ಸ್ರೀ ಲೋಕದ ಅಂತರಂಗದ ಅನಾವರಣ

ಸ್ಮಿತಾ ಅಮೃತರಾಜ್
ದೀಪಾ ಫಡ್ಕೆಯವರ ಚೊಚ್ಚಲ ಕಥಾ ಸಂಕಲನ ‘ಮುಂದಣ ಹೆಜ್ಜೆ’ ಬದುಕುವ ಬಗೆಯನ್ನು ಹೊಸ ರೀತಿಯಲ್ಲಿ ಬಗೆದು ತೋರಿಸಿದಂತೆ ಭಾಸವಾಗುತ್ತದೆ.
ಒಟ್ಟು ಹನ್ನೊಂದು ಕತೆಗಳಿರುವ ಈ ಸಂಕಲನದ ಮುಖ್ಯ ಕೇಂದ್ರ ಬಿಂದು ಸ್ರೀಯೇ. ಹಳ್ಳಿ ಮತ್ತು ನಗರದ ಪ್ರದೇಶದಲ್ಲಿ ಕತೆಗಳು ಹುಟ್ಟಿ ಕೊಂಡರೂ, ಪರಿಸ್ಥಿತಿ, ಸನ್ನಿವೇಶ,ಸಂದರ್ಭಗಳು ಬೇರೆಯಾದರೂ, ಅಲ್ಲಿನ ಸ್ರೀ ಸಂವೇದನೆಗಳು, ಅವಳೊಳಗಿನ ತಲ್ಲಣ ತವಕಗಳು ,ಅವಳು ಅನುಭವಿಸುವ ಯಾತನೆಗಳು ಒಂದೇ ಅನ್ನುವಂತದ್ದನ್ನ ಇಲ್ಲಿಯ ಕತೆಗಳು ಅನಾವರಣಗೊಳಿಸುತ್ತವೆ.
ದಿನಕಳೆದಂತೆ ಚೆಂದದ ದಾಂಪತ್ಯವೂ ನೀರಸವಾಗುತ್ತದೆ, ಏಕತಾನತೆ ಆವರಿಸಿಕೊಳ್ಳುತ್ತದೆ. ಆದರೆ ಇದೆಲ್ಲಾ ಒಂದೊಮ್ಮೆ ಬದುಕಿನಲ್ಲಿ ಬಂದೆರಗುವ ಸಹಜ ಕ್ರಿಯೇ ಅನ್ನುವ ರೀತಿಯಲ್ಲಿ ಮನಸ್ಸನ್ನು ಹದಗೆಡದಂತೆ ಕಾಯ್ದು ಕೊಳ್ಳುವ ಇಲ್ಲಿಯ ಕಥನದ ಪರಿ ನಮಗೊಂದು ವಿಶಿಷ್ಟ ಲೋಕವನ್ನ, ಹೊಸ ದೃಷ್ಟಿಯನ್ನ ತೆರೆದು ತೋರಿಸುತ್ತದೆ. ಆಗಬಾರದ್ದು ಅದೇನೋ ಘಟಿಸಿ ಹೋಯಿತು,ಬದುಕು ಮುಗಿದೇ ಹೋಯಿತೇನೋ ಅಂತ ಓದುಗರಿಗೂ ಆತಂಕ ಹುಟ್ಟುವ ಕ್ಷಣದಲ್ಲಿ, ತಟ್ಟನೆ ಅದನ್ನು ಮೀರಿದ ಸಂಯಮದ ನಡವಳಿಕೆಯ ಮೂಲಕ ಬದುಕು ಚಲನಶೀಲತೆಯನ್ನು ಪಡೆದು ಕೊಳ್ಳುವಂತೆ ನಿರೂಪಿಸುತ್ತಾರೆ. ಇದು ಬದುಕಿನ ಜೀವಂತಿಕೆಯ ಲಕ್ಷಣದಂತೆ, ಆಶಾವಾದಂತೆ ಗೋಚರಿಸುತ್ತದೆ.

ಸಂಬಂಧಗಳ ಮೂಸೆಯಲ್ಲಿ ಇಲ್ಲಿನ ಕತೆಗಳು ಅರಳುತ್ತವೆ, ಕನಲುತ್ತವೆ, ಹಾಗೇ ಜೊತೆಗೂಡುತ್ತಲೇ ತಮ್ಮ ಹಾದಿಯನ್ನ ಕಂಡುಕೊಂಡು ಬದುಕನ್ನ ಸಹ್ಯಗೊಳಿಸಿಕೊಳ್ಳುತ್ತವೆ. ಒತ್ತಾಗಿ ಜೋಡಿಸಿದ ಎಳೆ ನೂಲಿನ ದಾಂಪತ್ಯ ದ ನೇಯ್ಗೆಯಲ್ಲಿ ಒಂದು ಎಳೆ ಸಿಕ್ಕಾದರೂ,ಕಿತ್ತು ಹೋದರೂ, ತಕ್ಷಣಕ್ಕೆ ಗೋಚರವಾಗಿ ಬಿಡುತ್ತದೆ. ಒಂದು ಕ್ಷಣ ಎಳೆ ತಪ್ಪಿದ ನೇಯ್ಗೆಯ ಕುರಿತ ಸಂಕಟ, ಮನದ ಹಳಹಳಿಕೆ ಸಹಜ. ಹಾಗಂತ ಇಲ್ಲಿಯ ಕತೆಗಳಲ್ಲಿ ಇವು ಮಿತಿ ಮೀರಿ ಮನದ ಸ್ವಾಸ್ಥ್ಯವನ್ನ ಹಾಳುಗೆಡುವುದಿಲ್ಲ, ಕಳೆದು ಹೋದದ್ದನ್ನ ಬಲವಂತವಾಗಿ ಪಡೆದುಕೊಳ್ಳಲು ಹವಣಿಸುವುದಿಲ್ಲ, ಜೊತೆಗೆ ಬದುಕಿನಿಂದ ವಿಮುಖರಾಗುವುದೂ ಇಲ್ಲ. ಅದೇ ಬದುಕಿನೊಡಗೂಡಿ ಚಲಿಸುತ್ತಾ ತನ್ನ ಮನೋಲಹರಿಯನ್ನ ತನ್ನ ಬದುಕಿನ ಚೈತನ್ಯದ ತೇವ ಉಳಿಸಿಕೊಳ್ಳುವುದರತ್ತ ಹರಿಯ ಬಿಡುವುದನ್ನು ನಾವು ಗಮನಿಸಬಹುದು.
ಸಂಬಂಧಗಳು ಎಳೆ ತಪ್ಪಿದರೂ ಅದನ್ನು ಗೋಜಲಾಗಿಸದೇ ನಿರ್ಲಿಪ್ತತೆಯಿಂದ ,ಸಾವಾಧಾನದಿಂದ ಅದನ್ನು ದಾಟಿ ಹೋಗುವ ಒಂದು ಪ್ರಬುದ್ದ ನಡವಳಿಕೆಯನ್ನ ಇಲ್ಲಿನ ಎಲ್ಲ ಕತೆಗಳಲ್ಲಿ ನಾವು ಕಾಣಬಹುದು. ಬದಲಾದ ಕಾಲಘಟ್ಟದಲ್ಲಿ ಬದಲಾಗುತ್ತಿರುವ ಸಂಬಂಧಗಳ ಸಂಕೀರ್ಣತೆಯನ್ನು ಹಾಳುಗೆಡದಂತೆ ಕಾಪಿಡುತ್ತಲೇ ತನ್ನತನದ ಉಳಿವಿಗಾಗಿ ಹೆಜ್ಜೆ ಹಾಕುವ ದಿಟ್ಟ ನಿರ್ಧಾರವನ್ನು ಹೆಚ್ಚಿನ ಕತೆಗಳಲ್ಲಿ ಗೋಚರಿಸುತ್ತದೆ.
ಇಲ್ಲಿಯ ಕತೆಗಳಲ್ಲಿ ನಿರಾಶದಾಯಕ ಅಂತ್ಯವಿಲ್ಲ,ಅಗತ್ಯಕ್ಕಿಂತ ಹೆಚ್ಚಿನ ಸಿಟ್ಟು, ಆಕ್ರೋಶ, ಅಬ್ಬರ ಇಲ್ಲ. ಘಟಿಸಿ ಹೋಗುವ ಎಲ್ಲ ಸಂಗತಿಗಳಿಗೂ ಕಾರಣ ಹುಡುಕಿ ಅರ್ಥ ಕಂಡುಕೊಳ್ಳುತ್ತದೆ. ಮನಸು ಒಮ್ಮೆಗೆ ಉಕ್ಕಿದರೂ ಮತ್ತೆ ಎಂದಿನಂತೆ ನದಿಯ ಶಾಂತತೆಯನ್ನ ಪಡೆದು ಕೊಂಡು ತನ್ನ ಗಮ್ಯದೆಡೆಗಷ್ಟೇ ದಿಟ್ಟಿ ನೆಟ್ಟು ಚಲಿಸುತ್ತವೆ. ಇಲ್ಲಿಯ ಕತೆಯ ಪ್ರತೀ ಹೆಣ್ಣಿನ ಒಳಗೂ ಬಂಡಾಯವಿದೆ. ತನಗೆ ಬೇಕಾದಂತೆ ಬದುಕುವ ಹಂಬಲಿಕೆ ಇದೆ. ಆದರೆ ಅದು ಎಲ್ಲೂ ಸದ್ದು ಮಾಡುವುದಿಲ್ಲ. ಸಮಸ್ಯೆ ಯನ್ನ ಸಮಸ್ಯೆಯಾಗಿಸದೆ ,ಅದರ ಹಿಂದಿನ ಮನಸ್ಥಿಯ ಕುರಿತು ತರ್ಕ ಮಾಡುತ್ತವೆ. ಆ ಕಾರಣದಿಂದಲೇ ಇಲ್ಲಿಯ ಕತೆಗಳು ನಿಂತಲ್ಲೇ ಮೀರಿ ಬೆಳೆಯುವ ಛಾತಿಯನ್ನು ಹೊಂದಿವೆ. ಆ ಕಾರಣಕ್ಕಾಗಿಯೇ ಕತೆ ಆಪ್ತವಾಗುತ್ತದೆ. ಮೊದಲ ಸಂಕಲನದಲ್ಲಿಯೇ ಭರವಸೆಯ ಕಥಾ ಬೀಜವನ್ನ ಬಿತ್ತಿರುವ ಕತೆಗಾರ್ತಿಯಿಂದ ಇನ್ನೂ ಹೆಚ್ಚಿನದ್ದನ್ನು ನಿರೀಕ್ಷಿಸಬಹುದು. ದೀಪಾರ ಕಥಾ ಯಾನಕ್ಕೆ ಯಶಸ್ಸು ದಕ್ಕಲಿ.






ಹಲವು ಸಮಸ್ಯೆಗಳಿಗೆ ಮೌನ ಉತ್ತಮ ಮದ್ದು. ಪ್ರಾಮಾಣಿಕತೆ ಹೇಡಿತನವೂ ಅಲ್ಲ.ಒಳ್ಳೆಯ ವಿಮರ್ಶೆ. ಒಳ್ಳೆಯ ಕಥೆಯೂ ಇರಬಹುದು ಎಂದು ವಿಮರ್ಶೆ ತಿಳಿಸುತ್ತದೆ. ಧನ್ಯವಾದಗಳು.