ರಾಜಾರಾಂ ತಲ್ಲೂರು
ಎಲ್ಲ ಸರಿಯಾದ ಹಾದಿಯಲ್ಲೇ ನಡೆದಿದೆ. ಕಾಲಕಾಲಕ್ಕೆ ಆಗಬೇಕಾದ್ದೆಲ್ಲ ಆಗತೊಡಗಿದೆ. ಒಂದೇ ಒಂದು ಕಸಿವಿಸಿಯ (ರಾಜಕೀಯ ಪಕ್ಷಗಳಿಗೆ) ಸಂಗತಿ ಎಂದರೆ ಈ ಬಾರಿ ಓಡೋಮೀಟರ್ 6-8 ತಿಂಗಳ ಮೊದಲೇ ತಿರುಗಲಾರಂಭಿಸಿದೆ. ಅಷ್ಟರ ಮಟ್ಟಿಗೆ ಅವರ ಖರ್ಚಿನ ಬಾಬ್ತು ಈ ಬಾರಿ ಹೆಚ್ಚಾಗಲಿದೆ.
ಸಾಮಾನ್ಯವಾಗಿ, ಒಂದರಿಂದ ಒಂದೂವರೆ ವರ್ಷ ಮೊದಲು ಚುನಾವಣಾ ರನ್ ಅಪ್ ಸುರುವಾಗುವುದು ಸಂಪ್ರದಾಯ. ಕಳಚಿ ಅಟ್ಟಕ್ಕೆ ಹಾಕಿದ ನಾಲಗೆ ಹತ್ಯಾರಿಗೆ ಅಂಡಗರ್ಚನ ಎಲೆ (ನಮ್ಮ ಕುಂದಾಪುರ ಕಡೆ) ತಿಕ್ಕಿ ಹರಿತಗೊಳಿಸಿಕೊಳ್ಳುವುದು, ಎದ್ರಿಯವರ ಸಡಿಲು ಭಾಗಗಳನ್ನೆಲ್ಲ ಗುರುತಿಸಿ, ಅದರ ಆಳ, ದಪ್ಪ, ಉದ್ದ-ಅಗಲಗಳನ್ನು ಅಳೆದಿಡುವುದು, ತೆರೆಯಬೇಕಾದ ದುಡ್ಡಿನ ಟ್ಯಾಪಿನ ಪ್ರಮಾಣ ಗಾತ್ರಗಳನ್ನೆಲ್ಲ ಲೆಕ್ಕ ಹಾಕಿ, ಅದಕ್ಕೆ ಪ್ಲಂಬರುಗಳನ್ನೂ – ಸಪ್ಲಯರ್ ಗಳನ್ನೂ ಗುರುತಿಸಿಡುವುದು,
ಮಾಧ್ಯಮದ ಕುಸ್ತಿ ಕಣದ ಸಾಮು, ಪಟ್ಟುಗಳಿಗೆಲ್ಲ ಬುಕ್ಕಿಂಗು – ಫಿಕ್ಸಿಂಗು… ಎಲ್ಲ ಮೊದಲ ಆರು ತಿಂಗಳಲ್ಲಿ ಸುಸೂತ್ರವಾಗಿ ನಡೆದರೆ, ಕೊನೆಯ ಒಂದು ವರ್ಷ ಆಳುವವರಿಗೆ ಉಳಿಯುವ ಹೋರಾಟ – ಎದ್ರಿಯವರಿಗೆ ಕಸಿಯುವ ಹೋರಾಟ. ಇದು ಕರ್ನಾಟಕದ ಇತ್ತೀಚಿನ ರಾಜಕೀಯ ಚರಿತ್ರೆ. ವರ್ಷದಿಂದ ವರ್ಷಕ್ಕೆ ಈ ಪ್ರೋಸೆಸ್ಸಿನ ಆಳ, ಅಗಲ ಹೆಚ್ಚಾಗಿರಬಹುದೇ ಹೊರತು ವಿಧಾನ ಬದಲಾಗಿಲ್ಲ.
ಈ ಬಾರಿ ಸ್ವಲ್ಪ ದೊಡ್ಡ (ಅಂದರೆ 22-23 ತಿಂಗಳ) ರನ್ ಅಪ್ ಆರಂಭಗೊಂಡಾಗಿದೆ. ಅಯಾಚಿತವಾಗಿ ಯಾತ್ರೆಗೊಂದು, ಜಾತ್ರೆಗೊಂದು, ಚೀರಲೊಂದು, ಕೀರಲೊಂದು ಸಂಗತಿಗಳು ವಿರೋಧಪಕ್ಷಗಳಿಗೆ ಸಿಕ್ಕಿಯಾಗಿದೆ. ಆಳುವ ಪಕ್ಷಗಳೂ ಅದಕ್ಕೆಲ್ಲ ತಮ್ಮ ಪ್ರತ್ಯಸ್ತ್ರಗಳನ್ನ ಮಸೆಯಲಾರಂಭಿಸಿ ಆಗಿದೆ.
ಇನ್ನೂ ಇದೇ ಬೇಕಾ?
ಎಸ್ ಎಂ ಕೃಷ್ಣ ಸಿಂಗಾಪುರ ಎಂದು ಕನವರಿಸಿ ಹಾರಿಹೋದ ಮೇಲೆ, ಈವತ್ತಿನ ತನಕ ಕರ್ನಾಟಕದಲ್ಲಿ ಅಭಿವೃದ್ಧಿಯ (ಹಾಗಂದ್ರೇನು? ಎಂದರೆ ಅದು ಇನ್ನೊಂದೇ ಹರಿಕಥೆ), ಜನರ ಬದುಕನ್ನು ಸಹನೀಯಗೊಳಿಸುವ ಚುನಾವಣಾ ಮುದ್ದೆ ಬಂದದ್ದಿಲ್ಲ. ನಮ್ಮ ರೈತರ ನೆಲ, ನೀರು, ಬೆಳೆ, ಬೆಲೆಗಳ ಸಂಗತಿ, ಅವರ ಸಾಲ-ಆತ್ಮಹತ್ಯೆ, ಜನ ಕುಡಿಯುವ ನೀರು – ಉಣ್ಣುವ ಅನ್ನದ ಬೆಲೆ, ತಲೆಯ ಮೇಲೆ ಸೂರು, ಮಾಡಲೊಂದು ಉದ್ಯೋಗ, ನಿಶ್ಚಿಂತೆಯ ಬದುಕು… ಕ್ಲೀಷೆ ಆಗಿ ಕೂತಿದೆ. ಚುನಾವಣೆಗೆ ಚರ್ಚೆ ಆಗಬೇಕಾದ ಸೊಲ್ಲುಗಳನ್ನ ಎತ್ತಿಕೊಟ್ಟು ಝಂಪೆತಾಳ ತಟ್ಟಬೇಕಾಗಿದ್ದ ಮಾಧ್ಯಮಗಳು ತಾವೇ ಸ್ವತಃ ಕತ್ತಿ ಚೂರಿ ಹಿರಿದಿದ್ದಾರೆ ಅಥವಾ ರಾಜಕೀಯದ ಗನ್ನುಗಳಿಂದ ಗುಂಡು ಹಾರಲು ತಮ್ಮ ಹೆಗಲಿನ ಊತ ಕೊಟ್ಟು ಕುಳಿತಿದ್ದಾರೆ.
ತಮಾಷೆ ಎಂದರೆ, ಗ್ರೌಂಡ್ ಝೀರೋದಲ್ಲಿ ಈಗೀಗ ಪ್ರತೀ ಬಾರಿ, ತಮ್ಮ ತಮ್ಮ ಪಕ್ಷಗಳ ವ್ಯಾಯಾಮಶಾಲೆಯಲ್ಲಿ ವರ್ಷಾನುಗಟ್ಟಲೆಯಿಂದ ಸಾಮು ಹೊಡೆಯುತ್ತಿರುವ ರಾಜಕೀಯ ಏಣ್ಯಾಸಕ್ತ (ಏಣಿಯಲ್ಲಿ+ ಆಸಕ್ತ) ಕಾರ್ಯಕರ್ತರು ತಮ್ಮ ಕಸರತ್ತು ಕೊನೆಯ ಹಂತಕ್ಕೆ ಬಂದು ಇನ್ನೇನು ಫಲಕೊಡಲಿದೆ ಎಂದುಕೊಳ್ಳುತ್ತಿರುವಾಗಲೇ ಎಲ್ಲಿಂದಲೋ ಹಾರಿಬಂದು ದುಡ್ಡೆರಚಿ ಸೀಟು ಕಿತ್ತುಕೊಂಡು ಹೋಗುವ “ಗೆಲ್ಲುವ ಗಿಡುಗಗಳು” ಆ ಸೀಟು ಹತ್ತಿ ಕುಳಿತುಬಿಟ್ಟಿರುತ್ತವೆ. ನಮ್ಮ ಈವತ್ತಿನ ಬದುಕು ಇಷ್ಟೊಂದು ಹದಗೆಟ್ಟಿರುವುದಕ್ಕೆ ಈ ಗೆಲ್ಲುವ ಗಿಡುಗಗಳೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಜಾತಿ ಒಲ್ಲದ; ದುಡ್ಡಿಲ್ಲದ; ಸೇವೆ ಆಧರಿತ ರಾಜಕೀಯವನ್ನು ಮತ್ತೆ ಕಟ್ಟುವುದು – ಮಾಡಿದ ಕೆಲಸ ತೋರಿಸಿ ಚುನಾವಣೆ ಗೆಲ್ಲುವುದು ಇನ್ನು ಬರೇ ಕನಸಾ…




0 Comments