ಹೋಗೆನು ನಾನು ಶಾಲೆಗೆ

ಎಸ್ ಸಾಯಿಲಕ್ಷ್ಮಿ

ನನ್ನ ಪುಟ್ಟಕಂದನಿಗೆ ಆಗ ಮೂರು ವರುಷವೂ ತುಂಬಿರಲಿಲ್ಲ. ನನ್ನ ಗೆಳತಿ ಒಂದು ಶಾಲೆಯ ಮುಖ್ಯೋಪಾಧ್ಯಾಯಿನಿ. ಆಕೆ ಒತ್ತಾಯ ಮಾಡಿ, ನನ್ನ ಪುಟಾಣಿ, ಅವರ ಶಾಲೆಯಲ್ಲಿ, ಎಲ್‌ಕೆಜಿಗೆ ದಾಖಲಾಗುವಂತೆ ಮಾಡೇಬಿಟ್ಟರು. ಒಂದು ಸಲ ಶಾಲೆಯ ಸಂಸ್ಥಾಪಕರನ್ನು, ಮಗುವಿನೊಡನೆ ಭೇಟಿಯಾಗುವ ಶಾಸ್ತ್ರ ಪೂರೈಸಬೇಕಿತ್ತು.

ನಿಗದಿತ ಆ ದಿನ ನಾನು ನನ್ನ ಮಗಳೊಡನೆ ಹೋದೆ. ಹಿರೀಪ್ರಾಯದ ಆ ಕಾರ್ಯದರ್ಶಿಯ ಎದುರು ನಾನು, ನಮಸ್ಕಾರ ಹೇಳಿ, ಕೂತೆ. ಮಗುವನ್ನು ಪರಿಚಯಿಸುವ ಅಪೇಕ್ಷೆಯಿಂದ, ಸುತ್ತಲೂ ಕಣ್ಣಾಡಿಸಿದೆ. ಕಾಣುತ್ತಲೇ ಇಲ್ಲ. ಒಂದು ಕ್ಷಣ ಗಾಬರಿಗೊಂಡೆ. ನನ್ನ ಹಾಗು ಕಾರ್ಯದರ್ಶಿಗಳ ನಡುವೆ ಒಂದು ಮೇಜಿತ್ತಲ್ಲ. ಅದರ ಕೆಳಗೆ, ಮಗು ಅವಿತು ಕೂತಿದ್ದು, ಅದು ಆ ಕಾರ್ಯದರ್ಶಿಗಳ ಗಮನಕ್ಕೆ ಬಂತು. ನಮ್ಮ ಪಾಪು, ಅವರ ಕಾಲು ಹಿಡಿದಿತ್ತು. ಅವರೋ ಸಂಕೋಚದಿಂದ, ‘ಏನು ಮರಿ, ನನ್ನ ಕಾಲು ಬಿಡು. ನೀನೇ, ದೇವರು.’ ಮಗುವಿಗೆ ಎಳವೆಯಿಂದಲೂ, ದೊಡ್ಡವರನ್ನು ಕಂಡರೆ ನಮಸ್ಕಾರ ಮಾಡಬೇಕು ಎಂದು ಹೇಳಿಕೊಟ್ಟಿದ್ದು, ನೆನಪಿಗೆ ಬಂತು.

ಹೀಗಾಗಿ ಅವಳು ಆ ದಿನ, ಆ ಮಾತಿನ ಅನುಸಾರ, ಬಾಗಿ ಅವರಿಗೆ ಪ್ರಣಾಮ ಮಾಡಿದ್ದಳು. ಆತ ಬಗ್ಗಿ, ಮಗುವನ್ನು ಎತ್ತಿಕೊಂಡು, ಪ್ರೀತಿಯಿಂದ ನೇವರಿಸಿ, ಹೇಳಿದರು,. ‘ನಿನಗೆ ಸೀಟು, ಕೊಟ್ಟಿದೀನಿ ಕಂದ, ಖುಷೀನಾ’. ಏಳಲು ಒಲ್ಲದೆ, ಕನಸು ಕಾಣುತ್ತ ಪವಡಿಸುವ ಆ ಕೂಸು, ಕಣ್ಣುಜ್ಜಿಕೊಳ್ಳುತ್ತ ಎದ್ದು, ‘ಹೋಗೆನು ನಾನು ಶಾಲೆಗೆ’ ಎಂದು ಹಟ ಹಿಡಿಯುವ ಗಳಿಗೆ, ಆರಂಭವಾಯಿತು.

ನಮ್ಮ ಆಕಾಶವಾಣಿಯ ಮಕ್ಕಳ ವಿಭಾಗದ ಕಾರ್ಯಕ್ರಮ ನಿರ್ವಾಹಕಿಯಾಗಿದ್ದೇ ಅಲ್ಲದೆ, ಮಕ್ಕಳ ಸಾಹಿತಿಯಾಗಿ ನಾನು ಪ್ರಕಟಗೊಳ್ಳಲು, ‘ಹೋಗುವೆ ನಾನು ಶಾಲೆಗೆ’ ಈ ಗೀತರೂಪಕದ ರಚನೆಗೆ, ಪ್ರೇರಕವಾಯಿತು. ಇದರಲ್ಲಿ ಅಮ್ಮ, ಮಗು ಶಾಲೆಗೆ ಹೋಗುವ ಸಾಧಕ ಬಾಧಕಗಳ ಬಗ್ಗೆ, ಮಾತಲ್ಲಿ, ಗೀತೆಯಲ್ಲಿ ಸಂಭಾಷಿಸುತ್ತಾರೆ. ಶಾಲೆಗೆ ಹೋಗುವುದೇ ಇಲ್ಲವೆಂದು ಹಟ ಹಿಡಿದ ಮಗು, ನಗುನಗುತ್ತ ಬ್ಯಾಗೇರಿಸಿ, ಶಾಲೆಗೆ ಹೊರಡುತ್ತದೆ. ಅದರ ಒಂದು ಸಣ್ಣ ತುಣುಕು ಹೀಗಿದೆ. ಮಗು ಏಳಲು ತಕರಾರು ಹೂಡಿದಾಗ, ತಾಯಿ, ಪ್ರಕೃತಿಯಲ್ಲಿರುವ ಮರ, ಗಿಡ, ಕೋಗಿಲೆ ಇವುಗಳನ್ನು ತೋರಿ ಹಾಡುತ್ತಾಳೆ.

‘ಮಾಮರದಲ್ಲಿದೆ ಕೋಗಿಲೆ, ಎದ್ದಿದೆ ನೋಡದು ಕೂಗಲೇ, ಮರಿಗಳನ್ನೆಬ್ಬಿಸಿ ಕೂಗಿತು ಕುಹು ಕುಹು’ ಜಾಣಮಗು, ಅಮ್ಮನಿಗೆ ಪ್ರಶ್ನೆ ಮಾಡುತ್ತದೆ ‘ಕೋಗಿಲೆಗೆಲ್ಲಿದೆ ಶಾಲೆ, ನಾನೀಗೇಳಲು ಒಲ್ಲೆ,
ಸಕ್ಕರೆ ಸವಿಯ ನಿದ್ದೆಯ ಬಲ್ಲೆ,
ನಾನೀಗೇಳಲು ಒಲ್ಲೆ’

ಮಗು ಮುಂದುವರೆಸುತ್ತದೆ,
‘ಸ್ಕೂಲು ಬೇಡಮ್ಮ, ಅಮ್ಮ ಸ್ಕೂಲು ಬೇಡಮ್ಮ, ಚೆಲುವಿನ ಅಮ್ಮ, ಒಲವಿನ ಅಮ್ಮ,
ಮುದ್ದಿನ ಅಮ್ಮ, ದಯೆ ತೋರಮ್ಮ,
ಹೋಗೆನು ನಾನು ಶಾಲೆಗೆ, ಹೋಗೆನು ಶಾಲೆಗೆ ಹೋಗೆನು, ಹೋಗೆನು ಹೋಗೆನು ಹೋಗೆನು, ಹೋಗೋಲ್ಲಾಂದ್ರೆ ಹೋಗೋಲ್ಲ,
ಏನು ಮಾಡಿದರೂ ಹೋಗೋಲ್ಲ,
ಬೈದರೂ ಹೋಗೋಲ್ಲ,.
ಮುದ್ದಿಸಿದರೂ ಹೋಗೋಲ್ಲ,
ಬಿಲಕುಲ್ ಹೋಗೋಲ್ಲ’.

ಇದು ನನ್ನ ಹಾಗು ನನ್ನ ಮಗುವಿನ ಕಥೆ. ಅನುಭವಜನ್ಯ ಗೀತರೂಪಕ. ಆಕಾಶವಾಣಿಯ ಸಂಗೀತಮಯ ಕಾರ್ಯಕ್ರಮವಾಗಿ, ಜಯಭೇರಿ ಬಾರಿಸಿತು. ಮುಂದೆ ಪುಸ್ತಕ ರೂಪ ತಾಳಿದ ‘ಹೋಗುವೆ ನಾನು ಶಾಲೆಗೆ’, ರಾಷ್ಟ್ರಕವಿ ಜಿ.ಎಸ್.ಎಸ್ ಅವರಿಂದ ಮೆಚ್ಚುಗೆಯ ಮುನ್ನುಡಿಯ ಬೆಚ್ಚನೆಯ ರಕ್ಷೆ ಪಡೆಯಿತು.

ಜೀವನದಲ್ಲಿ, ಇಂತಹ ಪರಿಸ್ಥಿತಿ ಗೆಲ್ಲುವುದು ಸುಲಭಸಾಧ್ಯವೇ? ಪಟ್ಟುಹಿಡಿದು ಶಾಲೆ ಸೇರುವಂತೆ ಮಾಡಿದ ಗೆಳತಿ, ಮಗುವನ್ನು ದಿನಾಲೂ ಶಾಲೆಗೆ ಕರೆದೊಯ್ಯುವ ಹೊಣೆಗಾರಿಕೆ ಹೊತ್ತುಕೊಂಡರು. ಆಕೆ, ಅವರ ಬೀದಿಯ ಮಕ್ಕಳನ್ನೆಲ್ಲ, ಮೈದುನನ ಸ್ಕೂಟರಲ್ಲಿ ಏರಿಸಿಕೊಂಡು ಬರುವರು. ನಮ್ಮನೆ ಮಗುವನ್ನು ಸ್ಥಳದ ಅಭಾವದಿಂದ, ತಮ್ಮ ತೊಡೆಯ ಮೇಲೆ, ಕೂರಿಸಿಕೊಂಡು, ಬೈ ಬೈ ಹೇಳುತ್ತ, ಹೇಳಿಸುತ್ತ ಹೊರಟುಬಿಡುವರು. ನಮ್ಮ ಗೊಂಬೆಮರಿ ಅಳುತ್ತ, ಕರೆಯುತ್ತ, ವಿಧಿಯಿಲ್ಲದೆ ಹೋಗುವಳು. ನನ್ನ ಕರುಳು ಚುರಕ್ ಎನ್ನುವುದು. ಹೀಗೆ ಒಂದೆರಡು ತಿಂಗಳು ಕಳೆದವು. ದಿನಾಲೂ ಅಳು, ತಕರಾರು. ನನಗಂತೂ ಸಾಕಾಗಿ ಹೋಗಿತ್ತು. ಒಂದೇ ಹಾಡು, ಒಂದೇ ರಾಗ. ‘ಸ್ಕೂಲು ಬೇಡಮ್ಮ’.
ಕರ್ಣಭಯಂಕರವಾಗಿ, ರೋಧಿಸುತ್ತ, ಶಾಲೆಗೆ ಹೋದ ಪುಟ್ಟಿ, ಹೇಗೆ ಹೊತ್ತು ಕಳೆಯುತ್ತಾಳೆ ಎಂಬ ನನ್ನ ಕುತೂಹಲಕ್ಕೆ ಒಂದು ದಿನ ಉತ್ತರ ಸಿಕ್ಕಿತು.

ಆ ದಿನ ಎಂದಿನಮತೆ, ನನ್ನ ಪುತ್ರಿಯನ್ನು ಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯುವ ಗೆಳತಿ ಆವತ್ತು ಬರುವುದಿಲ್ಲವೆಂದು ಮುಂಚಿತವಾಗಿ ತಿಳಿಸಿದ್ದರು. ಶಾಲೆ ತಪ್ಪಿತು ಎಂಬ ಖುಷಿಯಲ್ಲಿ ಮಗು ಇರುವಾಗ, ನಾನೇ ಅವಳನ್ನು ಕರೆದುಕೊಂಡು ಹೋದೆ. ಶಾಲೆ ಮುಟ್ಟುತ್ತಿದ್ದಂತೆ, ಗೇಟಿನಲ್ಲಿ ಅವಳಿಗೆ ಭವ್ಯ ಸ್ವಾಗತ ಕೋರಿ, ಪುಟಾಣಿಯನ್ನು ಪ್ರೀತಿಯಿಂದ ಎತ್ತಿಕೊಂಡವನು ವಾಚ್‌ಮನ್. ‘ಲಕ್ಷ್ಮಣ ಅಂಕಲ್’ ಎನ್ನುತ್ತ, ಅವನತ್ತ ಚಿಮ್ಮಿದಳು ಮಗು. ಅವನು, ಇನ್ನು ನಾನು ಹೊರಡಬಹುದೆನ್ನುವಂತೆ, ‘ನಿಮ್ಮ ಮಗಳು ನನಗೆ ತುಂಬಾ ಇಷ್ಟ. ದಿನಾ ನನ್ನ ಜೊತೇನೇ, ಆಡಿಕೊಂಡು ಇಲ್ಲೇ ಇರತಾಳೆ. ಸಂಜೆ ಬನ್ನಿ. ಬರತಾಳೆ’ ಎಂದ ಆ ಮಹಾನುಭಾವ.

ಆಗಲೇ ನನಗೆ ತಿಳಿದಿದ್ದು, ‘ಎ ಸೆಕ್ಷನ್’ ಗೆ ದಾಖಲಾಗಿದ್ದ ನಮ್ಮ ಪುಟ್ಟಿ, ಅಂದಿನವರೆಗೂ ತರಗತಿಯ ಒಳಗೇ ಹೋಗಿಲ್ಲವೆಂಬ ಕಟುವಾಸ್ತವ. ದಾರಿಯಲ್ಲಿ ಅವಳ ಕ್ಲಾಸ್ ಟೀಚರ್ ಸರಸ್ವತಿ ಮಿಸ್ ಸಿಕ್ಕು, ‘ಅವಳು ಕ್ಲಾಸ್ ಒಳಗೆ ಬಂದಿಲ್ಲ. ನಾವು ತುಂಬ ಪ್ರಯತ್ನ ಹಾಕಿದೆವು. ಲಕ್ಷ್ಮಣ್ ಅಂಕಲ್, ನನ್ನ ಜೊತೆ ಬಂದು ಕೂತರೆ, ನಾನು ಕ್ಲಾಸ್‌ಲ್ಲಿ ಇರತೀನಿ. ಹೀಗೆ ಹಟ ಹಿಡೀತಾಳೆ. ಏನು ಮಾಡಬೇಕು ಹೇಳಿ?’ ನನ್ನ ಪುತ್ರಿಯ ವಿದ್ಯಾಯಾತ್ರೆಯ ಕತೆ ಕೇಳಿ ಸುಸ್ತಾಗಿ, ಹಿಂದಿರುಗಿದೆ.

ಇನ್ನು ಕೆಲವು ದಿನಗಳ ನಂತರ, ನನಗೆ ತಿಳಿದು ಬಂದ ಸಮಾಚಾರ, ಕುವರಿ ಈಗೀಗ ತರಗತಿಯ ಒಳಗೂ ಅಡಿಯಿಡುತ್ತಿದ್ದಾಳೆ. ಆದರೆ ಅದು ಅವಳು ದಾಖಲಾಗಿರುವ ‘ಎ’ ಸೆಕ್ಷನ್ ಅಲ್ಲ ಬದಲಿಗೆ ‘ಸಿ’ಸೆಕ್ಷನ್. ಪುನಹ ‘ಎ’ ವಿಭಾಗದ ಶಿಕ್ಷಕಿ ಸರಸ್ವತಿ, ದಾರಿಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿ ಶಿಷ್ಯೆಯ ಬಗ್ಗೆ, ಆರೋಪದ ಮಳೆಗೆರೆದರು. ಆ ಸಿಂಚನ ಹೀಗಿತ್ತು. ‘ನಿಮ್ಮ ಮಗಳು ‘ಎ’ ಸೆಕ್ಷನ ಹಾಜರಾತಿ ಪುಸ್ತಕದಲ್ಲಿದಾಳೆ. ಆದರೆ ಅವಳು ಹೋಗೋದು ‘ಸಿ’ ಸೆಕ್ಷನ್‌ಗೆ. ಮನೇಲಿ ಬುದ್ಧಿ ಹೇಳಿ. ನಾವು ಬೇರೆ ಬೇರೆ ಕಾರಣಗಳಿಗೋಸ್ಕರ, ಈ ರೀತಿ ‘ಎ’ ಸೆಕ್ಷನ್ ಕೊಟ್ಟಿರತೀವಿ.’

ನಾನೇನು ಹೇಳಲಿ, ಆ ಪುಟ್ಟಮಗುವಿಗೆ. ಅಷ್ಟು ಬೇಗ ಶಾಲೆಗೆ ಹಾಕಿದ್ದು ನನ್ನದೇ ತಪ್ಪು. ಆದರೂ ಪಾಪುವನ್ನು ಪ್ರಶ್ನಿಸಿದೆ. ಅದಕ್ಕವಳು ತನ್ನದೇ ಆದ ಮುಗ್ಧರೀತಿಯಲ್ಲಿ ಪ್ರತಿಕ್ರಿಯಿಸಿದಳು, ‘ಅಮ್ಮ, ಎ ಸೆಕ್ಷನ್ ಮಿಸ್ ಸಿಡಕ್ತಾರೆ.’ ಸಿ’ ಸೆಕ್ಷನ್ ರಮಾ ಮಿಸ್, ನನ್ನ ಎತ್ತುಕೊಂಡು ಮುದ್ದು ಮಾಡತಾರೆ. ನಂಗೆ ಅವರನ್ನ ಕಂಡರೆ ತುಂಬಾ ಪ್ರೀತಿ.’ ಮಗು ಹೀಗೆ, ಇಷ್ಟು ನೇರವಾಗಿ ತನ್ನ ಮನದ ಮಾತು ನುಡಿದಾಗ, ನಾನು ಮೂಕಳಾದೆ.

ಒಟ್ಟು ವಾಚ್‌ಮನ್ ಲಕ್ಷ್ಮಣನ ಸಂಗಡ, ತೊರೆದಾಗಿದೆ. ತರಗತಿಗೆ ಹೆಜ್ಜೆಯೂ ಇಟ್ಟಾಗಿದೆ. ಇದು ಪ್ರಗತಿ ಪಥದ ಸೂಚನೆ ಎಂದು ನಾನು ಸಂತಸಪಟ್ಟೆ. ಪುನಹ ಮತ್ತೊಂದು ಬೇರೆ ಸಂದರ್ಭದ ಭೇಟಿಯಲ್ಲಿ, ಸರಸ್ವತಿ ಮಿಸ್ ಪುನರುಚ್ಚರಿಸಿದರು. ‘ನಾವು ನಿಮ್ಮ ಮಗಳನ್ನ ವಿಶೇಷವಾಗಿ ‘ಎ’ ಸೆಕ್ಷನ್‌ಗೆ ಸೇರಿಸಿಕೊಂಡರೆ, ಅವಳು ‘ಸಿ’ ಸೆಕ್ಷನ್‌ಲ್ಲೇ ಟೀಚರ್ ರಮಾ ಹಿಂದೆ ಸುತ್ತತಿರತಾಳೆ. ನಿಮಗೇ ಒಪ್ಪಿಗೆ ಇರೋವಾಗ, ನಾವೇನು ಮಾಡೋಕ್ಕಾಗತ್ತೆ?’

ನಿಜಕ್ಕೂ ನಾನೇನು ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ನನ್ನ ಆಫೀಸ್ ಕೆಲಸ ಬೆಟ್ಟದಷ್ಟು ಜವಾಬ್ದಾರಿ ನನ್ನ ಮೇಲೆ ಹೊರೆಸಿರುವಾಗ, ನಾನು ಮಗಳ ಚಲನವಲನ, ಅವಳ ಮನೋವಿಕಾಸ, ಮುದ್ದು ಕಂಗಳ ಅಪೇಕ್ಷೆಗಳು ಹೀಗೆ ಯಾವುದನ್ನು ಗಮನಿಸಲು ಸಾಧ್ಯವಿಲ್ಲದಂತಾಯಿತು. ನಮ್ಮ ನಮ್ಮ ಪಾಡಿಗೆ ನಾವು ಒಂದೇ ಗೂಡಲ್ಲಿ ಇದ್ದೆವಷ್ಟೇ. ಕಣ್ಣುಮುಚ್ಚಿ ಕಣ್ಣು ತೆರೆಯುವಷ್ಟು ವೇಗದಲ್ಲಿ ಕ್ಷಣಗಳು ನಿಮಿಷಗಳಾಗಿ, ಅವು ಗಂಟೆಗಳಾಗಿ, ಅವೆಲ್ಲ ಕೂಡಿ ತಿಂಗಳು, ವರುಷವಾಗಿ, ಪುತ್ರಿಯ ಎಲ್.ಕೆ.ಜಿ ಪರೀಕ್ಷೆ ಮುಗಿದು ಫಲಿತಾಂಶ ಹೊರಬಿದ್ದು, ಅವಳು ಯು.ಕೆ.ಜಿಗೆ ತೇರ್ಗಡೆ ಹೊಂದಿರುವ ಸುದ್ದಿ ಸವಿಯಲು, ನಾನೇ ಖುದ್ದು ಹೋದೆ.

ಪುಟ್ಟದಾಗಿ ಗೊಂಬೆಯಂತೆಯೇ ಇದ್ದ ಮಗುವನ್ನು ಎತ್ತಿ ಮುದ್ದಿಸಿ, ಪ್ರೋಗ್ರೆಸ್ ಕಾರ್ಡ್ ಅದರ ಕೈಯಲ್ಲಿಟ್ಟು, ಐಸ್-ಕ್ರೀಮ್ ಕೊಡಿಸಿ ಸಂಭ್ರಮಿಸಿದೆ. ಮಗು ಶಾಲೆಯ ಪರಿಸರಕ್ಕೆ ಒಗ್ಗಿಕೊಳ್ಳುವಂತಾಯಿತಲ್ಲ ಎಂಬ ಖುಷಿಯಲ್ಲಿ ದಿನಗಳು ಸರಿಯತೊಡಗಿದವು.

ಹೆಚ್ಚುಕಮ್ಮಿ ಜಗತ್ತಿನ ಎಲ್ಲ ಅಪ್ಪಂದಿರಂತೆ, ನನ್ನ ಪುತ್ರಿಯ ಅಪ್ಪನೂ ಈ ಯಾವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ‘ಯಾಕೆ ಅಷ್ಟು ತಲೆಬಿಸಿ ಮಾಡಿಕೋಬೇಕು? ಅದೇನು ಐ.ಎ.ಎಸ್ ಪರೀಕ್ಷೆ ಬರೆಯೋಕ್ಕೆ ಹೊರಟಿದೆಯಾ?’ ಹೀಗೆಲ್ಲ ಜೋರು ಮಾಡಿದ್ದರು ಸಹ. ಯು.ಕೆ.ಜಿಯ ಪುಸ್ತಕಗಳು ಕೈ ಸೇರಿದವು. ರಜೆ ಕಳೆದು ಮಗು, ಹುಣ್ಣಿಮೆಯ ಚಂದಿರನಂತೆ, ಶಾಲೆಗೆ ಮುಖ ಮಾಡಿತು. ಅವಳಲ್ಲಿ ಕಂಡ ಪರಿವರ್ತನೆಯಿಂದ ನಾನು ಸಂತೋಷಭರಿತಳಾದೆ. ಆದರೆ ಅದು ಹೆಚ್ಚು ಕಾಲ ಅಲ್ಲ ಒಂದು ದಿನಕ್ಕಿಂತ ಜಾಸ್ತಿ ಉಳಿಯಲಿಲ್ಲ. ಶಾಲೆಯಿಂದ ಅವಳು ‘ಬೇಬಿ ಸಿಟ್ಟಿಂಗ್’ ಗೆ ಹೋಗುತ್ತಿದ್ದಳು. ನಾನು ಆಫೀಸಿಂದ ಮನೆಗೆ ಮರಳುವಾಗ ಜೊತೆಯಾಗುತ್ತಿದ್ದಳು.

ಶಾಲೆಯ ಆರಂಭದ ದಿನ, ಬೆಳಿಗ್ಗೆ ಆನಂದದಿಂದ ಹೊರಟ ಮಗು, ಸಂಜೆ ಮಂಕಾಗಿ ಕಂಡಳು. ಮನೆಗೆ ಬರುತ್ತಿದ್ದಂತೆ ರಚ್ಚೆ ಹಿಡಿದಳು.
‘ನಾನು ನಾಳೆಯಿಂದ ಸ್ಕೂಲಿಗೆ ಹೋಗೋಲ್ಲ.’ ನಾನು ರಮಿಸಿ ಕೇಳಿದೆ, ‘ಯಾಕೆ ಮುದ್ದು? ಏನಾಯಿತು?’ ನನ್ನ ಭುಜವನ್ನು ತಬ್ಬಿದ ಮಗು ಉಲಿಯಿತು, ‘ನಾನು ಪಾಸಾಗಿ ಯು.ಕೆ.ಜಿ ಗೆ ಬಂದೆ. ನಮ್ಮ ರಮಾ ಮಿಸ್ ಫೇಲ್ ಆಗಿ, ಅಲ್ಲೇ ಇದಾರೆ. ನನ್ನೂ ಫೇಲ್ ಮಾಡಿಸಿ, ಅಲ್ಲೇ ಕೂರಿಸು.’
ರಮಾ ಮಿಸ್ ಎಲ್.ಕೆ.ಜಿ ಕ್ಲಾಸ್ ಟೀಚರ್. ಅವರು ಪ್ರತಿವರ್ಷ ಅಲ್ಲೇ ಇರತಾರೆ. ಅವರು ಯಾವ ಪರೀಕ್ಷೆಯು ಬರೆಯೋಲ್ಲ.’

ಈ ಯಾವ ಮಾತು ಅವಳ ಹೃದಯ ಮುಟ್ಟಲಿಲ್ಲ. ಅಂತೂ ಬೇಸರದಲ್ಲೇ ಯು.ಕೆ.ಜಿ ಪೂರೈಸಿದಳು. ಮತ್ತದೇ ಫಲಿತಾಂಶದ ದಿನ ಬಂತು. ಈ ಬಾರಿ ಅವಳ ಕ್ಲಾಸ್ ಮಿಸ್ ಎಷ್ಟೇ ಹುಡುಕಿದರೂ, ಆ ಅವಿಚ್ಚಿನ್ನ ಶಿಷ್ಯೆಯ ಮಾರ್ಕ್ಸ್ ಕಾರ್ಡ್ ದೊರೆಯಲಿಲ್ಲ. ಪೋಷಕಿ ಸಾಕ್ಷಾತ್ ನಾನೇ ಎದುರಿದ್ದುದು, ಆಕೆಯಲ್ಲಿ ಆತಂಕ ಉಂಟು ಮಾಡಿದ್ದು ಎದ್ದು ಕಾಣುತಿತ್ತು. ಕಡೆಗೆ ಆಕೆ, ನಮ್ಮ ಸುಪುತ್ರಿಯ ಉತ್ತರ ಪತ್ರಿಕೆ ನನ್ನ ಮುಂದಿಟ್ಟಳು. ಏನಿದೆ ಅಲ್ಲಿ? ಪ್ರಶ್ನೆ ಅದರ ಅಡಿಯಲ್ಲಿ ಉತ್ತರ ಬರೆಯಲು ಜಾಗ. ಅದರದ್ದೇ ಪುನರಾವರ್ತನೆ.

ಉತ್ತರ ತುಂಬಬೇಕಾದ ಸ್ಥಳವೆಲ್ಲ ಹೆಚ್ಚುಕಮ್ಮಿ ಖಾಲಿ. ಎಲ್ಲ ವಿಷಯದ ಪ್ರಶ್ನೆ ಪತ್ರಿಕೆಯ ಸ್ಥಿತಿಯು ಒಂದೇ ಸಮ. ಆ ಟೀಚರ್ ಚಡಪಡಿಸತೊಡಗಿದಳು, ‘ಮೇಡಂ, ಪ್ರೋಗ್ರೆಸ್ ಕಾರ್ಡ್ ಸಿಗತಾನೇ ಇಲ್ಲ.’ ನಾನೇ ಆಕೆಯನ್ನು ಸಮಾಧಾನ ಪಡಿಸಿದೆ. ‘ಎಲ್ಲ ಪೇಪರ್ ನೋಡಿದೆ. ಪ್ರೋಗ್ರೆಸ್ ಇಲ್ಲದ ಮೇಲೆ, ಪ್ರೋಗ್ರೆಸ್ ಕಾರ್ಡ್ ಚಿಂತೆ ಯಾಕೆ ಮಾಡ್ತೀರಿ?.’ ಮಾತಾಪಿತೃಗಳ ಕಳವಳವನ್ನೇ ಕಂಡಿದ್ದ ಆಕೆಗೆ ನಾನು ನಡೆದುಕೊಂಡ ರೀತಿ ವಿಚಿತ್ರವಾಗಿ ಕಂಡಿತು.

ಆಗ ಮಗುವನ್ನು ಮುಂದಿನ ತರಗತಿಗೆ ಹಾಕುವ ಎಲ್ಲ ಸಾಧ್ಯತೆಯಿದ್ದರೂ, ನಾನು ಒಪ್ಪದೇ ಹೋದೆ. ಮಗು ಓದುತ್ತಿದ್ದ ತರಗತಿಗೇ, ವಯಸ್ಸಿನ ದೃಷ್ಟಿಯಲ್ಲಿ ಬಹಳ ಚಿಕ್ಕದು. ಅದರ ಮೇಲೆ ಒಂದನೇ ತರಗತಿಗೆ ದಾಟಿಸಿಬಿಟ್ಟರೆ, ಹೋಗಹೋಗುತ್ತ ಅದಕ್ಕೆ ಕಲಿಕೆ ಇನ್ನು ಕಷ್ಟವಾಗುವುದು ಎಂಬ ವಿವೇಕ ನನ್ನ ಹಾಗು ನನ್ನ ಮಗುವನ್ನು ಕಾಪಾಡಿತು. ಯು.ಕೆ.ಜಿಯಲ್ಲಿ ಪುನ; ಕಲಿಯಲಿ, ಆಗ ವಯಸ್ಸು ಸರಿಹೊಂದುತ್ತದೆ ಎಂಬ ಕಾಳಜಿಯಿಂದ, ಬೇರೆ ಶಾಲೆಗೆ ಸೇರಿಸಿ, ಅವಳ ವಿದ್ಯಾಭ್ಯಾಸ ಮುಂದುವರಿಸಿದೆ. ಅವಳು ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳತೊಡಗಿದಳು.

ಆ ಶಾಲೆಯು ಒಂದನೇ ತರಗತಿಯು ಶುರುವಾಗುತ್ತಿದ್ದಂತೆ, ಇಪ್ಪತ್ತಮೂರು ಕಿಲೋ ಮೀಟರ್ ದೂರದ ಸೋಮನಹಳ್ಳಿಗೆ, ಸ್ಥಳಾಂತರಗೊಂಡಿತು. ಆ ಶಾಲೆಯ ಬಸ್ ಮನೆ ಸಮೀಪ ಬರುವುದು. ಹತ್ತಿಸಿದರೆ ಮುಗಿಯಿತು. ಚಿಕ್ಕವಳ ಶಾಲೆ ಇದರ ವಿರುದ್ಧ ದಿಕ್ಕು. ಈ ಎರಡು ಹಕ್ಕಿಗಳು ಗೂಡು ಬಿಟ್ಟ ನಂತರ, ನಾನು ನೆಮ್ಮದಿಯಾಗಿ, ಒಂದು ಲೋಟ ಕಾಫಿ ಸವಿಯುವ ಕ್ರಮ ರೂಢಿಸಿಕೊಂಡೆ. ತಮಾಷೆಗಾಗಿ ಹೇಳುತ್ತಿದ್ದೆ. ‘ಒಬ್ಬಳನ್ನ ಆಕ್ಸಫರ್ಡ್ಗೆ, ಒಬ್ಬಳನ್ನ ಕೇಂಬ್ರಿಡ್ಜ್ ಗೆ ಕಳಿಸಾಯಿತು’.

ಮುಂದಿನ ದಿನಗಳಲ್ಲಿ ಮಗಳು ಜಾಣೆಯಾಗತೊಡಗಿದಳು. ಆದರೂ ಟೆಸ್ಟ್, ಪರೀಕ್ಷೆಗಳಲ್ಲಿ ತೆಗೆಯುತ್ತಿದ್ದ ಗ್ರೇಡ್ ಮಾತ್ರ ‘ಸಿ’. ಪ್ರತಿಬಾರಿಯು ಅವಳು ಅಪ್ಪನ ಬಳಿ ಮಾರ್ಕ್ಸ್ ಕಾರ್ಡ್ ಸಹಿಗೆ ತರುವಾಗ, ಬೆದರಿ, ಊರಲ್ಲಿರುವ ದೇವರ ಮೇಲೆಲ್ಲ ಪ್ರಮಾಣ ಮಾಡಿ, ಮರುಬಾರಿ ‘ಎ ಗ್ರೇಡ್’ ಖಂಡಿತ ತೆಗೆಯುವುದಾಗಿ ಭರವಸೆ ನೀಡುವಳು. ಆದರೆ ಅದು ಶಾಲಾ ಹಂತ ಮುಗಿಸುವವರೆಗೂ ಹೆಚ್ಚುಕಮ್ಮಿ ಈಡೇರಲೇ ಇಲ್ಲವೆನ್ನಬಹುದು. ಇಂತಹ ಒಂದು ಸಮಯದಲ್ಲಿ, ಶಾಲೆಯವರು ಪೋಷಕರ ಸಭೆ ಕರೆದು, ಆಮಂತ್ರಣದ ಚೀಟಿ ಕಳಿಸಿದರು. ಶಾಲೆಯವರೇ ನಮ್ಮನ್ನು ಕರೆದೊಯ್ಯುವ, ಮರಳಿ ಕರೆತರುವ ವ್ಯವಸ್ಥೆಯನ್ನು ಸಹ ಮಾಡಿದ್ದರು.

ಜಗತ್ತಿನ ಎಲ್ಲ ಅಮ್ಮಂದಿರಂತೆ, ನಾನು ಒಬ್ಬಳೇ ಈ ಸಂದರ್ಭ ಪ್ರತಿನಿಧಿಸಲು ಹೋದೆ. ಆ ಶಾಲೆಯಲ್ಲಿ ಸುಮಾರು ಮಕ್ಕಳ ಅಮ್ಮಂದಿರು, ಅಪರೂಪಕ್ಕೆ ಬಂದ ಅಪ್ಪಂದಿರು ನನ್ನ ಮಗುವನ್ನು ಕಂಡು ಮಾತನಾಡಿಸುವವರೇ. ಶಿಕ್ಷಕಿಯರು ಹಾಗೆ. ನನ್ನ ಸರದಿ ಬಂದಾಗ, ನನಗೋ ರಾಜಮರ್ಯಾದೆ. ಬಹುಶ; ಮೊದಲ ಸ್ಥಾನ ಗಳಿಸುವ ಮಗುವಿನ ಮಾತಾಪಿತೃಗಳಿಗೂ ತೋರಲಾಗದ ಆದರ, ನನಗೆ ಆ ಶಿಕ್ಷಕವೃಂದದಿಂದ ಸಂದಿತು. ನನಗೋ ಅಚ್ಚರಿ.

ನನ್ನ ಮಗಳ ‘ಸಿ’ ಗ್ರೇಡ್ ನನ್ನ ಮುಂದೆ ನೃತ್ಯವಾಡಲಾರಂಭಿಸಿತು. ಎಲ್ಲ ವಿಷಯದ ಅಂಕಗಳು, ಇಂಗ್ಲೀಷ್ ಬಿಟ್ಟು, ಹೇಳಿಕೊಳ್ಳುವ ಹಾಗೇನು ಆ ಮಾರ್ಕ್ಸ್ ಕಾರ್ಡ್ ನಲ್ಲಿ ನಮೂದಾಗಿರಲಿಲ್ಲ. ನಾನು ಅನುಭವಿಸುತ್ತಿದ್ದ ಗೌರವ ಈ ಹಿನ್ನೆಲೆಯಲ್ಲಿ ವಿಚಿತ್ರವೆನಿಸಿತು. ಒಬ್ಬ ಶಿಕ್ಷಕಿ ಈ ಕಗ್ಗಂಟು ಬಿಡಿಸಿದರು. ‘ಮೇಡಂ, ನಿಮ್ಮ ಮಗಳು ವಿಷಯವನ್ನು ಹೀರಿಕೊಳ್ಳುವುದರಲ್ಲಿ ತುಂಬ ಮುಂದಿದ್ದಾಳೆ. ಆದರೆ ಪರೀಕ್ಷೆಯಲ್ಲಿ ಉತ್ತರ ಬರೆಯುವಾಗ ಅವಳಲ್ಲಿ ಸ್ಪರ್ಧಾತ್ಮಕ ಗುಣ ಇಲ್ಲದ ಕಾರಣ, ಅಂಕಗಳು ಕಡಿಮೆಯಾಗುತ್ತವೆ.

ತರಗತಿಯಲ್ಲಿ ನಾವು ಪಾಠ ಮಾಡುವಾಗ, ನಮಗೆ ವಿಷಯಕ್ಕೆ ಸಂಬಂಧಿಸಿದ, ಬೇರೆ ಬೇರೆ ವಿಚಾರಗಳನ್ನು ಹೇಳುತ್ತಾಳೆ. ಬಹುಶ: ಅವಳ ಪಠ್ಯೇತರ ಓದುವ ಹಂಬಲ ಅವಳಲ್ಲಿ ವಿಷಯ ಜ್ಞಾನ ಚೆನ್ನಾಗಿ ತುಂಬಿದೆ. ದಯವಿಟ್ಟು ಈ ಅಂಕಗಳ ಕಾರಣಕ್ಕೆ, ಅವಳನ್ನು ಬೈಯಬೇಡಿ.’ ಅಂದೇ ನನಗೆ ಆ ಕ್ಷಣವೇ ಜ್ಞಾನೋದಯವಾಗಿ, ಇಂದಿಗೂ ಸ್ವತಹ ಸ್ವಂತ ಗೀಳಿನಿಂದ ವೃತ್ತಿಯಲ್ಲಿ ಶಿಕ್ಷಕಿಯಾಗಿ B Ed ಪರೀಕ್ಷೆಗೆ ತಯಾರಿ ನಡೆಸಿರುವ ಅವಳನ್ನು ದೂಷಿಸಲು ಮನ ಬರುವುದಿಲ್ಲ. ಪಿ.ಯು.ಸಿಯ ಹಂತದಿಂದ ಅವಳು ಉತ್ತಮವಾಗಿ ತೇರ್ಗಡೆ ಹೊಂದುತ್ತಿದ್ದಾಳೆ.

ಇಂದಿನ ಕಾಲದ ಪೋಷಕರನ್ನು, ಮಕ್ಕಳ ಭವಿಷ್ಯದ ಬಗ್ಗೆ ಅವರು ಹೊಂದಿರುವ ಭಯಭೀತಿಯನ್ನು ಗಮನಿಸುವಾಗ ನಗು ಬರುತ್ತದೆ. ಕಸೀನ್ ಜ್ಯೋತಿಗೆ ಎರಡು ಪುತ್ರಿಯರು. ವರ್ಷಕ್ಕೆ ಒಂದೊಂದು ಮಗುವಿಗೆ ಕನಿಷ್ಠ ಒಂದು ಲಕ್ಷ ರೂಪಾಯಿ, ವಿದ್ಯಾಭ್ಯಾಸಕ್ಕಾಗಿ ತೆಗೆದಿಡಬೇಕು. ಅವಳು ಒಂದು ಉಪಾಯ ಹುಡುಕಿದ್ದಾಳೆ. ‘ತುಂಬ ಸಿಂಪಲ್. ಹೇಗಿದ್ದರೂ ಇಬ್ಬರಿಗೂ ಕೂಡೋದು, ಕಳೆಯೋದು ಸುಮಾರಾಗಿ ಬರತ್ತೆ. ಅಷ್ಟು ಸಾಕು. ಸ್ಕೂಲು ಬಿಟ್ಟರೂ ಪರ್ವಾಗಿಲ್ಲ. ಎಸ್.ಎಸ್.ಎಲ್.ಸಿ ಪ್ರೈವೇಟ್ ನಲ್ಲಿ ಕಟ್ಟಿಸಿ ಪಾಸ್ ಮಾಡಿಸಿದರೆ ಸಾಕು. ಹಾಡು, ಹಸೆ ಯಾವುದರಲ್ಲಿ ಆಸಕ್ತಿ ಇದೆಯೋ ಮುಂದುವರೆಸಿದರೆ ಆಯಿತು. ಕಲಿತ ಮೇಲೆ ಅವೇ ಪಾಠ, ಪ್ರವಚನ ಇಟ್ಟುಕ್ಕೊಂಡು, ಜೀವನೋಪಾಯ ರೂಪಿಸಿಕೊಳ್ಳಲಿ.’
ಅವಳು ಆಡುವ ಮಾತಲ್ಲಿ ಅಭಾವದ, ಅನುಭವದ ವಾಸ್ತವಾಂಶದ ಕಟುಸತ್ಯ ಗೋಚರವಾಗುತ್ತದೆ.

ಈಗ ಪುತ್ರಿ ಮಹನ್ಯ ಆಗೊಮ್ಮೆ ಈಗೊಮ್ಮೆ ತನ್ನ ಬಾಲ್ಯಕ್ಕೆ ಜಾರುತ್ತಾಳೆ. ಹತ್ತಿರದ ಮನೆಯ ಮಗು ಅವಳಲ್ಲಿ ಎಳೆತನದ ಮೆಲುಕು ಹಾಕಿಸುತ್ತದೆ. ಆ ಮಗುವೂ ಒಂದಿಲ್ಲೂಂದು ಕಾರಣಕ್ಕೆ ಶಾಲೆ ತಪ್ಪಿಸಿ, ವಿಜಯಶಾಲಿಯಂತೆ ಮನೆಯಲ್ಲಿ ಆಟದಲ್ಲಿ ಮಗ್ನನಾಗಿರುತ್ತಾನೆ. ಅದನ್ನು ಕಂಡಾಗ ಮಹನ್ಯ ಹೇಳುವುದುಂಟು. ‘ಇಷ್ಟು ಪುಟ್ಟಮಕ್ಕಳು ಹಾಯಾಗಿ ಮನೇಲಿರಬೇಕು. ಅದ ಬಿಟ್ಟು ಮಳೆ, ಚಳಿ, ಗಾಳಿ ಅನ್ನದೆ ಗೋಳು ಹೊಯ್ಕೋಬಾರದು.

‘ಈ ಮಗು ಯಾವುದೋ ಜನ್ಮದಲ್ಲಿ ನನ್ನ ತಮ್ಮ ಆಗಿರಬೇಕು.’ ಅವನು ಶಾಲೆಗೆ ಹೊರಡಲು ಮಾಡುವ ತಕರಾರು, ಅವನ ಪೋಷಕರಲ್ಲಿ ಸಿಟ್ಟು ತರಿಸಿದರೆ, ಮಹನ್ಯಳ ಮೊಗದಲ್ಲಿ ಸಂತಸ ನೃತ್ಯವಾಡುತ್ತದೆ. ಆ ಮಗು, ಅವನಣ್ಣ ಒಂದೇ ಬಸ್ಸಿನಲ್ಲಿ, ಒಂದೇ ಸ್ಟಾಪಿಂದ ಶಾಲೆಯ ಬಸ್ ಏರುತ್ತಾರೆ. ಏರಬೇಕು ಕೂಡ. ಚಿಕ್ಕವನು ಚಾಲಾಕಿತನದಿಂದ ಮನೆ ಸೇರುತ್ತಾನೆ. ಕೇಳಿದವರಿಗೆ ಅಷ್ಟೇ ಮುಗ್ಧವಾಗಿ ‘ನನಗೆ ಬಸ್ ಮಿಸ್ ಆಯಿತು’. ಪುಟ್ಟು ಶಾಲೆಗೆ ಹೋಗಿಯಾಯಿತೇ ಎಂದು ನೋಡಿ ಹೋಗಲು ಬರುವ ಅಜ್ಜಿಯ ಸೊಂಟ ಕೊಂಡಾಟದಿಂದ ಹತ್ತಿ, ‘ನಡಿ ಅಜ್ಜಿ, ನಿಮ್ಮನೆಗೆ ಹೋಗಿ ಅಡುಗೆ ಮಾಡೋಣ.’ ಎನ್ನುತ್ತಾನೆ ಈ ಚಿತ್ತಚೋರ. ಮಹನ್ಯಳಂತೂ ‘ಅಮ್ಮ, ಪಾಪು ಏಷ್ಟು ಚೆನ್ನಾಗಿ ಹಟ ಮಾಡಿ ತಪ್ಪಿಸಿಕೋತಾನೆ ನೋಡು’ ಎಂದು ಹಿಗ್ಗುತ್ತಾ, ನೆನಪಿನ ದೋಣಿಯಲ್ಲಿ ಪ್ರಯಾಣ ಆರಂಭಿಸುತ್ತಾಳೆ.

‘ನಾನು ಎಲ್.ಕೆ.ಜಿಯಿಂದ ಯು.ಕೆ.ಜಿಗೆ ಹೋದಾಗ, ರಮಾ ಮಿಸ್ ಜೊತೇಲಿ ಬರಲಿಲ್ಲಾಂತ ಅತ್ತಿದ್ದೆ ಅಲ್ವಾ, ರಮಾ ಮಿಸ್ ಫೇಲ್ ಆಗಿ ಅದೇ ಕ್ಲಾಸಲ್ಲಿ ಉಳಿದುಬಿಟ್ಟರು. ನಾನು ಮಾತ್ರ ಪಾಸಾಗಿ ಮುಂದಕ್ಕೆ ಹೋದೆ ಅಂದುಕೊಂಡಿದ್ದೆ. ಹಾಗೆ ವಾಚಮನ್ ಲಕ್ಷ್ಮಣ ಅಂಕಲ್ ಜೊತೆ ಆಟ ಆಡ್ತಿದ್ದೆ. ಅವರಿಗೆ ಈಗ ಎಷ್ಟು ವಯಸ್ಸು ಆಗಿರಬಹುದು?

ಒಂದು ದಿನ ಹೋಗಿ ಅವರ ಬಗ್ಗೆ ವಿಚಾರಿಸಿಕೊಂಡು, ಸಾಧ್ಯವಾದರೆ ನೋಡಿಕೊಂಡು ಬರಬೇಕು. ಅಮ್ಮ ನಿನಗೆ ಬೇಜಾರೇ ಆಗಲಿಲ್ವಾ ನನ್ನ ವಿಚಾರದಲ್ಲಿ? ನಾನು ಸ್ಕೂಲಿಗೆ ಹೋಗದೆ ಹಾಗೆ ಉಳಿದುಬಿಟ್ಟರೆ ಅಂತ ನಿನಗೆ ಗಾಬರಿ ಆಗಲಿಲ್ವಾ?’. ನನ್ನನ್ನು ಮೀರಿಸುವಂತೆ ಬೆಳೆದು ನಿಂತಿರುವ ಮಗಳಿಗೆ ಏನು ಉತ್ತರಿಸಲಿ. ಸರ್ವರ ಪ್ರಗತಿಗೆ ಶಾಲೆಯ ಪಾಠವೇ ಸಕಲವೂ ಎನ್ನಲೇ? ಇಲ್ಲ ಉದ್ಯೋಗಸ್ಥ ಮಾತೆಯರಿಗೆ ಮಕ್ಕಳನ್ನು ಶಾಲೆಗೆ ಕಳಿಸುವುದೇ ಪಾಲನಾ, ಸಂರಕ್ಷಣಾ ಸಮಸ್ಯೆಗಿರುವ ಪರಿಹಾರ ಎನ್ನಲೇ? ಒಟ್ಟು ಮಕ್ಕಳು ಬೆಳೆದಂತೆ ಅವರ ಪ್ರಶ್ನೆಗಳ ಪಟ್ಟಿಯೂ ಬೆಟ್ಟವಾಗಿ ಬೆಳೆಯುತ್ತದೆ. ಉತ್ತರ ಹುಡುಕಲಾರದ ಪ್ರಶ್ನೆಗಳೇ ನಮ್ಮನ್ನು ಮುತ್ತಿರುತ್ತದೆ, ಮುತ್ತಿಡುತ್ತದೆ.

‍ಲೇಖಕರು Avadhi

May 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Jayasrinivasa Rao

    I enjoyed reading this article … beautifully narrated … an article relevant for current times for paranoid parents and harassed children…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: