22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು

ಸಿದ್ದನಗೌಡ ಪಾಟೀಲ

ಆತ್ಮೀಯ ‘ಹೊಸತು’ ಓದುಗರೆ, ತಮ್ಮ ಸಹಕಾರದಿಂದ ಪತ್ರಿಕೆ 22ನೇ ವರ್ಷಕ್ಕೆ ಕಾಲಿಟ್ಟಿದೆ. ವೈಚಾರಿಕ ನೆಲೆಗಟ್ಟಿನಿಂದ ಪ್ರಕಟವಾಗುತ್ತಿರುವ ‘ಹೊಸತು’ ಕಳೆದ ಎರಡು ದಶಕಗಳಲ್ಲಿ ಜನಪರ ಚಿಂತಕರ ಮಾಧ್ಯಮವಾಗಿ, ಒಂದು ವೇದಿಕೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇಂಥ ಮಹತ್ತರ ಕೆಲಸಕ್ಕೆ ತಮ್ಮ ಅಮೂಲ್ಯವಾದ ಲೇಖನ, ಕಥೆ, ಕವನ, ಪ್ರಬಂಧಗಳನ್ನು ಕೊಟ್ಟ ಲೇಖಕರೂ ಚಿತ್ರಗಳನ್ನು ರಚಿಸಿಕೊಟ್ಟ ಕಲಾವಿದರೂ ಭಾಗಿಯಾಗಿದ್ದಾರೆ.

ಪತ್ರಿಕೆಯ ಆರ್ಥಿಕ ಬಲಕ್ಕೆ ಜಾಹೀರಾತುದಾರರೂ ನೆರವಾಗಿದ್ದಾರೆ. ಇದೇ ರೀತಿಯ ಪಾಲ್ಗೊಳ್ಳುವಿಕೆ ಸದಾ ‘ಹೊಸತು’ವಿನೊಂದಿಗೆ ಇರಲಿ ಎಂದು ವಿನಂತಿಸುತ್ತಾ, ನೆಮ್ಮದಿಯ ನಾಳೆಯ ಆಶಯದೊಂದಿಗೆ, ಎಲ್ಲರಿಗೂ ಸಂಪಾದಕ ಮಂಡಳಿಯ ಪರವಾಗಿ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ.

ಸಂಕಷ್ಟದ ಸಂದರ್ಭದಲ್ಲಿಯೂ ನಿರಂತರವಾಗಿ ಪತ್ರಿಕೆಯ ಪ್ರಕಟಣೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ನವಕರ್ನಾಟಕ ಸಂಸ್ಥೆಗೂ ಕೊರೊನಾ ಸಂದರ್ಭದಲ್ಲಿಯೂ ನಿರಂತರ ಕೆಲಸ ಮಾಡಿದ ಸಂಸ್ಥೆಯ ಸಿಬ್ಬಂದಿಗೂ ಹೊಸ ವರ್ಷ ನೆಮ್ಮದಿಯ ದಿನಗಳನ್ನು ತರಲಿ ಎಂದು ಆಶಿಸುತ್ತೇನೆ.

2020ನೇ ವರ್ಷ ವಿಶ್ವದಾದ್ಯಂತ ಮಾನವಕುಲವನ್ನು ಆತಂಕಕ್ಕೆ ದೂಡಿದ ವರ್ಷ. ಕೊರೊನಾದಂಥ ಸಾಂಕ್ರಾಮಿಕ ಪಿಡುಗಿನಿಂದ ವಿಶ್ವವೇ ತಲ್ಲಣಿಸಿ ಆರೋಗ್ಯ, ಆರ್ಥಿಕ, ಸಾಮಾಜಿಕ ಬದುಕು ಏರುಪೇರಾಯಿತು. ಭಾರತದ ಜನತೆ ಈ ಎಲ್ಲ ಸಮಸ್ಯೆಗಳ ಮಧ್ಯೆ ಪ್ರಭುತ್ವದ ವಿವೇಚನಾರಹಿತ ನಡೆಯಿಂದ ಅಪಾರ ಸಂಕಷ್ಟಗಳನ್ನು ಎದುರಿಸಬೇಕಾಯಿತು.

ಭಾರತದ ಆಡಳಿತವರ್ಗ ಈ ಸಂಕಷ್ಟದ ದಿನಗಳನ್ನೇ ತನ್ನ ವರ್ಗ ಹಿತಾಸಕ್ತಿಗಾಗಿ ಬಳಸಿಕೊಂಡದ್ದು, ಸಂಸತ್ತಿನಲ್ಲಾಗಲೀ ಸಾಮಾಜಿಕ ವಲಯದಲ್ಲಾಗಲೀ ಚರ್ಚೆ, ಸಂವಾದ ನಡೆಸದೇ ಜನವಿರೋಧಿ ಕಾನೂನುಗಳನ್ನು, ಮಸೂದೆಗಳನ್ನು, ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದದ್ದು ದೇಶದ ಸಮಾಜೋ-ರಾಜಕೀಯ ಇತಿಹಾಸದಲ್ಲಿ ಕಪ್ಪು ಅಧ್ಯಾಯಗಳಾಗಿ ದಾಖಲಾದವು.

ಕಳೆದ ವರ್ಷವೂ ಪೌರತ್ವ (ತಿದ್ದುಪಡಿ) ಕಾನೂನು(ಸಿಎಎ), ಪೌರತ್ವ ರಿಜಿಸ್ಟರ್(ಎನ್.ಪಿ.ಆರ್.), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.)ಯಂಥ ವಿಷಯಗಳನ್ನೇ ಮುಂದಿಟ್ಟುಕೊಂಡು ಜನರನ್ನು ಮೂಲಭೂತ ಸಮಸ್ಯೆಗಳಿಂದ ವಿಮುಖರನ್ನಾಗಿಸುವ ಯತ್ನ ಮಾಡಿ ಸಾಮಾಜಿಕ ಬದುಕಿನಲ್ಲಿ ಆತಂಕ ಸೃಷ್ಟಿಸಲಾಗಿತ್ತು. ಸಂಸತ್ತಿನಲ್ಲಿ ಬಹುಮತವಿದ್ದರೂ 2019ರ ಜೂನ್ ತಿಂಗಳಿಂದ 56 ಮಸೂದೆಗಳನ್ನು ಚರ್ಚೆ ಇಲ್ಲದೇ ಜಾರಿಗೆ ತರಲಾಯಿತು. ಇವೆಲ್ಲವೂ ಬಹುತೇಕ ಕಾರ್ಪೊರೇಟ್ ಹಿತಾಸಕ್ತಿಯನ್ನು ಈಡೇರಿಸುವ ಕಾನೂನುಗಳಾಗಿದ್ದವು.

2019ರ ಅಂತಿಮ ದಿನಗಳಿಂದ ಆರಂಭವಾದ ಕೊರೊನಾ ಸಾಂಕ್ರಾಮಿಕ ಪಿಡುಗು 2020ರ ಫೆಬ್ರವರಿ ಹೊತ್ತಿಗೆ ಭಾರತದಲ್ಲಿ ಹರಡತೊಡಗಿತು. ಮಾರ್ಚ್ ತಿಂಗಳಲ್ಲಿ ಕೇಂದ್ರ ಸರಕಾರ ಪೂರ್ವ ತಯಾರಿ ಇಲ್ಲದೇ ದೇಶದಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿತು. ದೇಶದಾದ್ಯಂತ ಕೋಟ್ಯಂತರ ಬಡವರು, ಜನಸಾಮಾನ್ಯರು, ಅಸಂಘಟಿತ ವಲಯದ ಕಾರ್ಮಿಕರು, ವಲಸೆ ಕಾರ್ಮಿಕರು ಪ್ರಧಾನಿ ಮೋದಿಯವರು ಘೋಷಿಸಿದ ಈ ಮುಂದಾಲೋಚನೆಯಿಲ್ಲದ ಲಾಕ್‍ಡೌನ್‍ನ ನೀತಿಯಿಂದ ಹಸಿವು, ಸಾವು, ನೋವುಗಳಿಗೆ ಬಲಿಯಾದರು. ಮೊದಲೇ ಕುಸಿದ ಆರ್ಥಿಕತೆ ಪಾತಾಳಕ್ಕಿಳಿಯಿತು.

ಕೊರೊನಾದಂಥ ಸಾಂಕ್ರಾಮಿಕ ಪಿಡುಗನ್ನು ವೈಜ್ಞಾನಿಕ, ವೈಚಾರಿಕ ಚಿಂತನೆ, ಕಾರ್ಯಕ್ರಮಗಳ ಮೂಲಕ ಎದುರಿಸದೇ ದೀಪ ಹಚ್ಚುವ, ಜಾಗಟೆ ಬಾರಿಸುವ ಇಂಥವೇ ಮೌಢ್ಯ ಆಚರಣೆಗಳ ಮೂಲಕ ಎದುರಿಸಲು ಸ್ವತಃ ಪ್ರಧಾನಿಗಳೇ ಕರೆಕೊಟ್ಟರು. ಇನ್ನೊಂದೆಡೆ ಪ್ರಭುತ್ವದ ಬೆಂಬಲದಿಂದಲೇ ಮತೀಯ ಸಂಘಟನೆಗಳು, ಮಾಧ್ಯಮಗಳು ಕೊರೋನಾ ಪಿಡುಗನ್ನೂ ಕೋಮುವಾದೀಕರಣಗೊಳಿಸುವ ಹುನ್ನಾರ ನಡೆಸಿದವು. ಬಹುತೇಕ ಮಾಧ್ಯಮಗಳು ಕೊರೊನಾ ಭಯೋತ್ಪಾದಕರಂತೆ ವರ್ತಿಸಿ ಜನ ಬೀದಿಗೆ ಬರಲಾರದಂತೆ ಮಾಡಿದವು. ಬೀದಿಗಳು ಖಾಲಿಖಾಲಿಯಾಗಿದ್ದಾಗ ಕೇಂದ್ರದ ಬಿಜೆಪಿ ನಾಯಕತ್ವದ ಎನ್.ಡಿ.ಎ. ಸರಕಾರ ಜನವಿರೋಧಿ ಕಾನೂನುಗಳನ್ನು, ಸುಗ್ರೀವಾಜ್ಞೆಗಳನ್ನು ಜನರ ಮೇಲೆ, ದೇಶದ ಮೇಲೆ ಹೇರಿತು.

ತಮ್ಮ ಬದುಕಿನ ಮೇಲೆ, ಮೂಲಭೂತ ಹಕ್ಕುಗಳ ಮೇಲೆ ಸರಕಾರದಿಂದಲೇ ದಾಳಿಯಾಗುತ್ತಿರುವ ಸಂದರ್ಭದಲ್ಲಿ ಮನೆಗಳಲ್ಲೇ ‘ಸೀಲ್‍ಡೌನ್’ ಆದ ಜನತೆ ಪ್ರತಿಭಟಿಸಲೂ ಆಗದೇ ಅಸಹಾಯಕರಾಗಿದ್ದರು. ಈ ಸಂಕಟದ ಸಂದರ್ಭವನ್ನು ಮೋದಿ ಸರಕಾರ ಕಾರ್ಪೊರೇಟ್ ಕಂಪನಿಗಳ ಸೇವೆಗಾಗಿ ಬಳಸಿಕೊಂಡಿತು. ದೇಶದ ಜನರು ತುತ್ತು ಅನ್ನಕ್ಕೂ ಪರಿತಪಿಸುತ್ತಿದ್ದಾಗ ಜಿಡಿಪಿ ಪಾತಾಳ ತಲುಪಿದ್ದಾಗ ಅಂಬಾನಿ, ಅದಾನಿಯಂಥ ಕಾರ್ಪೊರೇಟ್ ಕುಳಗಳ ಆದಾಯ ಆಕಾಶಕ್ಕೇರಿತ್ತು.

2020 ಕೇಂದ್ರ ಸರಕಾರದ ದುರಾಡಳಿತಕ್ಕೆ ಮತ್ತು ದಮನಕಾರಿ ನೀತಿಗೆ ಸಾಕ್ಷಿಯಾದಂತೆ, ತೀವ್ರವಾದ ಜನಾಂದೋಲನಕ್ಕೂ ಪ್ರತಿರೋಧಕ್ಕೂ ಸಾಕ್ಷಿಯಾದದ್ದು ಭಾರತದ ಜನತೆಯ ಪ್ರಜ್ಞಾವಂತಿಕೆಯನ್ನು, ಎಚ್ಚರವನ್ನು ತೋರಿಸುತ್ತದೆ. ಕೋಮುವಾದಿ ಕಾರ್ಯಸೂಚಿಯ ಗುರಿ ಹೊಂದಿದ್ದ ಪೌರತ್ವ (ತಿದ್ದುಪಡಿ) ಕಾನೂನಿನ ವಿರುದ್ಧ ಕಳೆದ ವರ್ಷವೇ ಆರಂಭವಾಗಿದ್ದ ಜನಾಂದೋಲನ ಕೊರೊನಾ ಸಂದರ್ಭದಲ್ಲಿ ಸ್ಥಗಿತವಾಗಿತ್ತು. ಲಾಕ್‍ಡೌನ್ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕೇಂದ್ರ ಸರಕಾರ ಹಲವಾರು ಜನವಿರೋಧಿ ಮಸೂದೆ, ಸುಗ್ರೀವಾಜ್ಞೆ ಕಾನೂನುಗಳನ್ನು ಜಾರಿಗೊಳಿಸಿತು.

ತಿದ್ದುಪಡಿ, ಸುಧಾರಣೆ ಹೆಸರಿನಲ್ಲಿ ಬಂದ ಈ ಎಲ್ಲ ಕಾನೂನು, ಸುಗ್ರೀವಾಜ್ಞೆಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿದ್ದವು. ಅವುಗಳಲ್ಲಿ ಮುಖ್ಯವಾಗಿ ಕಾರ್ಮಿಕ ಕಾನೂನು ತಿದ್ದುಪಡಿಗಳು, ಭೂಸುಧಾರಣೆ ತಿದ್ದುಪಡಿಗಳು, ಕೃಷಿ ಮತ್ತು ಕೃಷಿಮಾರುಕಟ್ಟೆಗೆ ಸಂಬಂಧಿಸಿದ ತಿದ್ದುಪಡಿಗಳು, ರಾಷ್ಟ್ರೀಯ ಶಿಕ್ಷಣ ನೀತಿ ಇಂಥ ಜನಸಾಮಾನ್ಯರ ಬದುಕಿನ ಮೇಲೆ ದುಷ್ಪರಿಣಾಮ ಮಾಡುವಂಥ, ದೇಶದ ಉತ್ಪಾದನಾ ವ್ಯವಸ್ಥೆಯನ್ನೇ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗೆ ಪೂರಕವಾಗಿ ಬದಲಾಯಿಸುವಂಥ ಮಹತ್ವದ ನೀತಿಗಳು ಯಾವುದೇ ಚರ್ಚೆಯಿಲ್ಲದೇ ಜನರ ಮೇಲೆ, ದೇಶದ ಮೇಲೆ ಹೇರಲ್ಪಟ್ಟವು.

ಪರಿಣಾಮವಾಗಿ ಕೊರೊನಾ ಸಾಂಕ್ರಾಮಿಕ ಪಿಡುಗನ್ನು ಲೆಕ್ಕಿಸದೆ ಜನ ಬೀದಿಗಿಳಿದು ಕೇಂದ್ರ ಸರಕಾರ ಮತ್ತು ಹಲವಾರು ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಕಾರ್ಮಿಕ ಸಂಘಟನೆಗಳ ಅಖಿಲ ಭಾರತ ಮುಷ್ಕರ, ಪ್ರಸ್ತುತ ನಡೆಯುತ್ತಿರುವ ರೈತ ಹೋರಾಟಗಳು ಪ್ರಮುಖವಾದ ಚಳುವಳಿಗಳು. ರೈತರ ಹೋರಾಟವಂತೂ ಪ್ರಶ್ನಾತೀತ ಎಂದು ಬಿಂಬಿಸಿದ ಪ್ರಧಾನಿಯ ಮುಖವಾಡವನ್ನು ಬಯಲು ಮಾಡಿದೆ.

ಪ್ರಸ್ತುತ ಸಂದರ್ಭ ಭಾರತದ ಒಂದು ಶತಮಾನದ ಹಿಂದಿನ ಸಮಾಜೋ – ರಾಜಕೀಯ ವಿದ್ಯಮಾನಗಳನ್ನು ಹೋಲುತ್ತದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ನಡೆದ ಸ್ವಾತಂತ್ರ್ಯ ಆಂದೋಲನ ತೀವ್ರ ರೂಪ ಪಡೆದದ್ದು 1920ರ ಸಂದರ್ಭದಲ್ಲಿಯೇ. ಹೋಮ್‍ರೂಲ್ ಚಳುವಳಿ, ಜಲಿಯನ್‍ವಾಲಾಬಾಗ್ ಹತ್ಯಾಕಾಂಡ, ಪಂಜಾಬ್‍ನಲ್ಲಿ ಬ್ರಿಟಿಷ್ ಸರಕಾರದ ದಮನಕಾರಿ ನೀತಿ ಇಂಥ ಘಟನೆಗಳನ್ನು ಬೆನ್ನಿಗಿಟ್ಟುಕೊಂಡು ಬಂದ ಆ ವರ್ಷ, ಜನತೆಯ ಸಹನೆ ಮೀರಿ, ಸಾಮ್ರಾಜ್ಯಶಾಹಿಯ ವಿರುದ್ಧ ಅಖಿಲ ಭಾರತ ವ್ಯಾಪ್ತಿಯಲ್ಲಿ ತೀವ್ರವಾದ ಪ್ರತಿರೋಧ ರೂಪಗೊಂಡ ವರ್ಷ.

1920ರಲ್ಲಿಯೇ ಅಸಹಕಾರ ಆಂದೋಲನ ಆರಂಭಗೊಂಡು ದೇಶದಾದ್ಯಂತ ಸಂಚಲನ ಮೂಡಿಸಿತು. ಅದೇ ವರ್ಷ ಚಳುವಳಿ ನಿರತ ಕಾರ್ಮಿಕ ಸಂಘಟನೆಗಳು ಒಂದಾಗಿ ಅಖಿಲ ಭಾರತ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸ್ಥಾಪಿಸಿಕೊಂಡವು. ಅದೇ ವರ್ಷ ಅವಧ್ ಕಿಸಾನ ಸಭಾ ಸ್ಥಾಪನೆಯಾಗಿ ಸುಮಾರು 330 ರೈತ ಸಂಘಟನೆಗಳು ಸೇರಿ ಬ್ರಿಟಿಷ್ ಸರಕಾರದ ಕರ ನೀತಿ, ಜಮೀನ್ದಾರಿ ವ್ಯವಸ್ಥೆಯ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದವು. ಅದರ ಮರುವರ್ಷವೇ ಪ್ರಖ್ಯಾತ ಮಲಬಾರ್ ಮಾಪಿಳ್ಳೆ ಬಂಡಾಯ. ಆ ದಶಕದಲ್ಲಿ ಹೀಗೆ ನಡೆದ ರೈತ ಆಂದೋಲನಗಳು 1928ರ ಗುಜರಾತ್‍ನಲ್ಲಿ ನಡೆದ ಬರ್ಡೋಲಿ ರೈತರ ಸತ್ಯಾಗ್ರಹದವರೆಗೆ ಬೆಳೆದವು.

1936ರಲ್ಲಿ ಅಖಿಲ ಭಾರತ ಕಿಸಾನ್ ಸಭಾ ಸ್ಥಾಪನೆಯಾಗಿ ರಾಷ್ಟ್ರಮಟ್ಟದಲ್ಲಿ ರೈತ ಸಂಘಟನೆಗಳು ಚಳುವಳಿಗಿಳಿದವು. ಮೊದಮೊದಲು ಬ್ರಿಟಿಷ್ ಸರಕಾರದ ತೆರಿಗೆ ನೀತಿ ಹಾಗೂ ಸ್ಥಳೀಯ ಭೂಮಾಲಿಕರ ಶೋಷಣೆಯ ವಿರುದ್ಧ ನಡೆದ ಹೋರಾಟಗಳು ಅಂತಿಮವಾಗಿ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಗಳಾಗಿ ರೂಪುಗೊಂಡವು. ಪ್ರಸ್ತುತ ಕೇಂದ್ರ ಸರಕಾರ ಕಾರ್ಪೋರೇಟ್ ಕಂಪನಿಗಳ ದಲ್ಲಾಳಿಯಾಗಿ ಆಡಳಿತ ಮಾಡುತ್ತಿದೆ.

ಅಂದು ಸಾಮ್ರಾಜ್ಯಶಾಹಿಯ ನೇರ ಆಡಳಿತವಿದ್ದರೆ ಇಂದಿನ ನವ ಸಾಮ್ರಾಜ್ಯಶಾಹಿ ರಾಷ್ಟ್ರೀಯ ಸರಕಾರಗಳನ್ನೇ ತನ್ನ ಸುಲಿಗೆಯ ಪರಿಕರಗಳನ್ನಾಗಿ ಬಳಸುತ್ತಿದೆ. 1920ರಲ್ಲಿ ಆರಂಭವಾದ ಸಾಮ್ರಾಜ್ಯಶಾಹಿ ವಿರೋಧಿ, ಅಸಹಕಾರ ಚಳುವಳಿಯ ಮಾದರಿಯಲ್ಲಿ ಇಂದಿನ ನವಸಾಮ್ರಾಜ್ಯಶಾಹಿಯ, ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿ ಕಾಯುವ ನಮ್ಮ ಸರಕಾರಗಳ ವಿರುದ್ಧ ಜನರು ಧ್ವನಿ ಎತ್ತಿದ್ದಾರೆ. ಒಂದೆಡೆ ರೈತ ಸಂಘಟನೆಗಳ ಕೂಟ, ಇನ್ನೊಂದೆಡೆ ಕಾರ್ಮಿಕ ಸಂಘಟನೆಗಳ ಒಕ್ಕೂಟ ಪರಸ್ಪರ ಸಹಕಾರದಿಂದ ಹೋರಾಟಕ್ಕಿಳಿದಿವೆ.

ರೈತ  ಕಾರ್ಮಿಕರು ದೇಶದ ಬಹುಸಂಖ್ಯಾತರು. ಅವರ ಐಕ್ಯ ಹೋರಾಟ ಮುಂದುವರಿದರೆ ದೇಶದ ನೆಲ, ಜಲ, ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲದ ರಕ್ಷಣೆ ಸಾಧ್ಯವಾಗುತ್ತದೆ. ದೇಶದ ಕೃಷಿ, ಕೈಗಾರಿಕೆಗಳ ವ್ಯವಸ್ಥೆಯನ್ನು ಕಾರ್ಪೊರೇಟ್‍ಗಳ ಅನುಕೂಲಕ್ಕಾಗಿ ಬದಲಾಯಿಸುವ ಇಂದಿನ ಪ್ರಭುತ್ವದ ಕುತಂತ್ರ ಭಾರತದ ಸಮಾಜೋ-ಆರ್ಥಿಕ ವ್ಯವಸ್ಥೆಯ ತಳಪಾಯವನ್ನೇ ಬದಲಾಯಿಸುವ ಗುರಿ ಹೊಂದಿದೆ. ಅದಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನೂ ರೂಪಿಸಿದೆ.

ಆರ್ಥಿಕತೆ, ಉತ್ಪಾದನಾ ಸಂಬಂಧಗಳು ಒಂದು ಸಮಾಜದ ತಳಪಾಯ. ಅದರ ಆಧಾರದ ಮೇಲೆಯೇ ಮೇಲ್‍ರಚನೆ ರೂಪುಗೊಳ್ಳುತ್ತದೆ ಎಂಬ ವಾದ ಜಾಗತೀಕರಣದ ಸಂದರ್ಭದ ಸಾಮಾಜಿಕ ಜೀವನದಲ್ಲಾಗುತ್ತಿರುವ ಪರಿಣಾಮಗಳಿಂದ ಸಾಬೀತಾಗಿದೆ. ಭಾರತ ಮಿಶ್ರ ಆರ್ಥಿಕತೆಯ ನೀತಿಯನ್ನು ಹೊಂದಿದ್ದರೂ ನಮ್ಮ ಸಂವಿಧಾನ ಕಲ್ಯಾಣ ರಾಜ್ಯದ ಕನಸುಗಳನ್ನು ಹೊಂದಿದೆ. ಆದರೆ ಪ್ರಸ್ತುತ ವಿದ್ಯಮಾನಗಳು ಕಲ್ಯಾಣ ರಾಜ್ಯದ ಬದಲಾಗಿ ಮತ್ತೆ ಕಂಪನಿ ರಾಜ್ಯದತ್ತ ಕೊಂಡೊಯ್ಯಲು, ಭಾರತದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಬುನಾದಿಯನ್ನೇ ಬದಲಾಯಿಸಲು ಕಾರ್ಪೊರೇಟ್ ಕಂಪನಿಗಳ ಪರವಾಗಿ ನಮ್ಮ ಇಂದಿನ ಪ್ರಭುತ್ವ ತನ್ನ ಬದ್ಧತೆಯನ್ನು ತೋರುತ್ತಿದೆ.

ಪ್ರಜೆಗಳಿಂದ ಆಯ್ಕೆಯಾದ ನಮ್ಮ ಜನಪ್ರತಿನಿಧಿಗಳು ಪ್ರಜಾಪ್ರಭುತ್ವವನ್ನು ಕಾರ್ಪೊರೇಟ್ ಪ್ರಭುತ್ವವನ್ನಾಗಿ ಪರಿವರ್ತನೆ ಮಾಡುವ ಸಂದರ್ಭದಲ್ಲಿ ಉಂಟಾಗುವ ಹಿತಾಸಕ್ತಿಯ ಸಂಘರ್ಷವೇ ಇಂದಿನ ಪ್ರಜೆ ಮತ್ತು ಪ್ರಭುತ್ವದ ನಡುವಿನ ಸಮರ. ಪ್ರಭುತ್ವ ಮತ್ತು ಕಾರ್ಪೊರೇಟ್ ಮಧ್ಯದ ಅನೈತಿಕ ಸಂಬಂಧ ಇಂದು ಗುಟ್ಟಾಗಿ ಉಳಿದಿಲ್ಲ. ಈ ಹುನ್ನಾರಗಳು 2021ರಲ್ಲಿ ಬಯಲಾಗುವ ಎಲ್ಲ ಸೂಚನೆಗಳೂ ಕಾಣಿಸುತ್ತಿವೆ.

2021 ಸತ್ಯದ ಅನಾವರಣದ ವರ್ಷವಾಗಲಿ. ಒಂದು ಶತಮಾನದ ಹಿಂದೆ ಸ್ವತಂತ್ರ ಭಾರತಕ್ಕಾಗಿ ಜನಮಾನಸದಲ್ಲಿ ಮೂಡಿದ ಜಾಗೃತಿ ಇಂದು ಸ್ವಾತಂತ್ರ್ಯದ ರಕ್ಷಣೆಗಾಗಿ ಮೂಡಲಿ. ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು ಏಳುತ್ತಿವೆ. ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿ, ಸ್ವಾಭಿಮಾನಿ, ಸ್ವಾವಲಂಬಿ, ಸಮತೆಯ ದೇಶವಾಗಿ ಬೆಳೆಯಲು ಈ ಹೊಸ ವರ್ಷ ಮೆಟ್ಟಿಲಾಗಲಿ ಎಂಬುದು ‘ಹೊಸತು’ ಆಶಯ.

‍ಲೇಖಕರು Avadhi

January 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಹೊಸತು – ಪ್ರತಿ ತಿಂಗಳೂ ನಿಜಕ್ಕು ಹೊಸತೇ ಆಗಿರುತ್ತದೆ. ತನ್ನ ಸಮಾಜ ಮುಖಿ ಚಿಂತನೆ ಲೇಖನಗಳಿಂದ ಓದುಗರಿಗೆ ಸರಿಯಾದ, ಪ್ರಾಮಾಣಿಕವಾದ ಮಾಹಿತಿ ನೀಡುತ್ತ , ಸದಾ ಎಚ್ಚರಿಕೆಯನ್ನು ಕಾಯ್ದಿಡುವ ಕೆಲಸ ಮಾಡುತ್ತಿರುವ ಹೊಸತು – ಸಂಪಾದಕರು ಮತ್ತು ಸಮಸ್ತ ಆಡಳಿತ, ಲೇಖಕ, ಚಿಂತಕರ ವರ್ಗಕ್ಕೆ ೨೨ ನೇ ಹುಟ್ಟುದಿನದ ಶುಭಾಶಯಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: