ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೋಗಿ ಬಾರಯ್ಯ ಸರದಾರ….

download

ಧನಂಜಯ ಕುಲಕರ್ಣಿ

ಇಂದಿಗೆ ಬರೋಬ್ಬರಿ 33 ವರ್ಷಗಳು.. ನನ್ನ ಹಾಗೂ ಗಜಾನನ ಮಹಾಲೆ ಅವರ ಒಡನಾಟಕ್ಕೆ.. 1982, ಅಕ್ಟೋಬರ್ 11 ನೇ ತಾರೀಖಿನಂದು ಧಾರವಾಡದಲ್ಲಿ ನಾನು ಅಭಿನಯಿಸಿದ ನಾಟಕಕ್ಕೆ, ನಮಗೆಲ್ಲ  ಬಣ್ಣ ಹಚ್ಚಲು ಬಂದಿದ್ದರು ಮಹಾಲೆ..ಅಂದಿನಿಂದ ಆರಂಭವಾದ ನನ್ನ ಮತ್ತು ಅವರ ಒಡನಾಟ ಈ ಕ್ಷಣದವರೆಗೂ ಅವಿರತವಾಗಿ ಮುನ್ನಡೆದಿತ್ತು.. ಇಂದು ಬೆಳಿಗ್ಗೆ ಸರಿಯಾಗಿ 7.30 ಕ್ಕೆ ಹಿರಿಯರಾದ ಗೋಪಾಲ ವಾಜಪೇಯಿ ಅವರು ನನಗೆ ಫೋನಾಯಿಸಿ ಗಜಾನನ ಮಹಾಲೆ ಇಲ್ಲ ಅಂತ ಹೇಳುವಾಗ ಅವರ ಧ್ವನಿಯಲ್ಲಿದ್ದ ಧಾವಂತ, ದುಗುಡತೆಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಕ್ಷಣಕಾಲ ನನ್ನ ಮನೆಯ ಸೋಫಾದಮೇಲೆ ಕುಸಿದುಬಿಟ್ಟೆ. ಅತ್ತ  ಕಡೆಯಿಂದ ವಾಜಪೇಯಿ ಅವರ ಅಳುವು ನನಗೆ ನಿಖರವಾಗಿ ಕೇಳಿಸುತ್ತಿತ್ತು…

ನಿನ್ನೆಯದಿನ ಬೆಂಗಳೂರಿನ ರಂಗಶಂಕರದಲ್ಲಿ ಧಾರವಾಡ ಸಮುದಾಯ ತಂಡದವರ ನಾಟಕಕ್ಕೆ ಪ್ರಸಾದನಕ್ಕೆ ಬಂದವರು ನನ್ನ ಅನೇಕ ರಂಗ ಮಿತ್ರರೊಂದಿಗೆ ಮಾತನಾಡಿದ್ದಾರೆ, ಎಂದಿನ ಲವಲವಿಕೆಯಿಂದ ಓಡಾಡಿದ್ದಾರೆ… ನಾಟಕ ಮುಗಿಸಿಕೊಂಡು ಧಾರವಾಡಕ್ಕೆ ತಂಡದೊಂದಿಗೆ ತೆರಳಿದ್ದಾರೆ…. ಅಷ್ಟೇ ಅವರು ಧಾರವಾಡ ತಲುಪಲೇ ಇಲ್ಲ…. ಮಾರ್ಗಮಧ್ಯದಲ್ಲಿಯೇ ನಮ್ಮನ್ನೆಲ್ಲಾ ಆಗಲಿ ಮೇಕಪ್ ಕಿಟ್ ಬಿಟ್ಟು ಹೊರಟು ಹೋದರು…. ಮರಳಿ ಬಾರದ ಗೂಡಿಗೆ…

Mahale

ತೀರಾ ಬಡ ಕುಟುಂಬದಲ್ಲಿ ಜನಿಸಿ, ಹೊರಜಗತ್ತಿನ ಅರಿವು ಮೂಡುವುದರೊಳಗೆ ತನ್ನ ತಾಯಿಯನ್ನೂ ಕಳೆದುಕೊಂಡು, ಬದುಕನ್ನ ಬಂದಂತೆ ಸ್ವೀಕರಿಸಿದರು ಮಹಾಲೆ.. ಬೇಂದ್ರೆ, ಗೋಕಾಕಾರು, ಶ್ರೀರಂಗರು, ಜಡಭರತ, ಕಾರ್ನಾಡ, ಬಿ.ವಿ. ಕಾರಂತ ಮುಂತಾದ ರಂಗದಿಗ್ಗಜರುಗಳಿಗೆ ಬಣ್ಣ ಹಚ್ಚಿ ಬೆನ್ನು ಚಪ್ಪರಿಸಿಕೊಂಡವರು.. ಸದಾ ಹೊಸತನಗಳಿಗೆ ತನ್ನನ್ನು ತಾನು ತೆರೆದು ಕೊಂಡಿದ್ದ ಮಹಾಲೆ, ಪ್ರಸಾದನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅಷ್ಟೇ ಸವಾಲಾಗಿ ಸ್ವೀಕರಿಸಿ, ಅದರಲ್ಲೂ ಸೈ ಎನಿಸಿಕೊಂಡವರು. ಕೆಲವರಿಗೆ ಗಜಾನನ ಅಂತಾದರೆ, ಇನ್ನೂ ಕೆಲವರಿಗೆ ಗಜಾ, ಮಹಾಲೆ,ಮಹಾಲೇಜೀ, ಅಜ್ಜ ಹೀಗೆ ಎಲ್ಲರಿಗೂ ಪರಿಚಿತರು.. ನಾಟಕವಿರಲಿ, ವಾರ್ಷಿಕೋತ್ಸವದ ಕಾರ್ಯಕ್ರಮಗಳಿರಲಿ, ಸಂಗೀತ ಕಾರ್ಯಕ್ರಮಗಳಿರಲಿ, ನೃತ್ಯ ಕಾರ್ಯಕ್ರಮಗಳಿದ್ದಲ್ಲಿಯೂ ಮಹಾಲೆ ಹಾಜರ್.. ಉತ್ತಮ ಗಾಯಕ ಹಾಗೂ ಹಾರ್ಮೋನಿಯಂ ವಾದಕರಾಗಿದ್ದ ಅವರು, ನನ್ನೊಂದಿಗೆ ಅಹೋ ರಾತ್ರಿ ಕುಳಿತು ತಮ್ಮ ಹಳೆಯ ರಂಗಗೀತೆಗಳನ್ನು ಹಾಡಿ, ಹಾಡಿಸಿದ್ದು ಇದೆ..

ಅದ್ಭುತವಾಗಿ ಮುಖವಾಡಗಳನ್ನು ತಯಾರಿಸುವುದರಲ್ಲಿ ಮಹಾಲೆ ಸಿದ್ಧ ಹಸ್ತ… ಕೇಶ ವಿನ್ಯಾಸ, ವಿಶೇಷ ವಿಗ್ ತಯಾರಿಸುವುದರಲ್ಲಿ ನಿಪುಣರು. ಎರಡು ವರ್ಷದ ಹಿಂದೆ ಮುಂಬೈ ಕನ್ನಡ ಸಂಘದಲ್ಲಿ ನನ್ನ ನಿರ್ದೇಶನದ “ನೀರು” ನಾಟಕದ ಪ್ರದರ್ಶನ ಅದರ ಪ್ರಮುಖ ಪಾತ್ರಧಾರಿಗೆ ವಿಶೇಷ ವಾದ ಕೇಶ ವಿನ್ಯಾಸದ ಅವಶ್ಯಕತೆ ಇತ್ತು.. ಅದನ್ನು ಮುಂಚಿತವಾಗಿ ಅವರಿಗೆ ತಿಳಿಸಿದ್ದೆ.. ಆದರೆ, ನನ್ನ ನಾಟಕ ಪ್ರದರ್ಶನದ ದಿನ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಅವರದೇ ದತ್ತಿ ಉಪನ್ಯಾಸ ಕಾರ್ಯಕ್ರಮ, ಹೀಗಾಗಿ ಮುಂಬೈಗೆ ಅವರು ಬರುವುದು ಅಸಾಧ್ಯದ ಮಾತಾಗಿತ್ತು.. ನಾನು ಚಡಪಡಿಸುತ್ತಾ ಏನು ಮಾಡುವುದು ಎನ್ನುತ್ತಿದರೆ, ಆ ಪತ್ರಕ್ಕೆ ಬೇಕಾದ ಕೇಶ ವಿನ್ಯಾಸದ ವಿಗ್ ಅನ್ನು ತಯಾರು ಮಾಡಿ ಗೆಳೆಯ ರವಿ ಕುಲಕರ್ಣಿ ಜೊತೆ ಕಳಿಸಿ ಕೊಟ್ಟಿದ್ದ ಪುಣ್ಯಾತ್ಮ ಮಹಾಲೆ.. ಇದು ಅವರಿಗಿರುವ ರಂಗಭೂಮಿಯ ಬದ್ಧತೆ..

ಅವರ ಬದ್ಧತೆಗೆ ಇನ್ನೊಂದು ತಾಜಾ ಉದಾಹರಣೆ ಕೊಡಬೇಕೆಂದರೆ, ಈಗ ಕೆಲವು ತಿಂಗಳುಗಳ ಹಿಂದೆ ಅವರ ಧರ್ಮ ಪತ್ನಿಯವರು ಕೂಡ ಹೃದಯಾಘಾತದಿಂದ ನಿಧನಹೊಂದಿದರು. ಅವರ ನಿಧನ ಹೊಂದಿದೆ ಕೇವಲ ಐದನೇ ದಿನಕ್ಕೆ ಮತ್ತೆ ಅವರು ಮಕ್ಕಳ ನಾಟದ ಆಹ್ವಾನಕ್ಕೆ ಓಗೊಟ್ಟು ಅಲ್ಲಿ ಪ್ರಸಾದನಕ್ಕೆ ಹಾಜರಾಗಿದ್ದರು.. ಅವರು ವೃತ್ತಿಯಲ್ಲಿ ಕ್ಷೌರಿಕರಾಗಿದ್ದರೂ, ಅದನ್ನು ಅತ್ಯಂದ ಪ್ರೀತಿಯಿಂದ ನಿಭಾಯಿಸಿದರು.. ಅಲ್ಲಿ ನಿಷ್ಠೆ ಇತ್ತು… ತನ್ಮಯತೆ ಇತ್ತು…

ನಾನು ಹೊಸಪೇಟೆಯ ಕನ್ನಡ ಕಲಾ ಸಂಘಕ್ಕೆ ಕಂಬಾರರ ಜೋಕುಮಾರ ಸ್ವಾಮಿ ನಾಟಕ ನಿರ್ದೇಶಿಸುತ್ತಿದ್ದೆ, ಅದರಲ್ಲಿಯ ಹಾಡುಗಳನ್ನು ಹಾಡುತ್ತಿದ್ದ ನನ್ನನ್ನು ಪ್ರದರ್ಶನ ಮುಗಿದ ನಂತರ ಕರೆದು, ತಾವು ಕಾರಂತರೊಂದಿಗೆ ಈ ನಾಟಕಕ್ಕೆ ಹಾರೋಮಿಯಮ್ ಸಾಥ್ ನೀಡಿದ್ದನ್ನು ನೆನಪಿಸಿಕೊಂಡು, ನನಗೆ “ಸರ್ ನಿಮ್ಮ ಧ್ವನಿ ಕೇಳಿ ಕಾರಂತರ ಡ್ವಾಣಿ ಕೇಳಿಧಂಗಾತು” ಅಂದು ಬಿಟ್ಟರು.. ಇದಕ್ಕಿಂತ ಹೆಚ್ಚಿನ ಸರ್ಟಿಫಿಕೇಟ್ ಇನ್ನೇನು ಬೇಕು?

ಹೊಸಪೇಟೆಯ ಕನ್ನಡ ಕಲಾ ಸಂಘಕ್ಕೆ ನಾನು ನಿರ್ದೇಶಿಸಿದ 15 ನಾಟಕಗಳಿಗೆ ಅವರಿಂದ ಪ್ರಸಾದನ ಲಭ್ಯವಾಗಿದೆ.. ಜತೆಗಿರುವನು ಚಂದಿರ ನಾಟಕಕ್ಕೆ ಅವರು ಮಾಡಿದ ಪ್ರಸಾದನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ನಾಟಕಕ್ಕೆ ಒಟ್ಟು 8 ಪ್ರಶಸ್ತಿಗಳು ಲಭಿಸಿದವು. ಪ್ರಸಾದನ ವಿಭಾಗಕ್ಕೆ ಪ್ರಶಸ್ತಿ ಇರಲಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ನಂತರ ನಿರ್ಣಾಯಕರು ಮಹಾಲೆ ಅವರನ್ನು ವೇದಿಕೆಯ ಮೇಲೆ ಕರೆದು ಅವರಿಗೆ ವಿಶೇಷ ಸನ್ಮಾನ ಮಾಡಿ ಪ್ರಶಸ್ತಿ ನೀಡಿದರು. ಅಷ್ಟೇ ಸಮ ಚಿತ್ತದ ಮಹಾಲೆ ಎಂದೂ ಪ್ರಶಸ್ತಿಯ ಹಿಂದೆ ಬಿದ್ದವರಲ್ಲ. ಅವರಿಗೆ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರಕಟವಾದಾಗ ಅವರು ಗೋವಾದಲ್ಲಿದ್ದರು. ಪ್ರಶಸ್ತಿಯ ವಿಷಯ ಅವರಿಗೆ ತಿಳಿದದ್ದು 2 ದಿನಗಳ ನಂತರ. ಈಗ ಎರಡು ವರ್ಷಗಳ ಹಿಂದೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗಲೂ ಅಷ್ಟೇ ಹೆಚ್ಚು ಸಂಭ್ರಮಿಸಲಿಲ್ಲ, ಮತ್ತೆ ತಮ್ಮ ರಂಗ ಕಾಯಕದಲ್ಲಿ ತೊಡಗಿಕೊಂಡರು. ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅವರನ್ನು ಅಭಿನಂದಿಸಲು ಅವರ ಮನೆಗೆ ಹೋಗಿದ್ದೆ.. ಅಭಿಮಾನದಿಂದ ಬರಮಾಡಿಕೊಂಡು ಗಂಟೆಗಟ್ಟಲೇ ಮಾತನಾಡಿದರು. “ನಾನು ಪ್ರಶಸ್ತಿ ಕೊಡಸ್ರಿ ಅಂತ ಯಾರನ್ನೂ ಕೇಳಿದ್ದಿಲ್ಲ ಸರ್.. ಆದ್ರೂ ಇದ ಧಾರವಾಡದ ಒಬ್ಬ ದೊಡ್ಡ ರಂಗ ಕರ್ಮಿಗಳು ನನಗ ಬರಬಾರದಂತ ಭಾಳ ಪ್ರಯತ್ನ ಮಾಡಿದ್ರಂತ. ನಾನು ಹಂಗ ಯಾರಿಗೆ ಕೆಟ್ಟ್ ಮಾಡೆನೇನ್ರಿ ಸರ್.. “ ಈ ಮಾತನ್ನು ಮಹಾಲೆ ಬಾಯಿಂದ ಕೇಳುವಾಗ ಕರುಳು ಕಿವುಚಿದಂತಾಯಿತು. ಒಂದು ದಿನವೂ ಯಾವ ತಂಡದವರಿಗೆ ತಾನು ಮಾಡಿದ ಕೆಲಸಕ್ಕೆ ಇಂತಿಷ್ಟು ದುಡ್ಡು ಕೊಡಿ ಅಂತ ಕೇಳಿದವರಲ್ಲ. ಎಂದೂ ತಕರಾರು ಮಾಡಿದವರಲ್ಲ. ಸಿಕ್ಕಿದ್ದರಲ್ಲಿಯೇ ಸಮಾಧಾನ ಮಾಡಿಕೊಂಡು, ರಂಗದ ಮೇಲೆ ಅದ್ಭುತ ಪಾತ್ರಗಳನ್ನು ಸೃಷ್ಟಿಸಿ, ತಾನು ಮಾತ್ರ ತನ್ನ ಕೊನೆಯ ದಿನದ ವರೆಗೂ ಮೂರುಕಾಲು ಮನೆಯಲ್ಲೂ ವಾಸವಾಗಿದ್ದ ಮಹಾಲೆ ಅವರ ಬಗ್ಗೆ ಹೀಗೆ ಯೋಚಿಯಸಲು ಮನಸ್ಸಾದರೂ ಹೇಗೆ ಬಂತೋ …..

ಎಂದೂ ಒಂದು ಕಡೆ ನಿಂತಲ್ಲಿ ನಿಲ್ಲದೇ, ಸದಾ ಸೈಕಲ್ ಮೇಲೆ ತಿರುಗಾಡುತ್ತ ಕಾಯಕವೇ ಕೈಲಾಸ ಎಂದು ನಂಬಿದ್ದ ಮಹಾಲೆ ನಿಜವಾಗಿ ಜಂಗಮ.. ಅವರನ್ನು ಸ್ಥಾವರವನ್ನಾಗಿಸುವುದು ಬೇಡ… ಅವರಿಗಾಗಿ ಸ್ಮಾರಕಗಳು ಬೇಡ, ಅವರ ಕಾರ್ಯವನ್ನು ಅವರ ಮಗ ಸಂತೋಷ ಸಮರ್ಪಕವಾಗಿ ಮುನ್ನಡೆಸಿಕೊಂಡು ಹೋದಲ್ಲಿ ಮಹಾಲೆ ಜಂಗಮರಾಗಿ ಅಜರಾಮರವಾಗಿರುತ್ತಾರೆ…

ರಂಗಭೂಮಿಗೆ ಎಂದೂ ಸಾವಿಲ್ಲ, ಅಂತೆಯೇ ಮಹಾಲೇ ಅವರಿಗೂ ಕೂಡ

“ಉಸಿರಾಡುವೆ ನಿನ ನೆನೆದು ಓ ಗೆಳೆಯಾ..

ಹೋಗಿ ಬಾರಯ್ಯ ಸರದಾರ…..”

‍ಲೇಖಕರು admin

26 October, 2015

1 Comment

  1. Gopaala Wajapeyi

    ಗಜಾನನ ಮಹಾಲೆಯವರಿಗೆ ಕರ್ನಾಟಕ ರಾಜ್ಯೋತ್ಸವ ಧಾರವಾಡದ ಒಬ್ಬ ‘ದೊಡ್ಡ ರಂಗ ಕರ್ಮಿ’ ಬಹಳ ಪ್ರಯತ್ನ ಮಾಡಿದ್ದರಂತೆ… ಆ ‘ದೊಡ್ಡ ರಂಗ ಕರ್ಮಿ’ ಮೊದಲಿನಿಂದಲೂ ಇಂಥ ಕೆಲಸ ಮಾಡುತ್ತಲೇ ಬಂದವರು. ಉಳಿದವರನ್ನು ತುಳಿದು ತಾವು ಮೇಲೆ ಬಂದವರು. ಜಗತ್ತು ಅಂಥವರಿಗೇ ಮಣೆ ಹಾಕುತ್ತದೆ, ಮನ್ನಣೆ ನೀಡುತ್ತದೆಯೇ ಹೊರತು ಮಹಾಲೆಯಂಥ ಬಾಯಿ ಸತ್ತವರಿಗಲ್ಲ.
    ಇದು ವಿಘ್ನ ಸಂತೋಷಿಗಳ ಪ್ರಪಂಚ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading