ಬು(ಬ)ದ್ದತೆ!

ಸದಾಶಿವ್ ಸೊರಟೂರು
ಏ! ದಡ್ಡ ಮಂಡೂಕ
ಆ ಹೆಡ್ಡ ನರನ ಬುದ್ದಿ
ನಿನಗೂ ಬಂದಿದೆಯೇ?
ಆಡಿ ಹಾರಿ ಗೋಸುಂಬೆಯಂತೆ
ಗಿಡದ ಬಣ್ಣವ ಬಳಿದುಕೊಂಡು
ಅವನಂತೆ ಚಾಡಿ ಹೇಳಲು ಬಂದಿರುವೆಯಾ?
ಸದಾ ನಗುತ್ತಿದ್ದ ನನ್ನ ಮುಖ 
ಕಪ್ಪಿಟ್ಟಿರುವುದ ಕಾಣಲಾರೆಯಾ
ಗೆಳೆಯಾ? ನೋಡಿ ನೋಡಿ
ರೋಸಿ ಹೋಗಿರುವೆ ತಿಳಿಯದೆ?
ಅಸೆ ಮೋಸಗಳ ಸುಳ್ಳು ತೆವಲುಗಳ
ಕಿರೀಟ ಮಾಡಿಕೊಂಡವನ ಮುಂದೆ ನನ್ನದೇನು?
ಗರಗಸದಂತೆ ನಡತೆ, ಒರಟು ಮಾತು
ವಕ್ರನೋಟ, ಕೆಸರಿನ ಬದುಕು
ವಿಚಿತ್ರ ಚಿಂತನೆ, ನೆನಪುಗಳ ಮೆರವಣಿಗೆ
ಆತುರದ ನಿರ್ಧಾರ ಕೆಟ್ಟ ಪ್ರಯತ್ನ
ಆಸೆಗಳ ಸಾಗರದಲ್ಲಿ ನಿಂತಿದೆ ಅವನ ಒಂಟಿ ಬಾಳು
ಹೇಗೆ ತಡೆಯಲಿ ಮಿತ್ರ ನನ್ನ ಅಳು.
ನಾನು ಬಿದ್ದಿದ್ದ ಕೆಸರದು
ಅನುಭವಿಸಿದ ನೋವು ಕಾವುಗಳವು
ಅದಕ್ಕೆಂದೆ ಎಲ್ಲವ ಬಿಟ್ಟು ಬಂದೆ ಒಬ್ಬನೆ
ನೂರಾರು ದಿನ ಅಂತರದಲಿ ಕಂಡುಕೊಂಡೆ
ಬದುಕ! ಬಾಳಿನ ನೆಮ್ಮದಿಯ
ನಿಮಗೆ ಸಾರಿ ತಿಳಿಸಿದೆ ಮತ್ತೆ ಮತ್ತೆ.
ನನ್ನಂತೆ ಅವರನು ಮೇಲೆತ್ತಿದವರೆಷ್ಟೋ
ಮತ್ತೆ ಮತ್ತೆ ಹೋಗಿ ಬೀಳುವನು ಅವ
ಅದು ಅವನದೇ ಹಾಡು ಪಾಡು
ನಾವುಗಳೆ ಸೋತು ಹೋಗಿದ್ದೇವೆ
ಇನ್ನವನ ತಂಟೆಗೆ ಬಾರಲಾರೆವು
ಹೋಗಿ ಹೇಳಿಬಿಡು ನಿನ್ನದೇ ಮಾತಲಿ ಕೂಗಿ!





0 Comments