡಿ ಎಂ ಫಿಲ್ ಕೂಡ ಆಗಿರಲಿಲ್ಲ ಕೂಡ)

ಆದರೆ ಛಂದಸ್ಸು ಮತ್ತು ಭಾಷಾ ವಿಜ್ಞಾನ ನನ್ನ ಇಷ್ಟದ ವಿಚಾರ ಕೂಡ ಆಗಿದ್ದು ಈಗಾಗಲೇ ಎಂ ಎ ಗೆ ಕಟ್ಟಿದ ಖಾಸಗಿ ವಿದ್ಯಾರ್ಥಿಗಳಿಗೆ ಅದೇ ವಿಷಯವನ್ನು ಪಾಠ ಮಾಡಿದ್ದರಿಂದ ಅಲ್ಲಿ ಉಪನ್ಯಾಸ ನೀಡಲು ಏನೂ ಸಮಸ್ಯೆಯಾಗಲಿಲ್ಲ. ಅಂದು ಅವರು ನೀಡಿದ ಬೆಂಬಲವನ್ನು ಎಂದಿಗೂ ಮರೆಯಲಾರೆ. ಮುಂದೆ ನಾನು ಎಂ ಫಿಲ್ ಪಿಎಚ್ ಡಿ ಪದವಿಗಳನ್ನು ಪಡೆದು ಉಪನ್ಯಾಸಕರ ಅರ್ಹತಾ ಪರೀಕ್ಷೆ  ಎನ್ ಇ ಟಿಯನ್ನು ಉತ್ತೀರ್ಣಳಾಗಿ ಯೂನಿವರ್ಸಿಟಿಯಲ್ಲಿ ಅಸಿಸ್ಟಂಟ್ /ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹೋಗಿದ್ದೇನೆ. ಅಲ್ಲೆಲ್ಲ ನಿಮಗೆ ಸ್ನಾತಕೋತ್ತರ ಪದವಿಗೆ ಪಾಠ/ ಉಪನ್ಯಾಸ ನೀಡಿದ್ದಕ್ಕೆ ದಾಖಲೆಯಾಗಿ ವಿಶೇಷ ಉಪನ್ಯಾಸ ಅಹ್ವಾನ ಪತ್ರಿಕೆಯನ್ನು ಸಲ್ಲಿಸಿದ್ದೇನೆ.

ಅನಂತರ ಪುಂಡಲೀಕ ಹಾಲಂಬಿಯವರನ್ನು ಭೇಟಿ ಮಾಡಬೇಕಿಂದಿದ್ದೆ. ಭೇಟಿ ಮಾಡಲಾಗಿರಲಿಲ್ಲ. ಇದಾಗಿ ಸುಮಾರು ಎಂಟು ವರ್ಷಗಳ ನಂತರ ನಾನು ಶಾಸನ ಶಾಸ್ತ್ರ ಡಿಪ್ಲೋಮಾ ಪರೀಕ್ಷೆಗೆ ಕಟ್ಟಿ ಅದರಲ್ಲಿ ಮೊದಲ ರಾಂಕ್ ತೆಗೆದೆ. ಆಗ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಆಗ ಹಾಲಂಬಿಯವರು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿದ್ದರು. ಆಗ ಅವರನ್ನು ಭೇಟಿ ಮಾಡಿ ಮಾತಾಡಿ ಅವರಿಂದ ಹಾಗೂ ನಮ್ಮ ಶಿಕ್ಷಣ ಮಂತ್ರಿಗಳಾದ ಕಿಮ್ಮನೆಯವರಿಂದ ಅಭಿನಂದನೆಯನ್ನು ಸ್ವೀಕರಿಸಿದ್ದು ಇನ್ನೂ ಕಣ್ಣಿಗೆ ಕಟ್ಟುತ್ತಿದೆ.

‍ಲೇಖಕರು admin

25 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading