ಶ್ರೀದೇವಿ ಕೆರೆಮನೆ
(ಜೀವನದಲ್ಲಿ ಹೊಂದಾಣಿಕೆ ತುಂಬಾ ಮುಖ್ಯ. ಜೀವನದ ಪ್ರತಿ ಹಂತದಲ್ಲೂ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಇಂದಿನ ಯುಗದಲ್ಲಿ ಬದುಕಲೇ ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ, ಆಫೀಸ್ಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ಬಸ್, ಟ್ರೈನ್ಗಳಲ್ಲಿ, ನಿಲ್ದಾಣಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಹಾಗಾದರೆ ನಾವು ಎಷ್ಟು ಮತ್ತು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಎಂದು ಮನಸ್ಸು ಒಪ್ಪದ್ದಕ್ಕೆಲ್ಲ ‘ಹ್ಞೂ’ ಅನ್ನಬೇಕೇ? ಇಲ್ಲ ಹಾಗೆ ಮಾಡುವ ಅಗತ್ಯವಿಲ್ಲ. ಮನಸ್ಸು ಒಪ್ಪದ್ದನ್ನು ಸಾರಾ ಸಗಾಟಾಗಿ ವಿರೋಧಿಸುವ ಹಕ್ಕು ನಮಗಿದೆ, ಶಕ್ತಿಯಿಂದ, ಅದೂ ಆಗದಿದ್ದರೆ ಯುಕ್ತಿಯಿಂದ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾದ ಹಲವಾರು ದಾರಿಗಳು ನಮ್ಮೆದುರಿಗಿದೆ. ಬಸ್ನಲ್ಲಿ ನಿಂತಾU, ಕುಳಿತಾಗ ಹಿಂಬದಿಯಿಂದ ಕೈ ಆಡಿಸುವವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿಲ್ಲ. ಮೇಲಾಧಿಕಾರಿ ಎಂಬ ಮುಲಾಜಿಗೆ ಬಿದ್ದು ನಮ್ಮನ್ನು ಒಲ್ಲದ ಕಾರ್ಯಕ್ಕೆ ಒಪ್ಪಿಸಿ ಹೊಂದಾಣಿಕೆ ಮಾಡಿಕೊಳ್ಳಬೇಕಿಲ್ಲ, ಹಾಸ್ಟೇಲ್ಗಳಲ್ಲಿ ಇಷ್ಟವಿಲ್ಲದವರೊಂದಿಗೆ ರೂಮ್ ಶೇರ್ ಮಾಡಿಕೊಳ್ಳಬೇಕಿಲ್ಲ. ವಿದ್ಯಾರ್ಥಿಗಳಾಗಿದ್ದರೆ ಇಷ್ಟವಿಲ್ಲದವರೊಂದಿಗೆ ಒಂದೇ ಬೇಂಚ್ ಮೇಲೆ ಕುಳಿತು ಹೊಂದಾಣಿಕೆ ಮಾಡಿಕೊಳ್ಳಬೇಕಿಲ್ಲ.)
ಆಕೆ ಒಬ್ಬ ಸಂಗೀತಗಾರ್ತಿ.ಹಾಡುವುದೆಂದರೆ ಆಕೆಗೆ ಪಂಚಪ್ರಾಣ. ಶಾಸ್ತೀಯವಾಗಿ ಸಂಗೀತಾಭ್ಯಾಸ ಮಾಡಿದ್ದ ಆಕೆ ಹಲವಾರು ಸ್ಟೇಜ್ ಪೋಗ್ರಾಂಗಳನ್ನು ನೀಡಿದ್ದಳು. ಹಣ ಹೆಸರು ಎರಡೂ ಆಕೆಯನ್ನು ತಾನಾಗಿಯೇ ಹುಡುಕಿಕೊಂಡು ಬಂದಿತ್ತು. ಆದರೆ ಮದುವೆ ಆದ ಮೇಲೆ ಆಕೆ ಹೊರಗಡೆ ಪ್ರೋಗ್ರಾಂ ಕೊಡುವುದಿರಲಿ, ಬಾತ್ರೂಂನಲ್ಲಿ ತನ್ನಷ್ಟಕ್ಕೆ ತಾನು ಹಾಡಿಕೊಳ್ಳಲೂ ಆಕೆಗೆ ಅವಕಾಶ ಇರಲಿಲ್ಲ. ಗಂಡನಿಗೆ ಆಕೆ ಹಾಡುವುದೇ ಇಷ್ಟ ಇರಲಿಲ್ಲ. ಆಕೆ ತನ್ನಷ್ಟಕ್ಕೆ ತಾನೇ ಗುನುಗುನಿಸಿದರೂ ಏನೋ ಅನಾಹುತ ಆದಂತೆ, ಅಕ್ಕ ಪಕ್ಕದ ಮನೆಯವರು ಕೇಳಿಸಿಕೊಂಡು ನಕ್ಕಂತೆ ಭ್ರಮಿಸಿ ಆಕೆಯ ಧ್ವನಿಯನ್ನು ಹೂತು ಹಾಕಲು ಪ್ರಯತ್ನಿಸುತ್ತಿದ್ದ. ಆಕೆಗೆ ಮೊದ ಮೊದಲು ಬೇಸರವೆನಿಸಿದರೂ ದಿನ ಕಳೆದಂತೆ ಅದೇ ರೂಢಿ ಆಯಿತು. ತವರಿನಲ್ಲಿಯೂ ಕೂಡ ತಂದೆ ತಾಯಿಯರು ‘ಸಂಸಾರ ಮುಖ್ಯ’ ಎಂದು ಹೇಳಿ ‘ನೀನು ಹಾಡದಿದ್ದರೂ ಏನಾಗುವುದಿಲ್ಲ. ಸಂಸಾರ ಉಳಿಸಿಕೊ. ಜೀವನದಲ್ಲಿ ಹೊಂದಾಣಿಕೆ ತುಂಬಾ ಮುಖ್ಯ’ ಎಂದು ಹೇಳಿ ಹೇಳಿ ಆಕೆಯ ಆಸೆಯನ್ನೂ, ಸಂಗೀತವನ್ನೂ ಉಸಿರುಗಟ್ಟಿಸಿ ಸಾಯಿಸಿ ಬಿಟ್ಟಿದ್ದರು. ‘ಜೀವನದಲ್ಲಿ ಹೆಣ್ಣಿಗೆ ಎಲ್ಲದಕ್ಕಿಂತ ಸಂಸಾರವೇ ಮುಖ್ಯ’ ಎಂದು ಆಕೆಯೂ ಮಾನಸಿಕವಾಗಿ ಒಪ್ಪಿಕೊಂಡು ಬಿಟ್ಟಿದ್ದಳು. ಹೊಂದಾಣಿಕೆಯ ಹೆಸರಿನಲ್ಲಿ ತನ್ನತನವನ್ನು ಸಾಯಿಸಿ ಜೀವನ ನಡೆಸುತ್ತಿದ್ದ ಆಕೆಯ ಜೀವನದಲ್ಲಿ ಬೀಸಿದ ಬಿರುಗಾಳಿ ಆಕೆ ಮತ್ತೆ ಸಂಗೀತದ ಕಡೆ ಮುಖ ತಿರುಗಿಸುವಂತೆ ಮಾಡಿತ್ತು. ಇಂಜಿನಿಯರ್ ಗಂಡ ರೆಸಿಟೇಶನ್ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಬಹುರಾಷ್ಟ್ರೀಯ ಕಂಪನಿಯ ಕೆಲಸದಿಂದ ಹೊರದಬ್ಬಲ್ಪಟ್ಟಾಗ ಜೀವನ ನಿರ್ವಹಣೆಗೆ ಆಕೆ ಅನಿವಾರ್ಯವಾಗಿ ಸಂಗೀತವನ್ನೇ ಅವಲಂಭಿಸ ಬೇಕಾಗಿ ಬಂತು. ಕೆಲವಷ್ಟು ಮಕ್ಕಳಿಗೆ ಸಂಗೀತ ಜ್ಯೂನಿಯರ್ ಹೇಳಿಕೊಟ್ಟು ಸಂಸಾರದ ತಿಂಗಳ ಆದಾಯಕ್ಕೆ ಒಂದಿಷ್ಟು ಹಣ ಸಂಪಾದಿಸ ತೊಡಗಿದಳು. ಮತ್ತೆ ಕೆಲವೇ ತಿಂಗಳಲ್ಲಿ ಬೇರೆ ಕಂಪನಿಗೆ ಸೇರಿದ ಗಂಡ ಪುನಃ ಆಕೆಯ ಸಂಗೀತವನ್ನು ದ್ವೇಷಿಸತೊಡಗಿದ. ಆದರೆ ಈ ಸಲ ಮಾತ್ರ ತನ್ನ ತನವನ್ನು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳಲು ಆಕೆ ಸಿದ್ಧವಿರಲಿಲ್ಲ. ಕಷ್ಟಕಾಲದಲ್ಲಿ ಅನ್ನ ನೀಡಿದ ವಿದ್ಯೆ ಎಂದು ಗಂಡನನ್ನು ಒಪ್ಪಿಸಿ ತಾನೂ ಸಂಗೀತವನ್ನು ಮುಂದಕ್ಕೆ ಕಲಿತು ಮಕ್ಕಳಿಗೆ ಪಾಠ ಹೇಳುವುದನ್ನು ಮುಂದುವರಿಸಿದಳು. ಗಂಡ ಬರುವಷ್ಟರಲ್ಲಿ ಆಕೆಯ ಸಂಗೀತ ಪಾಠ ಮುಗಿದಿರುವಂತೆ ತನ್ನ ಟೈಮಿಂಗ್ನ್ನು ಅಡ್ಜೆಸ್ಟ ಮಾಡಿಕೊಂಡಳು. ಈಗ ಗಂಡನೂ ತನ್ನ ಎದುರಿಗೆ ಪಾಠ ನಡೆಯುತ್ತಿಲ್ಲವಲ್ಲ ಎಂದು ತಾನೂ ತನ್ನ ಮನಸ್ಥಿತಿಯನ್ನೂ ಹೊಂದಿಸಿಕೊಂಡಿದ್ದಾನೆ.

ಆಕೆ ಶ್ರೀಮಂತ ಮನೆತನದ ಹುಡುಗಿ. ಆತ ಮಧ್ಯಮ ವರ್ಗದ ಹುಡುಗ. ಅದು ಹೇಗೋ ಆವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಕೆಗೆ ಶ್ರೀಮಂತಿಕೆಯ ಅಹಂ. ಮಾತು ಮಾತಿಗೆ ತಮ್ಮ ಮನೆತನದ ಬಗ್ಗೆ ಹೇಳಿಕೊಳ್ಳುತ್ತ ಆತನನ್ನು ತುಚ್ಯವಾಗಿ ಕಾಣುತ್ತಿದ್ದಳು. ಆತನಂತೂ ಆಕೆಗೆ ಹೊಂದಿಕೊಳ್ಳಲು ಬಹಳಷ್ಟು ಶ್ರಮಿಸಿದ್ದ. ಮದುವೆಗೆ ಮೊದಲೇ ಆಕೆಯ ಜೀವನಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಬೇಕೆಂದು ಪ್ಲಾನ್ ಮಾಡುತ್ತಿದ್ದ. ‘ಸರಿಯಾಗಿ ಇಂಗ್ಲೀಷ್ ಮಾತನಾಡಲು ಬರೋಲ್ಲ, ಟೇಬಲ್ ಮ್ಯಾನರ್ಸ ಇಲ್ಲ, ಜನರೊಂದಿಗೆ ಹೇಗೆ ಬಿಹೇವ್ ಮಾಡಬೇಕೆಂದು ಗೊತ್ತಿಲ್ಲ’ ಹೀಗೆ ಇಲ್ಲಗಳ ಪಟ್ಟಿ ಹಿಡಿದು ಆಕೆ ಆತನನ್ನು ಹೀಗಳೆಯುತ್ತಿದ್ದರೂ ತನ್ನನ್ನು ಮದುವೆ ಆಗಬೇಕಾದವಳು ಎಂಬ ಕಾರಣಕ್ಕಾಗಿ ಹೊಂದಿಕೊಲ್ಳುತ್ತಲೇ ಹೋದ. ಕೊನೆ ಕೊನೆಗೆ ಆಕೆಯ ದಬ್ಬಾಳಿಕೆ ಎಷ್ಟರ ಮಟ್ಟಿಗೆ ಹೋಯಿತು ಎಂದರೆ ಮಾತು ಮಾತಿಗೆ ‘ನೀನು ಮದುವೆ ಆದ ಮೇಲೆ ಹೀಗೆ ಮಾಡಿದರೆ ಡೈವೋರ್ಸ ಕೊಡಬೇಕಾಗುತ್ತದೆ’ ಎಂದು ಹೇಳ ತೊಡಗಿದ ಮೇಲೆ ಆತ ಯೋಚಿಸ ತೊಡಗಿದ. ಜೀವನಪೂರ್ತಿ ‘ತಾನು ಹೊಂದಿಕೊಳ್ಳುತ್ತಲೇ ಹೋಗ ಬೇಕೆ? ಒಂದು ವೇಳೆ ಹೊಂದಿಕೊಳ್ಳುವುದೆಂದರೂ ಅದು ಎಷ್ಟರ ಮಟ್ಟಿಗೆ?’ ಒಂದು ದಿನ ಆಕೆಯ ಜೊತೆ ಕುಳಿತು ಎಂದೆಂದೂ ಹೊಂದಿಕೆ ಆಗದ ಬಲವಂತದ ಜೀವನವನ್ನು ಸಾಗಿಸುವುದು ಬೇಡ ಎನ್ನುವುದನ್ನು ಚರ್ಚಿಸಿ ಬೇರೆಯಾದ. ಈಗ ಆತ ತನ್ನದೇ ಅಂತಸ್ತಿನ ಹುಡುಗಿಯನ್ನು ಮದುವೆ ಆಗಿ ಸುಖವಾಗಿದ್ದರೆ, ಆಕೆ ಕೂಡ ತನ್ನದೇ ಅಂತಸ್ತಿನವನನ್ನು ಮದುವೆ ಆಗಿ ಹೊಂದಾಣಿಕೆ ಆಗದೆ ಬೇರೆಯಾಗಿ ಆಗಿದೆ.
ಆಕೆ ಒಂದು ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಬಾಸ್ ಒಂದು ರೀತಿಯ ವಿಚಿತ್ರ ವ್ಯಕ್ತಿ. ತನ್ನೊಂದಿಗೆ ಎಲ್ಲದಕ್ಕೂ ಸಹಕರಿಸುವಂತೆ ಒತ್ತಡ ಹೇರುತ್ತಾನೆ. ಹಾಗೆ ಹೊಂದಾಣಿಕೆ ಮಾಡಿಕೊಂಡ ಒಂದೆರಡು ಸಹೋದ್ಯೋಗಿಗಳು ಹಾಯಾಗಿರುವುದನ್ನೂ ಆಕೆ ಕಂಡಿದ್ದಾಳೆ. ಈಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂದು ಆತ ಬಹಳಷ್ಟು ಉಪಟಳ ನೀಡಿಯಾಗಿದೆ. ಆಗೋದೇನಿದೆ? ಒಂದು ದಿನ ಕಣ್ಣು ಮುಚ್ಚಿ ಒಪ್ಪಿಕೊಂಡು ಬಿಟ್ಟರೆ ನಂತರ ಹಾಯಾಗಿರಬಹುದು ಎಂದು ಆಕೆಯ ಕಷ್ಟ ನೋಡಲಾಗದೇ ಪಕ್ಕದ ಟೇಬಲ್ಲಿನ ಗೆಳತಿ ಕಿವಿಯಲ್ಲಿ ಪಿಸುಗುಟ್ಟಿಯೂ ಆಗಿದೆ. ಆದರೆ ಹಾಗೆ ಹೊಂದಾಣಿಕೆ ಮಾಡಿಕೊಳ್ಳಲು ಆಕೆಯ ಮನಸ್ಸು ಒಪ್ಪುತ್ತಿಲ್ಲ. ಇತ್ತ ಕೆಲಸ ಬಿಡಲೂ ಆಗುತ್ತಿಲ್ಲ. ಮನೆಯಲ್ಲಿ ವಯಸ್ಸಾದ ತಾಯಿ, ಇನ್ನೂ ಓದುತ್ತಿರುವ ತಂಗಿ ಇದ್ದಾರೆ. ಆತನ ಕಿರುಕುಳದ ಕಾರಣದಿಂದಾಗಿ ಕೆಲಸ ಬಿಟ್ಟರೆ ಮಾರನೆಯ ದಿನವೇ ಹೊಟ್ಟೆಗೆ ತಣ್ಣೀರು ಬಟ್ಟೆ ಎಂಬುದೂ ಆಕೆಗೆ ಗೊತ್ತಿದೆ. ಹೀಗಾಗಿ ಅದೇ ಕೆಲಸದಲ್ಲಿ ಮುಂದುವರೆಯುವುದು ಅನಿವಾರ್ಯವಾಗಿದೆ. ಒಂದು ದಿನ ತನ್ನ ಸ್ನೇಹಿತೆಯೊಬ್ಬಳೊಂದಿಗೆ ಈ ವಿಷಯ ಹೇಳಿ ಅಲವತ್ತುಕೊಂಡಿದ್ದಳು. ಆಕೆಯ ಧೈರ್ಯದಿಂದ ಒಂದು ದಿನ ‘ಹೊಟೇಲ್ಗೆ ಹೋಗೋಣ್ವಾ?’ ಎಂದು ವಿಕೃತವಾಗಿ ನಗುತ್ತ ಕೇಳಿದವನನ್ನು ‘ಬನ್ನಿ ಸರ್, ಯಾವ ಹೊಟೇಲ್? ನಾನೊಬ್ಬಳೇ ಆದರೆ ಚೆನ್ನಾಗಿರೋದಿಲ್ಲ. ನನ್ನ ಗೆಳತಿಗೂ ಬರ ಹೇಳ್ತೀನಿ ನಿಮಗೆ ಒಂದೇ ಏಟಿಗೆ ಇಬ್ಬಿಬ್ಬರು’ ಎನ್ನುತ್ತ ಕುಹಕ ನಗೆ ನಕ್ಕಿದ್ದಳು. ಇಬ್ಬರ ಖುಷಿಯಲ್ಲಿ ಹೊಟೇಲ್ಗೆ ಹೋದಾತನಿಗೆ ಎದುರಾದದ್ದು ಆಕೆ ಮತ್ತು ಜೊತೆಗೆ ಆತನ ಪತ್ನಿ. ಅದಾದ ಒಂದೇ ವಾರದಲ್ಲಿ ದೂರದ ಊರಿಗೆ ವರ್ಗಮಾಡಿಸಿಕೊಂಡ ಹೋದ ಆತ ಮತ್ತೆಂದೂ ಅವಳ ಜೀವನದಲ್ಲಿ ಬರಲೇ ಇಲ್ಲ. ಒಮ್ಮೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಮತ್ತೆ ಮತ್ತೆ ಎದುರಾಗುವ ಹೊಂದಾಣಿಕೆಯ ಸಮಸ್ಯೆಯಿಂದ ಮುಕ್ತಿ ದೊರಕಿತ್ತು.
ಹೌದು. ಜೀವನದಲ್ಲಿ ಹೊಂದಾಣಿಕೆ ತುಂಬಾ ಮುಖ್ಯ. ಜೀವನದ ಪ್ರತಿ ಹಂತದಲ್ಲೂ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಇಂದಿನ ಯುಗದಲ್ಲಿ ಬದುಕಲೇ ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ, ಆಫೀಸ್ಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ಬಸ್, ಟ್ರೈನ್ಗಳಲ್ಲಿ, ನಿಲ್ದಾಣಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಹಾಗಾದರೆ ನಾವು ಎಷ್ಟು ಮತ್ತು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು ಎಂದು ಮನಸ್ಸು ಒಪ್ಪದ್ದಕ್ಕೆಲ್ಲ ‘ಹ್ಞೂ’ ಅನ್ನಬೇಕೇ? ಇಲ್ಲ ಹಾಗೆ ಮಾಡುವ ಅಗತ್ಯವಿಲ್ಲ. ಮನಸ್ಸು ಒಪ್ಪದ್ದನ್ನು ಸಾರಾ ಸಗಾಟಾಗಿ ವಿರೋಧಿಸುವ ಹಕ್ಕು ನಮಗಿದೆ, ಶಕ್ತಿಯಿಂದ, ಅದೂ ಆಗದಿದ್ದರೆ ಯುಕ್ತಿಯಿಂದ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾದ ಹಲವಾರು ದಾರಿಗಳು ನಮ್ಮೆದುರಿಗಿದೆ. ಬಸ್ನಲ್ಲಿ ನಿಂತಾU, ಕುಳಿತಾಗ ಹಿಂಬದಿಯಿಂದ ಕೈ ಆಡಿಸುವವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿಲ್ಲ. ಮೇಲಾಧಿಕಾರಿ ಎಂಬ ಮುಲಾಜಿಗೆ ಬಿದ್ದು ನಮ್ಮನ್ನು ಒಲ್ಲದ ಕಾರ್ಯಕ್ಕೆ ಒಪ್ಪಿಸಿ ಹೊಂದಾಣಿಕೆ ಮಾಡಿಕೊಳ್ಳಬೇಕಿಲ್ಲ, ಹಾಸ್ಟೇಲ್ಗಳಲ್ಲಿ ಇಷ್ಟವಿಲ್ಲದವರೊಂದಿಗೆ ರೂಮ್ ಶೇರ್ ಮಾಡಿಕೊಳ್ಳಬೇಕಿಲ್ಲ. ವಿದ್ಯಾರ್ಥಿಗಳಾಗಿದ್ದರೆ ಇಷ್ಟವಿಲ್ಲದವರೊಂದಿಗೆ ಒಂದೇ ಬೇಂಚ್ ಮೇಲೆ ಕುಳಿತು ಹೊಂದಾಣಿಕೆ ಮಾಡಿಕೊಳ್ಳಬೇಕಿಲ್ಲ.
ಹೊಂದಾಣಿಕೆ ಎಂಬುದು ಕೆಲವರಿಗೆ ಒಂದು ಚಟವಾಗಿ ಬಿಡುವ ಸಾಧ್ಯತೆಗಳಿರುತ್ತದೆ. ಅವರು ಏನೆಂದು ಕೊಳ್ಳುತ್ತಾರೋ, ಹೊಂದಾಣಿಕೆ ಮಾಡಿ ಕೊಳ್ಳದಿದ್ದರೆ ಎಲ್ಲಿ ಬೇಸರಿಸಿಕೊಳ್ಳುತ್ತಾರೋ ಎನ್ನುವ ಭಯದಿಂದ, ಮುಜುಗರದಿಂದ ಮಾಡಿಕೊಳ್ಳುವ ಹೊಂದಾಣಿಕೆ ದಿನಗಳೆದಂತೆ ಅಭ್ಯಾಸ ಆಗಿ ಬಿಡುವ ಅಪಾಯವಿದೆ. ಮಕ್ಕಳು ಚಿಕ್ಕವರಿರುವಾಗ ಎಲ್ಲಾ ವಿಷಯಕ್ಕೂ ಹೊಂದಾಣಿಕೆ ಮಾಡಿಕೊಳ್ಳುವಂತೆ ಕಲಿಸುವುದು ಅತ್ಯಗತ್ಯ ಎನ್ನುವಂತೆ ಬೆಳೆಸುವುದು ಅತ್ಯವಶ್ಯಕವಾದರೂ ಯಾವ ವಿಷಯಕ್ಕೆ ಹೊಂದಾಣಿಕೆ ಮಾಡಿಕೊಳ್ಳ ಬೇಕು, ಯಾವ ವಿಷಯಕ್ಕೆ ಬೇಡ ಎಂಬುದನ್ನು ಚಿಕ್ಕಂದಿನಿಂದಲೇ ಹೇಳಬೇಕಾದ ಅಗತ್ಯವಿದೆ. ಅದರಲ್ಲೂ ಹುಡುಗಿಯರಾದರೆ ಹೊಂದಾಣಿಕೆ ಹೇಗೆ ಮತ್ತು ಎಷ್ಟು ಎಂಬುದರ ಬಗ್ಗೆ ಸಮಗ್ರ ಮಾಹಿತಿ, ಚಿತ್ರಣವನ್ನು ನೀಡಲೇ ಬೇಕಿದೆ
ಹೊಂದಾಣಿಕೆ ಎಂಬುದು ಒಂದು ಚಟವಾಗಬೇಕಿಲ್ಲ. ಅದು ಮನಸ್ಸೊಪ್ಪಿ ಮಾಡುವ ಕೆಲಸವಾದರೆ ಸಾಕು.






0 Comments