ಒಂದು ಭೇಟಿ

ಅಮೃತಾ ಪ್ರೀತಂ

ಕನ್ನಡಕ್ಕೆ – ಸುನೀತ ಹೆಬ್ಬಾರ್
ನಾನು ಮೌನವಾಗಿ,
ಶಾಂತ ಮತ್ತು ನಿಶ್ಚಲವಾಗಿ ನಿಂತಿದ್ದೆ
ಕೇವಲ ಪಕ್ಕದಲ್ಲಿ ಹರಿವ
ಸಮುದ್ರದಲ್ಲಿ ಬಿರುಗಾಳಿಯಿತ್ತು.
ಸಮುದ್ರಕ್ಕೆ ಅದ್ಯಾವ ಯೋಚನೆ ಬಂತೋ
ಆ ದೇವರಿಗೆ ಗೊತ್ತು !
ಅದು ಬಿರುಗಾಳಿಯನ್ನು ಚಿಕ್ಕಮೂಟೆ ಕಟ್ಟಿ
ನನ್ನ ಕೈಯಲ್ಲಿಟ್ಟು ನಗುತ್ತ ಮರೆಯಾಯಿತು.
ಚಕಿತಗೊಂಡಿದ್ದೆ…
ಅದರ ಚಮತ್ಕಾರವನ್ನು ಸ್ವೀಕರಿಸಿದೆ
ಈ ಘಟನೆಗಳು ಶತಮಾನಕ್ಕೊಮ್ಮೆ
ಸಂಭವಿಸುತ್ತವೆಂದು ತಿಳಿದು.
ಲಕ್ಷಾಂತರ ಆಲೋಚನೆಗಳು ಬಂದು
ತಲೆಯಲ್ಲಿ ಹೊಳೆದವು
ಆದರೆ ನಾನು ಮಾತ್ರ ನಿಂತೇ ಇದ್ದೆ
ಅದನ್ನು ನನ್ನೂರಿಗೆ ಕೊಂಡು
ಹೋಗುವುದು ಹೇಗೆಂದು?
ನನ್ನೂರಿನ ಪ್ರತಿ ಗಲ್ಲಿಯೂ ಇಕ್ಕಟ್ಟು
ನನ್ನೂರಿನ ಪ್ರತಿ ಸೂರು ಗಿಡ್ಡ
ನನ್ನೂರಿನ ಪ್ರತಿ ಗೋಡೆಯೂ ಚಾಡಿಕೋರ
ಯೋಚಿಸಿದ್ದೆ ನೀನು ಸಿಕ್ಕಿದ್ದಲ್ಲಿ
ಆ ಸಮುದ್ರದಂತೆಯೇ
ಹೃದಯದ ಮೇಲಿಟ್ಟು ನಾವು
ಎರಡು ದಡಗಳಂತೆ ನಗಬಹುದಿತ್ತೆಂದು.
ಗಿಡ್ಡದಾದ ಸೂರು ,ಇಕ್ಕಟ್ಟಾದ ಗಲ್ಲಿಗಳ
ಊರಲ್ಲಿ ನೆಲಸಬಹುದಿತ್ತೆಂದು.
ಆದರೆ ಮಧ್ಯಾಹ್ನವೆಲ್ಲಾ ನಿನ್ನ ಹುಡುಕುವುದರಲ್ಲೇ ಕಳೆಯಿತು
ನನ್ನ ಬೆಂಕಿಯ ಗುಟುಕನ್ನು ನಾನೇ ನುಂಗಿದೆ.
ನಾನೊಂದು ಒಂಟಿ ದಡದಂತಿದ್ದೆ
ದಡವನ್ನು ಬೀಳಿಸಿದೆ
ಹಗಲು ಮುಳುಗುವುದರಲ್ಲಿತ್ತು
ಸಮುದ್ರದ ಬಿರುಗಾಳಿಯನ್ನು
ಸಮುದ್ರಕ್ಕೆ ಮರಳಿಸಿದೆ.
ಈಗ ರಾತ್ರಿ ಮುಗಿಯುವಾಗ ನೀನು ಸಿಕ್ಕಿದೆ
ನೀನೂ ಉದಾಸ, ಮೌನಿ, ಶಾಂತ ಮತ್ತು ನಿಶ್ಚಲ
ನಾನೂ ಉದಾಸ, ಮೌನಿ, ಶಾಂತ ಮತ್ತು ನಿಶ್ಚಲ
ದೂರದಲ್ಲಿ ಹರಿವ ಸಮುದ್ರದಲ್ಲಿ
ಮಾತ್ರ ಬಿರುಗಾಳಿ ಇದೆ.






0 Comments