ಸುಮಂಗಲಾ
ಸೂಚನೆ: ಕಥಾ ಶೀರ್ಷಿಕೆಯನ್ನು ಕಥೆಯ ಕೊನೆಯಲ್ಲಿ ನೀಡಲಾಗಿದೆ ಮತ್ತು ಇದು ಹೋಳಿಹುಣ್ಣಿಮೆಯಂದು ನಡೆದ ಸತ್ಯಸ್ಯ ಸತ್ಯ ಘಟನೆ!
ಶ್ರೀಮಾನ್ ಶ್ರೀ ವಸ್ತಾರೆಯವರಿಗೆ ಅಲಾರಂ ಬಾರಿಸಿದ್ದು ಕನಸಿನಲ್ಲಿ ಎಂಬಂತೆ ಅನ್ನಿಸುತ್ತ, ಅದು ಏಳ್ತೀಯೋ ಇಲ್ವೋ ಎಂದು ಬೆದರಿಸುವಂತೆ ಪದೇ ಪದೇ ಬಡಿದುಕೊಳ್ಳತೊಡಗಿದಾಗ ಇದು ಕನಸಲ್ಲ, ತನ್ನದೇ ಮೊಬೈಲ್, ಬೆಡ್ ಮೇಲೆ ತನ್ನ ಪಕ್ಕದಲ್ಲೇ ಇದೆ ಎಂಬುದು ನಿಧಾನಕ್ಕೆ ಅರಿವಿಗೆ ಬರುತ್ತ, ಕಣ್ಣು ಬಿಡಲೂ ಆಗದೇ ಇನ್ನೂ ಸ್ವಲ್ಪ ಹೊತ್ತು ಮಲಗೋಣ ಎನ್ನಿಸಿತು. ಕಣ್ಣು ಮುಚ್ಚಿದೊಡನೆಯೇ ಇಡೀ ದಿನದ ಕೆಲಸಗಳ ವೇಳಾಪಟ್ಟಿ ಪಿಚ್ಚುಗಣ್ಣಲ್ಲಿ ತೆರೆದುಕೊಳ್ಳುತ್ತ, ಚೂರು ತಡವಾದರೆ ಟ್ರಾಫಿಕ್ ಎಂಬ ಹೊಗೆರಕ್ಕಸನ ಹೊಟ್ಟೆಯೊಳಗೆ ಹೊಕ್ಕು, ಉಸಿರುಗಟ್ಟಿ, ಆಫೀಸೆಂಬ ಲೋಕ ಸೇರುವಷ್ಟರಲ್ಲಿ ಆಗುವ ರಗಳೆಗಳೆಲ್ಲ ಥಕಥೈ ಎಂದು ಈಗಲೇ ಹೆದರಿಸುತ್ತ, ಬೇಡಪ್ಪ ಎದ್ದುಬಿಡೋಣ ಎಂದು ಬಲವಂತವಾಗಿ ಕಣ್ಣು ಬಿಟ್ಟರು.
ಶ್ರೀ ವಸ್ತಾರೆಯವರು ಕಣ್ಣು ಬಿಟ್ಟಿದ್ದೇ ಇನ್ನಿಲ್ಲದ ಆಘಾತಕ್ಕೊಳಗಾಗಿ ಹಾಂ ಎಂದು ಕಣ್ಣಷ್ಟೇ ಅಲ್ಲ, ಬಾಯನ್ನೂ ತೆರೆದು, ತೆರೆದ ಬಾಯನ್ನು ಪುನಾ ಮುಚ್ಚಲೂ ಸಾಧ್ಯವಾಗದ ಗಾಭರಿಯಲ್ಲಿ, ಏಳಲಿಕ್ಕೂ ಆಗದೇ ಎರಡೂ ಕೈಯನ್ನು ಹಾಸಿಗೆಗೆ ಊರಿ, ಆಂ ಎಂದು ಜೋರಾಗಿಯೇ ಅಂದರು. ಛೇ ಇರಲಿಕ್ಕಿಲ್ಲ, ಪಿಚ್ಚುಗಣ್ಣಲ್ಲಿ ಕೆಲವೊಮ್ಮೆ ಏನಾದ್ರೂ ಬ್ಯಾರೆನೇ ಕಾಣಿಸುತ್ತೆ ಎಂದುಕೊಂಡ ವಸ್ತಾರೆಯವರು ಈಗ ಕೈಯಿಂದ ಕಣ್ಣೊರೆಸಿಕೊಂಡು, ಇನ್ನಷ್ಟು, ಮತ್ತಷ್ಟು ಅಗಲವಾಗಿ ಕಣ್ಣು ತೆರೆದು ನೋಡಿದರು.
ಏನಾಶ್ಚರ್ಯ, ಏನಾಘಾತ…! ಶ್ರೀಮಾನ್ ಶ್ರೀ ವಸ್ತಾರೆಯವರು ಮಲಗಿದ ಅವರ ಸುರಸುಂದರ ಬೆಡ್ರೂಂನ ಎಲ್ಲ ದೃಶ್ಯಗಳು ಮಾಯವಾಗಿ, ಗೋಡೆಗಳೂ ಕಾಣದಂತಾಗಿ, ಅಷ್ಟೇಕೆ ಮನೆಗೆ ಮನೆಯೇ ನಾಪತಾ ಆಗಿ, ಮನೆ ಮುಂದೆ ವಸ್ತಾರೆಯವರು ತಮ್ಮ ನಾಗಹಸ್ತಗಳಿಂದ, ತಮ್ಮ ಶ್ರೀಕರಗಳಿಂದ ನೆಟ್ಟು, ಪೋಷಿಸಿದ್ದ ಗಿಡಗಂಟೆಗಳೆಲ್ಲ ಮಟಾಮಾಯವಾಗಿ, ಕೇವಲ ಅವರು ಮಲಗಿದ್ದ ಮಂಚ ಮಾತ್ರವುಳಿದಿತ್ತು! ಮನೆ ಮುಂದೆ ಗೋಡೆಗಂಟಿಸಿದ್ದ ೭೧೨, ವಸ್ತಾರೆ ಎಂಬ ಫಲಕ ಮಾತ್ರ ಸರ್ವವ್ಯಾಪಿ, ಸರ್ವಶಕ್ತ ಪರಮಾತ್ಮನೆಂಬುವನಿದ್ದರೆ ಆತನೇ ಅಗೋಚರ ದಾರವೊಂದರಿಂದ ತೂಗುಬಿಟ್ಟಿದ್ದಾನೇನೋ ಎಂಬಂತೆ ನೇತಾಡುತ್ತಿತ್ತು!! ಅಕಟಕಟಾ ಎಂದು ನಾಟಕದ ಸೂತ್ರದಾರನ ಹಾಗೆ ಲೊಚಗುಟ್ಟುವಷ್ಟೂ ಚೈತನ್ಯವಿಲ್ಲದೇ, ಅಕ್ಕ ಪಕ್ಕ ನೋಡಲೂ ಹೆದರಿಕೆಯೆನ್ನಿಸಿ, ಗಂಟಲೊಳಗೆ ಏನೋ ಸಿಕ್ಕಿಕೊಂಡ ಹಾಗೂ ಅನ್ನಿಸುತ್ತ, ಎಂಜಲು ನುಂಗಲೂ ಆತಂಕಪಡುತ್ತ ಸುಮ್ಮನೇ ಕುಳಿತರು. ’ರಾತ್ರಿ ಮಲಗುವಾಗ ನಾನೇ ಮುಂದಿನ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡು, ಅದಕ್ಕಿದ್ದ ಮೂರೂ ಬೋಲ್ಟ್ಗಳಲ್ಲಿ ಒಂದನ್ನೂ ಬಿಡದೆ ಸರಿಯಾಗಿ ಹಾಕಿ, ಮತ್ತೊಮ್ಮೆ ಎಳೆದು ಬೀಗಸರಿಯಾಗಿ ಬಿದ್ದಿದೆ ಎಂದು ಖಾತ್ರಿಪಡಿಸಿಕೊಂಡ ನಂತರ ಮಲಗಿದ್ದು, ಒಂದು ಸ್ವಸ್ಥ ನಿದ್ರೆ ತೆಗೆದೇಳುವಷ್ಟರಲ್ಲಿ ಹಿಂಗೆ ಮಟಾಮಾಯವಾಗುತ್ತದೆ ಎಂದರೆ… ನಂಬಲಿಕ್ಕೇ ಆಗದಿದ್ರೂ, ನಂಬಲೇ ಬೇಕಾದ ಸ್ಥಿತಿ ಬಂದಿದೆಯಲ್ಲ, ಈ ಕ್ಷಣದಲ್ಲಿ ಯಾವ ನನ್ ಮಗ ದೇವರು ನಿದ್ರೆಯಿಂದ ಎದ್ದಿರುತ್ತಾನಪ್ಪ, ಯಾವ ದೇವರನ್ನು ನೆನೆಯಲಪ್ಪ’ ಎಂದುಕೊಳ್ಳುತ್ತ ರಾತ್ರಿ ಮಲಗುವ ಮೊದಲು ಏನೇನಾಯ್ತು ಎಂದು ನೆನಪಿಸಿಕೊಳ್ಳಲು ಯತ್ನಿಸಿದರು ಶ್ರೀಮಾನ್ ಶ್ರೀ ವಸ್ತಾರೆಯವರು.
ಅಪರ್ಣ ಹಿಂದಿನ ದಿನ ರಜನೀಕಾಂತ್ ಜೊತೆ ಸಿನಿಮಾ ಶೂಟಿಂಗ್ ಎಂದು ಹೋಗಿದ್ದಾಳೆ, ಅದ್ಯಾವುದೋ ಸಿನಿಮಾದ ೫ನೇ ಆವೃತ್ತಿ ಎಂದಿದ್ದಳಲ್ಲ, ಸಿನಿಮಾದ ಹೆಸರನ್ನೂ ಹೇಳದೇ, ಬಂದ್ಮೇಲೆ ಹೇಳ್ತೀನಿ, ಅಲ್ಲೀವರೆಗೆ ಇದು ಮಹಾಗುಟ್ಟು, ಪ್ರೆಸ್ನವರಿಗೂ ಒಂದೆಳೆ ಬಿಟ್ಟುಕೊಡ್ತಾ ಇಲ್ಲ ಗೊತ್ತ ಎಂದು ಕಣ್ಣುಮಿಟುಕಿಸಿದ್ದಳಲ್ಲ ಎನ್ನುವುದು ಆ ಆಘಾತ ಗಾಭರಿಯಲ್ಲಿಯೂ ಸ್ಪಷ್ಟವಾಗಿಯೇ ನೆನಪಾಯಿತು. ಒಹ್ ಸದ್ಯ, ಅವಳೂ ಕೂಡ ಮನೆಯೊಡನೆ ಮಟಾಮಾಯವಾಗಿಲ್ಲ, ಹಿಂದಿನ ದಿನ ಶೂಟಿಂಗಿಗೆ ಚೆನೈಗೆ ಹೋಗುವುದಿದೆ ಎಂದವಳನ್ನು ರಾತ್ರಿ ತಾನೇ ಏರ್ಪೋರ್ಟಿಗೆ ಬಿಟ್ಟುಬಂದಿದ್ದೆ ಎನ್ನುವುದು ಆ ನೆನಪಿನೊಂದಿಗೆ ಬಿಚ್ಚಿಕೊಂಡು, ಒಹ್ ಥ್ಯಾಂಕ್ ಗಾಡ್ ಎಂದು ಒಂಥರದ ನಿರಾಳತೆಯಿಂದ ವಸ್ತಾರೆಯವರು ಜೋರಾಗಿ ಹೇಳಿಕೊಂಡರು.
ಅರೆಕ್ಷಣವಷ್ಟೆ ಆ ನಿರಾಳತೆ… ಮತ್ತೆ ಮರುಕ್ಷಣದಲ್ಲಿ ಅರೆ, ಶೂಟಿಂಗ್ ಮುಗಿಸಿಕೊಂಡು ಅಪರ್ಣ ಬಂದಾಗ ಏನು ಹೇಳುವುದು ಎಂದು ಮತ್ತೆ ಕಳವಳವಾಗತೊಡಗಿತು.

ಅಲ್ಲ, ಹೀಗೆಲ್ಲ ಮನೆಗೆ ಮನೆಯೇ ಇಡಿಯಾಗಿ ನಾಪತಾ ಹ್ಯಾಗೆ ಆಗುತ್ತೆ, ಇದೇನು ನೂರಾರು ವರ್ಷಗಳ ಹಿಂದೆ ಪುರಾಣಗಿರಾಣದಲ್ಲಿ ಯಾರೋ ಕವಿ ಕಲ್ಪಿಸಿಕೊಳ್ಳಬೇಕು ಎಂದುಕೊಂಡಿದ್ದ ದೃಶ್ಯಾವಳಿಯೇ ಅಥವಾ ಇನ್ನೂ ಹಾಲಿವುಡ್ಡಿನವರ ಕಾಲ್ಪನಿಕತೆಗೂ ಎಟುಕದ, ಮುಂದೆಂದೋ ಅವರು ಚಿತ್ರೀಕರಿಸಬಹುದಾದ ಚಿತ್ರಿಕೆಯೇ ಎಂದು ಕೌತುಕದಿಂದ ಅರೆನಿಮಿಲೀತರಾಗಿ ತಮ್ಮನ್ನೇ ಪ್ರಶ್ನಿಸಿಕೊಳ್ಳುತ್ತ ಕುಳಿತ ವಸ್ತಾರೆಯವರಿಗೆ ಇದರ ಹಿಂದೆ ಯಾರ ಕೈವಾಡವಿರಬಹುದು, ಕಾಂಗ್ರೆಸ್ ಅಥವಾ ಬಿಜೆಪಿ ಅಥವಾ ಜೆಡಿಯು ಎಂದು ನಾಲ್ಕಾರು ಪಕ್ಷಗಳನ್ನು ನೆನಪಿಸಿಕೊಳ್ಳತೊಡಗಿದರು. ಆದರೆ ಅದ್ಯಾವುದಕ್ಕೂ ಸೇರದ, ತನ್ನ ಪಾಡಿಗೆ ತಾನಿರುವ ಸುವಿಖ್ಯಾತ ವಾಸ್ತುಶಿಲ್ಪಿಯ ಮನೆಯನ್ನೇ ಮಟಾಮಾಯಮಾಡುವ ಕಾಯಕಕ್ಕೆ ಕೈಹಾಕಲು ಆ ಯಾವ ಪಕ್ಷಗಳಿಗೆ ಸಮಯವಿದೆ, ಒಬ್ಬರಿಗೊಬ್ಬರ ಕಾಲೆಳೆಯಲಿಕ್ಕೇ ಅವರಿಗೆ ಸಮಯ ಸಾಲದು ಎಂದುಕೊಂಡು ಆ ಸಾಧ್ಯತೆಯನ್ನು ತಳ್ಳಿ ಹಾಕಿದರು. ಮತ್ತೆ ಯಾರಾದರೂ ಮ್ಯಾಜಿಶಿಯನ್ಗಳ ಕರಾಮತು ಇರಬಹುದೇ, ತನಗೇ ನೆನಪಿಲ್ಲದೇ ತಾನು ರಾತ್ರಿ ಯಾವುದಾದರೂ ಮ್ಯಾಜಿಕ್ ಶೋಗೆ ಹೋಗಿದ್ದು, ಅಲ್ಲಿ ಇಂಥದೊಂದು ಮಾಯಾಇಂದ್ರಜಾಲದ ಭಾಗವಾಗಿ ಇದು ನಡೆದಿರಬಹುದೇ ಎಂದುಕೊಳ್ಳುವಾಗ, ಆ ಸಾಧ್ಯತೆಯೂ ಕಡಿಮೆ ಎನ್ನಿಸಿತು. ಏಕೆಂದರೆ ಅಪರ್ಣಾಳನ್ನು ಏರ್ಪೋರ್ಟಿಗೆ ಬಿಟ್ಟು ತಾನು ಮನೆ ಸೇರಿದಾಗ ಕೈಯಲ್ಲಿದ್ದ ಮೊಬೈಲ್ ಹನ್ನೊಂದು ಘಂಟೆ ಐವತ್ತೊಂಬತ್ತು ನಿಮಿಷ ಐವತ್ತೊಂಬತ್ತು ಸೆಕೆಂಡ್ ಎಂದು ತೋರಿಸುತ್ತಿತ್ತು. ರಾತ್ರಿ ಮನೆಯೊಳಗೆ ಕಾಲಿಡುವ ಮೊದಲು ತಲೆ ಎತ್ತಿ ಆಕಾಶ ನೋಡಿದ್ದೆ, ಹಾಲುಚೆಲ್ಲಿದಂತಹ ಆಕಾಶದ ಮಧ್ಯೆ ಅಮಲುಗಣ್ಣಿನಲ್ಲಿದ್ದ ಚಂದ್ರ ಕಾಣಿಸಿದ್ದ. ಬಹಳ ದಿನಗಳ ನಂತರ ಬೆಳದಿಂಗಳಿನ ಬಟ್ಟಲಿನಲ್ಲಿ ಅದ್ದಿ ತೆಗೆದಂತಿದ್ದ ಸುಂದರ ಆಕಾಶ ಕಂಡು ಇವತ್ತು ಹುಣ್ಣಿಮೆ ಇರಬಹುದೇ ಎಂದು ನ್ಯಾನೋಸೆಕೆಂಡ್ ಆಲೋಚನೆಗೆ ತೆರೆದುಕೊಂಡಿದ್ದು ನೆನಪಾಯಿತು.
ನಿನ್ನೆ ಹುಣ್ಣಿಮೆ… ಹಂಗಾದ್ರೆ ಇದು ಯಾವುದೋ ಕಾಣದ ದೆವ್ವದ ಕೈವಾಡವಾ ಎಂದು ಫಕ್ಕನೆ ಅನ್ನಿಸುವಷ್ಟರಲ್ಲಿ, ಬೆನ್ನುಹುರಿಯಿಂದ ಛಳಕ್ ಎಂದು ಒಂದು ನಡುಕ ಆವರಿಸುತ್ತ, ವಸ್ತಾರೆಯವರಿಗೆ ನಿಜಕ್ಕೂ ಭಯವೆನ್ನಿಸಿತು. ಮತ್ತೆ ಮರುಕ್ಷಣವೇ, ‘ಛೇ, ದೆವ್ವಗಳೆಲ್ಲ ಚಂದಾಮಾಮನ ಕಥೆಯ ಕಾಲಕ್ಕೇ ಮುಗಿಯಿತು, ಬೆಂಗಳೂರಿನಲ್ಲಿ ಅರ್ಧರಾತ್ರಿಯೂ ಮನಸ್ಸಿಗೆ ಬಂದಂತೆ ಯಮವೇಗದಿಂದ ಓಡಾಡುವ ವಾಹನಸವಾರರು ಇರುವಾಗ ದೆವ್ವಗಳೆಲ್ಲ ಒಂದೋ ಅಪಘಾತಕ್ಕೀಡಾಗಿ ಆತ್ಮ ಸಮೇತವಾಗಿ ಫೈನಲ್ ಸ್ಪಾಟ್ಡೆತ್ ಆಗಿರುತ್ತವೆ ಇಲ್ಲದಿದ್ದರೆ ಚೂರುಪಾರು ಜೀವವುಳಿಸಿಕೊಂಡಿದ್ದರೆ, ಯಾವಾಗಲೋ ಇಲ್ಲಿಂದ ಪೇರಿ ಕಿತ್ತು, ಪೇಪರುಗಳಲ್ಲಿ ಪ್ರತಿದಿನ ಕಾಣಿಸಿಕೊಳ್ಳುವ ’ಕುಗ್ರಾಮ’ ಎಂಬ ಖರೇಖರೇ ಕುಗ್ರಾಮಗಳ ವಿಳಾಸ ಹಿಡಿದು, ಹುಡುಕಾಡಿ, ಅಲ್ಲಿ ತಳವೂರಿರುತ್ತವೆ’ ಎಂದು ಆಲೋಚಿಸಿದರು. ಅಬ್ಬ, ಇಂತಹ ಆಘಾತಕಾರಿ, ಎದೆಯೊಡೆದೇ ಹೋಗುವಂತಹ ಸನ್ನಿವೇಶದಲ್ಲಿಯೂ, ತಾನು ಇಷ್ಟು ಅಗದಿ ಲಾಜಿಕಲ್ ಆಗಿ ಯೋಚಿಸುತ್ತೇನಲ್ಲ ಎಂದು ವಸ್ತಾರೆಯವರಿಗೆ ತಮ್ಮ ಬಗ್ಗೆಯೇ ಒಂಥರದ ಅಭಿಮಾನವೆನ್ನಿಸುತ್ತ, ಯಾರು ಏನನ್ನೇ ಮಟಾಮಾಯವಾಗಿಸಿದರೂ ತನ್ನ ತಾರ್ಕಿಕ ಬುದ್ಧಿಯನ್ನು ಮಟಾಮಾಯಮಾಡಲು ಸಾಧ್ಯವಿಲ್ಲವಲ್ಲ ಎಂದು ಒಂದು ನಮೂನೆ ಖುಷಿಯೆನ್ನಿಸುತ್ತ, ಅರೆ, ನನ್ನ ವಾಸ್ತುಶಿಲ್ಪದ ಮಿದುಳು ಇದ್ದಲ್ಲೇ ಇದೆ ತಾನೆ ಎಂದು ಪ್ರಶ್ನಿಸಿಕೊಳ್ಳುತ್ತ, ಹಂಗಾರೆ ಮನಸ್ಸಲ್ಲೇ ಒಂದಷ್ಟು ಗೆರೆಗಳನ್ನು ನೆನಪಿಸಿಕೊಳ್ಳೋಣ ಎಂದು ಒಮ್ಮೆ ಸುದೀರ್ಘವಾಗಿ ಉಸಿರೆಳೆದುಕೊಂಡರು.
ಅವರಿಗೆ ಮತ್ತಷ್ಟು ಆಘಾತವೇ ಕಾದಿತ್ತು. ವಸ್ತಾರೆಯವರಿಗೆ ಏನು ಮಾಡಿದರೂ, ತಾವು ಇಷ್ಟು ದಿನ ವಾಸ್ತುಶಿಲ್ಪದಲ್ಲಿ ಕಲಿತಿದ್ದಾಗಲೀ, ಇಷ್ಟು ದಿನ ಅಷ್ಟೆಲ್ಲ ಛಂದಾತಿಛಂದದ ವಿನ್ಯಾಸಗಳನ್ನು ಮಾಡಿ, ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಬ್ಲೂಪ್ರಿಂಟ್ಗಳ ಎಳೆಗಳಾಗಲೀ, ಎಷ್ಟೆಲ್ಲ ಸುಂದರಾತಿಸುಂದರ ಮನೆಗಳನ್ನು, ಕಚೇರಿಗಳನ್ನು ಕಟ್ಟಲು ಹಾಕಿಕೊಟ್ಟಿದ್ದ ವಿನ್ಯಾಸಗಳಾಗಲೀ ಒಂಚೂರೂ, ಎಳ್ಳುಕಾಳು ಬಿಡಿ, ಸಾಸಿವೆಕಾಳಿನಷ್ಟೂ ನೆನಪಾಗದೇ, ಏನೋ ಒಂಥರಾ ಖಾಲಿಖಾಲಿ ಎನ್ನಿಸತೊಡಗಿತು. ಎಷ್ಟೇ ನೆನಪಿಸಿಕೊಳ್ಳಲು ಯತ್ನಿಸಿದರೂ, ಕಪ್ಪು ಕಪ್ಪು ಚಚ್ಚೌಕದ ಆಕಾರಗಳೇ ಕಣ್ಣಮುಂದೆ ಬರತೊಡಗಿತು. ಕಣ್ಣುಮುಚ್ಚಿ, ಇನ್ನಷ್ಟು ನಿಡಿದಾಗಿ ಉಸಿರು ತೆಗೆದುಕೊಂಡು, ನೆನಪಿಸಿಕೊಳ್ಳಲು ಪ್ರಯತ್ನಿಸಿದರು. ಕೈಯಲ್ಲಿಯೇ ಏನಾದರೂ ರೇಖೆ ಎಳೆಯೋಣ ಎಂದು ಪ್ರಯತ್ನಿಸಿದರು, ಎಷ್ಟೇ ಪ್ರಯತ್ನಿಸಿದರೂ ಅಂತಹ ಯಾವುದೇ ರೇಖೆಗಳು ನೆನಪಾಗದೇ, ಕೈಬೆರಳುಗಳು ಒಡ್ಡೊಡ್ಡಾಗಿ ಏನೋ ಚಿತ್ರಿಸಿದಂತೆ ಅನ್ನಿಸುತ್ತ, ಈಗ ಕೌತುಕಪಡಲೂ ಆಗದಷ್ಟು ನಿಶ್ಚೇತನರಾಗಿ ಕುಳಿತರು. ಹಂಗಾರೆ ಮನೆಯ ಜೊತೆ ತನ್ನ ತಲೆಯ ಯಾವುದೋ ಭಾಗವನ್ನೇ ಕದ್ದೊಯ್ದುಬಿಟ್ಟಿದ್ದಾರೆಯೇ ಎಂದು ತಮ್ಮನ್ನೇ ಪ್ರಶ್ನಿಸಿಕೊಂಡ ವಸ್ತಾರೆಯವರಿಗೆ ಪಕ್ಕನೆ ಕೈಎತ್ತಿ, ಚೂರು ತಲೆಯನ್ನು ಮುಟ್ಟಿಕೊಂಡು ನೋಡಿಕೊಳ್ಳೋಣ ಎನ್ನಿಸಿತಾದರೂ, ಅಷ್ಟೇ ಪಕ್ಕನೆ ಭಯವೂ ಅನ್ನಿಸಿತು. ಅಲ್ಲ, ತಲೆಯ ಯಾವ ಕಡೆ ಸೃಜನಶೀಲ ವಿಚಾರಗಳು ಮೂಡುವುದು, ಎಡಭಾಗವೋ ಅಥವಾ ಬಲಭಾಗವೋ.. ಹಾಂ, ಬಲಭಾಗ. ಆದರೆ ತನ್ನ ತಾರ್ಕಿಕ ಚಿಂತನೆ, ಗಣಿತವೂ ಅಷ್ಟೇ ಚೆನ್ನಾಗಿದೆ, ಹಿಂಗಾಗಿ ಮಿದುಳಿನ ಎರಡೂ ಭಾಗಗಳು ಆಯಾಯ ಸಂದರ್ಭಕ್ಕೆ ತಕ್ಕಂತೆ ಮೇಲುಗೈಯಾಗುತ್ತದೆ, ಹಂಗಾರೆ, ಎರಡೂ ಭಾಗದಿಂದ ಚೂರು ಚೂರು ತೆಗೆದುಕೊಂಡು, ಖರೇಖರೇ ತಲೆಯ ಎರಡೂ ಕಡೆ ಚೂರು ಮುಕ್ಕಾಗಿದ್ದರೆ ಎಂದು ಇನ್ನಿಲ್ಲದ ಭಯವೂ ಆಯಿತು. ಮುಟ್ಟಿನೋಡಿಕೊಂಡು, ಒಂದು ಸಣ್ಣ ಭಾಗ, ಆ ಭಾಗದೊಳಗಿನ ವಾಸ್ತುಶಿಲ್ಪಿ ಮಿದುಳು ಇಲ್ಲ ಎಂದು ಇನ್ನೊಂದು ಆಘಾತಕ್ಕೀಡಾಗುವುದಕ್ಕಿಂತ ಮುಟ್ಟಿ ನೋಡಿಕೊಳ್ಳದೇ ಇರುವುದೇ ವಾಸಿ ಎಂದುಕೊಂಡರು.
ಆಗಿದ್ದಾಯ್ತು, ಇನ್ನು ಮುಂದಿನ ಆಲೋಚನೆ ಮಾಡಬೇಕು ಎಂದುಕೊಂಡು ಮೊಬೈಲ್ನಿಂದ ಪೊಲೀಸ್ಗೆ ಫೋನಾಯಿಸುವುದೇ ಅಥವಾ ಸ್ನೇಹಿತರಿಗ್ಯಾರಿಗಾದ್ರೂ ಫೋನಾಯಿಸಿ ಹಿಂಗಿಗೆ ಅಂತ ಹೇಳಲೇ ಎಂದು ಆಲೋಚಿಸುತ್ತಲೇ ಮೊದಲು ಅಪರ್ಣಳಿಗೆ ಹೇಳಿಬಿಡೋದು ವಾಸಿ, ಅರೆ, ಏನೇ ಚೂರು ಹೆಚ್ಚುಕಡಿಮೆಯಾದ್ರೂ ತಾನು ಮೊದಲು ಹೇಳಿಕೊಳ್ಳುವುದು ತನ್ನ ಮನದನ್ನೆ ಅಪರ್ಣೆಗೆ ಅಲ್ಲವೇ, ಇಷ್ಟೊತ್ತು ಯಾಕೆ ನೆನಪಾಗಲಿಲ್ಲ ಎಂದುಕೊಂಡು, ಪಟಪಟನೆ ಅರ್ಪಣನ ಮೊಬೈಲ್ಗೆ ಸ್ಪೀಡ್ ಡಯಲ್ ಮಾಡಿದರು. ಮೊದಲು ವಸ್ತಾರೆಯವರಿಗೆ ಔಟ್ ಆಫ್ ಕವರೇಜ್ ಏರಿಯಾ ಎಂದು ಕೇಳಿತು, ಇನ್ನೊಂದು ಸಂಖ್ಯೆಗೆ ಪ್ರಯತ್ನಿಸೋಣ ಎಂದು ಪ್ರಯತ್ನಿಸಿದರೆ ದಿಸ್ ನಂಬರ್ ಡಸ್ ನಾಟ್ ಎಕ್ಸಿಸ್ಟ್ ಎಂದು ಬಂದಿತು, ಪದೇ ಪದೇ ಒಂದರ ನಂತರ ಇನ್ನೊಂದು ಪ್ರಯತ್ನಿಸುವಾಗ ಒಮ್ಮೆ ಇಂಗ್ಲಿಶ್ನಲ್ಲಿ ಇನ್ನೊಮ್ಮೆ ಇನ್ನಾವುದೋ ಭಾಷೆಯಲ್ಲಿ ಉತ್ತರಗಳನ್ನು ಕೇಳುತ್ತ, ಕೊನೆಯಲ್ಲೊಮ್ಮೆ ಇಲ್ಲೈ ಎಂಬುದನ್ನು ಕೇಳಿ, ಛೇ, ಅವಳು ಇವತ್ತು ಎಲ್ಲೋ ಚೆನೈ ಹತ್ತಿರ ಶೂಟಿಂಗ್ ಇದೆ, ನಂತರ ಸಿಂಗಾಪುರಕ್ಕೆ ಹೋಗ್ತಿದ್ದೀವಿ ಎಂದಿದ್ದಳಲ್ಲ ಎನ್ನುವುದು ನೆನಪಾಯಿತು. ಅಬ್ಬ, ಸದ್ಯ, ಮನೆಕದ್ದೊಯ್ದವರು ನೆನಪಿಸಿಕೊಳ್ಳುವ ಶಕ್ತಿಯನ್ನೂ ಮಟಾಮಾಯವಾಗಿಸಿಲ್ಲ ಎಂದು ಸಮಾಧಾನಿಸಿಕೊಳ್ಳುತ್ತ, ಮನೆ ಮಟಾಮಾಯವಾಗುವ ಮೊದಲು ಈಗ ಒಂದೆರಡು ವಾರದಿಂದ ಏನೇನೆಲ್ಲ ನಡೆಯಿತು ಎಂದು ನೆನಪಿಸಿಕೊಳ್ಳತೊಡಗಿದರು.
ಇದಕ್ಕೆ ಸಂಬಂಧಿಸಿದ ಯಾವುದೇ ವಿವರಗಳೂ ನೆನಪಾಗಲಿಲ್ಲ. ಕಳೆದ ವಾರ ಸಾಪ್ತಾಹಿಕವೊಂದರಲ್ಲಿ ಪ್ರಕಟವಾದ ಕಥೆಯನ್ನು ಮುಖಪುಸ್ತಕದಲ್ಲಿ ಹಾಕಿದಾಗ ಸುಮಾರು ೬೮ ಜನರು ಲೈಕೊತ್ತಿದ್ದರು. ಇನ್ನು ನಾಲ್ಕಾರು ಜನ ಕಾಮೆಂಟಿಸಿ, ಕಥೆ ಇಷ್ಟವಾಯ್ತು ಎಂದಿದ್ದರು. ಇನ್ನು ಕೆಲ ಸಮಕಾಲೀನ ಲೇಖಕರು (ಅದೊಂಥರದ ಹೊಟ್ಟೆನೋವಿನಿಂದ ಎಂದು ತನ್ನ ಗುಮಾನಿ!) ಅದರಲ್ಲಿರುವ ಎಲ್ಲ ಕೊರತೆಗಳನ್ನೂ ಪಟ್ಟಿ ಮಾಡಿ, ಆ ಕೊರತೆಗಳನ್ನು ನೀಗಿಕೊಂಡು ಬರೆದಿದ್ದರೆ, ಅದು ಖಂಡಿತವಾಗಿಯೂ ಒಂದು ಅತ್ಯದ್ಭುತ ಕಥೆಯಾಗುತ್ತಿತ್ತೆಂದು ಹೇಳಿದ್ದರು. ಹಾಗೆಯೇ ಇತ್ತೀಚೆಗೆ ಪ್ರಕಟವಾದ ಕವನಗಳಿಗೂ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಸರಿ, ತಾನು ಹಾಕಿದ ಫೋಟೋಗಳ ಬಗ್ಗೆ ಯಾರ ಕಾಮೆಂಟೇನಿತ್ತು ಎಂದು ನೆನಪಿಸಿಕೊಳ್ಳತೊಡಗಿದರು. ಧಾರವಾಡದ ಸಾಹಿತ್ಯ ಸಂಭ್ರಮದ ಫೋಟೋಗಳನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಅದಕ್ಕೂ ಮೊದಲು ಹಾಕಿದ್ದ ಕೆಲವು ಮನೆಗಳ ವಿನ್ಯಾಸದ ಫೋಟೋಗಳನ್ನು ನೋಡಿದ ಒಂದಿಷ್ಟು ಜನ ಅರ್ಥವಾಗಿಯೋ ಅಥವಾ ಅರ್ಥವಾಗದೆಯೋ ಲೈಕೊತ್ತಿ ಕೈತೊಳೆದುಕೊಂಡಿದ್ದರು. ಇನ್ನು ಕೆಲವರು ಕಾಮೆಂಟಿಸಿದ್ದರು.
ಹಾಗೆ ಏನೆಲ್ಲ ಫೋಟೋಗಳನ್ನು ಹಾಕಿದ್ದೆ ಎಂದು ನೆನಪಿಸಿಕೊಳ್ಳತೊಡಗಿದ ವಸ್ತಾರೆಯವರ ಮನಸ್ಸು ನವೆಂಬರ್ ತಿಂಗಳಿಗೆ ಜಿಗಿಯಿತು. ಆ ತಿಂಗಳಿನಲ್ಲಿ ತನ್ನ ಮನೆಯ ಕೆಲವು ಫೋಟೋಗಳನ್ನು ಹಾಕಿದ್ದೆ. ವಿವಿಧ ರೀತಿಯ ಹಸಿರು ಗಿಡಗಳ ಮಧ್ಯೆ ಮೂರು ಕೋನಗಳಿಂದ ತೆಗೆದ ಮನೆಯ ಫೋಟೋಗಳನ್ನು ನೋಡಿ ನೂರೈವತ್ತು ಜನ ಲೈಕೊತ್ತಿದ್ದರೆ ನಾಲ್ಕಾರು ಜನ ಕಾಮೆಂಟಿಸಿದ್ದರು. ಅದರಲ್ಲೊಂದು ಕಾಮೆಂಟ್… ಹೌದಲ್ಲ, ಸಿಲ್ಲಿ ಎಂದು ನಾನಂದುಕೊಂಡಿದ್ದ ಆ ಕಾಮೆಂಟೇನಿತ್ತು… ವಿಚಿತ್ರವಾಗಿತ್ತು.. ಮೊಬೈಲ್ನಲ್ಲಿ ನೋಡಿಯೇಬಿಡೋಣ ಎಂದು ಪಟಪಟನೆ ಮುಖಪುಸ್ತಕದ ತನ್ನ ಪುಟವನ್ನು ತೆರೆದು, ಸರಸರನೆ ಪುಟಗಳನು ಸ್ಕ್ರಾಲಿಸುತ್ತ ಕಾಲದಲ್ಲಿ ಹಿಂದಕ್ಕೋಡುತ್ತ, ಪುಟಗಳಲ್ಲಿ ಕೆಳಗಿಳಿಯುತ್ತ ನವೆಂಬರ್ ತಿಂಗಳಿಗೆ ಬಂದರು. ಹಾಂ.. ಇಲ್ಲೇ ಇದೆ ನವೆಂಬರ್ ೨೦ರಂದು ಹಾಕಿದ್ದ ಫೋಟೋ. ಕಾಮೆಂಟ್ ಇಲ್ಲೇ ಇದೆ.. ಓ… ಅದೇ ಆ (ಸು)ಮಂಗ(ಲಾ)ನದು…
ಸದ್ಯ, ಬೆಳಕು ಚೆನ್ನಾಗಿ ಆಗಿದೆ, ಕನ್ನಡಕವಿಲ್ಲದೇ ಚೂರು ದೂರ ಹಿಡ್ಕೊಂಡ್ರೆ ಸಲೀಸಾಗಿ ಓದಬಹುದು…
“ವಸ್ತಾರೆಯವರೇ…. ನಿಮಗೆ ಇನ್ನೂ ಗೊತ್ತಿಲ್ಲ (ಈಗ ಗೊತ್ತು ಮಾಡಿಕೊಳ್ಳಿ!!) ನಾನು ಕಲೀತಿರೋ ಕಳ್ಳತನದ ಕೋರ್ಸಿನಲ್ಲಿ ’ಮನೆ ನಂ. ಪ್ಲೇಟ್’ ಅನ್ನು ಮಾತ್ರ ಅಲ್ಲಿ ತೂಗುಹಾಕಿದಂತೆಯೇ ಉಳಿಸಿ, ಆ ಎಲ್ಲ ಗಿಡ(ಗಂಟೆ)ಗಳ ಸಮೇತ ಹೆಂಗೆ (ಚೂರೂ ಸದ್ದಾಗದಂತೆ ಮತ್ತು ಏನನ್ನೂ ಕೆಳಬೀಳಸದಂತೆ) ಅನಾಮತ್ ಆಗಿ ಎತ್ತಿಕೊಂಡು ಹೋಗೋದು ಅಂತಲೂ ಹೇಳಿಕೊಡ್ತಿದ್ದಾರೆ ಹಿಂಗೆಲ್ಲ ಫೋಟೋ ಹಾಕುವ ಮೊದಲು ಚೂರು ಯೋಚಿಸಿ, ಒಂದಿನ ಬೆಳಗ್ಗೆ ನಿಮಗೆ ಎಚ್ಚರವಾಗುತ್ತೆ, ನೋಡ್ತೀರ… ನೀವು ಹಾಸಿಗೆ ಮೇಲೇ ಮಲಗಿರ್ತೀರ, ನಿಜ, ಆದರೆ ಬರೀ ಮಂಚ ಮಾತ್ರ ಇರುತ್ತೆ ಹಾಗೂ ನಿಮ್ಮನೆಯ ಈ ಬೋರ್ಡ್ ಮಾತ್ರ ತೂಗ್ತಾ ಇರುತ್ತೆ, ಇಡೀ ಮನೆಯೇ ನಾಪತ್ತೆಯಾಗಿರುತ್ತೆ!!!” – ಸುಮಂಗಲಾ
ಇದು ಅಲ್ಲಿದ್ದ ಕಾಮೆಂಟ್. ಒಳ್ಳೆ ಕಾಗಕ್ಕಗುಬ್ಬಕ್ಕನ ಕಥೆಯಲ್ಲಿ ಹೇಳಿದಂತೆ ಹೇಳ್ತಿದ್ದಾರೆ, ಹಿಂಗೆಲ್ಲ ತನ್ನ ಪುಟಕ್ಕೆ ಬಂದು ಕಾಮೆಂಟಿಸುವ ಮೊದಲು ಅವರ ಮುಖಪುಸ್ತಕದ ಪುಟವನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳಬಹುದಿತ್ತು, ಒಳ್ಳೆ ಓಬಿರಾಯನ ಕಾಲದ ಪುಟವನ್ನೇ ಇಟ್ಟುಕೊಂಡಿದ್ದಾರೆ ಎಂದು ಗೊಣಗುಟ್ಟಿಕೊಂಡು ಇಂತಹ ಕಾಮೆಂಟುಗಳಿಗೆ ಲೈಕನ್ನೂ ಒತ್ತಬಾರದು ಎಂಬ ಅಲಿಖಿತ ನಿಯಮ ಮಾಡಿಕೊಂಡಿದ್ದ ವಸ್ತಾರೆಯವರು ಸುಮ್ಮನಾಗಿದ್ದರು. ಆದರೆ ಆ (ಸು)ಮಂಗ(ಲಾ) ಅಷ್ಟಕ್ಕೂ ಸುಮ್ಮನಾಗದೇ, ತನಗೊಂದು ಇಮೇಲ್ ಕೂಡ ಮಾಡಿದ್ದಳಲ್ಲ ಎನ್ನುವುದು ನೆನಪಾಯಿತು. ಇದೀಗ ವಸ್ತಾರೆಯವರ ಅರಿವಿಗೆ ಬರುವಷ್ಟರಲ್ಲಿ ಅವರ ಕೈಗಳು ಇಮೇಲ್ ಬಾಕ್ಸ್ ತೆರೆದು, (ಸು)ಮಂಗ(ಲಾ)ನ ಹಳೆಯ ಮೇಲ್ಗಳನ್ನು ಹುಡುಕತೊಡಗಿತ್ತು. ಮನಸ್ಸಿಗಿಂತ ಬುದ್ದಿ ಬಹಳ ವೇಗವಾಗಿ ಕೆಲಸ ಮಾಡುತ್ತೆ, ಎಷ್ಟೋ ಸಲ ಮನಸ್ಸಗಿಂತ ಬುದ್ದಿಯೇ ಮೊದಲಾಗಿ ಕೈಕಾಲುಗಳಿಗೆ ಸೂಚನೆ ಕೊಟ್ಟಿರುತ್ತದೆ ಎಂದು ತಾನೊಮ್ಮೆ ಯಾರಿಗೋ ಉಪನ್ಯಾಸಿಸಿದ್ದು ನೆನಪಾಯಿತು. ಚೂರು ನಕ್ಕುಬಿಡಿ ಎಂಬ ತಲೆಬರಹವಿದ್ದ ಮೇಲ್ ಕಾಣಿಸಿತು, ಬೆರಳು ಡಬಲ್ ಕ್ಲಿಕ್ಕಿಸಿತು.
ಮತ್ತೆ ಏನು ಕಾರು’ಬಾರು’ ನಡೆಸಿದ್ದೀರಿ ಶ್ರೀಮಾನ್ ಶ್ರೀ ವಸ್ತಾರೆಯವರೇ….
ಅಲ್ಲಾರೀ, ನಾವು ನಮ್ಮ ಅಗದಿ ಬಿಜಿ ಶೆಡ್ಯೂಲಿನಾಗ ಜರಾ ಟೈಮ್ ಮಾಡಿಕೊಂಡು, ನಿಮ್ಮ ಮುಖಪುಸ್ತಕ ಅರ್ಥಾತ್ ಫೇಸ್ ಬುಕ್ ಪೇಜಿನೊಳಗೆ ಇಣುಕಿ ಹಾಕಿ, ನಿಮ್ಮ ಮನೆಯನ್ನು ನೋಡಿ ಬರೀ ಲೈಕ್ ಒತ್ತದೇ, ಕಾಮೆಂಟಿಸಿದರೆ ಅದಕ್ಕೂ ತಮ್ಮಿಂದ ಉತ್ತರವೇ ಇಲ್ಲ….
ಅಂದಹಾಗೆ ಮನೆ ಮುಂದೆ ಏನೋ ಝಡ್ ಕೆಟಗರಿ ಸೆಕ್ಯುರಿಟಿ ಹಾಕಿಸಿಕೊಂಡಿದ್ದೀರಂತೆ ಹೌದಾ…. (ಸು)ಮಂಗ(ಲಾ) ಇರಲಿ, ಖರೇಖರೇ ಮಂಗ ಬಿಡಿ, ಚಿಟ್ಟೆ ನಿಮ್ಮನೆ ಹೂಗಿಡದ ಬಳಿ ಹಾರಿದರೂ, ಎಲ್ಲಿ ಮನೆಯನ್ನೇ ಕಚ್ಚಿಕೊಂಡು ಹೋಗುತ್ತೇನೋ ಎಂದು ನಿದ್ರೆಯಲ್ಲಿಯೂ ಬೆಚ್ಚಿ ಬೆಚ್ಚಿ ಬೀಳುತ್ತ, ಶ್ರೀಮತಿ ವಸ್ತಾರೆಯವರಿಗೂ ಸರಿಯಾಗಿ ನಿದ್ರೆಯಾಗದೇ, ಅವರ ಕಣ್ಣ ಸುತ್ತ ಕಪ್ಪು ಉಂಗುರಗಳು ಬಂದು, ಅವರು ತಮ್ಮ ಟಿವಿ ಧಾರಾವಾಹಿ ಮತ್ತಿತರ ಶೂಟಿಂಗ್ಗಳಿಗೆ ಹೋಗುವುದನ್ನೂ ಮುಂದೂಡುತ್ತಿದ್ದಾರಂತೆ… ಹೌದೇನ್ರೀ… ಅಲ್ಲಾರೀ, ನಾನೇನೋ ತಮಾಶೆಗೆ ಮನೆ ಕದಿಯುತ್ತೇನೆ ಎಂದರೆ ತಾವು ಇಂಥಾ ಪರಿ ಹೆದರಿ ಬಿಡುವುದೇ?!!
ನಿಜವೆಂದರೆ ನಾನು ಮತ್ತೊಂದು ಕೋರ್ಸ್ಗೆ ಸೇರಿಕೊಂಡಿದ್ದೇನೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಈ ಪತ್ರ ಬರೆಯುತ್ತಿದ್ದೇನೆ, ಝಡ್ ಕೆಟಗರಿ ಸೆಕ್ಯುರಿಟಿ ತಮ್ಮ ಮನೆ ಮುಂದೆಯೇ ಬೀಡು ಬಿಟ್ಟಿದ್ದರೂ, ಹ್ಯಾಗೆ ಮನೆಯನ್ನು ಕದಿಯುವುದು ಎಂದು ಕಲಿಯುವ ಕೋರ್ಸ್ ಅದು… ನಾನು ನಿಮ್ಮ ಮನೆ ಕದ್ದು ಯಶಸ್ವಿಯಾದ ನಂತರ ಇದೇ ಚಿತ್ರಕಥಾ ವಸ್ತುವನ್ನು ಇಟ್ಟುಕೊಂಡು ಧೂಮ್ ೫ ಅನ್ನು ತೆಗೆಯಲಿದ್ದಾರೆ ಮತ್ತು ಅದಕ್ಕೂ ಈಗಾಗಲೇ ಪ್ಲಾಟ್ ಹಾಕತೊಡಗಿದ್ದಾರೆ…. ಅದಕ್ಕೆ ಹೀರೋಯಿನ್ ಆಗಲಿಕ್ಕೆ ಶ್ರೀಮತಿ ಅಪರ್ಣಾ ವಸ್ತಾರೆಯವರು ಈಗಾಗಲೇ ಒಪ್ಪಿಗೆ ನೀಡಿ, ಮುಂಗಡ ಹಣವನ್ನೂ ಪಡೆದುಕೊಂಡಿದ್ದಾರೆ ಮತ್ತು ಡೇಟ್ಸ್ ಕೂಡ ಕೊಟ್ಟಿದ್ದಾರೆ (ಈ ಸಿನಿಮಾಕ್ಕಾದ್ರೂ ಹೀರೋ ಆಗ್ತೀನಿ ಅಂತ ಮತ್ತೆ ಹಗಲುಗನಸು ಕಾಣಬೇಡಿ…ಹೀರೋ ರಜನೀಕಾಂತ್ ಅಂತೆ!!)… ಗೊತ್ತಾತೇನ್ರೀ ಶ್ರೀಮಾನ್ ಶ್ರೀ ವಸ್ತಾರೆಯವರೇ….
-ಸುಮಂಗಲಾ
ಒಳ್ಳೆ ತಮಾಶಿ ಮೇಲ್ ಎಂದುಕೊಂಡ ತಾನೂ ಕೂಡ ಅಷ್ಟೇ ಶುದ್ಧಹಾಸ್ಯದಿಂದಲೇ ಉತ್ತರಿಸಿದ್ದೆ. ಹಾಂ.. ನನ್ನ ಉತ್ತರ ಇಲ್ಲೇ ಕೆಳಗಿದೆ ಎಂದುಕೊಳ್ಳುತ್ತ ಅದನ್ನು ಕ್ಲಿಕ್ಕಿಸಿದರು.
ಶ್ರೀಮತಿ ಸುಮಂಗಲಾರವರೆ,
ಕಾರಿಟ್ಟುಕೊಂಡಿರುವ ನಾನೇ ಬಾರಿನ ಯೋಚನೆ ಮಾಡುವುದಿಲ್ಲವೆಂದು ಮೊದಲು ನಿಮ್ಮ ಗಮನಕ್ಕೆ ತರುತ್ತೇನೆ.
ನೀವು ಮತ್ತು ನಿಮ್ಮಂಥವರು ನನ್ನ ಮುಖಪುಸ್ತಕದೊಳಗೆ ಆಗಾಗ ಇಣಿಕುವುದೂ ಅಲ್ಲದೆ, ನನ್ನ ಮನೆಯನ್ನೂ ಹೊಕ್ಕು ಕಳ್ಳತನ ಮಾಡುವ ಇರಾದೆಯಿಟ್ಟುಕೊಂಡಿದ್ದೀರೆಂದು ನಿಮ್ಮ ಈ ಪತ್ರಮುಖೇನ ವೇದ್ಯವಾಗಿದೆ. ಈ ಬಗ್ಗೆ ನಮಗೆ ಮೊದಲೇ ಗುಮಾನಿಯಿದ್ದುದರಿಂದ, ಈಗಾಗಲೇ ಅಂತರ್ಜಾಲದಿಂದ ನಮ್ಮ ಮುಖಪುಸ್ತಕವನ್ನು ನಿರ್ಮೂಲಿಸಿದ್ದೇವೆ! ಈ ರೀತಿಯ ಧಮಕಿಗಳಿರುವ ಪತ್ರವನ್ನು ಬರೆಯುವಿರಾದರೆ, ನಾವು ನಮ್ಮ ಮನೆಯನ್ನೂ ಎತ್ತಂಗಡಿ ಮಾಡುವ ಬಗ್ಗೆ ಯೋಚನೆ ಮಾಡಬೇಕಾದೀತು ಎಚ್ಚರ!
ಕನ್ನಡದ ಹೆಸರಾಂತ ಲೇಖಕಿಯಾಗಿರುವ ತಾವು, ಕದಿಯುವಂತಹ ಪುಣ್ಯದ ಕೆಲಸದ ಬಗ್ಗೆ ಯೋಚಿಸುವುದನ್ನು ಕೈಬಿಟ್ಟು ಘನಘೋರ ರೌರವಕೃತ್ಯವಾದ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇವೆ.
ನಾವು ಕೊಟ್ಟಿರುವ ಎಚ್ಚರ, ಮಾಡಿಕೊಂಡಿರುವ ಪ್ರಾರ್ಥನೆ ಇವುಗಳನ್ನು ಗಮನದಲ್ಲಿಟ್ಟುಕೊಂಡು, ಬಾರು-ಯೋಚನೆಯನ್ನೂ ಕೈಬಿಟ್ಟು- ಈ ಕ್ಷಣದಿಂದ ಸಾಹಿತ್ಯಪ್ರವೃತ್ತರಾಗಿರೆಂದೂ ಆಜ್ಞಾಪಿಸುತ್ತೇವೆ. ಅಲ್ಲದೆ, ನೀವು ‘ಚೂರು ನಗು’ ಅಂತ ಕಳಿಸಿದ ಅಂಚೆಯ ಮೇರೆಗೆ ನಾವು ನಕ್ಕೆವಾಗಿ, ನಮ್ಮೊಳಗಿನ ನಗುವಷ್ಟೂ ಚೂರಾಗಿದೆಯೆಂಬುದನ್ನೂ ಇಲ್ಲಿ ನಮೂದಿಸಿ, ಈ ಮುಂದೆ ಇಂತಹ ಆಘಾತಕಾರಿ ಪತ್ರಗಳನ್ನು ಓದುವುದನ್ನು ನಿಷೇಧಿಸಿದ್ದೇವೆ.
– ನಾಗರಾಜ ವಸ್ತಾರೆ
ಪತ್ರ ಓದುವುದನ್ನು ನಿಲ್ಲಿಸಿದ್ದೇನೆ ಎಂದರೂ ಆಕೆ ಮತ್ತೆ ಪ್ರತಿಕ್ರಿಯಿಸಿದ್ದಳು.
ಅದೇ ದಿನವೇ ಆಕೆಯ ಇನ್ನೊಂದು ಮೇಲ್ ಬಂದಿತ್ತು.
ಶ್ರೀಮಾನ್ ಶ್ರೀ ವಸ್ತಾರೆಯವರೇ….
ತಾವು ಇಷ್ಟೊಂದು ಹೆದರುಪುಕ್ಕಲು ಎಂಬುದು ನಮಗೆ ಗೊತ್ತಿರಲಿಲ್ಲ, ಮುಖಪುಸ್ತಕದಿಂದಲೂ ನಾಪತ್ತೆಯಾಗಿ, ಮನೆಯನ್ನೂ ಎತ್ತಂಗಡಿ ಮಾಡುವ ಇರಾದೆಯನ್ನು ತಾವೇ ವ್ಯಕ್ತಪಡಿಸಿರುವುದನ್ನು ಗಮನಿಸಿದರೆ ಅಗದಿ ಭಯಂಕರ ಪುಕ್ಕಲರು ಎನ್ನುವುದು ನಮಗೆ ಈಗ ಸರ್ವತಾ ವೇದ್ಯವಾಗಿದೆ. ಹೋಗಲಿ ಬಿಡಿ, ಇನ್ನು ಮುಂದೆ ನಾವು ನಿಮ್ಮನ್ನು ಹಿಂಗೆಲ್ಲ ಹೆದರಿಸುವುದಿಲ್ಲ. ಆದಾಗ್ಯೂ ಈ ಮುಂದಿನ ವಾಕ್ಯವನ್ನು ಓದುವ ಮೊದಲು ನೆಲದ ಮೇಲೆ ಸರಿಯಾಗಿ ಕುಳಿತು (ಅಂದರೆ ತಲೆತಿರುಗಿ ಬಿದ್ದರೂ ಹೆಚ್ಚು ಪೆಟ್ಟಾಗದಂತೆ) ಏನನ್ನಾದರೂ ಆಸರೆಗೆ ಗಟ್ಟಿಯಾಗಿ ಹಿಡಿದುಕೊಂಡು ಓದಿ.
ನೋಡಿ ನಿಜವೆಂದರೆ ನಾನು ನಿಮ್ಮ ಮನೆಯನ್ನು ಕಳ್ಳತನ ಮಾಡಲೇಬೇಕೆಂದು ತಮ್ಮ ಪತ್ನಿಯವರಾದ ಶ್ರೀಮತಿ ಅಪರ್ಣಾರವರೇ ನಮಗೆ ಖುದ್ದು ಕೋರಿಕೆ ಸಲ್ಲಿಸಿದ್ದಾರೆ ಮತ್ತು ಮುಂದಿನ ವರ್ಷ ಆರಂಭಗೊಳ್ಳುವ ಮೊದಲೇ ಕಳ್ಳತನ ಮಾಡಿಬಿಡಿ ಎಂದು ಧಮಕಿಯನ್ನೂ ಒಡ್ಡಿದ್ದಾರೆ !!! ಯಾಕೆ ಅಂತೀರಾ… ಅವರು ಈಗಾಗಲೇ ಧೂಮ್ ೫ರಲ್ಲಿ ನಟಿಸಬೇಕೆಂದು ಮುಂಗಡ ಹಣವನ್ನು ತೆಗೆದುಕೊಂಡು (ಖರ್ಚೂ ಮಾಡಿ!!), ಡೇಟ್ಸ್ ಕೂಡ ಕೊಟ್ಟು, ಎಲ್ಲಕ್ಕಿಂತ ಹೆಚ್ಚು ರಜನೀಕಾಂತ್ ಜೊತೆ ನಟಿಸುವುದು ಎಂದು ಗಗನದಲ್ಲಿಯೇ ಹಾರಾಡುತ್ತ… ಏನು ಕೇಳ್ತೀರಾ ಅದರ ಕಥೆ… ಪಾಪ ನೀವು ಅವರ ಪಕ್ಕದಲ್ಲಿಯೇ ಇದ್ದುಕೊಂಡೂ ನಿಮಗೆ ಗೊತ್ತಾಗಿಲ್ಲವಲ್ಲ ಎಂದು ನನಗೆ ನಿಮ್ಮ ಬಗ್ಗೆ ಚೂರು ಕರುಣೆಯೂ ಅನ್ನಿಸುತ್ತೆ! ಹೀಗಾಗಿ ನಿಮ್ಮ ಮನೆ ಕಳ್ಳತನವಂತೂ ಆಗುತ್ತೆ ಬಿಡಿ!!
ಇನ್ನು ನೀವು ಹೇಳಿದ ಬರವಣಿಗೆ ಎಂಬ ರೌರವ ಕೃತ್ಯದಲ್ಲಿ ತೊಡಗಿಸಿಕೊಳ್ಳುವ ಕ್ರೂರತನ ನನ್ನಲ್ಲಿ ಈಗ ಉಳಿದಿಲ್ಲ, ಪಾಪದ ಸುಮಂಗಲಾಗೆ ವಯಸ್ಸಾಯ್ತೂರಿ… (ಅಲ್ಲದೇ ಇದ್ದ ಬದ್ದ ಚೂರುಪಾರು ಚೈತನ್ಯವನ್ನು ನಿಮ್ಮ ಮನೆ ಕಳ್ಳತನ ಮಾಡಲಿಕ್ಕೆಂದು ಕಾಯ್ದಿರಿಸಿಕೊಂಡಿದ್ದೇನೆ!)
-ಸುಮಂಗಲಾ
ತಾನು ಈ ಪತ್ರಕ್ಕೆ ಉತ್ತರಿಸಿರಲಿಲ್ಲ, ಇದಾದ ನಂತರ ದೀಪಾವಳಿಗೆ ಮೊದಲು ತನ್ನ ಕಥೆಯೊಂದು ಸಾಪ್ತಾಹಿಕವೊಂದದಲ್ಲಿ ಬಂದಿತ್ತು. ಅದನ್ನೋದಿ ಬರೆದ ಮತ್ತೊಂದು ಇಮೇಲ್ ಸುಮಾರು ವಾರದ ನಂತರ ಬಂದಿತ್ತು.
ಶ್ರೀಮಾನ್ ಶ್ರೀ ವಸ್ತಾರೆಯವರೇ…
ಏನ್ರೀ.. ಮುಖಪುಟದಿಂದ ನಾಪತ್ತೆಯಾಗಿ, ಪತ್ರಿಸಿದರೆ ಮರಳಿ ಉತ್ತರ ಬರೆಯುವ ಸೌಜನ್ಯವನ್ನೂ ತೋರದ ನೀವು, ಹೀಗೆ ಪತ್ರಿಕೆಗಳಿಗೆ ಕಥೆ ಬರೆಯುವ ’ರೌರವ ಕ್ರೌರ್ಯ’ವನ್ನು ಪ್ರದರ್ಶನ ಮಾಡಿದ್ದೀರಲ್ಲ, ಇದು ತಮಗೆ ಶೋಭಿಸುವಂಥದೇ???!!! ಅಲ್ಲಾರಿ, ಯಾರೋ ವ್ರತ ಮಾಡಿಕೊಳ್ತಾರೆ, ಇನ್ನಾರೋ ’ಐ’(ಪಾಡ್)ಗಳಿಗೆ ಕಣ್ಣಂಟಿಸಿಕೊಂಡಿರ್ತಾರೆ, ಅದರಿಂದ ನಿಮಗೇನ್ರೀ ಲಾಸು? ಪಾಪ, ಅವರ ಪಾಡಿಗೆ ಅವರು ಬದುಕುತ್ತಿರುವಾಗ ಹಿಂಗೆಲ್ಲ ಕಥಾ ಪಾತ್ರಧಾರಿಗಳಾಗಿಸಿ, ಇಡೀ (ಕನ್ನಡ ಓದುಗ) ಪ್ರಪಂಚದಲ್ಲಿ ಒಳ್ಳೆ ಕೋಡಂಗಿಗಳ ಹಂಗೆ ಅವರನ್ನು ಕುಣಿಸಿ, ನೀವು ಮಜಾ ತಗೊಳ್ತೀರ್ತಲ್ಲ, ನೀವೂ (ಮತ್ತು ಬೇರೆ ಗೀಳುಗಳಿರುವ ನಾನು ಸೇರಿದಂತೆ!) ಒಂಥರದ ’ರೂಪಕ’ವೇ ಅಲ್ಲವೇ?
ಅಂದಹಾಗೆ ನಮಗೆ ತಮ್ಮ ಶ್ರೀಮತಿಯವರಿಂದ ಮಾತ್ರವಲ್ಲದೇ, ಶ್ರೀ ಶ್ರೀ ಶ್ರೀ ರಜನೀಕಾಂತ್ ರಿಂದ ಕೂಡ ಫೋನು ಬರುತ್ತಿದೆ ಎಂದರೆ ನೀವು ನಂಬಲಿಕ್ಕಿಲ್ಲ, ನಾನೇ ಮೊದಲು ನಂಬಿರಲಿಲ್ಲ. ಆದರೆ ಜುಜುಬಿ ನನ್ನಂಥವಳ ಬದುಕಿನಲ್ಲಿಯೂ ಕೆಲವು ಪವಾಡಗಳು ಜರುಗುತ್ತವೆ ಎಂಬುದನ್ನು ನಂಬಲೇಬೇಕಾಗಿದೆ. ನಿಮ್ಮ ಶ್ರೀಮತಿಯವರಂತೂ ಭಯಂಕರ ಆಳವಾಗಿ ಅಧ್ಯಯನಂಗೈದು, ನಿಮ್ಮ ಮನೆಯನ್ನು ಕದಿಯಲು ಮುಹೂರ್ತ ನಿಗದಿ ಮಾಡಿದ್ದಾರೆ!! ನಮ್ಮ ಸಾಗರದ ಕಡೆ ದೀಪಾವಳಿಯ ಮೊದಲ ದಿನವನ್ನು ಭೂರೆ ಹಬ್ಬ ಎಂದು ಆಚರಿಸುತ್ತಾರೆ, ಅದರ ಹಿಂದಿನ ದಿನ ಚೆಂಡು ಹೂ, ತೆಂಗಿನ ಕಾಯಿ, ಎಳನೀರು, ಕಟ್ಟಿಗೆ ಇಂಥವನ್ನೆಲ್ಲ ಕದ್ದರೆ ಪಾಪವಲ್ಲ ಮತ್ತು ಭೂರೆ ಹಿಂದಿನ ಏನನ್ನಾದರೂ ಕದಿಯಲೇಬೇಕು ಕೂಡ. ಇದನ್ನು ಹ್ಯಾಗೋ ಪತ್ತೆ ಹಚ್ಚಿದ ನಿಮ್ಮ ಶ್ರೀಮತಿಯವರು ಅಂದರೆ ಅಪರ್ಣಾರವರು ನಂಗೆ ಫೋನಾಯಿಸಿ, ಭೂರೆ ಹಿಂದಿನ ದಿನ ಅಂದರೆ ಬುಧವಾರ ಭೂರೆ ಹಬ್ಬ, ಮಂಗಳವಾರ ಮನೇನ ಅಭಿಜಿನ್ ಮುಹೂರ್ತದಲ್ಲಿ ಅಂದರೆ ಮಧ್ಯಾಹ್ನ ಹನ್ನೆರಡೂವರೆಗೆ ಕದ್ದುಬಿಡಿ ಅಂತ ಫರ್ಮಾನು ಹೊರಡಿಸಿದ್ದಾರೆ, ಅವರ ಫೋನ್ ಹಿಂದೆಯೇ ಶ್ರೀ ಶ್ರೀ ಶ್ರೀ (ಕನಿಷ್ಟ ಮೂರು ಶ್ರೀಗಳನ್ನಾದ್ರೂ ಹಾಕಲೇಬೇಕು ಅಂತ ರಜನೀಕಾಂತ್ ಅಭಿಮಾನಿ ಸಂಘದವರು ಕಟ್ಟೆಚ್ಚರ ನೀಡಿದ್ದಾರೆ!!)
ರಜನೀಕಾಂತ್ರವರು ಕೂಡ ಫೋನು ಮಾಡಿ ಮಂಗಳವಾರವೇ ಅಂದರೆ ನಾಳೆಯೇ ಮನೆಯನ್ನು ಕದ್ದುಬಿಡಿ ಎಂದು ಹೇಳಿದ್ದಾರೆ (ಬೆದರಿಸಿದ್ದಾರೆ ಎಂದರೆ ಸರಿಹೋದೀತು!) ದೀಪಾವಳಿ ಮುಗಿದ ಮರುದಿನವೇ ಧೂಮ್ ೫ ಸೆಟ್ಟೇರುತ್ತದೆಯಂತೆ…ಅಂದಹಾಗೆ ನಾನೇನಾದರೂ ನಾಳೆ ಮನೆಯನ್ನು ಕದಿಯಲು ವಿಫಲವಾದರೆ, ಇನ್ನೊಂದು ಮುಹೂರ್ತವನ್ನು ಹೇಳಿದ್ದಾರೆ, ಅದೆಂದರೆ ಹೋಳಿ ಹಬ್ಬದ ಹಿಂದಿನ ದಿನ. ನಿಮಗೆ ಗೊತ್ತಿದೆ ತಾನೆ, ಉತ್ತರ ಕರ್ನಾಟಕದ ಕಡೆಗಳಲ್ಲಿ ಹೋಳಿ ಹಿಂದಿನ ದಿನ ಮರದ ತುಂಡುಗಳು, ಕಟ್ಟಿಗೆ ಇತ್ಯಾದಿಗಳನ್ನು ಕಾಮಣ್ಣನನ್ನು ಸುಡಲು ಎಂದು ಕದಿಯುವ ಸಂಪ್ರದಾಯವಿದೆ, ಮತ್ತು ಅಂದು ಕದ್ದರೆ ಪಾಪ ಅಂಟುವುದಿಲ್ಲ, ಕದ್ದವರಿಗೆ ಶಾಪ ಕೂಡ ಹಾಕುವಂತೆ ಇಲ್ಲ. ಹಿಂಗಾಗಿ ಹೋಳಿ ಹಬ್ಬದ ಹಿಂದಿನ ದಿನ… ಆದರೆ ಅದಿನ್ನೂ ದೂರವಿದೆ ಎನ್ನಿ. ಏನೇ ಆದ್ರೂ ನಾನು ಕದ್ದ ಪಾಪ ಅಂಟದ ಒಂದು ದಿನ ಬಂದು ಕದಿಯುವುದಂತೂ ಗ್ಯಾರಂಟಿ ಎಂಬುದನ್ನು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇವೆ!
-ಸುಮಂಗಲಾ
ಅದನ್ನೋದಿ ಒಂದಿಷ್ಟು ನಕ್ಕು, ತಾನೂ ತರಲೆ ಮಾಡೋಣ ಎಂದುಕೊಂಡು ಉತ್ತರಿಸಿದ್ದೆನಲ್ಲ ಎಂದುಕೊಳ್ಳುತ್ತ ಶ್ರೀ ವಸ್ತಾರೆಯವರು ಅದರ ಕೆಳಗಿದ್ದ ತಮ್ಮ ಮೇಲ್ನ್ನು ಕ್ಲಿಕ್ಕಿಸಿದರು.
ನೀವು ಕಥೆ ಓದಿರುವುದು ಕೂಡ ರೌರವವೇ ತಾನೇ? ಹಾಗಾಗಿ ಈ ಸದ್ಕೃತ್ಯದಲ್ಲಿ ನೀವು ನನ್ನೊಟ್ಟಿಗೆ ಸಮಸಮ ಭಾಗಿ ಬಿಡಿ.
ಕರ್ನಾಟಕದ ಸುವಿಖ್ಯಾತ ಲೇಖಕಿಯಾಗಿರುವ ತಾವು ತಮ್ಮ ಮೊದಲ ಚೌರ್ಯಕೃತ್ಯಕ್ಕೆ ನನ್ನ ಮನೆಯೇ ಮೊದಲ ಗುರಿ ಅಂತಿದ್ದಲ್ಲಿ, ದೀಪಾವಳಿಯವರೆಗೇಕೆ ಕಾಯುವುದು? ಈಗಿಂದೀಗಲೇ ಬರತಕ್ಕುದೆನ್ನುವ ಅನುಮತಿಯನ್ನೂ ಇತ್ತಿದ್ದೇವೆ. ನೀವು ನನ್ನ ಶ್ರೀಮತಿಯನ್ನೂ ಒಳಗೊಂಡಂತೆ ಏನನ್ನಾದರೂ ಕದಿಯಬಹುದೆಂದು ಪರವಾನಗಿ ಕೊಡುತ್ತೇವೆ. ಅಂದಹಾಗೆ, ನಾವು ಈಗಾಗಲೇ ‘ಸುಮಂಗಲಾ ಚೌರ್ಯವಿದ್ಯಾ’ ಅಂತೆಂಬ ಪುಸ್ತಕದ ತಯಾರಿಯಲ್ಲಿದ್ದೇವೆಂಬುದನ್ನು ಸುಮ್ಮನೆ ತಮ್ಮ ಗಮನಕ್ಕೆ ತರಲಿಚ್ಛಿಸುತ್ತೇವೆ.
-ನಾಗರಾಜ ವಸ್ತಾರೆ
ತನ್ನ ಈ ಮೇಲ್ಪತ್ರಕ್ಕೆ ಆಕೆ ಮತ್ತೆ ಉತ್ತರಿಸಿರಲಿಲ್ಲ, ಅಲ್ಲಿಗೇ ನಿಲ್ಲಿಸಿದ್ದಳು. ಅಬ್ಬಾ, ಒಳ್ಳೆ ಗರಗಸ ಈಕೆ ಎಂದುಕೊಂಡು ತಾನೂ ಸುಮ್ಮನಾಗಿದ್ದೆ. ಮನೆ ಕಳ್ಳತನವಾಗಿದೆ ಎಂದು ತಾನಿನ್ನು ಪೊಲೀಸರಿಗೆ ದೂರು ಕೊಡುವುಂತೆಯೇ ಇಲ್ಲ, ಏಕೆಂದರೆ ಹೀಗೆ ಮೇಲ್ನಲ್ಲಿ ಅದಕ್ಕೆ ಒಪ್ಪಿಗೆಯನ್ನೂ ನೀಡಿ, ಕೆಳಗೆ ಮೇಲ್ಸಹಿ ಕೂಡ ಮಾಡಿಯಾಗಿದೆ, ನನ್ನ ಶ್ರೀಮತಿಯನ್ನೂ ಒಳಗೊಂಡಂತೆ ಕದಿಯಲು ಪರವಾನಗಿ ಕೊಟ್ಟಿದ್ದೇನೆ ಎಂಬುದನ್ನು ಅಪರ್ಣ ಓದಿದರೆ ಅಷ್ಟೇ ನನ್ನ ಕತೆ. ಅಲ್ಲ, ನಾನು ’ಆ ಸುಮಂಗಲಾ ಚೌರ್ಯವಿದ್ಯಾ’ ಪುಸ್ತಕದ ತಯಾರಿ ಎಲ್ಲಿ ಬಂತು, ಮೇಲ್ಅನ್ನು ಸೆಂಡ್ ಅಂತ ಕ್ಲಿಕ್ಕಿಸಿದ ಮೇಲೆ ಅದರ ಬಗ್ಗೆ ಪೂರ್ಣ ಮರೆತೇ ಬಿಟ್ಟಿರುವಾಗ? ಆದ್ರೆ ಈಕೆ ನೋಡಿದ್ರೆ ಈಗ ಖರೇಖರೇ ಮನೆಯನ್ನೇ ಮಟಾಮಾಯ ಮಾಡಿದ್ದಾಳಲ್ಲ ಅಂತೆಲ್ಲ ಶ್ರೀಮಾನ್ ಶ್ರೀ ವಸ್ತಾರೆಯವರು ಮುಸುಮುಸು ಅಲವತ್ತುಕೊಳ್ಳತೊಡಗಿದರು. ಮನಸ್ಸು ಇಷ್ಟೆಲ್ಲ ಅಲವತ್ತುಕೊಳ್ಳುವಾಗಲೂ ಬುದ್ದಿ ಸುಮ್ಮನಿರುತ್ತದೆಯೇ? (ಸು)ಮಂಗ(ಲಾ)ನ ಕೊನೆಯ ಮೇಲ್ನಲ್ಲಿದ್ದ ವಾಕ್ಯಗಳನ್ನೇ ತಿರುಗಾಮುರುಗಾ ಓದತೊಡಗಿತು.
ಅಂದರೆ ತನ್ನ ಮನೆಗೆ ಮನೆಯೇ ಇಡಿಯಾಗಿ ಕಳ್ಳತನವಾಗಿರುವುದು ನಿಜ ಮತ್ತು ಇದರಲ್ಲಿ ತನ್ನ ಪ್ರೀತಿಯ ಪತ್ನಿ, ಅಪರ್ಣೆ ಕೂಡ ಶಾಮೀಲಾಗಿದ್ದಾಳೆ ಎನ್ನುವುದು ನೂರಕ್ಕೆ ನೂರರಷ್ಟು ಖಾತ್ರಿಯಾಗಿದ್ದೇ ಕೊನೆಯಲ್ಲಿ ಉಳಿದಿದ್ದ ಒಂದೇ ಒಂದು ಆಘಾತಕ್ಕೆ ಪಕ್ಕಾದರು ಶ್ರೀ ವಸ್ತಾರೆಯವರು. ದೀಪಾವಳಿಯ ಸಮಯದಲ್ಲಿ ಆಕೆ ಹೇಳಿದಂತೆ ಕಳ್ಳತನ ಮಾಡಿರಲಿಲ್ಲ. ಅಲ್ಲಿಗೆ ಮುಗಿಯಿತು, ಇನ್ನೆಂಥ ಕಳ್ಳತನವಾಗುತ್ತೆ ಎಂದು ಸುಮ್ಮನಾಗಿದ್ದೆ. ಹಿಂದಿನ ರಾತ್ರಿ ಕಂಡಿದ್ದು ಕಾಮನಹುಣ್ಣಿಮೆಯ ಸುರಸುಂದರಾಂಗ ಚಂದ್ರ, ಹೌದು, ನಿನ್ನೆ ಹೋಳಿ ಹುಣ್ಣಿಮೆ… ಹಂಗಾರೆ ಕಳ್ಳತನವಾಗಿದ್ದು ನೂರಕ್ಕೆ ನೂರರಷ್ಟು ಖರೇ, ಸತ್ಯ, ನೈಜ, ವಾಸ್ತವ ಈ ಎಲ್ಲವೂ ಹೌದೆ? ಆಕೆ ಹೇಳಿದಂತೆ ಖರೇ ಖರೇ ಅಪರ್ಣ ತನ್ನ ’ನಿಜಕಾಂತ’ನ ಮನೆ ಕಳುವಾಗಲು ಬಿಟ್ಟು, ಅದೇ ಕಥಾಹಂದರವನ್ನುಳ್ಳ ಸಿನಿಮಾದಲ್ಲಿ ’ರಜನೀಕಾಂತ’ನೊಟ್ಟಿಗೆ ನಟಿಸಲು ಚೆನೈಗೆ ಹೋಗಿದ್ದೇ? ಹ್ಯಾಗೆ ಸಾಧ್ಯ ಎಂದು ತಲೆಯೊತ್ತಿಕೊಳ್ಳಲು ಹೊರಟ ವಸ್ತಾರೆಯವರಿಗೆ ಕೈಯೆತ್ತಲೂ ತ್ರಾಣವಿಲ್ಲದಂತಾಗಿ ಈ ಮಂಚದ ಮೇಲೆ ತಾನೀಗ ಕೂತಿರುವ ಜಾಗದ ಹೊರತಾಗಿ ಎಲ್ಲ ನಾಪತ್ತೆಯಾಗಿದ್ದರಿಂದ, ಮೊಬೈಲ್ ಕೆಳಗೆ ಬಿದ್ದರೆ ಎಲ್ಲಿ ಪಾತಾಳಕ್ಕೆ ಬಿದ್ದುಬಿಡ್ತದೆಯೋ ಎಂದು ಗಾಭರಿಯಾಗಿ ಗಟ್ಟಿಯಾಗಿ ಹಿಡಿದುಕೊಂಡರು.
ರಸ್ತೆಗಳಲ್ಲಿ ಆಗ ನಿಧಾನವಾಗಿ ಜನರ ಓಡಾಟ ಶುರುವಾಗಿತ್ತು. ಯಾರಿಗೂ ಇವರತ್ತ ಗಮನವೇ ಇದ್ದಂತೆ ಕಾಣಲಿಲ್ಲ. ಅಂದರೆ ಮನೆಯ ಜಾಗದಲ್ಲಿ ಏನೂ ಇಲ್ಲದೇ, ತಾನೊಬ್ಬನೇ ಹೀಗೆ ಮಂಚದ ಮೇಲೆ ಇಷ್ಟಗಲದ ಜಾಗದ ಮೇಲೆ ಕೂತು, ಫಲಕ ಮಾತ್ರ ಅಗೋಚರ ದಾರದಿಂದ ತೂಗಾಡುತ್ತಿರುವಂತೆ ಕಾಣದೇ, ಅವರಿಗೆಲ್ಲ ೭೧೨ ವಸ್ತಾರೆ ಎಂಬ ಫಲಕ ಮತ್ತು ತನ್ನ ಛಂದದ ಮನೆ ಮೊದಲಿದ್ದಂತೆಯೇ ಕಾಣಿಸ್ತಾ ಇದೆಯೇ? ಅಥವಾ ಅವರಿಗೆಲ್ಲ ಏನೆಂದರೆ ಏನೂ ಕಾಣುತ್ತಲೇ ಇಲ್ಲವೇ? ಅಂದಹಾಗೆ ಮನೆಯನ್ನು ಕದ್ದೊಯ್ದ ಆಕೆ ಎಲ್ಲಿಟ್ಟಿರಬಹುದು? ಧೂಮ್ ೫ ಸಿನಿಮಾ ಶೂಟಿಂಗ್ನ ಜಾಗಕ್ಕೆ ಕೊಂಡೊಯ್ದಿರಬಹುದೇ? ಶೂಟಿಂಗ್ ಮುಗಿಯುತ್ತಿದ್ದಂತೆ ಮನೆ ಇದ್ದಲ್ಲಿಯೇ ಮತ್ತೆ ಕಾಣಿಸಿಕೊಳ್ಳಬಹುದಲ್ಲವೇ? ಅಲ್ಲಿವರೆಗೆ ನನ್ನ ಗತಿಯೇನಪ್ಪ ದೇವರೇ? ವಸ್ತಾರೆಯವರು ಹತ್ತು ಹಲವು ಪ್ರಶ್ನೆಗಳ ಸುಳಿಯಲ್ಲಿ ಸಿಕ್ಕಿ ಒದ್ದಾಡುವಾಗ ಫಕ್ಕನೆ ಇನ್ನೊಂದು ಸಂಗತಿ ನೆನಪಾಯಿತು. ರಾತ್ರಿ ಯಾವುದೋ ಹೊತ್ತಿನಲ್ಲಿ ವಾಟ್ಸಪ್ನಲ್ಲಿ ಮೆಸೇಜೊಂದು ಸಣ್ಣದಾಗಿ ಬೀಪಿಸಿತ್ತು. ಈ ನಟ್ಟಿರುಳಿನಲ್ಲಿ ಅಪರ್ಣ ಹೊರತುಪಡಿಸಿದರೆ ಇನ್ನಾರು ಮೆಸೇಜಿಸ್ತಾರೆ, ಬೆಳಗ್ಗೆ ನೋಡಿದರಾಯ್ತು ಎಂದುಕೊಂಡು ಮಲಗಿದ್ದೆ ಅಂತ ನೆನಪಾಗಿದ್ದೇ, ವಾಟ್ಸಪ್ ತೆರೆದರು. ಅರೆ, ಅಪರ್ಣನದಲ್ಲ, ಯಾವುದೋ ಅನಾಮಿಕ ನಂಬರ್ನಂತೆ ಇದೆ, ಬರೀ ಸೊನ್ನೆಗಳೇ ಕಾಣ್ತಿದೆ, ಹತ್ತೂ ಸೊನ್ನೆಗಳೇ ಇರುವ ಮೊಬೈಲ್ನಂಬರ್ ಕೂಡ ಇರುತ್ತದೆಯೇ? ಶ್ರೀ ವಸ್ತಾರೆಯವರಿಗೆ ಇನ್ನಿಲ್ಲದಷ್ಟು ಗೊಂದಲ ಮೂಡಿ, ಕೊನೆಗೆ ಮೆಸೇಜ್ ಆದ್ರೂ ನೋಡೋಣ ಎಂದು ಅದರತ್ತ ಗಮನಹರಿಸಿದರೆ, ಮೆಸೇಜ್ ಬದಲಿಗೆ ಇಮೇಜ್ ಫೈಲ್ ಇದ್ದಿದ್ದು ಕಾಣಿಸಿತು. ಅದು ಡೌನ್ಲೋಡಿಸಿಕೊಳ್ತಾ ನಿಧಾನಕ್ಕೆ ಸ್ಪಷ್ಟವಾಗಿ ಕಾಣುತ್ತಿದ್ದಂತೆ ಇನ್ನಷ್ಟು ದಿಗಿಲಾಯ್ತು.
ಥೇಟ್ ಶ್ರೀ ವಸ್ತಾರೆಯವರು ಈಗ ಹ್ಯಾಗೆ ಕೂತಿದ್ದಾರೆಯೋ ಹಾಗೆಯೇ ವಸ್ತಾರೆಯವರೇ ಮಂಚದ ಮೇಲೆ ಕೂತಿದ್ದು, ಪಕ್ಕದಲ್ಲಿ ೭೧೨, ವಸ್ತಾರೆ ಎಂಬ ಫಲಕ ಈಗ ಹ್ಯಾಗೆ ನೇತಾಡ್ತಿದೆಯೋ ಹಂಗೇ ನೇತಾಡ್ತಾ ಇದ್ದ ಫೋಟೋ. ಇದನ್ನು ಯಾರು ಯಾವ ಹೊತ್ತಿನಲ್ಲಿ ತೆಗೆದು ಕಳಿಸಿದ್ರು? ಹಂಗಾರೆ ನಾನು ಎಷ್ಟು ಹೊತ್ತಿನಿಂದ ಹಿಂಗೇ ಕೂತಿದ್ದೀನಿ? ಎಂಬೆಲ್ಲ ಪ್ರಶ್ನೆಗಳು ಮೂಡುತ್ತಿರುವ ಮಧ್ಯೆಯೇ ಬಹಳ ದಿನಗಳ ಹಿಂದೆ ಅಪರ್ಣ ಅವಳಿಗೆ ಯಾರೋ ಶೂಟಿಂಗ್ನಲ್ಲಿ ಹೇಳಿದ್ದನ್ನು ತನ್ನಲ್ಲಿ ಹೇಳಿದ್ದು, ತಾನು ಅದನ್ನು ಅಣಕಿಸಿದ್ದು ನೆನಪಾಯಿತು. ’ಈಗಿನ ಹಳ್ಳಿಯ ದೆವ್ವಗಳು ಮೊಬೈಲ್ ಹಿಡ್ಕೊಂಡೇ ಓಡಾಡ್ತವಂತೆ, ಎಂತಹ ಕುಗ್ರಾಮವಾದರೂ ಸರಿಯೇ, ಹುಣಿಸೇಮರದ ಮೇಲೆ ಹತ್ತಿಕೂತರೆ ಅವಕ್ಕೆ ನೆಟ್ವರ್ಕ್ ಸಿಗ್ತವಂತೆ, ಮೆಸೇಜೂ ಕಳಿಸ್ತಾವಂತೆ, ಯಾವುದಾದರೂ ಕರೆ ಅಥವಾ ಮೆಸೇಜು ಬಂದಾಗ ಸೊನ್ನೆ ಸಂಖ್ಯೆಗಳೇ ಇದ್ದರೆ ಅದು ದೆವ್ವದ್ದು ಅಂತ್ಲೇ ಲೆಕ್ಕ ಅಂತೆ, ಮತ್ತೆ ನಮಗೆ ಹೆಂಗೆ ಗೊತ್ತಾಗುತ್ತಪ್ಪಾ ಅಂದರೆ ಆ ಎಲ್ಲ ಸೊನ್ನೆಗಳೂ ಸೊಟ್ಟಗೆ ಇರ್ತಾವಂತೆ, ದೆವ್ವದ ಕಾಲು ನೆಟ್ಟಗೆಇರಲ್ಲ, ಸೊಟ್ಟಗೆ ಅಥವಾ ಉಲ್ಟಾ ಇರ್ತದಲ್ಲ ಹಂಗಂತೆ’ ಎಂದಿದ್ದಳು. ಶ್ರೀ ವಸ್ತಾರೆಯವರು ಇದ್ದಬದ್ದ ಧೈರ್ಯವನ್ನೆಲ್ಲ ಕೂಡಿಸಿಕೊಂಡು, ವಾಟ್ಸಪ್ ಮೆಸೇಜಿನ ಸಂಖ್ಯೆಯನ್ನು ನೋಡಿದರು… ಅಷ್ಟೂ ಸೊನ್ನೆಗಳು ಪೂರಾ ಅಂದರೆ ಪೂರಾ ಓರೆಯಾಗಿದ್ದವು!
೭೧೨, ವಸ್ತಾರೆ ಮತ್ತು ಹೋಳಿಹುಣ್ಣಿಮೆ
***
ಇದು ’ಸತ್ಯಸ್ಯ ಸತ್ಯ’ , ಏಪ್ರಿಲ್ ೧ ನೇ ತಾರೀಖಿಗಾಗಿ ಬರೆದದ್ದಲ್ಲ ಅಂತಾರೆ ಸುಮಂಗಲಾ!






ಅದ್ಭುತ. ಸುಮಂಗಲಾ, ನೀವು ಕದಿಯುತ್ತೇನೆಂದು ಮೊದಲೇ ಹೇಳಿದ್ದರೆ ನಾನೂ ಬರುತ್ತಿದ್ದೆ. ಆ discussion room ಮೇಲೆ ನನ್ನ ಕಣ್ಣೂ ಬಿದ್ದಿತ್ತು. ಉಳಿದಿದ್ದೆಲ್ಲ ನೀವೇ ಇಟ್ಟುಕೊಂಡು ನನಗೆ ಅದೊಂದನ್ನು ಕೊಟ್ಟರೆ ಮುಂದೆ ಫೀಸಿಲ್ಲದೆ ನಿಮ್ಮ ಪರ ವಾದ ಮಾಡುತ್ತೇನೆ. ತಲೆಯ ಮೇಲೆ ಕೈ ಹೊತ್ತು ಕುಳಿತ ನನ್ನ. ಬಾಲ್ಯದ ಗೆಳೆಯನ ಮುಖ ಕಲ್ಪಿಸಿ ಕೊಂಡಷ್ಟೂ ನಗೆಯುಕ್ಕಿ ಬರುತ್ತಿದೆ. ..ನಾನು ನನ್ನಕ್ಕ ಬಿದ್ದು ಬಿದ್ದು ನಗುತ್ತಿದ್ದೇವೆ . ಹಹ್ಹಹ್ಹಹ್ಹಹಾ
ಮಾಲಿನಿ ಅವರೇ, ಕದ್ದ ಮಾಲು ಪೂರ್ಣ ನನ್ನದೇ!! ಇನ್ನೊಂದು ವರ್ಷ ತಡೀರಿ, ನಿಮ್ಮ ಬಾಲ್ಯದ ಗೆಳೆಯರು ಇನ್ನೊಂದು ಮಸ್ತ್ ಮನೆ ಕಟ್ಟೇ ಕಟ್ಟುತ್ತಾರೆ, ಆಗ ಮುಂದಿನ ಹೋಳಿಹುಣ್ಣಿಮೆ ದಿನ ನೀವು ಅದನ್ನು ಕದಿಯಬಹುದು! ಹ್ಯಾಗೆ ಕದಿಯುವುದು ಎಂದು ಪೂರ್ಣ (ಪುಕ್ಕಟೆ) ಟಿಪ್ಸ್ ನಾನು ಕೊಡುತ್ತೇನೆ!!
-ಸುಮಂಗಲಾ
ಎಲ್ಲಾ ಮಾಯಾ, ನಾಳೆ ನಾವು, ನೀವು ಮಾಯಾ , ಜಗವೆಲ್ಲವೂ ಮಾಯಾ – Good one
(ಸು)ಮಂಗ(ಲಾ), ಶ್ರೀ ಮತ್ತು ಶ್ರೀಮತಿ ವಸ್ತಾರೆಯವರಿಗೆ ಸರಿಯಾಗಿ ಏಪ್ರಿಲ್ ಒಂದರ ಶುಭಾಶಯ ಕಣ್ರೀ ಇದು. ವಸ್ತಾರೆ ಈಗೇನ್ಮಾಡ್ತೀರಾ, ಯಾವುದಕ್ಕೂ ಒಂದು ಕಂಪ್ಲೇಂಟ್ ಕೊಟ್ಬಿಡ್ರಿ.