ಚೌಕಟ್ಟು ಮೀರಿದ ಚಿತ್ರಗಳು
-ಎಚ್.ಕೆ.ಶರತ್, ಹಾಸನ
ಚಿಂತೆ
ನಾಳೆಯ ನೋವಿಗೆ ಇಂದೇ ಮುಲಾಮು ತಿಕ್ಕಿಕೊಂಡ ಮನಸ್ಸು ಈ ಕ್ಷಣದಿಂದಲೇ ರೋಗಗ್ರಸ್ತವಾಗಿದೆ.
ನೋಟ
ತೀರ ಬದಲಾಗಿದೆ. ನೀರೂ ಹೊಸದಾಗಿದೆ. ನದಿಯ ರೂಪವದು ಹಾಗೆ ಇದೆ.
ಕಥೆ
ನಿಗಿನಿಗಿ ಸುಡುವ ಮಳೆ, ಬಿಡದೇ ಕಾಡುವ ಖುಷಿ, ಉಣ್ಣದೇ ತುಂಬುವ ಹೊಟ್ಟೆ… ಎಂದಿಗೂ ಅರ್ಥವಾಗದ ಕಥೆ ಹೇಳುತ್ತಿವೆ.
ವಿಪರ್ಯಾಸ
ಹಸಿವಿಗೆ ಬಹಿಷ್ಕಾರ ಹಾಕಿದ ಊರಲ್ಲಿ ಉಣ್ಣಲಾಗದ ನೋವು ತಾಂಡವವಾಡುತ್ತಿದೆ.
ಮಳೆ
ಕಾರಿನ ಚಕ್ರಕ್ಕೆ ಸಿಲುಕಿ ನಜ್ಜುಗುಜ್ಜಾಗಿ ಜೀವ ತ್ಯಜಿಸಿದ ಅಳಿಲಿನ ಶವಸಂಸ್ಕಾರ ನಡೆಯುತ್ತಿದೆ.
ಸಿರಿವಂತಿಕೆ
ಎಲ್ಲ ಇರುವವನನ್ನೂ ಕಾಡುವ ಅನಾಥ ಪ್ರಜ್ಞೆಗೆ ಉಳ್ಳವನು ಇಟ್ಟ ಹೆಸರು.
ಮಾತು
ನಾವಿಬ್ಬರೇ ಇದ್ದಾಗ ಇದ್ದ ಸಂಭ್ರಮ ಹೊರಗಿನ ಜಗತ್ತೂ ನಮ್ಮೊಳಗೆ ಇಳಿದಾಗ ಇದ್ದಿದ್ದರೆ ಈ ಕ್ಷಣದ ಬದುಕು ಹೀಗಿರುತ್ತಿರುಲಿಲ್ಲ.
]]>
Related
0 Comments