-ಬಿ ಎ ವಿವೇಕ ರೈ

ನಮ್ಮ ದೇಶದ ಸಮಯ ಬೆಳಗ್ಗೆ 11.30 ಕ್ಕೆ ಜರ್ಮನಿಯ ನೆಲದಲ್ಲಿ ಕಾಲು ಇಟ್ಟ ಬಳಿಕ ಈ ಕ್ಷಣದವರೆಗೆ ನಿದ್ದೆ ಮಾಡಿಲ್ಲ. ವೂರ್ಜ್ ಬರ್ಗ್ ಮುಟ್ಟಿದ್ದು ೧ ಗಂಟೆಗೆ. ಪ್ರೊ.ಹೈದ್ರುನ್ ಬ್ರುಕ್ನರ್ ಜೊತೆಗೆ ಪ್ರಯಾಣ, ಕನ್ನಡ ಮತ್ತು ಕರ್ನಾಟಕ ಅಧ್ಯಯನ ಬಗ್ಗೆ ಮಾತು, ಮಾತು, ಮಾತು…
ನಾಳೆ ವಿದ್ಯಾರ್ಥಿಗಳನ್ನ ಭೇಟಿ ಆಗುವುದು, ವಾರದ ಚಟುವಟಿಕೆಗಳು, ಸಮಾಲೋಚನಾ ಸಭೆಗಳು ಹೀಗೆ. ಜುಲೈ 30 ರಂದು ಕರ್ನಾಟಕ ಮತ್ತು ಬವೇರಿಯಾ ಸರಕಾರಗಳು ಪರಸ್ಪರ ಒಡಂಬಡಿಕೆಯ ಕ್ರಿಯಾಯೋಜನೆಗೆ ಸಹಿಹಾಕಿವೆ. ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಮಾಧ್ಯಮ, ಶಾಲಾ ಶಿಕ್ಷಣ, ಜೈವಿಕ ತಂತ್ರಜ್ಞಾನ ವಿಷಯಗಳಲ್ಲಿ. ಕನ್ನಡ ಮತ್ತು ಕರ್ನಾಟಕ ಅಧ್ಯಯನವನ್ನು ಇದಕ್ಕೆ ಸೇರಿಸಬೇಕು.

ವೂರ್ಜ್ ಬರ್ಗ್ ವಿವಿಯ ಇಂಡಾಲಜಿ ವಿಭಾಗದಲ್ಲಿ ಅಕ್ಟೋಬರ್ 2 ರಂದು ಗಾಂಧೀ ಜಯಂತಿ ವಿಶಿಷ್ಟವಾಗಿ ಆಚರಿಸಿದ್ದಾರೆ. ಇಂದಿನ ಜರ್ಮನ್ ಇಂಡಾಲಜಿ ಬಗ್ಗೆ ಬ್ರುಕ್ನರ್ , ಇಂಡೋ ಜರ್ಮನ್ ಸಹಕಾರದ ಉಪಗ್ರಹ ಕಾರ್ಯಕ್ರಮದ ಬಗ್ಗೆ ಕಾರ್ತಿಕ್, ವೂರ್ಜ್ ಬರ್ಗ್ ವಿವಿಯಲ್ಲಿ ಭಾರತೀಯ ವಿಧ್ಯಾರ್ಥಿಗಳ ಬಗ್ಗೆ ಬಯೋ ಇನ್ಫಾರ್ಮ್ಯಾಟಿಕ್ಸ್ ವಿಭಾಗದ ಸಂತೋಷ್ ನೀಲಾ, ವೂರ್ಜ್ ಬರ್ಗ್ ಗಾಂಧೀ ಶಾಂತಿ ಪ್ರತಿಷ್ಠಾನದ ಬಗ್ಗೆ ಇಂಡಾಲಜಿ ವಿಭಾಗದ ಮರಿಯಾ ಹೆಸ್ಸೆ, ವೂರ್ಜ್ ಬರ್ಗ್ ವಿ ವಿ ಯವರ ಮಾತುಗಳು.ಮೂನಿಕ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಅನುಪ್ ಮುದಗಲ್ ಅವರ ಆಶಯ ಭಾಷಣ. ಕೊನೆಯಲ್ಲಿ ಗಾಂಧಿ ಕುರಿತ ಸಿನೆಮಾ ಪ್ರದರ್ಶನ..
ಗಾಂಧಿಯ
ನೆನಪು
ಇಂದಾಲಜಿಯ
ಮೆಲುಕು
ಕನ್ನಡದ
ಕನಸು.
ಈ ದಿನ ವೂರ್ಜ್ ಬರ್ಗ್ ನಲ್ಲಿ ಎಲ್ಲೆಡೆ ಗಾಂಧಿಯ ಶಾಂತಿಯ ಮೌನ. ಸಂಜೆ ಏಳರ ಚರ್ಚ್ ಗಂಟೆಯ ನಾದ. ಮಧ್ಯಾಹ್ನದ ಥಾಯ್ ರೆಸ್ತೂರೆಂಟಿನ ಊಟದ ಬಳಿಕ ರಾತ್ರಿ ಊಟ ಬೇಡ. 9 ನೇ ಮಹಡಿಯ ನನ್ನ ಗೆಸ್ಟ್ ಹೌಸ್ ನ ವಿಶಾಲ ಕಿಟಿಕಿಯಿಂದ ಹೊರಗೆ ಇರುಳ ಕಣ್ಣು ಹಾಯಿಸಿದರೆ ಮಾಯಿನ್ ನದಿಯ ಎರಡು ಬದಿಯಲ್ಲಿ ಮಲಗಿರುವ ನಗರ ಭಾನುವಾರದ ರಜೆಯ ಸುಖದ ಮಂಪರಿನಲ್ಲಿದೆ. ದೀಪಗಳು ಮಾತ್ರ ನನಗಾಗಿ ಉರಿಯುತ್ತಾ ದೀಪಾವಳಿ ಆಚರಿಸುತ್ತಿವೆ.

9 ನೇ ಮಹಡಿಯಲ್ಲಿ 'ಇರುಳ ಕಣ್ಣು'
ನಿಮಗೆ ಇವೂ ಇಷ್ಟವಾಗಬಹುದು…





germany yalli irula kannu vihaara horatide aagale namagaagi anubhavada buttiya harasuta…..