ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

70 ವರ್ಸ ಆಗಿ ಹೋತಂತ್ಯಲ್ಲೋ ನಮಿಗ್ಯ ಸ್ವಾತಂತ್ರ್ಯ ಸಿಕ್ಕು ?

ಈ ವರ್ಸ ನಮ್ ಪ್ರಧಾನಿಗುಳು ಏನ್ ಭಾಷ್ನ ಮಾಡ್ಬೋದು ?

ಮಣ್ಣಮ್ಮನವರ ಅಂಬವ್ವ ಪ್ಲಾಟ್ ನಾಗಿಂದ ತನ್ನ ಮಗ ಯಶವಂತನ ಕುಟಗ ಸೈಕಲ್ ಮೋಟ್ರದ ಹಿಂದ ಕುಂತ್ಕಂಡು ಅಡಿವಿ ಹೊಲಕ್ಕ ಹೊಂಟಿದ್ಲು, ಕರಿಯವ್ವನ ಗುಡಿ ಬಂದಿದ್ಕ ಯಶ್ವಂತಗ ‘ತಮ್ಮಾ ಒಂದೀಟು ಗಾಡಿ ತರಬಪ್ಪೋ ಕರಿಯವ್ವಗ ಕೈ ಮುಗುದು ಬರ್ತಿನಿ’ ಅಂತಂದು ಗಾಡಿ ಇಳದು ಗಂಟಿ ಹೊಡದು ಕರಿಯವ್ವನ ಗುಡಿ ಒಳಕ ಓದ್ಲು.

shivu poster cut low1ಸೈಕಲ್ ಮೋಟ್ರದಾಗ ಎತ್ರನ್ ಬುತ್ತಿ ಇಟ್ಕಂಡು ನಿಂತದ್ದನ್ನ ನೋಡ್ಕೋಂತ ಕರಿಯವ್ವನ ಗುಡಿ ಕಡಿಗೆ ಮದ್ಲು ಬಂದ ರಾಮಣ್ಣ ‘ಏನ್ಲೇ ಯಸ್ವಂತಾ, ಆಳೆತ್ರ ಬುತ್ತಿ ಕಟ್ಕಂಡು ಹೊಂಟ್ರೇನು ಹೊಲಕ್ಕ ?, ಕರಿಯವ್ವನ ಮಾತಾಡ್ಸಾಕ ಹೊಗ್ಯಾಳಲ್ಲಾ ಅಂಬವ್ವ ? ಔರಿಬ್ರೂ ಕಸ್ಟ ಸುಖ ಮಾತಾಡ್ಕಳ್ಳಿ, ಏನೈತಲೇ ತಮ್ಮಾ ಬುತ್ಯಾಗ ?’ ಅಂತ ಯಶವಂತನ ಕೇಳಿದ ರಾಮಣ್ಣ ಗಾಡಿ ಮಗ್ಲಾ ನಿಂತಿದ್ದ. ರಾಮಣ್ಣನ ಮಾತು ಕೇಳಿದ ಯಶವಂತ ‘ಇನ್ನೇನು ಇರತೈತಜ್ಜಾ, ಅದಾ ರೊಟ್ಟಿ, ಪಲ್ಲೇವು, ಹಸೆಕಾಯಿ ಇಂಡಿ, ಒಳ್ಳೆಣ್ಣಿ ಕಾರ್ಪುಡಿ, ಉಳ್ಳಾಗಡ್ಡಿ, ಮೊಸರು, ಕಡ್ಲಿಪುಡಿ, ಮೆಂತೆ ಸೊಪ್ಪು, ಮ್ಯಾಲೀಟು ಅನ್ನ’ ಅಂದ.

ಯಶವಂತನ ಮಾತುಗಳನ್ನ ಕೇಳಾಕತ್ತಿದ್ದ ರಾಮಣ್ಣ, ಅಡ್ಡಡ್ಡ ಗೋಣು ಹಾಕಾಕತ್ತಿದ್ದ. ನಮ್ ಕರಿಯವ್ವನ ಮಾತಾಡ್ಸಾಕ ಹೋಗಿದ್ದ ಅಂಬವ್ವ ಹಣಿಗೆ ಕುಂಕ್ಮ ಹಚ್ಗೋತ ಗಾಡಿ ಹತ್ರ ಬಂದ್ಲು. ಅಕಿನ ನೋಡಿದ ರಾಮಜ್ಜ, ‘ಯಾಕಬೇ ಅಂಬವ್ವಾ, ಹಬ್ಬ ಮಾಡಿಲ್ಲೇನು ?’ ಅಂತ ಕೇಳಿದ್ಕ ನಮ್ ಅಂಬವ್ವ , ‘ನೀ ಯಾ ಕಾಲ್ದಾಗ ಅದೀಯೋ ಪುಣ್ಯಾತ್ಮಾ, ಹಬ್ಬಲೆ ಮುಗ್ದು ಮೂರು ದಿನ ಆಗೈತಿ. ಸುಮ್ನ ಕುಂದ್ರು ನಡಿಯಿನ್ನು ಕಟ್ಟಿಗೆ ಬರ್ತಾವು ನಿಮ್ಮ ಇನ್ನೆಲ್ಡು ದೋಸ್ತ್ ಗುಳು.’ ಅಂದ್ಕೋತ ಗಾಡಿ ಹತ್ತಿದ್ಲು, ಯಶವಂತ ಗಾಡಿ ಚಾಲೂ ಮಾಡ್ಕಂಡು ಹೊಲದ ಕಡಿಗೆ ಹೊಂಟೋದ, ಇತ್ಲಾಗ ರಾಮಣ್ಣ ಏನೋ ಯೋಚ್ನಿ ಮಾಡ್ಕಾಂತ ಗುಡಿಯಾಗ ಕುಂತ ಕರಿಯವ್ವನ ಕಡಿಗೆ ನೋಡ್ಕೋಂತ ಕಟ್ಟಿ ಹತ್ತಿ ಕುಂತ.

ಯಾಕಿವತ್ತು ಇಬ್ರು ಇನ್ನೂ ಬರ್ಲಿಲ್ಲಲ್ಲಾ ? ಅಂತ ಯೋಚ್ನಿ ಮಾಡ್ಕಂತ ಕುಂತಿರತ್ಗಿ ಉಳಿಗಿದ ಕೊಟ್ರೇಶಪ್ಪ ಅಡ್ ಹೋಗಾಕತ್ತಿದ್ದ ಕೈಯಾಗೊಂತು ಹಗ್ಗ ಇತ್ತು. ಅದನ್ನ ನೋಡಿದ ರಾಮಜ್ಜ ‘ಏನ್ ಲೇ ಕೊಟ್ರಾ, ಕೈಯಾಗ ಹಗ್ಗ ಹಿಡಿದಿದಿ ? ಎಲ್ಲಿಗೋಗಿದ್ದಿ ?’ ಅಂತ ಕೇಳತ್ಗಿದ್ದು ‘ಹೇ ಏನು ಇಲ್ಲ ಬುಡೋ ಯಜ್ಜಾ, ಈ ಹಿರೇ ಬಾರಿಕರ ಕಣದಾಗಿನ ಹುಂಚಿ ಗಿಡಕ್ಕ ಜೋಕಾಲಿ ಹಾಕಿದ್ದೆ. ಅದನ್ನಾ ಬಿಚ್ಗಂಡು ಬರಾಕತ್ತೀನಿ ನೋಡು’. ಅಂದ. ಈ ಸರ್ತಿನೂ ರಾಮಜ್ಜ ಅಡ್ಡಡ್ಡ ಗೋಣ್ ಹಾಕಾಕತ್ತಿದ್ದ. ಇದನ್ನ ನೋಡಿದ ಕೊಟ್ರಪ್ಪ, ‘ಒಂದು ಚುಟ್ಟ ಕೊಡೋ ಯಜ್ಜಾ’ ಅಂತೇಳಿ ಚುಟ್ಟ ಇಸ್ಗಂಡು ಮನಿ ಕಡಿ ಹೊಂಟ, ಅತ್ಲಾಗಿದ್ದ ನಮ್ ಮೈಲವ್ವ ಕಟ್ಟಿ ಕಡಿಗಿ ಬಂದ್ಲು.

Shivu Morigere-1 (1)ಬರ್ತಿದ್ದಂಗನಾ ರಾಮಜ್ಜನ ಸಪ್ಪನ ಮಾರಿ ನೋಡಿದ ಮೈಲವ್ವ ‘ಯಾಕಲೋ ರಾಮಾ, ಏನಾಗೈತಿ ನಿನಗ ? ಮಖ ಯಾಕ ಹಂಗ ಮಾಡ್ಕಂಡು ಕುಂತೀ ? ಹಳೇದೇನರಾ ನೆಪ್ಪಾತೇನು ? ಏನಾತೇಳಲೋ ಅಡ್ಬಿಟ್ಟಿ’. ಅಂತೇಳಿ ಒಂದಾ ಸಮ್ನ ಕೇಳಾಕತ್ತಿದ್ಲು. ಮೈಲವ್ವ ಕಾಡದು ನೋಡಿ ನಮ್ ರಾಮಜ್ಜ, ‘ಎಂಥಾ ಕಾಲ ಬಂದೈತಿ ನೋಡಬೇ ಮೈಲವ್ವಾ. ಬರೊಬ್ಬರಿ ಒಂದು ತಿಂಗ್ಳು ಮಾಡಾ ನಾಗರ ಪಂಚಮಿ ಮೂರಾ ದಿನಕ್ಕ ಮಂಗಾರತಿ ಮಾಡಕತ್ಯಾರ. ತಿಂಗ್ಳಾನ್ ಗಟ್ಲೆ ಮನಿಗುಳ ಜಂತ್ಯಾಗಿನ ಜೋಕಾಲಿ ಎಲ್ಲದಾವಿಗ ?, ಈಗೆಲ್ಲಾ ಸುಮ್ನ ಕಾಟಾಚಾರಕ್ಕ ಹಬ್ಬ ಮಾಡ್ತೈತಿ ಬುಡಬೆ ಮಂದಿ. ಮುಗುದೋದ್ವು ನಮ್ ಕಾಲಗುಳು’.ಅಂದ.

ರಾಮಜ್ಜನ ಮಾತುಗುಳು ಯಾಕಾ ಸೀದಾ ಹೊಟ್ಯಾಗಿಂದ ಬಂದಗಿದ್ವು. ಕಳ್ಳಿನ ಕನಿಕರ ಇದ್ದಂಗಿದ್ವು. ಕಣ್ಣಾಗಿನ ತ್ಯಾವಗುಳು ಇದ್ದಗಿದ್ವು. ಅತನ ಈ ಮಾತುಗುಳು ಮೈಲವ್ವನ ಮನಸಿನ್ಯಾಗೂ ಮುಳ್ಳು ಮುರುದಂಗಾಗಿಬುಡ್ತು. ಗಂಟ್ಲಾಗ ಕಲ್ಲು ಸಿಕ್ಕಂಡಂಗಾಗಿಬುಡ್ತು. ಪೂರ್ತಿ ಒಂದು ತಲಿಮಾರಿನಿಂದಕ್ಕ ಅಕಿ ನೆನಪುಗುಳು ಜಾರಿ ಹೋದಂಗಾಗೋತು.

ಆದ್ರ ಎಲ್ಲದಕ್ಕೂ ಕಾಲ ಕೈ ಮೀರಿ ಹೋಗೈತಿ ಅನ್ನೋದು ಅಕಿಗೆ ಖಬರ್ ಇತ್ತು. ರಾಮಜ್ಜ ಸುಮ್ನ ಕುಂತಿದ್ದು ನೋಡಿ ಮೈಲವ್ವ ಸ್ವಲ್ಪ ಸುಧಾರಿಸ್ಕಂಡು ‘ಮುಂಜ್ ಮುಂಜಾಲೆ ಅದ್ಯಾಕ ಹಳೇವನ್ನ ನೆನಪು ಮಾಡ್ಕಂಡೆಲೋ ?, ಮುಗುದುದ್ದು ಮುಗುದೋತು ? ಮುಂದೆ ಬರಾದ್ನೆಲ್ಲಾ ಸುಮ್ನ ನೋಡ್ಕಂತ ಹೊಂಟುಬುಡಾದೊಂದಾ ನಮ್ ಕೈಯಾಗಿರಾದೀಗ.ಸಣ್ ಹುಡ್ರುಗತಿ ಮಾರಿ ಮಾಡ್ಕಣಾದು ಬುಟ್ಟು ಒಂದು ಚುಟ್ಟ ಹಚ್ಗ, ನಾನೀಟು ನಸೆಪುಡಿ ತಿಕ್ಕಂತೀನಿ ಅಟಾತ್ಗೆ ಈ ಮುದುಗುಣಿ ಬುಡೇನಜ್ಜ ಬಂದ್ರೂ ಬರಬೋದು ನೋಡಾಣು’. ಅಂತಂದಾಗ ರಾಮಜ್ಜ ಚುಟ್ಟ ಹಚ್ಗಂಡ, ಮೈಲವ್ವ ನಸೆಪುಡಿ ತಿಕ್ಕಂಡು ತನ್ನ ಬಲಗೈನ ತೋಳ್ ಬೆಳ್ನ ಎಡ ಅಂಗಾಲಿಗೆ ತಿಕ್ಕಂಡು ಅದಕ್ಕತ್ತಿದ್ದ ನಸೆಪುಡಿ ಕಲಿ ವರಿಸ್ಕಂಡ್ಳು.

india hangಮುಳ್ ಮುಂಜಾಲೆ ‘ಕರಿಯವ್ವನ ಗುಡಿತಾವ’ ಹಿಂಗ ಇವ್ರು ಸಪ್ಪಗ ಕುಂತಿದ್ನ ನೋಡ್ಕಂತ ಬಂದ ನಮ್ ಬುಡೇನಜ್ಜ. ‘ಯಾರಾರ ಮಾಟ ಗೀಟ ಮಾಡ್ಸ್ಯಾರೇನ್ರಬೇ ನಿಮಿಗ್ಯ ? ಹಿಂಗ್ಯಾಕ ಕುಂತೀರಿ ಗರ ಬಡದಾರಂಗ ? ಮೈಲವ್ವನ ಮಖ ಯಾಕ ಕರಿಯವ್ವನ ಮೂತಿಯಂಗ ಕೆಂಪಗಾಗೈತಿ ? ಏನಾಗೈತ್ರೋ ನಿಮಿಗ್ಯ ?’. ಅಂತ ಕೇಳತ್ಗಿದ್ದು, ಹಳೇ ನೆಪ್ಪುಗಳಿಂದ ಸುಧಾರಿಸ್ಕಂದು ಹೊರಗ ಬಂದಿದ್ದ ರಾಮಜ್ಜ ‘ನಮಿಗೇನಾಕೈತಿ ಬಾರೋ ನಿಮೌನು ಕುಂತ್ಗ’. ಅಂದದ್ದನ್ನ ಕೇಳಿದ ಮೈಲವ್ವನ ಮುಖದಾಗೂ ನಗು ಬಂತು. ಇಬ್ಬರ ಮುಖಗಳನ್ನು ನೋಡಿದ ಬುಡೇನಜ್ಜ, ‘ಹ್ಞಾಂ, ಹಿಂಗ ಇರಬೇಕು ನೋಡ್ಪಾ ಇವನಾಪ್ನ ನಂ ಟೀಂ ಅಂದ್ರ’. ಅಂದ್ಕೋತ ರಾಮಣ್ಣನ ಕಡಿಗೆ ತಿರುಗಿ ‘ಅಲ್ಲೋ ರಾಮಣ್ಣ, ಮನ್ಯ ಈ ಗುಜರಾತಿಂದು ಏನಾ ಹೇಳಾಕತ್ತಿದ್ಯಲ್ಲ ? ಆ ಇಸ್ಯಾ ಮತ್ತೋಟು ರಾಡಿ ಆಗಿ ಹೋಗೈತಿ ಹೊಗ್ಗಾ ನಿನ್ನ, ಟಿಬಿಗುಳ್ನ ನೋಡಿ ಇಲ್ ನೀನು ?.’ ಅಂತ ಕೇಳಿದ.

ಬುಡೇನಜ್ಜನ ಮಾತಿಗೆ ‘ಹೇ ನಾನೂ ಎಲ್ಲಾ ನೋಡಿನಿ ಬುಡೋ ಮರಾಯ. ಈಗ ಅಲ್ಲಿನ ದಲಿತ್ರು ಹೇಳಾಕತ್ತಿರಾ ಒಂದೊಂದು ಮಾತಿಗೂ ತೂಕ ಐತಿ. ಸಿಟ್ಟಿಗೆದ್ದ ಸಿವನ ತಾಂಡವನಾ ಕಾಣಕತೈತಿ ನಮಿಗ್ಯ. ಅದ್ರ ಬಿಸಿ ಡೆಲ್ಲಿಗೂ ಮುಟೈತಿ, ಪ್ರಧಾನ ಮಂತ್ರಿಗಳಿಗೂ ತಟೈತಿ. ಅದ್ಕಾ ಒಂದು ಅವಕಾಸ ಸಿಕ್ಕ ಕೂಡ್ಲೆ ನಮ್ ಪ್ರಧಾನಿಗಳು ಏನ್ ಹೇಳಿದ್ರು ಗೊತೈತಿಲ್ಲು ?’. ಅಂದ. ಈ ಮಾತನ್ನ ಕೇಳಾಕತ್ತಿದ್ದ ಮೈಲವ್ವ ‘ಏನ್ ಹೇಳಿದ್ರೋ ಸಾಬಣ್ಣಾ ? ನಾನ್ ಅವಾಗ ಮನ್ಯಾಗಿದ್ದಿಲ್ಲೇಳು. ಹಂಗಾಗಿ ನನಗದು ಗೊತ್ತಾಗಿಲ್ಲ. ಅದೇನೇಳ್ಯಾರ ಹೇಳ್ರೋ’. ಅಂತ ಕೇಳಿದ್ಲು.

ಮೈಲವ್ವನ ಮಾತು ಕೇಳಿದ ಬುಡೇನಜ್ಜ ‘ಏನೂ ಇಲ್ಲ ಬುಡ್ಬೇ ಮೈಲವ್ವ, ಅದೇನೇಳ್ಯಾರ ಅಂದ್ರ, ‘ನೋಡ್ರಪ್ಪಾ ಗೋ ರಕ್ಸಕ್ರಾ, ನೀವ್ ಮಾಡಾ ತೆರ್ಲಿಗುಳಿಗೆ ಇಲ್ಲಿ ನನಗ ಕುತ್ತು ಬರಾಕತೈತಿ, ನಿಮ್ಮ ಕಾಲಿಗೆ ಬೇಕಾರೂ ಬಿದ್ದೇನ್ರೋ, ನನ್ ಮಾತು ಕೇಳ್ರಿ, ನಿಮಗ ಸೂಟ್ ಮಾಡಾಕ ಅಸ್ಟಕಂದು ಕೈ ಕಡಿತಿದ್ರ ನನ್ನಾ ಸೂಟ್ ಮಾಡ್ರಪ್ಪೋ, ದಲಿತ್ರನ್ನ ಬುಟ್ ಬುಡ್ರಿ’. ಅಂತ ಹೇಳಿದ್ರು. ಈ ಮಾತ್ನ ಔರು ಹಂಗೇಳ್ತಿದ್ದಂಗನಾ ಇದನ್ನೆಲ್ಲಾ ಸೂಟ್ ಮಾಡಾಕತ್ತಿದ್ದ ಕ್ಯಾಮರಾದೋರಿಗೆಲ್ಲಾ ಫುಲ್ ತಲಿ ತಿರಿಗೋತಂತ್ಯ.

ಇವ್ರು ಈಗ ಈ ಮಾತೇಳಿದ್ದು ಔರಿಗೋ ? ನಮಿಗೋ ? ಬಹುಸ್ಯ ನಮಿಗೇ ಹೇಳಿರಬೇಕು, ಯಾವ್ದುಕೂ ಇವ್ರನ್ನಾ ಸೂಟ್ ಮಾಡಾನು. ದಲಿತ್ರನ್ನ ಸೂಟ್ ಮಾಡಾದಾ ಬ್ಯಾಡ. ಯಾಕಿದ್ದೀತು ಇಲ್ಲದ ಉಸಾಬ್ರಿ’. ಅಂತಂದು ಕ್ಯಾಮರಾಗಳ್ನ ಪ್ರಧಾನಿಗಳ ಕಡಿಗೇ ಮಖಾ ಮಾಡಿ ಇಟ್ಟುಬುಟ್ರಂತೆ’. ಇಷ್ಟೂ ಗೊತ್ತಿದ್ದಿಲ್ಲೇನಬೇ ನಿನಿಗ್ಯ ?’. ಅಂದ. ಬುಡೇನಜ್ಜನ ಮಾತು ಕೇಳಿ ಮೈಲವ್ವ ಕೊಕ್ಕರಿಸಿ ನಗಾಕತ್ತಿದ್ಲು.

ಮೈಲವ್ವನ ಮಖಾನೇ ನೋಡಾಕತ್ತಿದ್ದ ರಾಮಜ್ಜ, ‘ನೀನಿಷ್ಟಕ್ಕಾ ಹಿಂಗಂತಿಯಲ್ಲ ಮೈಲವ್ವಾ, ದೇಸದಾಗೊಂದಿಷ್ಟು ಸ್ವಾಮಿಗುಳು ನಮ್ಮ ಪ್ರಧಾನಿಗುಳು ಹಿಂಗ ಹೇಳಿದ್ಕ ಔರು ತಮ್ಮ ಮನಿ ಮಗ ಅನ್ನಾದ್ನಾ ಮರತು, ‘ನಿನ್ನ ಮಾತು ವಾಪಾಸ್ ತಕ್ಕಂಡ್ರ ಬೇಸಾತು, ಇಲ್ಲಾಂದ್ರ ನಡಿಯಾದಾ ಬ್ಯಾರೆ ಐತಿ ನೋಡ್ಪಾ, ಮತ್ ಅದಕ್ಕ ನಾವು ಜಬಾದ್ದಾರಲ್ಲ ಈಗಾ ಹೇಳೀವಿ ನಾವು. ಅಂತ ಗುಟುರು ಹಾಕಾಕತ್ಯಾರ.

ಇಂಥವೆಲ್ಲಾ ಕೇಳಿದ್ರ ಯಾರ ತಲಿಯಾಗ ಸಗಣಿ ತುಂಬೈತೋ, ಯಾರ ತಲಿಯಾಗ ಬುದ್ದಿ ತುಂಬ್ಯಾನೋ ಆ ನಾಕು ಮಕದ ಬ್ರಹ್ಮ. ಅಂತೂ ಭಾರೀ ಕಿಲಾಡಿ ಅದಾನ ನೋಡ್ಬೇ ಆ ಬ್ರಹ್ಮ ಅನ್ನೋನು’. ಅಂದ. ರಾಮಜ್ಜನ ಮಾತು ಕೇಳಿದ ಮೈಲವ್ವ ‘ಲೋ ರಾಮಾ, ಇವತ್ತಿನ ಪರಿಸ್ಥಿತಿನ ನೋಡಿದ್ರ ನಮ್ಮನ್ನ ಆ ಪರಂಗಿಯಾರು  ಆಳಿದ್ದಾ ಚೊಲೋ ಇತ್ತೇನೋ ಅನ್ನಸ್ತೈತಿ ಹೋಗ್ ಅತ್ಲಾಗ’. ಅಂದ್ಕೋತ ನಸೆಪುಡಿ ಎಂಜಲಾನ ಕಟ್ಟಿ ಮಗ್ಗಲು ಉಗುದ್ಲು.

A view of the parliament building is seen in New Delhi July 21, 2008. REUTERS/B Mathur/Files

ಮೈಲವ್ವನ ಮಾತು ಕೇಳಿದ ಬುಡೇನಜ್ಜ ‘ಹೌದೋ ರಾಮಣ್ಣ, 70 ವರ್ಸ ಆಗಿ ಹೋತಂತ್ಯಲ್ಲೋ ನಮಿಗ್ಯ ಸ್ವಾತಂತ್ರ್ಯ ಸಿಕ್ಕು ? ಇವತ್ತಿಗೂ ನಮ್ ದೇಸದಾಗ ಯಾರಿಗ್ಯ ಸ್ವಾಸಂತ್ರ ಸಿಕ್ಕೈತೋ ಯಾರಿಗಿಲ್ಲೋ, ಹೋಗ್ಗೋ ಇವನೌನು ಒಂದು ತಿಳಿದಂಗಾಗೈತಿ ನನಗ.’ ಅಂದ. ಬುಡೇನಜ್ಜನ ಮಾತು ಕೇಳಿದ ರಾಮಣ್ಣ. ‘ಇದಾ ಮಾತಾ ನೀ ಹೊರಗೆಲ್ಲಾರ ಹೇಳಿದಿಪಾ ಅಂದ್ರ, ಮದ್ಲಾ ನೀ ಸಾಬ್ರಾನು ಅದಿದಿ, ದೇಸ ದ್ರೋಯಿ ಇವ್ನು, ಪಾಕಿಸ್ತಾನಕ್ಕ ಕಳಿಸ್ರಿ ಇವನ್ನ ಅಂತ ಹಿಂಡ್ ಗಟ್ಲೆ ನಾಯಿಗುಳು ಮುಗಿಲಿಗೆ ಮುಖ ಎತ್ತಿ ಬೋ ಅನ್ನಾಕತ್ತಿಬುಡತಾವು ಉಸಾರು. ಅದ್ಕಾ ಈ ವರ್ಸ ನಿಮ್ ಮದ್ರಾಸ ಗಳಾಗೂ ಸೈತ ದಜಾ ಏರಿಸ್ತಾರಂತ ಗೊತ್ತಿಲ್ಲೇನು ನಿನಗ ?’ ಅಂದ.

‘ಮದ್ರಾಸಗುಳಾಗ ದಜಾ ಏರಿಸಿಬುಟ್ರ, ಔರಿಗೆಲ್ಲಾ ಸಸಂತ್ರ ಸಿಕ್ಕಂಗೇನು ?’. ಅಂತ ಖುಸಿಲೇ ಕೇಳಿದ ಮೈಲವ್ವಗ ರಾಮಜ್ಜ ಕಣ್ ಬುಟ್ಟ. ಅದನ್ನ ನೋಡಿದ ಮೈಲವ್ವ, ‘ಅಯ್ಯ, ಅದಕ್ಯಾಕ ಕಣ್ ಬುಡ್ತಿ ಬುಡಲೋ, ಯಪ್ಪಾ ಈ ದೇಸದಾಗ ಯಾರಿಗೆ ಸಸಂತ್ರ ಸಿಕ್ಕೈತೋ ಇಲ್ಲೋ, ಆದ್ರ ನಮ್ ಶಮ್ರಿಲಾಗ ಮಾತ್ರ ಸಿಕ್ತಪ್ಪ. ಪಾಪ, ಒಂದು ಅನ್ಯಾಯಕ್ಕ 16 ವರ್ಸ ಉಪಾಸ ಕುಂತಿತ್ತದು. ಮನ್ಯ ಇನು ನಾಲಿಗಿಗೆ ಜೇನು  ಮುಟ್ಟಿಸಿಕಂಡು ಉಪಾಸ ಮುರಿತು ನೋಡು ಇಷ್ಟು ವರ್ಸ ಉಪಾಸ ಇದ್ದದ್ದು ಸಾಕು ಇನ್ನರ ಹೊಟ್ಟಿತುಂಬ ಉಂಡು ತಣ್ಣಗಿರ್ಲಿ ಬುಡು ಅಂದ್ಕಂಡ್ಯ ನೋಡು.’ ಅಂದ್ಲು.

ಮೈಲವ್ವನ ಮಾತು ಕೇಳಿದ ಬುಡೇನಜ್ಜ, ‘ಅದಿರ್ಲಿ ಸುಮ್ನಿರಬಿಲಿ, ನಂದೊಂದು ಪ್ರಶ್ನಿ ಐತಿಲ್ಲಿ’ ಅಂತೇಳಿ, ರಾಮಣ್ಣನ ಕಡಿ ತಿರುಗಿ ಅಲ್ಲೋ ರಾಮಣ್ಣ ಸ್ವಾತಂತ್ರ ದಿವ್ಸ, ಡೆಲ್ಯಾಗ ವರ್ಸಾ ವರ್ಸಾ ಪ್ರಧಾನ ಮಂತ್ರಿಗುಳು ಭಾಷಣ ಮಾಡ್ತಾರಲ್ಲಾ, ಈ ವರ್ಸ ನಮ್ ಪ್ರಧಾನಿಗುಳು ಏನ್ ಭಾಷ್ನ ಮಾಡ್ಬೋದು ?’ ಅಂತ ಕೇಳಿದ. ಬುಡೇನಜ್ಜನ ಪ್ರಶ್ನಿ ಕೇಳಿದ ರಾಮಣ್ಣ, ‘ಇನ್ನೇನ್ ಇರ್ತೈತೋ ಸಾಬಣ್ಣಾ, ನೋಡ್ರಪಾ, ನಾನು ಪ್ರಧಾನ ಸೇವಕ ಆಗಿ ಎಲ್ಡು ವರ್ಸಾಗೋತು, ಈಗ ನಮ್ ದೇಸ, ವಿಶ್ವ ಗುರು ಆಗಾಕತೈತಿ, ಹೊರ ದೇಸದಾಗಿದ್ದ ನಮ್ ಮಂದೆಲ್ಲಾ ನಮ್ ತಾಯ್ ನೆಲಕ್ಕೋಗಾಕು ದೇಸ ಸೇವಿ ಮಾಡಾಕು ಅನ್ನಾಕತ್ಯಾರ, ಅಬ್ಜ್ ಗಟ್ಲಿ ಆದಾಯ ಹರದು ಬಂದೈತಿ, 2020 ರಷ್ಟತ್ತಿಗೆ ನಮ್ ದೇಸ ಉದ್ಧಾರ ಆಗಿಬುಟ್ಟಿರತೈತಿ ನೋಡ್ಕಂಡಿರ್ರಿ ಬೇಕಾರ. ಅಂತಿರಬೋದು’. ಅಂದ.

ನಡುಕ ಬಾಯಿ ಹಾಕಿದ ಮೈಲವ್ವ, ‘ಅಷ್ಟಾ ಅಲ್ಲಲೋ ರಾಮಾ, ದೇಸದಾಗ ಎಲ್ಲರೂ ಸಮಸಮ, ಅಂಬೇಡ್ಕರ್ ನೆಳ್ಳಾಗ ನಾವೆಲ್ಲ ಬದ್ಕಾಕತ್ತೀವಿ. ದಲಿತ್ರು ನನ್ ಪಾಲಿನ ದೇವ್ರು, ಇಡೀ ದೇಸ ವಾಣಾಗೋಗೈತಿ, ಇನ್ನು ಎಲ್ಡು ವರ್ಸದಾಗ ಗಂಗಾನದಿನ ತೊಳದು ಕ್ಲೀನ್ ಮಾಡಿಬುಡ್ತೀವಿ, ನೀರಿಲೆ ಗಾಡಿ ಓಡ್ಸಂತ ಟೆಕ್ನಾಲಜಿ ಕಂಡ್ ಹಿಡಿತೀವಿ, ಈಸು ದಿಸ ಯಾವ ಗೌರ್ಮೆಂಟೂ ಈ ಕೆಲ್ಸ ಮಾಡಿಲ್ಲ, ಚಿಲ್ರೆ ವ್ರಕ್ಕ ತಗಂಡೋದ್ರ ಚೀಲದ ತುಂಬಾ ದಿನಸಿ ತರಾ ದಿನಗಳು ಭಾರತಕ್ಕ ಬರತಾವು, ಬಡ್ತನಾನ ಈ ದೇಸದಾಗ ಹಣತಿ ಹಚ್ಚಿ ಹುಡ್ಕಿದ್ರೂ ಸಿಗಾದಿಲ್ಲ. ದೇಸ ಕಾಯಾ ಒಬ್ಬೊಬ್ಬ ಸೈನಿಕನ ತಾಯಂದ್ರ ಕಾಲಿಗೆ ನಾನಿವತ್ತು ನಮಸ್ಕರಿಸಿ ಹೇಳದೇನಂದ್ರಾ’ ಅಂತ ಏನಾ ಹೇಳಾಕ ಹೊಂಟಿದ್ಲು ರಾಮಣ್ಣ ನಡುಕು ಬಾಯಿ ಹಾಕಿದ.

‘ಒಂದು ಹನಿ ನೀರನ್ನೂ ಏಸ್ಟ್ ಮಾಡ್ದಂಗ ಹಿಡದಿಡ್ರಿ, ಈರಿಯಾ ಗೊಬ್ರದ ಸಮಸ್ಯಿ ಬಗೆಹರಿಯಾಕ 70 ವರ್ಸ ಬೇಕಾತು. ಅಂಗೈಗೆ ಸರ್ಕಾರಾನ ತಂದು ಕುಂದ್ರಿಸೀವಿ, ಇದು ನಿಮ್ಮ ಸರ್ಕಾರ ನಾನು ಬರೀ ಪ್ರಧಾನ ಸೇವಕ ಅದೀನಿ. ನಮ್ ದೇಸ ಉದ್ದಾರ ಆಗಾದು ನೋಡಿ ಎಸ್ಟೋ ದೇಸಗಳಿಗೆ ಜ್ವರಾ ಬಂದಾವು. ಎಲ್ಲರೂ ಕೈ ಎತ್ತಿ ಹೇಳ್ರಿ ಭಾರತ್ ಮಾತಾಕೀ ಜೈ…ಅಂತ ಮುಗುಸ್ಬೋದು.’ ಅಂತಂದ್ಕ, ರಾಮಣ್ಣ ‘ಹಂಗಾ ಇದ್ರ ಜೊತಿಗೆ ಇನ್ನೂ ಸುತ್ತಾಡದಂಗ ಬಾಕಿ ಉಳದ ದೇಸಗಳ ಪಟ್ಟೀನೂ ರೆಡಿ ಮಾಡಿದ್ರೂ ಮಾಡಿ ಅನೌನ್ಸು ಮಾಡಬೋದಬೇ ಹೌದಿಲ್ಲು ?’ ಅಂತ ನಗಾಕತ್ತಿದ. ರಾಮಣ್ಣನ ಮಾತಿಗೆ ಬುಡೇನಜ್ಜ, ಮೈಲವ್ವ ಜೋರ್ ನಗಾಕತ್ತೀದ್ರು.

‍ಲೇಖಕರು admin

13 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading