ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

8 ಮೂತ್ರಾಲಯ ಹಾಗೂ 4 ಪಾಯಿಖಾನೆಗಳನ್ನು ಆಗಾಗ ತೊಳೆಯುವುದು..

15 ರೂ ಸರ್ಕಾರಿ ಸಂಬಳಕ್ಕೆ ನಲ್ವತ್ತು ವರ್ಷ ಜೀವತೇದ ಹೆಣ್ಮಕ್ಕಳು!

-ಚೇತನ್ ಬೇಲೇನಹಳ್ಳಿ

ಒಕ್ಕೊರಲು

ಅಕ್ಕು-ಲೀಲಾ

ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರೋ ನಾನು ಆ ದಿನ ಯಾವುದೇ ಸ್ಪೇಷಲ್‌ ಸ್ಟೋರಿಯ ಪ್ಲಾನ್‌ ಮಾಡದೇ ಆಫೀಸಿನಲ್ಲೇ ಕೂತಿದ್ದೆ. ಇನ್ನೊಂದು ಸುದ್ದಿವಾಹಿನಿಯ ಗೆಳೆಯನಿಂದ ಪೋನ್‌ ಕಾಲ್‌ ಬಂತು. ಆ ಕಡೆಯಿಂದ ಆತ ‘ಬಾ ಮಾರಾಯ ಇವತ್ತು ಒಂದು ಎಕ್ಸ್‌ಕ್ಲೂಸಿವ್‌ ಸ್ಟೋರಿ ಸಿಕ್ಕಿದೆ’ ಅಂತಾ ಅನ್ನುತ್ತಲೇ ಸ್ಟೋರಿಯ ತಲೆಬುಡ ವಿಚಾರಿಸದೆ ತಡಬಡಾಯಿಸುತ್ತಾ ಪೋನ್‌ ಕಟ್‌ ಮಾಡಿ ಅವನ ಆಫೀಸಿನತ್ತ ನನ್ನ ಬೈಕ್‌ ಸ್ಟಾಟ್‌ ಮಾಡಿ ಹೊರಟೆ. ಅವನನ್ನು ಹಿಂಬಾಲಿಸುತ್ತಾ ಹೋದವನು ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಬಳಿ ನಿಂತಿದ್ದೆ.
ಸ್ಟೋರಿ ಏನು ಎತ್ತ ಅಂತ ಗೊತ್ತಿಲ್ಲದೆ ಆ ಸಂಸ್ಥೆಯ ಬಳಿ ಹೋದ ನನಗೆ ಅಲ್ಲಿನ ಸನ್ನಿವೇಶ ಅರ್ಥವಾಗಲು ಸ್ವಲ್ಪ ಹೊತ್ತು ಬೇಕಾಯ್ತು. ಮೊದಲ ಬಾರಿಗೆ ನಾಟಕ ಮಾಡಲು ವೇದಿಕೆ ಹತ್ತಿದವನಿಗೆ ನಟನೆಯ ಪಾಠ ಹೇಳಿಕೊಡುವ ಹಾಗೆ ಅಲ್ಲಿನ ಘಟನೆಗಳು ಗೋಚರಿಸಿದವು. ನಮ್ಮ ಕ್ಯಾಮಾರಾಮೆನ್‌ಗಳು ಮತ್ತು ಇತರೆ ಸುದ್ದಿವಾಹಿನಿಯ ಗೆಳೆಯರು ಇಬ್ಬರು ಹೆಂಗಸರನ್ನು ನಿಲ್ಲಿಸಿಕೊಂಡು ಅವರ ವಿಡಿಯೋ ಚಿತ್ರಗಳನ್ನು ವಿವಿಧ ಭಂಗಿಯಲ್ಲಿ ಸೆರೆಹಿಡಿಯುತ್ತಿದ್ದರು. ನಾನು ಮಾಮೂಲಿಯಾಗಿ ಎನೋ ಸಮಸ್ಯೆ ಇರಬೇಕು ಅಂತಾ ಕಣ್ಣು ಬಿಟ್ಕೊಂಡು ನೋಡುತ್ತಾ ನಿಂತಿದ್ದೆ, ಆದರೆ ಆ ಇಬ್ಬರು ಹೆಂಗಸರ ಮಧ್ಯೆ ಒಬ್ಬ ಬುದ್ಧಿವಂತ ವ್ಯಕ್ತಿ ಆ ಇಬ್ಬರ ಬದುಕಿನಲ್ಲಿ ಇದುವರೆಗೆ ನಡೆದ ಕಥೆಯನ್ನು ಮರುಕದಿಂದ ವಿವರಿಸುತ್ತಿದ್ದರು.
ಮರುಯೋಚಿಸದೆ ಒಂದು ಎಕ್ಸ್ ಕ್ಲೂಸಿವ್‌ ಸ್ಟೋರಿಯ ತಯಾರಿಗೆ ನಾನು ಸಿದ್ದನಾಗಿಯಾಗಿತ್ತು. ಆ ಸ್ಟೋರಿಯ ವಿವರವನ್ನು ನನ್ನ ವಾಹಿನಿಗೂ ಕಳುಹಿಸಿಕೊಟ್ಟೆ. ಆ ಕರುಣಾಜನಕ ಕಥೆ ನಾನು ಕಾರ್ಯನಿರ್ವಹಿಸುತ್ತಿರುವ ವಾಹಿನಿಯೂ ಸೇರಿ ಟಿಆರ್‌ಪಿಗಾಗಿ ಕತ್ತಿಮಸಿಯುವ ಕನ್ನಡದ ಎಲ್ಲಾ ಸುದ್ದಿವಾಹಿನಿಗಳಲ್ಲೂ ಬಂದಿದ್ದು ಆಯಿತು. ಆದರೆ ಆ ಸ್ಟೋರಿ ಮಾಡಿದ ಖುಷಿಯಿಂದಲೋ ಅಥವಾ ಆ ತಾಯಂದಿರಿಗೆ ನ್ಯಾಯಸಿಗಲಿಲ್ಲವಲ್ಲ ಅನ್ನೋ ನೋವಿನಿಂದಲೋ ಗೊತ್ತಿಲ್ಲ. ಅಷ್ಟಕ್ಕೇ ತೃಪ್ತಿಪಡದೆ ಅವರ ಸಮಸ್ಯೆಯ ಬೆನ್ನುಬಿದ್ದು ಅವರಿಗೆ ನ್ಯಾಯದೊರಕಿಸುವಲ್ಲಿ ಹೋರಾಟ ಮಾಡುತ್ತಿರುವ ಡಾ. ರವೀಂದ್ರ ಶಾನಭಾಗ್‌ ರ ಬಳಿ ಮತ್ತಷ್ಟು ದಾಖಲೆಗಳನ್ನು ಪಡೆದು ಆ ಸ್ಟೋರಿಯ ಪೂರ್ತಿ ಸಾರಾಂಶವನ್ನು ಮತ್ತೆ ಸಂವೇದನಾಶೀಲ ಮನಸ್ಸುಗಳಿಗೆ ಮುಟ್ಟಿಸುವ ದೃಷ್ಟಿಯಿಂದ ಆ ಕತೆಗೆ ಮತ್ತೆ ಅಕ್ಷರದ ರೂಪಕೊಡಲು ಪ್ರಯತ್ನಿಸಿದ್ದೇನೆ.
**********

ಇದು ಕಳೆದ 41 ವರ್ಷಗಳಿಂದ ಉಡುಪಿಯ ಸರ್ಕಾರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಪಾಯಿಖಾನೆ ತೊಳೆಯುವ ಮತ್ತು ಕಸಗುಡಿಸುವ ಕೆಲಸ ನಿರ್ವಹಿಸುತ್ತಿರುವ ಇಬ್ಬರು ಹೆಣ್ಣುಮಕ್ಕಳ ಕತೆ. 1971ರಲ್ಲಿ ಈ ತರಬೇತಿ ಸಂಸ್ಥೆಯಲ್ಲಿ ಕಸಗುಡಿಸುವ (ಸ್ವೀಪರ್‌) ಹುದ್ದೆ ಖಾಲಿಯಾದಾಗ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಕ್ರಮಬದ್ದವಾಗಿಯೇ ನೇಮಕವಾದ ಅಕ್ಕುವಿಗೆ ಆಗ 18ವರ್ಷ. ‘ಸದ್ಯಕ್ಕೆ ತಾತ್ಕಾಲಿಕ ನೆಲೆಯಲ್ಲಿ 15 ರೂಪಾಯಿಗಳ ಮಾಸಿಕ ವೇತನ ಮಾತ್ರ ಸಿಗುತ್ತೆ, ಆದಷ್ಟು ಶೀಘ್ರದಲ್ಲಿ ನಿಮ್ಮ ಹುದ್ದೆಯ ಮಂಜೂರಾತಿ ಬಂದಾಗ ನಿಮಗೆ ಹಿಂದಿನ ಬಾಕಿ ಸಹಿತ ಪೂರ್ಣಾವಧಿ ಸಂಬಳ ಸಿಗಲಿದೆ’ ಎಂದು ಸಂಸ್ಥೆಯ ಪ್ರಾಂಶುಪಾಲರೇ ಭರವಸೆ ನೀಡುದಾಗ ಅಕ್ಕು ನಂಬಿದರು,
ಇಲ್ಲಿಗೆ 40 ವರ್ಷಗಳ ಹಿಂದೆ ಇದೇ ಸಂಸ್ಥೆಯಲ್ಲಿ ಕಸ ಗುಡಿಸೋಕೆ ಅಂತ ಒಬ್ಬಳು ಮುದುಕಿ ಇದ್ದರು. ಅವರ ಹೆಸರು ಸೇಸಿ. ಮನೆ ತುಂಬಾ ಮಕ್ಕಳು. ಕಡುಬಡತನ ಬೇರೆ. ಸೇಸಿಯ ದುಡಿಮೆಯಿಂದಲೇ ಸಂಸಾರ ಸಾಗಬೇಕಿತ್ತು. ಜೀವನವಿಡೀ ಶಾಲೆಯ ಕಸಗುಡುಸುತ್ತಾ ಸೇಸಿ ಮದುಕಿಯಾದಳು. 1971ರಲ್ಲಿ ಸೇಸಿ ಸತ್ತಾಗ ಆಕೆಯನ್ನೇ ನಂಬಿದ್ದ ಸಂಸಾರ ಅನಾಥವಾಯಿತು. ಮಗಳು ಅಕ್ಕು ಅದಾಗಲೇ ಪ್ರಾಯಕ್ಕೆ ಬಂದಿದ್ದಳು. ತನ್ನ ತಾಯಿ ಕೆಲಸ ಮಾಡುತ್ತಿದ್ದ ಟ್ರೈನಿಂಗ್‌ ಶಾಲೆಗೆ ಬಂದು ‘ನಮ್ಮ ತಾಯಿ ನಲವತ್ತು ವರ್ಷ ಇಲ್ಲಿಯೇ ಕೆಲಸ ಮಾಡಿದ್ದಾಳೆ. ಇಷ್ಟುವರ್ಷ ಕೆಲಸ ಮಾಡಿದ್ದಕ್ಕೆ ನಮಗೆ ಏನೂ ಸಿಗುವುದಿಲ್ಲವೇ’ ಎಂದಿದ್ದಕ್ಕೆ ‘ನಿನ್ನ ತಾಯಿಗೆ ನಿವೃತ್ತಿ ನಂತರ ಸಿಗುವ ಯಾವುದೇ ಸೌಲಭ್ಯ ಸಿಗುವ ಅವಕಾಶ ಇಲ್ಲ. ಈ ಸಂಸ್ಥೆಯಲ್ಲಿ ಆಕೆ ಅರೆಕಾಲಿಕ ಹುದ್ದೆಯಲ್ಲಿ ಕೆಲಸ ಮಾಡಿಕೊಂಡಿದ್ದಳು ಬೇಕಾದರೆ ನಾಳೆಯಿಂದ ಆ ಕೆಲಸವನ್ನ ನೀನೆ ಮಾಡು. ಅದೇ ಸಂಬಳವನ್ನು ನಿನಗೆ ನೀಡುತ್ತೇವೆ’ ಎಂದು ಆಗಿನ ಪ್ರಾಂಶುಪಾಲರು ಹೇಳಿದಾಗ ಬೇರೆ ದಾರಿ ಇಲ್ಲದೇ ಹುಡುಗಿ ಅಮ್ಮನ ಕೆಲಸಕ್ಕೆ ಎಂಟ್ರಿಕೊಟ್ಟದ್ದಳು. ಅಕ್ಕು ಈ ಶಾಲೆಯ ಸ್ವೀಪರ್‌ ಹುದ್ದೆಗೆ ಸೇರಿದ್ದು ಹೀಗೆ…..
ಇದಾದ ಒಂದು ತಿಂಗಳಲ್ಲೇ ಪಾಯಿಖಾನೆ ತೊಳೆಯುವ ಸ್ಕಾವೆಂಜರ್‌ ಹುದ್ದೆಗೆ ಲೀಲಾ ಎಂಬ ಇನ್ನೊರ್ವ ಮಹಿಳೆಯೂ ಸೇರಿಕೊಂಡ್ರು.ಇಬ್ಬರೂ ಅನಕ್ಷರಸ್ಥರಾದ್ದರಿಂದ ತಾವು ಸೇರಿದ್ದು ಖಾಯಂ ಹುದ್ದೆಯೋ ಅಲ್ಲವೋ ಅನ್ನೋದು ಅವರಿಗೆ ಕೊನೆವರೆಗೂ ತಿಳಿಯಲೇ ಇಲ್ಲ.
1929ರಲ್ಲಿ ಇದೇ ಕೆಲಸಕ್ಕಾಗಿ ಅಕ್ಕುವಿನ ತಾಯಿ ಸೇಸಿ ಕೆಲಸಕ್ಕೆ ನೇಮಕವಾಗಿದ್ದಾಗ ಅವಳಿಗೆ ಸಿಗುತ್ತಿದ್ದ ಸಂಬಳ ತಿಂಗಳಿಗೆ ಆರು ರೂಪಾಯಿ. ಅದು ಅದ್ಹೇಗೋ ಹೆಚ್ಚುತ್ತಾ ಬಂತು. ಹಾಗಾಗಿ ಸಾಯುವಾಗ (1971ರಲ್ಲಿ) ಸೇಸಿಗೆ ಸಿಗುತ್ತಿದ್ದ ಸಂಬಳ 15 ರೂಪಾಯಿ! ಅದೇ ಸಂಬಳಕ್ಕೆ ಇದೀಗ ಅಕ್ಕು ದುಡಿಯುವುದು ಅನಿವಾರ್ಯವಾಗಿತ್ತು. ತದನಂತರ ಸ್ಕ್ಯಾವೆಂಜರ್ ಹುದ್ದೆಗೆ ಬಂದ ಲೀಲಾಗೂ ಅಷ್ಟೇ ಸಂಬಳ ಕೊಡಲಾಗುತ್ತಿತ್ತು. ಇದೇ ಸಂಬಳ ಸದ್ಯದವರೆಗೂ ಮುಂದುವರಿದುಕೊಂಡು ಬಂದಿದೆ.
ಶಾಲೆಯಲ್ಲಿದ್ದ ಹನ್ನೊಂದು ಕೊಠಡಿಗಳನ್ನು ಶುಚಿಯಾಗಿಡುವುದು ಅಕ್ಕುವಿನ ಕೆಲಸವಾದ್ರೆ, ಎಂಟು ಮೂತ್ರಾಲಯ ಹಾಗೂ ನಾಲ್ಕು ಪಾಯಿಖಾನೆಗಳನ್ನು ಆಗಾಗ ತೊಳೆಯುವುದು ಲೀಲಾಳ ಕೆಲಸವಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಈ ಕೆಲಸ ನಡೆಯುತ್ತಿದ್ದರಿಂದ ಇದು ಅವರಿಬ್ಬರಿಗೆ ಪೂರ್ಣಾವಧಿಯ ಕೆಲಸವೇ ಆಗಿದ್ದಿತು. ದಿನಾಂಕ 12-07-1971 ರಲ್ಲಿ ಅಂದಿನ ಮುಖ್ಯೋಪಾಧ್ಯಾಯರು ಅಕ್ಕುಗೆ ಕೊಟ್ಟ ನೇಮಕಾತಿ ಪತ್ರದಲ್ಲೂ ಇದು ಹಂಗಾಮಿ ಕೆಲಸ ಎಂದು ಇದೆಯಲ್ಲದೆ ಅರೆಕಾಲಿಕ ಅಥವಾ ಸಾಂದರ್ಭಿಕ ಕೆಲಸ ಅಂತ ಎಲ್ಲೂ ಹೇಳಿಲ್ಲ.
ರವೀಂದ್ರನಾಥ್‌ ಶ್ಯಾನ್‌ಬೋಗ್‌ ರ ಹತ್ತಿರ ನಾನು ಮಾತನಾಡುವಾಗ ಅವರ ಬಳಿ ಇದ್ದ ಅಕ್ಕುವಿನ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಒಂದಷ್ಟು ಸ್ವಾರಸ್ಯಕರ ವಿಷಯಗಳು ಕಂಡುಬಂದವು. 1950ನೇ ಇಸವಿಯಲ್ಲಿ ಕೋಝಿಕೋಡಿನಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಯೋರ್ವರು ಈ ಹುದ್ದೆಗೆ 15 ರೂಪಾಯಿ ಸಂಬಳ ನಿರ್ಧರಿಸಿದ್ದ ದಾಖಲೆ ಕೂಡಾ ಅವರ ಬಳಿ ಇತ್ತು. ಹಾಗಾದರೆ 1930ರಲ್ಲಿ ನಿಗದಿಯಾಗಿದ್ದ ಮೂಲವೇತನವನ್ನು 62 ವರ್ಷಗಳ ನಂತರವೂ ಮುಂದುವರೆಸಿಕೊಂಡು ಹೋಗುವ ಕಾರ್ಮಿಕ ವಿರೋಧಿ ದೇಶ ನಮ್ಮದಲ್ಲದೇ ಮತ್ತೊಂದಿಲ್ಲ ಅಂತಾಯಿತು.
ಅಲ್ಲಿಂದೀಚೆಗೆ ಈ ಇಬ್ಬರು ಹೆಣ್ಣುಮಕ್ಕಳು ಮಾಡಿದ್ದು-ಶಾಲೆಗೆ ಭೇಟಿ ನೀಡುವ ಶಿಕ್ಷಣ ಇಲಾಖೆಯ ಪ್ರತಿಯೋರ್ವ ಅಧಿಕಾರಿಗಳಲಲ್ಲೂ ಅಂಗಲಾಚುವುದು. ಹಾಗೇನೇ ಉಡುಪಿಗೆ ಬರುವ ಎಲ್ಲಾ ಮಂತ್ರಿಗಳಿಗೂ ಲಿಖಿತ ಮನವಿಯನ್ನು ನೀಡುವುದು.ಅಷ್ಟು ಬಿಟ್ಟು ಇನ್ನೇನು ಮಾಡಲೂ ಈ ಅನಕ್ಷರಸ್ಥ ಮಹಿಳೆಯರು ಶಕ್ತರಾಗಿರಲಿಲ್ಲ. ಪುಡಿಗಾಸಿನ ಮೂಲವೇತನದಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಇಂತಹ ಅಮಾನವೀಯ ಪ್ರಕರಣಗಳು ಸರ್ಕಾರಿ ವಲಯಗಳಲ್ಲಿ ಅರ್ಥವಿಲ್ಲದ ಪತ್ರವ್ಯವಹಾರದಲ್ಲಿ ಹೇಗೆ ಕೊನೆಗಾಣುತ್ತವೆ ಎಂಬುದಕ್ಕೆ ಈ ಪ್ರಕರಣ ಜೀವಂತ ಸಾಕ್ಷಿ. ಆ ಸಂಸ್ಥೆಯ ಪ್ರಾಂಶುಪಾಲರೇ ಹೇಳುವಂತೆ ಮುಂದಿನ ಮೂರು ದಶಕಗಳ ಅವಧಿಯಲ್ಲಿ ಶಾಲೆಯ ಅಧೀಕ್ಷಕರು, ವಿದ್ಯಾಂಗ ಉಪನಿರ್ದೇಶಕರು, ಶಿಕ್ಷಣ ಆಯುಕ್ತರು ಹಾಗೂ ಇಲಾಖಾ ಕಾರ್ಯದರ್ಶಿಗಳ ನಡುವೆ 50ಕ್ಕೂ ಹೆಚ್ಚು ಬಾರಿ ಪತ್ರವ್ಯವಹಾರ ನಡೆದ ನಂತರ 1997ರಲ್ಲಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯವರು ಹೀಗಂತ ಷರಾ ಬರೆದರು “ ಈ ಮಹಿಳೆಯರ ಹುದ್ದೆಗಳನ್ನು ಪೂರ್ಣಕಾಲಿಕ ಹುದ್ದೆಯನ್ನಾಗಿ ಪರಿವರ್ತಿಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ”!!
ಎಂತಹ ವಿಪರ್ಯಾಸ ನೋಡಿ. ‘ಕಾಯಕವೇ ಕೈಲಾಸ’ ಎಂದು ಹೇಳಿದ ಬಸವಣ್ಣ ಇದ್ದಿದ್ದರೆ ಈ ತನ್ನ ವಚನ ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಬೇಕಿತ್ತು! ಅಂತಹ ಅಸಹಾಯಕ ಪರಿಸ್ಥಿತಿ ಅಕ್ಕು ಮತ್ತು ಲೀಲಾರದ್ದಾಗಿತ್ತು
27 ವರ್ಷಗಳ ಕಾಲ ಹೋರಾಡಿ ತಮ್ಮ ಪ್ರಯತ್ನದಲ್ಲಿ ಸೋತು ಸುಣ್ಣವಾಗಿದ್ದ ಅಕ್ಕು ಮತ್ತು ಲೀಲಾ 1998ರಲ್ಲಿ ಯಾರದೋ ಸಲಹೆಯಿಂದ ಡಾ.ರವೀಂದ್ರನಾಥ್‌ ಶ್ಯಾನಭಾಗ್‌ ಅಧ್ಯಕ್ಷರಾಗಿದ್ದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ಬೆಂಬಲಯಾಚಿಸಿದ್ರು. ಅಲ್ಲಿಂದ ಅಸಲಿ ಕಾನೂನು ಹೋರಾಟ ಪ್ರಾರಂಭವಾಯಿತು. ನಂತರ ಅಕ್ಕು ಮತ್ತು ಲೀಲಾ ಪ್ರಕರಣ ಸಂಬಂಧ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದೂರು ದಾಖಲಾಯಿತು. 3 ವರ್ಷಗಳ ವಿಚಾರಣೆ ನಂತರ “ಅಕ್ಕು ಮತ್ತು ಲೀಲಾ 1971 ರಿಂದ ಕೆಲಸ ಮಾಡಿದ್ದಾರೆ ಎಂಬುದನ್ನು ಗಮನಿಸಿ 06-08-1990ರಲ್ಲಿ ಸರ್ಕಾರಿ ಆದೇಶದನ್ವಯ ಇಬ್ಬರ ಸೇವೆಯನ್ನೂ ಖಾಯಂಗೊಳಿಸಲು ಶಿಕ್ಷಣ ಇಲಾಖೆ ಬದ್ಧವಾಗಿದೆ. 90 ದಿನದೊಳಗೆ ಈ ತೀರ್ಪು ಜಾರಿಗೆ ಬರಬೇಕಾಗಿದೆ” ಎಂದು ನ್ಯಾಯಮಂಡಳಿ ತೀರ್ಪು ನೀಡಿತು.
ಆದರೆ ಈ ನತದೃಷ್ಟ ಹೆಣ್ಣುಮಕ್ಕಳ ಯಾತನೆಯ ಕಥೆ ಅಲ್ಲಿಗೂ ಮುಗಿಯಲಿಲಲ್ಲ. ಆಶ್ಚರ್ಯ ಅಂದ್ರೆ, ಈ ತೀರ್ಪಿನಂತೆ ಅವರ ಸೇವೆಯನ್ನು ಖಾಯಂಗೊಳಿಸಿ ನ್ಯಾಯವಾದ ವೇತನ ನೀಡುವ ಬದಲಾಗಿ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟಿನಲ್ಲಿ ಮೇನ್ಮನವಿ ಸಲ್ಲಿಸಿತು. 2004ರಲ್ಲಿ ಪ್ರಕರಣದ ತೀರ್ಪು ನೀಡಿದ ಹೈಕೋರ್ಟ್ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ತಿರಸ್ಕರಿಸಿ ಅಕ್ಕು ಹಾಗೂ ಲೀಲಾರ ಸೇವೆಯನ್ನು ಖಾಯಂಗೊಳಿಸುವಂತೆ ಆಡಳಿತ ನ್ಯಾಯಮಂಡಳಿ ನೀಡಿದ ಆದೇಶವನ್ನು ಎತ್ತಿಹಿಡಿದಿತ್ತು. ಸ್ವಲ್ಪವೂ ಹಿಂದೆ-ಮುಂದೆ ನೋಡದ ಕರ್ನಾಟಕ ಸರ್ಕಾರವು ಪ್ರಕರಣವನ್ನು ಸುಪ್ರೀಂಗೆ ಕೊಂಡೊಯ್ಯುವ ‘ದೊಡ್ಡಮನಸ್ಸು’ ಮಾಡಿತ್ತು!
2010ರ ಜನವರಿ ತಿಂಗಳಲ್ಲಿ ಸುಪ್ರೀಂಕೋರ್ಟ್ ಕೂಡ ಇಬ್ಬರ ಸೇವೆಯನ್ನು ಖಾಯಂಗೊಳಿಸುವಂತೆ ಆದೇಶ ನೀಡಿತ್ತು. ಇದೀಗ ಸುಪ್ರೀಂಕೋರ್ಟಿನ ತೀರ್ಪು ಬಂದು 32 ತಿಂಗಳು ಕಳೆದಿವೆ. ಆದರೆ ಘನತೆವೆತ್ತ ಕರ್ನಾಟಕ ಸರ್ಕಾರ ಈ ಕಾರ್ಮಿಕರ ಸೇವೆಯನ್ನು ಇನ್ನೂ ಖಾಯಂಗೊಳಿಸಿಲ್ಲ! ಬದಲಾಗಿ 1998 ರಿಂದ ಅವರಿಬ್ಬರಿಗೆ ನೀಡುತ್ತಿದ್ದ 15 ರೂಪಾಯಿ ಖಾಯಂ ಮೂಲವೇತನವನ್ನೂ ನೀಡಿಲ್ಲ!
ಅಕ್ಕು ಮತ್ತು ಲೀಲಾ ಕಳೆದ 14 ವರ್ಷಗಳಿಂದ ಸಂಬಳರಹಿತವಾಗಿಯೇ ದುಡಿಯುತ್ತಿದ್ದಾರೆ. ಅವರಿಬ್ಬರಿಗೂ ಸಂಬಳ ನೀಡುವಂತೆ ಪ್ರಾಂಶುಪಾಲರು ಬರೆದ ಪತ್ರಕ್ಕೂ ಇಲಾಖಾ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ತಮ್ಮ ಜೀವಮಾನವೀಡೀ ನ್ಯಾಯಯುತ ಸಂಬಳಕ್ಕಾಗಿ ಹೋರಾಡಿ ಇದೀಗ ನಿವೃತ್ತಿ ಅಂಚಿನಲ್ಲಿರುವ ಈ ಮಹಿಳೆಯರು ಕೇಳುತ್ತಿರುವ ಪ್ರಶ್ನೆ –“ಈ ದೇಶದಲ್ಲಿ ಸುಪ್ರಿಂಕೋರ್ಟ್ ಗಿಂತ ಉನ್ನತ ನ್ಯಾಯಾಲಯ ಯಾವುದಾದ್ರೂ ಇದೆಯಾ ಸಾರ್?!”
ನಿಮಗೇನಾದ್ರೂ ಉತ್ತರ ಗೊತ್ತಿದ್ದರೆ ದಯಮಾಡಿ ಮಾತಾಡಿ…

‍ಲೇಖಕರು G

15 January, 2013

5 Comments

  1. K.V.Tirumalesh

    ಅಕ್ಕು ಮತ್ತು ಲೀಲಾ ಕರುಣಾಜನಕ ಕಥೆ ಕೇಳಿ ಮನಸ್ಸು ನೋಯುತ್ತಿದೆ. ಊರಿನವರು ಸೇರಿ ಸರಕಾರದ ವಿರುದ್ಧ ನ್ಯಾಯಾಲಯ ನಿಂದನೆಯ ಮೊಕದ್ದಮೆ ಹಾಕಿಸಬೇಕು. ಈ ಮಧ್ಯೆ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯ ಹೆತ್ತವರಿಂದ ತಂಗಳಿಗೆ ಹತ್ತು ರೂಪಾಯಿ ಎತ್ತಿ ಅಕ್ಕುವಿಗೆ ಪ್ರತಿ ತಿಂಗಳು ಕೊಡಿಸಬೇಕು. ಈ ಕೆಲಸವನ್ನು ಹೆತ್ತವರ ಸಂಘ ನಿರ್ವಹಿಸಬೇಕು. (ಹತ್ತು ರೂಪಾಯಿ ತೆರಲು ನಿಜಕ್ಕೂ ಅಶಕ್ತರಾದವರಿಗೆ ವಿನಾಯಿತಿ ಇರಲಿ.)
    ಕೆ.ವಿ. ತಿರುಮಲೇಶ್

  2. hari

    Are we in 2012 or in 1972? What a shame…
    Is the Principal educated? What a shame…
    Thank God…there is no Court above Supreme Court..
    Else our politician get more opportunity and common people suffer more…

  3. Sandhya

    Daaruna.I totally agree with Mr K. V. Tirumalesh’s views.
    Sandhya, Secunderabad

  4. Harish Karkera

    Firstly the Principal and the administrative staff they are working under should feel ashamed.
    What a govt. we have which has plenty of machinery working for appealing in courts against poor people! Height of idiotism!!

  5. shanthi k.a.

    enthaa anyaaya..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading