ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಾಮದಹನ' ಹಬ್ಬದಾಚೆಗೆ…

 

ಹನುಮೇಶ್ ಮಳಗಿ

‘ಸತ್ಯ ಹಾಗೂ ಶಿವನನ್ನು ಮರೆತ ಸೌಂದರ್ಯ ಹಾಗೂ ಯೌವನ ಎಂಬ ದಂಪತಿಗಳು ಅಹಂಕಾರವನ್ನೇ ಹೆರುತ್ತಾರೆ. ಅಹಂಕಾರವು ಅವಿವೇಕ ಎಂಬ ಸ್ನೇಹಿತನೊಡಗೂಡಿ ತನ್ನ ಜನ್ಮದಾತರನ್ನೇ ನಾಶ ಮಾಡುತ್ತದೆ.’ ಕಾಮವು ದಾಂಪತ್ಯ ಜೀವನದ ಅವಿಭಾಜ್ಯ ಅಂಗ. ಕಾಮವಿಲ್ಲದಿದ್ದರೆ ಎಂಬ ಪ್ರಶ್ನೆಯೆ ಅತಾಕರ್ಿಕ. ಜೀವಜಾತಿ ಉಳಿದು ಸಂಕುಲ ಬೆಳೆದು ಸೃಷ್ಟಿ ನಿರಂತರವಾಗಿರಲು ಕಾಮದಿಂದ ಮಾತ್ರ ಸಾದ್ಯ. ಹಾಗೆಯೇ ಸ್ವಚ್ಛಂದ ಕಾಮವು ಸಂಕುಲ ನಾಶಕ್ಕೂ ಕಾರಣವಾಗಬಹುದು. ಕಾಮಕ್ಕೆ ಕಣ್ಣಿಲ್ಲವೆನ್ನವುದು ಕ್ಲೀಷೆಯಾದೀತು. ಕಾರಣ ಹೆಣ್ಣು ಗಂಡಿನ ರೂಪವನ್ನೇ ಎಂದೂ ನೋಡಿರದ ಹುಟ್ಟು ಕುರುಡರೂ ಉತ್ಕಟ ಕಾಮೇಚ್ಛೆಯನ್ನು ಹೊಂದಿರುವುದು ಚಕಿತಗೊಳಿಸುವ ಸಂಗತಿ. ಸಾಗರದ ಗಾಢಾಂಧಕಾರದ ತಳದಲ್ಲಿ ಕಣ್ಣು ಎಂಬ ಇಂದ್ರಿಯವನ್ನೇ ಹೊಂದಿರದ ಲೆಪ್ಟೋಡೈರೆಸ್ ಬೀಟೆಲ್, ಮೆಕ್ಸಿಕನ್ ಟೆಟ್ರಾ ಕೇವ್ ಫಿಶ್, ಭೂಮಿ ಮೇಲಿನ ನಕ್ಷತ್ರ ಮೂಗಿನ ಮೋಲ್, ಒಂದು ವಿಧದ ಸಲಮಾಂಡರ್ ಇನ್ನೂ ಅನೇಕ ಜೀವಿಗಳೂ ಸಂಗಾತಿಯನ್ನು ನಿಖರವಾಗಿ ಹುಡುಕಿಹೊಂಡು ಸಂತಾನೋತ್ಪತ್ತಿಯನ್ನೂ ನಿರಂತರವಾಗಿ ಮಾಡಿಕೊಂಡಿರುವುದು ಕೂಡಾ ವಿಸ್ಮಯದ ವಿಷಯ. ಆದರೂ ಪ್ರಾಣಿಗಳು ಕೂಡಾ ಕಾಮವನ್ನು ನಿದರ್ಿಷ್ಟ ಸಮಯದಲ್ಲಿ ಮಾತ್ರ ಅನುಭವಿಸುತ್ತವೆ. ಅಪವಾದ ಮಾನವ ಮಾತ್ರ. ಕಾಮದ ವಿಷಯಕ್ಕೆ ಬಂದಾಗ ವಿಕೃತಿಯು ಮಾನವನಲ್ಲಿಯೇ ತುಂಬಿಕೊಂಡಿದೆ. ಎಳೆಯ ಕಂದಮ್ಮಗಳನ್ನೂ ಬಿಡದ ವಿಕೃತ ಕಾಮವು ಮಾನವನ ಪಾಪದ ಫಲವೇ ಹೌದು. ಅತ್ಯಾಚಾರವೆನ್ನುವ ಪದ ಪ್ರಾಣಿಗಳಲ್ಲಿ ಇಲ್ಲವೇ ಇಲ್ಲ.
ನಮ್ಮಲ್ಲಿ ಎಲ್ಲ ಸಂದರ್ಭಗಳಿಗೂ ಒಂದೊಂದು ಹಬ್ಬಗಳ ಆಚರಣೆಯಿದೆ. ಮೂಲತಃ ಹಬ್ಬಗಳು ಬದುಕಿನ ಆನಂದೋಲ್ಲಾಸವನ್ನೇ ಹೇಳುವಂತಹವು. ಆನಂದವು ಅತಿರೇಕವಾದಾಗ ನಮ್ಮಲ್ಲಿ ಅಹಂಕಾರ ಮೊಳೆಯುತ್ತದೆ. ಅದು ಜೀವನದ ಶಿಸ್ತನ್ನು ಹಾಳು ಮಾಡುತ್ತದೆ. ಸಂಕ್ರಾಂತಿಯ ಸಂದರ್ಭದಲ್ಲಿ ಒಳ್ಳೆಯ ಮಳೆ ಬೆಳೆಯಿಂದಾಗಿ ಜನರ ಜೋಬು ತುಂಬಿದ ಸಂಪತ್ತು ಅಷ್ಟು ದಿನದ ಕಷ್ಟ ಕಳೆದು, ಮನದಲ್ಲಿ ಸುಖದ ಕಾಮನ ಬಿಲ್ಲು ಮೂಡಿ ಮನವು ಸ್ವೇಚ್ಛಾಚಾರದತ್ತ ವಾಲಿರುತ್ತದೆ. ಹುಚ್ಚು ಮನ ಬಣ್ಣದ ಕನಸುಗಳನ್ನು ತುಂಬಿಕೊಂಡು ಎಲ್ಲರಿಗೆ ಎರಚುತ್ತದೆ. ಅದರ ಪ್ರತೀಕವಾಗಿಯೇ ಬಣ್ಣದ ಹಬ್ಬ. ಶಿವನು ಮನೋಭಿಮಾನಿ. ಸ್ವೇಚ್ಛೆಯತ್ತ ಜಾರಿದ ಮನದಲ್ಲಿ ತುಂಬಿದ ಕಾಮನೆಗಳನ್ನು ತನ್ನ ಮೂರನೆ ಕಣ್ಣಿನಿಂದ ಸುಟ್ಟು ಹಾಕಿ ಹೊಸ ಯುಗದತ್ತ (ಯುಗಾದಿ) ಜೀವನವನ್ನು ಮುನ್ನಡೆಯುವಂತೆ ಮಾಡುತ್ತಾನೆ. ಕಾಮದಹನವು ಕಾಮವನ್ನು ನಿಯಂತ್ರಿಸುವುದರ ಜೊತೆಗೇ ಕಾಮದ ಬೆಂಕಿಯನ್ನೂ ಧರ್ಮೋಚಿತವಾಗಿ ತಣಿಸಬೇಕೆನ್ನುವ ಸಂದೇಶವನ್ನೂ ನೀಡುತ್ತದೆ.

ನಮ್ಮ ಸನಾತನ ಸಂಪ್ರದಾಯದಲ್ಲಿ ನಾಕು ಆಶ್ರಮಗಳು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸ. ಗೃಹಸ್ಥಾಶ್ರಮ ಉಳಿದ ಮೂರು ಆಶ್ರಮಗಳಿಗೆ ಆಶ್ರಯತಾಣ. ಗೃಹಸ್ಥಾಶ್ರಮಕ್ಕೆ ದಾಂಪತ್ಯವೇ ಆಧಾರ. ದಾಂಪತ್ಯ ಸದನಕ್ಕೆ ಪರಸ್ಪರ ವಿಶ್ವಾಸವೇ ಗೋಡೆ ಕಂಭಗಳು. ಮಾಡುವ ಸತ್ಕರ್ಮಗಳೇ ದೇವರ ಪೂಜೆ. ಪತಿಪತ್ನಿಯರ ಪ್ರೇಮವೇ ಗಳಿಸುವ ಪುಣ್ಯ. ಪುಣ್ಯವು ಸಂಯಮದಿಂದ ವೃದ್ಧಿಯಾದರೆ ದೊರೆಯುವ ಸಂತಾನವು ಸುಸಂಸ್ಕೃತವಾಗಿ ಬೆಳೆಯುತ್ತದೆ. ಯಶಸ್ವೀ ಜೀವನಕ್ಕೆ ನಾಕು ಪುರುಷಾರ್ಥಗಳು. ಧರ್ಮ ಅರ್ಥ ಕಾಮ ಹಾಗೂ ಮೋಕ್ಷ. ಪ್ರಕೃತಿ ಭಾವಗಳಲ್ಲಿ ಹಸಿವೆಯ ನಂತರ ಕಾಮವೇ ಅತ್ಯಂತ ಬಲಿಷ್ಠವಾದುದು. ಧರ್ಮ ಅರ್ಥ ಮೋಕ್ಷಗಳು ಕಾಮದ ಮೇಲೆ ನಿಂತಿವೆ. ಧರ್ಮ ಅರ್ಥಗಳಿಗೆ ಕಾಮ ಪೂರಕ. ‘ಕಾಮ’ ಎಂದರೆ ಆಸೆ ಆಕಾಂಕ್ಷೆ ಎಂದರ್ಥವೇ ಹೊರತು ಲೈಂಗಿಕಾಸಕ್ತಿ ಎನ್ನುವುದು ಅವಾರ್ಚೀನ ಅರ್ಥ.
ಜೀವಂತಿಕೆಯ ಲಕ್ಷಣಗಳಾದ ಹಸಿವು ನಿದ್ದೆ ಹಾಗೂ ಲೈಂಗಿಕಾಸಕ್ತಿಗಳಲ್ಲಿ ಸಾಧಕನಿಗೆ ಅತ್ಯಂತ ತೊಂದರೆ ಕೊಡುವುದೆಂದರೆ ಕಾಮವೇ. ನಿದ್ದೆ ಹಸಿವೆಗಳಂತೆ ಕಾಮವೂ ಸಹಜವೇ ಆದರೂ ನಾಗರಿಕ ಸಮಾಜ ಅದನ್ನು ನೋಡುವ ದೃಷ್ಟಿಕೋಣವೇ ಬೇರೆ. ಕಾಮವೇ ಜಗತ್ತಿನಲ್ಲಿ ಜೀವ ಸಂಕುಲ ಉಳಿದು ಬೆಳೆಯುತ್ತಿರುವುದಕ್ಕೆ ಪ್ರಧಾನ ಹೇತು. ಅನಾಗರಿಕ ಮಾನವ ನಾಗರೀಕತೆಯತ್ತ ನಡೆಯುತ್ತ ಜೀವನ ಸಂವಿಧಾನವನ್ನು ರೂಪಿಸಿಕೊಂಡನು. ಸಂವಿಧಾನದ ಮೊದಲ ಅಧ್ಯಾಯವೇ ಕುಟುಂಬ ಜೀವನ. ವಿವಾಹ ಕುಟುಂಬದ ಮೂಲ. ಇದರ ಆಶಯ ನಿಯಂತ್ರಿತ ಹಾಗೂ ಆರೋಗ್ಯವಂತ ಕಾಮ. ಸಂತೃಪ್ತ ಕಾಮವು ಸುಖೀ ಕುಟುಂಬದ ಆಧಾರ ಸ್ಥಂಭ. ‘ಧಮರ್ೇಚ, ಅಥರ್ೇಚ ಕಾಮೇಚ.. ನಾತಿ ಚರಾಮಿ’ ಎಂಬ ವಚನವನ್ನು ಪತಿ ವಿವಾಹದಂದು ಪತ್ನಿಗೆ ನೀಡುತ್ತಾನೆ. ಅದರಂತೆ ಜೀವನ ಪೂರ್ತಿ ನಿಭಾಯಿಸುವ ನಿರೀಕ್ಷೆಯನ್ನು ಪತ್ನಿ ಇಟ್ಟುಕೊಳ್ಳುತ್ತಾಳೆ. ಪತಿಯನ್ನು ಧರ್ಮಮಾರ್ಗದತ್ತಲೇ ನಡೆಯುವಂತೆ ನೋಡಿ ಕೊಳ್ಳುತ್ತಲೇ ಅವನು ತನ್ನ ಇಷ್ಟಾನಿಷ್ಟಗಳಿಗೆ ಬೆಲೆಕೊಡುವಂತೆ ಮಾಡುವುದೂ ಅವಳ ಜಾಣ್ಮೆಗೊಂದು ಸವಾಲು. ಆದ್ದರಿಂದಲೇ ಅವಳು ಧರ್ಮಪತ್ನಿ. ಬದಲಿಗೆ ಅವನ ಸ್ವೇಚ್ಛಾಚಾರಕ್ಕೆ ತಾನೂ ದನಿಗೂಡಿಸುವುದು ತಪ್ಪು. ಇದರಿಂದಾಗಿ ಇಬ್ಬರ ಬದುಕೂ ನಾಶವಾಗುತ್ತದೆ. ಅಂತೆಯೇ ವಿವಾಹದಂದು ವಚನ ನೀಡಿದಂತೆ ಪತಿಯೂ ಸಹಧರ್ಮಿಣಿಯ ಆಸೆಗೆ ಒತ್ತಾಸೆಯಾಗಿರಬೇಕು. ಸ್ವಚ್ಛಂದ ಜೀವನ ಶೈಲಿ ಅದರಿಂದಾಗುವ ಏಡ್ಸ ಮಹಾಮಾರಿಯ ಭೀತಿಗೊಳಗಾಗಿರುವ ಈಗಿನ ಅಧುನಿಕ ಯುಗದಲ್ಲಿ ವಿವಾಹದಂದು ಮಾಡುವ ಈ ಪ್ರತಿಜ್ಞೆಗೆ ಇಂದು ಬಹಳ ಮಹತ್ವವಿದೆ. ರೂಪ, ಸಂಪತ್ತು ಅಧಿಕಾರ ಇವುಗಳ ಮದದಿಂದ ಇಂದಿನ ಜನಾಂಗ ವಿಚಲಿತವಾಗಿದೆ.
ಇಂದು ಒಬ್ಬರನ್ನೊಬ್ಬರು ಅಗಲಿ ಬೇರೆ ಬೇರೆ ಊರುಗಳಲ್ಲಿ ದುಡಿಯುತ್ತಿರುವ ಪತಿ ಪತ್ನಿಯರು ಅನೇಕ ಆಮಿಷಗಳಿಗೆ ಬಲಿಯಾಗಿ ತಪ್ಪು ಮಾಡುತ್ತಿದ್ದಾರೆ. ದಾಂಪತ್ಯಧರ್ಮವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದಾಗಿ ಸಂಸಾರಗಳು ಒಡೆಯುತ್ತಿವೆ, ವಿಚ್ಛೇದನಗಳು ಹೆಚ್ಚುತ್ತಿವೆ. ಇದರ ನೇರ ಪರಿಣಾಮ ಮಕ್ಕಳ ಮೇಲಾಗಿ ಅವುಗಳೂ ಅಡ್ಡದಾರಿ ತುಳಿಯುತ್ತಿವೆ. ಹಿಂದು ಮುಂದು ನೋಡದೇ ಗೊತ್ತುಗುರುತಿಲ್ಲದವರೊಂದಿಗೆ ಪ್ರೇಮವೆಂಬ ಹೆಸರಿನಲ್ಲಿ ಸಂಬಂಧ ಹೊಂದಿ ಮೋಸ ಹೋಗಿ ತಾವೂ ದುಃಖ ಪಡುವುದಲ್ಲದೇ ಹೆತ್ತವರಿಗೂ ಸಂಕಟ ತಂದೊಡ್ಡುತ್ತಿವೆ.
ಸ್ವಚ್ಛಂದ ಕಾಮದ ಕುರಿತಾಗಿ ಮತ್ತು ಅದರಿಂದಾದ ಅನಾಹುತಗಳ ಬಗ್ಗೆ ನಮ್ಮ ಪುರಾಣ ಕಾವ್ಯಗಳಲ್ಲಿ ಅನೇಕ ಆಖ್ಯಾಯಿಕೆಗಳಿವೆ. ಕಾಮದಹನದ ಸಂದರ್ಭದಲ್ಲಿ ಎರಡು ಆಖ್ಯಾಯಿಕೆಗಳನ್ನು ವಿಮರ್ಶಿಸಬಹುದು. ಒಂದು ರಾಮಾಯಣದಲ್ಲಿ ಬರುವ ಅಹಲ್ಯಾ ಪ್ರಸಂಗ ಇನ್ನೊಂದು ಕುಮಾರ ಸಂಭವ ಪ್ರಸಂಗ. ಎರಡರ ಉದ್ದಿಶ್ಯವೂ ಸ್ವಚ್ಛಂದ ಕಾಮದ ಅಪಾಯವನ್ನು, ಯೌವನ ಹಾಗೂ ಸೌಂದರ್ಯದ ಅಹಂಕಾರದಿಂದಾದ ಅನಾಹುತವನ್ನೂ, ಜೊತೆಗೆ ಪತಿ ಪತ್ನಿಯರ ದಾಂಪತ್ಯ ಜೀವನದಲ್ಲಿ ಕಾಮದ ಮಹತ್ವವನ್ನು ತಿಳಿಸಿ ಸಂಯಮವನ್ನು ಉಪದೇಶಿಸುತ್ತವೆ. ಅವುಗಳಲ್ಲಿನ ಸಂಕೇತಗಳು ಮೈನವಿರೇಳಿಸುವಂತಿವೆ
‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎಂಬ ಮಹಾವಾಕ್ಯ ಸ್ವಚ್ಛಂದ ಜೀವನವು ಹೇಗೆ ತಮ್ಮನ್ನೇ ನಾಶ ಪಡಿಸುತ್ತವೆ ಎಂಬುದನ್ನು ನಮ್ಮ ಪುರಾಣಗಳಲ್ಲರುವ ಎರಡು ಆಖ್ಯಾಯಿಕೆಗಳನ್ನು ಈ ಹಿನ್ನೆಲೆಯಲ್ಲಿ ನೋಡೋಣ. ಅಹಲ್ಯೆ ಗೌತಮ ಮಹರ್ಷಿಗಳ ಧರ್ಮಪತ್ನಿ. ಮಹಾ ಸೌಂದರ್ಯವತಿ. ಅಹಲ್ಯೆಗೆ ಏರು ಯೌವನ. ಗೌತಮರೋ ಯಾವಾಗಲೂ ಜಪತಪಗಳಲ್ಲಿಯೇ ದಿನ ಕಳೆಯುವವರು. ಅವಳ ಆಕಾಂಕ್ಷೆಗಳ ಬಗ್ಗೆ ಪತಿಗೆ ಉದಾಸೀನವೆನ್ನುವಂತಹ ನಿಲರ್ಿಪ್ತತೆ. ಪತಿಯ ಕನಿಷ್ಠ ಕರ್ತವ್ಯವೂ ನೆನಪಿಗೆ ಬಾರದಂತಹ ತಪಃಶ್ಚರಣೆ. ಇಂದ್ರ ಅಹಲ್ಯೆಯ ಸೌಂದರ್ಯವನ್ನು ಅವರಿವರ ಬಾಯಿಂದ ಕೇಳಿ ಅವಳನ್ನು ಮೋಹಿಸಿದ. ಸಂದರ್ಭಕ್ಕಾಗಿ ಕಾದ. ಒಂದು ದಿನ ಅಪರಾತ್ರಿಯಲ್ಲಿ ಗೌತಮರ ಆಶ್ರಮಕ್ಕೆ ಬಂದು ಕೋಳಿಯಂತೆ ಕೂಗಿದ. ಬೆಳಗಾಯಿತೆಂದು ಎದ್ದು ಗೌತಮರು ಅನುಷ್ಠಾನಕ್ಕಾಗಿ ನದಿಗೆ ತೆರಳಿದರು. ಇಂದ್ರ ಗೌತಮರ ವೇಷ ಧರಿಸಿ ಅಹಲ್ಯೆಯನ್ನು ಕೂಡಿದ. ಕಳ್ಳ ವೇಷದಲ್ಲಿ ಬಂದವನು ಇಂದ್ರನೇ ಎಂಬುದು ಅಹಲ್ಯೆಗೆ ತಿಳಿದೂ ಅವನಿಗೆ ಸೋತಳು. ಮೋಸದ ಅರಿವಾಗಿ ಗೌತಮರು ಮನೆಗೆ ಧಾವಿಸಿದರು. ಸಮಯ ಮೀರಿತ್ತು. ಇಂದ್ರ ಹಾಗೂ ಅಹಲ್ಯೆ ಋಷಿಗಳ ಕೈಗೆ ಸಿಕ್ಕು ಬಿದ್ದರು. ನಡೆದಿರುವುದನ್ನು ತಿಳಿದು ಗೌತಮರು ಇಂದ್ರನಿಗೆ ಮೈತುಂಬ ಕಣ್ಣಾಗುವಂತೆಯೂ, ಅಹಲ್ಯೆಗೆ ಕಲ್ಲಾಗುವಂತೆಯೂ ಶಪಿಸಿದರು. ಅದು ಪತಿಯ ಸಹಜ ಕ್ರೋಧ ನಂತರ ಶ್ರೀರಾಮ ಪಾದಸ್ಪರ್ಷದಿಂದ ಶಾಪ ವಿಮೋಚನೆಯಾಗುವಂತೆ, ಅಲ್ಲಿಯವರೆಗೂ ತಪಸ್ಸನ್ನು ಆಚರಿಸುವಂತೆ ತಿಳಿಸಿ ತಾವೂ ತಪಸ್ಸಿಗೆ ತೆರಳಿದರು. ನಂತರದ್ದು ಎಲ್ಲರಿಗೂ ತಿಳಿದ ಕಥೆಯೇ.
ಎರಡನೇಯ ಆಖ್ಯಾಯಿಕೆ ಕುಮಾರ ಸಂಭವ ಸಂದರ್ಭದ್ದು. ತನ್ನ ತಂದೆ ಮಾಡುವ ಯಜ್ಞಕ್ಕೆ ಆಮಂತ್ರಣ ಇಲ್ಲದಿದ್ದರೂ ಪರಮಾತ್ಮನ ಪತ್ನಿ ಸತೀ ಅವನ ಇಚ್ಛೆಗೆ ವಿರುದ್ಧವಾಗಿ ತೌರಿಗೆ ಹೋಗುತ್ತಾಳೆ. ತಂದೆ ದಕ್ಷಪ್ರಜಾಪತಿ ಮಗಳನ್ನು ಅವಮಾನಿಸುತ್ತಾನೆ. ನೊಂದ ಸತಿ ಯಜ್ಞಕುಂಡದಲ್ಲಿ ಹಾರಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ವಿಷಯ ತಿಳಿದ ಪರಮೇಶ್ವರನು ಕ್ರುದ್ಧನಾಗಿ ತನ್ನೊಂದು ಜಟೆಯಿಂದ ವೀರಭದ್ರನನ್ನು ಸೃಷ್ಟಿಸಿ ಯಜ್ಞಭಂಗ ಮಾಡಿಸಿ ಕುಂಡದಲ್ಲಿ ಸತ್ತು ಬಿದ್ದಿದ್ದ ಪತ್ನಿಯ ಶವವನ್ನು ಹೊತ್ತುಕೊಂಡು ಅಲೆಯುತ್ತಾನೆ. ದೇವತೆಗಳು ಶವವನ್ನು ಅಪಹರಿಸಿ ಅದನ್ನು ತುಂಡುತುಂಡಾಗಿ ಕತ್ತರಿಸಿ ಭೂಮಿಯ ಮೇಲೆ ಎಸೆದು ಬಿಡುತ್ತಾರೆ. ಮುಂದೆ ಅವೇ ಶಕ್ತಿಪೀಠಗಳೆಂದು ಪ್ರಸಿದ್ಧ ಯಾತ್ರಾಸ್ಥಳಗಾಳದವು. ಪತ್ನಿಯ ವಿಯೋಗದಿಂದ ಪರಮಾತ್ಮನು ವಿರಾಗಿಯಾಗಿ ಅಲೆದಲೆದು ಕಡೆಗೆ ಹಿಮಾಲಯದಲ್ಲಿ ಧ್ಯಾನಕ್ಕೆ ಕೂತುಬಿಡುತ್ತಾನೆ. ಇತ್ತ ಅಸೀಮ ಶಕ್ತಿಗಾಗಿ ತಪಸ್ಸು ಮಾಡುತ್ತಿದ್ದ ಅಸುರನೊಬ್ಬ ಶಿವನ ವಿರಾಗವನ್ನು ಅರಿತು ಶಿವ-ಸತಿಯರ ಪುತ್ರನಿಂದಲೇ ತನಗೆ ಸಾವು ಬರಲೆಂದು ಬ್ರಹ್ಮನಿಂದ ವರ ಪಡೆದು ಲೋಕಕಂಟಕನಾಗುತ್ತಾನೆ. ನಂತರ ರತಿ ಮನ್ಮಥರ ಪ್ರಯತ್ನದಿಂದ ಶಿವ ವಿರಾಗದಿಂದ ವಿಮುಖನಾಗಿ ಪಾರ್ವತಿಯನ್ನು ವರಿಸಿ ಅವಳಿಂದ ಪುತ್ರನನ್ನು ಪಡೆದು ಅವನ ಮೂಲಕ ಅಸುರನ ಸಂಹಾರವಾಗುತ್ತದೆ.
ಕಾಮನಿಗೆ ತನ್ನ ಮೇಲೆ ವಿಪರೀತ ವಿಶ್ವಾಸ. ಅದರಂತೆ ರತಿಗೂ ತನ್ನ ಸೌಂದರ್ಯದ ಮೇಲೆ ಜಂಭ. ಇಡೀ ಪ್ರಾಣಿಲೋಕವನ್ನು ತಮ್ಮ ಬೆರಳ ತುದಿಯಲ್ಲಿ ಆಡಿಸುತ್ತಾರೆ ಈ ದಂಪತಿಗಳು. ಪತ್ನಿ ವಿಯೋಗದಿಂದ ವಿರಾಗಿಯಾದ ಪರಶಿವನನ್ನು ಮತ್ತೆ ಜೀವನ್ಮುಖಿಯಾಗಿ ಸಂಸಾರಿಯಾಗುವಂತೆ ಮಾಡುವುದು ದೇವತೆಗಳಿಗೆ ದೊಡ್ಡ ಸವಾಲಾಗಿದೆ. ನೇರವಾಗಿ ಪರಮಾತ್ಮನನ್ನು ಎಚ್ಚರಿಸುವುದು ವಿನಾಶವನ್ನು ಮೈಮೇಲೆಳೆದುಕೊಂಡಂತೆ ಎಂಬುದು ಅವರಿಗೆ ಅರಿವಾಗಿದೆ. ಜಂಬದ ಅಲೆಯ ಮೇಲೆ ಓಲಾಡುತ್ತಿರುವ ರತಿ-ಮನ್ಮಥರನ್ನು ಈ ಕಾರ್ಯಕ್ಕೆ ದೇವತೆಗಳು (ಒಂದರ್ಥದಲ್ಲಿ ಹರಕೆಯ ಕುರಿ) ಒಪ್ಪಿಸುತ್ತಾರೆ. ತಮಗಿಂತ ಹಿರಿಯರನ್ನು ಅವರ ಶಕ್ತಿಯನ್ನು ಅವಗಣಿಸುವವರಿಗೊಂದು ಪಾಠವೂ ಆಗುತ್ತದೆ ಮುಂದೆ ನಡೆದದ್ದು.
ಕಬ್ಬಿನ ಬಿಲ್ಲಿಗೆ ಸುಮಶರವನ್ನು ಹೂಡಿ ಅದರಲ್ಲಿ ರತಿಯನ್ನು ಕೂಡಿಸಿ ಪರಮಾತ್ಮನ ಮೇಲೆ ಪ್ರಯೋಗಿಸುತ್ತಾನೆ ಕಾಮ. ತಪೋಭಂಗದಿಂದ ಕ್ರುದ್ಧನಾದ ಶಂಭು, ತನ್ನ ಮೂರನೇ ಕಣ್ಣು ತೆರೆದು ಕಾಮನನ್ನೇ ಸುಟ್ಟು ಬಿಡುತ್ತಾನೆ. ಮನೋಭಿಮಾನಿಯಾದ ಪರಮೇಶ್ವರನಿಗೆ ಕಾಮವು ಏನು ತಾನೇ ಮಾಡೀತು. ರತಿಯೊಂದಿಗೆ ಇಡೀ ದೇವ ಸಂಕುಲ ತಾವು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳುತ್ತದೆ. ಕಾಮನೇ ನಾಶವಾದ ಮೇಲೆ ಸೃಷ್ಟಿಕ್ರಿಯೆಯೇ ನಿಂತು ಹೋಗುತ್ತದೆಂದು ಕಾಮನನ್ನು ಬದುಕಿಸುವಂತೆ ಶಿವನನ್ನು ಬೇಡಿಕೊಳ್ಳುತ್ತದೆ ದೇವ ಸಂಕುಲ. ಜೊತೆಗೆ ಬಾಲೆಯ ಆಕ್ರಂದನಕೆ ಮರುಗಿದ ಪರಮಾತ್ಮ ಅವಳಿಗೆ ಮಾತ್ರ ಕಾಮನು ಸದೇಹಿಯಾಗಿ ಕಾಣುವಂತೆಯೂ ಉಳಿದವರ ಮನದಲ್ಲಿ ನೆಲೆಸುವಂತೆಯೂ ಅನುಗ್ರಹಿಸಿ ಹಿಮಾಲಯಕ್ಕೆ ತೆರಳುತ್ತಾನೆ. ಅದಾಗಲೇ ಎಂದೂ ವಿಫಲವಾಗದ ಕಾಮ ಬಾಣ ತನ್ನ ಪ್ರಭಾವವನ್ನು ಪರಮಾತ್ಮನ ಮೇಲೆ ಬೀರಿದೆ. ಮುಂದೆ ನಡೆಯುವುದೇ ಪಾರ್ವತೀ ಕಲ್ಯಾಣ, ಕುಮಾರ ಸಂಭವ ಹಾಗೂ ದೈತ್ಯ ನಾಶ.
ಇಲ್ಲಿ ಒಂದು ಸಂಕೇತವನ್ನು ಸ್ಪಷ್ಟವಾಗಿ ಕಾಣಬಹುದು. ಪತಿಪತ್ನಿಯರು ಅನ್ಯರನ್ನು ಕಾಮಿಸಿದರೆ ಆಗುವ ಅನಾಹುತ ಹಾಗೂ ಪತಿಪತ್ನಿಯಲ್ಲಿ ಮಾತ್ರ ಕಾಮ ಸಂಬಂಧವಿರಬೇಕೆನ್ನುವುದು. ಮನವು ಯಾರ್ಯಾರನ್ನೋ ಬಯಸುತ್ತದೆ. ಅದನ್ನು ಮೂರನೇಯ ಕಣ್ಣೆಂಬ ವಿವೇಕದಿಂದ ಪರಿಶೀಲಿಸಿ ನಿಯಂತ್ರಿಸಬೇಕು. ಕಾಮವು ಸಫಲವಾಗುವುದು ದೇಹದ ಮೂಲಕವೇ. ದೈಹಿಕ ಸಂಬಂಧ ಪತಿಪತ್ನಿಯರಲ್ಲಿ ಮಾತ್ರ ಧರ್ಮ ಎನ್ನುವುದು ಈ ಸಂದೇಶ. ದೇಹವಿಲ್ಲದ ಕಾಮ ಎಲ್ಲರನ್ನೂ ಪ್ರಭಾವಗೊಳಿಸಿದರೂ ಶಿವನ ಅನುಗ್ರಹದಿಂದ ಅವನೂ ಪತ್ನಿಯೊಂದಿಗೆ ಮಾತ್ರ ದಾಂಪತ್ಯ ಜೀವನ ನಡೆಸುವ ಬಂಧನಕ್ಕೆ ಒಳಗಾಗಿದ್ದಾನೆ. ಕಾಮ ಬಂಧನದ ವ್ಯವಸ್ಥೆಯೇ ನಮ್ಮೆಲ್ಲರ ಅವಸ್ಥೆ. ಹೀಗೆ ಭಗವಂತನ ಶಾಪವೇ ಮಾನವ ಕುಲಕ್ಕೆ ವರವಾಗಿರುವುದು ವಿಸ್ಮಯ ತರಿಸುವುದಿಲ್ಲವೇ?
ಎರಡನೇಯದು ಅಹಲ್ಯಾ ಶಾಪ ವಿಮೋಚನೆ. ವಿವಾಹದಲ್ಲಿ ಪ್ರತಿಜ್ಞೆ ಮಾಡಿ ಅಹಲ್ಯೆಯನ್ನು ಮನೆಗೆ ಕರೆತಂದ ಗೌತಮರು ತಾವು ಪತ್ನಿಗೆ ನೀಡಿದ ವಾಗ್ದಾನವನ್ನು ಮರೆತು ಸದಾ ಜಪತಪಗಳಲ್ಲಿ ನಿರತರಾಗಿ ಯುವತಿಯಾದ ಅಹಲ್ಯೆಯ ಆಸೆಯನ್ನು ಮನಃಪೂತರ್ಿಯಾಗಿ ತೀರಿಸುವಲ್ಲಿ ಎಡವುತ್ತಾರೆ. ಅಹಲ್ಯೆಯ ಮನದಲ್ಲಿ ನೆಲೆಸಿದ್ದ ಕಾಮನಿಗೆ ಗೌತಮರು ಪೂತರ್ಿಯಾಗಿ ಹವಿಸ್ಸನ್ನು ನೀಡುವುದಿಲ್ಲ. ಇತ್ತ ಕಾಮ ಇಂದ್ರನ ಮನವನ್ನು ಸೇರಿದ ಪ್ರಭಾವದಿಂದಾಗಿ ಅಹಲ್ಯೆಯೆಡೆಗೆ ಆಕಷರ್ಿತನಾತ್ತಾನೆ. ವೇಷ ಬದಲಿಸಿ ಬಂದಿದ್ದರೂ ಬಂದವನು ಇಂದ್ರನೇ ಎನ್ನುವುದೂ ಅಹಲ್ಯೆಗೆ ತಿಳಿದಿದ್ದರೂ ಅತೃಪ್ತಿಯು ಅವಳ ವಿವೇಕವನ್ನು ಮುಚ್ಚುತ್ತದೆ. ಕಾಮನ ಕಣ್ಣು ತೆರೆಯುತ್ತದೆ. ನಂತರದ್ದು ಮಹಾ ಘೋರ ಪ್ರಸಂಗ. ಯಾರ ಕಣ್ಣಿಗೂ ಕಾಣದಂತೆ ಕೇವಲ ಗಾಳಿಯನ್ನು ಸೇವಿಸುತ್ತ ಕಲ್ಲಿನಂತೆ ಜಡವಾಗಿ ಸಾವಿರ ವರ್ಷ ತಪಸ್ಸು ಮಾಡುವಂತೆ ಪತಿಯ ಶಾಪ. ಜೊತೆಗೇ ಪರ ಪತ್ನಿಯ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡ ಇಂದ್ರನಿಗೆ ಮೈತುಂಬ ಕಣ್ಣಾಗುವಂತೆ ಶಪಿಸುತ್ತಾರೆ. ಕೊನೆಗೆ ಪತ್ನಿಯ ಪಶ್ಚಾತ್ತಾಪದ ಹೃದಯದ ನೀರಿಗೆ ಕರಗಿದ ಪತಿಗೂ ತಮ್ಮ ತಪ್ಪಿನ ಅರಿವಾಗಿದೆ. ತಾವು ತಮ್ಮ ಜವಾಬ್ದಾರಿಯನ್ನು ನಿಭಾಯಿಸದೇ ಪತ್ನಿ ಜಾರಿದ್ದಕ್ಕೆ ತಮ್ಮನ್ನೂ ಹಳಿದುಕೊಳ್ಳುತ್ತಾರೆ. ಮುಂದೆ ಶ್ರೀರಾಮ ಆಶ್ರಮಕ್ಕೆ ಬಂದಾಗ ಅವನನ್ನು ಸೇವಿಸುವುದರ ಮೂಲಕ ಶಾಪ ವಿಮೋಚನೆಯಾಗುವುದಾಗಿಯೂ ತಾವು ಮತ್ತೆ ಪತ್ನಿಯನ್ನು ಸೇರಿಕೊಳ್ಳುವುದಾಗಿಯೂ ಭಾಷೆ ನೀಡಿ ಇನ್ನು ಮುಂದೆ ಪರ ಪತ್ನಿಯ ವಿಷಯದಲ್ಲಿ ಮೈತುಂಬ ‘ಕಣ್ಣಾಗಿರುವಂತೆ’ ಇಂದ್ರನಿಗೆ ಎಚ್ಚರಿಸಿ ತಪಸ್ಸಿಗೆ ತೆರಳುತ್ತಾರೆ. ಅಹಲ್ಯೆಗೂ ತಾನು ಮಾಡಿದ ತಪ್ಪಿನ ಅರಿವಾಗಿ ಹೊರ ಪ್ರಪಂಚಕ್ಕೆ ಕಾಣದಂತೆ ಲೌಕಿಕ ವಿಷಯಗಳತ್ತ ಮನವನ್ನು ಕಲ್ಲಾಗಿಸಿಕೊಂಡು ಶ್ರೀರಾಮನ ಬರವಿಗಾಗಿ ಕಲ್ಲಿನಂತೆ ಕಾಯುತ್ತಾಳೆ. ಇಲ್ಲಿರುವ ಸಂಕೇತವು ಪತಿಯ ಕರ್ತವ್ಯದ ಮಹತ್ವವನ್ನು ಸಾರಿದರೆ ಅಹಲ್ಯೆಯು ಪತಿಯನ್ನು ಸಂಸಾರ ಮುಖಿಯನ್ನಾಗಿಸಲು ಅಸಮರ್ಥಳಾಗಿದ್ದಲ್ಲದೇ ಪರಪುರುಷನತ್ತ ವಾಲಿದರೆ ಅದರಿಂದ ಸಂಸಾರದಲ್ಲಿ ಉಂಟಾಗಬಹುದಾದ ಅನಾಹುತವನ್ನು ಪ್ರತಿನಿಧಿಸುತ್ತಾಳೆ.
ಗುರು ಬೃಹಸ್ಪತಿ ಅವರ ಪತ್ನಿ ತಾರೆ ಚಂದ್ರ ಪ್ರೇಮ ಪ್ರಸಂಗವೂ, ಅಂಗಿರಸ-ಶ್ರದ್ಧಾ ದಂಪತಿಯರ ಪುತ್ರ ಬೃಹಸ್ಪತಿ-ಮಮತೆಯರ ಪ್ರೇಮ ಪ್ರಸಂಗವೂ ಇಂತಹ ಅಕ್ರಮ ಕಾಮದ ಅನಾಹುತವನ್ನು ವಿವರಿಸುತ್ತದೆ. ಚಂದ್ರನಿಗೆ ಬೃಹಸ್ಪತಿ ಪತ್ನಿ ತಾರೆಯ ಮೇಲೆ ಮೋಹ ಉಂಟಾಗುತ್ತದೆ. ಅದು ಗುರುವಿಗೆ ಗೊತ್ತಾಗಿ ಚಂದ್ರನಿಗೆ ಕ್ಷಯರೋಗಿಯಾಗುವಂತೆ ಶಪಿಸುತ್ತಾನೆ. ಶುನಕರ ಬೃಹದ್ದೇವತೆಯಲ್ಲಿಯ ಇನ್ನೊಂದು ಪ್ರಸಂಗವೂ ಈ ಬೃಹಸ್ಪತಿಯದ್ದೇ. ಇವನು ಸ್ವತಃ ತನ್ನ ಅಣ್ಣ ಉಚಥ್ಯನ ಪತ್ನಿ ಮಮತೆಯನ್ನು ಕಾಮಿಸುತ್ತಾನೆ. ಆದರೆ ಆಗ ಮಮತೆ ಗಭರ್ಿಣಿಯಾಗಿರುತ್ತಾಳೆ. ಹೊಟ್ಟೆಯೊಳಗಿನ ಶಿಶು ಪ್ರತಿರೋಧಿಸುತ್ತದೆ. ರಸಭಂಗದಿಂದ ಕುಪಿತನಾದ ಬೃಹಸ್ಪತಿ ಭ್ರೂಣಕ್ಕೆ ಕುರುಡಾಗಿ ಹುಟ್ಟುವಂತೆ ಶಪಿಸುತ್ತಾನೆ. ಮುಂದೆ ಆ ಮಗುವೇ ತಪಸ್ಸು ಮಾಡಿ ಶತಚರ್ಿಯಾಗಿ ನೂರು ವೇದ ಮಂತ್ರಗಳ ದ್ರಷ್ಟಾರನಾಗುತ್ತದೆ. ತನ್ನ ಪತ್ನಿಯನ್ನು ಕಾಮಿಸಿದ ಚಂದ್ರನಿಗೆ ಶಾಪವಿತ್ತವನೇ ತನ್ನ ಅಣ್ಣನ ಭ್ರೂಣಕ್ಕೂ ಶಾಪ ನೀಡುತ್ತಾನೆ ಈ ಮಹಾನುಭಾವ. ದೊಡ್ಡವರು ಏನು ಮಾಡಿದರೂ ನಡೆಯುತ್ತದೆ ಎನ್ನುವಂತಿಲ್ಲವೇ ಇದು. ತೊಡೆ ತಟ್ಟಿ ದ್ರೌಪದಿಯನ್ನು ಕೆಣಕಿದ ಕೀಚಕ ಕೌರವರ ಸರ್ವ ನಾಶವಾಗುತ್ತದೆ. ಸೀತೆಯನ್ನು ಅಪಹರಿಸಿದ ರಾವಣ ತನ್ನ ಕನಕಲಂಕೆಯೊಂದಿಗೆ ನಾಶವಾಗಿ ಹೋಗುತ್ತಾನೆ. ತಮ್ಮನ ಹೆಂಡತಿಯನ್ನು ಕಿತ್ತುಕೊಂಡು ಅವನನ್ನು ದೇಶಭ್ರಷ್ಟನನ್ನಾಗಿ ಮಾಡಿದ ವಾಲಿಯು ರಾಮಬಾಣಕ್ಕೆ ಸಿಕ್ಕಿ ಸಾಯುತ್ತಾನೆ. ಆದರೆ ಎಂತಹುದೇ ಪ್ರಸಂಗದಲ್ಲೂ ಏಕಪತ್ನಿವ್ರತವನ್ನು ಪಾಲಿಸಿದ ಶ್ರೀರಾಮನು ಮರ್ಯಾದಾ ಪುರುಷೋತ್ತಮನಾಗುತ್ತಾನೆ. ಹದಿನಾರು ಸಾವಿರದ ನೂರೆಂಟು ಪತ್ನಿಯರನ್ನು ಹೊಂದಿದ್ದರೂ ಬ್ರಹ್ಮಚಾರಿಯಾಗಿರುತ್ತಾನೆ ಶ್ರೀಕೃಷ್ಣ. ಅದರರ್ಥ ಕಾಮವು ಪತ್ನಿಯಲ್ಲಿ ಮಾತ್ರವೇ ಧರ್ಮವೆನಿಸುತ್ತದೆ.

‍ಲೇಖಕರು G

7 March, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading