ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಚಿಟಿಕೆ ಮಣ್ಣು

ಲಕ್ಷ್ಮಣ ಬದಾಮಿ ಅವರ ‘ಒಂದು ಚಿಟಿಕೆ ಮಣ್ಣು’ ಕೃತಿಗೆ ಡಾ ಬೆಟಗೇರಿ ಕೃಷ್ಣ ಶರ್ಮ ಟ್ರಸ್ಟ್ ನೀಡುವ ಯುವ ಕಥಾ ಪ್ರಶಸ್ತಿ ಘೋಷಿಸಲಾಗಿದೆ.

‘ಛಂದ’ ಪ್ರಕಾಶನ ಪ್ರಕಟಿಸಿರುವ ಈ ಕೃತಿಯ ಒಂದು ಕಥೆಯ ಬಗ್ಗೆ ಯುವ ಬರಹಗಾರ ಕಲ್ಲೇಶ್ ಕುಂಬಾರ್ ಇಲ್ಲಿ ಅವಲೋಕಿಸಿದ್ದಾರೆ.

ಕಲ್ಲೇಶ್ ಕುಂಬಾರ್ / ಹಾರೂಗೇರಿ

ಲಕ್ಷ್ಮಣ ಬದಾಮಿಯವರ ‘ಒಂದು ಚಿಟಿಕೆ ಮಣ್ಣು’ ಕಥಾ ಸಂಕಲನದಲ್ಲಿನ ‘ಆಶೀರ್ವಾದ’ ಕಥೆ, ವರ್ತಮಾನ ಸಂದರ್ಭದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಠ ಮಾನ್ಯಗಳು ರಾಜಕೀಯ ಪಕ್ಷಗಳನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಪ್ರಭಾವಶಾಲಿಗಳಾಗಿವೆ ಎಂಬುದನ್ನು ಹಾಗೂ ಈ ದೇಶದಲ್ಲಿ ಎಲ್ಲವೂ ಸಹ ನಂಬಿಕೆ ಹಾಗೂ ಆಚರಣೆಗಳ ನೆಲೆಯ ಮೇಲೆಯೇ ನಿಂತಿರುವುದರಿಂದಾಗಿ ಮಠಮಾನ್ಯಗಳನ್ನು ವೋಟ್ ಬ್ಯಾಂಕ್ ಗಳನ್ನಾಗಿ ಮಾಡಿಕೊಂಡಿರಬಹುದಾದ ಸಾಧ್ಯತೆಯನ್ನು ಶೋಧಿಸುತ್ತದೆ!

ಹಾಗೆಯೇ, ಧರ್ಮವನ್ನು ಎತ್ತಿ ಹಿಡಿಯಬೇಕಾಗಿರುವ ಮಠಾಧಿಪತಿಗಳು ತಮ್ಮ ತಮ್ಮ ಶ್ರೀಮಠಗಳ ಮುಗ್ಧ ಭಕ್ತಾದಿಗಳನ್ನು ಮುಂದಿಟ್ಟುಕೊಂಡು, ಅಧಿಕಾರದ ಗದ್ದುಗೆಯ ವ್ಯಾಮೋಹವನ್ನು ಬೆಳೆಸಿಕೊಂಡು ಧರ್ಮಭ್ರಷ್ಟರಾಗುತ್ತಿರುವುದನ್ನು ಹಲವು ಮಗ್ಗುಲಲ್ಲಿ ವಿಮರ್ಶಿಸುತ್ತದೆ.

ಈ ಕಥೆಯಲ್ಲಿ ಬರುವ ಸಿರಿಪುರ ಎಂಬ ಗ್ರಾಮ, ನೈತಿಕತೆಯ ಪಾತಳಿಯನ್ನು ಮೀರಿದ ಇಂಥ ಕ್ರಿಯೆಗಳಿಗೆ ಸಾಕ್ಷಿಯಾಗಿ ನಿಲ್ಲುವುದರ ಮೂಲಕ, ನಮ್ಮ ದೇಶದಲ್ಲಿ ರಾಜಕಾರಣ ಎಂಬುದು ಧರ್ಮ, ನಂಬಿಕೆ ಮತ್ತು ಭಕ್ತಾದಿಗಳ ಮೌಢ್ಯತೆಯೊಂದಿಗೆ ಥಳಕು ಹಾಕಿಕೊಂಡಿರುವ ವಿಚಾರವನ್ನು ಬಯಲಿಗಿಡುತ್ತದೆ.

ಈ ಕಥೆಯಲ್ಲಿ ಬರುವ ಮಠದ ಭಕ್ತನೂ, ಸೇವಕನೂ ಮತ್ತು ಮುಗ್ಧನೂ ಆಗಿರುವ ಸಿದ್ದಪ್ಪನನ್ನು ಶ್ರೀಮಠದ ಸ್ವಾಮಿಗಳು ಮಠದಲ್ಲಿ ಜರುಗುವ ಶ್ರಾವಣ ಮಾಸದ ಪುರಾಣ ಮಂಗಲೋತ್ಸವದ ಸಂದರ್ಭದಲ್ಲಿ ವೇದಿಕೆಗೆ ಕರೆದು ಸನ್ಮಾನಿಸುವ ವಿಚಾರವನ್ನು ವ್ಯಕ್ತಪಡಿಸಿದಾಗ ಆತ ಹಿಂಜರಿಯುವುದು ಆತನ ಸಾತ್ವಿಕತೆಗೆ ಕನ್ನಡಿ ಹಿಡಿಯುತ್ತದೆ. ನಿತ್ಯ ಬೆಳಿಗ್ಗೆ ಮಠದ ಪ್ರಾಂಗಣದ ಕಸ ಗುಡಿಸುವ ಕೆಲಸದಲ್ಲೇ ದೇವರನ್ನು ಕಾಣ ಬಯಸುತ್ತಿದ್ದ, ಸರಳ ಬದುಕನ್ನು ನೆಚ್ಚಿಕೊಂಡಿದ್ದ ಆತನಿಗೆ ಸನ್ಮಾನ ಎಂಬುದು ಕೃತ್ರಿಮ ಕ್ರಿಯೆ ಎಂದೆನಿಸುವುದು ಸಹಜವಾಗಿದೆ. ಕಡೆಗೂ ಶ್ರೀಗಳ ಒತ್ತಾಯಕ್ಕೆ ಮಣಿದು ಸನ್ಮಾನಕ್ಕೆ ಒಪ್ಪಿಕೊಳ್ಳುತ್ತಾನೆ!

ಆದರೆ, ಸಮಾರಂಭಕ್ಕೆ ಅನಿರೀಕ್ಷಿತವಾಗಿ ಆಗಮಿಸುವ ಎಮ್ಮೆಲ್ಲೆ, ತನ್ನ ಭಾಷಣದಲ್ಲಿ ಮಠಕ್ಕೆ ಐದು ಲಕ್ಷ ರೂಪಾಯಿಗಳನ್ನು ಸರಕಾರದಿಂದ ಕೊಡಿಸುತ್ತೇನೆ ಎಂದಾಗ, ಮಠದ ಶ್ರೀಗಳು ಸಿದ್ದಪ್ಪನನ್ನು ಆಶೀರ್ವದಿಸುವ ವಿಚಾರವನ್ನು ಮರೆತು ಎಮ್ಮೆಲ್ಲೆಯನ್ನು ಸನ್ಮಾನಿಸುವುದರ ಮೂಲಕ ವಚನಭ್ರಷ್ಟರಾದರೆ, ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಿದ್ದಪ್ಪ ಸ್ಥಿತಪ್ರಜ್ಞನಾಗಿ ಉಳಿಯುವುದರ ಮೂಲಕ ಓದುಗನ ಕಣ್ಣಲ್ಲಿ ಮಹದೆತ್ತರಕ್ಕೆ ಬೆಳೆದು ನಿಲ್ಲುತ್ತಾನೆ.

ರಾಜಕೀಯ ವಿಚಾರದಲ್ಲಿ ಮಠ ಮಾನ್ಯಗಳು ಈ ಸಂದರ್ಭದಲ್ಲಿ ತಳೆದಿರುವ ನಿಲುವು ಮತ್ತು ಅದಕ್ಕೆಲ್ಲ ಸಿದ್ದಪ್ಪನಂಥ ಅಮಾಯಕರನ್ನು ದಾಳವಾಗಿ ಬಳಸಿಕೊಳ್ಳುವ ರೀತಿ- ಇವೆಲ್ಲ ಕಥೆಯನ್ನು ಗೆಲುವಿನತ್ತ ಕೊಂಡೊಯ್ದಿವೆ. ಕಥೆ ಸರಳವಾಗಿದ್ದರೂ ಸಹ ಸಂಕೀರ್ಣವಾದ ವಿಚಾರವೊಂದರೊಂದಿಗೆ ಮುಖಾಮುಖಿಯಾಗುತ್ತದೆ. ಕಥೆಗಾರರಿಗೆ ಅಭಿನಂದನೆಗಳು.

‍ಲೇಖಕರು avadhi

5 December, 2019

1 Comment

  1. Venu Jalibenchi

    ಅಭಿನಂದನೆಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading