– ವಿಜಯಕಾಂತ ಪಾಟೀಲ

ಕಾವ್ಯದ ಬಗೆಗೆ ಮಾತನಾಡುವುದು,ಬರೆಯುವುದು ಅಂದರೆ ಅದೊಂದು ಮಹಾ ಸಂಭ್ರಮ. ಅಂತೆಯೇ ಸವಾಲಿನ ಕೆಲಸವೂ ಹೌದು. ಆ ಹಾದಿಯಲ್ಲಿ ಸುಲಭದಲ್ಲಿ ಹಾದು ಹೋಗುವುದು ಕಷ್ಟ. ಶಾರ್ಟಕಟ್ ದಾರಿಯಂತೂ ಅದಲ್ಲವೇ ಅಲ್ಲ ಅನ್ನುವ ಸತ್ಯದೊಂದಿಗೇ ನನ್ನ ಓದಿನ ಮಿತಿ,ವ್ಯಾಪ್ತಿಯ ಚೌಕಟ್ಟನಲ್ಲಿಯೇ ಪ್ರಾಮಾಣಿಕವಾಗಿ ಒಂದಷ್ಟನ್ನು ನನಗೊಲಿದಂತೆ, ದಕ್ಕಿರುವಂತೆ ಹಾಡಲು, ಆಡಲು, ನೋಡಲು ಈ ಮೂಲಕ ಅಣಿಯಾಗುತ್ತೇನೆ. ಇದನ್ನು ಈಚಿನ ಕವಿಯೊಬ್ಬನ ಆತ್ಮ ನಿವೇದನೆ ಹಾಗೂ ಈಚಿನ ಕಾವ್ಯೋದ್ಯಮದ ಒಂದು ಪುಟ್ಟ ಪರಿವೀಕ್ಷಣೆ ಎಂದು ಪರಿಭಾವಿಸಿದರೆ ನನಗೂ ಖುಷಿ; ಹಾಗೆಯೇ,ಈ ಮೂಲಕ ಅರ್ಥಪೂರ್ಣವಾದ ಒಂದು ಚಚರ್ೆ ನಡೆದರೆ ಕಾವ್ಯದ ಭವಿಷ್ಯ ಮತ್ತು ಹಿತಕ್ಕೆ ಮತ್ತಷ್ಟು ಪೂರಕವೂ ಆದೀತೆಂಬ ಆಶಯದೊಂದಿಗೆ ಒಂದಷ್ಟು ಮಾತುಗಳು ಇಂತಿವೆ…
ಈ ಹೊತ್ತು ಕಾವ್ಯ ಬರೀ ಕಲಾತ್ಮಕವಾಗಿ ಕಟ್ಟುವ ಒಂದು ಕ್ರಿಯೆಯಾಗಿ ಮಾತ್ರ ಉಳಿದಿಲ್ಲ ಎನ್ನಲು ಸಕಾರಣಗಳಿವೆ. ಹಲವು ಮಗ್ಗುಲುಗಳಿಗೆ ತೆರೆದುಕೊಂಡ ಬದುಕಿನ ಒಂದು ಮಹತ್ವದ ಭಾಗವಾಗಿ, ಕರ್ತವ್ಯವಾಗಿ, ಜವಾಬ್ಧಾರಿಯಾಗಿ ಕವಿಯೊಬ್ಬನ ಮುಂದೆ ಸವಾಲಿನಂತೆ ಈ ಕಾವ್ಯೋದ್ಯಮ ನಿಂತಿದ್ದು ಖರೆ. ಬರೆಯುವುದೇ ಒಂದು, ಬದುಕುವುದೇ ಒಂದು ಎಂಬಂತಾಗಿ ಕವಿತೆ ಸಾಗಹೊರಟರೆ ಅದು ನಿಜವಾದ ಕಾವ್ಯದ ದಿವಂಗತ ಸ್ಥಿತಿಯೂ ಆಗಬಲ್ಲುದು. ಕವಿ ನಡೆಯುವ ಹಾದಿ, ಯೋಧ ನಡೆಯುವ ಹಾದಿಯೂ ಆಗಿ, ಜನರ ನೋವಿಗೆ ಮಿಡಿವ ಪ್ರಾಣ ಮಿತ್ರನೂ ಆಗಿ ಕವಿಯೊಬ್ಬ ನಿಷ್ಠೆಯಿಂದ ಕಾವ್ಯದೀಕ್ಷೆಯನ್ನು ತೊಡಬೇಕಾದ ಬಹುದೊಡ್ಡ ಅನಿವಾರ್ಯತೆ ಎಂದಿಗಿಂತ ಇಂದು ಹೆಚ್ಚಾಗಿಯೇ ಇದೆ. ಇಂಥ ಕಾವ್ಯದೀಕ್ಷೆ ತೊಟ್ಟುಕೊಂಡ ಬಹುದೊಡ್ಡ ತರುಣಕವಿಗಣ ಯೋಧರಂತೆ ಈ ಹೊತ್ತು ನಮ್ಮ ಮುಂದೆ ಬರೆಯುವ ಹೋರಾಟದಲ್ಲಿ ಬದ್ಧರಾಗಿರುವುದು ಸಾಹಿತ್ಯಾಸಕ್ತರಿಗಷ್ಟೆ ಅಲ್ಲ, ಸಾಮಾಜಿಕವಾಗಿ ಬದಲಾವಣೆ ಬಯಸುವ ಎಲ್ಲರಿಗೂ ನೆಮ್ಮದಿಯ ನಿಟ್ಟುಸಿರು ಬಿಡಲು ಕಾರಣವಾಗಿದೆ.
ಬಹುತೇಕ ಕವಿತೆಯಿಂದಲೇ ಶುರುವಾಗುವ ನಮ್ಮ ಈ ಬರವಣಿಗೆಯ ಹೋರಾಟವು ಅಷ್ಟು ಸಲೀಸಲ್ಲ ಎಂಬುದೂ ಗೊತ್ತಿದೆ. ಬರೆಯುವುದು ಸಲೀಸಾದರೆ ಬರವಣಿಗೆಯ ಕಸುವೂ ಮುಕ್ಕಾಗುತ್ತದೆ ಎನ್ನುವುದನ್ನು ಹಿರಿಯರ ಮಾತಿಂದ ನಾವು ಈಗಾಗಲೇ ಅರಿತುಕೊಂಡಿದ್ದೇವೆ.
ಬರೆಯುವುದನ್ನು ನಾನು `ಹೋರಾಟ’ ಎಂದೇ ಕರೆಯಲು ಇಷ್ಟಪಡುತ್ತೇನೆ ಈಗಲೂ. ಈ ಹೊತ್ತಿನಲ್ಲಿ ಹಲವಾರು ಸಾಮಾಜಿಕ ವಿಷಮತೆಗಳ ನಡುವೆ ನಮ್ಮ ಕವಿತೆ ಸಿಗಹಾಕಿಕೊಂಡು ತೊಳಲಾಡುತ್ತಿದೆ; ಉಸಿರಾಡಲು ಹೆಣಗಾಡುತ್ತಿದೆ. ಹೀಗಾಗಿ ಕವಿತೆ ಕಟ್ಟುವುದು ಬಿಕ್ಕಿ ಬಿಕ್ಕಿ ಅತ್ತೂ ಗಟ್ಟಿಯಾಗಲು, ಇರುವಿಕೆ ಸಾಬೀತು ಮಾಡುವ ಹವಣಿಕೆಯಾಗಿಯೂ, ಹೋರಾಟವಾಗಿಯೂ ಮಾಪರ್ಾಡುಗೊಂಡಿದೆ. ಒಂದು ರೀತಿಯಿಂದ ಕಾವ್ಯದ ಹರಿವು ಸಂಕಷ್ಟದ ಸ್ಥಿತಿಯಲ್ಲಿದ್ದಂತೆ ಭಾಸವಾದರೂ, ಮತ್ತೊಂದು ರೀತಿ ಯೋಚಿಸಿ
ನೋಡಿದಾಗ ಇದು ಕಾವ್ಯದ ಪರ್ವಕಾಲವೂ ಹೌದು ಅನ್ನಿಸುತ್ತಿದೆ. ಕವಿಗಳಿಗೆ ಬೇಕಾದ ಸರಕು ನೆಮ್ಮದಿ ನೀಡುವಂತಿಲ್ಲವಾದರೂ ಪೂರೈಕೆ ಮಾತ್ರ ಈಗ ಸಾಕಷ್ಟಿದೆ.
ಸಂಭ್ರಮಿಸಿ ಕಾವ್ಯ ಹೊಸೆಯುವ, ಆ ಲೋಕದಲ್ಲಿ ವಿಹರಿಸುವ ಲೀಲಾಜಾಲ ಲಹರಿಯಾಗಿಯಷ್ಟೇ ಕವಿತೆ ಇಂದು ಹೊರಹೊಮ್ಮುತ್ತಿಲ್ಲ. ಕಟ್ಟಿಕೊಂಡ ಕನಸುಗಳು, ಮೆತ್ತಿಕೊಂಡ ಮಧುರ ಭಾವನೆಗಳು, ಆಸೆ-ಆಕಾಂಕ್ಷೆಗಳು ಕವಿತೆಯಾಗಿ ರೂಪುಗೊಳ್ಳುವ ಸಂಭವ ಬಹುಮಟ್ಟಿಗೆ ಇಂದು ಸಮಾಧಿ ಸ್ಥಿತಿ ತಲುಪಿದೆ. ಬಡತನ, ಜಾಗತೀಕರಣ, ಆಧುನೀಕರಣ, ನಿರುದ್ಯೋಗ ಪರ್ವ, ಹಸಿವು-ನೀರಡಿಕೆ, ಹಿಂಸಾಚಾರ, ಅತ್ಯಾಚಾರ, ಬ್ರಹ್ಮಾಂಡ ಭ್ರಷ್ಟತೆ, ಅಸಮಾನತೆ, ಜಾತಿ ಭೂತದ ನಗ್ನ ನರ್ತನ, ರಾಜಕಾರಣದ ಬೀಭತ್ಸ ನಡೆ, ಪ್ರಕೃತಿ ವಿನಾಶ, ದ್ವೀಪವಾಗುತ್ತಿರುವ ಬದುಕು, ಅವಿಭಕ್ತ ಪರಂಪರೆಯ ಅವಸಾನ, ರಕ್ತ ಮತ್ತು ಸಾಮಾಜಿಕ ಸಂಬಂಧಗಳ ಶಿಥಿಲತೆಯಂಥ ಘೋರಾತಿ ಘೋರ ಅನಿಷ್ಟಗಳು ಕಾವ್ಯದ ಪಾರಂಪರಿಕ ಹಾದಿಯನ್ನೇ ಧ್ವಂಸಗೊಳಿಸುವ ಮೂಲಕ ಸದ್ಯದ `ನಿಜವಾದ ಕಾವ್ಯದ ನಡೆ’ಯನ್ನು ಸ್ಪಷ್ಠೀಕರಿಸಿವೆ.
ಕಾವ್ಯ ಕಟ್ಟುವುದು ಅಂದರೆ ಬರೀ ಅಕ್ಷರಗಳನ್ನು ಪೋಣಿಸಿ, ಪದಗಳ ಕುಣಿಸಿ,ಮಣಿಸಿ ಅನಾವರಣಗೊಳಿಸಬಲ್ಲ ಸುಂದರ ಅಭಿವ್ಯಕ್ತಿಯಷ್ಟೇ ಅಲ್ಲ; ಸುಮಧುರ ಭಾವನೆಗಳ ಮೆರವಣಿಗೆಯೂ ಅಲ್ಲ; ಅದೊಂದು ನಿರಂತರ ತಿವಿಯುವ, ತಟ್ಟುವ, ಕುಟ್ಟುವ, ಬಾರಿಸುವ, ಒಡೆದ ಮನಸು-ಜಡಗೊಂಡ ಕನಸುಗಳಿಗೆ ಕಸುವು-ನೆರಳು-ಸಮಾಧಾನ ಕೊಡುವ ಸಮರ್ಥ `ಕಟ್ಟೋಣ’ವೂ ಆಗಿ ಇನ್ನಷ್ಟು ಪ್ರಮಾಣದಲ್ಲಿ ಪರಿಣಮಿಸಬೇಕಿದೆ. ತಕ್ಕಮಟ್ಟಿಗೆ ಈ ದಿಶೆಯಲ್ಲಿ ನಮ್ಮ ಸಮಕಾಲೀನ ಕವಿಗಣದ ಶ್ರಮವನ್ನು ತಳ್ಳಿಹಾಕುವಂತಿಲ್ಲ. ಅಲ್ಲದೇ `ಕಾವ್ಯದ ಕಾಯಕ’ ಕೇವಲ ತೇಲುವುದಕ್ಕಷ್ಟಾಗಲೀ, ನೂತ ಬಟ್ಟೆಗೆ ಬಣ್ಣ ಬಳಿದು ಚೆಂದ ಮಾಡುವುದಕ್ಕಷ್ಟಾಗಲೀ, ತತ್ವಜ್ಞಾನ ಬೋಧಿಸಿ ಬೌದ್ಧಿಕ ಪ್ರಭುತ್ವ ಮೆರೆಯುವ ತಂತ್ರವಾಗಿಯಾಗಲೀ, ಸಂಕೀರ್ಣತೆಯ ಮಡುವಲ್ಲಿ ಸಿಕ್ಕು ನರಳುವ `ದೂರ’ದ ಸಾಂಗತ್ಯವೆಂದಾಗಲೀ ಆಗಬೇಕಾದ ಅಗತ್ಯವಿಲ್ಲ; ಸರಳ-ಸುಗಮದ ಹಾದಿಯಲ್ಲಿ ಸಾಗಿಯೇ ನೇಯುವ, ಬೆಸೆಯುವ, ನೆಮ್ಮದಿ ನೀಡುವ ತನುಮನದ ಪ್ರಜ್ಞಾಪೂರ್ವಕ ಮಾರ್ಗವಾಗಬೇಕು ಎಂಬುದು ಹಲವರಂತೇ ನನ್ನ ಅಪೇಕ್ಷೆಯು ಹೌದು; ಖಂಡಿತ ಅಪ್ಪಣೆಯೆಂದು ಭಾವಿಸಬೇಕಾಗಿಲ್ಲ.!
ಇಷ್ಟೆಲ್ಲದರ ನಡುವೆಯೂ ಅತೀಯಾದ ಸಾಮಾಜಿಕತೆ ಮತ್ತು ಅತೀಯಾದ ವೈಯಕ್ತಿಕತೆಯ ಮೂಲಕ ಕಾವ್ಯ ಒಮ್ಮೊಮ್ಮೆ ತನ್ನತನವನ್ನು ಕೊಂಚ ಮಟ್ಟಿಗೆ ಈಗ ಕಳೆದುಕೊಂಡಿದೆಯೇನೋ ಅನ್ನಿಸುತ್ತಿದೆ. ಕೆಲವು ಸಮಕಾಲೀನ ಕವಿಗಳು ಇಂಥ ಭ್ರಮೆಯಿಂದ ಹೊರಬರಬೇಕಾದ ಅಗತ್ಯವೂ ಇದೆ. ಸಾಮಾಜಿಕ ಪ್ರಜ್ಞೆ ಎಷ್ಟು ಮುಖ್ಯವೋ ಅಷ್ಟೇ ಸೌಂದರ್ಯ ಪ್ರಜ್ಞೆಯೂ ಮುಖ್ಯ ಅನ್ನುವುದನ್ನು ಯಾರು ಅಲ್ಲಗಳೆಯಲಾರರು.
ಈಚಿನ ಕಾವ್ಯದಲ್ಲಿ ಗ್ರಾಮೀಣ ಸಂವೇದನೆ ಇರುವಂತೆಯೇ ನಗರ ಸಂವೇದನೆಯೂ ತನ್ನ ಮಹತ್ವದ ಪಾಲನ್ನು ಪಡೆದುಕೊಂಡಿದೆ. ಕಾವ್ಯ ಬಂಧದ ತೆಕ್ಕೆಯಲ್ಲಿಯೇ ಕವಿತೆ ವಿವಿಧ
ಸಂವೇದನೆಗಳನ್ನು ಮೈಗೂಡಿಸಿಕೊಂಡು ನಡೆಯುತ್ತಿದೆಯಾದರೂ ವಾಚಾಳಿತನ, ಗದ್ಯಗಂಧೀ ಲಹರಿ ಕೂಡ ಈಚಿನ ಕಾವ್ಯದ ಪ್ರಮುಖ ಲಕ್ಷಣವಾಗಿ ಗೋಚರಿಸುತ್ತಿದೆ.
ಏಕತಾನತೆಯ ಚಹರೆ ಅಲ್ಲಲ್ಲಿ ಕಾಣಸಿಕ್ಕರೂ ವೈವಿದ್ಯತೆಗೇ ಆದ್ಯತೆಯಿರುವುದೂ ನಿಚ್ಚಳವಾಗಿ ಗೋಚರಿಸುತ್ತದೆ. ಸಿಟ್ಟು, ಆಕ್ರೋಶ, ಹತಾಶೆ, ಧಾವಂತದ ಈ ಬದುಕಿನ ಜಂಜಾಟದಲ್ಲಿ ಕಾವ್ಯಕ್ರಿಯೆ ತುಸು ವ್ಯವಧಾನರಹಿತವಾಗಿಯೂ ಮುನ್ನಡೆಯುತ್ತ ಕಾವ್ಯ ಸಂಯಮವೂ ಕಾಣೆಯಾಗಿದ್ದು ಕಾವ್ಯ ಹೀಗೇ ಇರಬೇಕು ಅನ್ನುವವರಿಗೆ ಆತಂಕ ಹುಟ್ಟಿಸಿದೆ.
ಹಿಂದಿನ ಕಾಲದ ಹಿರಿಯರು ಹೇಳುತ್ತಿದ್ದರು; ಹೆಣ್ಣಿಗೆ ಸನ್ನೆ-ಸೂಕ್ಷ್ಮ ಇರಬೇಕು ಎಂದು. ಕಾವ್ಯಕ್ಕೂ ಈ ಮಾತು ಅನ್ವಯಿಸುತ್ತದೆ ಅಂತಾ ನನಗನ್ನಿಸುತ್ತಿದೆ. ಸಾಕಷ್ಟು ಒಳ್ಳೆಯ ಕವಿತೆಗಳು ಈಗಿನ ತಲೆಮಾರಿನ ಕವಿಗಳಿಂದ ಹುಟ್ಟುತ್ತಿವೆ ಎಂಬ ಆಶಾವಾದದ ಜೊತೆಗೆ ಕೆಲವು ಆತಂಕಗಳು ಸಹ ನಮ್ಮ ಮುಂದಿವೆ.
ಅನುಕರಣೆಯ ಜಾಡಿನಿಂದ ಬಹುತೇಕ ಇಂದಿನ ಕವಿಗಳು ದೂರವಿರುವುದು ಒಳ್ಳೆಯ ಲಕ್ಷಣವೇ ಆದರೂ ಸಾರಾಸಗಟಾಗಿ ನಮ್ಮ ಹಿರಿಯ ಕವಿಗಳನ್ನು, ಆ ಅವರ ಕಾವ್ಯಮಾರ್ಗವನ್ನು-ಮಾದರಿಯನ್ನು ತಾತ್ಸಾರದಿಂದ ನೋಡುವ ಸಣ್ಣದಾದ ಒಂದು ತಿರಸ್ಕಾರ ಮನೋಭಾವ ಕೂಡ ಇಂದು ಕಾಣಿಸುತ್ತಿದೆ. ಈಗ ಹಿರಿಯರಾಗಿರುವ ಕನ್ನಡದ ಕವಿಗಳ ಕಾವ್ಯಕಸರತ್ತನ್ನು, ಅವರ ಕೊಡುಗೆಯನ್ನು ಏನೇನೂ ಅಲ್ಲ ಎಂದು ಪರಿಭಾವಿಸುತ್ತಿರುವ ಈಗಿನ ಕೆಲವು ಕವಿಗಳು ಒಂದೆರಡು ಕವನ ಸಂಕಲನಕ್ಕೇ ಪ್ರವಾದಿಗಳಂತೆ ವತರ್ಿಸುತ್ತಿರುವುದನ್ನು ನೋಡಿದರೆ ಇದು ತಮ್ಮ ಕಾವ್ಯದ ಹಾದಿಗೆ ಹಾಗೂ ವ್ಯಕ್ತಿತ್ವಕ್ಕೆ ತಾವೇ ತಂದೊಡ್ಡಿಕೊಳ್ಳುತ್ತಿರುವ ಭಾರೀ ಕಂಟಕದಂತೆಯೂ ತೋರುತ್ತಿದೆ. ಹಾಗೇ ಇದು ಸ್ವಯಂಪತನ ಲಕ್ಷಣವೂ ಹೌದು. ಪರಂಪರೆಯಿಂದ ನಾವು ಪಡೆದುಕೊಳ್ಳುವುದೂ ಇದೆ ಎನ್ನುವುದನ್ನು ಮನಗಾಣಬೇಕಾದ ಅಗತ್ಯವೂ ಇರುವಂತೆ, ಸಿದ್ಧ ಮಾದರಿಯನ್ನು ಧಿಕ್ಕರಿಸುವ ನೆಪದಲ್ಲಿ ನಮ್ಮ ತಲೆಮಾರು ಎಂಥದೋ ದುಡುಕಿನ ನಡೆಯನ್ನು ಬಾಚುತ್ತಿದೆಯೇನೋ ಎಂದೂ ದಿಗಿಲಾಗುತ್ತಿದೆ.
ಕವಿತೆ ಬರೆದಾದ, ಸಂಕಲನ ಹೊರಬಂದ ತತ್ ಕ್ಷಣದಲ್ಲೇ ಪೂರಕವಾದ ವಿಮಶರ್ೆ-ವಿಶ್ಲೇಷಣೆ ಮಾದ್ಯಮಗಳ ಮೂಲಕ ಬರಬೇಕು, ಯಾವುದಾದರೊಂದು ಪುರಸ್ಕಾರವನ್ನು ಅದು ಹೊಡಕೊಂಡೇ ತೀರಬೇಕು ಎಂಬ ತಹತಹದಲ್ಲಿ ನಿದರ್ಾಕ್ಷಿಣ್ಯ ಕೃತಿ ಅವಲೋಕನ, ನೇರ ವಿಮಶರ್ೆಯನ್ನು ಒಪ್ಪಿಕೊಳ್ಳುವ ಮನೋಸ್ಥಿತಿಯೂ ನಮ್ಮದಾಗುತ್ತಿಲ್ಲ ಅನ್ನುವುದೇ ಆತಂಕಕಾರೀ ಸಂಗತಿಯಾಗಿದೆ. ಎಲ್ಲದಕ್ಕೂ ಅವಸರಿಸುವ, ಸಂಯಮ ರಹಿತವಾದ ನಮ್ಮ ಈಚಿನ ಕವಿಗಳ ನಡೆಯಿಂದ ಕಾವ್ಯ ಸಹ ಎಲ್ಲೋ ಒಂದಷ್ಟು ಎಡುವುತ್ತಿದೆ ಅನ್ನಿಸದೇ ಇರಲಾರದು. ಮೂಲತಃ ಸೂಕ್ಷ್ಮತೆ, ಸಾವಧಾನ, ಸಂಯಮ ಗುಣವನ್ನು ಬಯಸುವ ಕವಿತೆ ಈಗಿನ ತರಾತುರಿ ಪ್ರವೃತ್ತಿ, ಗಡಿಬಿಡಿತನದ ಅಮಲಿನಲ್ಲಿ ಬಿದ್ದು ಅಷ್ಟಿಷ್ಟು ನರಳುತ್ತಿದೆ. ಪ್ರಶಸ್ತಿ, ಬಹುಮಾನಗಳ ಆಮಿಷ ವಿಪರೀತವಾಗಿ, ಕವಿಗಳೂ ಎಲ್ಲಿ ಲಾಬಿಕೋರರಾಗಿ ಬಿಡುವರೋ, ಅಂಥ ಎಂಜಲಿನಲ್ಲಿ ಬಿದ್ದು ಎಲ್ಲಿ ಮೈಲಿಗೆಯಾಗುವರೋ ಎಂಬ
ಭಯದೊಂದಿಗೇ ಒಳ್ಳೆಯ ಕವಿತೆಗಳಿಗೂ ಬರ ಬಂದುಬಿಟ್ಟರೇ…ಎಂಬ ಗಾಬರಿ ಕೂಡ ಇದ್ದೇ ಇದೆ.

ಈಚಿನ ತಲೆಮಾರಿನ ಕವಿಗಳಲ್ಲಿ ಸಮರ್ಥರಾದ ನೂರಾರು ಜನ ಕವಿಗಳಿದ್ದರೂ ಎಲ್ಲೋ ಐದಾರು ಜನ ಕವಿಗಳನ್ನು ಮಾತ್ರ ಕೆಲವು ಪತ್ರಿಕೆಗಳು, ಮಾದ್ಯಮಗಳು, ಕೆಲವು ಹಿರಿಯ ವಿಮರ್ಶಕರು ಎತ್ತಿ ಹಿಡಿದು, ಅಂಥವರ ಕೃತಿಗಳನ್ನು ಮಾತ್ರ ಮಹಾನ್ ಕೃತಿಗಳು ಎಂದು ಬಿಂಬಿಸುತ್ತಿರುವುದರ ಹಿನ್ನೆಲೆ ಇನ್ನೂ ಅರ್ಥವಾಗುತ್ತಿಲ್ಲ. ಇಲ್ಲಿ ಕೂಡ ಗುಂಪುಗಾರಿಕೆ, ಜಾತಿ, ಆ ವಾದ ಈ ವಾದಗಳ ಹಂಗು-ಹುನ್ನಾರಗಳು ಇದ್ದಿರಬಹುದೋ ಎಂಬ ಅನುಮಾನವೂ ಇದೆ.
ಹಳ್ಳಿಗಾಡಿನಲ್ಲಿ ಬೇಸಾಯ ಮಾಡಿ ಬದುಕಿಡೀ ದೇಕಲು ಪಣತೊಟ್ಟ, ಕಡುಕಷ್ಟದ, ಬಡತನದ, ಬದುಕಿನ ಅನೇಕ ಸಂಕಷ್ಟಗಳೊಂದಿಗೇ ತಮ್ಮ ಕಾವ್ಯಕರ್ಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ, ಪತ್ರಿಕೆಯ ಪುಟಗಳಲ್ಲಿ ಹುಡುಕಾಡಿದರೂ ಸಿಗದ ಅಸಂಖ್ಯಾತ ತರುಣ ಕವಿಗಳು, ಅವರ ಕವಿತೆಗಳು ಯಾಕೆ ನಮ್ಮ ಈ ಮಹಾಮಂದಿಯ ಗಮನ ಸೆಳೆಯುತ್ತಿಲ್ಲವೋ ನಾನಂತೂ ಕಾಣೆ. ಈ ಹಿನ್ನೆಲೆಯಲ್ಲಿ ನಮ್ಮ ನಡುವಿನ ಬಹಳಷ್ಟು ಕವಿಗಳಿಗೆ, ಅವರ ಕವಿತೆಗಳಿಗೆ ಯೋಗ್ಯ `ಮಾನ’ ದೊರಕಿಲ್ಲ, ದೊರಕಬಹುದಾದ ಸಂಭವವೂ ಇಲ್ಲ ಎಂಬುದಂತೂ ನಿಜ. ಆದರೆ, ಒಳ್ಳೆಯ ಕವಿ-ಕವಿತೆಗಳಿಗೆ ಎಂಥ `ರಾಜಕಾರಣ’ ಮಾಡಿದರೂ ಸಾವಿಲ್ಲ ಎನ್ನುವುದೂ ದಿಟವೇ.!
ಒಟ್ಟಾರೆಯಾಗಿ ಈ ಹೊತ್ತಿನ ಹೊಸಬರ ಕಾವ್ಯದಲ್ಲಿ ಈ ಎಲ್ಲ ಆಶಾದಾಯಕ ಅಂಶಗಳಿರುವುದನ್ನು ಹೀಗೆ ಗುರುತಿಸಬಹುದಾಗಿದೆ:
-ಈ ಹೊತ್ತಿನ ಹೊಸಬರ ಕಾವ್ಯದಲ್ಲಿ ಒಂದು ವಿಭಿನ್ನ ಪ್ರಪಂಚವಿದೆ.
-ಹೊಸ ಬಗೆಯಿಂದ ಜೀವನವನ್ನು ನೋಡಬಲ್ಲ ತಾಕತ್ತಿದೆ.
-ಸಮಚಿತ್ತದ ಒಳನೋಟವಿದೆ.
-ಮಾನವೀಯ ಸಂವೇದನೆಗಳ ದನಿಯ ಧಾರೆಗೆ ದನಿಗೂಡಿಸುವ ಇರಾದೆಯಿದೆ.
-ಭೂಮಿ ತಿರುಗುವ ಶಬ್ದವನ್ನೂ ಆಲಿಸುವಷ್ಟು ತಾಳ್ಮೆಯಿದೆ.
-ಪ್ರೀತಿ ಮತ್ತು ಕ್ರಾಂತಿ ಎರಡನ್ನೂ ಸಮತೂಗಿಸಿ ನೋಡುವ ಹಳವಂಡವಿದೆ.
-ಪ್ರತಿರೋಧಾತ್ಮಕ ಗುಣವಿದೆ.
-ಕವಿತೆಯಾಗಿಸುವ ನಿಟ್ಟಿನಲ್ಲಿ ಒಳಗಿನ ಸತ್ಯ ಮತ್ತು ಹೊರಗಿನ ಸತ್ಯಗಳು ಇಲ್ಲಿ ಬೇರೆ ಬೇರೆಯಾಗಿ ಕಾಣಸಿಗುವುದಿಲ್ಲ.
-ನಿರಂತರವಾಗಿ ಬದುಕನ್ನು ಶೋಧಿಸುವ ಕಡೆಗೇ ಒಲವಿದೆ.
-ಸ್ವಯಂ ದೀಪಕತೆಯ ತೇಜಸ್ಸಿದೆ.
-ಅಂತರ್ಜಲದಂತೆ ದುಮುದುಮಿಸುವ ಭಾವ ಗೀತಾತ್ಮಕತೆಯೂ ಕವಿತೆಗಳ ಕೆಳಗೆ ಹರಿಯುವುದು ಕಾಣಿಸುತ್ತಿದೆ.
-ಈಚಿನ ಕೆಲವಾರು ಕವಿತೆಗಳಲ್ಲಿಯಾದರೂ ಅನುಭವವನ್ನು ಒಂದು ಉತ್ಕಟ ಭಾವಕ್ಷಣದ ಪರಿಧಿಯೊಳಗೆ ತರುವ ಪ್ರಯತ್ನ ಕೂಡ ಇದೆ. ತನ್ನ ತಾನರಿವ ಪ್ರಾಮಾಣಿಕ ಕವಿತೆಗಳೂ ಜನ್ಮ ತಾಳುತ್ತಿವೆ.
-ಹೇಳುವ ಕ್ರಮದಲ್ಲಿಯೂ ಹೊಸತನ, ಲವಲವಿಕೆ, ವಿಭಿನ್ನ ಮಂಡನೆಯ ತಂತ್ರವಿದೆ.
-ಬಂಡಾಯ,ದಲಿತ,ಮಹಿಳಾ ಸಂವೇದನೆಯು ಎಂಥ ತೀವ್ರತೆಯಲ್ಲೂ ತನ್ನ ಬಿಸುಪು,ತನ್ಮಯತೆಯನ್ನು ಉಳಿಸಿಕೊಂಡಿದ್ದು ಕಾಣಿಸುತ್ತಿದೆ. ನಮ್ಮ ಕಾಲದ ಚರಿತ್ರೆಯನ್ನು ವಿವಿಧ ರೂಪಕಗಳ ಮೂಲಕ ಗಂಭೀರವಾಗಿ ನಿರೂಪಿಸುವ ತಹತಹವಿದೆ.
-ಹಳ್ಳಿಗಾಡು, ಗುಡಿಸಲು, ಜೋಪಡಿಗಳು, ರೈತರ ಸಂಕಷ್ಟಗಳು, ಮತೀಯವಾದದ ಕೇಡುಗಳು, ಪ್ರಕೃತಿ ಮೇಲಿನ ಹಲ್ಲೆ, ಲೂಟಿಕೋರ ಸಂತತಿಯ ದಂಗೆಗಳೇ ಮೊದಲಾಗಿ ಮತ್ತೆ ಮತ್ತೆ ಕವಿತೆಗಳ ಒಡಲನ್ನು ಬಿಡದೇ ಮುತ್ತಿಕೊಂಡು ಅನುರಣನಗೊಳ್ಳುತ್ತಿರುವುದು ಕೂಡ ಅಪೇಕ್ಷಣಿಯವೇ ಆಗಿದೆ.
-ಬದುಕಿನ ಪ್ರತಿಕ್ಷಣದ ತಲ್ಲಣಗಳನ್ನೇ ತುಡಿತವನ್ನಾಗಿಸಿಕೊಂಡ ಈಗಿನ ಕವಿತೆಗಳಲ್ಲಿ ವೈಚಾರಿಕತೆ-ಚಿಂತನೆಗೂ ಮಿತಿ ಮೀರದಂತೆ ಜಾಗೆ ದಕ್ಕಿದೆ. ಕಾವ್ಯ ಎನ್ನುವುದು ಜೀವಪದವೂ ಹೌದು,ಜಾನಪದವೂ ಹೌದು ಎನ್ನುವುದನ್ನೂ ಈಗಿನ ಕಾವ್ಯ ಮತ್ತೆ ಮತ್ತೆ ರುಜುವಾತು ಪಡಿಸುತ್ತಲೂ ಇದೆ.
-ಎಂಥಹ ಸಾಂಸ್ಕೃತಿಕ ಚಿಂತನೆಯೂ ಮಾನವೀಯತೆಯ ಪರವಾಗಿರಬೇಕೆನ್ನುವುದು ನಮ್ಮ ಸಂವಿಧಾನದ ಆಶಯ ಹೇಗೋ ಹಾಗೇ ನಮ್ಮ ಕಾವ್ಯದ ಆಶಯವೂ ಕೂಡ. ಈ ಆಶಯಕ್ಕೆ ಪೂರಕವಾಗಿ ನಮ್ಮ ಈಗಿನ ಕಾವ್ಯದ ನಡೆ ಕೂಡ ಇದೆ. ಗಾಯಗಳಿಗೆ ಮದ್ದು ಅರೆಯುವ ಕಾಯಕವನ್ನು ಕೂಡ ಎಂದಿನಂತೆ ಇವತ್ತಿನ ಕಾವ್ಯವೂ ಮಾಡುತ್ತಿದೆ.
-ಇಂದಿನ ಕವಿಗಳು ನವೋದಯ, ನವ್ಯ, ಬಂಡಾಯ, ದಲಿತ ಸಾಹಿತ್ಯದ ಬಹುತೇಕ ಕುರುಹುಗಳೆಲ್ಲವನ್ನೂ ಉಳಿಸಿಕೊಂಡೇ ಮುಂದಡಿ ಇಡುತ್ತಿರುವುದು ಆಶಾದಾಯಕ ಸಂಗತಿಯೇ ಆಗಿದೆ. ಹೀಗೆ, ಹರಿಗಡಿಯದೇ ಹರಿಯುತ್ತಿರುವ ಕಾವ್ಯ ಕಾವ್ಯವಾಗಿಯೇ ಇರಬೇಕೆಂಬ ಹಲವರ ಅಪೇಕ್ಷೆಗೆ ಬಹಳಷ್ಟು ಹೊಸಬರು ನಿಷ್ಠರಾಗಿದ್ದರೂ ಎಲ್ಲೋ ಅಲ್ಪ ಪ್ರಮಾಣದಲ್ಲಿ ಕಾವ್ಯಬಂಧದ ಸಡಿಲಿಕೆಗೂ ಕೆಲವರು ಕಾರಣರಾಗುತ್ತಿರುವರೋ ಏನೋ ಎಂಬ ದುಗುಡವೂ ಇದೆ.
ಕಾವ್ಯದ ಶಕ್ತಿಯ ಬಗೆಗೆ, ಅದು ಮಾಡುವ ಪವಾಡದ ಬಗೆಗೆ ಪರಂಪರೆಯೇ ಸಾಕ್ಷಿಯಾಗಿರುವಾಗ ಮತ್ತೆ ಆ ಬಗೆಗೆ ಒತ್ತಿ ಹೇಳಬೇಕಾದ ಅಗತ್ಯವೂ ಇಲ್ಲವೆನಿಸುತ್ತದೆ. ಹಾಗೇ ಇಂದಿನ ಹಾಗೂ ಭವಿಷ್ಯದ ಕಾವ್ಯದ ಬಗ್ಗೆ ಖಂಡಿತ ನಿರಾಸೆ ಪಡಬೇಕಾದ ಅಗತ್ಯವಿಲ್ಲ ಎನ್ನುವ ನನ್ನ ಪ್ರಾಮಾಣಿಕ ಅನಿಸಿಕೆಯ ಮುಖಾಂತರ ಕಾವ್ಯದ ನೆಪದಲ್ಲಿನ ಈ ನನ್ನ ಕೊರೆತವನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತೇನೆ.





ಆಧುನಿಕ ಕನ್ನಡ ಕಾವ್ಯದ ಕುರಿತು ಇಷ್ಟೊಂದು ಸುದೀರ್ಘವೂ ಉತ್ಸಾಹಪೂರ್ಣವೂ ಅದ ಲೇಖನವನ್ನು ನಾನು ಸದ್ಯ ಇನ್ನೆಲ್ಲೂ ನೋಡಿಲ್ಲ. ಓದಿ ಖುಷಿಯಾಯಿತು. ವಿಜಯಕಾಂತ ಪಾಟೀಲರ ಮಾತುಗಳು ಮನನೀಯವಾಗಿವೆ. ಇವು ಇತರರಿಗೆ ಸ್ಫೂರ್ತಿ ನೀಡಲಿ ಎಂದು ಆಶಿಸೋಣ. ಕನ್ನಡದ ಕಾವ್ಯಪರಂಪರೆ ಬಹಳ ದೊಡ್ಡದು; ಆದರೂ ಆಯಾ ಕಾಲದ ಕವಿತೆ–ಅದು ಹೇಗೇ ಇದ್ದರೂ–ಆಯಾ ಕಾಲದಲ್ಲೇ ಬರಬೇಕು ಅಲ್ಲವೇ?
ಕೆ.ವಿ. ತಿರುಮಲೇಶ್
ನಮ್ಮ ಸಮ್ಮತಿಯೂ
ಆಧುನಿಕ ಕನ್ನಡ ಕಾವ್ಯದ ಬಹುಮುಖಿ ಚಿಂತನೆ.ಅರ್ಥಪೂರ್ಣ ಲೇಖನ.
vijaykant patilarige vandanegalu
Itteechin kavya kuritu ondu sakalik lekhan. itfteechege banda kavyagaleella kalape ( kelvarannu matra hortu padisi )ennuv dhorane sariyalla. eegina stitige mangala haadabekendare hosabar ranga pravesh vimarsha kshetradalloo aagabeku. andare maatra hosabar kavya hora jagattige parichayavaagalu saadhya. nimma e lekhan aa aashayavnnu hecchuvante maadide.sakaalik lekhan brediddeeri.
Olleya lekhana. Vijayakant neevu olleya kavi mattu olleya manushya. Adda godeya mile deepa ittante bareyuva vimarsheya gojige neevu yaake silukidiro gottagalilla. Hosabara bagge nimage yaake aatanka? Gatttiyadudu uliyuttade, sahrudayanannu tattada jollu haari hoguttade. Elladara madhyeyoo hosabara kaavyada bagge eradu olleya maatu barediddakke thanks. Ugulu sidiyadante sookshmavagi uguliddakkoo special thanks!!!!
Vijayakant patilara matugalu nammellara ola alapagalu agive ,kavi obbana samajika astitva mattu asmiteya jothege samakalina jagattannu eduru noduva prakriyeyalli namma niluvugalu mattu notagalu nivu helidante pramanikavagiye irabeku.nanobba tharuna kaviyagi nimma matugalannu nanantoo kanditavagi volage hakikolluthene.
nice… chennagide. Vijaykant patil nimma kavanvu ishte chennagiruttade. keep it up