ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೌದು ಕವಿ ಕೊಕೇನಿನಂತೆ, ಅವನೊಂದು ಹಿತವಾದ ಅಮಲಿನಂತೆ…

ಮೇಘನಾ ಸುಧೀಂದ್ರ

ಪ್ರೀತಿಯ ಜೋಗಿ ಸರ್,

ನಿಮ್ಮ ಎಲ್ ಓದಿದೆ. ಮೊದಲ ಅನಿಸಿಕೆ “ಮೈ ಫೇವೆರೆಟ್ ರೈಟರ್ ಜೋಗಿ ಐಸ್ ಬ್ಯಾಕ್” ಎಂದು. ನಿಮ್ಮ ಪುಸ್ತಕವನ್ನ ನಾನು ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಗ ಓದೋಕೆ ಶುರುಮಾಡಿದ್ದು. ಆಗ ನಿಮ್ಮ ಪುಸ್ತಕ ಹಿಡಿದರೆ ಅದನ್ನ ಬಿಡಲು ಮನಸ್ಸೇ ಆಗುತ್ತಿರಲಿಲ್ಲ. ಮರುದಿವಸದ ಪರೀಕ್ಷೆಯ ಲೆಕ್ಕವನ್ನು ತೆಗೆದುಕೊಳ್ಳದೆ ಓದುವ ವಿಷಯ ನಿಮ್ಮ ಪುಸ್ತಕವಾಗಿತ್ತು. ನೆನ್ನೆ ನನಗದೇ ಅನುಭವ.

ಕವಿಯ ಪ್ರಪಂಚ ನನಗೆ ಅಪರಿಚಿತ. ಕಾವ್ಯಗಳೇ ನನಗೆ ಅಪರಿಚಿತ. ಹಳೆಗನ್ನಡ ಪದ್ಯಗಳು ಮಾತ್ರ ನನಗಿಷ್ಟವಾಗುತ್ತಿದ್ದವು. ಅಲ್ಲಿ ಮಹಾಭಾರತ ಕಥೆಯೊಂದಿರುತ್ತಿತ್ತು ಎನ್ನುವ ಕಾರಣವೇನೋ ಗೊತ್ತಿಲ್ಲ. ಮಿಕ್ಕ ಹೊಸ ಪದ್ಯಗಳೆಲ್ಲ ಸ್ವಲ್ಪ ಅರ್ಥವಾಗುತ್ತಿದ್ದವು. ಈಗಲೂ ನನ್ನ ವಯಸ್ಸಿನ ಹುಡುಗರೆಲ್ಲಾ ಕವಿಗಳೇ, ಅವರ ಕಾವ್ಯ ಸಂಜೆಯಲ್ಲಿ ನನ್ನ ಮಾತು ಬಹಳ ಕಡಿಮೆ. “ಮಳೆ ಹುಡುಗಿ” ಎಂದು ಪ್ರೀತಿ ಮಾಡುವಾಗ ಕವಿತೆ ಬರೆಯುವ ಇವರೆಲ್ಲಾ ಬಿಟ್ಟು ಹೋದ ಮೇಲೆ “ಅವಳು ಸಿಗರೇಟಿನಂತೆ” ಎಂದು ಕೆಟ್ಟದಾಗಿ ಸಂಬೋಧನೆ ಮಾಡುವಷ್ಟರರಲ್ಲಿ ಅವರ ಪದ್ಯ ಮುಗಿದಿರುತ್ತದೆ. ಏನಿದು ಎಂದು ನಾನು ಯೋಚಿಸುತ್ತಾ ಕೂತಿರುತ್ತಿದ್ದೆ. ಹೆಣ್ಣುಮಕ್ಕಳನ್ನ ಇವರೆಲ್ಲಾ ಏನು ಅಂದುಕೊಂಡಿದ್ದಾರೆ ಎಂಬ ಹುಸಿಮುನಿಸೂ ಇರುತ್ತದೆ. ನನ್ನ ಪದ್ಯಗಳ ಓದಿನ ವಿಸ್ತಾರ ಚಿಕ್ಕದ್ದಾದ್ದರಿಂದ ನನಗಿಷ್ಟೇ ಅದು ದಕ್ಕೋದು.

ಆದರೆ ನೀವು ಒಂದು ಕವಿಯ ಪೂರ್ತಿ ಜಗತ್ತನ್ನ ಕಟ್ಟಿಕೊಟ್ಟಿದ್ದೀರಿ . ಒಬ್ಬ ಮನುಷ್ಯ ಎಷ್ಟು ತೀವ್ರವಾಗಿ ಒಂದೊಂದು ಮಜಲನ್ನು ದಾಟುತ್ತಾನೆ, ಅದನ್ನ ಅನುಭವಸಿತ್ತಾನೆ, ಆ ಅನುಭವ ಅವನ್ನನ್ನ ಹೇಗೆ ಎಲ್ಲಿ ಕಾಡತ್ತೆ ಎಂದು ಸಂದರ್ಭ ಸಹಿತ ವಿವರಿಸಿ ಬರೆದಿದ್ದೀರಿ. ನೀವು ನಮ್ಮ ಮನಸಿನಲ್ಲಿ ಒಳ್ಳೆ ಗೇಮ್ ಆಡಿದ್ದೀರಿ. “ಹೇ ಇದು ಇವರೇ ನನಗೆ ಗೊತ್ತೊರೋರ ಕಥೆ” ಎಂದು ನಾವು ಅಂದುಕೊಂಡು ಪುಟ ತಿರುಗಿಸುವ ಕ್ಷಣದಲ್ಲಿ ಪೂರ್ತಿ ನಾವು ಅಂದುಕೊಂಡಂತೆ ಇರೋದೇ ಇಲ್ಲ. ಇನ್ನು ಇದು ಹೀಗೆ ಆಗಲು ಸಾಧ್ಯವೇ ಇಲ್ಲ ಎಂದು ಹಮ್ಮಿನಿಂದ ಪುಟ ತಿರುಗಿಸಿದರೆ ಅಲ್ಲಿ ಇನ್ನೇನೋ ಆಗಿರತ್ತೆ. ಒಬ್ಬ ಮನುಷ್ಯನ್ನನ್ನ ಹೀಗೆ ಹಿಡಿದಿಡುವ ಅವನ್ನನ್ನ ಒಂದಷ್ಟು ಹೊತ್ತು ಬರಿ ನಿಮ್ಮ ಕಾದಂಬರಿಯ ಬಗ್ಗೆಯೇ ಯೋಚನೆ ಮಾಡುವ ಬ್ಲಾಕಿಂಗ್ ಪ್ರಕ್ರಿಯೆ ನಿಮ್ಮ ಬರಹದಲ್ಲಿದೆ. ವಾಹ್ ಸರ್

ಎಲ್ ಅಂದರೆ ನನಗೀಗ ಲೆಜೆಮ್ಡ್ ಅಂತ ಅನ್ನಿಸತ್ತೆ. ಆ ಕವಿ ಅಮ್ಮನ ಸಾವಿ, ಅಪ್ಪನ ಸಾವು, ಆವಾ ಸಾಯೋವರೆಗೆ ನನ್ನ ತಾರುಣ್ಯವನ್ನ ಕಿತ್ತುಕೊಂಡ ಬಗೆ, ಮೋಹಿನಿಯ ಬಗ್ಗೆ, ಅವನ ಡೀಪ್ ಲವ್ ಲೀಲಾವತಿ ಇವರೆಲ್ಲಾ ಅವನ್ನನ್ನ ವಿಪರೀತ ಕಾಡಿದ್ದಾದರೂ ಅವರ ಬಗ್ಗೆ ಒಂದು ಅರ್ಧ ಸಾಲಿನ ಪದ್ಯವನ್ನ ಬರೆಯಲು ಅಸಾಧ್ಯವಾಯಿತು ಎಂದು ಕವಿ ಕೈ ಚೆಲ್ಲಿ ಕೂರುತ್ತಾನೆ . ಅವನ ಜೀವನದ ಅತ್ಯಂತ ಕಾಡಿದ ಕ್ಷಣಗಳನ್ನ ಅವನು ಬಣ್ಣಿಸಲಾರ. ಕೆಲವೊಂದು ಪದಕ್ಕೆ ಸಿಲುಕ್ಕದ್ದು ಅಂತಾರಲ್ಲ ಹಾಗೆ, ಆ ಕವಿಯು ಹಾಗೆ ಹೇಳುತ್ತಾ ಹೋಗುತ್ತಾನೆ.

ನನಗೆ ಗಾಢವಾಗಿ ಕಾಡಿದ್ದು ಎರಡು ದೃಶ್ಯಗಳು. ಒಂದು ಲೀಲಾವತಿ ಪ್ರೇಮ ಪತ್ರ  ಓದದೇ ವಾಪಸ್ಸು ಕಳಿಸಿದ್ದು, ಮತ್ತು ಮೋಹಿನಿಯನ್ನು ತನ್ನಪ್ಪನ್ನನ್ನ ನೋಡಲು ಕರೆದ್ದದ್ದು. ಪ್ರೇಮ ಪತ್ರವನ್ನ ಓದದೇ ಕಳಿಸಿದಾಗ ಆಗುವ ದೃಶ್ಯವನ್ನ ಎಷ್ಟು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ  ಸರ್. ಇನ್ನು ಮೋಹಿನಿಯನ್ನ ಕರೆಯುವುದು, ಮತ್ತೆ ಅವಳನ್ನ ರೂಮಿನಲ್ಲಿ ಕಳಿಸಿ ಬಾಗಿಲು ಹಾಕುವುದು ಇವೆಲ್ಲಾ ನನ್ನ ಪ್ರಕಾರ ಕವಿ ಮಾತ್ರ ಮಾಡಲು ಸಾಧ್ಯ. ಹುಲು ಮಾನವರು ಮೋಹಿನಿಯನ್ನ ಕಂಡೊಡನೆ ರಪ ರಪ ಎಂದು ಕೆನ್ನೆಗೆ ಬಾರಿಸುತ್ತಿದ್ದರೇನೋ ಗೊತ್ತಿಲ್ಲ. ನೀವು ಈ ಸಂದರ್ಭವನ್ನ ತಂದು ಕವಿಯ ಭಾವ ತೀವ್ರತೆಯನ್ನ ಪ್ರದರ್ಶಿಸಿದ್ದೀರಿ. ಹ್ಯಾಟ್ಸಾಫ್ ಸರ್.

ಈ ಎಲ್ ನಲ್ಲಿ ನನ್ನ ಜಗತ್ತೂ ಇದೆ, ನನ್ನ ಹುಡುಗನ ಜಗತ್ತೂ  ಇದೆ, ಅಪ್ಪ ಅಮ್ಮ ಎಲ್ಲರ ಜಗತ್ತೂ ಎಲ್ಲೆಲ್ಲೋ ಅಡಕವಾಗಿದೆ. “ಇದು ನಡೆದಿತ್ತು, ಇದು ನಡೆಯಬಹುದು, ಒಹ್ ಇದು ಪಕ್ಕಾ ಆಗುತ್ತಲೇ ಇದೆ.” ಎಂಬ ಎಷ್ಟೋ ಉದ್ಗಾರಗಳು ಬರುತ್ತದೆ.

ಬೆಂಗಳೂರಿನ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದಿದ ನನ್ನ ಥರದವರಿಗೆ ನಿಮ್ಮ ಪದಜೋಡಣೆಗಳೂ ಒಂದು ತರಹದ ವಿಸ್ಮಯವೇ. ಮಳೆಗಾಲದಲ್ಲಿ ಎದ್ದ ಹಾತೆಗಳು ಎಂದು ಬರೆದಾಗ ತಲೆಯೆಲ್ಲಾ ಕೆಡಿಸಿಕೊಂಡು ನಾನು ಹಾತೆಗಳೆಂದರೇನು ಎಂದು ಹುಡುಕ ಹೊರಟೆ. ನಿಮ್ಮ ರೂಪಕಗಳನ್ನ ಮತ್ತೆ ಓದಿ ಬರೆದು ಅರ್ಥ ಮಾಡಿಕೊಂಡೆ.

ನನ್ನ ಗೆಳೆಯನೊಬ್ಬ ಕವಿಗಳ ಬಗ್ಗೆ ಬರೆದು ಕಳಿಸಿದ್ದ. ಅದು ಇದು ಓದಿದಾಗ ನೆನಪಾಯಿತು. ” ಎಚ್ಚರವಾಗಿರು ನೀ, ಕವಿ ಕೊಕೇನಿನಂತೆ, ಆತ ನೇರವಾಗಿ ನಿನ್ನ ಆತ್ಮಕ್ಕೆ ಕೈ ಹಾಕುತ್ತಾನೆ, ನೀ ನೋಡನೋಡುತ್ತಿರುವಂತೆಯೇ ನಿನ್ನ ಕಾಲಕೆಳಗಿನ ನೆಲವನ್ನ ಜಾರಿಸುತ್ತಾನೆ. ಸುಮ್ಮನೆ ಮಾತು ಮಾತಲ್ಲೇ ನಿನ್ನನ್ನ ನಿರಾಯುಧಳಾಗಿ ಮಂಡಿಯೂರುವಂತೆ ಮಾಡುತ್ತಾನೆ, ಕವಿ ನಿಜಕ್ಕೂ ಅಪಾಯಕಾರಿ” ಹೀಗೆ ಕವಿಗಳು ನಮ್ಮ ಒಳಗೆ ಸಿಕ್ಕಾಪಟ್ಟೆ ಇಳಿಯುವ ಬಗ್ಗೆ ಸ್ನೇಹಿತ ಬರೆದ್ದಿದ್ದ. “ಏನೋ ಬರ್ದಿದ್ಯಾ ಗುರು” ಅಂದಿದ್ದೆ. ಇವತ್ತು ಅವನ ಬರಹ, ನಿಮ್ಮ ಕಾದಂಬರಿ ಎರಡೂ ಅರ್ಥವಾಯ್ತು. ಸರ್ ಇಷ್ಟು ತೀವ್ರವಾದ ಭಾವನೆಗಳನ್ನ ಅಕ್ಷರಕ್ಕೆ ಇಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

“ಹೌದು ಕವಿ ಕೊಕೇನಿನಂತೆ , ಅವನೊಂದು ಹಿತವಾದ ಅಮಲಿನಂತೆ, ಆದರೆ ನಿಜಕ್ಕೂ ಅಪಾಯಕಾರಿ”

-ಜಯನಗರದ ಹುಡುಗಿ 
ಮೇಘನಾ ಸುಧೀಂದ್ರ

‍ಲೇಖಕರು avadhi

11 June, 2019

4 Comments

  1. kalabhagwat

    ಎಷ್ಟು ಚೆಂದವಾಗಿ L ಬಗ್ಗೆ ಅನಿಸಿಕೆ ಬರೆದಿರುವಿರಿ!

  2. T S SHRAVANA KUMARI

    ಒಳ್ಳೆಯ ವಿಮರ್ಶೆ

  3. Vaishnavi Katte

    ಅರ್ಧ ಜಾಮೂನನ್ನು ತಿನ್ನಿಸಿ ಆಸೆ ಹುಟ್ಟಿಸಿದಂತಾಯ್ತು.. ಈ ಪುಸ್ತಕವನ್ನು ಕೊಂಡು ಓದಲು ತವಕಿಸುತ್ತಿದ್ದೇನೆ.
    ವಿಮರ್ಶೆ ಚೆನ್ನಾಗಿದೆ.

  4. ashfaq peerzade

    ಆತ್ಮೀಯ ಓದಿಗೆ ಶರಣು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading