ಮೌಲ್ಯಗಳಿಗಾಗಿ ಪಣ ತೊಡೋಣ

ಮತ್ತೊಂದು ನವ ವಸಂತ ಆರಂಭವಾಗಲಿದೆ. ಹೊಸ ವರುಷದ ಸಂಭ್ರಮದ ರಾತ್ರಿಯನ್ನು ಕಳೆದು ಬೆಳಕು ಹರಿದ ಕೂಡಲೇ ಮತ್ತದೇ ಜೀವನ, ಅದೇ ಜಂಝಾಟ, ಅದೇ ಮುಖಗಳು , ಅದೇ ಚಹರೆಗಳು. ಆದರೂ ಏನೋ ಒಂದು ಹೊಸತರ ಸಂಭ್ರಮ. ಒಂದು ವರ್ಷ ಎಷ್ಟು ಬೇಗ ಕಳೆದುಹೋಯಿತು ಎಂಬ ವ್ಯಥೆ. ಈ ವ್ಯಥೆಯ ಹಿಂದೆ ವಾಸ್ತವವಾಗಿ ಅಡಗಿರುವುದು ನಮ್ಮ ವ್ಯಕ್ತಿಗತ ಜೀವನದ ಒಂದು ವರ್ಷ ಕರಗಿಹೋಯಿತಲ್ಲಾ ಎಂಬ ಚಿಂತೆ. ಇದು ಸ್ವಾಭಾವಿಕ. ಸರ್ವಸಂಗ ಪರಿತ್ಯಾಗಿಗಳಾಗಿ ಪೀಠಾರೋಹಣ ಮಾಡಿ ಸಾಧು ಸನ್ಯಾಸಿಗಳಂತೆ ಬಾಳುವವರೇ ತಮ್ಮ ಬದುಕಿನ ಐಹಿಕ ಸುಖ ಸಂಪತ್ತುಗಳಿಗಾಗಿ ಹರಸಾಹಸ ಮಾಡುತ್ತಿರುವ ಆಧುನಿಕ ಜಗತ್ತಿನಲ್ಲಿ ಮಾನವ ಸಮಾಜ ಕಳೆದು ಹೋದ ಕ್ಷಣಗಳಿಗೆ ಪರಿತಪಿಸಿದರೆ ತಪ್ಪೇನಲ್ಲ, ಸಹಜವೇ. ಆದರೂ 2012 ಇತಿಹಾಸದ ಭಾಗವಾಗಿದೆ. ಕಳೆದ ವರ್ಷದ ಕೊನೆಯಲ್ಲಿ ಸುನಾಮಿ ಆಗಲಿಲ್ಲ. ಭೂ ಕಂಪನವಾಗಲಿಲ್ಲ. ಪ್ರಳಯಾಂತಕರು ನಿರೀಕ್ಷಿಸಿದಂತೆ ಪ್ರಳಯವೂ ಆಗಲಿಲ್ಲ. ಆದರೆ ಮಾನವ ಸಮಾಜ ಸಹಿಸಲಾರದಂತಹ ಘಟನೆಗಳು ಸಂಭವಿಸಿದವು.
ವಷರ್ಾಂತ್ಯದಲ್ಲಿ ದೆಹಲಿಯಲ್ಲಿ ನಡೆದ ಯುವತಿಯೊಬ್ಬಳ ಅತ್ಯಾಚಾರ ಪ್ರಕರಣ ಹೊಸ ವರ್ಷದ ಉತ್ಸಾಹವನ್ನೇ ಕುಂದುವಂತೆ ಮಾಡುವ ಒಂದು ವಿದ್ಯಮಾನ ನಿಜ. ಅದರೆ 2012ರ ಪುನರಾವಲೋಕನ ಮಾಡಿದಾಗ ಕಂಡುಬರುವ ಆಘಾತಕಾರಿ ಅಂಶವೆಂದರೆ ದಿನೇ ದಿನೇ ಭಾರತದ ನಗರಗಳು, ಗ್ರಾಮಾಂತರ ಪ್ರದೇಶಗಳು ರೇಪಿಸ್ತಾನಗಳಾಗಿ ಪರಿಣಮಿಸುತ್ತಿವೆ. ಅತ್ಯಾಚಾರ ಎನ್ನುವುದು ನಿತ್ಯ ಸುದ್ದಿಯಾಗಿದೆ. 21ನೆಯ ಶತಮಾನದ ದ್ವಿತೀಯ ದಶಮಾನದ ಹೊಸ್ತಿಲಲ್ಲೂ ಭಾರತೀಯ ಸಮಾಜದ ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಿರುವುದು 2012ರಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ. ಆದರೆ ಇದೊಂದೇ ಸಮಸ್ಯೆಯಲ್ಲ. ಭಾರತೀಯ ಸಮಾಜದಲ್ಲಿ ನೈತಿಕತೆ ಮತ್ತು ಮೌಲ್ಯಗಳಿಗೆ ಸ್ಥಾನ ಉಳಿದಿರುವುದೇ ಎಂದು ಪ್ರಶ್ನಿಸುವ ಮಟ್ಟಿಗೆ ಮೌಲ್ಯಗಳನ್ನು ಕಳೆದುಕೊಂಡು ಬೆತ್ತಲೆಯಾಗಿದ್ದೇವೆ. ಹರಿಯಾಣದ ಖಾಪ್ ಪಂಚಾಯತಿಗಳಲ್ಲಿ ಅನುಮೋದಿಸಲಾಗುವ ಗೌರವ ಹತ್ಯೆಗಳು ಊಳಿಗಮಾನ್ಯ ವ್ಯವಸ್ಥೆಯ ಪ್ರತೀಕವಾದರೆ, ಮಂಗಳೂರಿನ ರೆಸಾಟರ್್ಗಳಲ್ಲಿ, ಪಬ್ಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಆಕ್ರಮಣಗಳು ಫ್ಯಾಸಿಸ್ಟ್ ಧೋರಣೆಯ ಪ್ರತೀಕವಾಗಿ ಕಾಣುತ್ತದೆ. ಈ ಎರಡೂ ಮಾನವ ವಿರೋಧಿ ಧೋರಣೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಮತೀಯ, ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುವ ಶಕ್ತಿಗಳು ಇಂದಿನ ಭಾರತೀಯ ಸಮಾಜದ ಚುಕ್ಕಾಣಿ ಹಿಡಿದಿರುವುದು ಸ್ಪಷ್ಟವಾಗಿದೆ. ಹಾಗಾಗಿಯೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಸುದ್ದಿಯಾಗುತ್ತವೆಯೇ ಹೊರತು ಆತ್ಮಾವಲೋಕನದ ವೇದಿಕೆಯಾಗುವುದಿಲ್ಲ.
ಸಾಮಾಜಿಕ ಸ್ತರದಲ್ಲಿ ಮಹಿಳೆಯರು ಒಂದು ಆಯಾಮವಾದರೆ ದಲಿತರು ಮತ್ತೊಂದು ಆಯಾಮವಾಗಿ ಕಾಣುತ್ತಾರೆ. ಮಹಿಳಾ ಸಬಲೀಕರಣದಂತೆಯೇ ದಲಿತ ವಿಮೋಚನೆಯೂ ಸಹ ಘೋಷಣೆಗಳಿಗೇ ಸೀಮಿತವಾಗಿದ್ದು 2012ರಲ್ಲಿ ದಲಿತರ ಮೇಲಿನ ಆಕ್ರಮಣಗಳು ಸೂಕ್ಷ್ಮ ರೀತಿಯಲ್ಲಿ ನಡೆದಿರುವುದನ್ನು ಗಮನಿಸಬಹುದು. ಉತ್ತರ ಭಾರತದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರ ಪೈಕಿ ಶೇ. 80ರಷ್ಟು ದಲಿತರೇ ಇರುವುದು ಇದಕ್ಕೆ ಸಾಕ್ಷಿ. ಜಾತಿ ಪ್ರಜ್ಞೆ ಗಟ್ಟಿಯಾಗುತ್ತಿರುವುದೇ ಅಲ್ಲದೆ ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುವ ನಿಣರ್ಾಯಕ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಜಾತಿ ದೌರ್ಜನ್ಯಗಳೂ ಸ್ವೀಕೃತ ವಿದ್ಯಮಾನಗಳಾಗುತ್ತಿವೆ. ಸಾಮಾಜಿಕವಾಗಿ ಭ್ರಷ್ಟವಾಗಿರುವ ಭಾರತೀಯ ಸಮಾಜದ ಧೋರಣೆಗಳು ಫ್ಯಾಸಿಸ್ಟರ ವೈಭವೀಕರಣಕ್ಕೆ ಎಡೆಮಾಡಿಕೊಡುತ್ತಿರುವುದು ಗತಿಸಿದ ವರ್ಷದಲ್ಲಿ ಕಂಡುಬಂದ ದುರಂತ. ಗೋದ್ರಾ ನಂತರದ ಘಟನೆಗಳನ್ನೇ ಮರೆಯುವ ಭಾರತೀಯ ಸಮಾಜ ದೆಹಲಿ ಘಟನೆಯನ್ನು, ಮಂಗಳೂರು ಘಟನೆಯನ್ನು ಮರೆಯುವುದಿಲ್ಲವೇ ?
ಏನೇ ಮರೆತರೂ ನಮ್ಮ ರಾಜಕೀಯ ನಾಯಕರ ಭ್ರಷ್ಟತೆಯನ್ನು ಮರೆಯಲಾದೀತೇ ? 2012 ಅತ್ಯಾಚಾರಿಗಳ ವರ್ಷ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಭ್ರಷ್ಟಾಚಾರಿಗಳ ವರ್ಷ ಎಂದು ಹೇಳುತ್ತಾರೆ. ಎರಡೂ ಒಪ್ಪುವಂತಹುದೇ. ಭ್ರಷ್ಟತೆಯ ಎಲ್ಲ ಆಯಾಮಗಳನ್ನೂ, ಭ್ರಷ್ಟಾಚಾರದ ವಿರಾಟ್ ಸ್ವರೂಪವನ್ನು ಭಾರತದ ಜನತೆಗೆ ಭಿನ್ನ ರೂಪದಲ್ಲಿ ಪ್ರದಶರ್ಿಸಿದ ಈ ದೇಶದ ಜನಪ್ರತಿನಿಧಿಗಳು ಒಂದು ರೀತಿಯಲ್ಲಿ ಅಭಿನಂದನಾರ್ಹರು. ಏಕೆಂದರೆ ಭವಿಷ್ಯವನ್ನು ರೂಪಿಸುವಾಗ ಭಾರತದ ಪ್ರಜೆಗಳು ಎಲ್ಲೆಲ್ಲಿ, ಎಷ್ಟೆಷ್ಟು ಎಚ್ಚರ ವಹಿಸಬೇಕು ಎಂಬುದನ್ನು ಮನದಟ್ಟು ಮಾಡಿದ್ದಾರೆ. ರಾಜಕೀಯ ಭ್ರಷ್ಟಾಚಾರ ಮುಗಿಲು ಮುಟ್ಟಿದರೂ ತಮ್ಮದೇನೂ ತಪ್ಪಿಲ್ಲ ಎಂದು ಮೆರೆದಾಡುತ್ತಿರುವ ಜನಪ್ರತಿನಿಧಿಗಳ ಧೋರಣೆಗೂ, ಮಹಿಳೆಯರು ಸತತವಾಗಿ ಅತ್ಯಾಚಾರಕ್ಕೊಳಗಾದರೂ ನಿಲರ್ಿಪ್ತರಾಗಿರುವ ಅತ್ಯಾಚಾರಿಗಳ ಧೋರಣೆಗೂ ವ್ಯತ್ಯಾಸವೇನಾದರೂ ಇದೆಯೇ ? ಅಪರಾಧ ಸಾಬೀತಾಗುವವರೆಗೂ ಆರೋಪಿ ತಪ್ಪಿತಸ್ಥನಲ್ಲ. ಹಾಗಾಗಿ ನ್ಯಾಯ ವಿತರಣೆಯಾಗುವವರೆಗೂ ಭಾರತದಲ್ಲಿ ಯಾರೂ ಅಪರಾಧಿಯಲ್ಲ. ಹೌದೇ ?
ಅಲ್ಲ, ಇಲ್ಲಿ ಎಲ್ಲರೂ ಅಪರಾಧಿಗಳು. ಸಮಸ್ತ ಭಾರತದ ಸಮಸ್ತ ಜನತೆಯೂ ಅಪರಾಧಿಗಳು. ಏಕೆಂದರೆ ನಾವು ಮೌಲ್ಯಗಳನ್ನು ಮರೆತಿದ್ದೇವೆ. ಸಾಮಾಜಿಕ ಮೌಲ್ಯಗಳು ನಶಿಸುತ್ತಿವೆ. ನೈತಿಕತೆ ಇನ್ನಿಲ್ಲವಾಗುತ್ತಿದೆ. ಮೌಲ್ಯಗಳನ್ನೂ ಘೋಷಣೆಗಳಲ್ಲಿ ಮುಳುಗಿಸಿ ಸ್ಥಿತಪ್ರಜ್ಞರಂತೆ ಮೆರೆಯುತ್ತಿದ್ದೇವೆ. ಎಲ್ಲವೂ ಸರಿಹೋಗುತ್ತದೆ ಎಂಬ ಗಾಢವಾದ ಭರವಸೆ, ಏನು ಮಾಡಿ ಏನು ಪ್ರಯೋಜನ ಎಂಬ ಸಿನಿಕತೆ ಎರಡೂ ಅಪಾಯಕಾರಿ ಧೋರಣೆಗಳು ಸಮಾಜವನ್ನು ನಿಷ್ಕ್ರಿಯಗೊಳಿಸುತ್ತಿದೆ. ಕೆಲವೊಮ್ಮೆ ಹೋರಾಟ ನಡೆಸುವವರೇ ಅಪರಾಧಿಗಳಾಗಿಬಿಡುತ್ತಾರೆ. ದನಿ ಎತ್ತಿದವರನ್ನು ದಮನಿಸುವ ಪ್ರಭುತ್ವದ ನೀತಿಗೆ ಪೂರಕವಾಗಿ ಜನರು ದನಿ ಎತ್ತದೆಯೇ ಮೌನ ವಹಿಸುತ್ತಿದ್ದಾರೆ. ಆದರೆ ದನಿ ಎತ್ತಬೇಕಿರುವುದು ಮೌಲ್ಯಗಳಿಗಾಗಿ. ಮಾನವೀಯ ಮೌಲ್ಯಗಳಿಗಾಗಿ. ಹೊಸ ವರ್ಷದಲ್ಲಿ ಈ ಸಂಕಲ್ಪ ಮಾಡೋಣವೇ ?
ಹೊಸ ವರ್ಷದಲ್ಲಿ ಈ ಸಂಕಲ್ಪ ಮಾಡೋಣವೇ?




ಖಂಡಿತ ಸಂಕಲ್ಪ ಮಾಡೋಣ!!