ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಹ್ಯಾರಿ ಪಾಟರ್” ಎಂಬ ಕಿಂದರಿ ಜೋಗಿಯ ಹಿಂದೆ…

ಕ್ಷಿಣಿ ಕಥೆಗಳ ಲೋಕದಲ್ಲಿನ ವೈವಿಧ್ಯವನ್ನೇ ಅಳಿಸಿಹಾಕಿ, ಇಡೀ ಜಗತ್ತಿನ ಸಂವೇದನೆಯೇನೋ ಎಂಬಂತೆ ಹ್ಯಾರಿ ಪಾಟರ್ ವಿಲಕ್ಷಣ ರೀತಿಯಲ್ಲಿ ಆವರಿಸಿಕೊಂಡಿದ್ದಾನೆ. ಯಕ್ಷಿಣಿಗೆ ಸೋಲದ ನಮ್ಮ ಪುಟಾಣಿಗಳೆಲ್ಲ ಭಾರೀ ಗಾತ್ರದ ಹ್ಯಾರಿ ಪಾಟರ್ ಆವೃತ್ತಿಗಳನ್ನು ಮತ್ತೆ ಮತ್ತೆ ಓದಿಕೊಂಡುಬಿಟ್ಟಿದ್ದಾರೆ. ಇದೆಲ್ಲಾ ಹೇಗಾಯಿತು? ಹ್ಯಾರಿ ಪಾಟರ್ ಹಿಂದೆ ಒಂದು ಸಮೂಹವೇ ಬಿದ್ದಿರುವುದು ಬರೀ ಭ್ರಮೆಯಿಂದಲೊ, ಕ್ರೇಜಿಗಾಗಿಯೊ, ಕಥೆಗಾಗಿಯೊ? ಇಲ್ಲಿ ಪುಟಾಣಿಯೊಬ್ಬಾಕೆ ತನ್ನ ಲೋಕದ ನೋಟದಲ್ಲಿ ಹ್ಯಾರಿ ಪಾಟರ್ ನನ್ನು ಹಿಡಿದಿಟ್ಟಿದ್ದಾಳೆ.

*

kinnarinew1.jpgಕಿನ್ನರಿ

ಕ್ಕಳು, ಟೀನ್ ಏಜರ್ಸ್, ದೊಡ್ಡವರು, ಅಜ್ಜಿ-ತಾತಂದಿರು ಎಲ್ರೂ ಕಾಯ್ತಿದಾರೆ. ಹ್ಯಾರಿಪಾಟರ್ ಸೀರೀಸ್ ನ ಕೊನೆಯ ಮತ್ತು ಏಳನೇ ಪುಸ್ತಕಕ್ಕೆ. ಹ್ಯಾರಿ ಪಾಟರ್ ಅಂಡ್ ದಿ ಡೆಡ್ಲಿ ಹ್ಯಾಲೋಸ್ ಅನ್ನೋ ಪುಸ್ತಕ ಜುಲೈ ೧೩, ಶನಿವಾರ ಇಡೀ ಜಗತ್ತಿನಲ್ಲಿ ಒಂದೇ ಸಾರಿಗೆ ಬಿಡುಗಡೆ ಆಗಿದೆ.

ನಾನು ಹ್ಯಾರಿ ಪಾಟರ್ ನ ಅಭಿಮಾನಿ. ಈ ಪುಸ್ತಕಕ್ಕಾಗಿ ಕಾಯ್ತಿರೋವ್ರಲ್ಲಿ ನಾನೂ ಒಬ್ಳು. ನಾವೆಲ್ಲ ದಿನಗಳನ್ನು ಎಣಿಸ್ತಿದೀವಿ. ಎಲ್ಲ ಕಡೆ ಸುದ್ದಿ ಹರಡಿರೋ ಹಾಗೆ ಇದರಲ್ಲಿ ಹ್ಯಾರಿ ಪಾಟರ್ ಸಾಯಬಾರದು ಅಂತ ಬೆರಳು ಮಡಿಸಿ ಇಟ್ಕೊಂಡಿದೀವಿ. ಅವ್ನು ಸತ್ರೆ ನಮಗೆಲ್ಲ ತುಂಬಾ ನಿರಾಶೆ ಆಗುತ್ತೆ.

ಹ್ಯಾರಿ ಪಾಟರ್ ಸೀರೀಸ್ ನ ಮೊದಲ ಆರು ಪುಸ್ತಕಗಳು ಹ್ಯಾರಿ ಪಾಟರ್ ಅಂಡ್ ದಿ ಸಾಸರ್ ಸ್ಟೋನ್, ಹ್ಯಾರಿ ಪಾಟರ್ ಅಂಡ್ ದಿ ಛೇಂಬರ್ ಆಫ್ ಸೀಕ್ರೆಟ್ಸ್, ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನ್ಸ್ ಆಫ್ ಅಸ್ಕಬಾನ್, ಹ್ಯಾರಿ ಪಾಟರ್ ಅಂಡ್ ದಿ ಗಾಬ್ಲೆಟ್ ಆಫ್ ಫೈರ್, ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ಫೀನಿಕ್ಸ್ ಮತ್ತು ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್. ಇವೆಲ್ಲ ಪುಸ್ತಕಗಳು ಓದುವ ಖುಷಿ ಕೊಟ್ಟಿವೆ. ಯಾವುದೋ ಜಮಾನದ ಜಾದೂ ಜಗತ್ತಿಗೆ ಕೊಂಡೊಯ್ದಿವೆ. ಇದರಲ್ಲಿರುವ ಪ್ರತಿಯೊಂದು ಪಾತ್ರವೂ ತನ್ನದೇ ಆದ ರೀತಿಯಲ್ಲಿ ವಿಭಿನ್ನವಾಗಿದೆ.

ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್

ಮೊದಲ ಪುಸ್ತಕದಲ್ಲಿ ನಮಗೆ ಭೇಟಿ ಆಗೋದು ನಮ್ಮ ನಿಮ್ಮೆಲ್ಲರ ಹಾಗೆ ಸಾಮಾನ್ಯವಾಗಿರುವ, ಜಾದೂ ಜಗತ್ತಿನ ಬಗ್ಗೆ ಏನೂ ಗೊತ್ತಿಲ್ಲದ ಮುಗ್ಧ ಹುಡುಗ ಹ್ಯಾರಿ ಪಾಟರ್. ತನ್ನ ಚಿಕ್ಕಮ್ಮ ಪೆಟೂನಿಯಾ ಮತ್ತು ಚಿಕ್ಕಪ್ಪನ ಜೊತೆ ಇರುವ ಹ್ಯಾರಿಗೆ, ಅವನಿಗಿರುವ ಜಾದೂ ಶಕ್ತಿಯ ಬಗ್ಗೆ ಯಾರೂ ಏನೂ ಹೇಳಿರುವುದಿಲ್ಲ. ಒಮ್ಮೊಮ್ಮೆ ಅವನಿಗೆ ಗೊತ್ತಿಲ್ಲದೇ ಕೆಲವು ಜಾದೂ-ಚಮತ್ಕಾರಗಳು ಆಗಿಬಿಟ್ಟಾಗ ಅವನಿಗೆ ಗಾಬರಿ ಆಗುತ್ತಿರುತ್ತೆ. ಅವನ ೧೨ನೇ ಹುಟ್ಟುಹಬ್ಬದ ಸಂದರ್ಭದಲ್ಲಿ harryp2.jpgಹ್ಯಾಗ್ರಿಡ್ ದಿ ಗೇಮ್ ಕೀಪರ್ ಎನ್ನುವ ಮಾಂತ್ರಿಕನಿಂದ ತಾನೊಬ್ಬ ಮಾಂತ್ರಿಕ ಶಕ್ತಿ ಇರುವ ವ್ಯಕ್ತಿ ಎನ್ನೋದು ಗೊತ್ತಾಗುತ್ತೆ. ಜೊತೆಗೆ ಎಲ್ಲರೂ ಹೇಳಿದ ಹಾಗೆ ತನ್ನ ತಂದೆ-ತಾಯಿ ಅಪಘಾತದಲ್ಲಿ ಸತ್ತಿಲ್ಲ. ಅವರಿಗೆ ಮಾಂತ್ರಿಕ ಶಕ್ತಿ ಇತ್ತು. ಕ್ರೂರ ಮಾಂತ್ರಿಕ ವಾಲ್ಡೆಮೋರ್ಟ್ ಎನ್ನುವವ ಅವರನ್ನು ಕೊಂದ ಎಂಬ ಸತ್ಯವೂ ಹ್ಯಾಗ್ರಿಡ್ ನಿಂದ ಹ್ಯಾರಿಗೆ ತಿಳಿಯುತ್ತೆ. ವಾಲ್ಡೆಮೋರ್ಟ್ ಎಷ್ಟು ಕೆಟ್ಟವನೆಂದರೆ ಇತರೆ ಮಾಂತ್ರಿಕರು ಅವನ ಹೆಸರೂ ಹೇಳದೆ, ನಿಮಗೆ ಗೊತ್ತಲ್ಲ ಅವನು ಎಂದು ಹೇಳುತ್ತಾರೆ. ತುಂಬಾ ವಿಶೇಷ ಶಕ್ತಿ ಇರುವ ಹಾಗ್ ವಾರ್ಟ್ಸ್ ಜಾದೂ ಶಾಲೆಯ ಪ್ರಿನ್ಸಿಪಾಲ್ ಡಂಬಲ್ ಡೋಲ್, ಹ್ಯಾರಿ ಪಾಟರ್ ಮತ್ತು ಇನ್ನೂ ಕೆಲವು ಜನ ಮಾತ್ರ ಅವನನ್ನು ನಿಜ ಹೆಸರಿನಿಂದ ಕರೆಯುತ್ತಾರೆ. ಅಷ್ಟು ಕೆಟ್ಟವನು ವಾಲ್ಡೆಮೋರ್ಟ್. ಹ್ಯಾಗ್ರಿಡ್ ನಿಂದ ಎಲ್ಲ ವಿಷಯ ತಿಳಿಯುವ ಹ್ಯಾರಿ ಜಾದೂ ಲೋಕಕ್ಕೆ ಸೇರಿದ ಹಲವು ಊರುಗಳಿಗೆ ಹೋಗುತ್ತಾನೆ. ಆ ಜಗತ್ತಿನಲ್ಲಿ ತಾನೆಷ್ಟು ಜನಪ್ರಿಯ ವ್ಯಕ್ತಿ ಎಂದು ತಿಳಿದು ಅಚ್ಚರಿಪಡುತ್ತಾನೆ.

ಹ್ಯಾಗ್ರಿಡ್ ನೀಡುವ ರೈಲಿನ ಟಿಕೆಟ್ ನಿಂದಾಗಿ ಹ್ಯಾರಿ ಹಾಗ್ ವಾರ್ಟ್ಸ್ ಜಾದೂ ವಿಶ್ವವಿದ್ಯಾಲಯಕ್ಕೆ ಬರುತ್ತಾನೆ. ಬರುವ ಹಾದಿಯಲ್ಲಿ ರೈಲಿನಲ್ಲಿ ಅವನಿಗೆ ರಾನ್ ವೆಸ್ಲಿ, ಹರ್ ಮೊಯ್ನಿಯರ ಪರಿಚಯ ಆಗುತ್ತೆ. ಮುಂದೆ ಈ ಮೂವರೂ ಗಾಢ ಸ್ನೇಹಿತರಾಗುತ್ತಾರೆ. ರಾನ್ ವೆಸ್ಲಿಯ ಕುಟುಂಬ ಜಾದೂಗಾರರ ಕುಟುಂಬಕ್ಕೆ ಸೇರಿರುತ್ತೆ. ಆದರೆ ಹರ್ ಮೊಯ್ನಿಯ ತಂದೆ-ತಾಯಿ ಸಾಮಾನ್ಯ ಜನರು. ಅವಳನ್ನು ಮಗಲ್ ಬಾರ್ನ್ ಎನ್ನುತ್ತಾರೆ. ಅಂದರೆ ಸಾಮಾನ್ಯ ಜನರ ಮಗಳು ಎಂದು ಅರ್ಥ.

ಹಾಗ್ ವಾರ್ಟ್ಸ್ ನಲ್ಲಿ ಹ್ಯಾರಿ ಬಹುಬೇಗ ಜನಪ್ರಿಯ ಆಗ್ತಾನೆ. ಹಾಗೆಯೇ ಅವನಿಗೆ ಸ್ಪರ್ಧಿಗಳೂ ಹುಟ್ಟಿಕೊಳ್ತಾರೆ. ಡ್ಯ್ರಾಕೊ ಅಂತಹ ಒಬ್ಬ ಪ್ರತಿಸ್ಪರ್ಧಿ. ಮೊದಲ ಹಾರುವ ತರಗತಿಯಲ್ಲೇ ಇಬ್ಬರಿಗೂ ಜಗಳ ಆಗಿ, ಡ್ಯ್ರಾಕೊ ಒಡ್ಡುವ ತೊಂದರೆಗಳನ್ನೆಲ್ಲ ದಾಟಿ ಹ್ಯಾರಿ ಕೊನೆಗೂ ಮಾಯದ ಚೆಂಡು ಹಿಡಿಯುತ್ತಾನೆ. ಕ್ವಿಡಿತ್ ಆಟದ ತಂಡಕ್ಕೆ ನಾಯಕನಾಗುತ್ತಾನೆ. ಇದರಿಂದ ಡ್ಯ್ರಾಕೊಗೆ ಮತ್ತಷ್ಟು ಸಿಟ್ಟು ಬರುತ್ತೆ. ಇದರ ನಡುವೆ ಪ್ರೊ.ಸ್ನೇಪ್ ಕೂಡ ಹ್ಯಾರಿಯನ್ನು ಬಗ್ಗು ಬಡಿಯಲು ಯತ್ನಿಸುತ್ತಾರೆ. ಆದರೂ ಕೊನೆಗೆ ಹ್ಯಾರಿಯ ತಂಡ ಕ್ವಿಡಿತ್ ಆಟದಲ್ಲಿ ಗೆಲ್ಲುತ್ತೆ.

ಹಾಗ್ ವಾರ್ಟ್ ಕಾಲೇಜಿನ ಎಲ್ಲ ಮೂಲೆಗಳನ್ನೂ ಕುತೂಹಲದಿಂದ ಪರೀಕ್ಷಿಸುತ್ತಾ ಸಾಗುವ ಹ್ಯಾರಿ ಪಾಟರ್ ಮತ್ತು ಅವನ ಇಬ್ಬರು ಸ್ನೇಹಿತರು ನಿಷೇಧಿತ ಕೋಣೆಗಳಿಗೂ ಹೋಗುತ್ತಾರೆ. ಅಲ್ಲಿ ಎದುರಾಗುವ ಸವಾಲುಗಳನ್ನು ಭೇದಿಸುತ್ತಾರೆ. ಮೂರು ತಲೆಯ ನಾಯಿಯಂತೆ ವೇಷ ಧರಿಸುವ ವಾಲ್ಡ್ ಮೋರ್ಟ್ ನೊಂದಿಗೆ ನಡೆಸುವ ಹೋರಾಟಗಳು ರೋಮಾಂಚಕಾರಿ ಆಗಿವೆ. ಸಾಸರ್ಸ್ ಸ್ಟೋನ್ ಅನ್ನು ವಾಲ್ಡೆಮೋರ್ಟ್ ಗೆ ಸಿಗದಂತೆ ಮಾಡಿ, ತೆಗೆದುಕೊಂಡು ಬರುವ ಹ್ಯಾರಿ, ರಾನ್ ಮತ್ತು ಹರ್ ಮೊಯ್ನಿ ಅವರುಗಳನ್ನು ಇಡೀ ಹಾಗ್ ವಾರ್ಟ್ ಸಂಭ್ರಮದಿಂದ ಸ್ವಾಗತಿಸುತ್ತದೆ. ಈ ಘಟನೆಯ ನಂತರ ಮೂವರೂ ಮತ್ತಷ್ಟು ಗಾಢ ಸ್ನೇಹಿತರಾಗುತ್ತಾರೆ. ಅಲ್ಲಿಗೆ ಹಾಗ್ ವಾರ್ಟ್ ನಲ್ಲಿ ಅವರ ಮೊದಲ ವರ್ಷ ಮುಗಿಯುತ್ತದೆ. ರಜೆಗೆಂದು ಮನೆಗೆ ಪ್ರಯಾಣ ಬೆಳೆಸುತ್ತಾರೆ.

ಈ ಮೊದಲ ಪುಸ್ತಕದಲ್ಲಿ ಅನೇಕ ಪಾತ್ರಗಳು, ಗಾಢ ಸ್ನೇಹ, ಮಾಂತ್ರಿಕ ಲೋಕದ ಸವಾಲುಗಳನ್ನು ಎದುರಿಸುವ ಅವರ ಎದೆಗಾರಿಕೆ ಮೊದಲಾದವುಗಳನ್ನು ಕಾಣುತ್ತೇವೆ. ಮುಂದಿನ ಪುಸ್ತಕದಲ್ಲಿ ಇನ್ನೂ ಹೆಚ್ಚಿನ ಮಾಟಗಾರರು, ಮಾಂತ್ರಿಕತೆಗಳು ಹೊಸ ಸವಾಲುಗಳನ್ನು ಎದುರು ನೋಡುತ್ತೇವೆ.

ಚೇಂಬರ್ ಆಫ್ ಸೀಕ್ರೆಟ್ಸ್ ಪುಸ್ತಕದಲ್ಲಿ ಹ್ಯಾರಿ ತುಂಬಾ ಕಷ್ಟಗಳನ್ನ ಎದುರಿಸಬೇಕಾಗುತ್ತೆ. ಹಾಗ್ ವಾರ್ಟ್ಸ್ ನಲ್ಲಿ ಸಂಭವಿಸುವ ಎಲ್ಲ ಆಕಸ್ಮಿಕ ಘಟನೆಗಳಿಗೂ ಹ್ಯಾರಿಯನ್ನೇ ದೂರಲಾಗುತ್ತದೆ. ದಿಗ್ಭ್ರಮೆಗೊಳ್ಳುವ ಹ್ಯಾರಿ ತನ್ನ ಸ್ನೇಹಿತರಾದ ರಾನ್ ಮತ್ತು ಹರ್ ಮೊಯ್ನಿ ಜೊತೆ ಸೇರಿ ಈ ಎಲ್ಲ ಘಟನೆಗಳ ಹಿಂದಿನ ಕಾರಣಗಳನ್ನು ತನಿಖೆ ಮಾಡುತ್ತಾನೆ.

ಹಾಗ್ ವಾರ್ಟ್ಸ್ ನಲ್ಲಿ ಎಲ್ಲವೂ ಒಂದು ರೀತಿ ಅಲ್ಲೋಲ, ಕಲ್ಲೋಲ. ಕಾಲೇಜಿನ ಎಲ್ಲ ವಾರ್ಷಿಕ ಚಟುವಟಿಕೆಗಳನ್ನು ರದ್ದುಪಡಿಸಲಾಗುತ್ತದೆ. ಕಾಲೇಜಿನ ಮುಖ್ಯಸ್ಥನ ಸ್ಥಾನದಿಂದ ಡಂಬಲ್ ಡೋರ್ ನನ್ನು ಅಮಾನತು ಮಾಡುತ್ತಾರೆ. ಸಾಮಾನ್ಯ ಜನರಿಗೆ ಹುಟ್ಟಿದವರೆಲ್ಲ ಅಪಾಯಕ್ಕೆ ಸಿಲುಕುತ್ತಾರೆ. ಹ್ಯಾರಿ ಹಾವುಗಳ ಭಾಷೆ-ಪಾರ್ಸ್ಲ್ ಯಲ್ಲಿ ಮಾತನಾಡುತ್ತಾನೆ. ತಂಟೆಕೋರ ಡ್ಯ್ರಾಕೊ ಈಗ ಕ್ವಿಡಿತ್ ಆಟದ ತಂಡದಲ್ಲಿದ್ದಾನೆ. ವಾಲ್ಡೆಮೋರ್ಟ್ ನ ಆತ್ಮ ಜಿನ್ನಿ ವೆಸ್ಲಿಯನ್ನು ಆವಾಹಿಸಿಕೊಂಡಿದೆ. ರಹಸ್ಯಗಳನ್ನು ಅಡಗಿಸಿಟ್ಟುಕೊಂಡಿರುವ ಗುಟ್ಟಿನ ಕೋಟೆಯ ವಾರಸುದಾರ ಡ್ಯ್ರಾಕೊ ಮಾಲ್ ಫ್ರಾಯ್ ಎಂಬ ಅನುಮಾನ ಹ್ಯಾರಿಗೆ. ಇದ್ದಕ್ಕಿದ್ದಂತೆ ಈ ಗುಟ್ಟಿನ ಕೋಟೆಯಲ್ಲಿ ಅಡಗಿರುವ ಕ್ರೂರ ಪ್ರಾಣಿಯ ಬಗ್ಗೆ ಹರ್ ಮೊಯ್ನಿಗೆ ಸುಳಿವು ಸಿಗುತ್ತದೆ. ಅದೊಂದು ದೊಡ್ಡ ಸರ್ಪವಾಗಿದ್ದು, ಹ್ಯಾರಿಗೆ ಹಾವಿನ ಭಾಷೆ ಬರುವುದರಿಂದ ಈ ಸರ್ಪದ ಕುಟಿಲತೆ ಗೊತ್ತಾಗುತ್ತದೆ. ಈ ಸರ್ಪ ಜಿನ್ನಿ ವೆಸ್ಲಿಯನ್ನು ವಶಕ್ಕೆ ತೆಗೆದುಕೊಳ್ಳುತ್ತದೆ. ಹರ್ ಮೊಯ್ನಿ ಆಸ್ಪತ್ರೆ ಸೇರಿದ್ದಾಳೆ. ಹ್ಯಾರಿ ಮತ್ತು ರಾನ್ ಇಬ್ಬರೇ ಜಿನ್ನಿಯ ರಕ್ಷಣೆಗೆ ಧಾವಿಸುತ್ತಾರೆ. ಫೀನಿಕ್ಸ್ ನ ಸಹಾಯದೊಂದಿಗೆ ಹ್ಯಾರಿಯ ಸರ್ಪ ಹಾಗೂ ವಾಲ್ಡೆಮಾರ್ಟ್ ಇಬ್ಬರೊಂದಿಗೂ ಸೆಣಸಾಡಿ ವಿಜಯಿಯಾಗುತ್ತಾನೆ. ಜಿನ್ನಿಯನ್ನು ರಕ್ಷಿಸುತ್ತಾನೆ. ಕೊನೆಗೆ ಗುಟ್ಟಿನ ಕೋಟೆಯನ್ನು ಶಾಶ್ವತವಾಗಿ ಮುಚ್ಚಲಾಗುತ್ತದೆ.

ಹ್ಯಾರಿ ಪಾಟರ್ ಅಂಡ್ ದಿ  ಪ್ರಿಸನರ್ ಆಫ್ ಅಜ್ ಕಬಾನ್

ಎರಡನೇ ವರ್ಷದ ತರಬೇತಿ ಮುಗಿಸಿ ಬೇಸಿಗೆಯಲ್ಲಿ ಚಿಕ್ಕಮ್ಮನ ಮನೆಗೆ ಬರುವ ಹ್ಯಾರಿ, ತನ್ನ ತಂದೆ-ತಾಯಿಯ ಬಗ್ಗೆ ತಪ್ಪಾಗಿ ಮಾತನಾಡಿದ ಚಿಕ್ಕಮ್ಮನ ಜೊತೆ ಜಗಳವಾಡುತ್ತಾನೆ. ಮತ್ತೆ ಬೇಸರದಿಂದ ಚಿಕ್ಕಮ್ಮನ ಮನೆ ತೊರೆದು ರಾತ್ರಿ ಬಸ್ ಹಿಡಿದು ಜಾದೂಗಾರರ ಊರಾದ ಡಯಾಗನ್ ಆಲಿಗೆ ಬರುತ್ತಾನೆ. ಹಳೆಯದಾದ, ಮಳೆಗೆ ಸೋರುವ ಒಂದು ಇಕ್ಕಟ್ಟಾದ ಕೋಣೆಯಲ್ಲಿ ಇರುತ್ತಾನೆ. ಒಂದು ದಿನ ಜಾದೂಗಾರರ ಈ ಊರಲ್ಲಿ ರಾನ್ ಮತ್ತು ಹರ್ ಮೊಯ್ನಿ ಯ ಭೇಟಿಯಾಗುತ್ತೆ. ರಾನ್ ವೆಸ್ಲಿಯ ತಂದೆ-ತಾಯಿ ಕೂಡ ಇರುತ್ತಾರೆ. ಅಕಸ್ಮಾತ್ತಾಗಿ ರಾನ್ ವೆಸ್ಲಿಯ ತಂದೆ-ತಾಯಿ ಆಡುವ ಮಾತುಗಳು ಹ್ಯಾರಿಯ ಕಿವಿಗೆ ಬೀಳುತ್ತವೆ. ತೀವ್ರ ಶೋಧದಲ್ಲಿರುವ ಅಪರಾಧಿ ಸಿರಿಯಸ್ ಬ್ಲಾಕ್ ತನ್ನ ಬೆನ್ನ ಹಿಂದೆ ಬಿದ್ದಿರುವುದು ಗೊತ್ತಾಗುತ್ತದೆ.

ಮೂರನೇ ವರ್ಷದ ತರಗತಿಗಾಗಿ ಎಲ್ಲರೂ ಹಾಗ್ ವರ್ಟ್ಸ್ ಗೆ ಬರುತ್ತಾರೆ. ಹ್ಯಾರಿಗೆ ತನ್ನ ಸುತ್ತ ಇರುವ ಭದ್ರ ರಕ್ಷಣಾಪಡೆಯ ಅರಿವಾಗುತ್ತದೆ. ಹಾಗೆಯೇ, ಸಿರಿಯಸ್ ಬ್ಲಾಕ್ ನಿಂದಾಗಿಯೇ ತನ್ನ ತಂದೆ-ತಾಯಿ ಕೊಲೆಯಾದರು ಎಂದು ತಿಳಿದುಬರುತ್ತದೆ. ಹ್ಯಾರಿ ಕ್ರುದ್ಧನಾಗುತ್ತಾನೆ. ರಕ್ಷಣೆ ಒದಗಿಸುತ್ತಿರುವ ಡಿಮಾಂಟರ್ಸ್ ನ ಎದುರು ಹ್ಯಾರಿಗೆ ಶಕ್ತಿಯೇ ಕುಂದು ಹೋದಂತೆ ಭಾಸವಾಗುತ್ತದೆ. ತನ್ನೆಲ್ಲ ಮನಸ್ಸಿನ ಶಕ್ತಿಯನ್ನು ಕೂಡಿಸಿಕೊಂಡು ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾನೆ ಹ್ಯಾರಿ. ಈ ವರ್ಷ ಹ್ಯಾಗ್ರಿಡ್ ಕೂಡ ಹ್ಯಾಗ್ ವಾರ್ಟ್ಸ್ ನಲ್ಲಿ ಶಿಕ್ಷಕನಾಗಿ ಬರುತ್ತಾನೆ. ಹ್ಯಾಗ್ರಿಡ್ ನಿಂದಾಗಿ ಸಿರಿಯಸ್ ಬ್ಲಾಕ್ ತನ್ನ ತಂದೆ-ತಾಯಿಯ ಸಾವಿಗೆ ಕಾರಣ ಅಲ್ಲ ಎಂಬ ಸತ್ಯ ಸಂಗತಿ ಹ್ಯಾರಿಗೆ ತಿಳಿಯುತ್ತದೆ. ಸಿರಿಯಸ್ ಬ್ಲಾಕ್ ನ ಹಿಂದೆ ಬಿದ್ದಿರುವ ಸ್ಕ್ರಾಬರ್ಸ್(ಜಂತುವಿನ ಬಾಲದವನು)ನಿಂದ ಸಿರಿಯಸ್ ಬ್ಲಾಕ್ ನನ್ನು ರಕ್ಷಿಸುವ ಹ್ಯಾರಿ, ತಪ್ಪಿಸಿಕೊಂಡು ಓಡಿ ಹೋಗುವಂತೆ ಮಾಡುತ್ತಾನೆ. ಆಮೇಲೆ ಹ್ಯಾರಿಗೆ ತಿಳಿಯುತ್ತದೆ. ಸಿರಿಯಸ್ ಬ್ಲಾಕ್ ತನ್ನ ಹಿತೈಷಿ, ಗಾಡ್ ಫಾದರ್ ಎಂದು.

ಈ ಸರಣಿಯ ನಾಲ್ಕನೇ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಗಾಬ್ಲೆಟ್ ಆಫ್ ಫೈಯರ್. ಹಾಗ್ ವಾರ್ಟ್ಸ್ ನಲ್ಲಿ ಈ ವರ್ಷ ತ್ರೈವಾರ್ಷಿಕ ಮಾಂತ್ರಿಕ ಸ್ಪರ್ಧೆ ಏರ್ಪಾಟಾಗಿದೆ. ಈ ಸ್ಪರ್ಧೆಗಾಗಿ ಡಮ್ ಸ್ಟ್ರಾಂಗ್ ಮತ್ತು ಬಾಕ್ಸ್ ಟೊ ಬಾನ್ಸ್ ಎಂಬ ಶಾಲೆಗಳ ವಿದ್ಯಾರ್ಥಿಗಳೂ ಹಾಗ್ ವಾರ್ಟ್ ಗೆ ಬರುತ್ತಾರೆ. ಈ ಸ್ಪರ್ಧೆ ತಂಡಗಳ ನಡುವಿನ ಆಟವಾದರೂ ಪ್ರತಿಯೊಂದು ತಂಡದಿಂದ ಒಬ್ಬ ಚಾಂಪಿಯನ್ ನನ್ನು ಆಯ್ಕೆ ಮಾಡಿ, ಚಾಂಪಿಯನ್ ಗಳ ನಡುವೆ ಒಂದು ಸ್ಪರ್ಧೆ ಇರುತ್ತದೆ. ಹ್ಯಾರಿ ವಯಸ್ಸಿನಲ್ಲಿ ಚಿಕ್ಕವನಾದರೂ ಹಾಗ್ ವಾರ್ಟ್ಸ್ ನಿಂದ ಹ್ಯಾರಿ ಮತ್ತು ಸೆಡ್ರಿಕ್ ಇಬ್ಬರನ್ನು ಚಾಂಪಿಯನ್ ಆಗಿ ಆಯ್ಕೆ ಮಾಡಲಾಗುತ್ತದೆ. ಈ ಚಾಂಪಿಯನ್ ಗಳು ಅನೇಕ-ಅನೇಕ ವಿಚಿತ್ರ ಜೀವಿಗಳನ್ನು ಗೆಲ್ಲಬೇಕಿರುತ್ತದೆ. ಡಮ್ ಸ್ಟ್ರಾಂಗ್ ನ ಚಾಂಪಿಯನ್ ವಿಕ್ಟರ್ ಕ್ರಮ್ ಗೆ ಹರ್ ಮೊಯ್ನಿಯನ್ನು ಕಂಡರೆ ಇಷ್ಟ. ಇದು ಸೆಡ್ರಿಕ್ ಗೆ ಹಿಡಿಸುವುದಿಲ್ಲ. ಸೆಡ್ರಿಕ್ ಮತ್ತು ವಿಕ್ಟರ್ ನಡುವೆ ತೀವ್ರ ಸ್ಪರ್ಧೆ ಎದುರಾಗುವುದನ್ನು ಹ್ಯಾರಿ ಗಮನಿಸುತ್ತಾನೆ. ಹ್ಯಾರಿ ಎಲ್ಲ ಅಡೆತಡೆಗಳನ್ನೂ ಯಶಸ್ವಿಯಾಗಿ ಗೆಲ್ಲುತ್ತಾನೆ. ಕೊನೆಗೆ ಸ್ಪರ್ಧೆಯಲ್ಲಿ ಉಳಿಯುವುದು ಸೆಡ್ರಿಕ್ ಮತ್ತು ಹ್ಯಾರಿಯೇ. ಇಬ್ಬರೂ ಒಟ್ಟಿಗೆ ಹೋಗಿ ಚಾಂಪಿಯನ್ ಟ್ರೋಫಿಯನ್ನು ಮುಟ್ಟಿದ ತಕ್ಷಣವೇ ಅದು ಪೋರ್ಟ್ ಕೀ ಯಾಗಿ (ಒಂದು ಬಗೆಯ ವಾಹನ) ಬದಲಾಗಿ ಬಿಡುತ್ತದೆ.

ಈ ಪೋರ್ಟ್ ಕೀ ಹ್ಯಾರಿ ಮತ್ತು ಸೆಡ್ರಿಕ್ ರನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ಹ್ಯಾರಿಗಾಗಿ ಹೊಂಚು ಹಾಕುತ್ತಾ ಕುಳಿತಿದ್ದ ವಾಲ್ಡೆ ಮಾರ್ಟ್ಸ್, ಹ್ಯಾರಿಯನ್ನು ಕೊಲ್ಲುವ ಯತ್ನದಲ್ಲಿ ಸೆಡ್ರಿಕ್ ನನ್ನು ಕೊಂದುಬಿಡುತ್ತಾನೆ. ಸೆಡ್ರಿಕ್ ನ ದೇಹವನ್ನು ಹೊತ್ತುಕೊಂಡೇ ಹ್ಯಾರಿ, ವಾಲ್ಡೆಮಾರ್ಟ್ ನೊಂದಿಗೆ ಸೆಣಸಾಡುತ್ತಾನೆ. ಹಾಗೂ, ಹೀಗೂ ಅವನಿಂದ ತಪ್ಪಿಸಿಕೊಂಡು ಬಂದು ಚಾಂಪಿಯನ್ ಷಿಪ್ ಗೆಲ್ಲುತ್ತಾನೆ. ವಾಲ್ಡೆಮಾರ್ಟ್ ಇನ್ನೂ ಬದುಕಿರುವ ಸುದ್ದಿಯನ್ನು ಅವನು ಬಹಿರಂಗಪಡಿಸುತ್ತಾನೆ. ಆದರೆ ಡಂಬಲ್ ಡೋರ್ ಮತ್ತು ಇತರೆ ಕೆಲವರನ್ನು ಬಿಟ್ಟರೆ, ಬೇರೆ ಯಾರೂ ಹ್ಯಾರಿಯ ಮಾತನ್ನು ನಂಬುವುದಿಲ್ಲ.

ಏಳನೇ ಹಾಗೂ ಕೊನೆಯ ಪುಸ್ತಕದ ಬಿಡುಗಡೆಯ ಹಾಗೆಯೇ ಹ್ಯಾರಿ ಪಾಟರ್ ಸರಣಿಯ ಐದನೇ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ಫೀನಿಕ್ಸ್ ಕೂಡ ಈಗ ಸುದ್ದಿಯಲ್ಲಿದೆ. ಜುಲೈ ೧೩ರಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಪುಸ್ತಕ ಆಧಾರಿತ ಚಲನಚಿತ್ರ ಹ್ಯಾರಿ ಪಾಟರ್ ನ ಜ್ವರವನ್ನು ಈಗಾಗಲೇ ಹೆಚ್ಚು ಮಾಡಿದೆ.

ಹ್ಯಾರಿ ಫೀನಿಕ್ಸ್ ಪರಂಪರೆಯ, ಪಂಗಡದ, ಸಿಪಾಯಿಗಳ ಪಡೆಯ ಕೇಂದ್ರಸ್ಥಾನವಾದ ಗ್ರಿಮೌಲ್ಡ್ ಗೆ ಭೇಟಿ ನೀಡುತ್ತಾನೆ. ಅಲ್ಲಿ ಹ್ಯಾರಿ ಭೇಟಿಯಾಗುವ ಅನೇಕ ಮಾರಾಟಗಾರರು ವಾಲ್ಡ್ ಮಾರ್ಟ್ ವಿರುದ್ಧ ಹೋರಾಡಲು ಹ್ಯಾರಿಗೆ ಸಹಾಯ ಮಾಡುವುದಾಗಿ ಮಾತು ಕೊಡುತ್ತಾರೆ. ಮಾಟಗಾರರ ಸಖ್ಯ ಬೆಳೆಸಿದ್ದಕ್ಕಾಗಿ ಹಾಗ್ ವಾರ್ಟ್ಸ್ ನಲ್ಲಿ ಹ್ಯಾರಿಯನ್ನು ವಿಚಾರಣೆಗೆ ಗುರಿಪಡಿಸಲಾಗುತ್ತದೆ. ಡಂಬಲ್ ಡೋರ್ ಹ್ಯಾರಿಯ ನೆರವಿಗೆ ಬರುತ್ತಾರೆ.

ಈ ಪುಸ್ತಕದಲ್ಲಿ ಪರಿಚಯವಾಗುವ ಹೊಸ ಪಾತ್ರ ಅಂಬ್ರಿಡ್ಜ್ ಎಂಬ ಶಿಕ್ಷಕಿಯದು. ಈಕೆ ಹ್ಯಾರಿಯ ಆಲೋಚನೆಗಳು ಹಾಗೂ ಉಪಾಯಗಳನ್ನು ಸದಾ ವಿರೋಧಿಸುತ್ತಿರುತ್ತಾಳೆ. ಅವಕಾಶ ಸಿಕ್ಕಾಗಲೆಲ್ಲ ಹ್ಯಾರಿಗೆ ಶಿಕ್ಷೆ ಕೊಡುತ್ತಿರುತ್ತಾಳೆ. ರಾನ್ ಮತ್ತು ಹರ್ ಮೊಯ್ನಿ ಈ ವರ್ಷ ಶಾಲೆಯ ವಿದ್ಯಾರ್ಥಿ ನಾಯಕರು. ಹ್ಯಾರಿಗೆ ಅನೇಕ ಮಂದಿ ಅಭಿಮಾನಿಗಳಿದ್ದಾರೆ. ಹಾಗೆಯೇ ಕೆಲವು ವಿರೋಧಿಗಳೂ. ಅಂಬ್ರಿಡ್ಜ್ ನಿಧಾನವಾಗಿ ಪ್ರಭಾವಶಾಲಿಯಾಗುತ್ತಾ ಬೆಳೆದು ಡಂಬಲ್ ಡೋರ್ ನ ಸ್ಥಾನವನ್ನು ಆಕ್ರಮಿಸಿಕೊಂಡು, ಹಾಗ್ ವಾರ್ಟ್ಸ್ ನ ಪ್ರಿನ್ಸಿಪಾಲ್ ಆಗುತ್ತಾಳೆ. ಇದರಿಂದ ಬೇಸರಗೊಂಡ ಹ್ಯಾರಿ ಮತ್ತು ಆತನ ಸ್ನೇಹಿತರು ಡಂಬಲ್ ಡೋರ್ ಗೆ ಬೆಂಬಲವಾಗಿ, ಡಂಬಲ್ ಡೋರ್ ಸೇನೆ ಕಟ್ಟುತ್ತಾರೆ. ಈ ನಡುವೆ ಹ್ಯಾರಿ ಮತ್ತು ಚೋ ಚಾಂಗ್ ನಡುವೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಬೇರೆಯೂ ಆಗಿಬಿಡುತ್ತಾರೆ. ಹ್ಯಾರಿಗೆ ಒಂದು ವಿಶೇಷ ಶಕ್ತಿ ಬಂದು ವಾಲ್ಡೆಮಾರ್ಟ್ ಗೆ ಕಾಣುವುದು ಹಾಗೂ ವಾಲ್ಡೆಮಾರ್ಟ್ ಯೋಚಿಸುವುದು, ಭಾವಿಸುವುದು ಎಲ್ಲವೂ ಗೊತ್ತಾಗತೊಡಗುತ್ತದೆ. ವಾಲ್ಡೆಮಾರ್ಟ್ ನ ಆತ್ಮ ತನ್ನನ್ನು ಆಕ್ರಮಿಸಿಕೊಂಡಿದೆ ಎಂದುಕೊಳ್ಳುತ್ತಾನೆ ಹ್ಯಾರಿ. ಈ ವಿಶೇಷ ಶಕ್ತಿಯಿಂದಾಗಿ ರಾನ್ ನ ತಂದೆ ವೆಸ್ಲಿ ಕಷ್ಟಪಡುತ್ತಿರುವುದು, ಸಾವಿನ ಭಕ್ಷಕರಿಂದ (ಡೆತ್ ಈಟರ್ಸ್) ಸಿರಿಯಸ್ ಕಿರುಕುಳಕ್ಕೆ ಗುರಿಯಾಗಿರುವುದು ಎಲ್ಲ ತಿಳಿಯುತ್ತದೆ. ಸ್ನೇಹಿತರನ್ನು ಕರೆದುಕೊಂಡು ಸಿರಿಯಸ್ ನ ರಕ್ಷಣೆಗೆ ಧಾವಿಸುತ್ತಾನೆ ಹ್ಯಾರಿ. ಈ ಸಂದರ್ಭದಲ್ಲಿ ನಡೆಯುವ ದೊಡ್ಡ ಕಾಳಗದಲ್ಲಿ ಫೀನಿಕ್ಸ್ ಪಡೆಯೂ ಹ್ಯಾರಿಯ ನೆರವಿಗೆ ಬರುತ್ತದೆ. ಅಂತ್ಯದಲ್ಲಿ ಡಂಬಲ್ ಡೋರ್ ಮತ್ತು ವಾಲ್ಡೆಮಾರ್ಟ್ ಇಬ್ಬರ ಪ್ರವೇಶವಾಗುತ್ತದೆ. ಸುಮಾರು ಜನರಿಗೆ ವಾಲ್ಡೆಮಾರ್ಟ್ ನ ದರ್ಶನ ಆಗುತ್ತದೆ. ಆಗ ಅವರೆಲ್ಲ ವಾಲ್ಡೆಮಾರ್ಟ್ ಸತ್ತಿಲ್ಲ. ಇನ್ನೂ ಬದುಕಿದ್ದಾನೆ. ಹ್ಯಾರಿಯ ಮಾತು ನಿಜ. ಸಮಸ್ಯೆಗಳು ಮುಗಿದಿಲ್ಲ ಎಂದು ಅರಿವಾಗುತ್ತದೆ.

ಈ ಐದನೇ ಪುಸ್ತಕದಲ್ಲಿ ಸಾಕಷ್ಟು ನಾಟಕೀಯತೆ ಇದೆ. ಭಾವತೀವ್ರತೆ, ಪ್ರೀತಿಗಳಿವೆ. ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ಫೀನಿಕ್ಸ್ ಚಲನಚಿತ್ರವು ಪುಸ್ತಕಕ್ಕೆ ಹೆಚ್ಚು ಹತ್ತಿರವಾಗಿದೆ ಎನ್ನಲಾಗಿದೆ. ಚಿತ್ರದ ಪಾತ್ರಧಾರಿಗಳೂ ದೊಡ್ಡವರಾಗಿದ್ದು ಅವರ ಅಭಿಮಾನಿಗಳಾದ ನಾವೂ ಬೆಳೆದಿದ್ದೇವೆ.

ಆರನೇ ಪುಸ್ತಕ ಸ್ವಲ್ಪ ಟ್ಯ್ರಾಜಿಡಿ. ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್ ಎಂಬ ಈ ಪುಸ್ತಕದಲ್ಲಿ ಕೆಲವು ತಿರುವುಗಳಿವೆ. ಡಂಬಲ್ ಡೋರ್ ಕೆಲವು ಸಮಸ್ಯೆಗಳ ಪರಿಹಾರಕ್ಕೆ ದಾರಿ ಹುಡುಕಿಕೊಂಡು ಪ್ರಿವೆಟ್ ಡ್ರೈವ್ ಗೆ ಬಂದಿದ್ದಾರೆ. ಹಾಗ್ ವರ್ಟ್ಸ್ ನ ಪೋಷನ್ ಮಾಸ್ಟರ್ ಆಗಿದ್ದ ಸ್ನೇಪ್ ಈಗ ದಾದಾ ಆಗಿದ್ದಾರೆ. ಅಂದರೆ ದುಷ್ಟ ಶಕ್ತಿಗಳ ವಿರುದ್ಧ ರಕ್ಷಣೆ ಒದಗಿಸುವುದು ಎಂದು ಅರ್ಥ. (ಡಿಫೆನ್ಸ್ ಎಗೆನೆಸ್ಟ್ ಡಾರ್ಕ್ ಆರ್ಟ್ಸ್) ಹ್ಯಾರಿಯು ವಾಲ್ಡೆಮಾರ್ಟ್ ನನ್ನು ಮುಗಿಸುವ ಕೆಲಸದಲ್ಲಿ ಡಂಬಲ್ ಡೋರ್ ಗೆ ನೆರವು ನೀಡುತ್ತಿದ್ದಾನೆ. ಡಂಬಲ್ ಡೋರ್ ಹ್ಯಾರಿಗೆ ಖಾಸಗಿಯಾಗಿ ಪಾಠ ಕಲಿಸುತ್ತಿದ್ದಾರೆ.

ಹ್ಯಾರಿಯ ಸಹಪಾಠಿ ಮತ್ತು ಪ್ರತಿಸ್ಪರ್ಧಿ ಡ್ಯ್ರಾಕೊ ಸಾವಿನ ಭಕ್ಷಕ ಆಗಿದ್ದಾನೆ ಎಂಬ ಹ್ಯಾರಿಯ ಅನುಮಾನ ನಿಜವಾಗುತ್ತದೆ. ಅವನಿಗೆ ಸ್ನೇಪ್ ಸಹಾಯ ಮಾಡುತ್ತಿರುತ್ತಾರೆ. ಈ ಮಧ್ಯೆ ಪ್ರೊ ಮ್ಯಾಕ್ ನಗಲ್ ತರಗತಿಗಳಿಗೆ ಪಾಠ ಹೇಳುವಂತೆ ಹ್ಯಾರಿಗೆ ಸೂಚಿಸುತ್ತಾರೆ ಹಾಗೂ ತಾತ್ಕಾಲಿಕವಾಗಿ ಪಾಠ ಹೇಳುವ ಒಂದು ಪುಸ್ತಕ ಕೊಡುತ್ತಾರೆ. ಅದು ಹಾಫ್ ಬ್ಲಡ್ ರಾಜಕುವರನಿಗೆ ಸೇರಿದ ಪುಸ್ತಕ. ಬುದ್ಧಿವಂತನಾದ ಆ ರಾಜಕುಮಾರ ಅನೇಕ ಮಾಯಾಜಾಲಗಳನ್ನು, ಜಾದೂ ತಂತ್ರಗಳನ್ನು ಕಂಡು ಹಿಡಿದಿರುತ್ತಾನೆ. ಹ್ಯಾರಿ ಬಳಸಿರುವ ಅನೇಕ ಜಾದೂ ತಂತ್ರಗಳು ಈ ರಾಜಕುಮಾರ ಕಂಡು ಹಿಡಿದಿರುವ ತಂತ್ರಗಳೇ ಆಗಿರುತ್ತದೆ. ಈ ರಾಜಕುಮಾರನ ಬಗ್ಗೆ ಅಧ್ಯಯನ ಮಾಡಿರುವ ಹರ್ ಮೊಯ್ನಿ ಆ ತಂತ್ರಗಳನ್ನು ಬಳಸದಂತೆ ಹ್ಯಾರಿಗೆ ಎಚ್ಚರಿಕೆ ನೀಡುತ್ತಾಳೆ. ಆದರೆ ಅವನು ಕೇಳುವುದಿಲ್ಲ.

ಒಮ್ಮೆ ಹ್ಯಾರಿ ಮತ್ತು ಡಂಬಲ್ ಡೋರ್ ಯಾವುದೋ ಶೋಧನೆಯ ಮೇಲೆ ಹಾಗ್ ವರ್ಟ್ಸ್ ನಿಂದ ಹೊರಕ್ಕೆ ಹೋದಾಗ, ಹಾಗ್ ವರ್ಟ್ಸ್ ಮೇಲೆ ದುಷ್ಟ ಶಕ್ತಿಗಳ ದಾಳಿ ನಡೆಯುತ್ತದೆ. ಇದರಿಂದ ಹಾಗ್ ವರ್ಟ್ಸ್ ಅನ್ನು ರಕ್ಷಿಸಲು ಇಬ್ಬರೂ ಧಾವಿಸಿ ಬರುತ್ತಾರೆ. ಆದರೆ ಹ್ಯಾರಿಯ ಮೇಲೆ ಪ್ರಯೋಗವಾಗುವ ಒಂದು ಜಾದೂ ತಂತ್ರದಿಂದ ಅವನು ನಿಶ್ಚಲನಾಗಿ ಬಿಡುತ್ತಾನೆ. ಯಾರಿಗೂ, ಯಾವುದೇ ಸಹಾಯ ಮಾಡಲು ಹ್ಯಾರಿಗೆ ಸಾಧ್ಯವಾಗಲ್ಲ. ವಯಸ್ಸಾದ ಡಂಬಲ್ ಡೋರ್ ಕೂಡ ಶಕ್ತಿಯುತ ಜಾದೂ ತಂತ್ರ ಮಾಡುವಲ್ಲಿ ಸೋಲುತ್ತಾರೆ. ಡಜನ್ ಗಟ್ಟಲೆ ಸಾವಿನ ಭಕ್ಷಕರು ಹಾಗ್ ವರ್ಟ್ಸ್ ಅನ್ನು ಆಕ್ರಮಿಸಿದ್ದಾರೆ. ಡಂಬಲ್ ಡೋರ್ ಸ್ನೇಪ್ ನ ಸಹಾಯ ಕೋರುತ್ತಾರೆ. ಆದರೆ ಸ್ನೇಪ್ ಅತ್ಯಂತ ಕ್ರೂರತನದಿಂದ ಅವಾಡ-ಕೆವಾಡ್ರ ಎಂಬ ಮಂತ್ರ ಹೇಳಿ ಡಂಬಲ್ ಡೋರ್ ನನ್ನು ಕೊಲ್ಲುತ್ತಾನೆ.

ಹ್ಯಾರಿ ದಿಗ್ಭ್ರಮೆಗೊಳ್ಳುತ್ತಾನೆ. ಹಾಗೂ, ಹೀಗೂ ಕಷ್ಟಪಟ್ಟು ತನಗೆ ದಿಗ್ಬಂಧನ ಹಾಕಿದ್ದ ತಂತ್ರದಿಂದ ಹೊರಬರುತ್ತಾನೆ. ಸ್ನೇಪ್ ನನ್ನು ಅಟ್ಟಿಸಿಕೊಂಡು ಹೋಗುವ ಹ್ಯಾರಿ ಹಾಫ್ ಬ್ಲಡ್ ಪ್ರಿನ್ಸ್ ನ ತಂತ್ರಗಳಲ್ಲಿ ಒಂದು ಸ್ನೇಪ್ ನ ಮೇಲೆ ಪ್ರಯೋಗಿಸುತ್ತಾನೆ. ನಾನು ಕಂಡು ಹಿಡಿದ ತಂತ್ರವನ್ನು ನನ್ನ ಮೇಲೆ ಪ್ರಯೋಗಿಸುವುದು ಬುದ್ಧಿವಂತಿಕೆಯ ಲಕ್ಷಣ ಅಲ್ಲ ಎನ್ನುವ ಸ್ನೇಪ್ ಡ್ಯ್ರಾಕೊನನ್ನು ಕರೆದುಕೊಂಡು ಓಡಿ  ಹೋಗುತ್ತಾನೆ.

ಡಂಬಲ್ ಡೋರ್ ನ ಅಂತ್ಯಕ್ರಿಯೆಯಲ್ಲಿ ಹ್ಯಾರಿ, ವಾಲ್ಡೆಮಾರ್ಟ್ ನನ್ನು ಎಲ್ಲಿದ್ದರೂ ಹುಡುಕಿ ಮುಗಿಸುವವರೆಗೂ ಹಾಗ್ ವಾರ್ಟ್ಸ್ ಗೆ ಹಿಂದಿರುಗಿ ಬರುವುದಿಲ್ಲ ಎಂದು ಸ್ನೇಹಿತರ ಮುಂದೆ ಪಣತೊಡುತ್ತಾನೆ.

‍ಲೇಖಕರು avadhi

23 July, 2007

1 Comment

  1. ki mama

    good piece of writing. all the best
    ki mama

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading