ತಂದ ದಾರಿಯ ಬುತ್ತಿ : ಕೆ.ಪಿ.ಮೃತ್ಯುಂಜಯ ಅವರ ಕಾವ್ಯ
ಡಾ. ಸುರೇಶ ನಾಗಲಮಡಿಕೆ

ಕೆ.ಪಿ ಯವರ ಕಾವ್ಯವನ್ನು ಓದುವಾಗ ಮನುಷ್ಯನ ಸ್ವ ನೆಲೆಗಳು ಮತ್ತೆ ಮತ್ತೆ ನೆನಪಾಗುತ್ತವೆ.
ಈ ನಿಟ್ಟಿನಲ್ಲಿ ಇವರದು ಅಪ್ಪಟ ಮನುಷ್ಯ ಕಾವ್ಯವೆನ್ನಬಹುದು.
ಆಧುನಿಕ ಕನ್ನಡ ಕಾವ್ಯದ ತಾತ್ವಿಕ ನೆಲೆಗಳನ್ನು ವ್ಯಾಖ್ಯಾನಿಸುವಾಗ ವಸಾಹತೋತ್ತರ ಪರಿಕಲ್ಪನೆಗಳ ಭರಾಟೆಗಳ ನಂತರವೂ ಈ ನೆಲದ ಬದುಕಿನ ಆಶಯಗಳನ್ನು ಕುರಿತು ಕನ್ನಡ ಕಾವ್ಯ ವಿಮರ್ಶೆ ಚರ್ಚೆ ಮಾಡಿತು. ಡಿ.ಆರ್.ನಾಗರಾಜ, ಕುರ್ತಕೋಟಿ, ಪುಣೇಕರ, ಎಚ್.ಎಸ್.ಆರ್. ಮುಂತಾದವರು ತಮ್ಮ ಕಾವ್ಯದ ವಿಮರ್ಶೆಗಳ ಮತ್ತು ಪರಿಕರಗಳ ಬೆನ್ನಲ್ಲಿ ಸ್ವಂತೀಕರಣಕ್ಕೆ ಹಾತೊರೆದಿದ್ದು ಕಾಣಬಹುದು. ಅದರಲ್ಲೂ ಡಿ.ಆರ್ ಅವರ ‘ಶಕ್ತಿ ಶಾರದೆಯ ಮೇಳ’ ಭೂಮಿ, ಕಾಲ, ಕಾಮ, ಸಮಾಜಗಳೆಂಬ ವಸ್ತುಗಳನ್ನು ಬಳಸಿಕೊಂಡು ಆಧುನಿಕ ಕನ್ನಡ ಕಾವ್ಯವನ್ನು ಪರಿಶೀಲಿಸಿದ್ದು ಚಾರಿತ್ರಿಕ ಸಂಗತಿ.
ಹೀಗೆ ಚರ್ಚೆ ಮಾಡುವಾಗ ಅವರು ಭಾರತೀಯ ಪರಂಪರೆಯ ನೆಲೆಗಳನ್ನು ನಿರಾಕರಿಸುವುದಿಲ್ಲ. ಈ ಅಧ್ಯಯನದಲ್ಲಿ ವಸ್ತುಗಳೇ ತಾತ್ವಿಕತೆ ಗಳಾಗಿ ರೂಪಾಂತರ ಗೊಂಡಿದ್ದು ಉಂಟು. ಎಷ್ಟೋ ಸಾರಿ ಹೊರಗಿನ ಒತ್ತಡಗಳ ತಾತ್ವಿಕತೆಗಳು ಕವಿಯ ಬದುಕನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಭಾರತದಂತಹ ರಾಷ್ಟ್ರಗಳಲ್ಲಿ ಅಧ್ಯಾತ್ಮ ಮತ್ತು ಆನುಭಾವಿಕ ನೆಲೆಗಳು ಸದಾ ಬೆನ್ನಿಗೆ ಇರುತ್ತವೆ.
ಆಧುನಿಕ ಕನ್ನಡ ಕಾವ್ಯ ಪಶ್ಚಿಮದ ಯಥಾವತ್ತಾದ ಅನುಕರಣೆಯಿಂದ ತಪ್ಪಿಸಿಕೊಳ್ಳಲು ಈ ಸಾಧನಗಳೇ ಮಾರ್ಗಗಳಾದವು ಎನ್ನಬಹುದು. ಹೊಸ ತಲೆಮಾರಿನ ಕಾವ್ಯವನ್ನು ವ್ಯಾಖ್ಯಾಸುವಾಗ ಡಿ.ಆರ್ ಅವರು ಆಯ್ಕೆ ಮಾಡಿಕೊಂಡ ವಸ್ತುಗಳು ಬೇರೆ ವೇಷಗಳನ್ನು ಪಡೆದುಕೊಂಡಿವೆ. ಅವೇ ಪ್ರಧಾನವಾಗಿಯೂ ಕಂಡುಬರಲಾರವು. ಇದು ಈ ಕಾಲಮಾನದ ಕಾವ್ಯದ ಲಕ್ಷಣವೂ ಹೌದು. ಇದನ್ನು ಒಳಗೊಂಡೂ ಕೆ.ಪಿ ಅವರ ಕಾವ್ಯ ಮುಖ್ಯವಾಗುವುದು ಸಾವನ್ನು ಕೇಂದ್ರ ಕಾಳಜಿಯನ್ನಾಗಿ ಹೊಂದಿರುವುದರಿಂದ. ಆದರೆ ಹೀಗೆ ಹೇಳುವಾಗ ಲೋಕವನ್ನು ಗ್ರಹಿಸುವುದಕ್ಕೆ ಸಾವು ಇವರಿಗೆ ಮುಖ್ಯ ಪರಿಕರವಾಗಿದೆ.
ಸ್ವಗತವನ್ನು ಕಾವ್ಯವಾಗಿಸುವದಕ್ಕೂ, ಸ್ವ ಬದುಕನ್ನು ಕಾವ್ಯವಾಗಿಸುದಕ್ಕೂ ಭಿನ್ನತೆಗಳಿವೆ. ಸ್ವಗತಕಾವ್ಯ ಕೆಲವೊಮ್ಮೆ ಆಂತರಿಕಗೊಂಡು ಲೋಕವನ್ನು ಹೆಚ್ಚು ತೆರದಿಡದೇ ಹೋಗಬಹುದು. ಆದರೆ ಸ್ವ ಬದುಕಿನ ಕಾವ್ಯ ನೇರವಾಗಿ ಲೋಕದೊಂದಿಗೆ ಸಂವಾದ ನಡೆಸಬಲ್ಲದು. ವಚನಕಾರರು ಮತ್ತು ಕೆಲ ಕೀರ್ತ ಕವಿಗಳ ನಂತರ ಆಧುನಿಕ ಕಾಲದಲ್ಲಿ ಬೇಂದ್ರೆ, ಮಧುರಚೆನ್ನ, ಚಿತ್ತಾಲ ಮುಂತಾದವರನ್ನು ಹೆಸರಿಸಬಹುದು. ಕೆ.ಪಿ.ಯವರ ಇದುವರೆಗಿನ ಕಾವ್ಯವನ್ನು ಓದಿದಾಗ ಮೇಲಿನ ಪರಂಪರೆಯನ್ನು ತಾತ್ವಿಕವಾಗಿ ಮುಂದುವರೆಸುತ್ತಿದ್ದಾರೆ ಎನಿಸುತ್ತದೆ.ಈ ಹಾದಿಯಲ್ಲಿ ಸ್ವಗತವನ್ನು ಧಾಟಿಕೊಂಡಂತೆ ಇವರದು ಸ್ವ ಬದುಕನ್ನು ಧೇನಿಸುವ ಕವಿತೆಯಾಗಿದೆ.
ಸಾವು ಇವರಿಗೆ ದು:ಖದ ನಡುಗಡ್ಡೆ ಯಲ್ಲ ಬದಲಿಗೆ ಲೋಕವನ್ನು ಅರ್ಥೈಸಿಕೊಳ್ಳುವ, ಬದುಕನ್ನು ಕಂಡುಕೊಳ್ಳುವ ಸೇತುವೆಯಾಗಿದೆ.ಚಿತ್ತಾಲರು ಈ ಯಾನವನ್ನು ತಂದ ದಾರಿಯ ಬುತ್ತಿ ಎಂದು ಕರೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಸಾವನ್ನು ಶೋಧನೆಯ ಹಂತಕ್ಕೆ ಹೊಯ್ದದ್ದು ಕಥನದಲ್ಲಿ ಯಶವಂತ ಚಿತ್ತಾಲ ಮತ್ತು ಕಾವ್ಯದಲ್ಲಿ ಗಂಗಾಧರಚಿತ್ತಾಲರೆನ್ನಬಹುದು. ಹೊಸ ತಲೆಮಾರಿನಲ್ಲಿ ಮೃತ್ಯುಂಜಯರನ್ನು ಹೆಸರಿಸಲು ಅಡ್ಡಿಯಿಲ್ಲ.ಆದರೆ ಸಾವಿಗೆ ತಕ್ಕ ಪ್ರತಿಮೆಗಳನ್ನು ರೂಪಕಗಳನ್ನು ಗಟ್ಟಿಯಾಗಿ ರೂಪಿಸಲು ಇವರು ಇನ್ನೂ ಸಾಕಷ್ಟು ಮಾಗಬಹುದು. ಈಚಿಗಿನ ಸಂಕಲನ ‘ನನ್ನ ಶಬ್ದ ನಿನ್ನಲಿ ಬಂದು’ ದಲ್ಲಿ ಆ ಯತ್ನವಿದೆ.
ಆರಂಭದಿಂದ ಇವರು ಸಹಜ ಲಯಗಳನ್ನು ರೂಪಿಸಿಕೊಂಡಿದ್ದಾರೆ. ಈ ಹಲ ಬಗೆಯ ಸಹಜ ಲಯಗಳು ಸಾಮಾನ್ಯವಾಗಿ ಇಂದ್ರೀಯ ವಿಚಾರಗಳ ಮತ್ತು ಅವುಗಳ ಪಲ್ಲಟಗಳನ್ನು ಅನಾವರಣ ಮಾಡಲು ಸಹಾಯಕ ವಾಗಬಹುದು. ಇವುಗಳಿಗೆ ತಕ್ಕುದಾಗಿ ಕೆ.ಪಿ.ಯವರು ರೂಢಿಸಿಕೊಂಡಿರುವ ಗದ್ಯವು ಕವಿತೆಯ ಒಳಗನ್ನು ಕೆಡಿಸುವುದಿಲ್ಲ. ಆದರೆ ಅವರ ‘ಎಲೆ ಎಸೆದ ಮರ’ ದ ಹಲವು ಪದ್ಯಗಳು ಹೇಳಿಕೆಯ ಗುಣವನ್ನು ಪಡೆದುಕೊಂಡಿವೆ.
ಒಳ ಬದುಕಿನ ಚರಿತೆಯನ್ನು ನಿರ್ಮಿಸುವಾಗ ಕವಿತೆ ಹಲವು ಕಡೆ ಹೇಳಿಕೆಯ ಗುಣವನ್ನು ಹೊಂದಿ ಸಾಮಾನ್ಯವೂ ಆಗಬಹುದು.ಆದರೆ ಮಧುರಚೆನ್ನರಂಥ ಕವಿಗಳು ಪರಂಪರೆಯ ಸತ್ವವನ್ನು ಹೀರಿಕೊಂಡು ಇದನ್ನು ಮೀರಿದ್ದರು. ಒಳಬಾಳಿನ ಕಥನಕ್ಕೆ ಅವರು ತುಂಬುವ ರೂಪಕಶಕ್ತಿ ಬೆರಗುಗೊಳಿಸುತ್ತದೆ. ಈ ಹಿನ್ನಲೆಯಲ್ಲಿ ಅವರನ್ನು ‘ವ್ಯಾಕುಲ ಸಾಧಕ’ ರೆಂದು ಎಚ್.ಎಸ್.ಆರ್. ಕರೆದಿರುವುದು ಸರಿಯಿದೆ.
ವ್ಯಾಕುಲತೆ, ನಿಸರ್ಗ, ಬದುಕು,ಹೆಣ್ಣು, ಒಲುಮೆ ಇವುಗಳ ಮುಖಾಮುಖಿ ಕೆ.ಪಿ.ಯವರ ಕಾವ್ಯವನ್ನು ಆವರಿಸಿದೆ. ಆರಂಭದ ಕವಿತೆಗಳು ಸಮಾಜ ಮತ್ತು ಮನಸ್ಸನ್ನು ಎದುರುಗೊಳ್ಳುವ ಮುಖ್ಯನೆಲೆಗಳಾದರೂ, ನಂತರದ ಸ್ಥಿತಿಯಲ್ಲಿ ಅಯ್ಯನ ಸಾವಿನನಂತರ ಬದುಕನ್ನು ಕಾಡಿದ ವಿಚಾರಗಳಿಗೆ ಹೆಚ್ಚು ತೆರೆದುಕೊಳ್ಳುತ್ತವೆ.ಕಾವ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಒಳನುಗ್ಗುವ ಮನಸ್ಸಿನ ತಲ್ಲಣಗಳು ಆತನ ಇರುವಿಕೆಯ ಚಿಂತನಾಕ್ರಮದಿಂದ ಬೇರೆಯಾಗಿ ಕಾಣುತ್ತದೆ.
ಈ ದಾರಿಯಲ್ಲಿ ಇವರು ದೊಡ್ಡ ಮಟ್ಟದ ಸಮಾಜ ಕೇಂದ್ರದಿಂದ ಹೊರಡುವ ಕವಿಯಾಗದೇ ಅನುಭವ ಕೇಂದ್ರದಿಂದ ಸಮಾಜಕ್ಕೆ ಜಿಗಿಯುವ ಕವಿ. ಸಾಮಾಜಿಕ ಕವಿ ರಾಜಕೀಯವಾಗಿ,ವೈಚಾರಿಕವಾಗಿ ಹೆಚ್ಚು ಪ್ರಾಮಾಣಿಕನಾಗುವ ತುರ್ತು ಇರುತ್ತದೆ. ಮತ್ತು ಅಷ್ಟೇ ಭ್ರಮನಿರಸನವಾಗುವ ಅಪಾಯವೂ ಇರುತ್ತದೆ. ಕೆ.ಪಿ.ಯವರು ಈ ಬಗೆಯ ತಾತ್ವಿಕ ನಿಲುವುಗಳನ್ನು ಅರಿತಿದ್ದಾರೆ. ಪ್ರೇಮ ಮತ್ತು ಸಾವು ಇವರ ಕಾವ್ಯವನ್ನು ಸಾಕಷ್ಟು ಆವರಿಸಿದೆ. ಅಂತಿಮವಾಗಿ ಅವೇ ಇವರ ಕಾವ್ಯದ ತತ್ವಗಳಾಗಿ ಕಾಡಬಲ್ಲವು. ಪ್ರೇಮವನ್ನು ಮನುಷ್ಯನ ಅಂತರಂಗದ ತಂತು ಎಂದು ಭಾವಿಸುವ ಅನೇಕ ಮಂದಿ ಆಗಿಹೋಗಿದ್ದಾರೆ.
ಮನುಷ್ಯ ತನ್ನ ಮನಸ್ಸಿನ ಒಳತೋಟಿಯಿಂದ ಪ್ರಕಟಪಡಿಸುವ ಹಲವು ಭಾವನೆಗಳು ಅವನನ್ನು ಏನು ಬೇಕಾದರೂ ಮಾಡಬಲ್ಲವು. ಬುದ್ಧನ ತತ್ವಜ್ಞಾನವು ಈ ಕ್ರಮವನ್ನು ಸರಿಯಾಗಿ ವಿವರಿಸಿದೆ. ಬುದ್ಧನಿಗೆ ಸಾವು ದು:ಖ ಎಂಬುದ ಕ್ಕಿಂತ ಅದನ್ನೊಂದು ಅರಿವು ಎಂದು ಭಾವಿಸುವಲ್ಲಿ ಹೆಚ್ಚು ಆಸಕ್ತಿತೋರಿಸುತ್ತಾನೆ.
‘ನಾನು ನಿನಗಾಗಿ ಬಿಕ್ಕಿ ಬಿಕ್ಕಿ ಅತ್ತ ದಿನ ಭಯಂಕರ ಹಗಲು
ಒಂದು ಶುದ್ಧ ಅಳು ಮಾತ್ರ
ಪರಿಶುದ್ಧ ಪ್ರೇಮವನ್ನು ಪ್ರಕಟಿಸಬಲ್ಲದು
ಹೂವಿನ ಇಬ್ಬನಿ ಥರ.
ಸಂಶಯಪೂರಿತ ಮನಸ್ಸು ಎಲ್ಲವನ್ನೂ ಸಿಗಿದು ನೋಡುವುದು
ಒಂದು ಶುದ್ಧ ಅಳು ಮಾತ್ರ
ಮೌನದಲಿ ಸತ್ಯವನು ಸುರಿಸುತ್ತದೆ
ಯಾರಿಗೂ ಗೊತ್ತಾಗದಂತೆ ಪಯರಿನ ಇಬ್ಬನಿ ಥರ.’ ( ಒಂದು ಅನುರಾಗಕ್ಕಾಗಿ ಎಷ್ಟೆಲ್ಲ)
ತಂದೆಯ ಸಾವಿನ ನಂತರ ಹುಟ್ಟಿಕೊಳ್ಳುವ ಈ ಬಗೆಯ ನಿಲುವು ಮನುಷ್ಯನ ನಿಜ ಅತಃ ಸತ್ವವನ್ನು ಹೊರಗೆಡಹಬಲ್ಲದು. ಪ್ರೇಮವೂ ವ್ಯಕ್ತಗೊಳ್ಳವ ಪರಿ ಇವರ ಕಾವ್ಯ ವಹಿಸುವ ಮುಖ್ಯ ಕಾಳಜಿಗಳಲ್ಲಿ ಒಂದು. ಪ್ರೇಮವನ್ನು ಈಚಿನ ಪದ್ಯಗಳ ತನಕ ಅವರ ಕಾವ್ಯ ಗಂಡು-ಹೆಣ್ಣಿನ ಸಂವಾದರೂಪದಲ್ಲೂ ಬಳಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರದು ಅಪ್ಪಟ ಮನುಷ್ಯ ಕಾವ್ಯ. ಮನುಷ್ಯನ ಏಕಾಂತವನ್ನು ಗಾಢವಾಗಿ ಆಲೋಚಿಸುವ ಕೆಲ ಪದ್ಯಗಳನ್ನು ಕೆ.ಪಿ.ಯವರು ನೀಡಿದ್ದಾರೆ. ಬದುಕುವ ಹುಚ್ಚನ್ನು ಪ್ರೇಮ ಉದ್ದೀಪಿಸಬಲ್ಲದು. ಆ ಬಗೆಯ ತಂತು ಸಾವಿನ ಭಯವನ್ನು ಸ್ವಲ್ಪಮಟ್ಟಿಗಾದರೂ ದೂರ ಎಳೆಯಬಲ್ಲದು.
‘ಕಂಗೆಡಿಸುವ ಮೌನವನು ಧ್ವಂಸಗೊಳಿಸುವ ಏಕಾಂಗಿತನವನು
ಕಣ್ತುಂಬದ ನಿದ್ರೆಯನು ಬಲ್ಲೆಯ ಗೆಳತಿ?
ಸಾವಿನ ಗಳಿಗೆಗಳನ್ನು ಗುಳಿಗೆಗಳೆಂಬಂತೆ ನುಂಗಿ
ಮುಗಳ್ನಗಿಸುವ ಬೆಳಗಿನ ಬಿಸಿಲಿನಂಥ ಹಚ್ಚನೆಯ ಪ್ರೀತಿ.’ ( ಒಂದು ಅನುರಾಗಕ್ಕಾಗಿ ಎಷ್ಟೆಲ್ಲ)
ತತ್ವಶಾಸ್ತ್ರದಲ್ಲಿ ಆತ್ಮ, ಜೀವಗಳನ್ನು ಬಳಸಿಕೊಂಡು ವಾಗ್ವಾದ ಬೆಳಸುವ ಪರಿಪಾಠ ನಮ್ಮಲ್ಲಿದೆ. ಮನುಷ್ಯ ಚರಿತೆಯನ್ನು ಮುಂದಿಟ್ಟುಕೊಂಡು ಚರ್ಚೆಮಾಡಿರುವ ದಾರಿಗಳು ಇವೆ.ಇಲ್ಲಿ ಮನುಷ್ಯನ ದುಗುಡ,ಸಾವು, ಸುಖ, ಸ್ವಾರ್ಥ,ಅರಿವು ಮುಂತಾದ ದಿನ ನಿತ್ಯದ ದಂದು ಗಗಳು ಪ್ರವೇಶ ಪಡೆದುಕೊಳ್ಳುತ್ತವೆ. ಬುದ್ಧ ಮತ್ತು ಪಶ್ಚಿಮದ ಕೆಲವು ತಾತ್ವಿಕ ಧಾರೆಗಳು ಈ ಹಾದಿಯಲ್ಲಿದ್ದವು.ಹಾಗಾಗಿಯೇ ಸಾವು ಲೋಕವನ್ನು ಅರ್ಥಮಾಡಿಕೊಳ್ಳುವ ಬಗೆಯಲ್ಲಿ ಹಲವು ಗುರುತುಗಳನ್ನು ಮನುಷ್ಯನಿಗೆ ನೀಡಬಲ್ಲದು. ಇವರ ಕಾವ್ಯವು ಸಾವನ್ನು ಸ್ವಾರ್ಥದ ಮಟ್ಟಕ್ಕೇ ಏಕೆ ಏರಿಸುವುದಿಲ್ಲ ಎಂಬುದಕ್ಕೆ ಹಲವು ಕಾರಣಗಳಿವೆ. ತಂದೆಯಂಥ ಅತಿ ಆಪ್ತರನ್ನು ಕಳೆದುಕೊಂಡ ಕ್ಷಣ ಬದುಕು ಕಾಣುವ ಬಗೆ: ಲೋಕ ಕಾಣುವ ಬಗೆ: ನಿಸರ್ಗ ನೀಡುವ ಎಚ್ಚರ ಎಲ್ಲವನ್ನು ಇವರ ಕವಿತೆ ಎದುರುಗೊಂಡಿದೆ.
‘ಘಟ ಹೋಗುವ ಸುಳಿವು
ಉತ್ತರಮುಖಿಯ ಬಿಳುಪು
ಧೂಳು
ಹುಟ್ಟಿದೂರೇ ಕಟ್ಟಕಡೆಗೆ
ಕೊಲ್ಲುವ ಹಾಗೆ
ರಕ್ತ ಚೆಲ್ಲುವ ಹಾಗೆ
ಹೇಳಿದರೆ
ನನ್ನ ಇನ್ನೊಂದು ಮಾತಿಲ್ಲ
ಪ್ರೀತಿಯಲಿ ಕಂಬಚ್ಚಲಿ
ನುಲಿಯುವ
ಕೈಗಳಾದರೆ
ಮೊದಲು ಮುರಿದೇ ಅವನು
ಸಾಯುವನು.’ (ಮತ್ರ್ಯ ಮೀರದ ಮಾತು)
ಒಬ್ಬ ವ್ಯಕ್ತಿಯ ಸಾವು ಮತ್ತೊಬ್ಬ ವ್ಯಕ್ತಿಯ ಬದುಕಿನ ಆಯಾಮಗಳನ್ನು ಸ್ಥಿತ್ಯಂತರಗೊಳಿಸಬಲ್ಲದು ಎಂಬುದಕ್ಕೆ ಇವರ ಕವಿತೆಗಳಲ್ಲಿ ಹಲ ಬಗೆಯ ವಿವರಗಳಿವೆ. ಸಾವು ದು:ಖವನ್ನು ಏರಿಸಬಲ್ಲದು; ಪಲಾಯನವಾದಿಯನ್ನಾಗಿ ಮಾಡಲೂಬಹುದು. ನಮ್ಮ ಒಳಬಾಳನ್ನು ಕತ್ತಲಮಯವಾಗಿ ಮಾಡಲು ಯತ್ನಿಸಬಹುದು.ಆದರೆ ಅದೇ ಸಾವು ನೆನಪುಗಳ ಬೆನ್ನಲ್ಲಿ ಉತ್ಸಾಹಗಳನ್ನು ಉದ್ದೀಪಸಬಲ್ಲದು. ಸಾವು ಮತ್ತು ನೆನಪುಗಳು ಪರಸ್ಪರ ಸಂಯೋಜನೆಯಿಂದ ಉಳಿದಿರುವ ವ್ಯಕ್ತಿಗಳನ್ನು ಹೇಗೆ ಉಳಿಸಬಲ್ಲದು ಎಂಬುದನ್ನು ಇವರ ಕಾವ್ಯ ಅನುಭವಕ್ಕೆ ತಂದುಕೊಂಡಿದೆ. ಸಾವಿನ ಅನುಭವವನ್ನು ನಿತ್ಯದ ದಂದು ಗವಾಗಿ ಇವರಲ್ಲಿ ಕಾಣಬಹುದು. ಬಹುತೇಕ ಕೆ.ಪಿ.ಯವರು ಸಾವನ್ನು ವೈಚಾರಿಕತೆಯ ಚೌಕಟ್ಟಿನಲ್ಲಿ ತರವುದಿಲ್ಲ ಬದಲಿಗೆ ವೈಯಕ್ತಿಕ ಮುಗ್ಧತನದಿಂದ ಚಿಂತಿಸಬಲ್ಲರು.
‘ಯಾವುದದು ಕೊನೆತನಕ ಕೆನೆದು ಕಾಡಿಸಿದ್ದು?
ಯಾವುದದು- ಭಯವೇ ಭೀಕರವೇ?
ದಿವ್ಯವೇ ದೈವಿಕವೇ?
ಸಾವಿಲ್ಲದ ಕವಿತೆಯೇ ಅಥವಾ ಸಾವಿನ ಕವಿತೆಯ ಸಾಲೇ?’ (ಎಲೆ ಎಸೆದ ಮರ)
‘ಮನುಷ್ಯ ಕಟ್ಟ ಕಡೆಗೆ ಸೇರಬೇಕಾದ
ದಡ-ದು:ಖ ಮಾತ್ರವೇ;
ಒಮ್ಮೊಮ್ಮೆ ಅದನು ಸುಖವೆನ್ನುವುದು ಲೋಕ’ (ಅವರವರ ಸಾವು)
ಈ ಬಗೆಯ ಆಲೋಚನೆಯನ್ನು ಅನುಭವಗಳ ಬೆನ್ನಲ್ಲಿ ಕಂಡುಕೊಳ್ಳುತ್ತಾರೆ. ಇವರದು ಕೆಲವೊಮ್ಮೆ ಹೆಚ್ಚು ಆತ್ಮಕಥನಾತ್ಮಕ ಕಾವ್ಯವಾಗಿಯೂ ಕಾಣುತ್ತದೆ. ಎಲೆ ಎಸೆದ ಮರ ಸಂಕಲನದ ಬಹುತೇಕ ಪದ್ಯಗಳು ಇದನ್ನೇ ಹೇಳುತ್ತವೆ. ಹಾಗಾಗಿಯೇ ಇವುಗಳಲ್ಲಿ ಕಥನದ ವಿವರಗಳು ಹೆಚ್ಚಾಗಿವೆ. ಸಾವಿನ ಬಗೆಗಿನ ಚಿತ್ರಗಳು ಕೆಲವು ಕಡೆ ದಟ್ಟವಾಗಿ ಗೋಚರಿಸುತ್ತವೆ ಯಾದರೂ ಅವುಗಳು ಕಾವ್ಯಗುಣದಿಂದ ತಪ್ಪಿಸಿಕೊಂಡಿವೆ. ಇಲ್ಲದ ಅಪ್ಪನ ಬದುಕನ್ನು ನೆನಪಿಸಿಕೊಂಡು ಇದ್ದರೂ ಇಲ್ಲದಂತೆ ಇರುವ ಸ್ವ ಜಗತ್ತನ್ನು ಕಾಣುವ ಬಗೆಇದರಲ್ಲಿದೆ. ಅಪ್ಪನ ಕಥನವೆಂದರೆ ಅದು ‘ಅಳಿದು ಉಳಿಯುವ ಕನಸು’ ಅಪ್ಪನ ನಂತರದ ಕಥನವೆಂದರೆ ‘ಉಳಿದು ಅಳಿಯುವ ಕನಸು’. ಅದು ಯಾವ ಬಗೆಯದು ಎಂದರೆ ನಿಸರ್ಗ ಮತ್ತು ತಂದೆಯ ಸಾವಿನ ಅನುಭವಗಳನ್ನು ಏಕೀಭವಿಸುವಂತೆ. ಮೇಲುನೋಟಕ್ಕೆ ಅತೀ ವೈಯಕ್ತಿಕ ಕಾವ್ಯ ಎಂದು ಕಂಡರು ಲೋಕಕ್ಕೆ ದಾಟುವ ಪ್ರಕ್ರಿಯೆ ಇದೆ.
ಬಹುಮಟ್ಟಗೆ ಈ ತರದ ಕವಿತೆ ಒಳಗನ್ನು ಸದಾ ತೆರದು ಕಾಣಿಸುವ ಹಾಗು ಇಂದ್ರೀಯಗಳು ತೆಗೆದುಕೊಳ್ಳುವ ತೀರ್ಮಾನಗಳು ಆಗಿರುತ್ತವೆ. ಇಂಥ ಕಡೆ ಮೂಲಮಾದರಿಗಳು ಸಹಾಯಕ್ಕೆ ಬರಲಾರವು. ಇಲ್ಲಿ ಕಾಣುವ ಮರ, ಎಲೆ, ಮುಂತಾದ ಹಲವು ಹಸಿರು ಪ್ರತಿಮೆಗಳು ತಂದೆಯ ಸಾವಿನ ನಂಟನ್ನು ಪಡೆದಿವೆ. ಕನ್ನಡ ಕಾವ್ಯದ ಹಸಿರು ಪ್ರತಿಮೆಗಳನ್ನು ಮೃಂತ್ಯುಂಜಯ ಮುಂದುವರಿಸುವುದು ಬೇರೆ ಬಗೆಯಲ್ಲಿಯೇ ಎನ್ನಬಹುದು. ಹೊಲದ ಪ್ರತಿಮೆ ಇವರ ಇಡೀ ಕಾವ್ಯವನ್ನು ಆವರಿಸಿದೆ. ಅದು ಮನುಷ್ಯನಿಗೆ ವಯಸ್ಸಾದಂತೆ ಅದರ ನೆನಪು ಕೂಡ ಸ್ಥಿಂತ್ಯಂತರ ಕಂಡಿದೆ. ಅಯ್ಯನ ಸಮಾದಿಯ ಕುರಿತಾಗಿ ಇರುವ ಎರಡು ಕವಿತೆಗಳನ್ನು ನಿದರ್ಶನಕ್ಕೆ ಎತ್ತಿಕೊಂಡರೂ ಮೇಲಿನ ಮಾತುಗಳು ಅರ್ಥವಾಗಬಲ್ಲವು.
‘ಪೂರ್ವ ಪಶ್ಚಿಮಗಳು ನಾನೊಂದು ಕೈ
ತಾನೊಂದು ಕೈ
ಯೆಂದು ಹಾಕಿ ಕೈ ತೆಂಗು ಸಸಿಯನ್ನು
ಹೀಗೆ ಹಿಡಿದೆತ್ತಿ
ಬದುಕು ಬದುಕಿದೆ ಎಂದವು’ (ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು)
ಇದು ‘ಅಯ್ಯನ ಸಮಾಧಿಯ ಮುಂದೆ’ ಎಂಬ ಕವಿತೆಯಿಂದ ತೆಗೆದ ಸಾಲುಗಳು. ‘ಅಯ್ಯನ ಕಾಣದ ಸಮಾಧಿಯ ಮುಂದೆ’ ಕವಿತೆಯು ಹೀಗೆ ಹೇಳುತ್ತದೆ.
‘ಉರಿಯುತ್ತಿದ್ದ ಹೊಲದಲ್ಲಿ
ಕಾಣದ ನಿನ್ನ ಸಮಾಧಿ.
ಕಾಣದ ತೆಂಗು
ತುಂಬೆ ತುಲಸಿ; ಹೊಲವೆಲ್ಲ ಜನಗಳ ಹಾದಿ
ಗುಡಿಸಿ ಗುಂಡಾಂತರವಗಿತ್ತು ನೆನಪು.’ ( ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು)
ಬದುಕು ಬೆಳೆದಂತಲ್ಲ ಕವಿತೆ ಬೇರೆಯಾಗುತ್ತದೆ. ಕವಿ ತಾನು ನಿರ್ಮಿಸಿಕೊಳ್ಳುವ ಪ್ರತಿಮೆಗಳು ಭಿನ್ನವಾಗುತ್ತವೆ. ಅರ್ಥಾತ್ ಅವುಗಳನ್ನು ಮುರಿದು ಕಟ್ಟುತ್ತಾನೆ. ಹೀಗಾಗಿಯೇ ಬದುಕು ಮತ್ತು ಕವಿತೆ ಅದ್ವೈತ.
ಒಂದನೆಯ ಕವಿತೆಯಲ್ಲಿ ನಿಸರ್ಗದ ಧ್ಯಾನಸ್ಥಸ್ಥಿತಿ ಎರಡನೇ ಕವಿತೆಯಲ್ಲಿ ಮಾಯವಾಗಿರುವುದಕ್ಕೆ ಹಲವು ಕಾರಣಗಳನ್ನು ಕವಿತೆಯೇ ಅಭಿವ್ಯಕ್ತಿಸುತ್ತಿದೆ ಆದ್ದರಿಂದ ಅದನ್ನು ವಿವರಿಸಬೇಕಿಲ್ಲ. ಸಾವಿನ ಮತ್ತು ನಿಸರ್ಗದ ಪ್ರತಿಮೆಗಳ ಮೂಲಕ ಆಧುನಿಕೋತ್ತರವೆನ್ನಬಹುದಾದ ಚಹರೆಗಳನ್ನು ಹೇಳುತ್ತಿದೆ. ಸಾವನ್ನು ಸಾಮಾಜಿಕ ನೆಲೆಗೆ ತರುವ ಇರಾದೆಯೂ ಇದೆ. ತಾನೆ ಕಟ್ಟಿಕೊಂಡ ರೂಪಕ, ಪ್ರತಿಮೆಗಳನ್ನು ತಾನೆ ಮುರಿದು ಕಟ್ಟುವುದಕ್ಕೆ ಈ ಕವಿ ಹಾತೊರೆಯುವುದು ಕಾವ್ಯದ ಮುಖ್ಯ ಲಕ್ಷಣವೂ ಕೂಡ. ಇಂತ ಕಡೆ ಕವಿಯೊಬ್ಬ ತನ್ನ ತಾತ್ವಿಕತೆಯನ್ನು ನಿಕಷಕ್ಕೊಡ್ಡಿಕೊಳ್ಳುವ ಪ್ರಕ್ರಿಯೇ ಆಗುತ್ತದೆ.
ಸಾವಿನ ಕ್ಷಣಗಳು ಇವರಿಗೆ ಇರುವ ಬದುಕಿನಲ್ಲಿ ವಿಕಾರಗೊಳ್ಳದೇ ಅದರಿಂದ ಹೊರಬರುವ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಸಾಧ್ಯವಾದಷ್ಟೂ ಇದನ್ನು ಮುಂದುವರೆಸುವ ಕೆಲಸವನ್ನು ಕೆ.ಪಿ ಯವರು ಮಾಡಬೇಕು. ಈಚಿನ ಸಂಕಲನದಲ್ಲಿ ಇದರ ಕುರುಹುಗಳನ್ನು ಕಾಣಬಹುದು.ದು:ಖ, ಪ್ರೀತಿ,ಗೆಳತಿಯೊಂದಿಗಿನ ಸಂವಾದದ ಮೂಲಕ ಬದುಕನ್ನು ನೋಡುವುದಕ್ಕೆ ಮುನ್ನೆಲೆಗೆ ಬಂದಿವೆ.ಸಾವು ಮತ್ತು ಪ್ರೀತಿಗಳನ್ನು ಇವರು ಆನುಭಾವಿಕ ನೆಲೆಗಳಲ್ಲಿ, ತತ್ವಶಾಸ್ತ್ರದ ಆಯಾಮಗಳಿಂದ ಎರವಲು ತಂದು ಕೂರಿಸಿದ್ದರೆ ಅಷ್ಟೊಂದು ಪರಿಣಾಮಕಾರಿಯಾಗಿ ತಟ್ಟುತ್ತಿರಲಿಲ್ಲ.ಸ್ವ ಅನುಭವಗಳ ಶೋಧನೆಯ ಚೌಕಟ್ಟುಗಳಿಂದ ಪ್ರವೇಶಗೊಂಡಿದ್ದರಿಂದ ಇವರ ಕಾವ್ಯದ ದನಿ ಹೊಸದಾಗಿ ಕಾಣುತ್ತದೆ.
ಕೆಲವು ಕಡೆ ಈಗಾಗಲೇ ಪ್ರಸ್ತಾಪಿಸಿರುವ ಹಾಗೆ ನಿಸರ್ಗದ ಪ್ರತಿಮೆಗಳನ್ನು ದು:ಖ, ಏಕಾಂಗಿತನ,ಸಾವು, ಕ್ವಚಿತ್ತಾಗಿ ಸಮಾಕಾಲೀನ ಸಂಗತಿಗಳ ಬೆನ್ನಲ್ಲಿ ತರಬಲ್ಲರು. ‘ಎಲೆ ಎಸೆದ ಮರ’ ದಲ್ಲಿ ಈ ಬಗೆಯ ಕವಿತೆಗಳನ್ನು ಕಾಣಬಹುದು.’ಬೇರು ಅಲುಗಾಡಿ/ಬುಡ ಭದ್ರ ಹೋಗಿ/ವೃಕ್ಷ ಮುಂದಕ್ಕೆ ಹಿಂದಕ್ಕೆ/ ತೂಗುತ್ತಿದೆ ಅಕಾಲದಲ್ಲಿ/ ಅದರಲ್ಲಿ ನಾನೊಂದು ಎಳೆ ಎಲೆ/ ಇಲ್ಲಾ ಹೀಚುಗಾಯಿ ಇಲ್ಲಾ ಒಂದು ಇಳಿಬೀಳ್ವ ಬಿಳಲು.’ ಹಲವು ಕಡೆ ಸಾವಿನ ಪ್ರತಿಮೆಗೆ ಉದುರುವ ಎಲೆಯನ್ನು ಇವರು ಬಳಸಿಕೊಳ್ಳುತ್ತಾರೆ. ಉದರಿದ ನಂತರವೂ ಬದುಕು ಮತ್ತು ಮರಗಳ ಸ್ಥಿತಿಯನ್ನು ಏಕೀಭವಿಸಬಲ್ಲರು. ಈ ನಡುವೆ ಚಿಗುರು ಮತ್ತು ಪ್ರೀತಿಯ ಗಟ್ಟಿತನ ಅವರ ಕವಿತೆಯನ್ನು ಬೇರೆಯಾಗಿಸುತ್ತದೆ. ಈ ವಿಚಾರದಲ್ಲಿ ಇವರಲ್ಲಿ ಸಂಪೂರ್ಣ ನವೋದಯದ ಸೌಂದರ್ಯ ಸೃಷ್ಟಿಯ ನಿಸರ್ಗದ ಪ್ರತಿಮೆಗಳನ್ನು ಕಾಣಲಾರವು.
ಹಸಿರು ಪ್ರತಿಮೆಗಳನ್ನು ಈ ನೆಲದ ಜನಪದರು ನಂಬಿದ ನಂಬಿಕೆಗಳ ಹಿನ್ನಲೆಯಲ್ಲಿ ಕಾವ್ಯಾತ್ಮಕಗೊಳಿಸಲು ಯತ್ನಿಸುತ್ತಾರೆ.’ನೋವ ನೆನವಿನ ರಾತ್ರೆ/ ಕುಂತು ಪೂರೈಸಿದೆ/ ಬೇಸಿಗೆಯ ಹುಲ್ಲೆಸಲ ಮೇಲೆ/ಖಂಡುಗ ಇಬ್ಬನಿ.(ಎಲೆ ಎಸೆದ ಮರ) ‘ಮಳೆ ಮರದ ಹೂಗಳ ಮೇಲೆ/ ದುಂಬಿಗಳು ಆಟವಾಡುತಿವೆ/ ಕರಿ-ಬಿಳಿ ಮೋಡಗಳಲ್ಲಿ/ ಅಯ್ಯನ ಕಡೆಯುಸಿರು ತೇಲಾಡಿದಂತೆ.’ (ಅವರವರ ಸಾವು) ಮುಂತಾದ ಗಟ್ಟಿಯಾದ ಪ್ರತಿಮೆಗಳನ್ನು ಬರೆಯಬಲ್ಲರು. ಇಷ್ಟು ಹೇಳಿದರೂ ಅಯ್ಯನ ಸಾವು ಇವರನ್ನು ಬೆನ್ನು ಬಿಡದೆ ಕಾಡುತ್ತದೆ.ಹೆಣ್ಣಿನೊಂದಿಗಿನ ಪ್ರೇಮದ ಬಗೆಗಿನ ಸಂವಾದ ಸಾವಿನ ಆಲೋಚನಕ್ರಮವನ್ನು ಭಿನ್ನಗೊಳಿಸುತ್ತದೆ. ಹೆಣ್ಣಿನ ಪ್ರೀತಿಯನ್ನುಲಘುವಾಗಿ ಕಾಣದ ಇವರ ಕವಿತೆ ಅಲ್ಲಲ್ಲಿ ತೀರಾ ವಾಚ್ಯವನ್ನು ನಂಬಿಕೊಂಡರೂ ಜಿಗಿತವನ್ನು ಕಾಣುತ್ತಾರೆ. ಈ ಕುರಿತು ಅವರ ‘ನನ್ನ ಶಬ್ದ ನಿನ್ನಲಿ ಬಂದು’ ಸಂಕಲನವನ್ನು ಗಮನಿಸಬಹುದು. ಇದರಲ್ಲಿ ಆಶಯ ಮತ್ತು ಆಕೃತಿಯ ದೃಷ್ಟಿಯಿಂದ ಸಾಕಷ್ಟು ಮುಂದೆಹೋಗಿದ್ದಾರೆ ಶಬ್ದಕ್ಕಿರುವ ರೂಪಕಶಕ್ತಿಯನ್ನು ಅರಿತಿದ್ದಾರೆ. ಶಬ್ದವನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಯೋಚಿಸಿದ್ದಾರೆ. ಹೆಚ್ಚು ಸಾವಿನ ಪ್ರತಿಮೆಗಳು ಇದರಲ್ಲಿ ಕಾಣಲಾರೆವು.
ಬದುಕುವ ಪ್ರೇಮವನ್ನು ಅಧಿಕವಾಗಿ ನಂಬುವ ಈ ಶಬ್ದಗಳು ಮಾತಿನ ಗುಣವನ್ನು ಮರೆ ಮಾಚಿವೆ.ಒಂದು ರೀತಿಯಲ್ಲಿ ಕೆ.ಪಿ.ಯವರೇ ಹೇಳುವಂತೆ ಹೊಸ ಭಾಷೆಯಲಿ ಬದುಕು ಬರಹವಾಗುತಿದೆ.’ನಿಜದ ಮೆಳೆ ಬೇಲಿ ಸಾಲಿನ ಮೇಲೆ/ ಬರಿಯ ಹಾಡ ಹೊಳೆ-ನಿನ್ನದೇನೆ!/ ನೀನು ಮಳೆ. ‘ಸುಖದೊಳಗಿನ ದು:ಖವನು/ದು:ಖದೊಳಗಿನ ಸುಖವನು ಬಲ್ಲ ಗೆಳತಿಯೆ, ಈ ಕಾಲದೊಳಗೆ ಏಸೊಂದು ಕಾಲಗಳು’.(ನನ್ನ ಶಬ್ದ ನಿನ್ನಲಿ ಬಂದು) ಸಣ್ಣ ಲಯಗಾರಿಕೆಗೆ ಒಗ್ಗಿಕೊಂಡ ಇವರ ಮನಸ್ಸು ಸಾವಿನ ನೆನಪುಗಳುನ್ನು ಮರೆಯದೇ ಬದುಕುವ ಕನಸುಗಾರಿಕೆಯನ್ನು ನಂಬಿಕೊಂಡಿದೆ. ಇದು ಇವರ ಕಾವ್ಯದ ಆಶಯವೂ ಆಗಬಹುದು. ಇದಲ್ಲದೇ ಇವರು ಸಮಕಾಲೀನ ಸಂಗತಿಗಳಿಗೆ ವಿಮುಖರೇನು ಅಲ್ಲ. ಆದರೆ ಉಳಿದ ಪದ್ಯಗಳಷ್ಟು ಅವು ಯಶಸ್ಸನ್ನು ಕಾಣುವುದಿಲ್ಲ.
ಮೊದಲ ಸಂಕಲದ ‘ಮಣ್ಣಿನ ಹುಡುಗ’ ಒಳ್ಳೆಯ ಕವಿತೆ. ಕೆ.ಪಿ ಯವರು ಜನಪದ ಆಚರಣೆಗಳ ಬೆನ್ನಲ್ಲಿ ಬರೆದ ಕವಿತೆಗಳು ಸಾಮಾಜಿಕ ಸ್ಪರ್ಶವನ್ನು ಪಡೆದುಕೊಂಡಿವೆ.ಅಯ್ಯನ ನೆನಪಲ್ಲಿ ಬರೆದ ‘ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು’ ಮುಖ್ಯವಾಗುತ್ತದೆ. ಆದರೆ ಸಾವಿನ ಪ್ರತಿಮೆಗಳ ಮೂಲಕವೇ ಹೊರಡುವ ಹಲವು ಪದ್ಯಗಳಲ್ಲಿ ಸಮಾಜವನ್ನು ಕಂಡಿದ್ದಾರೆ.ಆರು ಸಂಕಲನಗಳನ್ನು ಹೊರತಂದಿರುವ ಕೆ.ಪಿ.ಮೃತ್ಯುಂಜಯ ಅವರು ಕಾವ್ಯದ ಶೋಧದಲ್ಲಿ ಸಾಕಷ್ಟು ದೂರ ಬಂದಿದ್ದಾರೆ. ಈಚಿಗಿನ ತೀರ ಹೊಸತಲೆಮಾರಿನ ನಡುವೆ ಕವಿತೆ ಬರೆಯುವ ಅವರಿಗೆ ಸವಾಲುಗಳು ಇವೆ. ಕವಿತೆ ಯಾವಾಗಲೂ ಮಾತನ್ನು ನಂಬುವುದಿಲ್ಲ ಎಂಬುದು ಅವರಿಗೆ ತಿಳಿದ ಸಂಗತಿ. ಹೊಸ ಭಾಷೆಯಲ್ಲಿ ಬರೆಯಬೇಕೆಂಬ ಅವರ ನಂಬಿಕೆ ಇನ್ನು ಮಾಗಬಹುದು. ಮನುಷ್ಯನ ಅಂತಸ್ಥವನ್ನು ತಾಕುವ ಅವರ ಕಾವ್ಯ ಹೊರಗನ್ನು ಗಾಢವಾಗಿ ತಾಕಲಿ.





ಧನ್ಯವಾದಗಳು ಡಾ. ನಾಗಲಮಡಿಕೆ. ಧನ್ಯವಾದಗಳು ಅವಧಿ ಗೆ. / ಕೆ . ಪಿ . ಮೃತ್ಯುಂಜಯ.
ಒಳ್ಳೆಯ ವಿಮರ್ಶೆ. ಕೆಪಿ ಅವರು ನನ್ನ ಮೆಚ್ಚಿನ ಕವಿ