ಹೈವೇ ಅಪಘಾತಗಳು

ಹೈವೇ 7

——–

ಮನೆ ಮುಂದಿನ ಕಂಬಳಿಗಿಡದ ಮಧ್ಯೆ ಅಪ್ಪನ ಹೀರೋ ಸೈಕಲ್ ತೊಳೆಯುತ್ತಿದ್ದೆ. ಏನೋ ಸದ್ದು. ಬಲಕ್ಕೆ ಹೊರಳಿ ನೋಡಿದೆ. ಲೈಟಿಂಗ್ ಕಡ್ಡಿ ಹೊತ್ತುಕೊಂಡು ಹರಿಹರ, ದಾಂಡೇಲಿಯ ಕಾಗದ ಕಾರ್ಖಾನೆಗೆ ಹೊರಟಿದ್ದ ಲೈಲ್ಯಾಂಡ್ ಟ್ರಕ್ ನ ಹಿಂದುಗಡೆಯ ಚಕ್ರಕ್ಕೆ ಎಳೆ ಮಗುವೊಂದು ಸಿಕ್ಕಿ ಜಜ್ಜಿ ಹೋಗಿತ್ತು. ಆ ಮಗುವಿನ ಅರಿಶಿಣ ಬಣ್ಣದ ಫ್ರಾಕ್ ಅರ್ಧ ದೇಹದ ಜೊತೆ ಮೇಲೆ ನೇತಾಡುತ್ತಿದ್ದರೆ, ಉಳಿದ ಭಾಗ ಚಕ್ರದ ಕೆಳಗಿತ್ತು. ಮುಂದಿನ ಚಕ್ರಕ್ಕೆ ಅಜ್ಜಿ ನಾನಿಯ ತಲೆ ಇದ್ದು, ತನ್ನ ಮನೆಗಳ ಕಡೆ ನೋಡುತ್ತಿತ್ತು.

hoovu1.jpg

ಭಾಗ: ಆರು

ವಿ ಎಂ ಮಂಜುನಾಥ್

ಮರಾವತಿಯಿಂದ ಕಿತ್ತಲೆಹಣ್ಣು ತುಂಬಿಕೊಂಡು ಬೆಂಗಳೂರು ಕಡೆಗೆ ಹೊರಟಿದ್ದ ಕೇರಳದ ಲೈಲ್ಯಾಂಡ್ ಟ್ರಿಕ್, ಬೆಳಗಿನ ಜಾವ ಐದು ಗಂಟೆಯಷ್ಟೊತ್ತಿಗೆ ನನ್ನ ಮನೆಯಿಂದ ಸ್ವಲ್ಪ ಮುಂದೆ, ಸಾರಾಯಿ ಗಡಂಗಿನ ಎದುರಿಗೆ, ಡ್ರೈವರ್ ನ ಮಂಜುಗಣ್ಣಿನಿಂದ ಆಯತಪ್ಪಿ ನೆಲಕ್ಕುರುಳಿತ್ತು. ಡ್ರೈವರ್ ಸೇರಿದಂತೆ ಒಳಗಿದ್ದವರ್ಯಾರಿಗೂ ಅಂಥ ಗಾಯಗಳೇನೂ ಸಂಭವಿಸಿರಲಿಲ್ಲವಾದ್ದರಿಂದ, ಟ್ರಕ್ ಸುತ್ತಲೂ ಇರುವೆಗಳಂತೆ ತುಂಬಿ ಹೋಗಿದ್ದ ಗ್ರಾಮದ ಜನರು ಹಣ್ಣುಗಳನ್ನು ಹೊತ್ತೊಯ್ಯಲು ಸಾಧ್ಯವಾಗಲಿಲ್ಲ. ಮರದ ಡಬ್ಬಿಗಳಿಂದ ಹೊರ ಚಿಮ್ಮಿ ಬಿದ್ದು ನೀರಾಗಿದ್ದ ಕೆಲವೇ ಹಣ್ಣುಗಳನ್ನು ಮಾತ್ರ ನಮಗೆ ಕೊಟ್ಟರು. ನಿರಾಶರಾದ ನಾವು ಯಲಹಂಕದ ದೊಡ್ಡಮೋರಿಯ ಹತ್ತಿರ ಮರೆಯಾಗಿ ಹೋದರೂ ಆ ಟ್ರಕ್ ನ್ನು ಇನ್ನೂ ನೋಡುತ್ತಲೇ ಇದ್ದೆವು, ಬಹಳ ಕಾಲದವರೆಗೂ.

ಏಷಿಯನ್ ಪೇಂಟ್ಸ್ ಸರಕು ತುಂಬಿಕೊಂಡು ಹೈದರಾಬಾದ್ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರಕ್ ಗೆ, ಸ್ಕೂಟರ್ ಸವಾರನೊಬ್ಬ ರಾಕ್ಷಸ ತಲೆಯಂತೆ ಕಾಣುವ ಹೌಸಿಂಗ್ ಗೆ ಹುಣಸಮಾರನಹಳ್ಳಿಯ ಹತ್ತಿರ ಸಿಕ್ಕಿ ಹಾಕಿಕೊಂಡಿದ್ದ. ಆದರೆ ಆ ಡ್ರೈವರ್, ನಿಲ್ಲಿಸಿದರೆ ಎಲ್ಲಿ ತನ್ನನ್ನು ಹೊಡೆದು, ಟ್ರಕ್ ಗೆ ಬೆಂಕಿ ಹಚ್ಚಿಬಿಡುತ್ತಾರೋ ಎಂದು ಕಂಗಾಲಾಗಿ, ನಿಲ್ಲಿಸದೆ ಸುಮಾರು ನಾಲ್ಕು ಮೈಲಿ ದೂರದ ನನ್ನ ಗ್ರಾಮದ ಹತ್ತಿರದ ಇಂಡಿಯನ್ ಹ್ಯೂಮ್ ಪೈಪ್ ಕಂಪೆನಿ ಎದುರಿಗೆ ತಂದು ನಿಲ್ಲಿಸಿದ್ದ. ನಿಲ್ಲಿಸಿದ್ದೇ ಟ್ರಕ್ ನೊಳಗಿನವರೆಲ್ಲರೂ ಕ್ಷಣಾರ್ಧದಲ್ಲಿ ನೀಲಗಿರಿ ತೋಪಿನಲ್ಲಿ ಮರೆಯಾಗಿ ಹೋಗಿದ್ದರು. ಸ್ಕೂಟರ್ ಒಳಗೊಂಡಂತೆ ಸವಾರ ಅಲ್ಲೇ ಸುತ್ತಿಕೊಂಡು, ಮಾಂಸದ ಮುದ್ದೆಯಂತಾಗಿ ಹೋಗಿದ್ದ. ಹೈವೇಯಲ್ಲಿ ನಿಂತು ನೋಡಿದರೆ ಕಾಣುವಂತಿದ್ದ ಆ ಟ್ರಕ್ ನ ಹತ್ತಿರ ನಾವೆಲ್ಲರೂ ಓಡಿದ್ದೆವು. ಅಷ್ಟೊತ್ತಿಗಾಗಲೇ ನನಗಿಂತ ದೊಡ್ಡ ವಯಸ್ಸಿನವರೆಲ್ಲರೂ ಟಾರ್ಪಾಲಿನ್ ಬಿಚ್ಚಿ, ಏಷಿಯನ್ ಪೇಂಟ್ಸ್ ಬಾಕ್ಸ್ ಗಳನ್ನು ಎಳೆದುಕೊಂಡು ಮನೆ ಕಡೆ ಸಾಗಿಸತೊಡಗಿದ್ದರು. ಇನ್ನೂ ಕೆಲವರು ಟ್ರಕ್ ನ ಟೂಲ್ಸ್, ಜಾಕ್, ಬ್ಯಾಟರಿ ಬಿಚ್ಚುವಲ್ಲಿ ಮಗ್ನರಾಗಿದ್ದರು. ಅತೀ ಎತ್ತರದ ಟ್ರಕ್ ಬಾಡಿ ಹತ್ತುವುದು ನನಗೆ ಕಷ್ಟವಾದ್ದರಿಂದ ನಿಂತು ಎಲ್ಲವನ್ನೂ ನೋಡುತ್ತಿದ್ದೆ. ಕಡೆಗೆ, ಟೈರ್ ನಿಂದ ಹತ್ತಿ ನಿಂತು ಒಂದು ಬಾಕ್ಸ್ ನ್ನು ಎಳೆದುಕೊಂಡೆ. ಉಳಿದವರೆಲ್ಲರೂ ೫, ೧೦ ಲೀಟರ್ ನ ಪೇಂಟ್ ಬಾಕ್ಸ್ ಗಳನ್ನು ಲಪಟಾಯಿಸಿದ್ದರಿಂದ ನನಗೆ ಸಿಕ್ಕಿದ್ದು ಅರ್ಧ ಲೀಟರ್ ನ ೧೨ ಡಬ್ಬಿಗಳ ಪ್ರೈಮರ್ ಮಾತ್ರ. ಪೊಲೀಸ್ ಬಂದುಬಿಡುತ್ತಾರೆ ಎಂಬ ಭಯದಿಂದ ಹೈವೇಯನ್ನು ಬಳಸದೆ, ಬಾಕ್ಸ್ ನ್ನು ಹೆಗಲ ಮೇಲಿಟ್ಟುಕೊಂಡು ನೀಲಗಿರಿ ತೋಪು ಹಾದಿ ಹಿಡಿದು ಮನೆ ತಲುಪಿದೆ. ಅದರಲ್ಲಿ ಕೆಲವನ್ನು ಮಾರಿಕೊಂಡೆವು, ಉಳಿಸಿಕೊಂಡಿದ್ದ ನಾಲ್ಕೈದು ಡಬ್ಬಿಗಳಿಂದ ನಮ್ಮ ಮನೆಯ ಬಾಗಿಲಿಗೆ, ಕಿಟಕಿಗಳಿಗೆ ಬಳಿದು ಖಾಲಿ ಮಾಡಿದೆವು.

ಮನೆ ಮುಂದಿನ ಕಂಬಳಿಗಿಡದ ಮಧ್ಯೆ ಅಪ್ಪನ ಹೀರೋ ಸೈಕಲ್ ತೊಳೆಯುತ್ತಿದ್ದೆ. ಏನೋ ಸದ್ದು. ಬಲಕ್ಕೆ ಹೊರಳಿ ನೋಡಿದೆ. ಲೈಟಿಂಗ್ ಕಡ್ಡಿ ಹೊತ್ತುಕೊಂಡು ಹರಿಹರ, ದಾಂಡೇಲಿಯ ಕಾಗದ ಕಾರ್ಖಾನೆಗೆ ಹೊರಟಿದ್ದ ಲೈಲ್ಯಾಂಡ್ ಟ್ರಕ್ ನ ಹಿಂದುಗಡೆಯ ಚಕ್ರಕ್ಕೆ ಎಳೆ ಮಗುವೊಂದು ಸಿಕ್ಕಿ ಜಜ್ಜಿ ಹೋಗಿತ್ತು. ಆ ಮಗುವಿನ ಅರಿಶಿಣ ಬಣ್ಣದ ಫ್ರಾಕ್ ಅರ್ಧ ದೇಹದ ಜೊತೆ ಮೇಲೆ ನೇತಾಡುತ್ತಿದ್ದರೆ, ಉಳಿದ ಭಾಗ ಚಕ್ರದ ಕೆಳಗಿತ್ತು. ಮುಂದಿನ ಚಕ್ರಕ್ಕೆ ಅಜ್ಜಿ ನಾನಿಯ ತಲೆ ಇದ್ದು, ತನ್ನ ಮನೆಗಳ ಕಡೆ ನೋಡುತ್ತಿತ್ತು. ನಮ್ಮ ಮನೆಯ ಎಡಮಗ್ಗುಲಿನ ಕೊನೆಗೆ ತೆಲುಗು ಮಾತನಾಡುವ ಈ ಮುಸ್ಲಿಂ ಕುಟುಂಬ ವಾಸವಿತ್ತು. ಕಾಸಿಂಬಿಯ ತಾಯಿ ಈ ನಾನಿ, ಚರ್ಚ್ ಗೆ ಸುರುಗು ಗುಡಿಸಿಕೊಂಡು ಬರಲು ಅಂದು ಹೋದವಳು, ಜೊತೆಯಲ್ಲಿ ಮೊಮ್ಮಗಳನ್ನು ಬಿಟ್ಟುಹೋಗಿದ್ದಳು. ಯಾವತ್ತೂ ಆ ಹೆಣ್ಣು ಮಗು ಅಜ್ಜಿ ನಾನಿಯ ಜೊತೆಯೇ ಇರುತ್ತಿದ್ದು, ಆವೊತ್ತು ಕೂಡ ಅಜ್ಜಿಗೆ ಗೊತ್ತಾಗದಂತೆ ಹಿಂಬಾಲಿಸಿಬಿಟ್ಟಿತ್ತು. ಚರ್ಚ್ ಕಡೆ ದಾಟಿಬಿಟ್ಟಿದ್ದ ನಾನಿ, ಮೊಮ್ಮಗಳ ದನಿ ಕೇಳಿ ತಿರುಗಿ ನೋಡುವಷ್ಟರಲ್ಲಿ ಮಗು ರಸ್ತೆಗಿಳಿದೇಬಿಟ್ಟಿತ್ತು. ನಾನಿ ಚೀರಿಕೊಂಡು ತನ್ನ ಮೊಮ್ಮಗಳನ್ನು ರಕ್ಷಿಸಲು ತಿರುಗಿ ಬರುವಷ್ಟೊತ್ತಿಗೆ, ವೇಗದಲ್ಲಿದ್ದ ಲೈಲ್ಯಾಂಡ್ ಇಬ್ಬರನ್ನೂ ಬಲಿ ತೆಗೆದುಕೊಂಡುಬಿಟ್ಟಿತ್ತು.

ಗಡಿ ಭದ್ರತಾ ಪಡೆಯ ಗನ್ ಮೆಕ್ಯಾನಿಕ್ ಶೇಖ್ ಹುಸೇನನ ಅತ್ತೆ, ಆಂಧ್ರ ಪ್ರದೇಶದಿಂದ ತನ್ನ ಅಳಿಯನ ಮನೆಗೆ ಒಂದು ಟಿನ್ ಶುದ್ಧ ತುಪ್ಪ ಹೊತ್ತು ಆ ರಾತ್ರೆ ಯಲಹಂಕದ ದೊಡ್ಡಮೋರಿಯ ಹತ್ತಿರ ಬಸ್ ಇಳಿದು, ಎಡಗಡೆಗೆ ದಾಟಲಾಗದೆ, ಬಲಗಡೆಯ ರಸ್ತೆಯಿಂದ ಒಂದು ಮೈಲಿ ದೂರದ ವೆಂಕಟಾಲ ಗ್ರಾಮಕ್ಕೆ ನಡೆದು ಬರುತ್ತಿದ್ದಳು. ರೋಮನ್ ಕ್ಯಾಥೋಲಿಕ್ ಚರ್ಚ್ ಸರಿಯಾಗಿ ನಿಂತು ನಮ್ಮ ಮನೆಗಳ ಕಡೆ ದಾಟಬೇಕಿದ್ದ ಆ ವೃದ್ಧೆ, ಮಬ್ಬಿನಲ್ಲಿ ಕಾಣದೆ ಕ್ಷಣಾರ್ಧದಲ್ಲಿ ಜಜ್ಜಿ ಹೋಗಿದ್ದಳು. ಟಿನ್ ತುಪ್ಪ ಚರ್ಚ್ ನಿಂದ ಹಿಡಿದು ಫ್ಲೋರ್ ಮಿಲ್ ವರೆಗೂ ಹರಿದುಹೋಗಿತ್ತು. ಆಕ್ಸಿಡೆಂಟ್ ನೋಡಲು ಬಂದವರೆಲ್ಲರೂ ತುಪ್ಪದ ಮೇಲೆ ಕಾಲಿಟ್ಟು ಜಾರಿ ಬೀಳತೊಡಗಿದ್ದರು. ಆ ತುಪ್ಪದ ಮಡುವಿನಲ್ಲಿ ಆ ಹೆಂಗಸಿನ ರಕ್ತ, ಮಾಂಸ ಬೆರೆತುಹೋಗಿದ್ದು ನೋಡಿದ ನಾನು, ಅಂದಿನಿಂದ ತುಪ್ಪ ತಿನ್ನುವುದನ್ನೇ ಬಿಟ್ಟುಬಿಟ್ಟೆ.

ಅಪಾಯಕಾರಿ ಕೆಮಿಕಲ್ ತುಂಬಿಕೊಂಡಿದ್ದ ಪಾಂಡಿಚೆರಿಯ ಟ್ಯಾಂಕರ್, ಹ್ಯಾಂಡ್ ಲೂಮ್ಸ್ ಫ್ಯಾಕ್ಟರಿಯ ಮಗ್ಗುಲಿನ ಗುಂಡಿಯಲ್ಲಿ ಬೋರಲು ಬಿದ್ದುಕೊಂಡಿತ್ತು. ಸಾವುನೋವುಗಳೇನೂ ಘಟಿಸಿರಲಿಲ್ಲವಾದರೂ ನೋಡಲು ರೋಚಕವಾಗಿತ್ತು. ಅದು ಬಿದ್ದ ಸ್ಥಳದಲ್ಲಿ ಬೆಳೆದುಕೊಂಡಿದ್ದ ಗರುಕೆಹುಲ್ಲು, ಸಣ್ಣ ಗಿಡಗಳೆಲ್ಲವೂ ಉರಿದು ಒಣಹುಲ್ಲಿನ ವರ್ಣಕ್ಕೆ ತಿರುಗಿಕೊಂಡಿದ್ದವು. ಕೆಮಿಕಲ್ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಮಣ್ಣು ಸಹ ತನ್ನ ಗುಣವನ್ನು ಕಳೆದುಕೊಂಡಿದ್ದು, ವಿಚಿತ್ರ ಬಣ್ಣಕ್ಕೆ ಪರಿವರ್ತನೆಗೊಂಡಿತ್ತು. ಮೂರ್ನಾಲ್ಕು ದಿವಸಗಳ ಮಟ್ಟಿಗೆ ಅಲ್ಲೇ ಉರುಳಿಕೊಂಡಿದ್ದ ಟ್ಯಾಂಕರ್ ನ್ನು ಕ್ರೇನ್ ತರಿಸಿ ಎತ್ತಿ ನಿಲ್ಲಿಸಿ, ಎಳೆದುಕೊಂಡು ಹೋಗುವವರೆಗೂ ನಾವು ಎಲ್ಲವನ್ನೂ ಪರಿಶೀಲಿಸಿದ್ದೆವು. ಅಪಘಾತ ನಡೆದು ಎರಡು ಮೂರು ವರ್ಷಗಳವರೆಗೂ ಅಲ್ಲಿನ ನೆಲದಲ್ಲಿ ಚಿಗುರು ಹುಲ್ಲು ಗಿಡ ಬೆಳೆಯಲಿಲ್ಲ. ನನ್ನ ಅಣ್ಣ ಅಲ್ಲಿನ ಕೆಮಿಕಲ್ ನಲ್ಲಿ ಹೂತು ಹೋಗಿರಬಹುದಾಗಿದ್ದ ನೆಟ್, ಬೋಲ್ಟ್, ಟೂಲ್ಸ್ ನ್ನು ವರ್ಷಾನುಗಟ್ಟಲೆ ಹುಡುಕಿ ತರುತ್ತಲೇ ಇದ್ದ.

೧೦೦೦ ಸಿಸಿ ಕಾರು ಆವೊತ್ತು ಬೆಳಗ್ಗೆ ಸರಿಯಾಗಿ ನಾಲ್ಕೂವರೆ ಗಂಟೆಗೆ ಅಪಘಾತಕ್ಕೀಡಾದಾಗ ನಾವಿನ್ನೂ ಮಲಗಿದ್ದೆವು. ನಾವು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಶಾಲೆಯ ಶಿಕ್ಷಕರಿಂದ ಹಿಡಿದು ನಮ್ಮನ್ನೆಲ್ಲ ಕಂಡ ಕಂಡ ಕಡೆ ಬಡಿಯುತ್ತಿದ್ದ ರೌಡಿ ಕುಮಾರ, ಹುಣಸೇಮರಕ್ಕೆ ಗುದ್ದಿ ಸಾವಿಗೀಡಾಗಿದ್ದ. ಬಡ್ಡಿ ವ್ಯಾಪಾರ ಮಾಡುತ್ತಿದ್ದ ಇವನ ಅಪ್ಪನನ್ನು ಕರೆ ತಂದು ಇಡೀ ಸ್ಕೂಲನ್ನೇ ಬೆಚ್ಚಿ ಬೀಳಿಸುತ್ತಿದ್ದ. ಪಾಳು ಬಿದ್ದ ಸ್ಕೂಲು ಹಿಂದಿನ ಹಾಸ್ಟೆಲ್ ನ ಗೋಡೆಗಳಲ್ಲಿ ಪೋಲಿ ಹುಡುಗರನ್ನು ಸಂಘಟಿಸಿಕೊಂಡು ಸಿಗರೇಟು, ಮದ್ಯದಲ್ಲಿ ಅದ್ದಿ ಹೋಗುತ್ತ, ದಾರಿಯಲ್ಲಿ ಹೋಗಿ ಬರುವ ಹೆಣ್ಣುಮಕ್ಕಳನ್ನು ಹಿಂಸಿಸುತ್ತಿದ್ದ. ಇಂಥ ದುಷ್ಟನ ಹುಟ್ಟಡಗಿಸಲು, ಹೈಸ್ಕೂಲಿಗೆ ಹೊಸದಾಗಿ ನೇಮಕವಾಗಿದ್ದ ಪ್ರಿನ್ಸಿಪಾಲ್ ನಾರಾಯಣಪ್ಪ ಬರಬೇಕಾಯಿತು. ಹೈಸ್ಕೂಲಿನ ನೀಲಿ ಹೂಮರಗಳ ಕೆಳಗೆ ರೌಡಿ ಕುಮಾರ ಮತ್ತು ಅವನ ಅಪ್ಪನನ್ನು ನಿಲ್ಲಿಸಿಕೊಂಡು ಉಗಿದು ಹೊರಗೆ ಅಟ್ಟಿದ ಅವರನ್ನು ನಾನು ಮರೆಯುವಂತಿಲ್ಲ. ಮಹಾ ಶಿಸ್ತಿನವರಾದ ಅವರು, ಬಣ್ಣ ಮಾಸಿದ ಕೋಟು ಸೂಟಿನಲ್ಲಿ ನಡೆದುಕೊಂಡು ಬರುತ್ತಿದ್ದರೆ ಯಾರೊಬ್ಬರೂ ಅವರ ಎದುರಿಗೆ ನಿಲ್ಲುತ್ತಿರಲಿಲ್ಲ. ಈ ಅಪಘಾತದ ಮೂಲಕ ಅವರನ್ನು ನೆನೆಯುವುದು ಅನಿವಾರ್ಯವಾದ್ದರಿಂದ ಅವರ ಬಗ್ಗೆ ಸ್ವಲ್ಪ ಮಾತ್ರ ಹೇಳಿದ್ದೇನೆ. ಮುಂದೆ ನನ್ನ ವಿದ್ಯಾಭ್ಯಾಸದ ವಿವರಗಳು ಬಂದಾಗ ಒಂದು ವ್ಯಕ್ತಿಚಿತ್ರಣವನ್ನೇ ಕೊಡುತ್ತೇನೆ.

ಬೆಳಗಿನ ಜಾವ ಐದು ಗಂಟೆಗೆ ಬಿಂದಿಗೆ ತುಂಬಿಕೊಂಡು ಹೋಗುತ್ತಿದ್ದ ೪೦೭ ವ್ಯಾನ್ ನ್ನು ಹೊಯ್ಸಳ ಪೊಲೀಸಿನೋರು ಹಿಂಬಾಲಿಸಿ ರೋಲ್ ಕಾಲ್ ಮಾಡಲೆತ್ನಿಸುತ್ತಿದ್ದಾಗ, ಯಮವೇಗದಲ್ಲಿದ್ದ ಕಂಟೇನರ್ ಒಮ್ಮೆಲೇ ಹೊಯ್ಸಳ ಜೀಪನ್ನು ಗುದ್ದಿಕೊಂಡು ಹೈವೇ ಬದಿಯ ಮರಕ್ಕೆ ಅಪ್ಪಳಿಸಿ ನಿಲ್ಲಿಸಿತ್ತು. ಒಳಗಿದ್ದ ಪೇದೆಗಳೆಲ್ಲರೂ ಅಪ್ಪಚ್ಚಿಯಾಗಿ ಹೋಗಿದ್ದರು. ತಲೆ, ಮಿದುಳು, ಕೈಕಾಲುಗಳು ರಸ್ತೆಯುದ್ದಕ್ಕೂ ಬಿದ್ದಿದ್ದರೆ, ಪೇದೆಯೊಬ್ಬ ವ್ಯಾನ್ ಡ್ರೈವರ್ ಕೈಯಿಂದ ದುಡ್ಡು ಕಿತ್ತುಕೊಳ್ಳುತ್ತಿದ್ದಂತೆ ಅವನ ಕೈ ತುಂಡರಿಸಿ ಹಾಗೇ ಬಿದ್ದಿತ್ತು. ಅವನ ಕೈಯಲ್ಲಿ ಹಳೆನೋಟುಗಳು ಭದ್ರವಾಗಿತ್ತು. ಜೀಪಿನೊಳಗೆ ಅರೆಜೀವದಲ್ಲಿ ಮಿಡುಕುತ್ತಿದ್ದ ಪೇದೆಯೊಬ್ಬನನ್ನು ಹೊರಗೆಳೆಯಲು ಹರಸಾಹಸ ಮಾಡಬೇಕಾಯಿತು. ಕಬ್ಬಿಣದ ಸಲಾಕೆಯಿಂದ ಜೀಪಿನ ಡೋರನ್ನು ಮೀಟಿದರೂ ಸಾಧ್ಯವಾಗಲಿಲ್ಲ. ಟ್ರಕ್ ವೊಂದಕ್ಕೆ ಜೀಪಿನ ಡೋರನ್ನು ಬಿಗಿಯಾಗಿ ಕಟ್ಟಿ ಎಳೆದಾಗ, ಜೀಪಿನ ಬಹುಭಾಗ ಛಿದ್ರವಾಗಿತ್ತು. ಗ್ರಾಮದ ಜನರ್ಯಾರೂ ಪೊಲೀಸರ ಸಹಾಯಕ್ಕೆ ಹೋಗಲಿಲ್ಲ. ಕಡೆಗೆ ಪೊಲೀಸರೇ ನಿಂತು ಒಳಗಿನ ಹೆಣಗಳನ್ನು ಎಳೆದು, ಗೋಣಿಚೀಲದಲ್ಲಿ ಕಟ್ಟಿ, ವ್ಯಾನ್ ನೊಳಗೆ ಹೊತ್ತುಕೊಂಡು ಹೋದರು.

ನಮ್ಮ ಮನೆಯ ಹಿಂದೆ ಬಳ್ಳಾರಿಯ ಮುಸ್ಲಿಂ ಕುಟುಂಬವೊಂದು ಸಾಮಿಲ್ ನಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕು ನಡೆಸುತ್ತಿತ್ತು. ಆ ಮನೆಯ ಹಿರಿಯನೊಬ್ಬ ಒಂದು ರಾತ್ರೆ, ಕೆಲಸ ಮುಗಿಸಿಕೊಂಡು ಹ್ಯಾಂಡ್ ಲೂಮ್ಸ್ ಫ್ಯಾಕ್ಟರಿಯ ಹತ್ತಿರ ಬರುವ ಹೊತ್ತಿಗೆ ಅಪಘಾತ ಸಂಭವಿಸಿತ್ತು. ಆಗ ಅವನ ಸೈಕಲ್ ನ ಮುಂದಿನ ಗಾಲಿಗೆ ಏನೋ ಸಿಕ್ಕಿಕೊಂಡಂತಾಗಿ ಇಳಿದು, ಕಬ್ಬಿಣದ ರಾಡ್ ಇರಬೇಕೆಂದು ಕೈಚೀಲದಲ್ಲಿ ತುರುಕಿಕೊಂಡು ಮನೆಗೆ ಬಂದೇ ಬಿಟ್ಟ. ಮನೆಗೆ ಬಂದವನೇ ಚೀಲದ ತೆರೆದು ನೋಡಿದರೆ ಅಲ್ಲಿ ಅಪಘಾತದಲ್ಲಿ ಮೃತಳಾದ ವೃದ್ಧೆಯ ಕೈ ಇತ್ತು. ಇಡೀ ಮನೆಯವರೆಲ್ಲ ಕಿರುಚಿಕೊಂಡು ಹೊರಗೆ ಓಡಿದ್ದರು. ಹ್ಯಾಂಡ್ ಲೂಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆ ತಮಿಳುನಾಡಿನವಳಾಗಿದ್ದು ಗಟ್ಟಿಗಿತ್ತಿಯಾಗಿದ್ದಳು. ನನ್ನ ಅಪ್ಪ ಈ ಕೇಸಿನಲ್ಲಿ ಓಡಾಡಿ ಅವಳ ಮಗ ಸೆಲ್ವ ರಾಜುಗೆ ಲಕ್ಷಾಂತರ ರೂಪಾಯಿ ಹಣ ಬರುವಂತೆ ಮಾಡಿದರು. ಆದರೆ ಅವನಿಗೆ ಹಣ ದೊರಕಿದ್ದೇ ನನ್ನ ಅಪ್ಪನನ್ನು ಮರೆತೇಬಿಟ್ಟ. ಅಲ್ಲಿ ಕೆಲಸ ಮಾಡುತ್ತಿದ್ದ ಉಳಿದ ತಮಿಳಿನೋರು ಸೇರಿಕೊಂಡು ಸೆಲ್ವರಾಜುವಿನ ಮುಖಮೂತಿಯನ್ನು ಗುದ್ದಿ, ರಕ್ತ ತರಿಸಿ, ನನ್ನ ಅಪ್ಪನಿಗೆ ಹಣ ದೊರಕಿಸಿಕೊಟ್ಟಿದ್ದರು.

ಇದು ಬಸ್ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತ. ನಮ್ಮೆಲ್ಲರೊಳಗೆ ವಿಚಿತ್ರ ಸಂಚಲನ ಮೂಡಿಸಿದ್ದ ಆಕೆ ಮಾರ್ವಾಡಿ. ನಿಂತಲ್ಲಿ ಕುಳಿತಲ್ಲಿ ಕಾಡತೊಡಗಿದ ಈಕೆಯ ಅವಸಾನ ಕೂಡ ಅಷ್ಟೇ ಬಿರುಸಿನದ್ದಾಗಿತ್ತು. ಮಾರುತಿ ೮೦೦ ಕಾರಿನಲ್ಲಿ ತಾನೇ ಡ್ರೈವ್ ಮಾಡಿಕೊಂಡು, ಇಂಗ್ಲಿಷ್ ಪಾಪ್ ಹಾಡುಗಳನ್ನು ಜೋರಾಗಿ ಹಾಕಿಕೊಂಡು ಕುಣಿಯುತ್ತಾ ಹೈವೇಯಲ್ಲಿ ಚಿರತೆಯಂತೆ ನುಗ್ಗಿ ಹೋಗುತ್ತಿದ್ದ ಈಕೆ, ನಮ್ಮೆಲ್ಲರ ಕಣ್ಣುಗಳಿಗೆ ಕನಸಿನಂತೆ ಆಗಿಹೋಗಿದ್ದಳು. ಮದುವೆಯಾಗಿದ್ದ ಇವಳು ತನ್ನ ಸೌಂದರ್ಯದ ಮಹಾ ಕಳೆಯನ್ನು ಉಳಿಸಿಕೊಂಡಿದ್ದಳು. ಆವೊತ್ತು ಸಂಜೆ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ನಮ್ಮ ಮನೆಗಳ ಮುಂದೆ ಹಾದುಹೋಗಿದ್ದ ಈಕೆ, ಕ್ಷಣಾರ್ಧದಲ್ಲಿ ಟ್ರಕ್ ಗೆ ಗುದ್ದಿ ಪ್ರಜ್ಞಾಹೀನಳಾಗಿದ್ದಳು. ಇವಳ ರಾಂಗ್ ಡ್ರೈವ್ ನಿಂದ ಟ್ರಕ್ ಬಸ್ ನಿಲ್ದಾಣದ ಮರಕ್ಕೆ ಗುದ್ದಿ ನಿಲ್ಲಿಸಿದ್ದರೆ, ಇವಳು ಆ ಟ್ರಕ್ ಗೆ ಬಡಿದಿದ್ದಳು. ಆ ಕ್ಷಣವೂ ಕೂಡ ಇಂಗ್ಲಿಷ್ ಹಾಡು ನಿಂತಿರಲಿಲ್ಲ. ಆ ದಿನ ಪ್ರಜ್ಞೆ ಕಳೆದುಕೊಂಡ ಆ ಹೆಣ್ಣು, ಇಲ್ಲಿಗೆ ಹದಿನೈದು ಇಪ್ಪತ್ತು ವರ್ಷ ಕಳೆದಿದ್ದರೂ ಹಾಗೆ ವ್ಹೀಲ್ ಚೇರ್ ನಲ್ಲಿ ಕುಳಿತಿದ್ದಾಳೆ. ನಡೆದಾಡಲಾಗುವುದಿಲ್ಲ, ಮಾತನಾಡಲಾರಳು, ಕೇಳಿಸಿಕೊಳ್ಳಲಾರಳು. ಸ್ಟೀಲ್ ವ್ಯಾಪಾರಸ್ಥನಾದ ಇವಳ ಗಂಡ, ದಿನಕ್ಕೊಬ್ಬ ಹೆಣ್ಣನ್ನು ಕರೆ ತಂದು ಇವಳ ಎದುರಿಗೆ ಹಾದರ ಮಾಡುತ್ತಿದ್ದವನು, ನಂತರ ಮತ್ತೊಬ್ಬ ಮಾರ್ವಾಡಿ ಹೆಣ್ಣನ್ನು ಮದುವೆ ಮಾಡಿಕೊಂಡ.

‍ಲೇಖಕರು avadhi

February 2, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: