ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಹೌದೂ, ಶಿಕ್ಷಕಿಯರ ದಿನ ಅಂತ ಯಾಕಿಲ್ಲ?’ – ಮುನ್ನೂರು ಕೇಳುತ್ತಾರೆ

ಹೌದೂ….. ಶಿಕ್ಷಕಿಯರ ದಿನ ಅಂತ ಯಾಕಿಲ್ಲ… ?

– ಮಹಿಪಾಲರೆಡ್ಡಿ ಮುನ್ನೂರ್

ಶಾಲೆಯಿಂದ ಬಂದ ತಕ್ಷಣವೇ ನಮ್ಮ ಮುದ್ದು ಹುಡುಗ ವಿಜಯಭಾಸ್ಕರ ಮಂಕಾಗಿದ್ದ. ಮನೆಗೆ ಬಂದವನೇ ಪುಸ್ತಕದ ಬ್ಯಾಗ್ ಮೂಲೆಗಿಟ್ಟು, ಸರಿಯಾಗಿ ಊಟವನ್ನೂ ಮಾಡದೇ, ತನ್ನ ಪಾಡಿಗೆ ತಾನಿದ್ದ. ಯಾವತ್ತೂ ಪಾದರಸದಂತೆ ಇರುತ್ತಿದ್ದ ವಿಜಯಭಾಸ್ಕರ ಅದ್ಯಾಕೋ ಮಂಕಾಗಿರುವುದನ್ನು ಗಮನಿಸಿದ ವಿಜಯಭಾಸ್ಕರನ ಅಮ್ಮ ಸ್ವಲ್ಪ ಗಾಬರಿಯಾದಳು.

`ಯಾಕೋ ಹೀಂಗಿದ್ದೀ..’ ಅಂತ ಕೇಳಿದರೂ ಬಾಯಿಬಿಡಲಿಲ್ಲ. `ಏನಾಯಿತೋ..?’ ಎಂದು ಕೇಳಿದರೂ ಮಾತೇ ಇಲ್ಲ. ಎಲ್ಲದಕ್ಕೂ `ಏನಿಲ್ಲ’ ಎಂಬಂತೆ ತಲೆಯಾಡಿಸುತ್ತಿದ್ದ. ವಿಜಯಭಾಸ್ಕರನ ಅಮ್ಮ ಪಕ್ಕದಲ್ಲಿ ಬಂದು ಕೂತು, ತಲೆ ಮೇಲೆ ಕೈಯಾಡಿಸಿ, `ಅದು ಕೊಡಿಸ್ತೀನಿ, ಇದೂ ಕೊಡಿಸ್ತೀನಿ..’ ಎಂದು ರಮಿಸಿದ ಮೇಲೆ ಬಾಯಿಬಿಟ್ಟ. `ಅಮ್ಮಾ.. ಸಂಬಣ್ಣ ಸರ್ ಕೇಳಿದ ಪ್ರಶ್ನೆಗೆ ನಾನು ಸರಿಯಾಗಿ ಉತ್ತರ ಕೊಟ್ಟಿಲ್ಲ. ಅದಕ್ಕೆ ಅವರು, ನೀನೂ ಮಾಸ್ಟರ್ ಮಗ. ಯಾವಾಗಲೂ ಭಾಷಣ-ನಿಬಂಧ ಅಂತ ಕಾಂಪಿಟೇಷನ್ಗೆ ಹೋಗಿ ಬಹುಮಾನ ತಗೋಳ್ತೀ. ಆದರೆ, ಓದೋದರಲ್ಲಿ ಮಾತ್ರ ಝೀರೋ. ಭಾಷಣದಲ್ಲಿ ಬಹುಮಾನ ಪಡೆದುಕೊಂಡಿದ್ದಕ್ಕೆ ಸೊಕ್ಕು ಬಂದಿದೆ. ನಿನಗೆ ಸರಿಯಾಗಿ ಪಾಠ ಕಲಿಸ್ತೀನಿ, ಮಗನಾ.. ಅಂತ ನನ್ನನ್ನು ಬ್ರೇಂಚ್ ಮೇಲೆ ನಿಲ್ಲಿಸಿದ್ದರು. ನನಗೆ ನಾಚಿಕೆ ಮತ್ತು ಅಳು ಬಂದಿತ್ತು. ಅವರ ಪೀರಿಯಡ್ ಮುಗಿಯೋ ತನಕ ಹಾಗೆ ನಿಲ್ಲಿಸಿದ್ದರು. ಹೊರಗೆ ಗೆಳೆಯರೆಲ್ಲಾ ಅಣಕಿಸ್ತಾರೆ. ನಾನು ಇನ್ಮೇಲೆ ಯಾವುದೇ ಭಾಷಣ ಮತ್ತು ನಿಬಂಧ ಸ್ಪಧರ್ೆಗಳಿಗೆ ಹೋಗೋದಿಲ್ಲ..’ ಹಾಗಂತ ಬಿಕ್ಕಿ ಬಿಕ್ಕಿ ಅಳುತ್ತಾ ಎಲ್ಲವನ್ನೂ ವಿವರಿಸಿ ಹೇಳಿದ್ದ ವಿಜಯಭಾಸ್ಕರ. `ಆಮೇಲೆ, ಕ್ಲಾಸಿಗೆ ಬಂದ ಬಸಲಿಂಗಮ್ಮ ಟೀಚರ್ ಅಳೋದನ್ನು ನೋಡಿ, ಸಂತೈಸಿದರು. ತಮ್ಮ ಪಕ್ಕಕ್ಕೆ ಕರೆದು, ನಿನ್ನಂತೆ ಮಾತನಾಡಿಸಿದರು. ಅಳು ಎಲ್ಲಾ ಹೋಯಿತು..’ ಅಂತ ಟೀಚರ್ ಬಗ್ಗೆ ಚೆಂದವಾಗಿ ಮಾತನಾಡಿದ ವಿಜಯಭಾಸ್ಕರ.

ಸಂಬಣ್ಣ ಸರ್, ವಿಜಯಭಾಸ್ಕರಗೆ ಹೊಡೆಯದಿದ್ದರೂ ಮಾನಸಿಕವಾಗಿ ಘಾಸಿ ಮಾಡಿದ್ದರು. ಕ್ಲಾಸ್ಮೇಟ್ಗಳ ಮುಂದೆಯೇ ಅವಮಾನ ಮಾಡಿದ್ದಕ್ಕಾಗಿ ವಿಜಯಭಾಸ್ಕರನ ಎಳೆಯ ಮನಸ್ಸು ಬಾಡಿಹೋಗಿತ್ತು.

ಪಕ್ಕದ ಮನೆಯ ಆಂಟಿ ಮಗಳ ಹೆಸರು, ಭಾಗ್ಯ . ಅವಳ ಪೆನ್ನು ಯಾಕೋ ಮೂಡುತ್ತಿಲ್ಲ. ಬಹುಶಃ ಇಂಕ್ ಮುಗಿದು ಹೋಗಿರಬಹುದು ಎಂದುಕೊಂಡು, ಪಕ್ಕದಲ್ಲಿ ಕೂತಿದ್ದ ಐಶೂಗೆ ಪಿಸುಮಾತಿನಲ್ಲಿಯೇ `ನಿನ್ನ ಬಳಿ ಇನ್ನೊಂದು ಪೆನ್ನು ಇದ್ದರೆ ಕೊಡು’ ಅಂತ ಕೇಳಿದಳು. ಇದೇ ಸಮಯದಲ್ಲಿ ಭಾಗ್ಯಳನ್ನು ನೋಡಿದ ಶೇಖ್ ಮಹಬೂಬ ಸರ್ಗೆ ಸಿಟ್ಟು ಬಂತು. ತಕ್ಷಣವೇ ಭಾಗ್ಯಳ ಮೇಲೆ ತಮ್ಮ ಕೈಯಲಿದ್ದ ಡಸ್ಟರ್ ಬಿಸಾಡಿದ್ದರು. ಯಾಕೆ ಮಾತನಾಡುತ್ತಿದ್ದಾಳೆ ಎಂಬುದನ್ನು ಕೇಳದೆ, ಭಾಗ್ಯ ಮತ್ತು ಪಕ್ಕದಲ್ಲಿ ಕೂತಿದ್ದ ಐಶುಳನ್ನು ತರಗತಿಯಿಂದ ಹೊರಗೆ ಕಳುಹಿಸಿದರು. ಹೀಗಾಗಿ ಈ ಇಬ್ಬರು ವಿದ್ಯಾಥರ್ಿನಿಯರು ಅವಮಾನದ ಜೊತೆಗೆ ಪಾಠವನ್ನು ಕೇಳಲಾರದಂತಾಯಿತು. ಹೊರಗಡೆ ನಿಂತ ಈ ಇಬ್ಬರನ್ನೂ ನೋಡಿದ ಸುಭದ್ರಬಾಯಿ ಟೀಚರ್, `ಯಾಕ್ರೇ ಏನಾಯಿತು?’ ಅಂತ ಕೇಳಿ, ಅವರಿಬ್ಬರನ್ನು ಸ್ಟಾಫ್ ರೂಮಿಗೆ ಕರೆದುಕೊಂಡು ಹೋಗಿ, ಸಮಾಧಾನ ಮಾಡಿದರು.

ಈ ಎರಡೂ ಘಟನೆಗಳು ಆಗಾಗ ಘಟಿಸುತ್ತಲೇ ಇರುತ್ತವೆ. ಎಳೆ ಮನಸ್ಸುಗಳು ಮುದುಡುತ್ತಲೇ ಇರುತ್ತವೆ. ಟೀಚರಮ್ಮಗಳು ಅವರನ್ನು ಸಂತೈಸುವಾಗ, ಶಿಕ್ಷಕರಿಗಿಂತ ಶಿಕ್ಷಕಿಯರೇ ಎಷ್ಟೋ ಪಾಲು ಸರಿ ಅಂತ ತೀಮರ್ಾನಕ್ಕೆ ಬರುತ್ತವೆ ಆ ಎಳೆ ಮನಸ್ಸುಗಳು.

ಹಾಗಂತ, ಶಿಕ್ಷಕರಷ್ಟೇ ಹೀಗೆ. ಶಿಕ್ಷಕಿಯರೇ ಸರಿ ಎಂಬುದೂ ಅಲ್ಲ. ಶಿಕ್ಷಕಿಯರಲ್ಲೂ ಅವಮಾನಿಸುವ, ಘಾಸಿ ಮಾಡುವವರಿದ್ದಾರೆ. ಆದರೆ, ಶಿಕ್ಷಕಿಯರಲ್ಲಿ ಅಮ್ಮನ ಗುಣ ಇರುತ್ತದೆ. ಹೀಗಾಗಿ ಅವರಲ್ಲಿ ಸಂತೈಸುವ, ಪ್ರೀತಿಸುವ, ಮಮತಿಸುವ ಗುಣಗಳು ಇರುವುದರಿಂದಲೇ ಎಳೆ ಮಕ್ಕಳನ್ನು ತಮ್ಮ ಹತ್ತಿರ ಕರೆದುಕೊಂಡು ಮಾತನಾಡಿಸುತ್ತಾರೆ.

ಗುರುಗಳು ಮತ್ತು ಶಿಷ್ಯರ ನಡುವಿನ ಸಂಬಂಧ ಘಾಸಿಗೊಳಿಸುವ ಹಂತಕ್ಕೆ ಬಂದಿರುವುದು ನಮ್ಮ ಸಮಾಜದ ದುರಂತವಲ್ಲದೇ ಮತ್ತೇನು? ಹಾಗಂತ ಎಲ್ಲವೂ ಶಿಕ್ಷಕರದೇ ತಪ್ಪು. ಶಿಕ್ಷಕರೆಲ್ಲಾ ಹೀಗೇ, ಶಿಕ್ಷಕಿಯರೂ ಹಾಗೇ ಎಂದು ಅರ್ಥವಲ್ಲ. ಆದರೆ, ಶೇಕಡವಾರು ಶಿಕ್ಷಕರು ಇಂದು ಸಂಯಮ, ಸಹನೆ, ಆದರ್ಶ, ಪ್ರೀತಿ, ವಾತ್ಸಲ್ಯ ಎಂಬ ಬಹುಮುಖ್ಯ ಮೌಲ್ಯಗಳನ್ನು ಮರೆತಿರುವುದಂತೂ ಅಪ್ಪಟ ಸತ್ಯ. ಅವುಗಳ ಜಾಗದಲ್ಲಿ, ರಾಜಕಾರಣ, ಜಾತಿ ಪ್ರೀತಿ, ಹಿರಿಯ ಅಧಿಕಾರಿಗಳ ಜೊತೆ ನಂಟು, ಒಳಗೊಳಗೇ ಏನೋ ಒಡಂಬಡಿಕೆ, ಅಸೋಸಿಯೇಷನ್ಗಳ ಹೆಸರಲ್ಲಿ ಓಡಾಟ, ಪಾಠ ಮಾಡುವುದಕ್ಕಿಂತ ಶಿಕ್ಷಕರ ಸಮಸ್ಯೆಗಳ ಹೈಲೈಟ್ ಮಾಡೋದು ಇವರ ಪರಮಗುರಿ. ಸರಕಾರ ಸಂಬಳ ಕೊಡುವುದೇ ಪಾಠ ಮಾಡಲು ಎಂಬುದನ್ನೇ ಮರೆತು, ಆ ಟೀಚರಮ್ಮನನ್ನು ಸುಮ್ ಸುಮ್ಮನೇ ಸಸ್ಪೆಂಡ್ ಮಾಡಿದ್ದಾರೆ ಎಂದು ತಿಂಗಳಲ್ಲಿ ಹದಿನಾಲ್ಕು ದಿವಸವೂ ಬಿಎಒ ಆಫೀಸುಗಳಿಗೆ ಅಲೆದಾಟ, ಈಗೀಗಂತೂ, ಶಾಲಾ ಕೋಣೆಗಳ ನಿಮರ್ಾಣ ಕಾಮಗಾರಿಯಲ್ಲಿ ಪ್ರಾಮಾಣಿಕವಾಗಿ ಹೆಡ್ ಮೇಡಮ್ಮುಗಳು ಕೆಲಸ ಮಾಡಿದರೂ, ಅದೇ ಶಾಲೆಯಲ್ಲಿರುವ ಸಹ ಶಿಕ್ಷಕರು ಸಹಿಸಿಕೊಳ್ಳದೇ, ಮೇಲಧಿಕಾರಿಗಳ ಕಿವಿ ಚುಚ್ಚಿ, ಇಲ್ಲಸಲ್ಲದ ವಿಷಯಗಳನ್ನು ಹೇಳಿ, ಹೆಡ್ ಮೇಡಮ್ಮಳನ್ನು ನಿತ್ಯವೂ ಕಿರಿಕಿರಿ ಉಂಟು ಮಾಡುವುದು, ಇಲ್ಲವೇ ದುಡ್ಡು ಕೇಳುವುದು, ಇಂತಹ ಅನೇಕ ಸಂಗತಿಗಳನ್ನು ನೋಡುತ್ತಿದ್ದೇವೆ. ಸಂಬಳದ ಗುಂಗಿನಲ್ಲೇ ಇರುವ ಅವರು, ಯಾವತ್ತಾದರೂ ಪಾಠ ಮಾಡಿದ್ದಾರಾ? ಆಯಾ ದಿನದ ಪಾಠ ಮಾಡುವ ಕೆಲಸವನ್ನು ಹೆಚ್ಚು ಶ್ರಮವಿಲ್ಲದೇ ಮಾಡಿ ಮುಗಿಸುವುದಷ್ಟೇ ತಮ್ಮ ಶಿಕ್ಷಕ ವೃತ್ತಿಯ ಸೀಮಿತ ಎಂದು ಅರಿತುಕೊಂಡಂತಿದೆ. ಮಕ್ಕಳು ಗಲಾಟೆ ಮಾಡುತ್ತಿದ್ದರೆ ಪಾಠ ಮಾಡಲು ಹೇಗಾಗುತ್ತದೆ. ಅದಕ್ಕಾಗಿ ಈ ಶಿಕ್ಷಕರು ಶಿಕ್ಷಿಸಲು ಮುಂದಾಗುತ್ತಾರೆ. ಸಿಟ್ಟಿನ ಭರದಲ್ಲಿ ತಮ್ಮ ದಂಡನೆಯ ಸ್ವರೂಪ ಹೇಗಿರುತ್ತದೆ ಎಂದರೆ ಅರಿಯಲಾಗದಷ್ಟು ವಿವೇಚನೆ ಕಳಕೊಂಡು ಬಿಡುತ್ತಾರೆ. ಇದಕ್ಕೂ ಮೀರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ಅನೇಕ ಶಿಕ್ಷಕರ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಇದೇನಾ ಗುರು- ಶಿಷ್ಯರ ಸಂಬಂಧ ? ಹಾಗಂತ ಎಲ್ಲಾ ಶಿಕ್ಷಕರು ಹೀಗೇ ಅಂತ ಹೇಳಲಿಕ್ಕಾಗುವುದಿಲ್ಲ. ಅವರಲ್ಲೂ ಅನೇಕರು ಮಕ್ಕಳನ್ನು ಪ್ರೀತಿಸುವವರಿದ್ದಾರೆ. ಮಮತಿಸುವವರಿದ್ದಾರೆ. ಪ್ರಾಮಾಣಿಕವಾಗಿ ಪಾಠ ಬೋಧನೆ ಮಾಡುವವರಿದ್ದಾರೆ.

ಈ ಎಲ್ಲಾ ಸಂಗತಿಗಳನ್ನು ನೆನಪು ಮಾಡಿಕೊಳ್ಳುತ್ತ ಮೊನ್ನೆ ಕನ್ನಡ ಭವನದಲ್ಲಿ ಕೂತಾಗ, ಲೇಖಕಿಯೂ ಆಗಿರುವ ಟೀಚರಮ್ಮ ಮೀನಾಕ್ಷಿ ಬಾಳಿ, ಹೋರಾಟಗಾತರ್ಿ ಮತ್ತು ಟೀಚರಮ್ಮನ ಮನಸ್ಸು ಹೊಂದಿರುವ ಕೆ.ನೀಲಾ ಬಂದರು. ಉಭಯಕುಶಲೋಪರಿ ಸಾಂಪ್ರತ ಮುಗಿದ ಮೇಲೆ, ಶಿಕ್ಷಕರ ದಿನದ ಬಗ್ಗೆ ಚಚರ್ೆ ಶುರುವಾಯಿತು. ಡಾ. ರಾಧಾಕೃಷ್ಣನ್ರ ಬಗ್ಗೆ ಅವರ ಮಗ ಗೋಪಾಲ್ ಬರೆದ ಸಂಗತಿಯನ್ನು ಪ್ರೊ. ಜಿ.ಎಚ್.ನಾಯಕ್ ಪ್ರಸ್ತಾಪಿಸಿದ ಲೇಖನದ ಬಗ್ಗೆ ಮಾತುಕತೆಗಳು ಶುರುವಾದವು. ರಾಧಾಕೃಷ್ಣನ್ ಅವರಿಗಿಂತಲೂ ಸಾವಿತ್ರಿ ಫುಲೆ ನಿಜವಾದ ಶಿಕ್ಷಕಿ ಮತ್ತು ಅವಳು ರಾಧಾಕೃಷ್ಣನ್ ಗಿಂತಲೂ ಮುಂಚೆ ಜನಿಸಿದವಳು. ಅವಳ ಹೆಸರಲ್ಲಿ ಶಿಕ್ಷಕರ ದಿನ ಆಚರಿಸಬೇಕು. ಇಲ್ಲವಾದರೆ, ಶಿಕ್ಷಕರಿಯರ ದಿನ ಅಂತ ಆಚರಿಸಲಿ ಎಂಬುದು ಆವತ್ತಿನ ಚಚರ್ೆಯ ವಿಷಯ.

ಶೈಕ್ಷಣಿಕ ಕ್ಷೇತ್ರಕ್ಕೆ ಸಾವಿತ್ರಿ ಫುಲೆ ಕಾಣಿಕೆ ಏನು ಎನ್ನುವುದರ ಮೇಲೆ ಅದು ಅವಲಂಬಿತಗೊಂಡಿರುತ್ತದೆ. ಅಲ್ಲವೇ ಎಂದು ಸಾವಿತ್ರಿ ಫುಲೆ ಬಗ್ಗೆ ಇನ್ನಷ್ಟು ಚಚರ್ೆಯಾಗತೊಡಗಿತು. ಭಾರತೀಯ ಶೈಕ್ಷಣಿಕ ಕ್ಷೇತ್ರಕ್ಕೆ ನಿಜವಾದ ಕೊಡುಗೆ ಕೊಟ್ಟಿದ್ದು ಸಾವಿತ್ರಿ ಫುಲೆ. ದಲಿತರಿಗೆ , ಮಹಿಳೆಯರಿಗಾಗಿ 1848ರಲ್ಲಿಯೇ ಶಾಲೆಗಳನ್ನು ತೆರೆದು ಜ್ಯೋತಿಬಾ ಫುಲೆ ಮತ್ತು ಆತನ ಹೆಂಡತಿ ಸಾವಿತ್ರಿ ಫುಲೆ ಪ್ರಥಮವಾಗಿ ಎಲ್ಲರಿಗೂ ಆದರ್ಶರಾಗಬೇಕು. ಸಾವಿತ್ರಿ ಫುಲೆ ಜನಿಸಿದ್ದು ಜನೆವರಿ 3, 1831 ರಲ್ಲಿ. ಒಂಬತ್ತನೇ ವಯಸ್ಸಿನಲ್ಲಿಯೇ ಅಂದಿನ ಪದ್ಧತಿಯಂತೆ ಬಾಲ್ಯವಿವಾಹಕ್ಕೆ ಒಳಗಾದರೂ, ಗಂಡ ಜ್ಯೋತಿಬಾ ಫುಲೆಯ ಕ್ರಾಂತಿಕಾರಿ ಹೆಜ್ಜೆಗಳೊಂದಿಗೆ ಹೆಜ್ಜೆ ಹಾಕಿದ್ದು ಸಾವಿತ್ತಿ ಫುಲೆಯ ಮನೋಧರ್ಮ ಶ್ಲಾಘನೀಯ ಮತ್ತು ಮಹಿಳೆಯರಿಗೊಂದು ದಿಕ್ಸೂಚಿ. ಅನೇಕರ ಟೀಕೆಗಳನ್ನು, ಹಲ್ಲೆಗಳನ್ನು ಸಹಿಸಿಕೊಂಡು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇಡೀ ಜೀವನವನ್ನು ಮುಡುಪಾಗಿಟ್ಟು, ಶಾಲೆ ತೆರೆದು ಮಕ್ಕಳಿಗೆ ಪಾಠ ಮಾಡಿದಳಲ್ಲಾ ಸಾವಿತ್ರಿ ಫುಲೆ ಪ್ರಥಮ ಶಿಕ್ಷಕಿ ಅಲ್ಲವೇ?

ಡಾ.ರಾಧಾಕೃಷ್ಣನ್ ಅವರು ಜನಿಸಿದ್ದು, ಸೆಪ್ಟೆಂಬರ್ 5, 1888. ಅವರ ಜನ್ಮದಿನವನ್ನೇ ಶಿಕ್ಷಕರ ದಿನಾಚರಣೆ ಮಾಡಲಾಗುತ್ತಿದೆ. ಅವರ ಬದುಕಿನ ಕೆಲವು ಅಪಸವ್ಯಗಳ ಬಗ್ಗೆ ಚಚರ್ಿತವಾಗುತ್ತಿರುವ ಈ ದಿನಗಳಲ್ಲಿ ಶಿಕ್ಷಕರ ದಿನಕ್ಕೆ ಸಿಗುವ ಮೌಲ್ಯ ಮತ್ತು ಅಪಮೌಲ್ಯಗಳ ಬಗ್ಗೆಯೂ ಚಚರ್ೆಗೆ ಒಳಪಡಬೇಕು.

ಆದರೆ, ಏನೆಲ್ಲಾ ಚಚರ್ೆ ನಡೆದು, ಕೊನೆಗೆ ಬಂದು ತಲುಪಿದ್ದೇನೆಂದರೆ, ಶಿಕ್ಷಕರ ದಿನ ಅಂತ ಇದ್ದಾಗ, ಶಿಕ್ಷಕಿಯರು ಏನು ಮಾಡಬೇಕು. ಲಿಂಗಭೇದ ಇರುವ ಈ ದಿನಾಚರಣೆಯಲ್ಲಿ ಟೀಚರಮ್ಮಗಳು ಹೇಗೆ ಮನಸಾಪೂರ್ವಕವಾಗಿ ಭಾಗವಹಿಸಲು ಸಾಧ್ಯ. ಇಂತಹ ಮಾತುಗಳ ನಡುವೆಯೇ ಥಟ್ಟನೇ ಎದ್ದುಕೂತ ಪ್ರಶ್ನೆಯೆಂದರೆ,

ಶಿಕ್ಷಕಿಯರ ದಿನ ಅಂತ ಯಾಕಿಲ್ಲ?

ನಿಸ್ಸಂದೇಹವಾಗಿ, ಈ ಬಗ್ಗೆ ಯಾರೆಂದರೆ ಯಾರೂ ಯೋಚಿಸಿಲ್ಲ. ಯೋಚಿಸುವುದೂ ಇಲ್ಲ. ಹಲವೆಡೆ ಬಹು ವಿಜೃಂಭಣೆಯಿಂದ ಮತ್ತು ಕೆಲವೆಡೆ ನೆಪಕ್ಕಾಗಿ ಶಿಕ್ಷಕರ ದಿನಾಚರಣೆಯನ್ನು ನಿನ್ನೆ, ಸೆಪ್ಟೆಂಬರ್ 5 ರಂದು ಮಾಡುವುದನ್ನು ಮತ್ತು ಮಾಡಿದ್ದನ್ನು ಈ ದೇಶದಲ್ಲಿ ನೋಡಿದ್ದೇವೆ. ಎಲ್ಲಾ ಶಿಕ್ಷಕರು ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಪಾಲ್ಗೊಂಡಿದ್ದರು. ಆದರೆ, ಶಿಕ್ಷಕಿಯರು.. ?

ಅವರೂ ಪಾಲ್ಗೊಳ್ಳುತ್ತಾರೆ. ಪಾಲ್ಗೊಂಡಿದ್ದರು. ಪಾಲ್ಗೊಳ್ಳದೇ ಇರಲು ಸಾಧ್ಯವೇ?

ಈ ದಿನಾಚರಣೆಯಲ್ಲಿ, ಭಾಗವಹಿಸಿದ್ದ ಶಿಕ್ಷಕಿಯರು ಸಂಭ್ರಮದಿಂದ ಇದ್ದರಾ? ಶಿಕ್ಷಕರ ದಿನಾಚರಣೆ ಅಂತ ಇದೆ. ಹೊರತು ಶಿಕ್ಷಕಿಯರ ದಿನಾಚರಣೆ ಅಂತ ಇಲ್ಲ. ಹಾಗಂತ `ಶಿಕ್ಷಕರು’ ಎನ್ನುವ ಪದದಲ್ಲಿ ಎರಡನ್ನೂ ಒಳಗೊಂಡಿರುತ್ತದೆ ಎಂಬ ವಿಶಾಲ ಅರ್ಥವನ್ನು ಕಲ್ಪಿಸಿಕೊಳ್ಳುವುದನ್ನು ಬಿಟ್ಟು ಇದೇನು ಅಸಂಬದ್ಧ ಪ್ರಲಾಪ ಎನ್ನುವವರು ಅನೇಕರಿದ್ದಾರೆ.

ಅದೇನೇ ಇದ್ದರೂ, ಶಿಕ್ಷಕರ ದಿನ ಅಂತ ಇದೇ ಎಂದೂ, ಶಿಕ್ಷಕಿಯರ ದಿನ ಇಲ್ಲ ಎಂತಲೂ .. ಎಂಬ ಚಚರ್ೆ ಆರಂಭವಾಗುವ ಸಂದರ್ಭದಲ್ಲಿ, ಲಿಂಗಭೇದದ ಬಗೆಗಿನ ಮಾತುಗಳು ಶುರುವಾಗುತ್ತವೆ.

ಹಾಗೆ ನೋಡಿದರೆ, ಶಿಕ್ಷಕಿಯರಿಗೆ ಒತ್ತಡಗಳು ಜಾಸ್ತಿಯಿರುತ್ತವೆ. ವೃತ್ತಿಯೊಂದಿಗೆ ಮನೆಯನ್ನೂ ನಿಭಾಯಿಸಬೇಕಾದ ಮಹತ್ತರ ಜವಾಬ್ದಾರಿ ಇರುತ್ತದೆ. ಅಲ್ಲಿ ಸಹನೆ ಅತ್ಯಂತ ಮಹತ್ವದ್ದು. ಹೀಗಾಗಿ ಪ್ರತಿ ಹೆಜ್ಜೆ ಇಡಬೇಕಾದ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುತ್ತಾಳೆ ಟೀಚರಮ್ಮ. ಅವರ ನಡೆ-ನುಡಿ ಅಭಿರುಚಿಯೂ ಸಾವಿರಾರು ಮಕ್ಕಳಿಗೆ ಮಾರ್ಗಸೂಚಿ ಆಗುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಾರೆ.

ಸವಿ ಸವಿ ನೆನಪು

ಸಾವಿರ ನೆನಪು..

ಎದೆಯಾಳದಲಿ ಬಚ್ಚಿಟ್ಟುಕೊಂಡ

ಅಚ್ಚಳಿಯದ ನೂರೊಂದು ನೆನಪು

ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳಿ. ಅವುಗಳು ಎಂದಿಗೂ ಮಾಸುವುದಿಲ್ಲ. ಪ್ರತಿಯೊಬ್ಬರಿಗೂ ಬಾಲ್ಯದ ನೆನಪುಗಳು ಎಂದಿಗೂ ಮರೆಯಾಗುವುದಿಲ್ಲ. ಎಳೆ ಮನಸ್ಸಿನಲ್ಲಿ ನೆಲೆಸಿದ ಶಿಕ್ಷಕಿಯರ ಮೂತರ್ಿಗಳು ಎಂದೂ ಮಸುಕಾಗುವುದಿಲ್ಲ. ಅವರು ಹೇಳಿದ ಮಾತುಗಳು ಎಂದಿಗೂ ಮರೆಯುವುದಿಲ್ಲ. `ನಮ್ಮ ಟೀಚರ್ ಹಂಗ್ ಹೇಳ್ತಿದ್ದರು. ಹೀಂಗ ಹೇಳ್ತಿದ್ದರು. ಇವತ್ತಿಗೂ ಅವರು ಆಡಿದ ಮಾತುಗಳು ಎಷ್ಟು ಸತ್ಯ ಎಂದು ಅನಿಸುತ್ತವೆ. ಅವರು ಆಗಲೇ ಎಷ್ಟು ದೂರದೃಷ್ಟಿ ಹೊಂದಿದ್ದರು..’ ಹಾಗಂತ ಇವತ್ತಿಗೂ ನೆನಪಾಗುವ ಮಾತುಗಳ ಹಿಂದೆ, ಟೀಚರಮ್ಮ ಇರುತ್ತಾಳೆ.

ಆ ಟೀಚರಮ್ಮನಲ್ಲಿ ತಾಯಿಯಿದ್ದಾಳೆ. ದೊಡ್ಡಮ್ಮ ಇದ್ದಾಳೆ. ಚಿಕ್ಕಮ್ಮ ಇದ್ದಾಳೆ. ಅಕ್ಕ ಇದ್ದಾಳೆ. ಪಕ್ಕದ ಮನೆ ಆಂಟಿ ಇದ್ದಾಳೆ. ಪ್ರೀತಿಯಿಂದ ನೋಡುತ್ತಾಳೆ. ಮಮತೆಯಿಂದ ಜೀಂವಾ ಮಾಡುತ್ತಾಳೆ. ಹತ್ತಿರ ಕರೆದು ಚಾಕಲೇಟ್ ನೀಡುತ್ತಾಳೆ. ಪಾಠದ ಜೊತೆಗೆ ಜೀವನದಲ್ಲಿ ಹೇಗಿರಬೇಕೆಂಬ ಪಾಠವನ್ನೂ ಹೇಳಿಕೊಡುತ್ತಾಳೆ.

ಅಷ್ಟೇ ಅಲ್ಲ. ಪ್ರತೀ ಮಹಿಳೆಯೂ ಹೀಗೆಯೇ. ತನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು, ಸೂಕ್ತ ಮಾರ್ಗದರ್ಶನ ನೀಡುತ್ತ ಜೀವನವನ್ನು ಆಹ್ಲಾದಕರವಾಗಿ ಸ್ವೀಕರಿಸಬೇಕು, ಮಗನ ಗೆಳೆಯನಿಗೂ ಒಳ್ಳೆಯ ಮಾತುಗಳನ್ನು ಆಡಿ, ಜೀವನದಲ್ಲಿ ಚೆಂದಾಗಿರಬೇಕು ಎಂಬ ಆಪ್ತ ಮಾತುಗಳನ್ನಾಡುತ್ತಾಳೆ. ಸೂಕ್ತ ಸಲಹೆ ನೀಡುತ್ತ ಜನರಿಗೂ ಜೀವನದ ಪಾಠಗಳನ್ನು ಹೇಳುತ್ತಾಳಲ್ಲ ಆ ಮಹಿಳೆಯೂ ಕೂಡ ಶಿಕ್ಷಕಿಯೇ.

ಶಾಲೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುವ ಮಹಿಳೆಯರಷ್ಟೇ ಅಲ್ಲದೇ, ಪ್ರತೀ ಮಹಿಳೆಯೂ `ಶಿಕ್ಷಕಿ’ಯೇ.

ಇಂತಹ ಮಹಿಳಾ `ಶಿಕ್ಷಕಿ’ಯರ ಪಾಲಿಗೆ ಪ್ರಥಮ ಶಿಕ್ಷಕಿ ಎನಿಸಿಕೊಂಡವರು ಸಾವಿತ್ರಿ ಫುಲೆ.

ಈಗ ಹೇಳಿ, ಶಿಕ್ಷಕಿಯರ ದಿನ ಅಂತ ಇರಬೇಕೇ, ಬೇಡವೇ?

 

‍ಲೇಖಕರು G

17 November, 2012

4 Comments

  1. DIVYA ANJANAPPA

    nimma lekhana odi thumba khushi aytu sir. nimma chintanegalu uttamavagive.thank u sir.

  2. Naveen H

    Teacher ಅಂದರೆ ಅದೊಂದು neutral ಪದ. ಅದನ್ನು ಪುಲ್ಲಿಂಗ ಪದವನ್ನಾಗಿಸಿದ್ದು (ನಿ)ನಮ್ಮ ತಪ್ಪು. ನಿಮ್ಮ ಅಂದರೆ ನೀವೊಬ್ಬರೇ ಅಲ್ಲಾ ಮತ್ತೆ ಈ ಸಮಾಜ.ಈ ಬಗ್ಗೆ ಯಾರೂ ಯಾಕೆ ಯೋಚಿಸಿಲ್ಲವೋ ಕಾಣೆ. ಬೇರೆ ಯಾವುದೇ ವೃತ್ಥಿಯನ್ನ ತೆಗೆದುಕೊಂಡರೂ ವೃತ್ತಿಯ ಹೆಸರು ಒಂದು ಲಿಂಗಕ್ಕೆ ಸೀಮಿತವಾಗಿಲ್ಲ ಆದರೆ Teacher ಎಂಬುದು ಮಾತ್ರ ಪುರುಷ ಪ್ರಧಾನವಾಗಿದೆ. ಆಗಿನೆ ಕಾಲದಲ್ಲಿ ಸ್ತ್ರೀಯರು ಮನೆಯ ಹೊರಗೆ ಬರುತ್ತಿರಲಿಲ್ಲ ಹೀಗಾಗಿ ಶಿಕ್ಷಕ ಎಂದರೆ ಮೊದಲು ಕಣ್ಣ ಮುಂದೆ ಬರುವದೇ ಪುರುಷ ಶಿಕ್ಷಕರು ಎಂದೆಲ್ಲ ಸ್ಪಷ್ಟೀಕರಣ ನೀಡಬಹುದು. ಆದರೆ ಸ್ವರಗಳನ್ನು ಕಡಿಮೆಗೊಲಿಸಬಹುದಾದ, ನಾದಗೀತೆಯನ್ನು ಕಿರಿದುಗೊಲಿಸಬಹುದಾದ ಈ ಕಾಲದಲ್ಲಿ Teacher ಗೆ ಒಂದು neutral ಆದ ಶಬ್ಧವನ್ನು ಶ್ರಿಷ್ಟಿಸಬಹುದಲ್ಲವೇ??

    ನವೀನ್ ಹಣಮಂತಗಡ
    ಪುಣೆ

  3. ಇಂದುಶೇಖರ ಅಂಗಡಿ

    ವಾದದಲ್ಲಿ ಯಾವುದೇ ಹುರುಳಿಲ್ಲ. ಶಿಕ್ಷಕರಿರಲಿ, ಶಿಕ್ಷಕಿಯಿರಲಿ ಇಬ್ಬರಿಗೂ ಸಮಾನ ಗೌರವ ಕೊಡಬೇಕಾದದ್ದು ನಮ್ಮ ಧರ್ಮ.
    ಸಂಯಮ, ಸಹನೆ ಹಾಗೂ ಹೃದಯ ವೈಶಾಲ್ಯತೆಯಲ್ಲಿ ಶಿಕ್ಷಕರು ಶಿಕ್ಷಕಿಯರಿಗಿಂತ ಕಡಿಮೆ ಎನ್ನುವ ವಾದವನ್ನು ಒಪ್ಪಲಿಕ್ಕಾಗದು.

    ಇನ್ನು ತಮಾಷೆಗಾಗಿ ಹೇಳಬೇಕೆಂದರೆ,

    ಈಗಲೂ ನಾವು ಶಿಕ್ಷಕಿಯರನ್ನು “ಟೀಚರ್” ಅಂತಲೂ ಶಿಕ್ಷಕರನ್ನು “ಸರ್” ಅಂತಲೂ ಕರೆಯುತ್ತೇವೆ.ಹಾಗಂತಾ ಸಪ್ಟೆಂಬರ್ ೫ ಅನ್ನು “ಟೀಚರ್ಸ್ ಡೇ” ಅಂತಾ ಕರೆಯುತ್ತಾರೆಯೇ ಹೊರತು “ಸರ್ಸ್ ಡೇ” ಅಂತಾ ಕರೆಯುವದಿಲ್ಲವಲ್ಲ

  4. ಸುಧಾ ಚಿದಾನಂದಗೌಡ

    ಟೀಚರ್ ಎಂದರೇನೇ ಸ್ತ್ರೀಲಿಂಗ ಎಂಬ ಅರ್ಥದಲ್ಲಿ ಬಳಸುವುದೇ ಹೆಚ್ಚು.ವಾದದಲ್ಲಿ ಹುರುಳಿಲ್ಲದೇ ಇಲ್ಲ. ಆದರು ಈಗಿನ ಮಹಿಳೆಯರು ನಾವೇನು ಕಮ್ಮಿ ಎಂಬಂತೆ ವಿದ್ಯಾರ್ಥಿಗಳನ್ನು ಗೋಳಾಡಿಸಿದ ಉದಾಹರಣೆಗಳೂ ಸಾಕಷ್ಟಿವೆ. ಲಿಂಗಭೇದವಿಲ್ಲದೆ ಮಕ್ಕಳೊಂದಿಗೆ ಸಹೃದಯತೆಯಿಂದ ನಡೆದುಕೊಳ್ಳಬೇಕಾದ್ದು ಸರ್-ಮಿಸ್ ಗಳೆಲ್ಲರ ಕರ್ತವ್ಯ ಎಂಬುದೇ ಸರಿಯೆಂದು ತೋರುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading