ನಮ್ಮಲ್ಲಿ ಯಾರೂ ಬಹಿರಂಗವಾಗಿ ನಾನು ಭಿನ್ನಲಿಂಗಿ ಎಂದು ಘೋಷಿಸಿಕೊಳ್ಳುವ ಧೈರ್ಯ ಮಾಡಿಲ್ಲ
ಹನುಮಂತ ಹಾಲಿಗೇರಿ
ತಿಂಗಳ ಹಿಂದೆ ಒಬ್ಬ ಹೊಚ್ಚ ಹೊಸ ಗೆಳತಿ ಸಿಕ್ಕಳು. ಆದರೆ, ಒಬ್ಬ ಗೆಳೆಯ ಕಣ್ಮರೆಯಾದ! ಅವತ್ತು ಬಾಗೀಲುಕೊಟೆಯ ಹುಟ್ಟೂರಿಗೆ ಹೋಗಿದ್ದ ನಾನು ಬೆಳಗ್ಗೆ ಕೆಲಸಕ್ಕೆ ಹಾಜರಿರಲೇಬೇಕಾದ ಒತ್ತಡದಲ್ಲಿ ಕಾರವಾರಕ್ಕೆ ಮರಳುತ್ತಿದ್ದೆ. ಸರಿ ರಾತ್ರಿ 11ಕ್ಕೆ ಹುಬ್ಬಳಿಯ ಹಳೆ ಬಸ್ ನಿಲ್ದಾಣದಲ್ಲಿ ಇಳಿದುಕೊಂಡರೆ ಕಾರವಾರಕ್ಕೆ ಹೊತ್ತೊಯ್ಯಲು ಯಾವ ಬಸ್ಸು ಇಲ್ಲ. ಒಂದು ಗಂಟೆ ಕಾಯ್ದರೆ ಪೇಪರ್ ಗಾಡಿ ಸಿಗುತ್ತೆ ಅಂತ ಯಾರೋ ಹೇಳಿದರು. ಕಾಯುವುದು ಅನಿವಾರ್ಯ. ಸರಿ ಅಂತ ಹುಬ್ಬಳಿ ಬಸ್ ನಿಲ್ದಾನದಲ್ಲಿನ ಆ ರಾತ್ರಿಲೋಕವನ್ನು ಕಣ್ತುಂಬಿಕೊಳ್ಳಲು ಅಡ್ಡಾಡತೊಡಗಿದೆ. ಆಗಲೇ ಸಿಕ್ಕಳು ನೋಡಿ. ಮನದಾಳಕ್ಕೆ ಇಳಿದು ಇನ್ನು ಕಾಡುತ್ತಲೇ ಇದ್ದಾಳೆ. ಹಾಯ್ ಹನುಮಂತ, ಆ ಮಾಧುರ್ಯಭರಿತ ಶಬುದ ಕೇಳಿ ಶಬ್ದವೇದಿಯಾಗಿ ನಾನು ಅವಸರದಿಂದ ಹಿಂದಿರುಗಿ ನೋಡಿದರೆ, ಜೀನ್ಸ್ ಪ್ಯಾಂಟ್, ಟೀಶರ್ಟ್ ನಲ್ಲಿ ಕಂಗೊಳಿಸುತ್ತಿದ್ದ ಅಗತ್ಯಕ್ಕಿಂತ ಹೆಚ್ಚೆ ಬಳಕುತ್ತ ನಿಂತಿದ್ದ ಯುವತಿ. ನಾನು ದಂಗಾಗಿ ಯಾರು ನೀನು ಎಂಬ ಪ್ರಶ್ನೆಯ ಕಣ್ಣೊಟ ಬೀರಿದೆ. ಯಾರು ನಾನು ಹೇಳು ನೋಡೋಣ. ಯಾರೆಂದು ಗೊತ್ತಾಗದೆ ನೆನಪುಗಳ ಪದರಗಳಲ್ಲಿ ಹುದುಗಿದೆ. ಉಹುಂ ಗೊತ್ತಾಗುತ್ತಿಲ್ಲ. ನಾನು ನಿನ್ನ ಕಾಲೇಜ್ಮೆಟ್ ತಕ್ಷಣವೇ ನನ್ನ ಕಾಲೇಜುಮೇಟ್ ಆಗಿದ್ದ ಹುಡುಗಿಯರೆಲ್ಲ ಬಂದು ಹೋದರು. ಹಳೇಶೈಲಿಯ, ಲಂಗದಾವಣಿಯಲ್ಲಿರುತ್ತಿದ್ದ ಮುಗ್ದೆಯರಾದ ನನ್ನಂತೆ ಹಳ್ಳಿಯಿಂದ ಬಂದ ಆ ಹುಡಿಗಿಯರಲ್ಲಿ ಜೀನ್ಸ್ ರಾಣಿಯಾಗಿದ್ದ, ಅಥವಾ ಆಗುವ ಲಕ್ಷಣಗಳನ್ನು ತೋರುವ ಒಂದೆ ಒಂದು ಹುಡುಗಿಯ ಮುಖವೂ ನನ್ನ ಸ್ಮೃತಿ ಪಟಲದ ಮುಂದೆ ಬರಲಿಲ್ಲ.
ಸೋತು ಸುಣ್ಣವಾಗಿ ಬಸವಳಿದು, ಆ ಸರಿರಾತ್ರಿಯಲ್ಲಿ ಹುಡುಗಿಯೊಂದು ಮಾತಾಡಿಸುತ್ತಿದ್ದರೆ ನನ್ನ ಮಾನ ಮರ್ಯಾದೆ ಏನಾಗಬಹುದೆಂದು ಭಯಗೊಂಡು ‘ಐ ಡೊಂಟ ನೋ, ಹೂ ಆರ್ ಯೂ’ ಪ್ಲೀಸ್ ಲಿವ್ ಮಿ ಅಲೋನ್’ ಎಂಬೆರಡು ಇಂಗ್ಲೀಷ್ ವಾಕ್ಯಗಳನ್ನು ಜೋಡಿಸಿಕೊಂಡು ಅವಳ ಮೇಲೆ ಸಿಡುಕಿದೆ. ಅವಳೊ ನನ್ನ ಕಾಲೇಜು ಕಾಲದ ತುಂಟಾಟದ ನೆನಪುಗಳನ್ನು ತನ್ನ ಪ್ಲ್ಯುಯೆಂಟಾದ ಇಂಗ್ಲಿಷ್ ವಾಕ್ಯ ಸರಣಿಗಳನ್ನಾಗಿ ಮಾಡಿಕೊಂಡು ಒಂದಾಂದ ಮೇಲೊಂದು ನನ್ನ ಮೇಲೆ ಎಸೆಯತೊಡಗಿದಳು. ಅವಳು ಮಾತು ಅರ್ಥವಾದರೂ ಅದಕ್ಕೆ ಪ್ರತ್ಯುತ್ತರ ನೀಡಲು ವಾಕ್ಯ ಜೋಡಿಸಿಕೊಳ್ಳಲು ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ಮತ್ತೆ ಕನ್ನಡಕ್ಕೆ ಮರಳಿ ಎಂದು ಅವಳಲ್ಲಿ ವಿನಂತಿಸಿಕೊಳ್ಳುವುದು ಅನಿವಾರ್ಯವಾಯಿತು. ಪಾಪ, ಅವಳು ಹೈರಾಣಾಗಿರಬೇಕು. ನಾನು ಯಾರೆಂದು ನೆನಪಾದ ಮೇಲೆ ಫೋನ್ಮಾಡಿ ಹನ್ಮಂತು ಅಂತ ನಂ. ವಿನಿಮಯ ಮಾಡಿಕೊಂಡು ಅಲ್ಲಿಂದ ಕಾಲ್ಕಿತ್ತು ನನ್ನನ್ನು ನಿರಾಳಗೊಳಿಸಿದಳು. ಆದರೆ, ಅವಳ್ಯಾರು ಎಂಬುದನ್ನು ತಿಳಿದುಕೊಳ್ಳಬೇಕೆಂಬ ಹುಕಿ ಹುಟ್ಟಿ ಚಿಗಿತು ಇನ್ನಿಲ್ಲದಂತೆ ಬಾಧಿಸತೊಡಗಿತು. ಮೊಬೈಲ್ನೆಲ್ಲ ತಡಕಾಡುತ್ತಾ ಇದ್ದಬಿದ್ದ ಕಾಲೇಜುಮೇಟ್ಗಳ ನಂ.ಗಳಿಗೆ ಕರೆ ಮಾಡಿ ನಾನು ಅನುಭವಿಸಿದ ಪಜೀತಿಯನ್ನು ರೀಪಿಟಾಗಿ ರೀಪಿಟು ಮಾಡಿ ಕೊನೆಗೂ ಅವಳ್ಯಾರೆಂದು ಪತ್ತೆ ಹಚ್ಚಿಯೇ ಬಿಟ್ಟೇ. ಗೊತ್ತಾಗಿ ಮತ್ತಷ್ಟು ತಳಮಳಕ್ಕೆ ಬಿದ್ದೆ. ನನ್ನೊಬ್ಬ ಬಾಲ್ಯದ ಗೆಳೆಯನೊಬ್ಬನನ್ನು ಸಾಯಬಡಿದು ಅಲ್ಲಿ ಈ ರೀನಾ ನಿಂತಿದ್ದಳು.
ಹಾಸ್ಟೇಲ್ ಮೇಟ್, ಕಾಲೇಜುಮೇಟ್ ಎಲ್ಲವೂ ಆಗಿದ್ದ ಯಂಕನೇ ಈಗ ರೀನಾ ಆಗಿದ್ದ(ಳು). ಕಾಲೇಜಿನಲ್ಲಿ ಯಾರೊಂದಿಗೂ ಅಷ್ಟಾಗಿ ಬೆರೆಯದೆ, ಆತ್ಮೀಯರಾಗಿಬಿಟ್ಟರೆ ತನ್ನದೆಲ್ಲವನ್ನೂ ದಾನ ಮಾಡುವ, ಪರರ ಕಷ್ಟಗಳಿಗೆ ನೆರವು ನೀಡುವ, ದುಖಃಗಳಿಗೆ ಮರಗುವ ಹಳ್ಳಿಯ ಸಪ್ಪೆ ಸಪ್ಪೆ ಕಚ್ಚಾ ಹುಡುಗ ಯಂಕಣ್ಣ ಗೊಂಡೆ ಮಾರ್ಡನ್ ಕಾಲದ ರೀನಾ. ಯಂಕಣ್ಣನಿಗೆ ಎಲ್ಲವೂ ಇತ್ತು. ಅಕ್ಕ, ತಮ್ಮ, ಹೊಲ ಮನೆ, ಅವ್ವ ಅಪ್ಪ, ಎಲ್ಲವನ್ನೂ ತೊರೆದು ಮಧ್ಯರಾತ್ರಿ ಬುದ್ಧನಂತೆ ಎದ್ದು ತನ್ನ ಅಸ್ತಿತ್ವ ಹುಡುಕ ಹೊರಟು ರೀನಾ ಆಗಿದ್ದ. ಇದಾಗಿ ವಾರೊಪ್ಪತ್ತಿನಲ್ಲಿಯೇ ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ ಎಂದು ಸುಪ್ರೀಂ ಕೋರ್ಟ್ ನ ಆದೇಶ ಹೊರಬಿದ್ದಿದೆ. ಯಾಕೋ ರೀನಾ ಹೆಚ್ಚೆಚ್ಚು ನೆನಪಾಗುತ್ತಿದ್ದಾಳೆ. ಕೆಂಗುಲಾಬಿಯ ಹುಡುಕಾಟದಲ್ಲಿದ್ದಾಗಲೇ ನನಗೆ ರೀನಾ ರೀಟಾರಂತ ಹತ್ತಾರು ಜನ ಆತ್ಮೀಯರಾಗಿ ತಮ್ಮ ಬದುಕನ್ನು ತೆರೆದಿಟ್ಟಿದ್ದಾರೆ. ಕೆಂಗುಲಾಬಿಯ ಶಾರಿಯರನ್ನು ಪರಿಚಯಿಸಿದ್ದಾರೆ. ಹೇಳಲು ಹೊರಟರೆ ಎಷ್ಟೊಂದು ಜನರಿದ್ದಾರೆ. ಸ್ವಚ್ಚ ಸುಂದರ ಬದುಕು ಕಟ್ಟಿಕೊಂಡು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ದುಡಿಯುತ್ತಿರುವ, ಜೊತೆಗೆ ಕೋಮುವಾದ, ಜಾತಿಯತೆ, ಸ್ತ್ರೀಶೋಷಣೆಯಂಥವುಗಳ ವಿರುದ್ಧವೂ ಗಟ್ಟಿ ದ್ವನಿ ಎತ್ತುತ್ತಿರುವ ಅಕೈ ಪದ್ಮಶಾಲಿ, ರಾಜಕೀಯ ಹಕ್ಕುಗಳಿಗಾಗಿ ವೀಣಾ, ಪ್ರಿಯಾಂಕಾ, ಜಮುನಾ, ನಯನಾ ನೆನಪಿಸುತ್ತಾ ಹೋದರೆ ಹಂಗಂಗೇ ಅವರ ಖುಷಿ ಹೊತ್ತ ಮುಖಗಳು ನೆನಪಿಗೆ ಬರುತ್ತಿವೆ. ಅವರದೆ ಒಂದು ಲೋಕ.
ಅವರದೆ ಒಂದು ಸಂಸ್ಕೃತಿ. ಕೆಂಗುಲಾಬಿ ಬರೆದಾದ ಮೇಲೆ ಈ ಲೋಕದ ಬಗ್ಗೆಯೇ ಕೃತಿ ಬರೆಯಬೇಕೆಂದು ಹತ್ತಾರು ಜನರ ಮಾತಾಡಿಸಿ ಟಿಪ್ಪಣಿಗಳನ್ನು ಮಾಡಿಟ್ಟುಕೊಂಡಿದ್ದೇನೆ. ಕಚ್ಚಾ ಆಡಿಯೋ, ವಿಡಿಯೋ ಸಂದರ್ಶನಗಳು ದೂಳು ತಿನ್ನುತ್ತಿವೆ. ಕಾದಂಬರಿಯನ್ನೆ ಬರೆಯಬೇಕೆಂದವನಿಗೆ ಸಾವಿರ ಶಬ್ದಗಳಲ್ಲಿ ಲೇಖನ ಬರೆದುಕೊಡೆಂದರೆ ಯಾವುದನ್ನು ಹಿಡಿಯಲಿ, ಯಾವುದನ್ನು ಬಿಡಲಿ. ಇಲ್ಲಿ ಸಿಕ್ಕಷ್ಟೆ ಶಿವಾಯ ನಮಃ. ಸಲಿಂಗ ಕಾಮ ತಪ್ಪು, ಸರಿ ಅಂತ ನಾನು ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ಅದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ನಡೆಯುತ್ತಲೇ ಇದೆ. ಮೂಲ ಏಲ್ಲಿ ಎನು ಎಂಬುದನ್ನಷ್ಟೆ ನನ್ನ ಅರಿವಿಗೆ ಬಂದಷ್ಟು ಇಲ್ಲಿ ಸುಲಿದಿಡುತ್ತಿದ್ದೇನೆ. ಸಮಾಜ ಬಹಿಷ್ಕರಿಸುವ, ಅದೋಲೋಕವೆಂದೆ ಪರಿಗಣಿಸುವ ಈ ವಿಚಿತ್ರ ಅಸ್ತಿತ್ವದಲ್ಲಿ ಅವರೆಲ್ಲ ಯಾಕಾದರೂ ಗುರುತಿಸಿಕೊಳ್ಳುತ್ತಾರೆ. ಇದು ನನ್ನ ಮತ್ತು ನಿಮ್ಮ ಪ್ರಶ್ನೆಯಷ್ಟೆ ಅಲ್ಲ. ಇದು ಅವರದು ಕೂಡ. ಉದ್ದೇಶಪೂರ್ವಕವಾಗಿ ಈ ಲೋಕವನ್ನು ಅವರ್ಯಾರು ಪ್ರವೇಶಿಸುವುದಿಲ್ಲ. ಪ್ರವೇಶಿಸಲು ಅವರ ಮೇಲೆ ಯಾರ ಒತ್ತಡವೂ ಇರುವುದಿಲ್ಲ. ಅದು ನಿಸರ್ಗವೇ ಅವರ ಮೇಲೆ ಹೇರುವ ಒತ್ತಡ. ಅವನೊಳಗೆ ಅವಳನ್ನು, ಅವಳೊಳಗೆ ಅವನನ್ನು ಯಾರೂ ಬಾಹ್ಯದಿಂದ ತುರುಕಲು ಸಾದ್ಯವೇ ಇಲ್ಲ. ಅವರು ಮೊದಲೆ ಸ್ಥಾಪಿತಗೊಂಡಿರುತ್ತಾರೆ. ಲೋಕದ ಪ್ರಜ್ಞೆ ಬಂದಂತೆಲ್ಲ ಎಚ್ಚರಾಗುವ ಅವಳೊಳಗಿನ ಅವನು ಅವನಾಗಿ ತೋರ್ಪಡಿಸಿಕೊಳ್ಳಲು, ಅವನೊಳಗಿನ ಅವಳು ಅವಳಾಗಿ ಬಿಚ್ಚಿಕೊಳ್ಳಲು ಹಾತೊರೆಯುತ್ತಾ ಹೋಗುತ್ತಾರೆ.
ಕೊನೆಗೊಂದು ದಿನ ಸಮಾಜದ ನೀತಿ ನಿಯಮಗಳಿಗೆ ಹೆದರಿ ನನ್ನ ಅಪ್ಪವ್ವಂದಿರಾದರೂ ಚನ್ನಾಗಿ ಮರ್ಯಾದೆಯುತವಾಗಿ ಬಾಳಲಿ ಎಂದು ಮಧ್ಯರಾತ್ರಿ ಮನೆ ಬಿಡುತ್ತಾರೆ. ಇಷ್ಟಾದ ಮೇಲೆಯೂ ಅವರಿಗೆ ಕುಟುಂಬದ ಹಪಾಹಪಿ, ಕೂಡಿ ಬಾಳಬೇಕೆಂಬ ಹಂಬಲ ಸಾಯುವವರೆಗೂ ಜೀವಂತವಾಗಿಯೇ ಇರುತ್ತದೆ. ಮನುಷ್ಯನನ್ನು ಒಳಗೊಂಡಂತೆ ಜಗತ್ತಿನ ಜೀವಗಳ ಲೈಂಗಿಕತೆಯು ಬಹಳ ಸಂಕೀರ್ಣವಾದುದು. ಕಣ್ಣಿಗೆ ಕಾಣುವ ಗಂಡು ಹೆಣ್ಣು ಎಂಬುದಕ್ಕಷ್ಟೆ ಅದು ಸೀಮಿತವಾಗಿಲ್ಲ. ದೇಹದ ಹೊರಗೆ ಮತ್ತು ಒಳಗೆ ಇರುವ ಜನನಾಂಗಗಳು, ಮನಸ್ಸಿನಲ್ಲಿ ಮೂಡವ ಭಾವನೆಗ ಳು, ದೇಹದೊಳಗಿನಿಂದ ಮತ್ತು ಹೊರಗಿನವರ ಲೈಂಗಿಕ ಪ್ರಚೋದನೆಗಳು, ದೇಹದಲ್ಲಿ ಸ್ರವಿಸುವ ಲಿಂಗಚೋದಕ ಹಾರ್ಮೋನುಗಳು, ತಂದೆ ತಾಯಿಯರಿಂದ ಪಡೆದ ಲಿಂಗ ನಿರ್ಧಾರಕ ಎಕ್ಸ್ ಮತ್ತು ವಾಯ್ ವರ್ಣತಂತುಗಳು, ಲೈಂಗಿಕ ಇಚ್ಚೆ ಆಸಕ್ತಿಗಳು, ಇವೆಲ್ಲವೂಗಳ ನಡುವಿನ ಹೊಂದಾಣಿಕೆಯೇ ಒಬ್ಬ ವ್ಯಕ್ತಿಯ ಲೈಂಗಿಕ ಬದುಕನ್ನು ನಿರ್ಧರಿಸುತ್ತವೆ. ಇಷ್ಟೊಂದು ಸಂಕೀರ್ಣ ಹೊಂದಾಣಿಕಯು ಹಲವು ವೈವಿದ್ಯಗಳಿಗೆ ತೆರೆದುಕೊಳ್ಳುವುದು ಸಹಜವಾಗಿದೆ ಎಂಬುದು ನನ್ನ ಅನಿಸಿಕೆ. ಕೆಲವರಲ್ಲಿ ಜನನಾಂಗಗಳ ಬೆಳವಣಿಗೆಯಲ್ಲಿ ತೊಡಕುಗಳಿರುತ್ತವೆ. ಈ ಎಲ್ಲ ಕಾರಣಗಳಿಂದ ಲಿಂಗ ರಚನೆ ಮತ್ತು ಲೈಂಗಿಕ ಮನೋಭಾವಗಳ ನಡುವೆ ಹೊಂದಾಣಿಕೆಯಿಲ್ಲದೆ ಅಂಥವರು ಸ್ಪಷ್ಟವಾಗಿ ಗಂಡು ಅಥವಾ ಹೆಣ್ಣೆಂದು ಗುರುತಿಸಿಕೊಳ್ಳಲು ಕಷ್ಟವಾಗುತ್ತದೆ.
ಜನನಾಂಗಗಳ ಅಪೂರ್ಣತೆ, ಒಳ ಮತ್ತು ಹೊರಗಿನ ಜನನಾಂಗಗಳು ತಾಳೆಯಾಗದಿರುವಿಕೆ, ಎರಡೂ ಲಿಂಗಗಳ(ದ್ವಿಲಿಂಗ) ಕ್ರಿಯಾಶೀಲತೆ ಈ ಎಲ್ಲ ಕಾರಣಗಳು ಸಹ ಸಲಿಂಗಿಗಳಾಗಲು ಕಾರಣವಾಗುತ್ತದೆ ಎಂಬುದನ್ನು ಗಮನಿಸಬೇಕು.ಈ ಎಲ್ಲ ಲೈಂಗಿಕತೆಯ ಮತ್ತು ದೈಹಿಕ ಸಂಕೀರ್ಣತೆಯಿಂದಾಗಿ ಲೈಂಗಿಕ ಆಸಕ್ತಿಗಳು ಬಹುರೂಪಿಗಳಾಗಿರುತ್ತವೆ. ಗಂಡು ಹೆಣ್ಣು ಪರಸ್ಪರ ಲಿಂಗಾಸಕ್ತಿ, ಗಂಡು-ಗಂಡು ಅಥವಾ ಹೆಣ್ಣು-ಹೆಣ್ಣುಗಳ ನಡುವಿನ ಸಲಿಂಗಾಸಕ್ತಿ, ಇವೆರಡನ್ನು ಹೊಂದಿರುವ ಉಭಯಲಿಂಗಾಸಕ್ತಿ ಹಾಗೂ ಇವ್ಯಾವದು ಇರದ ಅನಾಸಕ್ತಿಯೂ ಆಗಿರಬಹುದು. ಒಬ್ಬನ ಲೈಂಗಿಕ ಆಸಕ್ತಿಯು ಜೀವನ ಪರ್ಯಂತ ಒಂದೆ ಆಗಿರದೆ ಕಾಲಕಾಲಕ್ಕೆ ಬದಲಾಗಲೂಬಹುದು. ಇವೆಲ್ಲವೂ ಜೈವಿಕ ಪ್ರಕ್ರಿಯೆಗಳೇ ಹೊರತು ಆ ವ್ಯಕ್ತಿ ಸ್ವಂತವಾಗಿ ಹೇರಿಕೊಂಡ ಐಚ್ಚಿಕತೆಯಲ್ಲ. ಆದ್ದರಿಂದ ಇವುಗಳಲ್ಲಿ ಸರಿ ತಪ್ಪು, ನೈತಿಕ ಅನೈತಿಕ ಅಂತ ಹೇಗೆ ಹೇಳುವುದು. ಪರಲಿಂಗಾಸಕ್ತಿ ಹೆಚ್ಚು ಚಾಲ್ತಿಯಲ್ಲಿರುವುದರಿಂದ ಇನ್ನುಳಿದವುಗಳು ಅನೈತಿಕ, ವಿಕೃತ ಎನ್ನುವುದು ಸರಿಯೇ? ಇನ್ನೊಂದನ್ನು ನಾವು ನೆನಪಿಡಬೇಕು, ಈ ಭಿನ್ನ ಲೈಂಗಿಕ ಆಸಕ್ತಿಗಳನ್ನು ಯಾವುದೆ ಚಿಕಿತ್ಸೆ ಬದಲಿಸಲು ಸಾಧ್ಯವಿಲ್ಲ. ಒತ್ತಡದ ವಿಧಾನಗಳಿಂದ ಕೆಲವು ದಿನಗಳಮಟ್ಟಿಗೆ ಹತ್ತಿಕ್ಕಬಹುದಷ್ಟೆ. ಆದರೆ, ಹತ್ತಿಕ್ಕಿದಷ್ಟು ಅದು ಮುಂದೆ ವಿಕಾರವಾಗಿ ಸ್ಪೋಟಗೊಳ್ಳುವ ಸಾಧ್ಯತೆಗಳಿರುತ್ತವೆ. ಈ ಸಲಿಂಗ ಆಸಕ್ತಿಯನ್ನು ಬದಲಿಸಲು, ಹತ್ತಿಕ್ಕಲು ಸತತ ಪ್ರಯತ್ನಿಸುತ್ತಲೇ ಇರುವ ವೈದ್ಯಲೋಕ ಕೊನೆಗೆ ಸೋತು ತನ್ನ ನಿಲುವು ಬದಲಾಯಿಸಿಕೊಂಡು ಇದಕ್ಕೆ ಸಮಾಜ ಮಾನ್ಯತೆ ನೀಡಬೇಕೆಂಬ ಆಶಯವ್ಯಕ್ತಪಡಿಸಿದೆ.
ಮನುಷ್ಯರು ಸಂತಾನೋತ್ಪತ್ತಿಗಿಂತಲೂ ಹೆಚ್ಚಾಗಿ ಮೈ ಮನಗಳಿಗೆ ಸಿಗುವ ಸುಖಾನುಭವಕ್ಕಾಗಿ ಲೈಂಗಿಕತೆಯಲ್ಲಿ ತೊಡಗುತ್ತಾರೆ ಎನ್ನುವುದನ್ನು ನೆನಪಿಡಬೇಕು. ಕೆಲವರು ಈ ಸುಖಾನುಭವ ಸಲಿಂಗಿಗಳಿಂದ ಪಡೆಯುತ್ತಾರಷ್ಟೆ. ಭಾರತದ ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತದಲ್ಲಿ ಸಲಿಂಗಿಗಳಿಗೆ ಮಾನ್ಯತೆ ನೀಡಲಾಗಿದೆ. ಪ್ರಾಚೀನ ಭಾರತದಲ್ಲಿ ಮಾನ್ಯವಾಗಿದ್ದ ಲೈಂಗಿಕ ವೈವಿಧ್ಯತೆಯನ್ನು 1861ರಲ್ಲಿ ಬ್ರಿಟೀಷ್ ಸರಕಾರ ಕಾನೂನು ಅಪರಾಧಗಳ ಪಟ್ಟಿಗೆ ಸೇರಿಸಿತ್ತು. ಈಗ ಸುಪ್ರೀಂ ಕೋರ್ಟ್ ಆ ಕಾನೂನನ್ನೆ ಎತ್ತಿ ಹಿಡಿಯುವ ಮೂಲಕ ಸಮಾಜದ ಚಕ್ರ ಮತ್ತೆ ಹಿಂದಕ್ಕೆ ಚಲಿಸುವಂತೆ ಮಾಡಿದೆ. ವೈವಿಧ್ಯಮಯ ಲೈಂಗಿಕ ಆಸಕ್ತಿಯುಳ್ಳವರು ಮುಕ್ತವಾಗಿ ಬದುಕಲು ಸಾಧ್ಯವಾದರೆ ಅವರ ಮನೋದೈಹಿಕ ಆರೋಗ್ಯಗಳಷ್ಟೆ ಅಲ್ಲದೆ ಒಟ್ಟು ಸಮಾಜದ ಆರೋಗ್ಯ ಉತ್ತಮಗೊಂಡು ದೇಶದ ಅಭಿವೃದ್ದಿಗೆ ಚಲನೆಗೆ ಪೂರಕವಾಗುತ್ತದೆ. ಹಾಗಾಗಬೇಕು. ನನ್ನ ಮೊದಲಿನ ಎನ್ ಜಿ ಒ ಕೆಲಸ, ಈಗಿನ ಪತ್ರಿಕಾ ಕೆಲಸಗಳ ಓಡಾಟದಲ್ಲಿ ಎಷ್ಟು ಜನ ಭಿನ್ನಲಿಂಗಿಯ ಕಾರ್ಯಕರ್ತರನ್ನು ಬಲ್ಲೆ ನಾನು. ಎಷ್ಟು ಜನರೊಂದಿಗೆ ಒಡನಾಡಿಲ್ಲ. ನಾನು ಬಲ್ಲವರಲ್ಲಿ ಯಾರ ಮನದಲ್ಲೂ ಕಲ್ಮಶ ಕಾಣಲಿಲ್ಲ. ಕಣ್ಣಲ್ಲೂ ಕಾಮವೂ ಸುಳಿದಿಲ್ಲ. ಅದು ನನ್ನ ಕಣ್ಣಿನ ಪರಿಮಿತಿಯೋ ಗೊತ್ತಿಲ್ಲ.
ಏಳೆಂಟು ಸಾವಿರ ಸಂಬಳ ಎಣಿಸುವ ಈ ಗೆಳತಿಯರು, ಚಿಕ್ಕ ಬಾಡಿಗೆ ಮನೆಯಲ್ಲೆ ಚೊಕ್ಕದಾದ ಸಂಸಾರ ಕಟ್ಟಿಕೊಂಡಿದ್ದಾರೆ. ಲೋಕ ಮಾನ್ಯತೆ ನೀಡದಿದ್ದರೂ ಮನದ ಸಮಾಧಾನಕ್ಕಾಗಿ ಅರಿಸಿನ ಕೊಂಬು ಕಟ್ಟಿಕೊಂಡು ತಮ್ಮ ಸಮುದಾಯಗಳ ನಡುವೆ ಮದುವೆಯಾಗಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಖರ್ಚುವೆಚ್ಚಗಳ ಜೊತೆಗೆ ಮನೆಯ ಕಸಮುಸುರೆಯನ್ನು ಹಂಚಿಕೊಂಡು ತೃಪ್ತಿಯ ಬದುಕು ಕಟ್ಟಿಕೊಂಡಿದ್ದಾರೆ. ಗಂಡು ಸೀರೆಯುಟ್ಟು ಹೆಣ್ಣಾಗಿ ಗಂಡನ್ನೆ ಸಂಗಾತಿಯಾಗಿ ಸ್ವೀಕರಿಸಿದ ಜೋಡಿಗಳು ಒಂದುಕಡೆಯಾದರೆ, ಹೆಣ್ಣು ಪ್ಯಾಂಟ್ ಶರ್ಟ್ ತೊಟ್ಟು ಸೀರೆಯ ನಾರಿಯನ್ನು ಮದುವೆಯಾದ ಜೋಡಿಗಳು ನಮಗೆಲ್ಲ ವಿಚಿತ್ರ ಎನಿಸಿದರೆ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದಲ್ಲಿ ಅವೆಲ್ಲ ಮಾಮೂಲು ಸಂಗತಿಗಳು. ಅವರ ಲೋಕದಲ್ಲೂ ಹೊಂದಾಣಿಕೆಯಾಗದೆ ಡೈವೋರ್ಸ್ ಗಳು, ಜಗಳಗಳು ಇದ್ದೆ ಇರುತ್ತವೆಯಾದರೂ ನಮ್ಮೆಲ್ಲರ ಲೋಕದಲ್ಲಿ ಸದ್ದು ಮಾಡುವಂತೆ ಅವು ಸದ್ದು ಮಾಡುವುದಿಲ್ಲ. ಹಿಂದಿನದೆಲ್ಲ ಮರೆತು ಹೊಸ ಜೋಡಿಯೊಂದಿಗೆ ಅನೂನ್ಯವಾಗಿಯೇ ಬದುಕು ಸಾಗಿಸುತ್ತಾರೆ. ಸರಿಯಾದ ಜೋಡಿ ಸಿಗದೆ ನಿರಂತರ ಹುಡುಕಾಟದಲ್ಲಿಯೆ ಇರುವವರು ಇಲ್ಲಿ ಸಾಮಾನ್ಯ.ಸ್ನೇಹಿತೆಯರಾದ ಅಕೈ ಪದ್ಮಶಾಲಿ, ಪ್ರಜಾ ರಾಜಕೀಯ ವೇದಿಕೆಯ ವೀನಾ, ಸುಮತಿ, ರೇವತಿ, ಕ್ರಿಸ್ಟಿರಾಜ್, ಮಾಹಿ, ರಾಮಚಂದ್ರ, ಮುಂತಾದವರೆನ್ನೆಲ್ಲ ಈಗಿನ ಕಾನೂನಿನ ಪ್ರಕಾರ ಏನು ಎಂತು ಎಂದು ಕೇಳದೆಯೋ ಕಂಬಿ ಎಣಿಸುವಂತೆ ಮಾಡಬಹುದಾಗಿದೆ. ಈಗಾಗಲೇ ಪೊಲೀಸ್ ಬೂಟುಗಳ ಭಯದಲ್ಲಿ ಬಾಳುತ್ತಿರುವ ಇಂಥವರ ಮೇಲೆ ಮತ್ತಷ್ಟು ಪೊಲೀಸ್ ದೌರ್ಜನ್ಯ ಹೆಚ್ಚಲಿದೆ.
ಧರ್ಮ ರಕ್ಷಣೆಯ ಮುಖವಾಡ ತೊಟ್ಟವರು, ಪತ್ರಕರ್ತರು, ವಕೀಲರು ಮುಂತಾದವರೆಲ್ಲ ಇವರನ್ನೆಲ್ಲ ಮತ್ತಷ್ಟು ಇನ್ನಷ್ಟು ಸುಲಿದು, ಹಿಂಡಿ ಹಿಂಡಿ ಹಿಪ್ಪೆ ಮಾಡಬಹುದಾಗಿದೆ. ಈ ಎಲ್ಲ ಮಗ್ಗಲುಗಳಿಂದಲೂ ನಾವು ಸುಪ್ರೀಂ ಕೋರ್ಟ್ ನ ತೀರ್ಪನ್ನು ಎದುರುಗೊಳ್ಳಬೇಕಿದೆ. ಭಿನ್ನ ಲೈಂಗಿಕತೆಯ ಅಲೆಕ್ಸಾಂಡರ್, ಲಿಯುನಾರ್ಡೋ ಡಾವಿಂಚಿ, ಮೈಕೆಲಾಂಜೆಲೋ, ಎಲ್ಟನ್ ಜಾನ್, ರಿಕಿ ಮಾರ್ಟಿನ್ ಮುಂತಾದವರು ಅತ್ಯುತ್ತಮ ಸಾಧಕರಾಗಿದ್ದಾರೆ. ನಮ್ಮ ದೇಶದ ಸಾಧಕರಲ್ಲೂ ಒಂದಿಷ್ಟು ಗಣ್ಯರು ಭಿನ್ನ ಲೈಂಗಿಕಾಸಕ್ತಿಯನ್ನು ಹೊಂದಿದವರು ಆಗಿದ್ದಿರಲೂಬಹುದು. ಆದರೆ, ನಮ್ಮ ದೇಶದ ಸಂವಿಧಾನಾತ್ಮಕ ಕಾನೂನುಗಳಿಗಿಂತಲೂ ಸಾಮಾಜಿಕ ನೀತಿ ನಿಯಮಗಳು ಬಹಳಷ್ಟು ಬಿಗಿಯಾಗಿರುವುದರಿಂದ ಸಲಿಂಗಿಗಳನ್ನು ಅತ್ಯಂತ ಹೀನವಾಗಿ ಕಾಣುವುದರಿಂದ ನಮ್ಮಲ್ಲಿ ಯಾರೂ ಬಹಿರಂಗವಾಗಿ ನಾನು ಭಿನ್ನಲಿಂಗಿ ಎಂದು ಘೋಷಿಸಿಕೊಳ್ಳುವ ಧೈರ್ಯ ಮಾಡಿಲ್ಲ. ಮುಂದೆ…? ಗೊತ್ತಿಲ್ಲ.








haunting narration!