– ಸುಧಾ ಬಿ ಓ
ಸುಮ್ನೆ ಕೂತಿದ್ದೆ. ನೆನ್ನೆ ರಾತ್ರೀನೇ ನನ್ನ ಸ್ನೇಹಿತೆ ನಸ್ರಿನ್ ‘ನಾಳೆ ಕರ್ನಾಟಕ ರಾಜ್ಯೋತ್ಸವ’ ಅಲ್ವಾ ಅಂದಿದ್ಲು. ಅದು ಈಗ ನೆನಪಾಯ್ತು. ಹಾಗೇ ಕಣ್ಮುಚ್ಚಿದೆ. ಅಷ್ಟರಲ್ಲೇ ಮೈಸೂರು ರಾಜ್ಯೋತ್ಸವದ ಶುಭಾಶಯಗಳು ಎಂಬ ಮಾತು ಕೇಳಿಸ್ತು. ಕಣ್ಣು ಬಿಟ್ಟೆ. ಸುರೇಶ್ ಹೇಳಿದ್ದು ನನಗೇನೆ. ಸೂರಿ ನನ್ನ ಸ್ನೇಹಿತ. ಹೈದರಾಬಾದ್ ಕರ್ನಾಟಕದವನು. ಯಾಕೋ ಹಿಂಗೆ ಹೇಳಿದೆ ಅಂತ ಸಿಟ್ನಲ್ಲೇ ಕೇಳಿದೆ. ಅದ್ಕೆ ನಾವು ಹಿಂಗಲ್ವ ಅಂತ ಹೊರಗಿನವನು ಅನ್ನೋ ಭಾವನೇಲಿ ಮಾತಾಡ್ತ ಮತ್ತೆ ಶುಭಾಶಯ ತಿಳಿಸಿದ. ಆಗ ನೆನಪಾಯ್ತು.
ಇತ್ತೀಚಿನ ದಿನಗಳಲ್ಲಿ ಹೈದರಾಬಾದ್ ಕರ್ನಾಟಕದ ಬಗ್ಗೆ ಬರ್ತಕಂತ ಸುದ್ಧಿಗಳು. ವಿದ್ಯಾಭ್ಯಾಸದಲ್ಲಿ ಹಿಂದೆಯಿದೆ, ಅಪೌಷ್ಟಿಕತೆ ಹೆಚ್ಚಿದೆ, ಅಭಿವೃದ್ಧಿ ಕಾರ್ಯಗಳು ಸರಿಯಾಗಿ ಆಗಿಲ್ಲ. ಹೀಗೆ….. ಸಾಲು ಸಾಲು ಸಮಸ್ಯೆಗಳು. ಸಮಸ್ಯೆಗಳ ಕುರಿತು ಲೇಖನಗಳು ಕಣ್ಮುಂದೆ ಬಂದವೋ ಹೊರತು ಪರಿಹಾರ ಸಿಕ್ಕಿದ, ಅಭಿವೃದ್ಧಿಯಾಗಿದ್ದ ಲೇಖನಗಳು ಕಣ್ಮುಂದೆ ನೆನಪಿಗೆ ಬರಲೇ ಇಲ್ಲ.
ನಮ್ಗೆಲ್ಲಾ ಕನ್ನಡ, ಕರ್ನಾಟಕ ಅಂದ್ರೆ ಮೈಸೂರು ನೆನಪಾದಷ್ಟು, ಗುಲ್ಬರ್ಗನೋ, ರಾಯಚೂರೋ, ಹಂಪಿನೋ, ಮತ್ತೊಂದೋ ನೆನಪಾಗುವುದಿಲ್ಲ. ಏನೇ ಆಗ್ಲಿ. ಕನ್ನಡ, ಕರ್ನಾಟಕ ರಾಜ್ಯೋತ್ಸವಂತೆ. ನಾನು ಕನ್ನಡ ಎಂ.ಎ. ಅಭಿಮಾನ ಇದೆ. ಆಚರಣೆ ಮಾಡೋಕೆ ಇಷ್ಟ ಪಟ್ನೇ ಹೊರತು ಅದರೊಳಗಿನ ಯಾವ ವಿಚಾರನೂ ತಿಳಿಯಲು ಯತ್ನಿಸಲಿಲ್ಲ. ಇಂದು ಕನ್ನಡದ ಸ್ಥಿತಿ ಏನೆಂದು ಗೊತ್ತಾಗ್ತಿದೆ. ಆದರೂ….. ಹಿಂದೆ ಏಕೀಕರಣಕ್ಕಾಗಿ ಹೋರಾಡಿದರು. ಒಡೆದು ಹೋಗುತ್ತಿದ್ದ ಕರ್ನಾಟಕವನ್ನು ಭಾಷೆ, ರಾಜ್ಯದ ಹೆಸರಿನಲ್ಲಿ ಒಂದುಗೂಡಿಸಿದರು. ಒಂದು ಮಾಡುವುದಷ್ಟೇ ಕೆಲಸ. ಆಯ್ತಲ್ಲ. ಸುಮ್ಮನಾದ್ರು.
ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಮೃದ್ಧವಾದ ಸಾಹಿತ್ಯ ರಚನೆಯಾಗಿದೆ. 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಹೆಸರಾಂತ ಲೇಖಕರಿದ್ದಾರೆ. ರಸಋಷಿಗಳ ತವರೂರು ಕನ್ನಡ ನಾಡು. ದೇಶದ ಯಾವ ಭಾಗದಲ್ಲೂ ಆಗದ ವಚನ ಸಾಹಿತ್ಯ, ಶರಣ ಚಳುವಳಿ ಹುಟ್ಟಿದ್ದು ಕರ್ನಾಟಕದಲ್ಲಿ, ಕನ್ನಡದಲ್ಲಿ. ಆಡು ಮಾತಿಗೊಂದು ಅಸಾಮಾನ್ಯ ಶಕ್ತಿ ಬಂದದ್ದು ಕರ್ನಾಟಕದಿಂದ, ಕನ್ನಡದಿಂದ. ಇವನೆಲ್ಲಾ ನೆನಪು ಮಾಡ್ಕಳ್ತಿದ್ರೆ? ಅಬ್ಬಾ! ವಿಶ್ವ ಮಾನವ ಸಂದೇಶ, ಮಾನವ ಜಾತಿ ತಾನೊಂದೆ ವಲಂ ಎಂತಾ ವಿಚಾರಶೀಲ ಮಾತುಗಳು. ಸೃಜನಶೀಲತೆಗೆ ಸ್ಪಷ್ಟ ಸಾಕ್ಷಿಗಳಿವು. ಶಾಸ್ತ್ರೀಯ ಸ್ಥಾನಮಾನ ದೇಶದ ಅಧಿಕೃತ ಭಾಷೆಯೆಂಬುದಕ್ಕೆ ನೋಟಿನೊಳಗೊಂದು ಸ್ಥಾನ. ಏನಿಲ್ಲ ಕನ್ನಡಕ್ಕೆ. ಏನೆಲ್ಲಾ ಇದೆ ಕನ್ನಡಕ್ಕೆ…. ನೆನಪಾಗ್ತಾಯಿದೆ.
ಕರ್ನಾಟಕದ ಹೆಸರಿನೊಳಗೆ ಕರ್ನಾಟಕದ ಎಷ್ಟೋ ಭಾಗಗಳು ಉದ್ಧಾರವಾಗಿಲ್ಲ. ಆದರೆ ಏಕೀಕರಣದ ದಿನದ ಆಚರಣೆ ನಿರಂತರವಾಗಿ 58 ವರ್ಷಗಳ ಇತಿಹಾಸದೊಟ್ಟಿಗೆ ನಡೆದುಕೊಂಡು ಬಂದಿದೆ. ಕನ್ನಡ ನಾಡಭಾಷೆಯಾದರೂ ಅದರ ಸ್ಥಾನವೇನು? ಎಲ್ಲೆಲ್ಲೂ ಆಂಗ್ಲಮಯ. ಇನ್ನೆಲ್ಲಿ ಕನ್ನಡ? ಮಾಯ. ಕನ್ನಡ ಕನ್ನಡಿಯೆದುರು ನಿಂತಾಗ ಎಲ್ಲಿದ್ದೇನೆ ಎಂದು ಹುಡುಕಿದಾಗ ಸಿಗುವುದಿಷ್ಟೆ! ಎದೆಹಾಲು ಕುಡಿಯುವಾಗ ಕಂದ, ತಾಯ ಮೊಗವ ಕಂಡು ನಕ್ಕು ‘ಅಮ್ಮಾ’ ಎನ್ನುವಾಗ(ಅದೂ 2,3 ವರ್ಷ ಮಾತ್ರ ), ಕನ್ನಡ ಸರ್ಕಾರಿ ಶಾಲೆಗಳಲ್ಲಿ, ಏನ್ಮಾಡ್ಲಿ ಅವ್ನು ಮುಚ್ಚೊದಿಕ್ಕೆ ಓಡಾಡ್ತಿದ್ದಾರೆ, ಕನ್ನಡಾನ ಪ್ರೀತಿಸಿ ಅದನ್ನ ಓದೋ ವಿದ್ಯಾರ್ಥಿ ಗಳಲ್ಲಿ, ವಿಶೇಷವಾಗಿ ಇಂಗ್ಲೀಷ್ ಪೇಲಾದವರಲ್ಲಿ. ಕನ್ನಡಕ್ಕಾಗಿ ಹುಟ್ಟಿಕೊಂಡ ಸಂಘ ಸಂಸ್ಥೆಗಳಲ್ಲಿ. ಅದರ ಅಧ್ಯಕ್ಷರುಗಳಲ್ಲಿ( ಅವ್ರ ಮಕ್ಕಳಲ್ಲಿ ಇಲ್ಲಾ ಸ್ವಾಮಿ. ಅವ್ರು ಇಂಗ್ಲೀಷ್ ಮೀಡಿಯಂ), ಕನ್ನಡ ಸಾಹಿತ್ಯ ಪರಿಷತ್ನಲ್ಲಿ.
ಅತಿಯಾಗಿ ಪ್ರೀತಿ ಹೆಚ್ಚಾದಾಗ ಒಂದಷ್ಟು ಕಾರ್, ಬೈಕ್ ನಂಬರ್ಗಳಲ್ಲಿ. ಮೊಬೈಲ್ ಬಳಕೆ ಬಾರದ, ಇಂಗ್ಲೀಷ್ ತಿಳಿಯದ 5ನೇ ತರಗತಿ ಓದಿದ ಹಳ್ಳಿಯ ರೈತನಲ್ಲಿ. ಕಾರಣ ಅವನು ಆಧುನಿಕತೆಯ ಓಟಕ್ಕೆ ಸಿಲುಕಿ ಸಂರ್ಪಕಕ್ಕೆಂದು ತನ್ನ ವ್ಯಾಪಾರಿಯ ಹೆಸರನ್ನು ಕನ್ನಡದಲ್ಲಿ ಸೇವ್ ಮಾಡಿಕೊಂಡದ್ದಕ್ಕೆ. ಪ್ರೀತಿ. ಪ್ರೇಮದ ಬಲೆಗೆ ಸಿಲುಕಿದಾಗ ಹುಟ್ಟುವ ರಸಿಕತೆಯ ಕವನಗಳಲ್ಲಿ, ವಿರಹದ ಗೀತೆಗಳಲ್ಲಿ. ವಿಶ್ವವಿದ್ಯಾಲಯಗಳಲ್ಲಿನ ಕನ್ನಡ ವಿಭಾಗಗಳಲ್ಲಿ.( ಅಲ್ಲೂ ಕೆಲವರಲ್ಲಿ), ಬಸ್ ಚಾಲಕರು, ಕಂಡಕ್ಟರ್ಗಳೂ ಕನ್ನಡಕ್ಕೆ ಮನಸೋತು ಇರುವುದೆಲ್ಲವ ಬಿಟ್ಟು, ಬಾರೆನೆಂಬುದನ್ನು ಬಿಡು. ಹರುಷಕ್ಕಿದೆ ದಾರಿ, ಅಂಗವಿಕಲರಿಗಾಗಿ ಎಂದು ಬರೆದಿರುವುದರಲ್ಲಿ. ಹುಚ್ಚು ಕನ್ನಡ ಸಿನಿಮಾ ಪ್ರೇಮಿಗಳಲ್ಲಿ. ಹಳೆಯ ಹಾಡುಗಳ ಸಾಲುಗಳಲ್ಲಿ. ಕನ್ನಡದ್ದೇ ಎಂದು ಖಚಿತ ಪಡಿಸಿಕೊಂಡು ಇಟ್ಟುಕೊಂಡ ಹೆಸರುಗಳಲ್ಲಿ. ನೂರಕ್ಕೆ ಹತ್ತೋ,ಐದೋ ಭಾಗದಷ್ಟು ಅಂಗಡಿಗಳ ಬೋರ್ಡ್ ಗಳಲ್ಲಿ.( ಒತ್ತಾಯಕ್ಕೊ, ಮಾಲೀಕರ ಆಸೆಗೋ ಇಟ್ಟಿದ್ದಕ್ಕೆ) ……..
ಇನ್ನೂ ಕೆಲವು ಕಡೆ ಇರಬಹುದು.ನೆನಪಿರಲಿ ಕೆಲವು ಕಡೆ ಮಾತ್ರಾರೀ……. ಎಲ್ಲಾ ಕಡೆ ಅಲ್ಲಾ..
ಕನ್ನಡ, ಕರ್ನಾಟಕ ನಮ್ದು. ನಾನು ಕನ್ನಡಿಗ ಕನ್ನಡ ಓದುತ್ತೇನೆ ಎಂದು ಇಷ್ಟಪಟ್ಟು ಓದಿದವರು ಎಷ್ಡೋ ಜನರಿದ್ದಾರೆ. ಆದ್ರೆ ಕೆಲಸ ಸಿಕ್ಕಿಲ್ಲ…. ಇದೊಂದು ಸಾಕು… ಹೀಗೆಯೇ ನೆನಪಿಸಿಕೊಳ್ಳುತ್ತಾ ಹೋಗಿ. ಕರ್ನಾಟಕದ ಏಕೀಕರಣ ನಿಜವಾದ ಅರ್ಥದಲ್ಲಿ ಆಗದಿದ್ದರೆ ಕನ್ನಡ ಭಾಷೆ ಗಟ್ಟಿಯಾಗಿ ನೆಲೆಗೊಳ್ಳದಿದ್ದರೆ ತುತ್ತಾಗಲಿವೆ ತುತ್ತಿನ ಚೀಲಗಳು.
ರಾಜ್ಯೋತ್ಸವದ ದಿನ ಮಾತ್ರ ಇದ ನೆನೆಯದೆ, ನವೆಂಬರ್ 1 ಮಾತ್ರ ಕನ್ನಡದ ದಿನವಾಗದೆ ಎಲ್ಲ ದಿನವೂ ಕರ್ನಾಟಕದ, ಕನ್ನಡದ ಅಭಿವೃದ್ಧಿಯ ದಿನಗಳಾಗಬೇಕು. ಆಚರಣೆಯ ಹೆಸರಿನಲ್ಲಿ ಅದ್ಧೂರಿ ಮೆರವಣಿಗೆ, ಊಟ, ಉಪಚಾರ, ಕಾರ್ಯಕ್ರಮಗಳು, ಪ್ರಶಸ್ತಿಗಳ ಪುರಸ್ಕಾರ ನೆರವೇರಿದರೆ ಸಾಲದು.





VERY GOOD
ಗೌರವಿತ ಶ್ರೀಮತಿ ಸುಧಾ ಬಿ. ಒ.
ಕನ್ನಡ ರಾಜ್ಯೋತ್ಸವವನ್ನು ಕುರಿತು ರಚಿಸಿರುವ ನಿಮ್ಮ ಪ್ರಭಂಧ(essay) ನಿಮ್ಮ ಅತ್ಯಂತ ಅದಿಕವಾದ ಕನ್ನಡ ಪ್ರೇಮ ಎತ್ತಿ ತೋರುದು. ನಿಮ್ಮಂತ ಕನ್ನಡಪ್ರೇಮಿಗಳು ಇರುವವವರೆಗೆ ಕನ್ನಡಭಾಷೆಯ ಸಂಋದ್ಧಿಗೆ ಚಿಂತೆ ಮಾಡುವ ಕಾಲವಿರದು, ಬರದು. ಆದರೆ ನಿಮ್ಮಂಥ ಅಚ್ಛ ಕನ್ನಡಪ್ರೇಮಿಗಳು ಎಷ್ಟು ಮಂದಿ ಇರುವರು? ನಿಜವಾಗಿ ಅದು ಒಂದು ವ್ಯಥಿಸುವಂತ ಶೋಕಮಯ ಮಹಾ ವಿಷಯ. ’ಲೇಖಕ’ರೆಂದು ಅಂತರ್ಜಾಲದಲ್ಲಿ ಪ್ರಸಿದ್ಧಿಯಾಗಿರುವ ಅನೇಕ ಬರಹಗಾರರು ಕೂಡ ಅಚ್ಛ ಕನ್ನಡಕ್ಕೆ ವಿಕೃತ ಅಗೌರವತೆಯ ನಿರ್ದಯನಿರ್ದಾಕ್ಷೀಣ್ಯ ತೋರಿ ಜಾರಜ ಕ್ಂಗ್ಲಿಷ್‍ನಲ್ಲಿ ಬರೆಯುತಿದ್ದಾರೆ. ಅತಿ ಅಪರೂಪವಾಗಿ ಆಗೊಂದು ಈಗೊಂದು ಬಾರಿ ಅಚ್ಛ ಕನ್ನಡ ಲೇಖನವೊಂದು ಪ್ರಕಟನೆಯಾಗುತ್ತದೆ. ಆಂಥಃ ಶೋಕಮಯ ಪರಿಸ್ಥಿತಿಯಲ್ಲಿ ಕನ್ನಡೋದ್ದಾರಕ್ಕೆ ಕಿಟಕಿಯ ಕಿರುಬೆಳಕಿನ ಕಿರಣ ನೋಟ ಕೂಡ ಕಾಣದು. ನಿಜವಾಗಿ ಸಿರಿಗನ್ನಡಭಾಷೆಯನ್ನು ಅಮೇರಿಗನ್ನಡಿಗರು ಮತ್ತು ನವ ಲೇಖಕರು ಕಂಗ್ಲಿಷ್ ಕಳಂಕ ಸುರಿದು ಬೆರೆಸಿ ಲಜ್ಜೆ ಇಲ್ಲದ ಅಪಕೀರ್ತಿಯ ಅಪಮಾನ ಮಾಡುತ್ತಿರುವರು. ಅಂತವರು ತಮ್ಮ ತಲೆಯಲ್ಲಿ ಮಿಂಚುವ ಇಂಗ್ಲಿಷ್ ಮಾತುಗಳಿಗೆ ಸರಿಸಮನಾದ ಕನ್ನಡದ ತರ್ಜುಮೆ ಮಾತು ಕನ್ನಡ-ಇಂಗ್ಲಿಷ್ ನಿಘಂಟಿನಲ್ಲಿ ನೋಡಿಕೊಂದು ಬಳಸಲು ಸೋಮಾರಿತನಕ್ಕೆ ಸೋತು ಸಿರಿಗನ್ನಡವನ್ನು ಹಾಳುಮಾಡುತ್ತಿರುವರು.
ಕನ್ನಡ ರಾಜ್ಯೋತ್ಷವಕ್ಕೆ ಬರೆದ ಈ ನಿಮ್ಮ ಪ್ರಭಂಧ ಸೊಗಸಾದ ಪರಿಶುದ್ಧ ಕನ್ನಡ. ಆದಕ್ಕೆ ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.
ಪರದೇಶಿ ಕನ್ನಡಿಗನ ಸ್ಕಾಲಿತ್ಯಗಳಿಗೆ ಕ್ಷಮೆ ಕೋರುತ್ತೇನೆ.
ವಿಜಯಶೀಲ
೦೮೧೧೨೦೧೩
mavipra@gmx.de
ನಮಸ್ತೆ ಚೆನ್ನಾಗಿದ್ದೀರೆಂದು ಭಾವಿಸುತ್ತಾ… ನಾನು ಇನ್ನು ಮದುವೆ ಆಗಿಲ್ಲ.ಶ್ರೀಮತಿ ಅಲ್ಲ ಶೀಲರವರೆ.ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಭ್ಯಾಸ ಮಾಡುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಖುಷಿಯಾಯ್ತು ಓದಿ.
right way to observation but i think some point are enabling than this.
ಮದುವೆಯಾದರೆ ಮಾತ್ರ ಶ್ರೀಮತಿ ಅಂತ ಅಲ್ಲ, ೧೮ ವರ್ಷ ಆದ್ರೆ ಸಾಕು, ಆದವರೆಲ್ಲ ಶ್ರೀಮತಿಯರೇ.
ಸುಧಾ ಬಿ.ಓ.ರವರ ಕನ್ನಡದ ಕಳಕಳಿ, ಅಪಾರ ಅಭಿಮಾನ ಶ್ಲಾಘನೀಯ. ಇಂತಹ ಅಭಿಮಾನ ಎಲ್ಲರಲ್ಲೂ ಬರುವುದು ಯಾವ ಯುಗದಲ್ಲಿ?. “ನವೆಂಬರ್” ರಾಜ್ಯೋತ್ಸವ ಬಂದಾಗ, ಡಿಸೆಂಬರಿನಿಂದ ಅಕ್ಟೋಬರ್ ವರೆಗೆ ಗಾಢ ನಿದ್ದೆಯಲ್ಲಿ ಮುಳುಗಿದ್ದ ಸಂಘ-ಸಂಸ್ಥೆಗಳಿಗೆ ಎಚ್ಚರವಾಗುತ್ತದೆ. “ಉ”ಟ್ಟು “ಓ”ರಾಟಗಾರರು “ಇತ್ತ ಎನ್ನಡ ಅತ್ತ ಎಕ್ಕಡದ ನಡುವೆ ಎಲ್ಲಿದೆಯಪ್ಪಾ ನಮ್ಮ ಕನ್ನಡ” ಎಂದು “ಉ”ಡುಕುತ್ತಾ-ಧೂಳು ಹಿಡಿದು ಮಂಕಾಗಿದ್ದ ಕನ್ನಡ ಬಾವುಟವನ್ನು ಝಾಡಿಸಿ ಕೊಡವಿ, ಮುರಿದು ಮುಕ್ಕಾದ ಕೋಲಿಗಾಗಿ ತಡಕಾಡುತ್ತಾರೆ.ಕನ್ನಡ ರಾಜ್ಯೋತ್ಸವ ಕವಿ ಆಶಯದ “ನಿತ್ಯೋತ್ಸವ”ವಾಗುವುದು ಯಾವ ಯುಗದಲ್ಲಿಯೋ ಎಂಬುದು ನಿಸಾರ್ ಸಾರ್ ರವರೇ ಹೇಳಬೇಕು. ಕನ್ನಡಿಗರ “ಮನದುದಾರತೆ”ಯ ಔದಾರ್ಯವನ್ನು ದೌರ್ಬಲ್ಯವೆಂದು ಭಾವಿಸಿ ದುರುಪಯೋಗ ಪಡಿಸಿಕೊಳ್ಳಬಯಸುವ ಪರಭಾಷಿಕರೊಡನೆ ಜಗಳ ಬೇಡ. ಅವರ ಮನವೊಲಿಸಿ ಕನ್ನಡ ಮನೋಸಹಜ ಸೌಜನ್ಯ-ಅಂತಃಕರಣದಿಂದಲೇ ನಮ್ಮ ಭಾಷೆಯನ್ನು ಪ್ರೀತಿಸುವಂತೆ ಮಾಡಬೇಕಾದ ಅನಿವಾರ್ಯಅಗತ್ಯ.
ಆಕಾಶವಾಣಿಯ ವಂದನ-ಗೀತಾರಾಧನೆ-ದೇಶಭಕ್ತಿ ಗೀತೆ ಕಾರ್ಯಕ್ರಮಗಳಲ್ಲಿ ಆಗಾಗ ಒಂದು ಹಾಡು ಪ್ರಸಾರವಾಗುತ್ತಿರುತ್ತದೆ.
ಆ ಗೀತೆಯ ಪಲ್ಲವಿ ಹೀಗಿದೆ:
“ಈ ಮಣ್ಣು ನಮ್ಮದು/
ಈ ಗಾಳಿ ನಮ್ಮದು//
ಕಲ-ಕಲನೆ ಹರಿಯುತಿಹ ನೀರು ನಮ್ಮದು//”- ವಾಸ್ತವದಲ್ಲಿ ಇದು ಕನ್ನಡ ಅಥವಾ ಕರ್ನಾಟಕ ಕುರಿತ ರಚನೆಯಲ್ಲ. ಭಾರತ ದೇಶವನ್ನು ಕುರಿತದ್ದು. “ಕಣ-ಕಣದಲಿ ಭಾರತೀಯ ರಕ್ತ ನಮ್ಮದು-ನಮ್ಮದು”
ಇದನ್ನು ಕನ್ನಡ ಅಥವಾ ಕರ್ನಾಟಕಕ್ಕೆ ಅನ್ವಯಿಸಿ ಒಮ್ಮೆ ಒಬ್ಬ ಕಾರ್ಟೋನಿಸ್ಟ್ ದಿನಪತ್ರಿಕೆಯೊಂದರಲ್ಲಿ ಈ ಗೀತೆಯ ಬಗ್ಗೆ ಒಂದು ವ್ಯಂಗ್ಯ ಚಿತ್ರ ರಚಿಸಿದ್ದು ನೆನಪಾಗುತ್ತದೆ. ನಡುವೆ ಕರ್ನಾಟಕ ನಕ್ಷೆ. ಅದರ ಸುತ್ತ ತಮಿಳು-ತೆಲುಗು-ಮರಾಠಿ ಇತ್ಯಾದಿ ಅನ್ಯ ಭಾಷಿಕರು “ಹೌದು” “ಹೌದು” “ಹೌದು” ಈ ಎಲ್ಲವೂ ನಮ್ಮದೇ ಎಂದು ತಮ್ಮ ಎದೆ ತಟ್ಟಿಕೊಳ್ಳುತ್ತಿದ್ದಾಗ ಕನ್ನಡಿಗ ಹತಾಶೆಯಿಂದ ನಿಂತಂತೆ ಆ ಕಲಾವಿದ ಚಿತ್ರಿಸಿದ್ದರು. ಆ ಚಿತ್ರಕಾರನ ಕಲ್ಪನೆಗೆ ಭೇಷ್ ಎನ್ನಿಸುವ ಬದಲು ಆ ಕಲಾವಿದನೂ ಅನ್ಯ ಭಾಷಿಕನಾಗಿದ್ದಿರಬಹುದೇ ಎಂಬ ಗುಮಾನಿ ನನ್ನದಾಗಿತ್ತು. ಕನ್ನಡಕ್ಕೆ ನಾಲ್ಕೈದು ಸಾವಿರ ವರುಷಗಳಷ್ಟು ಪುರಾತನ ಇತಿಹಾಸವಿದೆ. ಇತ್ತೀಚಿನ ಕೆಲವು ಸಂಶೋಧನೆಗಳಿಂದ ಕನ್ನಡವು ತಮಿಳಿಗಿಂತಲೂ ಪ್ರಾಚೀನವೆಂದು ಸಾಬೀತಾಗುವ ಲಕ್ಷಣ ಸ್ಪಷ್ಟವಾಗುತ್ತಿವೆ. ಹಲವು ಕವಿವರೇಣ್ಯರು ಕನ್ನಡದ ಮಾಧುರ್ಯ-ಲಾಲಿತ್ಯ-ಹಿರಿಮೆ-ಗರಿಮೆಗಳ ಬಗ್ಗೆ ಅಸಂಖ್ಯಾತ ಕವಿತೆಗಳನ್ನು ರಚಿಸಿದ್ದಾರೆ. ರಸಋಷಿ ಕುವೆಂಪು “ಕನ್ನಡವೆನೆ ಕುಣಿದಾಡುವುದೆನ್ನೆದೆ/ ಕನ್ನಡವೆನೆ ಕಿವಿ ನಿಮಿರುವುದು//”-ಎಂದರೆ ಚುಟುಕು ಚೌಪದಿಯ ದಿನಕರರು-“ಓ! ನನ್ನ ಕನ್ನಡವೆ ನೀನೆಷ್ಟು ಚಂದ/ ಏನು ಗೀಚಿದರೂ ಆಗುವುದು ಶ್ರೀಗಂಧ” ಎಂದು ಎದೆ ತುಂಬಿ ಹಾಡಿದ್ದಾರೆ. ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈಗಳು “ತಾಯೆ ಬಾರ ಮೊಗವ ತೋರ/ಕನ್ನಡಿಗರ ಮಾತೆಯೆ” ಎಂದು ಆಹ್ವಾನಿಸುತ್ತಾ “ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು” ಎಂದು ಕೀರ್ತಿಸಿದ್ದಾರೆ. ಹಚ್ಚೇವು ಕನ್ನಡದ ದೀಪ/ಕರುನಾಡ ದೀಪ/ಸಿರಿನುಡಿಯ ದೀಪ/ ಒಲವೆತ್ತಿ ತೋರುವಾ ದೀಪ”-ಎಂದು ಕನ್ನಡ ನುಡಿ ದೀಪ ಬೆಳಗಿದ ಡಿ.ಎಸ್.ಕರ್ಕಿಯವರು ಕನ್ನಡ ಮೂಲಾಕ್ಷರ ಬಳ್ಳಿಯನ್ನು(-“ಲಿಪಿ ಲತೆ”-)ಅನನ್ಯವಾಗಿ ಕವನಿಸಿದ್ದು ಹೀಗೆ : “ಎಂಥ ಚೆಂದದ ಬಳ್ಳಿ/ ಚೆಲ್ಲವರಿದಿಹುದಿಲ್ಲಿ//ಚೆಲುವನರಸುವ ಜಾಣ ಬಂದು ನೋಡು/ಬಂದು ನೋಡು// “. ಕನ್ನಡ ಲಿಪಿಯ ಸೌದರ್ಯ-ಸೊಬಗು-ಬೆಡಗುಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಹಿರಿಯ ಪ್ರಾಧ್ಯಾಪಕ-ಸಾಹಿತಿ ಕೀ||ಶೇ||ಕೆ.ಬಿ.ಹನುಮಂತರಾಯರು ಒಮ್ಮೆ ರಾಜ್ಯೋತ್ಸವ ಭಾಷಣದಲ್ಲಿ ಸುಮಾರು 50-60 ವರುಷಗಳ ಹಿಂದೆ ಇಡೀ ವಿಶ್ವದಲ್ಲಿರುವ ಸರ್ವ ಭಾಷಾ ಲಿಪಿಗಳ ಸ್ಪರ್ಧೆಯೊಂದು ಜರುಗಿತು (ಎಲ್ಲಿಯೆಂಬುದು ಸರಿಯಾಗಿ ನೆನಪಿಲ್ಲವೆಂಬುದು ಅವರ ಅಂಬೋಣ). ಅಲ್ಲಿಯ ತೀರ್ಪುಗಾರರು ಭಾರತೀಯರೂ ಅಲ್ಲ-ಕನ್ನಡಿಗರಂತೂ ಅಲ್ಲವೇ ಅಲ್ಲ. ಅವರೆಲ್ಲ ಒಕ್ಕೊರಲಿನಿಂದ ಪ್ರಥಮ ಸ್ಥಾನ ಘೋಷಿಸಿದ್ದು “ಕನ್ನಡ ಲಿಪಿ”ಗೆ. ಇದು ಕನ್ನಡಿಗರು ಹೆಮ್ಮೆ ಪಡಬೇಕಾದ ಸಂಗತಿ. ಆಮೇಲೆ ಇದೇ ವಿಷಯವನ್ನು ಉುನ್ಯಾಸಕ-ಆತ್ಮೀಯ ಮಿತ್ರ ಎನ್.ಬಸವರಾಜರವರೂ ನಮ್ಮ ವಿಮ್ಸ್ ಕನ್ನಡ ರಾಜ್ಯೋತ್ಸವ ಮುಖ್ಯ ಅತಿಥಿ ಭಾಷಣದಲ್ಲಿ ಪ್ರಸ್ತಾಪಿಸಿದರು. ಆಮೇಲೆ ಈ ವಿಷಯದ ಸತ್ಯಾಸತ್ಯತೆಯ ಬಗ್ಗೆ ಹುಡುಕಾಟ ಶುರು ಮಾಡಿದೆ. ಹನುಮಂತರಾಯರಿಗೆ ದುಂಬಾಲು ಬಿದ್ದೆ. ತಮ್ಮ ಹಳೆಯ ಟಿಪ್ಪಣಿಗಳಲ್ಲಿ ಯಾವಾಗಲೋ ಬರೆದುಕೊಂಡಿದ್ದೆ. ಅದರಲ್ಲಿ ಸ್ಥಳ-ಇಸ್ವಿ ಎಲ್ಲಾ ನಮೂದಿಸಿದ್ದೇನೆಂದು ಹೇಳಿದರು. ಬಹಳಷ್ಟು ಸಲ ಅವರ ಮನೆಗೆ ಎಡತಾಕಿದೆ. ಟಿಪ್ಪಣಿಯಲ್ಲಿ ಅಡಗಿದ್ದ ಆ ದಾಖಲೆಗೆ ಅವರು ಶತಪ್ರಯತ್ನ ಹುಡುಕಾಟ ನಡೆಸಿದ್ದರು. ಎನ್.ಬಸವರಾಜ ದಾಖಲೆ ಬಗ್ಗೆ ತಮಗಾವ ವಿವರವೂ ಗೊತ್ತಿಲ್ಲವೆಂದರು. ಆ ಚಿದಂಬರ ರಹಸ್ಯ ಹಾಗೇ ಉಳಿದಿದೆ. ಯಾರಾದರೂ ಪ್ರಾಜ್ಞರು ಈ ಬಗ್ಗೆ ಬೆಳಕು ಚೆಲ್ಲಲಿ ಎಂಬುದು ನನ್ನ ಕಳಕಳಿಯ ವಿನಂತಿ.
ವಿಮ್ಸ್ ನೌಕರಿಯ ಕಡ್ಡಾಯ ಆಡಳಿತಾನುಭವಕ್ಕಾಗಿ 1988ರಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಎರಡು ತಿಂಗಳು ತರಬೇತಿಗೆ ನಿಯೋಜಿತನಾದಾಗ ಶೈಕ್ಷಣಿಕ ಪ್ರವಾಸ ಸಂದರ್ಭದಲ್ಲಿ ಆಯಾ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಅಲ್ಲಲ್ಲೇ ಆಶು ಕವಿತೆ ರಚಿಸುತ್ತಿದ್ದೆ. ಇದನ್ನು ಬಳ್ಳಾರಿಗೆ ಬಂದಿದ್ದ |ಹಾ.ಮಾ.ನಾಯಕರಿಗೆ ತೋರಿಸಿದಾಗ ಬೇಲೂರು-ಹಳೇಬೀಡು-ಶ್ರವಣಬೆಳ್ಗೊಳ ಕುರಿತ ಪಂಕ್ತಿಗಳನ್ನು ಪದೇ ಪದೇ ಓದಿ ಮೆಚ್ಚಿಕೊಂಡು ಇದು ನಿಜವಾಗಿಯೂ ಕರ್ನಾಟಕದ ದರ್ಶನದ ಕವಿತೆಯಾಗಿದೆ. ಇದು ಬರೀ ಶೈಕ್ಷಣಿಕ ಕವಿತೆಗೆ ಸೀಮಿತವಾಗುವುದು ಬೇಡ. ಎಲ್ಲಾ ಜಿಲ್ಲೆಗಳನ್ನೂ ಸಂದರ್ಶಿಸಿದಂತೆ ನೀಳ್ಗವನ ಬರೆದು ನನಗೆ ಕಳಿಸಿ. ನಾನೇ ಮುನ್ನುಡಿ ಬರೆದು ಪ್ರಕಟಿಸುತ್ತೇನೆಂದು ಹೇಳಿದ್ದರು. ಅವರು ಮೆಚ್ಚಿದ ಕವಿತಾ ಭಾಗದ ಒಂದು ನುಡಿ ಹೀಗಿದೆ:-
ಒಂದರೊಲು ಒಂದಿಲ್ಲ ಒಂದರೊಳು ಕುಂದಿಲ್ಲ
ಸ್ಪರ್ಧೆ ನಡೆದಿದೆ ಶಿಲಾ ಬಾಲಿಕೆಯರಲ್ಲಿ/
ಶ್ರೀ ಚೆನ್ನ ಕೇಶವನ ಲಲಿತ ಸನ್ನಿಧಿಯಲ್ಲಿ
ಬೀಡು ಬಿಟ್ಟಿದೆ ಸ್ವರ್ಗ ಬೇಲೂರಿನಲ್ಲಿ
ಆದರೆ ನನ್ನ ಆಲಸ್ಯ ಪ್ರವೃತ್ತಿಯಿಂದ ಅವರ ಆದೇಶ ಇದುವರೆಗೂ ಪೂರ್ಣಗೊಂಡಿಲ್ಲ.
ಅವರ ಆತ್ಮ ನನ್ನನ್ನು ಕ್ಷಮಿಸಲಾರದೆಂದುಕೊಂಡು ಇದೀಗ “ಕರ್ನಾಟಕ ದರ್ಶನ” ಸಮಗ್ರ ನೋಟದ ರಚನೆಗೆ ತೊಡಗಿದ್ದೇನೆ. ಈಗ ಬೀದರ, ಬಿಜಾಪುರ, ಯಾದಗಿರಿ, ಗುಲಬರ್ಗಾ, ಬಾಗಲಕೋಟೆ ಜಿಲ್ಲೆಗಳಿಗೆ ಸಂಬಂಧಿಸಿದಂತೆ 30ಚೌಪದಿಗಳು (120 ಪಂಕ್ತಿಗಳು) ರಚಿತವಾಗಿವೆ. ಆದಷ್ಟು ಬೇಗ ಮುಗಿಸಿ ಹಾ.ಮಾ.ನಾಯಕರಿಗೆ ಸಮರ್ಪಿಸುವ ಆಶಯ ನನ್ನದಾಗಿದೆ. ಆ ಕವನದ ಪ್ರಾರಂಭದ ಕೆಲ ನುಡಿಗಳನ್ನು ಅವಧಿ ಓದುಗರಿಗಾಗಿ, ಮುಖ್ಯವಾಗಿ ಸುಧಾ.ಬಿ.ಓ.ರವರ ಅವಗಾಹನೆಗಾಗಿ ಇಲ್ಲಿ ಸಾದರಪಡಿಸುತ್ತಿದ್ದೇನೆ..
ಹೊನ್ನ ಬಿತ್ತುವ ಹೊಲವು ಚಿನ್ನ ಬೆಳೆಯುವ ನೆಲವು
ರನ್ನ ಮಾಣಿಕ ಮುತ್ತು ಚೆಲ್ಲಿರುವ ಚೆಲುವು/
ದಿವದಿಂದ ಇಳಿತಂದ ನವನಿಧಿಯ ಭೂಸ್ವರ್ಗ
ಕನ್ನಡಮ್ಮನ ಕರುಣೆ ನಮಗಿತ್ತ ವರವು//
ಕಾವೇರಿಯಿಂದ ಆ ಗೋದಾವರಿಯ ವರೆಗೆ
ವಿಸ್ತರದ ವ್ಯಾಪ್ತಿಯನು ಹೊಂದಿದ್ದ ನಾಡು/
ಇದಕೆ ಸಾಕ್ಷಿಯು ಮಹಾರಾಷ್ಟ್ರದಲಿ ಇಂದಿಗೂ
“ಕನ್ನಡ”ದ ಹೆಸರ ತಾಲೂಕು ಇದೆ ನೋಡು//
ಆದಿ ಮಾನವ ಜೀವಿಸಿದ್ದ ಪಳೆಯುಳಿಕೆಗಳು
ಮಡಕೆ ಆಯುಧ ಗುಹಾ ಚಿತ್ರಗಳ ಕುರುಹು/
ಪ್ರಾಗೈತಿಹಾಸಿಕದ ನೆಲೆಯು ಹಲವೆಡೆ ಉಂಟು
ಅತಿಪುರಾತನ ಚರಿತೆ ಕನ್ನಡದ ಬಲುಹು//
ರಿಪುಗಳೆದೆ ನಡುಗಿಸುವ ಭಯಭೀತಿ ಹುಟ್ಟಿಸುವ
ದುರ್ಗಮೋನ್ನತ ಭವ್ಯ ಕೋಟೆಗಳ ಸ್ತೋಮ/
ವಿಸ್ಮಯಾದ್ಭುತ ವಿಷಯ ಕೀರ್ತಿಸುವ ಓಲೆಗರಿ
ಶಿಲ್ಪ-ಶಾಸನ-ಭಿತ್ತಿ ಚಿತ್ರಗಳ ಧಾಮ//
ಬೆಲ್ಲ-ಸಕ್ಕರೆ-ಕಬ್ಬು-ಹಾಲ್ಜೇನಿನೊಲು ಮಧುರ
ಪಂಚ ದ್ರಾವಿಡ ಭಾಷೆಯೊಳು ಉಚ್ಚ ಸ್ಥಾನ/
ಮುತ್ತಿನಂದದಿ ಹೊಳೆವ ಕನ್ನಡಾಕ್ಷರ ಮಾಲೆ
ವಿಶ್ವಲಿಪಿ ಸ್ಪರ್ಧೆಯಲಿ ಪ್ರಪ್ರಥಮ ಸ್ಥಾನ//
“ಓ ನನ್ನ ಕನ್ನಡವೆ ನೀನೆಷ್ಟು ಚೆಂದ….
ಏನು ಗೀಚಿದರು ಆಗುವುದು ಶ್ರೀಗಂಧ”../
ನೂರಕ್ಕೆ ನೂರು ದಿಟ “ದಿನಕರ”ರ ಉದ್ಧಾರ
ಅಮೃತ ಸವಿಗನ್ನಡವು ಸೂಸುವುದು ಗಂಧ//
ಕವಿ ಮಹಲಿಂಗರಂಗರು ಅದೆಷ್ಟು ಸೊಗಸಾಗಿ ಕನ್ನಡದ ಲಾಲಿತ್ಯ-ಮಾಧುರ್ಯಗಳನ್ನು ಹಾಡಿದ್ದಾರೆ
ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಮಧುರವಾಗಿರ್ಪ
ಲಲಿತವಹ ಕನ್ನಡದ ನುಡಿಯೊಳು
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೇ ಸಕ್ಕದದೊಳಿನ್ನೇನು?
ಏನೋ ಹೇಳಲು ಹೋಗಿ ಏನೇನೋ ವಿಷಯ ಬಂದುಬಿಟ್ಟವು.
ಒಂದು ರಾತ್ರಿ ನಿದ್ದೆ ಬರಲಿಲ್ಲ. ಆಗ ಮಲಗಿದಲ್ಮೊಲಿಯೇ, ಬೈಲಿನಲ್ಲಿಯೇ ಕ್ಲಿಕ್ಕಿಸಿದ ಕವನವೂ ಇಲ್ಲಿದೆ. ದಯವಿಟ್ಟು ಗಮನಿಸಿ. ಅಭಿಪ್ರಾಯ ತಿಳಿಸಿ.
************
ಕನಸಲೂ ಕನ್ನಡ
************
ಇರುಳ ನೀರವ ಮೌನ ಭೇದಿಸಿ
ತೇಲಿ ಬರುತಿರೆ ಇಂಚರ/
ಕನಸು ಜಾರಿತು ನಿದುರೆ ಹಾರಿತು
ಆಯ್ತು ಮೈಮನ ಎಚ್ಚರ/1/
ಯಾವುದೀ ದನಿ ಯಾರದೀ ದನಿ
ಮಧುರ ಮಂಜುಳ ಸುಸ್ವನ/
ಎದೆ ಎದೆಯ ಕದ ತೆರೆ ತೆರೆದು ಮುದ
ಮುದದ ರಸ ರೋಮಾಂಚನ/2/
ಇರದೆ ಓಡಿತು ಇರುಳ ಜಡತನ
ಅಮೃತ ಶಾಂತಿಯ ಚೇತನ/
ಏನೊ ತಳಮಳ ಏನೊ ತಲ್ಲಣ
ಏನೊ ಚಂತನ ಮಂಥನ/3/
ದನಿಯ ಜಾಡನು ಹಿಡಿದು ನಡೆದೆನು
ನಭದಿ ವಿಸ್ಮಯ ಸಂಭ್ರಮ/
ಬೆಳ್ಳಿ ಚುಕ್ಕಿಗಳಮಿತ ಸಂಗಮ
ನಡುವೆ ಹೊಳೆಯುವ ಚಂದ್ರಮ/4/
ಅನತಿ ದೂರದ ಕೊಳದ ತೀರದಿ
ದಿವ್ಯ ವೀಣಾಪಾಣಿಯು/
ಮಧುರಂಠದಿ ಹಾಡುತಿರುವಳು
ಯಾವ ಲೋಕದ ದೇವಿಯು/5/
ಇದ್ದಕ್ಕಿದ್ದಂತೇಕೊ ಗಾನದಿ
ಶೋಕರಾಗಾಲಾಪನ/
ಕೋಗಿಲೆಯ ಇನಿ ದನಿಯ ಬದಲಿಗೆ
ಹೃದಯ ಹಿಂಡುವ ವೇದನೆ6/
ಅಮ್ಮ ನೀನಾರೇನು ಈ ಕಥೆ
ಏಕೆ ಈ ಪರಿ ದುಃಖವು/
ಕಣ್ಣು ಕೆಂಡದ ಉಂಡೆಯಾದವು
ಕ್ರುದ್ಧ ರೌದ್ರವ ವದನವು/7/
ಕುವರರೇ ಅಭಿಮಾನ ಶೂನ್ಯರೆ
ಕನ್ನಡಮ್ಮನ ಮರೆತಿರಾ/
ಹೆತ್ತ ತಾಯಿಯ ಗೊತ್ತು ಹಿಡಿಯದ
ಮೂಢ ಮತಿ ನೀವಾದಿರಾ/8/
ಜ್ಞಾನ ಪೀಠಗಳೆಂಟು ಬಂದರು
ತಪ್ಪದೆನಗೀ ದುಸ್ಥಿತಿ/
ಶೈಕ್ಷಣಿಕ ಮಾಧ್ಯಮದಿ ಉನ್ನತ
ಸ್ಥಾನ ಪಡೆಯದ ದರ್ಗತಿ/9/
ಬೇಕು ಕನ್ನಡ ನೆಲ-ಜಲಾಶ್ರಯ
ನೆರೆಯ ರಾಜ್ಯದ ಮಂದಿಗೆ/
ಪ್ರೀತಿ ಗೌರವ ತೋರಬೇಡವೆ
ಅನ್ನ ನೀಡಿದ ಭಾಷೆಗೆ/10/
ಅನ್ಯರೇತಕೆ ನಿಮ್ಮೊಳೆಲ್ಲಿದೆ
ಮಾತೃ ಭಾಷಾ ಪ್ರೇಮವು/
ಹೆಮ್ಮೆ ಸತ್ತಿದೆ ನಿಮ್ಮ ಮುತ್ತಿದೆ
ಇಂಗ್ಲಿಷಿನ ವ್ಯಾಮೋಹವು/11/
ನೆರೆಯ ನುಡಿಗಳ ವೈಭವೋನ್ನತಿ
ಪಡೆವುದೆಂದಿಗೆ ಕನ್ನಡ/
ಗಂಡೆದೆಯ ಗುಂಡಿಗೆಯು ಇದ್ದರೆ
ಪ್ರಗತಿ ಉನ್ನತಿ ಕನ್ನಡ/12/
ಹಿಂದಿ-ಉರ್ದು-ಮರಾಠಿ-ಇಂಗ್ಲಿಷ್
ಮಧ್ಯೆ ಗಂಡೆದೆ ಕನ್ನಡ/
ಇತ್ತ ಎನ್ನಡ ಅತ್ತ ಎಕ್ಕಡ
ನಡುವೆ ಕೆಚ್ಚದೆ ಕನ್ನಡ/13/
ಹೇಳು ತನು-ಮನ-ಧನದಿ ಕನ್ನಡ
ಹಿತಕೆ ಕೊಡುವೆಯ ಪ್ರಾಣವ/
ಬೆಚ್ಚಿ ಮೈಮನ ಎಚ್ಚರಾಯಿತು
ನೆನೆದು ನಡುಗಿದೆ ಸ್ವಪ್ನವ/14/
ನಾಡು ನುಡಿ ಅಭಿಮಾನ ಗೌರವ
ಎಂದು ಹೊಮ್ಮುವುದೆಮ್ಮಲಿ/
ಬರಲಿ ಬೇಗನೆಅಮೃತ ಘಳಿಗೆಯು
ನುಡಿಯ ಚೇತನ ಚಿಮ್ಮಲಿ/15/
ಕನ್ನಡವು ಪರಮಾಧಿಕಾರದ
ರಾಜ್ಯ ಭಾಷೆಯು ಆಗಲ/
ಆಡಳಿತ ಪೀಠದಲಿ ಮೆರೆಯಲಿ
ವೈಭವದಿ ಂಗೊಳಸಲ/16/
ಯಾವ ಲಿಪಿಗೂ ಸಿಗದ ಮನ್ನಣೆ
ಕನ್ನಡಕೆ ತಾ ಲಭಿಸಿದೆ/
ವಿಶ್ವ ಲಿಪಿ ಸ್ಪರ್ಧೆಯಲಿ ಕನ್ನಡ
ಪ್ರಥಮ ಸ್ಥಾನವ ಗಳಿಸಿದೆ/17/
ಪಸರಿಸಲಿ ದಶ ದಿಶೆಗೆ ಕನ್ನಡ
ಕೀರ್ತಿ ಸಿರಿ ಸುಮ ಸೌರಭ/
ಧ್ವಜವು ಹಾರಲಿ ಜಗದಿ ಮೆರೆಯಲಿ
ದಿವ್ಯ ಕನ್ನಡ ಕೌಸ್ತುಭ/18/
*************************************************
ವಿಳಾಸ:- ಟಿ.ಕೆ.ಗಂಗಾಧರ ಪತ್ತಾರ
(ನಿವೃತ್ತ ಕಚೇರಿ ಅಧೀಕ್ಷಕರು, ವಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ, ಬಳ್ಳಾರಿ)
“ಭಾವಗಂಗೋತ್ರಿ”, ಪ್ಲಾಟ್ ನಂ.3, ಗಫೂರ್ ಬಡಾವಣೆ, 6ನೇ ಕ್ರಾಸ್,
ವಿದ್ಯಾನಗರ-ಪಶ್ಚಿಮ, ಏರ್ ಪೋರ್ಟ್ ರಸ್ತೆ, ಬಳ್ಳಾರಿ-583104
ಚಲನವಾಣಿ : (1).8152006144, (2).8904612504
ಮಿಂಚಂಚೆ: : tkgp4951@gmail.com.
*************************************************
“ಕನ್ನಡಕ್ಕೆ ನಾಲ್ಕೈದು ಸಾವಿರ ವರುಷಗಳಷ್ಟು ಪುರಾತನ ಇತಿಹಾಸವಿದೆ. ಇತ್ತೀಚಿನ ಕೆಲವು ಸಂಶೋಧನೆಗಳಿಂದ ಕನ್ನಡವು ತಮಿಳಿಗಿಂತಲೂ ಪ್ರಾಚೀನವೆಂದು ಸಾಬೀತಾಗುವ ಲಕ್ಷಣ ಸ್ಪಷ್ಟವಾಗುತ್ತಿವೆ.” ಈ ಸಾಲುಗಳನ್ನು ಓದಿ ಎಕ್ಸೈಟ್ ಆಗೆದ್ದೇನೆ, ಇವುಗಳಿಗೆ ಇರುವ ಆಧಾರಗಳನ್ನು ಸ್ವಲ್ಪ ತಿಳಿಸುವಿರಾ ಸರ್?