ವೈ ಕೆ ಸಂಧ್ಯಾಶರ್ಮ
ಇತಿಹಾಸದಲ್ಲಿ ಮಹಾತ್ಮ ಗಾಂಧೀಜಿಯವರ ಸಾಧ್ವೀಮಣಿ ಪತ್ನಿಯಾಗಿ, `ಆದರ್ಶ ಮಹಿಳೆ’ಯಾಗಿ ಬಿಂಬಿತಳಾಗಿರುವ `ಕಸ್ತೂರ ಬಾ’ ಅವರ ಅಂತರಂಗವನ್ನು ಅನಾವರಣಗೊಳಿಸುವ ಒಂದು ಗಂಭೀರ ಪ್ರಯತ್ನ, ಇತ್ತೀಚೆಗೆ ಕಲಾಸೌಧದಲ್ಲಿ ಸಂಚಾರೀ ಥಿಯೇಟರ್ ಅರ್ಪಿಸಿದ ನಾಟಕ `ಕಸ್ತೂರ ಬಾ’. ರಂಗಾಯಣ ಕಲಾವಿದೆ ಬಿ.ಎನ್. ಶಶಿಕಲಾ ಅವರ ಏಕವ್ಯಕ್ತಿ ಪ್ರಸ್ತುತಿ-ಪ್ರಯೋಗ ಅವರ ಅದ್ಭುತ ನಟನೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿತ್ತು. ಎಲ್ಲಿಯೂ ಯಾಂತ್ರಿಕವೆನಿಸದೆ ಗಂಟೆಗೂ ಹೆಚ್ಚಿನ ಕಾಲ ಪ್ರೇಕ್ಷಕನನ್ನು ಹಿಡಿದು ಕೂರಿಸಿದ್ದು ನಾಟಕದ ವಿಶೇಷ.

ಹೆಣ್ಣಿನ ಅಂತರಂಗ ಒಂದು ಅಗಾಧ ಕಡಲು. ಅದರೊಳಗಿನ ನಿಗೂಢತೆ ಯಾರಿಂದಲೂ ಭೇದಿಸಲಾಗದು. ಅದರೊಳಗಿನ ಮುತ್ತು,ರತ್ನ,ಹವಳದಂಥ ಅಮೂಲ್ಯ ಖನಿಯ ಜೊತೆಜೊತೆಯಲ್ಲಾವರಿಸಿದ ಹಾವಸೆ-ಹಳವಂಡಗಳು,ಒಳಸುಳಿ,ಮೌನಮೊರೆತದ ಕುದಿತಗಳಿಗೆ ದುರ್ಬರವನಿಟ್ಟವರಾರು? ಮೇಲೆ ನೋಡಲು ಮಾತ್ರ ಪ್ರಶಾಂತ ಸಮುದ್ರ. ಇಂಥ ವ್ಯಕ್ತಿತ್ವದ ಸಾಲಿನಲ್ಲಿ ಹೆಸರಿಸಬಹುದಾದ ಕೆಲವು ಗತಕಾಲದ ಸಾಧ್ವೀಶಿರೋಮಣಿಗಳೆಂದರೆ ಸೀತೆ, ಮಂಡೋದರಿ, ಊರ್ಮಿಳೆ, ದ್ರೌಪದಿ ಮುಂತಾದವರು. ಮಹಾ ಸಹನಾಮಯಿ, ಆದರ್ಶ ಮಹಿಳೆಯರೆಂಬ ಬಿರುದು-ಬಾವಲಿಗಳು. ಆದರೆ ಅವರೆದೆಯನ್ನು ಸುಡುತ್ತಿದ್ದ ಬೆಂಕಿ, ನೋವು ನಿರಾಶೆಗಳ ಭಾವನೆಗಳನ್ನಾಗಲಿ, ಅವರ ಸೂಕ್ಷ್ಮ ಒಳದನಿಗಳನ್ನಾಗಲಿ ಆಲಿಸಿದವರಾರು? ಈ ರೀತಿ ಬದುಕಿನ, ಇತಿಹಾಸದ ಗರ್ಭದಲ್ಲಿ ಹೂತುಹೋದ ಕುಸಿಗೊರಲುಗಳು ಅದೆಷ್ಟೋ ಸಂಖ್ಯೆ. ಅದರಂತೆ ದೇಶ ಕಂಡ ಅಪರೂಪದ ಮಹಿಳೆ ಕಸ್ತೂರಬಾ ಕೂಡ ಇದಕ್ಕೆ ಹೊರತಲ್ಲ. ಅವಳು ಅವಳಾಗಿ ಬಾಳಲಿಲ್ಲ.
ಜಗತ್ತಿನ ಕಣ್ಣಲ್ಲಿ ದೇಶದ ಮಹಾ ನೇತಾರ, ಮಹಾ ಚೇತನ ಗಾಂಧೀಜಿಯವರ ನಿಷ್ಠ ಅನುಯಾಯಿಯಾಗಿ, ಅವರ ಅಸ್ತಿತ್ವದೊಡನೆ ತನ್ನ ಅಸ್ತಿತ್ವವನ್ನು ಲೀನಗೊಳಿಸಿ, ಅವರ ಮಹತ್ಸಾಧನೆಗೆ ಬೆನ್ನೆಲುಬಾಗಿ ತನ್ನ ಪೂರ್ತಿ ಬದುಕನ್ನು ಸವೆಸಿದ ತ್ಯಾಗಜೀವಿ! ತನ್ನ 64 ವಸಂತಗಳನ್ನು ಬಾಪುವಿನ ಹೆಂಡತಿಯಾಗಿ ಕಳೆದೆನೇ ವಿನಾ ಒಂದು ದಿನವೂ ಆತ ತನ್ನೊಂದಿಗೆ ಗಂಡನಾಗಿ ಬಾಳಲಿಲ್ಲ ಎಂಬ ಕೊರಗು ಅವಳದು. ಗಂಡನ ಗುಣ,ದೋಷ-ಕೊರತೆಗಳು ಹೆಂಡತಿಯಾದವಳಿಗೆ ಮಾತ್ರ ಗೊತ್ತು. ಇದು ಕಟು ಸತ್ಯ. ನಾಟಕದಲ್ಲಿ ಈಕೆ ತನ್ನೊಳಗಿನ ನೋವಿನ ಮಜಲುಗಳನ್ನು ಬಿಚ್ಚಿಡುತ್ತಾ ಹೋಗುತ್ತಾಳೆ, ಚರಕದ ನೂಲುಗಳನ್ನು ನೇಯುತ್ತ! ಬಾಪುವಿನ ನೆರಳಾಗಿಯೇ ಬಾಳಿದ ಅವಳಿಗೆ ನಿಜಜೀವನದಲ್ಲಿ ದಕ್ಕಬೇಕಾದ ಪ್ರೀತಿ,ಸುಖ-ಸಮಾಧಾನ,ಸ್ವಾರಸ್ಯಗಳು ದಕ್ಕದೆ, ಸಾಮಾನ್ಯ ಬದುಕಿನ ಎಲ್ಲ ರಸಕ್ಷಣಗಳಿಂದ ವಂಚಿತಳಾದ, ಅಸಹಾಯಕ ಆದರೆ ಧೀರೋದಾತ್ತ ಬಿರುದಾಂಕಿತ ಪದವಿ ಧರಿಸಿದ ಸಂಕೀರ್ಣ ಬದುಕು ಅವಳದು.
ನಾಟಕ ಎರಡು ವಿಭಿನ್ನ ನೆಲೆಯಲ್ಲಿ ಸಮಾನಾಂತರವಾಗಿ ಸಾಗುತ್ತ ಹೋಗುತ್ತದೆ. ರಂಗನಟಿಯೊಬ್ಬಳು ರಂಗದ ಮೇಲೆ `ಕಸ್ತೂರ ಬಾ’ ಪಾತ್ರವನ್ನು ನಟಿಸುತ್ತ, ಬಾಪುವಿನ ನೆರಳಾಗಿ ಬದುಕಿದ, ಪ್ರತ್ಯೇಕ ಅಸ್ತಿತ್ವವಿಲ್ಲದ, ಹುದುಗಿಹೋದ ಆಕೆಯ ನೋವು-ದುಮ್ಮಾನಗಳಿಗೆ ಕನ್ನಡಿ ಹಿಡಿಯುತ್ತಾಳೆ. ಅವಳ ವ್ಯಕ್ತಿತ್ವದೊಡನೆ ಮುಖಾಮುಖಿಯಾಗುತ್ತ ತನ್ನ ಬದುಕಿನ ನೆರಿಗೆಗಳನ್ನು ಹೊಂದಿಸಲೆತ್ನಿಸುತ್ತ ತೊಳಲಾಡುತ್ತಾಳೆ ನಟಿ. ಅವಳ ಬದುಕಿನ ಪ್ರತಿ ಹೆಜ್ಜೆಯಲ್ಲೂ `ಬಾ’ ಕಾಡುತ್ತಾಳೆ. ತನ್ನ ಬದುಕಿನ ಪರಾಮರ್ಶೆ ಕೈಗೊಳ್ಳುತ್ತ ಗೊಂದಲದಲ್ಲಿ ಸಿಲುಕಿ ಹೊಯ್ದಾಡುತ್ತಾಳೆ. ಅವಳೊಡನೆ ಸಹಜೀವಿಸುತ್ತಿದ್ದ `ಗಾಂಧೀ’ (ನಟಿ ಕರೆಯುತ್ತಿದ್ದುದು) ಎಂಬ ವ್ಯಕ್ತಿಗೆ ಅವಳು ಅಭಿನಯಿಸುವ ಪಾತ್ರ ಇಷ್ಟವಾದರೂ ನಿಜಜೀವನದಲ್ಲಿ ಅವಳಲ್ಲಿ ಕಸ್ತೂರ ಬಾಳ ಗುಣಗಳಾಗಲಿ, ವ್ಯಕ್ತಿತ್ವವಾಗಲಿ ಕಾಣದೆ ನಿರಾಸೆಯಾಗಿ ಅವಳಿಂದ ದೂರವಾಗುತ್ತಾನೆ. ಆದರೆ ಇದಕ್ಕೆ ನಟಿಯ ತಗಾದೆ, ಬಾ ಳಂತೆ ಒಳಗೊಂದು ಹೊರಗೊಂದು, ದ್ವಂದ್ವ ವ್ಯಕ್ತಿತ್ವ ಸರಿಯೇ, ಇದು ಬೇಕೇ? ಇದು ಎಷ್ಟು ನ್ಯಾಯ? ಇತಿಹಾಸದಲ್ಲಿ ಅನ್ಯಾಯಕ್ಕೊಳಗಾದ ಅವಳ ಹಾಗೆ ತಾನ್ಯಾಕೆ ತನ್ನ ಅಸ್ತಿತ್ವ-ಅಸ್ಮಿತೆಗಳನ್ನು ಮುಚ್ಚಿಟ್ಟುಕೊಂಡು ತಾನಲ್ಲದ ತಾನಾಗಿ ಬದುಕಬೇಕು ಎಂಬುದು ನಟಿಯ ಪ್ರಶ್ನೆ, ಜಿಜ್ಞಾಸೆ. `ಬಾ’ಳಿಗಾಗಿ ಮರುಗುತ್ತ, ಅವಳಂತೆ ಇನ್ಯಾವ ಹೆಣ್ಣೂ ತನ್ನ ಅಸ್ತಿತ್ವ,ವ್ಯಕ್ತಿತ್ವಗಳನ್ನು ಸಮಾಧಿ ಮಾಡದೆ ಧೈರ್ಯವಾಗಿ, ಪ್ರಕೃತಿ ತನಗೆ ಕೊಡ ಮಾಡಿದ ಬದುಕನ್ನು ಸ್ವಂತವಾಗಿ ಕಟ್ಟಿಕೊಳ್ಳಬೇಕೆಂಬ ಆಶಯಕ್ಕೆ ಧ್ವನಿಯಾಗುತ್ತಾಳೆ ನಟಿ.

ಒಟ್ಟಾರೆ ನಾಟಕದ ಬಂಧದಲ್ಲಿ `ಕಸ್ತೂರ ಬಾ ಹಾಗೂ ನಟಿ’ ಮುಖಾಮುಖಿಯಾಗುವಲ್ಲಿ ಭಾರತೀಯ ಮಹಿಳೆಯರ ಸ್ಥಿತ್ಯಂತರಗಳ ಬಗ್ಗೆ ಚಿತ್ರಿಸಲಾಗಿದೆ. ಆಧುನಿಕ ಮಹಿಳೆಯ ಪ್ರತೀಕವಾದ ನಟಿ ಕಸ್ತೂರ ಬಾ ಪಾತ್ರವನ್ನು ಅರ್ಥೈಸುತ್ತ, ವಿಶ್ಲೇಷಿಸುತ್ತ, ಅವಳ ಮನಸ್ಸನ್ನು ಅರಿಯುವ ಪ್ರಯತ್ನಕ್ಕೆ ಒಡ್ಡಿಕೊಳ್ಳುತ್ತ, `ಹೊಂದಾಣಿಕೆಯ ಬದುಕು ಸಹ್ಯ ಬದುಕು’ ಎಂಬ ತಿಳುವಳಿಕೆ ಪಡೆಯುತ್ತ,`ಕಳೆದುಕೊಂಡು ಕೊಡುವುದರ’ ಬಗ್ಗೆ ಯೋಚಿಸತೊಡಗುತ್ತಾಳೆ. ಅಂತ್ಯದಲ್ಲಿ ಸಾಧನೆಯ ಬೆನ್ನೇರಿ ಹೊರಟ ತಾನು ಸಾಧಿಸಿದ್ದು ಒಂಟಿತನ ಮಾತ್ರ ಎಂಬ ವಿಷಾದ ಮಡುಗಟ್ಟುತ್ತದೆ. ಇಲ್ಲಿ ಕಾಣಿಸುವ ಎರಡು ಪಾತ್ರಗಳಲ್ಲಿ ಒಂದು ಬಂದದ್ದನ್ನು ಬಂದಹಾಗೆ ಸ್ವೀಕರಿಸುವ ವಿಧೇಯ, ಸಾಂಪ್ರದಾಯಕ ಪಾತ್ರ ಮತ್ತು ಇನ್ನೊಂದು ಬಂದದ್ದನ್ನು ಪ್ರಶ್ನಿಸುವ, ವಿಮರ್ಶಿಸುವ ಸ್ವತಂತ್ರ ಮನೋಭಾವವನ್ನು ವ್ಯಕ್ತಪಡಿಸುವ ದಿಟ್ಟ ಪಾತ್ರಗಳಾಗಿ ಮೈತಾಳಿವೆ.
ಈ ನಾಟಕದ ಶಿಲ್ಪ ಗಟ್ಟಿಯಾಗಿದ್ದು, ಇದರಲ್ಲಿ ಅನೇಕ ಗಂಭೀರ ಪ್ರಶ್ನೆ-ಆಲೋಚನೆಗಳ ಕುರಿತು ಚರ್ಚೆ ನಡೆಸಲಾಗಿದೆ. ಎಂದೂ ಪ್ರಖರ ಬೆಳಕಿನಡಿಯ ಅನೇಕ ವಸ್ತು-ಸಂಗತಿಗಳು ನೆರಳಾಗಿ ಅಥವಾ ಮರೆಯಾಗಿ ಹೋಗಿಬಿಡುವ ನಿಷ್ಠುರ ಸತ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ ನಾಟಕಕಾರ ಎಸ್. ರಾಮನಾಥ. ಅವರು ತಮ್ಮ ಅಚ್ಚುಕಟ್ಟಾದ ನಿರೂಪಣಾ ಧಾಟಿಯಿಂದ, ಅರ್ಥಪೂರ್ಣ ಸಂಭಾಷಣೆಗಳಿಂದ ತುಂಬ ಸೊಗಸಾಗಿ ನಾಟಕ ಹೆಣೆದಿದ್ದಾರೆ. ಕಸ್ತೂರ ಬಾ ಳ ಅಂತರಂಗದ ಸೂಕ್ಷ್ಮ ಎಳೆಗಳನ್ನು ಹಿಡಿದು ನಟಿ ಶಶಿಕಲಾ ಅದ್ಭುತ ಅಭಿನಯ ನೀಡಿದ್ದಾರೆ. ಏಕಕಾಲದಲ್ಲಿ ಎರಡೂ ಪಾತ್ರಗಳನ್ನು ನಿಭಾಯಿಸುವ ಅವರ ಕ್ರಿಯಾಶೀಲತೆ, ಚಾಕಚಕ್ಯತೆ ಸ್ತುತ್ಯಾರ್ಹ. ದನಿಯ ಏರಿಳಿತ, ಆಂಗಿಕ ಅಭಿನಯ, ಭಾವಾಭಿವ್ಯಕ್ತಿ ಅವರ ಅಭಿನಯ ಸಾಮಥ್ರ್ಯಕ್ಕೆ ಸಾಕ್ಷಿಯಾಗಿತ್ತು. ಅವರಿಂದ ಇಂಥ ಉತ್ತಮ ಅಭಿನಯವನ್ನು ದುಡಿಸಿಕೊಂಡ ನಿರ್ದೇಶಕ ಶಶಿಧರ ಭಾರಿಘಾಟ್ ಅವರ ಶ್ರಮ- ಕಾರ್ಯಕ್ಷಮತೆ ಸುವ್ಯಕ್ತವಾಗಿದ್ದು ಕೊಂಚವೂ ಬೋರ್ ಹೊಡೆಸದೆ ನಾಟಕ ಪ್ರೇಕ್ಷಕರನ್ನು ತನ್ಮಯಗೊಳಿಸಿತ್ತು. ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿ, ನಟ,ನಿರ್ದೇಶಕ,ಛಾಯಾಗ್ರಾಹಕ, ಸಂಘಟಕ ಮತ್ತು ನಾಟಕಕಾರರೆಂದು ಹೆಸರು ಮಾಡಿದ್ದ ಶಶಿಕಲಾ ಅವರ ದಿವಂಗತ ಪತಿ ರಂಗಾಯಣದ ಬಸವರಾಜ ಕೊಡಗೆ ಅವರ ನೆನಪಿಗಾಗಿ ಈ ನಾಟಕ ಪ್ರದರ್ಶನವನ್ನು ಅರ್ಪಿಸಲಾಗಿತ್ತು. ನಾಟಕದ ಪರಿಣಾಮವನ್ನು ಹೆಚ್ಚಿಸುವಲ್ಲಿ ಉತ್ತಮ ಸಂಗೀತದ ಕೊಡುಗೆ ನೀಡಿದವರು ಭೂಷಣ್ ಭಟ್ ಹಾಗೂ ಬೆಳಕಿನ ವಿನ್ಯಾಸಕರಾಗಿ ಉತ್ತಮವಾಗಿ ಕೆಲಸ ಮಾಡಿದವರು ಸಗಾಯ್ ರಾಜು. ಆಗಾಗ ಇಂಥ ಉತ್ತಮ ಪ್ರದರ್ಶನಗಳಿಗೆ ಕಾರಣಕರ್ತರಾದವರು ಸಂಚಾರೀ ಥಿಯೇಟರ್ನ ಎನ್. ಮಂಗಳಾ ಅವರ ಆಸಕ್ತಿ-ಶ್ರಮಗಳನ್ನು ಗುರುತಿಸಲೇ ಬೇಕು.






Thumba chennagide. Nataka nodidante bhasavaytu