ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಮಲತಾ ಬರುತ್ತಿದ್ದಾರೆ..

ಸದಾ ಚಟುವಟಿಕೆಯ, ಹಸನ್ಮುಖಿ ಹೇಮಲತಾ ಮೂರ್ತಿ ಅವರು ಹೊಸ ಸಂಕಲನದೊಂದಿಗೆ ಬರುತ್ತಿದ್ದಾರೆ.. ‘ಕಳಚಿಬಿಟ್ಟಿದ್ದೇನೆ ಇದೋ ನಿರ್ವಾಣ ‘ಕೃತಿಯ ಸಂಭ್ರಮವನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ. 

ಜೊತೆಗೆ ‘ರಾಗಂ’ ಬರೆದ ಮುನ್ನುಡಿಯೂ ನಿಮ್ಮ ಓದಿಗಾಗಿ- 

ಕವನ ಸಂಕಲನ ಮಾಡಬೇಕು. ಇದು ನನ್ನಲ್ಲಿ ಮೊಳಕೆಯೊಡೆಯುವಂತೆ ಮಾಡಿ ಅದಕ್ಕಾಗಿ ಪ್ರಯತ್ನಕ್ಕೆ ಮೊದಲಿಟ್ಟವನು ಪ್ರಗತ್. ಅವನು ಅಷ್ಟಕ್ಕೇ ಸುಮ್ಮನಾಗಲಿಲ್ಲಾ. ಕೆಲವಾರು ಪ್ರಕಾಶಕರ ತಲಾಶೆಯಲ್ಲಿ ತೊಡಗಿದ.

ಆದರೆ ಈಗ ಪರಿಸ್ಥಿತಿ ಏನಿದೆ ಅಂದರೆ ಪದ್ಯ ಎಂದರೆ ಅಯ್ಯೋ ಅದು ಮಾರಾಟವಾಗದ ಸರಕು, ಗದ್ಯ ಆದರೆ ಪ್ರಕಟಣೆ ಮಾಡುತ್ತೇವೆ ಎಂದು ಮೂಗು ಮುರಿದವರೇ ಹೆಚ್ಚು. ಆಗ ಅವನು ನೇರ ಸಂಪರ್ಕಿಸಿದ್ದು ಖ್ಯಾತ ಬರಹಗಾರರಾದ ಬೇಲೂರು ರಘುನಂದನ್ ಅವರನ್ನು. ಕೇಳಿದ ಕೂಡಲೇ ಅವರು ತುಂಬಾ ಸಂತೋಷ ಪಟ್ಟು ಒಳ್ಳೆಯ ಕೆಲಸ ಪುಸ್ತಕ ಮಾಡೋಣ ನಾನೆ ಇದನ್ನು ಪ್ರಕಟಣೆ ಮಾಡುತ್ತೇನೆ ಎಂದು ತಕ್ಷಣವೇ ಒಪ್ಪಿದರು. ನಮ್ಮಿಬ್ಬರಿಗೆ ಆಶ್ಚರ್ಯ ಸಂತೋಷ ಎರಡೂ ಒಮ್ಮೆಗೆ.

ಇಲ್ಲಿ ಮತ್ತೊಂದು ವಿಷಯ ಹೇಳಬೇಕು. ಬೇಲೂರು ಸರ್ ಕಾವ್ಯವವನ್ನೇ ಉಸಿರಾಡುತ್ತಿರುವವರು. ಆ ದಿಸೆಯಲ್ಲಿ ತುಂಬಾ ಕೆಲಸಗಳನ್ನು ಮಾಡುತ್ತಿದ್ದಾರೆ ಕೂಡ. ತಾವೆ ಒಂದು ಪ್ರಕಾಶನವನ್ನು ಮಾಡಿ ಅಲ್ಲಿ ಕವನ ಸಂಕಲನಗಳಷ್ಟನ್ನೆ ಪ್ರಕಟಿಸಬೇಕು ಎಂಬುದು ಅವರ ಆಸೆ. ಇದು ಅವರು ಲಾಭಕ್ಕಾಗಿ ಮಾಡುತ್ತಿಲ್ಲ. ಕಾವ್ಯದ ಮೇಲಿನ ಪ್ರೀತಿಯಿಂದ ಮಾಡುತ್ತಿದ್ದಾರೆ. ಅವರ ಈ ಗುಣ ನಿಜಕ್ಕೂ ಪ್ರಶಂಸನೀಯ.

ನಂತರ ಎಲ್ಲಾ ಕೆಲಸಗಳು ಭರದಿಂದ ಸಾಗಿದವು. ನಾನು ಕೆಲವು ಆಯ್ದ ಕವಿತೆಗಳನ್ನು ಅವರಿಗೆ ತಲುಪಿಸಿದೆ. ಅದನ್ನು ಅವರು ತುಂಬಾ ಇಷ್ಟಪಟ್ಟು ಮುನ್ನುಡಿಗೆ ರಾಜಶೇಖರ ಮಠಪತಿ (ರಾಗಂ) ಅವರಿಗೆ ತಲುಪಿಸಲು ಹೇಳಿದರು. ರಾಗಂ ಸರ್ ಅವರು ಕವನಗಳನ್ನು ಓದಿ ಬಹಳ ಪ್ರೀತಿಯಿಂದ ಮುನ್ನುಡಿಯನ್ನು ಬರೆದು ಕೊಟ್ಟರು.

ಬೆನ್ನುಡಿಗೆ ಪ್ರೀತಿಯ ಕವಯತ್ರಿ ಎಂ ಆರ್ ಕಮಲ ಮೇಡಮ್ ಅವರನ್ನು ಕೇಳಿದೆ, ಅವರು ತಮ್ಮ ಬಿಡುವಿಲ್ಲದ ಸಮಯದಲ್ಲೂ ನನ್ನ ಮೇಲಿನ ಪ್ರೀತಿಯಿಂದ ಬೆನ್ನುಡಿ ಬರೆದುಕೊಟ್ಟಿದ್ದಾರೆ. ಅರುಣ್ ಕುಮಾರ್ ಅವರು ಅತ್ಯಂತ ಸುಂದರವಾಗಿ ಕವರ್ ಪೇಜ್ ಮಾಡಿ ಕೊಟ್ಟಿದ್ದಾರೆ. ಈಗಾಗಲೇ ತುಂಬಾ ಜನ ಅದನ್ನು ಮೆಚ್ಚಿದ್ದಾರೆ ಕೂಡ. ಮಗನೆಂದೆ ನಾನು ಭಾವಿಸುವ ಮದನ್ ಕವನಗಳಿಗೆ ಚಂದದ ರೇಖಾಚಿತ್ರ ಬಿಡಿಸಿ ಪೇಜ್ ಲೇಔಟ್ ಮಾಡಿದ್ದಾನೆ. ನಂದಿ ಜಿ ಹೂವಿನಹೊಳೆ ನಾ ಹೇಳಿದ ತಕ್ಷಣ ಸಾಹಿತ್ಯ ಪರಿಷತ್ತಿಗೆ ಹೋಗಿ ಹಾಲ್ ಬುಕ್ ಮಾಡಿಕೊಟ್ಟ. ಮುದ್ದು ತಮ್ಮ ಪುರಂದರ ಪುಸ್ತಕದ ಕೆಲಸಗಳಿಗೆ ಎಷ್ಟು ಹೊತ್ತಿಗೆ ಅಂದರೆ ಅಷ್ಟು ಹೊತ್ತಿಗೆ ಬಂದು ಕೆಲಸಗಳನ್ನು ಮಾಡಿಕೊಟ್ಟಿದ್ದಾನೆ. ಇವರ ಪ್ರೀತಿಗೆ ನಾ ಏನೂ ಹೇಳಲಿ. ಎಲ್ಲರಿಗೂ ನಾ ಆಭಾರಿ .

ಇದೇ ತಿಂಗಳು 29 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುಸ್ತಕ ಬಿಡುಗಡೆ. ನಿಮ್ಮೆಲ್ಲರ ಬರುವಿಕೆಯ ನಿರೀಕ್ಷೇಯಲ್ಲಿ…

ಹೇಮಾ

ಬೇಕಿತ್ತು ಕಣ್ಣು ಬೆನ್ನಿಗೊಂದು..

ಡಾ.ರಾಜಶೇಖರ ಮಠಪತಿ (ರಾಗಂ)

ಪ್ರಕಾಶನಗಳ ಪಾಲಿಗೆ ಡಿಸೆಂಬರ್ ತಿಂಗಳೆನ್ನುವುದು ಸಂತೆಯ ದಿನವಿದ್ದಂತೆ. ದಾಸೋಹವಾಗಬೇಕಿದ್ದ, ಆತ್ಮಶೋಧದ ಮಾರ್ಗವಾಗಬೇಕಿದ್ದ ಪುಸ್ತಕ ಪ್ರಕಟಣೆ ಈಗ ಒಂದು ವ್ಯವಹಾರ, ಬಹುತೇಕ ಲಂಗುಲಗಾಮಿಲ್ಲದ ವ್ಯವಹಾರ.

ಇಂದು ನಮಗೆ-ನಿಮಗೆ ಗೊತ್ತಿರುವಂತೆ ಅಂಗೈ ಹುಣ್ಣಿಗೆ ಹಿಡಿದ ಕನ್ನಡಿ. ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಸಬ್ಮಿಟ್ ಮಾಡುವ ಈ ಡಿಸೆಂಬರ್’ನ ಸಂತೆಯಲ್ಲಿ ಏನೆಲ್ಲವೂ ಮಾರಾಟವಾಗುತ್ತದೆ. ಕೆಲವು ಮಾನದಂಡಗಳಿಗೊಳಪಟ್ಟು ಹೊಚ್ಚ-ಹೊಸದಾಗಿ ಮುದ್ರಣವಾಗಿಬಿಟ್ಟರೆ ಸಾಕು, ಅದೆಲ್ಲವೂ ಸಾಹಿತ್ಯ ಎನ್ನುವ ಭ್ರಮಾಲೋಕ ಸೃಷ್ಟಿಯಾಗಿಬಿಡುತ್ತದೆ. ಹಲವು ತರಹದ, ಹಲವು ಥರಾವರಿಯ ಯಾವುದೇ ತಾತ್ವಿಕ ತಳಹದಿ ಇಲ್ಲದ ವಿಷಯ-ವಸ್ತುಗಳು ಲಕ್ಷ-ಲಕ್ಷಗಳ ಲೆಕ್ಕದಲ್ಲಿ ವ್ಯವಹಾರಕ್ಕೊಳಪಟ್ಟು ಗ್ರಂಥಾಲಯಗಳನ್ನು ಅಲಂಕರಿಸಿಬಿಡುತ್ತವೆ.

ಇಂತಹ ಕಾಳಸಂತೆಯಲ್ಲಿ ನಮಗೇನಾದರೂ ನಿಜವಾದ ಕವಿ-ಕಾವ್ಯದ ದರ್ಶನವಾಗುವುದಾದರೆ ಅದನ್ನೊಂದು ಅಚ್ಚರಿಯೇ ಎಂದುಕೊಳ್ಳಬೇಕು. ಅಂತಹ ಒಂದು ಅಚ್ಚರಿಗೆ 2016ರ ಡಿಸೆಂಬರ್ ತಿಂಗಳು ನನ್ನನ್ನು ಸಾಕ್ಷಿಯಾಗಿಸಿದೆ.

ಹಂಪಿ ವಿಶ್ವವಿದ್ಯಾಲಯದ ಚಿಂತನ-ಮಂಥನ ಸಭೆಯಲ್ಲಿ ಸಿಕ್ಕ ನಮ್ಮ ಹಿರಿಯ ಲೇಖಕ ಪ್ರೊ. ಚೆನ್ನಪ್ಪ ಕಟ್ಟಿ ಅವರ ಇತ್ತೀಚಿನ ಪ್ರಕಟಣೆಯಾದ `ಸೂರ್ಯನಿಗೆ ಸಾವ ನೋಡಲು ಬೇಸರವಿಲ್ಲ’ ಎನ್ನುವ ಕಾವ್ಯ ಸಂಕಲನವನ್ನು ನೀಡಿದರು. `ನೆಲೆ’ ಪ್ರಕಾಶನದಿಂದ ಪ್ರಕಟವಾದ 57 ಪುಟಗಳ, 26 ಕವಿತೆಗಳ ಈ ಸಂಕಲನವನ್ನು ಅನುಮಾನದಿಂದಲೇ ಕೈಗೆತ್ತಿಕೊಂಡೆ. ಸಂತಸದ ಸಂಗತಿ ಎಂದರೆ ಈ ಪುಟ್ಟ ಹೊತ್ತಿಗೆಯ ಕೈಹಿಡಿದು ಕನ್ನಡ ಕಾವ್ಯದ ಭರವಸೆಯ ದಡ ಸೇರಿದೆ. ವಿಚಿತ್ರವೆಂದರೆ ಇದೇ, ಬೇಡ-ಬೇಡವೆನ್ನುತ್ತಲೆ ನಾನು ಮತ್ತೆ-ಮತ್ತೆ ಭೆಟ್ಟಿಯಾಗುವುದು, ಸಂಶಯಿಸುವುದು, ಮತ್ತೆ ಸಮಾಧಾನದ ಯಾವುದೋ ಒಂದು ನೆಲೆಗಾಗಿ ಗೋಗರೆಯುವುದು ಕಾವ್ಯದೊಂದಿಗೆ ಮಾತ್ರ.

ಹಂಪಿಗೆ ಬಂದು ಕವಿಯೊಬ್ಬನ ಕಾವ್ಯಕ್ಕೆ ಕಣ್ತೆರೆಯುವ ಮೊದಲು ಬೆಂಗಳೂರಿನಿಂದ ನಾನು ಹೊರಟಿದ್ದೇ ಕವಯತ್ರಿಯೊಬ್ಬಳ ಅಪ್ರಕಟಿತ ಕವಿತೆಗಳ ಕಟ್ಟೊಂದನ್ನು ಎತ್ತಿಕೊಂಡು, ತಂದ ಕಟ್ಟನ್ನು ಬ್ಯಾಗಿನಲ್ಲಿಟ್ಟು ನಿಶ್ಚಲವಾಗಿದ್ದ ನನ್ನ ಮನಸ್ಸಿಗೆ ಚೆನ್ನಪ್ಪ ಕಟ್ಟಿಯವರ ಕಾವ್ಯ ಚಲನೆಯನ್ನು ನೀಡಿದರೆ ಕವಯತ್ರಿ ಹೇಮಲತಾ ಮೂರ್ತಿ ಯವರ ‘ಕಳಚಿಟ್ಟಿದ್ದೇನೆ, ಇದೋ ನಿರ್ವಾಣ’ ಕಾವ್ಯ ಸಂಕಲನ ಒಂದು ಗತಿಯನ್ನು ಒದಗಿಸಿದೆ.

ನಿಸ್ಸಂಶಯವಾಗಿಯೂ ಕನ್ನಡ ಕಾವ್ಯಾಸಕ್ತರು ಗಮನಿಸಬೇಕಾದ ಅಪರೂಪದ ಕವಯತ್ರಿ ಹೇಮಲತಾ ಮೂರ್ತಿ. ನಮ್ಮ ಓದು ಎಷ್ಟೇ ಪ್ರೀತಿಯದಾಗಿದ್ದರೂ ನೆಚ್ಚದ, ನಲಿವಾಗದ ಎಲ್ಲ ಎಚ್ಚರಿಕೆಯ ಓದಿಗೂ ದಕ್ಕದೆ ನಿರಾಕರಣೆಗೊಳಗಾಗುವ ಕೆಲವು ಪದ್ಯಗಳು, ಸಡಿಲು ಬಂಧಗಳು, ಅಸಹಜ ಅಭಿವ್ಯಕ್ತಿಗಳು, ಅಪ್ರಬುದ್ಧ ಆಲೋಚನೆಗಳನ್ನು ಒಳಗೊಂಡ ಕೆಲವು ಕವಿತೆಗಳಾದರೂ ಪ್ರತಿಯೊಂದೂ ಸಂಕನದಲ್ಲಿ ಸಿಗುತ್ತವೆ. ಆದರೆ ಇಂತಹ ಯಾವ ಅಜಾಗರೂಕತೆಗೆ ಆಸ್ಪದವೀಯದ ಕೃತಿ ‘ಕಳಚಿಟ್ಟಿದ್ದೇನೆ ಇದೋ ನಿರ್ವಾಣ’. ಈ ಕವಿತೆಯ, ಕವಯತ್ರಿಯ, ಮೋಹಕ್ಕೆ ಕಾರಣವಾದ ಕೆಲವು ನಮೂನೆಗಳು ಇಲ್ಲಿ ನಿಮ್ಮೊಂದಿಗೆ.

ಇಂದು ಆಕಾಶದಲ್ಲಿ ಚಂದ್ರನಿಲ್ಲ
ಯಾವ ಬಾವಿಯಲ್ಲಿ ಹೆಣವಾಗಿದ್ದಾನೋ
ಸುಮ್ಮನೆ ನಿಟ್ಟುಸಿರಾಗುತ್ತೇನೆ
* * * * *
ಪುಸ್ತಕದಲ್ಲಿ ಉಳಿಸಿಟ್ಟ
ಒಣಗಿದ ಪಕಳೆಯಂತವಳು ನಾನು
ಭಾವ-ತೇವವಿಲ್ಲದ ನಿನ್ನ
ಹೃದಯದಲ್ಲಿ ಗತಿಗೆಟ್ಟ ಕುರುಹು
* * * * *
ಕದ್ದು-ಮುಚ್ಚಿ ಒಳಗೊಳಗೆ
ಮೋಹಿಸುವ ನಾವು ಒಳ ಮುಚ್ಚುಗರು
* * * * *
ಗೆಲುವಿನ ಹೆಜ್ಜೆ ಇಡುವಾಗ
ಎದುರು ನಿಂತು ಕೈಕುಲುಕಿ
ಹಿಂದೆ ನಿಂತು ಬಾಯಿ ಬಡಿದುಕೊಳ್ಳುವವರಿಗೆ
ಸಾಂತ್ವನ ಹೇಳಲಾದರೂ ಬೇಕಿತ್ತು ಕಣ್ಣು ಬೆನ್ನಿಗೊಂದು
* * * * *
ಸಾವಿನ ಮನೆಯಲ್ಲಿ
ಕವಿತೆ ಕಟ್ಟುವವಳಿಗೆ
ಮಾತಿನ ಹಂಗಿಲ್ಲವಯ್ಯಾ

ಬೆಂಗಳೂರೆಂಬ ಬೆಂಗಾಡಿನಲ್ಲಿ ಗೃಹಿಣಿಯೊಬ್ಬಳ ಇಂಥ ಕಾವ್ಯದ ಹಸಿ ಹುಟ್ಟಿಸಿಕೊಂಡು ಈ ಪರಿಯಲ್ಲಿ ಧ್ಯಾನಸ್ಥಳಾಗಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸಿದೆ ನನಗೆ. ಇವು ಸುಮಾರು ಹದಿನೈದು ವರ್ಷಗಳವರೆಗೆ ಕುದ್ದು ಹೊರಬಂದ ಕಾವ್ಯದ ಕಡಲಿನ ಅಪರೂಪದ ಸೃಷ್ಟಿಗಳು. ನಿತ್ಯ ನಮ್ಮೊಂದಿಗಿದ್ದೂ ನಿಶ್ಚಲವೆನ್ನಿಸುವ ಲೌಕಿಕ ವ್ಯಾಪ್ತಿಯ ಅದೆಷ್ಟೋ ಸಂಗತಿ, ಸಾಮಾನು ಸಮಾಚಾರಗಳು ಕಾವ್ಯದ ಪವಿತ್ರ ಸ್ಪರ್ಶದಿಂದಾಗಿ ಹೇಮಲತಾ ಮೂರ್ತಿ ಯವರಿಂದ ಮೌಲಿಕ ಪ್ರಶ್ನೆಗಳಾಗಿ ನಮ್ಮನ್ನು ಕಾಡಲಾಂಭಿಸುತ್ತವೆ. ಹಾಗೆ ನೋಡಿದರೆ ಕಾವ್ಯದ ಸಾರ್ಥಕ್ಯ ಇರುವುದು ಇಲ್ಲಿಯೇ. ಈ ಸಾತ್ವಿಕ ಅಭಿಮಾನದ ನೆಲೆಯ ಮೇಲೆ ನಿಂತುಕೊಂಡೇ ಅವರು ಘೋಷಿಸಿಕೊಳ್ಳುತ್ತಾರೆ.

ಹುಟ್ಟು ಜಂಗಮಗಿತ್ತಿ
ಬಯಲ ಧಾರೆ ಹರಿವ ನೀರೆ
`ರವಿಕಾಣದ್ದನ್ನು ಕವಿಕಂಡ’ ಎನ್ನುವ ಉಕ್ತಿಗೆ ಕವಿ ಬೇಂದ್ರೆಯ ವಿಶ್ಲೇಷಣೆಯೇ ಭಿನ್ನವಾಗಿತ್ತು. ಎಲ್ಲ ಕಾಣುವ ರವಿ ಕೋಟಿ-ಕೋಟಿ ವರ್ಷಗಳ ತನ್ನ ನಿರಂತರತೆಯ ನಂತರವೂ ಕಾಣಲಾಗದ ಸಂಗತಿ `ಕತ್ತಲೆ’. ಅದು ಕವಿ ಮತ್ತು ಕಾವ್ಯದಿಂದ ಪೂರ್ಣಗೊಳ್ಳಬೇಕಾದ ಲೋಕ ವ್ಯವಹಾರ. ಸೂರ್ಯನ ಕೆಳಗಿದ್ದೂ ತನ್ನೊಳ ಮತ್ತು ಹೊರ ತಮಂಧಕ್ಕೆ ಶಬ್ಧಗಳ ಮೂಲಕ ತೆರೆದು ಕೊಳ್ಳುವ ನಿರಂತರ ಯತ್ನವನ್ನು ಎಲ್ಲ ಬರಹಗಾರರೂ ಮಾಡಿದ್ದಾರೆ. ಇಂತಹ ಕಾಡುವ ಕತ್ತಲೆಯ ಕಣ್ಣೀರ ತೆಪ್ಪ `ಕಳಚಿಟ್ಟಿದ್ದೇನೆ ಇದೋ ನಿರ್ವಾಣ’

ಶಬ್ದವನ್ನು ಮೀಯುತ್ತಲೇ
ಎಚ್ಚರಗೊಳ್ಳುವ ಬೆಳಗೆಂಬ
ಬೆಳ್ಳಂ-ಬೆಳಗ್ಗೆ ಹಾಲು-ಪೇಪರ್
ತರಕಾರಿ-ಸೊಪ್ಪು, ಕಣ್ರೆಪ್ಪೆಗಳು
ಅಲಗುವ ಮುಂಚೆ ಕಿವಿಗಡಚುವ ಧ್ವನಿಗಳು

ಸೌಕರ್ಯ-ಸಾಧ್ಯತೆಗಳ ಭ್ರಮಾಸ್ವರ್ಗವನ್ನು ಸೃಷ್ಟಿಸಿದ ನಗರಗಳ ಅರುಣೋದಯಕ್ಕೆ ಕವಿದ ತಮಂಧಕ್ಕೊಂದು ಪುಟ್ಟ ಉದಾಹರಣೆ ಈ ಮೇಲಿನ ಕವಿತೆ.

ಗೆಳಯ ನೆನಪಿಗೆ ಬಂದ
ತಟ್ಟನೆ ಫೋನಾಯಿಸಿದಳು
`ನೀವು ಕರೆ ಮಾಡಿದ ವ್ಯಕ್ತಿ
ವ್ಯಾಪ್ತಿ ಪ್ರದೇಶಧಿಂದ ಹೊರಗಿದ್ದಾರೆ’
ಒಂಟಿ ಹನಿಯೊಂದು
ನಿನ್ನೊಂದಿಗೆ ನಾನಿದ್ದೇನೆ ಎಂದು ಸಂತೈಸಿತು

ಮೊಬೈಲೆಂದರೆ ಮನುಷ್ಯ ಸಾಧ್ಯತೆಯ ಅನಂತ ಲೋಕ ಎಂದುಕೊಂಡಲ್ಲಿ ಕವಿದ ಕಾರ್ಮೋಡಗಳ ಭಯಕ್ಕೊಂದು ಸಾಕ್ಷಿ ಮೇಲಿನ ಪದ್ಯ. ಹೀಗೆ ಹೇಮಲತಾ ಮೂರ್ತಿ ನಮ್ಮ ನೋವುಗಳಿಗೆ `ನಗುವ ಮೊಗದ ಕಸೂತಿ ಹಚ್ಚಿ, ನವಿರಾಗಿ ಸ್ಪರ್ಶಿಸಿ ನಮ್ಮನ್ನೊಂದು ಕೌದಿಯಾಗಿಸುವ’ ಕರುಣೆಯ ಕಡಲಂಥವಳು, `ಸಾಗಿಬಿಡು ಹರಿವ ನದಿಯಂತೆ, ನಡೆದ ಹಾದಿಯಲ್ಲ ಹಸಿರು ತುಂಬಲಿ’ ಎಂದು ಮರವಾಗುವ ಪಾಠ ಹೇಳುವವಳು.

`ಗುಟುಕು-ಗುಟುಕೇ ಪ್ರೇಮದ ವಿಷ ಚಪ್ಪರಿಸಿದರೂ ನಶೆ ಏರಿಸಿಕೊಂಡು ತೂರಾಡಲಿ ಮನಸ್ಸು, ಮನಸ್ಸಾಗಲಿ ಮನುಷ್ಯ’ ಎಂದು ಹಾರೈಸುವವಳು, `ಸ್ವರ್ಗಕ್ಕೊಂದು ಏಣಿ ಇಟ್ಟು, ನರಕಕ್ಕೊಂದು ಹಗ್ಗವನು ತೂಗಿಬಿಟ್ಟು, ಆಗಸಕ್ಕೆ ಜಿಗಿಯುವ ಸಾಹಸವನ್ನು’ ಸಂಭ್ರಮಿಸುವವಳು. `ಕೆಲವೊಮ್ಮೆ ನಮ್ಮೊಳೊಗೇ ಆಗಿ ತಟ್ಟನೆ ನಿಂತಿದ್ದೇನೆ ತಮಸ್ಸಿನ ಶೂನ್ಯದಲಿ, ಈ ಬದುಕು ಕವಲುದಾರಿ, ಒಂದು ಅತೀ, ಇನ್ನೊಂದು ಮಿತಿ, ಆವಾಹನೆಯಾಗಿಬಿಡಲಿ ಸಾವು’ ಎಂದು ಕೊರಳು ಚೆಲ್ಲುವವಳು.

ಇಷ್ಟು ತಳಮಳದ, ಆದ್ರ್ರತೆಯ ವ್ಯಕ್ತಿಯೊಬ್ಬ ನಿಲ್ಲದಿರುವುದೇ ಕಾವ್ಯದ ಮಹಾ ನಿರ್ವಾತಕ್ಕೆ ಕಾರಣವಾಗಿರುತ್ತದೆನೋ. ನಿಷ್ಪಾಪಿ ಕವಿತೆಗೆ ಎದೆಯ ತಳಮಳವೇ ನೆಲೆ ಹೀಗೆ, ಮೈಯ ಕಾವು, ಒಡಲ ತಾಪ, ಆತ್ಮದ ಅರ್ತನಾದ ಅಭಿವ್ಯಕ್ತಿಸಲಾಗದ ಅಭಿವ್ಯಕ್ತಿಯ ಹಂಬಲವೇ ಕಾವ್ಯದ ಗಂತವ್ಯ. ಹೀಗಾಗಿಯೇ ಹೇಮಲತಾ ಮೂರ್ತಿ ಹೇಳುವಂತೆ `ಇದು ಎಲ್ಲಾಕಾಲಕ್ಕೂ ಭೇಟಿಯ ನಂತರ ಮತ್ತೆ ಆವರಿಸುವ ಸುದೀರ್ಘ ವಿರಹ’. ಕಡಲನ್ನಪ್ಪುವ ನದಿಯ ಸಾಹಸ, ಮಳೆಯಾಗಬೇಕೆನ್ನುವ ಮೋಡದ ಹಂಬಲ. ಅನಂತರ ದಕ್ಕುವುದೆಲ್ಲಾ ಸಮಾವಿಷ್ಠತೆಯೋ, ಸಮಾಗಮವೋ ಅದು ಯಕ್ಷ ಪ್ರಶ್ನೆಯೇ.

ಕಾವ್ಯ ಪ್ರಶ್ನೆಗಳನ್ನುಳಿಸಿಕೊಂಡುಷ್ಟು ದೀರ್ಘವಾಗುತ್ತದೆ. ಹೇಮಲತಾ ಮೂರ್ತಿ ಪ್ರಶ್ನೆಗಳ ದಾರಿ ಕ್ರಮಿಸುತ್ತಲೆ, ಪಂಥ-ಪಂಗಡ-ಪ್ರಚಾರಗಳ ದಾಟಿ ಧ್ಯಾನಸ್ಥವಾದ ಕನ್ನಡ ಕಾವ್ಯಕ್ಕೆ ನಮ್ಮ ಮಧ್ಯ ಒಂದು ಅಪರೂಪದ ಸಾಕ್ಷಿಯಾಗಿದ್ದಾರೆ. ಸ್ತ್ರೀ ನೆಲೆಯಲ್ಲೇ ಇಲ್ಲಿಯ ಕಾವ್ಯ ಅನಾವರಣಗೊಂಡಿದ್ದರೂ, ಇದಕ್ಕೆ ಭೂ ನೆಲೆಯ ಗಂಭೀರತೆ ಇದೆ. ಪಾವಿತ್ರತೆ ಇದೆ. ಹೇಮಲತ ಅವರ ಬೆರಗುಗಣ್ಣಿನ ಈ ಕಾವ್ಯ ನೂರಾರು ಬೇರು ಬಿಟ್ಟು ಸಾವಿರಾರು ಬದುಕುಗಳ ಸಂಭ್ರಮವಾಗಲಿ ಎಂದು ನನ್ನ ಆಶಯ.

ಕಾವ್ಯವೇ ನಮ್ಮೆಲ್ಲರ ಮೊದಲ ಹೆಜ್ಜೆಯಾದರೂ ಕೂಡ ಕಾಲಾಂತರದಲ್ಲಿ ಈ ಕಾವ್ಯದೊಂದಿಗಿನ ಬೆಸುಗೆ ಸಡಿಲಿಸಿಕೊಂಡು ಬೇರೆ-ಬೇರೆ ಪ್ರಕಾರಗಳಲ್ಲಿ ನಮ್ಮ ಯುವ ತಲೆಮಾರು ತೊಡಗಿಕೊಳ್ಳುತ್ತಿರುವುದನ್ನು ನಾನು ಗಮನಿಸಿದ್ದೇನೆ. ಅರಸಿಕೆರೆಯ ಕಮ್ಮಟವೊಂದರಲ್ಲಿನಾನು ಈ ಕುರಿತೇ ಗಂಭೀರವಾಗಿ ಚರ್ಚಿಸಿದ್ದೆ. ಕಾವ್ಯವನ್ನು ಕಾಯುವ, ಪ್ರೋತ್ಸಾಹಿಸುವ ಅದೆಷ್ಟು ಯೋಜನೆಗಳು ನಮ್ಮ ಸರಕಾರ ವಲಯದಲ್ಲಿವೆ ಗೊತ್ತಿಲ್ಲ ಆದರೆ ಕವಿ ಗೆಳಯ ಬೇಲೂರು ರಘುನಂದನ್ ನೇತೃತ್ವದ “ಕಾಜಾಣ”ದಂಥ ಬಳಗಗಳು ಅಲ್ಲಲ್ಲಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದರಿಂದಲೇ ಹೇಮಲತಾ ಮೂರ್ತಿಯವರ ಕಾವ್ಯದೊಂದಿಗೆ ನನಗೆ ಈ ಮುಖಾಮುಖಿ ಸಾಧ್ಯವಾಗಿರುವುದು.

ನಾನು ಗಮನಿಸಿದಂತೆ “ಕಾಜಾಣ”ದ ಮುಖ್ಯ ಕಾಳಜಿಯೇ ಕಾವ್ಯ. ಇದನ್ನು ಸಂಭ್ರಮಿಸುವುದಕ್ಕೆಂದು ಈ ಬಳಗ ಸೇರುತ್ತಲೇ ಇರುತ್ತದೆ. ಕಾವ್ಯದ ಈ ಪ್ರೀತಿ ಮಾತ್ರದಿಂದಾಗಿ ನನ್ನನ್ನು ಸಮಕಾಲೀನ ಶ್ರೋತೃವಾಗಿಸಿದ ಪ್ರೀತಿಯ ಕವಿಮಿತ್ರ ರಘು ಇಲ್ಲಿ ಉಲ್ಲೇಖನೀಯ, ಹಾಡು ಇದೆ, ಹಕ್ಕಿ ಇದೆ, ಮರವಿಲ್ಲದಿರೆ ಏನು ಪ್ರಯೋಜನ? “ಕಾಜಾಣ” ಹಕ್ಕಿ-ಹಾಡುಗಳ ಕಾಯ್ದ ಅಂಥ ಹೆಮ್ಮರ. ಕಾವ್ಯ ಕಾಪಿಡುವ ನಿಟ್ಟಿನಲ್ಲಿ “ಕಾಜಾಣ”ದೊಂದಿಗೆ ಶ್ವೇತಪ್ರಿಯ ಪ್ರಕಾಶನವೂ ಇಂಥದೇ ಸಾಹಸಕ್ಕಿಳಿದಿರುವುದು ಅಭಿನಂದನೀಯ ಸಂಗತಿ

‍ಲೇಖಕರು admin

9 January, 2017

2 Comments

  1. ಭಾರತಿ ಬಿ ವಿ

    ಕಂಗ್ರ್ಯಾಟ್ಸ್ ಹೇಮಾ .. ಒಳ್ಳೇದಾಗಲಿ

  2. Ravi kanasugara

    ಶುಭವಾಗಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading